ಪದ್ಯ ೨೭: ಕರ್ಣನಿಗೆ ಯಾರನ್ನು ಸಂಹರಿಸಲು ಹೇಳಿದನು?

ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಳೇಕ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ (ದ್ರೋಣ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಆಗಲಿ, ಇನ್ನು ನಮ್ಮ ವೀರರನ್ನು ನಿಂದಿಸುವುದಿಲ್ಲ. ವಜ್ರಾಯುಧವನ್ನು ನಿಷ್ಕ್ರಿಯಗೊಳಿಸಲು, ಪರ್ವತಗಳು ಸಮುದ್ರವನ್ನೇಕೆ ಹೊಗಬೇಕು. ಈಗ ಈ ರಾಕ್ಷಸನ ಉಪಟಳವನ್ನು ನಿಲ್ಲಿಸು. ಉಳಿದ ವೀರರೆಲ್ಲಾ ಯೋಗಿಗಳಂತೆ ಪ್ರತೀಕಾರಕ್ಕಾಗಿ ದಂಡೋಪಾಯವನ್ನು ತ್ಯಜಿಸಿದ್ದಾರೆ. ಬಹುಬೇಗ ಘಟೋತ್ಕಚನನ್ನು ಸಂಹರಿಸು ಎಂದು ಕರ್ಣನಿಗೆ ಹೇಳಿದನು.

ಅರ್ಥ:
ತಾಗು: ಮುಟ್ಟು; ವಜ್ರ: ಗಟ್ಟಿಯಾದ; ಮುಕ್ಕು: ಸೊಕ್ಕು, ಗರ್ವ; ಕಳೆ: ತೀರಿಸು; ಸಾಗರ: ಸಮುದ್ರ; ಹೊಗಲು: ತೆರಳಲು; ಗಿರಿ: ಬೆಟ್ಟ; ಮಾತು: ನುಡಿ; ಮೀರು: ದಾಟು; ದೈತ್ಯ: ರಾಕ್ಷಸ; ಉಪಟಳ: ಕಿರುಕುಳ; ಮಾಣಿಸು: ನಿಲ್ಲಿಸು; ಸುಭಟ: ಪರಾಕ್ರಮಿ; ಯೋಗಿ: ಋಷಿ; ದಂಡ: ಕೋಲು, ಆಯುಧ; ಹೀನ: ತೊರೆದ; ಬೇಗ: ರಭಸ; ಅಮರವೈರಿ: ರಾಕ್ಷಸ; ಅಮರ: ದೇವತೆ; ವೈರಿ: ಶತ್ರು; ತರಿ: ಕಡಿ, ಕತ್ತರಿಸು; ಬಿಸುಡು: ಬಿಸಾಡು, ಹೊರಹಾಕು;

ಪದವಿಂಗಡಣೆ:
ತಾಗಿ +ವಜ್ರವ +ಮುಕ್ಕು+ಕಳೆವಡೆ
ಸಾಗರವ +ಹೊಗಲೇಕ +ಗಿರಿಗಳು
ಹೋಗಲಿನ್ನಾ + ಮಾತು +ಮೀರಿದ +ದೈತ್ಯನ್+ಉಪಟಳವ
ಈಗ+ ಮಾಣಿಸು +ನಮ್ಮ +ಸುಭಟರು
ಯೋಗಿಗಳವೊಲು +ದಂಡಹೀನರು
ಬೇಗ +ಮಾಡಿನ್+ಅಮರವೈರಿಯ +ತರಿದು +ಬಿಸುಡೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ
(೨) ಕೌರವ ರಾಜರನ್ನು ತೆಗಳುವ ಪರಿ – ನಮ್ಮ ಸುಭಟರು ಯೋಗಿಗಳವೊಲು ದಂಡಹೀನರು

ಪದ್ಯ ೩: ಅರ್ಜುನನ ಬಾಣದ ಪ್ರಭಾವ ಹೇಗಿತ್ತು?

ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಲಿನಲಿ
ನೊಸಲ ಸೀಸಕ ನುಗ್ಗು ನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ (ದ್ರೋಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವ ವೀರರ ಜೋಡು, ಸೀಸಕ, ಬಾಹುರಕ್ಷೆ, ಶಿರಸ್ತ್ರಾಣಗಳು ಅರ್ಜುನನು ಬಾಣಗಳಿಂದ ಸೀಳಿ ನುಗ್ಗು ನುಸಿಯಾದವು. ಕಿರೀಟಗಳಲ್ಲಿದ್ದ ವಜ್ರಗಳು ಹೊಳೆಯುತ್ತಾ ಹಾರಿದವು. ಅವಗಳನ್ನು ದೇಹಕ್ಕೆ ಬಂಧಿಸಿದ್ದ ಸರಪಣಿಗಳು ತುಂಡಾದವು.

