ಪದ್ಯ ೩೯: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ (ಗದಾ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಡದಲ್ಲಿ ಬಲದಲ್ಲಿ ಕಾಲಲ್ಲಿ ಮೆಟ್ಟಿ ಗದೆಯಿಂದ ಅಪ್ಪಳಿಸಿ ಆನೆಗಳೆಲ್ಲವನ್ನೂ ಕೆಳಕ್ಕೆ ಕೆಡವಿದನು. ಕೌರವನ ನೂರು ಆನೆಗಳ ಹೆಣಗಳು ನಿಮಿಷ ಮಾತ್ರದಲ್ಲಿ ಸಾಲುಸಾಲಾಗಿ ಬಿದ್ದವು.

ಅರ್ಥ:
ಮೆಟ್ಟು: ತುಳಿ; ಬಲವಂಕ: ಬಲಭಾಗ; ಹೊರಗಟ್ಟು: ಬಿಸಾಡು, ನೂಕು; ವಾಮ: ಎಡಭಾಗ; ಗಜ: ಆನೆ; ಅಪ್ಪಳಿಸು: ತಟ್ಟು, ತಾಗು; ಪರಿಘ: ಗದೆ; ಘಟ್ಟಿಸು: ಹೊಡೆ, ಅಪ್ಪಳಿಸು; ಒಗ್ಗು: ಗುಂಪು, ಸಮೂಹ; ಥಟ್ಟು: ಗುಂಪು; ಕೆಡಹು: ನಾಹ್ಸ; ಅಮಮ: ಅಬ್ಬಬ್ಬಾ; ಹೆಣ: ಜೀವವಿಲ್ಲದ ಶರೀರ; ಸಾಲು: ಆವಳಿ; ನೃಪ: ರಾಜ; ನಿಮಿಷ: ಕ್ಷಣ;

ಪದವಿಂಗಡಣೆ:
ಮೆಟ್ಟಿದನು+ ಬಲವಂಕವನು+ ಹೊರ
ಗಟ್ಟಿದನು +ವಾಮದ +ಗಜಂಗಳನ್
ಇಟ್ಟನ್+ಒಂದರೊಳ್+ಒಂದನ್+ಅಪ್ಪಳಿಸಿದನು +ಪರಿಘದಲಿ
ಘಟ್ಟಿಸಿದನ್+ಒಗ್ಗಿನ +ಗಜಂಗಳ
ಥಟ್ಟು+ಕೆಡಹಿದನ್+ಅಮಮ +ಹೆಣ+ಸಾ
ಲಿಟ್ಟವೈ +ಕುರುನೃಪನ+ ನೂರಾನೆಗಳು +ನಿಮಿಷದಲಿ

ಅಚ್ಚರಿ:
(೧) ಮೆಟ್ಟಿದನು, ಅಟ್ಟಿದನು – ಪದಗಳ ಬಳಕೆ
(೨) ಆಶ್ಚರ್ಯವನ್ನು ಸೂಚಿಸುವ ಪರಿ – ಘಟ್ಟಿಸಿದನೊಗ್ಗಿನ ಗಜಂಗಳ ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ

ಪದ್ಯ ೬೫: ದ್ರೋಣನು ಯಾವ ಪರಾಕ್ರಮಿಗಳನ್ನು ಸಾಯಿಸಿದನು?

ತಿರುಗಿ ಭೀಮನನೆಚ್ಚನಿತ್ತಲು
ನರನ ಮಸೆಗಾಣಿಸಿದನರಸನ
ಹೊರೆಯ ಬಿರುದರ ಬಿಸಿಯಲೆಚ್ಚನು ವಾಮದಕ್ಷಿಣವ
ಮರಳಿ ಧೃಷ್ಟದ್ಯುಮ್ನ ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರರಸುಮಕ್ಕಳ ಹಲಬರನು ಮುರಿಯೆಚ್ಚು ಬೊಬ್ಬಿರಿದ (ದ್ರೋಣ ಪರ್ವ, ೧೮ ಸಂಧಿ, ೬೫ ಪದ್ಯ)

ತಾತ್ಪರ್ಯ:
ಮತ್ತೆ ಭೀಮಾರ್ಜುನರನ್ನು ಬಾಣದಿಂದ ನೋಯಿಸಿ, ಧರ್ಮಜನ ಸುತ್ತಲಿದ್ದ ವೀರರನ್ನು ಎರಡು ಪಕ್ಕೆಗಳಲ್ಲು ರಕ್ತ ಸುರಿಯುವ ಹಾಗೆ ಘಾತಿಸಿದನು. ಧೃಷ್ಟದ್ಯುಮ್ನ, ಸಾತ್ಯಕಿ, ಯುಧಾಮನ್ಯು ಉತ್ತಮೌಂಜಸ, ರಾಜಕುಮಾರರನ್ನು ಮುರಿದು ಅಬ್ಬರಿಸಿದನು.

