ಪದ್ಯ ೬೦: ದುರ್ಯೋಧನನು ಅಶ್ವತ್ಥಾಮನ ಪ್ರಮಾಣಕ್ಕೆ ಏನೆಂದು ಹೇಳಿದನು?

ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ (ಗದಾ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಪ, ಕೃತವರ್ಮ, ನೀವು ಅಶ್ವತ್ಥಾಮನ ಮರಳುತನದ ಮಾತುಗಳನ್ನು ಕೇಳಿದ್ದೀರೇ? ಪಾಂಡವರ ತಲೆ ಅವನಿಗೆ ಸಿಕ್ಕೀತೇ? ಕೃಷ್ಣನು ಬಕಧ್ಯಾನ ಮಾಡುತ್ತಾ ಅವರನ್ನು ಕಾದುಕೋಂಡಿದ್ದಾನೆ, ಆ ಕಪಟಸಿದ್ಧನ ಮಾಟವನ್ನು ಯಾರು ಮೀರಬಲ್ಲರು ಎಂದು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಮರುಳ: ಮೂಢ, ದಡ್ಡ; ಸುತ: ಮಗ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಕಂಡು: ನೋಡು; ತಲೆ: ಶಿರ; ಗೋಚರ: ಕಾಣು, ತೋರು; ಬಕ: ಕಪಟಿ, ವಂಚಕ, ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಮಗ: ಸುತ; ಕಾದಿಹ: ರಕ್ಷಿಸು; ಕೌಳಿಕ: ಕಟುಕ, ಮೊಸ; ಸಿದ್ಧ: ಅಲೌಕಿಕ ಸಾಮರ್ಥ್ಯವುಳ್ಳವನು; ಕೃತಿ: ಕಾರ್ಯ; ಮೀರು: ಉಲ್ಲಂಘಿಸು;

ಪದವಿಂಗಡಣೆ:
ಅಕಟ+ ಮರುಳೇ +ಗುರುಸುತನ +ಮತಿ
ವಿಕಳತನವನು +ಕೃಪನು +ಕೃತವ
ರ್ಮಕರು +ಕಂಡಿರೆ +ಪಾಂಡವರ +ತಲೆ +ತನಗೆ+ ಗೋಚರವೆ
ಬಕನ +ಧರ್ಮಸ್ಥಿತಿಯವೊಲು +ದೇ
ವಕಿಯ +ಮಗ +ಕಾದಿಹನಲೇ +ಕೌ
ಳಿಕದ +ಸಿದ್ಧನ+ ಕೃತಿಯನ್+ ಆರಿಗೆ +ಮೀರಬಹುದೆಂದ

ಅಚ್ಚರಿ:
(೧) ಕೃಷ್ಣನ ಸಾಮರ್ಥ್ಯವನ್ನು ಹೇಳುವ ಪರಿ – ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ

ಪದ್ಯ ೬೪: ಶಕುನಿಯು ಕೌರವನನ್ನು ಹೇಗೆ ಸಂತೈಸಿದನು?

ಶಕುನಿ ಕಂಡನು ಕೌರವೇಂದ್ರನ
ನಕಟ ನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಓಡಿ ಹೋಗುತ್ತಿದ್ದ ಕೌರವನನ್ನು ಕಂಡು ಶಕುನಿಯು, ಅಯ್ಯೋ ಕೌರವೇಂದ್ರ, ನೀನು ಒಬ್ಬೊಂಟಿಗನಾಗಿ ಏಕೆ ಯುದ್ಧಕ್ಕೆ ಬಂದೆ? ಅಶ್ವತ್ಥಾಮ, ಕೃತವರ್ಮ (ಭೋಜ), ಗೌತಮ(ಕೃಪಚಾರ್ಯ) ರಿದ್ದಾರಲ್ಲಾ, ಸೈನ್ಯವೆಲ್ಲವೂ ಸತ್ತುಹೋಯಿತೇ? ಸಂಶಪ್ತಕರಿದ್ದಾರೆ, ನಿನ್ನ ಮೂಲ ಸೈನ್ಯವಿದೆ, ಬೆದರಬೇಡ, ಖಿನ್ನನಾಗಬೇಡ ಎಂದು ಸಂತೈಸಿದನು.