ಅರ್ಥ:
ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡು: ಜೊತೆ; ವಜ್ರ:ಗಟ್ಟಿಯಾದ; ರಸುಮೆ: ರಶ್ಮಿ, ಕಿರಣ; ಹಾರು: ಚಲಿಸು, ಉಡ್ಡಾಣ ಮಾಡು; ರಿಪು: ವೈರಿ; ಎಸೆ: ಬಾಣ ಪ್ರಯೋಗ ಮಾದು; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಕವಚ: ಹೊದಿಕೆ; ಸೀಳು: ಚೂರು, ತುಂಡು; ತೋಳು: ಬಾಹು; ನೊಸಲ: ಹಣೆ; ನುಗ್ಗು: ನೂಕಾಟ, ನೂಕುನುಗ್ಗಲು; ನುಸಿ: ಹುಡಿ, ಧೂಳು; ಬಂಧ: ಕಟ್ಟು, ಬಂಧನ; ಸರಪಣಿ: ಸಂಕೋಲೆ, ಶೃಂಖಲೆ; ಹಿಳಿ: ಹಿಂಡು ; ಅರಿ: ವೈರಿ; ಬಲ: ಸೈನ್ಯ; ಎಸಕ: ಕಾಂತಿ; ವೈರಿ: ರಿಪು; ಮೋಹರ: ಯುದ್ಧ;

ಪದವಿಂಗಡಣೆ:
ಕುಸುರಿದ್+ಅರಿದವು +ಜೋಡು +ವಜ್ರದ
ರಸುಮೆಗಳು +ಹಾರಿದವು+ ರಿಪುಗಳ
ಎಸೆವ+ ಸೀಸಕ +ಕವಚವನು +ಸೀಳಿದನು +ತೋಳಿನಲಿ
ನೊಸಲ+ ಸೀಸಕ +ನುಗ್ಗು +ನುಸಿ +ಬಂ
ಧಿಸಿದ +ಸರಪಣಿ +ಹಿಳಿದವ್+ಅರಿಬಲ
ದೆಸಕ+ ನಿಂದುದು +ಪಾರ್ಥನ್+ಎಚ್ಚನು +ವೈರಿ+ಮೋಹರವ

ಅಚ್ಚರಿ:
(೧) ವೈರಿ, ರಿಪು, ಅರಿ – ಸಮಾನಾರ್ಥಕ ಪದಗಳು
(೨) ಸೀಸಕ – ೩, ೪ ಸಾಲಿನ ಎರಡನೇ ಪದ

ಪದ್ಯ ೫೨: ದುರ್ಯೋಧನನು ಏನೆಂದು ಗರ್ಜಿಸಿದನು?

ಅಳಲಿ ಮನೆಯಲಿ ಕಾಳುಗೆಡೆದಡೆ
ಫಲವಹುದೆ ನಿಜಸತಿಯ ಹಿಡಿದಾ
ನೆಳಸುವಂದಿನ ಭೀಮ ಮಾಡಿದ ಭಾಷೆಯೇನಾಯ್ತು
ಅಳುಕದಿರು ಪರಿವಾರವಿದೆ ಕೊಳು
ಗುಳಕೆ ವಜ್ರದ ಜೋಡು ದ್ರೋಣನು
ಬಲವೀಹೀನನೆ ತಾನೆನುತ ಕುರುರಾಯ ಗರ್ಜಿಸಿದ (ದ್ರೋಣ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಸೈಂಧವನ ಮಾತನ್ನು ಕೇಳಿ ದುರ್ಯೋಧನನು, ಎಲೈ ಸೈಂಧವ, ದುಃಖದಿಂದ ತನ್ನ ಮನೆಯಲ್ಲಿ ಅರ್ಜುನನು ಬಾಯಿಗೆ ಬಂದಂತೆ ಬಡಬಡಿಸಿದರೆ ಅದು ನಿಜವಾದೀತೇ? ದ್ರೌಪದಿಯನ್ನು ನಾನು ಹಿಡಿದಳೆಸಿದಾಗ ಭೀಮನು ಮಾಡಿದ ಪ್ರತಿಜ್ಞೆ ಏನಾಯಿತು? ಜಯದ್ರಥ ಹೆದರಬೇಡ. ನಿನ್ನನ್ನು ಕಾಯಲು ಅಪರಿಮಿತ ಸೇನೆಯಿದೆ. ಅಲ್ಲದೆ ಯುದ್ಧದಲ್ಲಿ ನಮಗೆ ವಜ್ರಕವಚವಾಗಿರುವ ದ್ರೋಣನು ಬಲಹೀನನೇ ಎಂದು ಗರ್ಜಿಸಿದನು.