ಅರ್ಥ:
ತಿರುಗು: ಸುತ್ತು; ಎಚ್ಚು: ಬಾಣ ಪ್ರಯೋಗ ಮಾದು; ನರ: ಅರ್ಜುನ; ಮಸೆ: ಹರಿತವಾದುದು; ಕಾಣಿಸು: ಗೋಚರ; ಅರಸ: ರಾಜ; ಹೊರೆ: ಭಾರ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಸಿ: ಒಸರು, ಸ್ರವಿಸು; ವಾಮ: ಎಡಭಾಗ; ದಕ್ಷಿಣ: ಬಲಭಾಗ; ಮರಳು: ಹಿಂದಿರುಗು; ವರ: ಶ್ರೇಷ್ಠ; ಅರಸು: ರಾಜ; ಮಕ್ಕಳು: ಪುತ್ರ; ಹಲಬರು: ಹಲವಾರು; ಮುರಿ: ಸೀಳು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ತಿರುಗಿ +ಭೀಮನನ್+ಎಚ್ಚನ್+ಇತ್ತಲು
ನರನ +ಮಸೆ+ಕಾಣಿಸಿದನ್+ಅರಸನ
ಹೊರೆಯ +ಬಿರುದರ +ಬಿಸಿಯಲ್+ಎಚ್ಚನು +ವಾಮ+ದಕ್ಷಿಣವ
ಮರಳಿ +ಧೃಷ್ಟದ್ಯುಮ್ನ +ಸಾತ್ಯಕಿ
ವರ +ಯುಧಾಮನ್ಯು+ಉತ್ತಮೌಂಜಸರ್
ಅರಸುಮಕ್ಕಳ+ ಹಲಬರನು +ಮುರಿ +ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಎರಡು ಕಡೆ ಎಂದು ಹೇಳಲು – ಎಚ್ಚನು ವಾಮದಕ್ಷಿಣವ

ಪದ್ಯ ೧೮: ಯುಧಿಷ್ಠಿರನು ಯಾರ ಆಗಮನವನ್ನು ನಿರೀಕ್ಷಿಸಿದನು?

ವಾಮನಯನ ಸ್ಫುರಣ ಪರಿಗತ
ವಾಮ ಬಾಹುಸ್ಪಂದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ
ವೈಮನಸ್ಯವ್ಯಸನ ನಿರಸನ
ಕೀ ಮಹಾ ಶಕುನಂಗಳಿವೆಯೆಂ
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ (ಅರಣ್ಯ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹೀಗೆ ಯುಧಿಷ್ಠಿರನು ಯೋಚಿಸುತ್ತಿರಲು, ದ್ರೌಪದಿಯ ಎಡಕಣ್ಣು, ಮತ್ತು ಎಡಭುಜ ಅದರಿದವು, ಯುಧಿಷ್ಠಿರನ ಬಲಗಣ್ಣು ಬಲಭುಜವೂ ಅದುರಿದರು ಮನೋವ್ಯಥೆಯ ಪರಿಹಾರಕ್ಕಾಗಿ ಈ ಉತ್ತಮ ಶಕುನಗಳಾಗುತ್ತಿವೆಯೆಂದು ಧರ್ಮಜನು ಅರ್ಜುನನ ಆಗಮನವನ್ನು ನಿರೀಕ್ಷಿಸಿದನು.

ಅರ್ಥ:
ವಾಮ: ಎಡಭಾಗ; ನಯನ: ಕಣ್ಣು; ಸ್ಫುರಣ: ಅಲುಗಾಡು; ಪರಿಗತ:ಹೆಚ್ಚಾದ, ಆವರಿಸು; ಬಾಹು: ಭುಜ; ಸ್ಪಂದ: ಅಲ್ಲಾಡು, ಕಂಪನ; ಭಾಮಿನಿ: ಹೆಣ್ಣು; ಭೂಪತಿ: ರಾಜ; ಚಲಿಸು: ನಡೆ, ಅದರು; ದಕ್ಷಿಣ: ಬಲಭಾಗ; ಅಂಗ: ದೇಹದ ಭಾಗ; ವೈಮನಸ್ಯ: ಅಪಾರವಾದ ದುಃಖ; ವ್ಯಸನ: ದುಃಖ, ವ್ಯಥೆ; ನಿರಸನ: ಹೊರದೂಡುವುದು, ನಾಶ; ಮಹಾ: ದೊಡ್ಡ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮಹೀಪತಿ: ರಾಜ; ನೆನೆ: ಜ್ಞಾಪಿಸಿಕೋ; ಫಲುಗುಣ: ಅರ್ಜುನ; ಬರವ: ಆಗಮನ;

ಪದವಿಂಗಡಣೆ:
ವಾಮ+ನಯನ +ಸ್ಫುರಣ +ಪರಿಗತ
ವಾಮ +ಬಾಹು+ಸ್ಪಂದವಾದುದು
ಭಾಮಿನಿಗೆ +ಭೂಪತಿಗೆ +ಚಲಿಸಿತು +ದಕ್ಷಿಣಾಂಗದಲಿ
ವೈಮನಸ್ಯ+ವ್ಯಸನ +ನಿರಸನಕ್
ಈ+ ಮಹಾ +ಶಕುನಂಗಳಿವೆ+ಯೆಂದ್
ಆ+ ಮಹೀಪತಿ +ನೆನೆವುತಿರ್ದನು +ಫಲುಗುಣನ +ಬರವ

ಅಚ್ಚರಿ:
(೧) ವಾಮ, ದಕ್ಷಿಣ – ದಿಕ್ಕನ್ನು ಸೂಚಿಸುವ ಪದಗಳ ಬಳಕೆ
(೨) ಭಾಮಿನಿ, ಭೂಪತಿ – ಪದಗಳ ಬಳಕೆ
(೩) ಭೂಪತಿ, ಮಹೀಪತಿ – ಪ್ರಾಸಪದಗಳು