ಅರ್ಥ:
ಅಕಟ: ಅಯ್ಯೋ; ಏಕಾಂಗ: ಒಬ್ಬನೆ; ಹೋರಿಕೆಗೆ: ಹೋರಾಡಲು; ಗರುವ: ಶ್ರೇಷ್ಠ; ಸುತ: ಮಗ; ಸಕಲ: ಎಲ್ಲಾ; ಬಲ: ಸೈನ್ಯ; ನುಗ್ಗು: ತಳ್ಳು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಮೂಲ: ಕಾರಣ, ಉಗಮ; ಬಲ: ಸೈನ್ಯ; ವಿಕಳ: ಭ್ರಮೆ, ಭ್ರಾಂತಿ; ಸಂತೈಸು: ಸಾಂತ್ವನಗೊಳಿಸು;

ಪದವಿಂಗಡಣೆ:
ಶಕುನಿ +ಕಂಡನು +ಕೌರವೇಂದ್ರನನ್
ಅಕಟ +ನೀನ್+ಏಕಾಂಗದಲಿ +ಹೋ
ರಿಕೆಗೆ +ಬಂದೈ +ಗರುವ+ ಗುರುಸುತ +ಭೋಜ +ಗೌತಮರು
ಸಕಲಬಲ +ನುಗ್ಗಾಯ್ತೆ +ಸಮಸ
ಪ್ತಕರು +ನಿನ್ನಯ +ಮೂಲಬಲವಿದೆ
ವಿಕಳನಾಗದಿರ್+ಎಂದು +ಸಂತೈಸಿದನು +ಕುರುಪತಿಯ

ಅಚ್ಚರಿ:
(೧) ಧೈರ್ಯ ತುಂಬುವ ಪರಿ – ನಿನ್ನಯ ಮೂಲಬಲವಿದೆ ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ
(೨) ಸಕಲಬಲ, ಮೂಲಬಲ – ಪದಗಳ ಬಳಕೆ

ಪದ್ಯ ೨೭: ಭೀಷ್ಮನು ಯಾರ ಎದುರು ರಥವನ್ನು ನಿಲ್ಲಿಸಲು ಹೇಳಿದನು?

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ (ಭೀಷ್ಮ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲ್ಲಾ ದಿಕ್ಕುಗಳಿಂದಲೂ ಓಡಿ ಬರುತ್ತಿದ್ದ ತಮ್ಮ ಸೈನ್ಯವನ್ನು ಅರ್ಜುನನು ನೋಡಿ ಶ್ರೀಕೃಷ್ಣನಿಗೆ ತೋರಿಸೆ, ನಮ್ಮವರ ವಿಧಿಯನ್ನು ನೋಡಿದೆಯಾ? ನಕುಲ, ಭೀಮ, ಸಾತ್ಯಕಿ, ಧೃಷ್ಟದ್ಯುಮ್ನರು ಅಲ್ಲಿಲ್ಲವೇ ಅಥವಾ ಭ್ರಮೆಗೊಂಡು ಓಡಿ ಹೋದರೇ? ಕೃಷ್ಣಾ ಭೀಷ್ಮನೆದುರಿಗೆ ರಥವನ್ನು ನಿಲ್ಲಿಸು ಎಂದು ಹೇಳಿದನು.

ಅರ್ಥ:
ಸಕಲ: ಎಲ್ಲಾ; ದೆಸೆ: ದಿಕ್ಕು; ಮುರಿ: ಸೀಳು; ಬಹ: ಬಹಳ; ನಾಯಕ: ಒಡೆಯ; ಕಂಡು: ನೋಡು; ಅಸುರ: ರಾಕ್ಷಸ; ಅಂತಕ: ಯಮ; ತೋರು: ಗೋಚರಿಸು; ಅಕಟ: ಅಯ್ಯೋ; ನೋಡು: ವೀಕ್ಷಿಸು; ವಿಧಿ: ನಿಯಮ; ಕಟಕಟ: ಅಯ್ಯಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಓಡು: ಧಾವಿಸು; ಇದಿರು: ಎದುರು; ರಥ: ಬಂಡಿ; ಹರಿಸು: ಚಲಿಸು;