ಅರ್ಥ:
ಅಳಲು: ದುಃಖ; ಮನೆ: ಆಲಯ; ಕಾಳು: ಕೆಟ್ಟದು; ಕೆಡು: ನಾಶ; ಫಲ: ಪ್ರಯೋಜನ; ನಿಜ: ತನ್ನ ಸತಿ: ಹೆಂಡತಿ; ಹಿಡಿ: ಗ್ರಹಿಸು; ಭಾಷೆ: ಪ್ರಮಾಣ; ಅಳುಕು: ಹೆದರು; ಪರಿವಾರ: ಪರಿಜನ; ಕೊಳುಗುಳ: ಯುದ್ಧ, ಕಾಳಗ; ವಜ್ರ: ಗಟ್ಟಿ; ಜೋಡು: ಜೊತೆ, ಜೋಡಿ; ಬಲ: ಶಕ್ತಿ; ವಿಹೀನ: ತೊರೆದ, ತ್ಯಜಿಸಿದ; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಅಳಲಿ +ಮನೆಯಲಿ +ಕಾಳು+ಕೆಡೆದಡೆ
ಫಲವಹುದೆ +ನಿಜ+ಸತಿಯ +ಹಿಡಿದ್
ಆನ್+ಎಳಸುವ್+ಅಂದಿನ +ಭೀಮ+ ಮಾಡಿದ +ಭಾಷೆಯೇನಾಯ್ತು
ಅಳುಕದಿರು +ಪರಿವಾರವಿದೆ +ಕೊಳು
ಗುಳಕೆ +ವಜ್ರದ +ಜೋಡು +ದ್ರೋಣನು
ಬಲವೀಹೀನನೆ+ ತಾನೆನುತ +ಕುರುರಾಯ +ಗರ್ಜಿಸಿದ

ಅಚ್ಚರಿ:
(೧) ಜಯದ್ರಥನಿಗೆ ಧೈರ್ಯ ತುಂಬಿದ ಪರಿ – ಅಳುಕದಿರು ಪರಿವಾರವಿದೆ ಕೊಳುಗುಳಕೆ ವಜ್ರದ ಜೋಡು ದ್ರೋಣನು ಬಲವೀಹೀನನೆ

ಪದ್ಯ ೧೦: ಧೃತರಾಷ್ಟ್ರನು ಸಂಜಯನಿಗೆ ಏನು ಹೇಳಿದ?

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿವ ಪರಿಯನು ರಚಿಸಿ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಹೋಗಲಿ ದುಷ್ಟರಾದ ನನ್ನ ಮಕ್ಕಳು ಯುದ್ಧವನ್ನು ಆರಂಭಿಸಿದ್ದಾರೆ, ಅವರು ನಮ್ಮ ಮಾತನ್ನು ಒಪ್ಪುವುದಿಲ್ಲ. ಪುಣ್ಯಪಾಪಗಳನ್ನು ಮಾಡಿದವರಿಗೆ ಅದಕ್ಕನುಸಾರವಗಿ ಫಲವನ್ನುಣ್ಣುವುದು ತಪ್ಪುವುದಿಲ್ಲ. ಈ ಯುದ್ಧದಲ್ಲಿ ವಜ್ರದಲ್ಲಿ ರಂದ್ರವನ್ನು ಕೊರೆದು ದ್ರೋಣನನ್ನು ಹೇಗೆ ಸಂಹರಿಸಿದರು ಎನ್ನುವುದನ್ನು ಹೇಳು ಎಂದು ಧೃತರಾಷ್ಟ್ರನು ಸಂಜಯನಿಗೆ ಕೇಳಿದನು.

ಅರ್ಥ:
ಹೋಗಲಿ: ಬಿಡು; ಮಾತು: ನುಡಿ; ಖೂಳ: ದುಷ್ಟ; ತಾಗು: ಮುಟ್ಟು; ಬಾಗು: ಎರಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ: ಕೆಟ್ಟ ಕೆಲಸ; ಭೋಗ: ಸುಖವನ್ನು ಅನುಭವಿಸುವುದು, ಹೊಂದುವುದು; ಅಪ್ಪು: ಆಲಿಂಗಿಸು, ಸಂಭವಿಸು; ಖೇದ: ದುಃಖ; ಕದನ: ಯುದ್ಧ; ವಜ್ರ:ಗಟ್ಟಿಯಾದ; ಬೇಗಡೆ: ಕಾಗೆ ಬಂಗಾರ; ಮುರಿ: ಸೀಳು; ಪರಿ: ರೀತಿ; ರಚಿಸು: ನಿರ್ಮಿಸು; ಹೇಳು: ತಿಳಿಸು;

ಪದವಿಂಗಡಣೆ:
ಹೋಗಲಿನ್ನ್+ಆ+ ಮಾತು +ಖೂಳರು
ತಾಗಿ +ಬಾಗರು +ಸುಕೃತ +ದುಷ್ಕೃತ
ಭೋಗವದು +ಮಾಡಿದರಿಗ್+ಅಪ್ಪುದು +ಖೇದ +ನಮಗೇಕೆ
ಈಗಲೀ +ಕದನದಲಿ +ವಜ್ರಕೆ
ಬೇಗಡೆಯ +ಮಾಡಿದನ್+ಅದಾವನು
ತಾಗಿ +ದ್ರೋಣನ +ಮುರಿವ+ ಪರಿಯನು +ರಚಿಸಿ +ಹೇಳೆಂದ

ಅಚ್ಚರಿ:
(೧) ಸುಕೃತ, ದುಷ್ಕೃತ – ವಿರುದ್ಧ ಪದಗಳು;

ಪದ್ಯ ೫೭: ಬಾಣಗಳು ಅರ್ಜುನನ ಮೇಲೆ ಹೇಗೆ ಎರಗಿದವು?