ಪದವಿಂಗಡಣೆ:
ಸಕಲ+ ದೆಸೆಯಲಿ +ಮುರಿದು +ಬಹ +ನಾ
ಯಕರ +ಕಂಡನು +ಪಾರ್ಥನ್+ಅಸುರಾಂ
ತಕಗೆ +ತೋರಿದನ್+ಅಕಟ +ನೋಡಿದಿರ್+ಎಮ್ಮವರ +ವಿಧಿಯ
ನಕುಲನ್+ಇಲ್ಲಾ +ಭೀಮನೋ +ಸಾ
ತ್ಯಕಿಯೊ +ಸೇನಾಪತಿಯೊ +ಕಟಕಟ
ವಿಕಳರ್+ಓಡಿದರ್+ಓಡಲ್+ಇದಿರಿಗೆ +ರಥವ+ ಹರಿಸೆಂದ

ಅಚ್ಚರಿ:
(೧) ಅಕಟ, ಕಟಕಟ – ಪದಗಳ ಬಳಕೆ
(೨) ವಿಕಳರೋಡಿದರೋಡಲಿದಿರಿಗೆ – ಪದದ ಬಳಕೆ

ಪದ್ಯ ೯೪: ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಯಾರಿಂದ ನಿರೀಕ್ಷಿಸಿದಳು?

ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ (ಸಭಾ ಪರ್ವ, ೧೫ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ, ಅಯ್ಯೋ ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರೇ ನಿಮ್ಮ ಪತ್ನಿಯನ್ನು ಮರಣದ ಗಂಟಲಿಗೆ ಒಪ್ಪಿಸಿ ಕೊಟ್ಟಿರಾ? ಭ್ರಮೆಯಿಂದ ವಿವೇಚನೆಯನ್ನೇ ಕಳೆದುಕೊಂಡಿರಾ? ಹಾಗೆ ಆಗಲಿ, ಆದರೆ ಭೀಷ್ಮ, ದ್ರೋಣ, ಬಾಹ್ಲಿಕ, ಕೃಪನೇ ಮೊದಲಾದವರೇ ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಿ ಎಂದು ದ್ರೌಪದಿ ಕೇಳಿದಳು.

ಅರ್ಥ:
ಅಕಟ: ಅಯ್ಯೋ; ಆದಿ: ಮೊದಲಾಗಿ; ಬಾಲಕಿ: ಹೆಣ್ಣು; ಒಪ್ಪು: ಸಮ್ಮತಿ; ಕೊಡು: ನೀಡು; ಮೃತ್ಯು: ಸಾವು; ತಾಳಿಗೆ: ಗಂಟಲು; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಕುಟಿಲ: ಮೋಸ; ಉತ್ತರ: ಪರಿಹಾರ; ಕೊಡಿ: ನೀಡಿ; ಅಬುಜಾಕ್ಷಿ: ಕಮಲದ ಕಣ್ಣಿನವಳು, ಹೆಣ್ಣು (ದ್ರೌಪದಿ)

ಪದವಿಂಗಡಣೆ:
ಅಕಟ +ಧರ್ಮಜ +ಭೀಮ +ಫಲುಗುಣ
ನಕುಲ +ಸಹದೇವ+ಆದ್ಯರಿರ+ ಬಾ
ಲಿಕಿಯನ್+ಒಪ್ಪಿಸಿ +ಕೊಟ್ಟಿರೇ +ಮೃತ್ಯುವಿನ +ತಾಳಿಗೆಗೆ
ವಿಕಳರಾದಿರೆ+ ನಿಲ್ಲಿ+ ನೀವೀಗ್
ಅಕುಟಿಲರಲಾ +ಭೀಷ್ಮ +ಗುರು+ ಬಾ
ಹ್ಲಿಕ+ ಕೃಪಾದಿಗಳ್+ಉತ್ತರವ+ ಕೊಡಿ+ಎಂದಳ್+ಅಬುಜಾಕ್ಷಿ

ಅಚ್ಚರಿ:
(೧) ದ್ರೌಪದಿಯ ಸಂಕಟ – ಬಾಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ,
ವಿಕಳರಾದಿರೆ
(೨) ದ್ರೌಪದಿಯನ್ನು ಕರೆದ ಪರಿ – ಬಾಲಕಿ, ಅಬುಜಾಕ್ಷಿ

ಪದ್ಯ ೧೧: ಯಾವ ರೀತಿಯ ಜನರು ಯಾಗಶಾಲೆಯಲ್ಲಿ ನೆರೆದಿದ್ದರು?

ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರ ಜಾಲಿ ಮಹಾಹಿತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾಯಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚಕ ನಿಕರ ಸಂದಣಿಸಿ (ಸಭಾ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಯಾಗಶಾಲೆಯಲ್ಲಿ ಎಲ್ಲಾ ರೀತಿಯ ಜನರು ಸೇರಿದ್ದರು, ವಿಕಲಾಂಗರು, ಕುಬ್ಜರು (ಕುಳ್ಳ), ಮೂಕರು, ಕಿವುಡರು, ಕುರುಡರು, ವಂದಿಮಾಗಧರು, ರಥವನ್ನು ನಡೆಸುವವರು, ಜಟ್ಟಿಗಳು, ಮಹೇಂದ್ರಜಾಲವನ್ನು ಮಾಡುವವರು, ಹಾವಾಡಿಗರು, ಕವಿಗಳು, ತರ್ಕವಿಶಾರದರು, ವಾಗ್ಮಿಗಳು, ಮಂಗಳ ಪಾಠಕರು, ಗಾಯಕರು, ಕಥಾ ಕಲಾಕ್ಷೇಪ ಮಾದುವವರು, ಮೃದಂಗವಾದಕರು, ಯಾಚಕರು ಅಲ್ಲಿ ಸೇರಿದ್ದರು.

ಅರ್ಥ:
ವಿಕಳ: ಅಂಗವಿಕಲರು; ವಾಮನ: ಕುಬ್ಜ; ಮೂಕ: ಮಾತುಬಾರದವ; ಬಧಿರ: ಕಿವುಡರು; ಅಂಧಕ: ಕುರುಡರು; ಮಾಗಧ: ವಂದಿಮಾಗಧರು; ಮಾಗಧ: ಹೊಗಳುಭಟ್ಟ; ಸೂತ: ರಥವನ್ನು ನಡೆಸುವವನು; ವಂದಿ:ಹೊಗಳು ಭಟ್ಟ; ಪ್ರಕರ: ಗುಂಪು; ಮಲ್ಲ: ಜಟ್ಟಿ; ಮಹೇಂದ್ರಜಾಲಿ: ಇಂದ್ರಜಾಲ ಮಾಡುವವ; ಅಹಿ: ಹಾವು; ತುಂಡಿತರು: ಮಹಾಹಿ: ಶ್ರೇಷ್ಠವಾದ ಹಾವು; ತುಂಡಿತರು: ಆಡಿಸುವವರು; ಸುಕವಿ: ಶ್ರೇಷ್ಠವಾದ ಕವಿ; ತಾರ್ಕಿಕ: ತರ್ಕವಿಶಾರದರು; ವಾಗ್ಮಿ: ಚೆನ್ನಾಗಿ ಮಾತಾಡುವ; ವೈತಾಳಿಕ: ಮಂಗಳಪಾಠಕರು; ಸುಗಾಯಕ: ಚೆನ್ನಾಗಿ ಹಾಡುವವ; ಕಥಕ:ಕಥೆಯನ್ನು ಹೇಳುವವರು; ಮಾರ್ದಂಗಿಕರು: ಮೃದಂಗವಾದಗಕರು; ನೆರೆ: ಸೇರು; ನಿಖಿಳ: ಎಲ್ಲಾ; ಯಾಚಕ: ಬೇಡುವವನು; ಸಂದಣಿಸು: ಸೇರು; ನಿಕರ: ಗುಂಪು;

ಪದವಿಂಗಡಣೆ:
ವಿಕಳ+ ವಾಮನ+ ಮೂಕ +ಬಧಿರ
ಅಂಧಕರು +ಮಾಗಧ+ ಸೂತ +ವಂದಿ
ಪ್ರಕರ+ ಮಲ್ಲ +ಮಹೇಂದ್ರ +ಜಾಲಿ +ಮಹ+ಅಹಿತುಂಡಿತರು
ಸುಕವಿ+ ತಾರ್ಕಿಕ +ವಾಗ್ಮಿ +ವೈತಾ
ಳಿಕ +ಸುಗಾಯಕ +ಕಥಕ +ಮಾರ್ದಂ
ಗಿಕರು +ನೆರೆದುದು +ನಿಖಿಳ +ಯಾಚಕ+ ನಿಕರ+ ಸಂದಣಿಸಿ