ಉರಿಯ ರಾಜ್ಯವ ಸೂರೆಗೊಳಲೆನು
ತರಗು ಪರಿದವೊಲಾಯ್ತು ಮೇಘದ
ನೆರವಿ ಗಾಳಿಯ ಮನೆಗೆ ಬಿದ್ದಿನ ಬಂದ ತೆರನಾಯ್ತು
ಗಿರಿಯ ಮಕ್ಕಳು ನಗುತ ವಜ್ರದ
ಕರವ ಹೊಯ್ದಂತಾಯ್ತು ಪಾರ್ಥನ
ಸರಳ ಸೀಮೆಯ ಬೆರಸಿದವು ರಿಪುಸುಭಟರಂಬುಗಳು (ಭೀಷ್ಮ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಹೀಗೆ ಇವರು ಬಿಟ್ಟ ಬಾಣಗಳು ಉರಿಯ ರಾಜ್ಯವನ್ನು ಜಯಿಸಲು ಹೋದ ಅರಗಿನಂತೆ, ಗಾಳಿಯ ಮನೆಗೆ ಮೇಘಗಳು ಊಟಕ್ಕೆ ಬಂದಂತೆ, ಪರ್ವತಗಳ ಮಕ್ಕಳು ಇಂದ್ರನ ವಜ್ರಹಸ್ತವನ್ನು ಹೊಡೆದಂತೆ ಅರ್ಜುನನ ಮೇಲೆ ಹೋದವು.

ಅರ್ಥ:
ಉರಿ: ಬೆಂಕಿಯ ಕಿಡಿ; ರಾಜ್ಯ: ರಾಷ್ಟ್ರ; ಸೂರೆ: ಲೂಟಿ, ಕೊಳ್ಳೆ; ಅರಗು: ಮೇಣ; ಪರಿ: ರೀತಿ; ಮೇಘ: ಮೋಡ; ನೆರವಿ: ಗುಂಪು; ಗಾಳಿ: ವಾಯು; ಮನೆ: ಆಲಯ; ಬಿದ್ದು: ಬೀಳು; ತೆರ: ಪದ್ಧತಿ; ಗಿರಿ: ಬೆಟ್ಟ; ಮಕ್ಕಳು: ಸುತರು; ನಗು: ಸಂತಸ; ವಜ್ರ: ಗಟ್ಟಿ; ಕರ: ಹಸ್ತ; ಹೊಯ್ದು: ಹೊಡೆದು; ಪಾರ್ಥ: ಅರ್ಜುನ; ಸರಳ: ಬಾಣ; ಸೀಮೆ: ಎಲ್ಲೆ; ಬೆರಸು: ಸೇರಿಸು; ರಿಪು: ವೈರಿ; ಭಟ: ಸೈನಿಕ; ಅಂಬು: ಬಾಣ;

ಪದವಿಂಗಡಣೆ:
ಉರಿಯ +ರಾಜ್ಯವ +ಸೂರೆಗೊಳಲ್+ಎನುತ್
ಅರಗು+ ಪರಿದವೊಲ್+ಆಯ್ತು +ಮೇಘದ
ನೆರವಿ+ ಗಾಳಿಯ +ಮನೆಗೆ +ಬಿದ್ದಿನ +ಬಂದ +ತೆರನಾಯ್ತು
ಗಿರಿಯ +ಮಕ್ಕಳು +ನಗುತ +ವಜ್ರದ
ಕರವ+ ಹೊಯ್ದಂತಾಯ್ತು +ಪಾರ್ಥನ
ಸರಳ +ಸೀಮೆಯ +ಬೆರಸಿದವು +ರಿಪು+ಸುಭಟರ್+ಅಂಬುಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ರಾಜ್ಯವ ಸೂರೆಗೊಳಲೆನುತರಗು ಪರಿದವೊಲಾಯ್ತು; ಮೇಘದ
ನೆರವಿ ಗಾಳಿಯ ಮನೆಗೆ ಬಿದ್ದಿನ ಬಂದ ತೆರನಾಯ್ತು; ಗಿರಿಯ ಮಕ್ಕಳು ನಗುತ ವಜ್ರದ
ಕರವ ಹೊಯ್ದಂತಾಯ್ತು

ಪದ್ಯ ೧೯: ಧರ್ಮಜನು ಭೀಷ್ಮನಿಗೆ ಏನೆಂದು ಉತ್ತರಿಸಿದನು?

ಅರಿಯೆನುಚಿತವನೆಮ್ಮ ಭಾರದ
ಹೊರಿಗೆ ನಿಮ್ಮದು ಕೃಷ್ಣನದು ನಾ
ವರಿದರೆಯು ಮೇಣ್ ಮರೆದರೆಯು ರಕ್ಷಕರು ನೀವೆಮಗೆ
ಅರಿಯನೇನುವನೆಂದು ಸಲಹಲು
ಮರೆವಳೇ ಬಾಲಕನ ತಾಯ್ ನೀ
ನುರುವ ವಜ್ರದ ಜೋಡು ನಮಗಿರೆ ಭೀತಿಯೇಕೆಂದ (ಭೀಷ್ಮ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಯುಧಿಷ್ಠಿರನು, ಉಚಿತವೋ, ಅನುಚಿತವೋ ತಿಳಿಯದು. ನಮ್ಮ ಭಾರವನ್ನು ಹೊರುವ ಹೊಣೆ ನಿಮ್ಮ ಮತ್ತು ಕೃಷ್ಣನ ಮೇಲಿದೆ. ನಮಗೆ ತಿಳಿದರೂ ತಿಳಿಯದಿದ್ದರೂ ನೀವೇ ನಮ್ಮ ರಕ್ಷಕರು. ಮಗುವಿಗೆ ಏನೂ ತಿಳಿಯದೆಂದು ತಾಯಿ ಅದನ್ನು ತಿರಸ್ಕರಿಸುವಳೇ! ವಜ್ರಕವಚದಂತೆ ನೀನಿರಲು ನಮಗಾವ ಭೀತಿ ಎಂದು ಧರ್ಮಜನು ಹೇಳಿದನು.