ಅಚ್ಚರಿ:
(೧) ೧೮ ರೀತಿಯ ಜನರನ್ನು ಹೇಳಿರುವುದು

ಪದ್ಯ ೫೮: ಮಗನ ಮಾತು ಕೇಳಿದ ಧೃತರಾಷ್ಟ್ರನು ಏನೆಂದನು?

ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ (ಆದಿ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸುಯೋಧನನ ಮಾತು ಕೇಳಿ, ಧೃತರಾಷ್ಟ್ರನು, ಅಯ್ಯೋ ಮಗನೇ, ಧರ್ಮರಾಯನು ನಿನಗೆ ಬಾಧಕನೆ, ಭೀಮಾರ್ಜುನರ ಮನಸ್ಸು ನಿನಗೆ ಕೆಡುಕನ್ನು ಮಾಡಲು ಒಪ್ಪುವುದಿಲ್ಲ, ಅವರು ಎಂದಿಗೂ ಧರ್ಮಜನ ಮಾತನ್ನು ಮೀರರು, ಸಕಲ ರಾಜ್ಯಕ್ಕೆ ಪಾಂಡುವೇ ರಾಜನಾದರು ನನ್ನೊಂದಿಗೆ ಎಂದು ತಪ್ಪಿ ನಡೆಯಲಿಲ್ಲ, ದುಷ್ಟಬುದ್ಧಿಗಳ ಉಪದೇಶವನ್ನು ಕೇಳಬೇಡ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ಅಕಟ: ಅಯ್ಯೊ; ಮಗ: ಸುತ; ಬಾಧಕ: ತೊಂದರೆ, ಕಂಟಕ; ಮತಿ: ಬುದ್ಧಿ; ಕಂಟಕ: ಕೆಡಕು; ಎರಗು: ಬೀಳು; ಮೀರು: ಉಲ್ಲಂಗಿಸು, ವಿರೋಧಿಸು; ನಡೆ: ಸಾಗು, ತೆರಳು; ನಂದನ: ಮಗ; ಸಕಲ: ಎಲ್ಲ; ರಾಜ್ಯ: ದೇಶ; ಪಾಲಕ: ರಾಜ; ವಿಕಳ: ದುರ್ಬುದ್ಧಿ, ದುಷ್ಟ; ಮತಿ: ಬುದ್ಧಿ;

ಪದವಿಂಗಡನೆ:
ಅಕಟ +ಮಗನೇ +ಧರ್ಮಸುತ+ ಬಾ
ಧಕನೆ+ ಭೀಮ+ಅರ್ಜುನರ+ ಮತಿ+ ಕಂ
ಟಕ+ದೊಳ್+ಎರಗದು +ಮೀರಿ +ನಡೆಯರು+ ಧರ್ಮನಂದನನ
ಸಕಲ+ರಾಜ್ಯಕೆ+ ಪಾಂಡುವೇ +ಪಾ
ಲಕನು+ ತನ್ನೊಳು+ ತಪ್ಪಿದನೆ+ ಬಿಡು
ವಿಕಳ+ಮತಿಗಳ+ ಮಾತನ್+ಎಂದನು +ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ಮಗ, ಸುತ, ನಂದನ; ಕಂಟಕ, ಬಾಧಕ; – ಸಮಾನಾರ್ಥಕ ಪದಗಳು
(೨) ಮಗ: ೧, ೬ ಸಾಲಿನಲ್ಲಿ ಕಾಣುವ ಪದಗಳು; ಮತಿ: ೨, ೬ ಸಾಲಿನಲ್ಲಿ ಕಾಣುವ ಪದಗಳು
(೩) ಜೋಡಿ ಪದಗಳು: ಪಾಂಡುವೇ ಪಾಲಕನು; ತನ್ನೊಳು ತಪ್ಪಿದನೆ