ಅರ್ಥ:
ಅರಿ: ತಿಳಿ; ಉಚಿತ: ಸರಿಯಾದ; ಭಾರ: ಜವಾಬ್ದಾರಿ; ಹೊರೆ: ತೂಕ; ಮೇಣ್: ಅಥವ; ಮರೆ: ಗುಟ್ಟು, ರಹಸ್ಯ; ರಕ್ಷಕ: ಕಾಪಾಡುವವ; ಸಲಹು: ರಕ್ಷಿಸು; ಬಾಲಕ: ಹುಡುಗ; ತಾಯಿ: ಮಾತೆ; ಉರುವ: ಶ್ರೇಷ್ಠ; ವಜ್ರ: ಗಟ್ಟಿಯಾದ; ಜೋಡು: ಜೊತೆ, ಜೋಡಿ; ಭೀತಿ: ಭಯ;

ಪದವಿಂಗಡಣೆ:
ಅರಿಯೆನ್+ಉಚಿತವನ್+ಎಮ್ಮ +ಭಾರದ
ಹೊರಿಗೆ +ನಿಮ್ಮದು +ಕೃಷ್ಣನದು +ನಾವ್
ಅರಿದರೆಯು +ಮೇಣ್ +ಮರೆದರೆಯು +ರಕ್ಷಕರು+ ನೀವ್+ಎಮಗೆ
ಅರಿಯನೇನುವನೆಂದು +ಸಲಹಲು
ಮರೆವಳೇ+ ಬಾಲಕನ+ ತಾಯ್ +ನೀನ್
ಉರುವ +ವಜ್ರದ +ಜೋಡು +ನಮಗಿರೆ +ಭೀತಿಯೇಕೆಂದ

ಅಚ್ಚರಿ:
(೧) ಅರಿ – ಪದದ ಬಳಕೆ, ೧,೩,೪ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ಅರಿಯನೇನುವನೆಂದು ಸಲಹಲು ಮರೆವಳೇ ಬಾಲಕನ ತಾಯ್

ಪದ್ಯ ೨೦: ಭಗದತ್ತನು ಹೇಗೆ ತೋರಿದನು?

ತೋರದಲಿ ಕುಲಗಿರಿಯ ಸತ್ವದ
ಸಾರದಲಿ ವಜ್ರವನು ದನಿಯಲಿ
ಕಾರ ಬರಸಿಡಿಲಂದವಿದನುಗಿದೊಂದುಮಾಡಿದನು
ವಾರಿಜೋದ್ಭವನೆನಲು ಝಾಡಿಯ
ಭಾರಿ ರೆಂಚೆಯ ಕೈಯ ಖಡ್ಗದ
ವಾರಣದ ಮಧ್ಯದಲಿಹನು ಭಗದತ್ತ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕುಲಗಿರಿಗಳ ಗಾತ್ರವನ್ನೂ, ವಜ್ರದ ಕಠಿಣತೆಯನ್ನೂ, ಬರಸಿಡಿಲ ಸದ್ದನ್ನೂ, ಬ್ರಹ್ಮನು ಒಂದುಗೂಡಿಸಿದನೋ ಎಂಬಂತೆ ರೆಂಚೆ ಹಾಕಿದ ಆನೆಯ ಮೇಲೆ ಖಡ್ಗಧಾರಿಯಾದ ಭಗದತ್ತನಿದ್ದಾನೆ ನೋಡು ಎಂದು ಕೃಷ್ಣನು ತೋರಿಸಿದನು.

ಅರ್ಥ:
ತೋರು: ಕಾಣಿಸು; ಕುಲಗಿರಿ: ಕುಲಾಚಲ, ನೀಲ, ನಿಷಧ, ವಿಂಧ್ಯ, ಪಾರಿಯಾತ್ರ ಮೊದಲಾದ ಎತ್ತರದ ಪರ್ವತಗಳು; ಸತ್ವ: ಶಕ್ತಿ; ಸಾರ: ತಿರುಳು, ಗುಣ; ವಜ್ರ: ಗಟ್ಟಿಯಾದ, ಬಲವಾದ; ದನಿ: ಶಬ್ದ, ಧ್ವನಿ; ಕಾರ: ತೀಕ್ಷ್ಣವಾದ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಉಗಿ: ಹೊರಹಾಕು; ವಾರಿಜೋದ್ಭವ: ಬ್ರಹ್ಮ; ಝಾಡಿ: ಕಾಂತಿ; ಭಾರಿ: ದೊಡ್ಡ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಕೈ: ಹಸ್ತ; ಖಡ್ಗ: ಕತ್ತಿ; ವಾರಣ: ಆನೆ; ಮಧ್ಯ: ನಡುವೆ;

ಪದವಿಂಗಡಣೆ:
ತೋರದಲಿ +ಕುಲಗಿರಿಯ +ಸತ್ವದ
ಸಾರದಲಿ +ವಜ್ರವನು +ದನಿಯಲಿ
ಕಾರ +ಬರಸಿಡಿಲ್+ಅಂದವಿದನ್+ಉಗಿದ್+ಒಂದು+ಮಾಡಿದನು
ವಾರಿಜೋದ್ಭವನ್+ಎನಲು +ಝಾಡಿಯ
ಭಾರಿ +ರೆಂಚೆಯ +ಕೈಯ +ಖಡ್ಗದ
ವಾರಣದ +ಮಧ್ಯದಲಿಹನು+ ಭಗದತ್ತ+ ನೋಡೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತೋರದಲಿ ಕುಲಗಿರಿಯ ಸತ್ವದ ಸಾರದಲಿ ವಜ್ರವನು ದನಿಯಲಿ
ಕಾರ ಬರಸಿಡಿಲಂದವಿದನುಗಿದೊಂದುಮಾಡಿದನು

ಪದ್ಯ ೪೩: ಯಾವ ಅಸ್ತ್ರದಿಂದ ಅರ್ಜುನನು ತಿಮಿರಾಸ್ತ್ರವನ್ನು ಶಮನಗೊಳಿಸಿದ?

ಅವರು ಮಗುಳೆಚ್ಚರು ಶಿಲೀಮುಖ
ದವಯವದಲುಬ್ಬರಿಸಿ ಗಿರಿಗಳು
ಕವಿಯೆ ಕಡಿದೊಟ್ಟಿದೆನು ಭಾರಿಯ ವಜ್ರಬಾಣದಲಿ
ಅವರು ತಿಮಿರಾಸ್ತ್ರದಲಿ ಕೆತ್ತರು
ಭುವನ ನಯನದ ಕದವನಾಗಳೆ
ರವಿಯ ಶರದಲಿ ಮುರಿದೆನಗುಳಿಯನರಸ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅಣ್ಣಾ ಕೇಳು, ರಾಕ್ಷಸರು ಪರ್ವತಾಸ್ತ್ರವನ್ನು ಬಿಡಲು, ನಾನು ವಜ್ರಾಸ್ತ್ರದಿಂದ ಆ ಬೆಟ್ಟಗಳನ್ನು ಮುರಿದೆನು. ಅವರು ತಿಮಿರಾಸ್ತ್ರವನ್ನು ಬಿಟ್ಟು ಲೋಕದ ಜನರ ಕಣುಗಳ ಕದವನ್ನು ಹಾಕಲು ಮುಂದುವರೆದರೆ ನಾನು ಸೂರ್ಯಾಸ್ತ್ರದಿಂದ ಆ ಕಣ್ಣಿನ ಕದದ ಚಿಲಕವನ್ನು ಮುರಿದೆನು.

ಅರ್ಥ:
ಮಗುಳು: ಮತ್ತೆ; ಎಚ್ಚು: ಬಾಣ ಬಿಡು; ಶಿಲೀಮುಖ: ಬಾಣ, ಸರಳು; ಅವಯವ: ಅಂಗ; ಉಬ್ಬರ: ಅತಿಶಯ; ಗಿರಿ: ಬೆಟ್ಟ; ಕವಿ: ಆವರಿಸು; ಕಡಿ: ತುಂಡು, ಹೋಳು; ಭಾರಿ: ದೊಡ್ಡ; ಬಾಣ: ಸರಳು; ತಿಮಿರ: ಅಂಧಕಾರ; ಕೆತ್ತು: ಅದಿರು, ನಡುಗು; ಭುವನ: ಲೋಕ, ಜಗತ್ತು; ನಯನ: ಕಣ್ಣು; ಕದ: ಬಾಗಿಲು; ರವಿ: ಸೂರ್ಯ; ಶರ: ಬಾಣ; ಮುರಿ: ಸೀಳು; ಅಗುಳಿ: ಚಿಲಕ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅವರು +ಮಗುಳ್+ಎಚ್ಚರು +ಶಿಲೀಮುಖದ್
ಅವಯವದಲ್+ಉಬ್ಬರಿಸಿ +ಗಿರಿಗಳು
ಕವಿಯೆ +ಕಡಿದ್+ಒಟ್ಟಿದೆನು +ಭಾರಿಯ +ವಜ್ರ+ಬಾಣದಲಿ
ಅವರು +ತಿಮಿರಾಸ್ತ್ರದಲಿ +ಕೆತ್ತರು
ಭುವನ +ನಯನದ +ಕದವನ್+ಆಗಳೆ
ರವಿಯ +ಶರದಲಿ+ ಮುರಿದೆನ್+ಅಗುಳಿಯನ್+ಅರಸ +ಕೇಳೆಂದ

ಅಚ್ಚರಿ:
(೧) ಯುದ್ಧವರ್ಣನೆಯಲ್ಲಿ ಬಾಗಿಲಿನ ಉಪಮಾನ – ಅವರು ತಿಮಿರಾಸ್ತ್ರದಲಿ ಕೆತ್ತರು
ಭುವನ ನಯನದ ಕದವನಾಗಳೆರವಿಯ ಶರದಲಿ ಮುರಿದೆನಗುಳಿಯನರಸ ಕೇಳೆಂದ
(೨) ಶಿಲೀಮುಖ, ಶರ, ಬಾಣ – ಸಮನಾರ್ಥಕ ಪದ

ಪದ್ಯ ೨೫: ರಾಜಸಭೆ ಹೇಗೆ ಕಂಗೊಳಿಸಿತು?

ಬಿಗಿದ ನೀಲದ ಸರಿಯ ನೆಲಗ
ಟ್ಟುಗಳ ವೈಡೂರಿಯದ ಮಣಿ ಭಿ
ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ
ಝಗೆಯ ಲಹರಿಯ ಜಾಳಿಗೆಯ ಪ
ಚ್ಚೆಗಳ ಪಾಗಾರದ ಸುರತ್ನಾ
ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ (ಸಭಾ ಪರ್ವ, ೧೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಆ ಸಭೆಗೆ ನೀಲದ ಸರಿಯ ನೆಲಗಟ್ಟು, ವೈಢೂರ್ಯದಿಂದ ಮಾಡಿದ ಗೋಡೆಗಳು, ವಜ್ರದ ಜಗುಲಿಗಳು, ಹವಳದ ಸೂರಿನ ಔಕಟ್ಟು, ಹೊಳೆಯುವ ಕಿಟಕಿಗಳು, ಪಚ್ಚೆಗಳಿಂದ ಮಾಡಿದ ಪ್ರಾಕಾರಗಳಿದ್ದವು. ರತ್ನಗಳ ಹೊಲಪು ಎಲ್ಲೆಲ್ಲೂ ತುಂಬಿರಲು, ಮೂರು ಮೈಲಿಯ ವಿಸ್ತೀರ್ಣದಲ್ಲಿ ಆ ಸಭೆಯು ರಂಜಿಸಿತು.

ಅರ್ಥ:
ಬಿಗಿ: ಭದ್ರ, ಗಟ್ಟಿ; ನೀಲ: ನೀಲಿ ರತ್ನ; ಸರಿ: ಸಮಾನ, ಸದೃಶ, ಸಾಟಿ; ನೆಲ: ಭೂಮಿ; ನೆಲಗಟ್ಟು: ಪಚ್ಚೆ, ರತ್ನ ವನ್ನು ಕುಂದಣಿಸಿದ ನೆಲ, ಸಮ ಮಾಡಿದ ನೆಲ; ವೈಡೂರಿಯ: ಬೆಲೆ ಬಾಳುವ ರತ್ನ; ಮಣಿ: ರತ್ನ; ಭಿತ್ತಿ: ಒಡೆಯುವುದು, ಸೀಳುವುದು; ವಜ್ರ: ಗಟ್ಟಿಯಾದ, ಬಲವಾದ; ವೇದಿ: ಎತ್ತರವಾದ ಜಗಲಿ, ವೇದಿಕೆ; ವಿದ್ರುಮ: ನವರತ್ನಗಳಲ್ಲಿ ಒಂದು, ಹವಳ; ಲೋವೆ: ಛಾವಣಿಯ ಚೌಕಟ್ಟು; ಝಗೆ: ಹೊಳಪು, ಪ್ರಕಾಶ; ಲಹರಿ: ರಭಸ, ಆವೇಗ; ಜಾಳಿಗೆ: ಬಲೆ, ಜಾಲ; ಪಚ್ಚೆ: ಹಸುರು ಬಣ್ಣದ ರತ್ನ, ಮರಕತ; ಪಾಗಾರ: ಪ್ರಾಕಾರ; ರತ್ನ: ಬೆಲೆಬಾಳುವ ಮಣಿ; ಆಳಿ: ಗುಂಪು; ಎಸೆ: ತೋರು; ರಾಜಸಭೆ: ಓಲಗ, ದರ್ಬಾರು; ಕ್ರೋಶ: ಮೂರು ಮೈಲು ಅಳತೆ;

ಪದವಿಂಗಡಣೆ:
ಬಿಗಿದ +ನೀಲದ +ಸರಿಯ +ನೆಲಗ
ಟ್ಟುಗಳ +ವೈಡೂರಿಯದ +ಮಣಿ +ಭಿ
ತ್ತಿಗಳ +ವಜ್ರದ +ವೇದಿಗಳ +ವಿದ್ರುಮದ +ಲೋವೆಗಳ
ಝಗೆಯ +ಲಹರಿಯ +ಜಾಳಿಗೆಯ +ಪ
ಚ್ಚೆಗಳ +ಪಾಗಾರದ +ಸುರತ್ನಾ
ಳಿಗಳಲ್+ಎಸೆದುದು +ರಾಜಸಭೆ +ತತ್ಕ್ರೋಶ +ಮಾತ್ರದಲಿ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವಜ್ರದ ವೇದಿಗಳ ವಿದ್ರುಮದ
(೨) ನೀಲ, ವೈಡೂರಿಯ, ಮಣಿ, ವಜ್ರ, ವಿದ್ರುಮ, ಪಚ್ಚೆ, ರತ್ನ – ಬೆಲೆಬಾಳುವ ರತ್ನಗಳಿಂದ ಅಲಂಕೃತವಾದ ಸಭೆ

ಪದ್ಯ ೨೯: ಸರ್ಪಾಸ್ತ್ರವು ಎಲ್ಲಿಗೆ ಅಪ್ಪಳಿಸಿತು?

ಅಣೆದುದಹಿ ಮಕುಟವನು ತಾರಾ
ಗಣದ ಮಧ್ಯದ ಚಂದ್ರಮನ ಹೊ
ಯ್ದಣಲೊಳಡಸಿದ ರಾಹುವಿನ ರಹಿಯಾಯ್ತು ನಿಮಿಷದಲಿ
ಕುಣಿಕೆ ಮುರಿದುದು ಮೌಕ್ತಿಕದ ಕೀ
ಲಣದ ವಜ್ರದ ಮಾಣಿಕದ ವರ
ಮಣಿಗಳೊಕ್ಕವು ರಕುತ ಮಿದುಳೊಡಸೂಸಿದಂದದಲಿ (ಕರ್ಣ ಪರ್ವ, ೨೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರವು ಅರ್ಜುನನ ಕಿರೀಟವನ್ನು ಅಪ್ಪಳಿಸಿತು. ತಾರಾಗಣದ ನಡುವೆ ತೊಳಗುವ ಚಂದ್ರನನ್ನು ರಾಹುವು ನುಂಗಿದಂತಾಯಿತು. ಕಿರೀಟದ ಕುಣಿಕೆ ಮುರಿದು ಕಿರೀಟದಲ್ಲಿದ್ದ ವಜ್ರ ಮಾಣಿಕ್ಯಗಳು ಚೆಲ್ಲಿದವು. ರಕ್ತಸಿಕ್ತ ಮಿದುಳು ಹೊರಬಂತೋ ಎಂಬಂತೆ ಕಾಣಿಸಿತು.

ಅರ್ಥ:
ಅಣೆ: ಹೊಡೆ, ತಿವಿ; ಅಹಿ: ಸರ್ಪ; ಮಕುಟ: ಕಿರೀಟ; ತಾರಾಗಣ: ನಕ್ಷತ್ರಗಳ ಗುಂಪು, ಸಮೂಹ; ಮಧ್ಯ: ನಡುವೆ; ಚಂದ್ರ: ಶಶಿ; ಹೊಯ್ದು: ಹೊಡೆದು; ರಹಿ: ರೀತಿ, ಪ್ರಕಾರ; ನಿಮಿಷ: ಕಾಲ ಪ್ರಮಾಣ; ಕುಣಿಕೆ: ಕೊನೆ, ತುದಿ; ಮುರಿ: ಸೀಳು; ಮೌಕ್ತಿಕ: ಮುತ್ತು; ಕೀಲು: ಬೆಣೆ, ಕಲಾಡಿ; ವಜ್ರ: ಬೆಲೆಬಾಳುವ ಹವಳ; ಮಾಣಿಕ: ಪದ್ಮರಾಗ, ಕೆಂಪು ಹರಳು; ವರ: ಶ್ರೇಷ್ಠ; ಮಣಿ: ರತ್ನ; ಒಕ್ಕು: ಹರಿ, ಪ್ರವಹಿಸು, ಬೇರ್ಪಡಿಸು; ರಕುತ: ನೆತ್ತರು; ಮಿದುಳು: ಶಿರದ ಭಾಗ; ಸೂಸು: ಎರಚು, ಚಲ್ಲು;

ಪದವಿಂಗಡಣೆ:
ಅಣೆದುದ್+ಅಹಿ +ಮಕುಟವನು +ತಾರಾ
ಗಣದ +ಮಧ್ಯದ +ಚಂದ್ರಮನ +ಹೊ
ಯ್ದಣಲೊಳಡಸಿದ +ರಾಹುವಿನ +ರಹಿಯಾಯ್ತು +ನಿಮಿಷದಲಿ
ಕುಣಿಕೆ +ಮುರಿದುದು +ಮೌಕ್ತಿಕದ +ಕೀ
ಲಣದ +ವಜ್ರದ +ಮಾಣಿಕದ +ವರ
ಮಣಿಗಳ್+ಒಕ್ಕವು +ರಕುತ +ಮಿದುಳ್+ಒಡಸೂಸಿದಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಾರಾಗಣದ ಮಧ್ಯದ ಚಂದ್ರಮನ ಹೊಯ್ದಣಲೊಳಡಸಿದ ರಾಹುವಿನ ರಹಿಯಾಯ್ತು
(೨) ದ ಕಾರದಿಂದ ಕೊನೆಗೊಳ್ಳುವ ಪದಸಾಲು – ಮೌಕ್ತಿಕದ ಕೀಲಣದ ವಜ್ರದ ಮಾಣಿಕದ