ಪದ್ಯ ೧೯: ಹಸ್ತಿನಾಪುರಿಗೆ ಹೆಸರು ಹೇಗೆ ಬಂದಿತು?

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತ ವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರ ಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ (ಆದಿ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ದುಷ್ಯಂತನ ಮಗನು ಭರತ, ಅವನು ತನ್ನ ಪೂರ್ವಜರಿಗಿಂತ ಹಿರಿದಾಗಿ ಬಾಳಿದನು. ಅವನ ವಮ್ಶಕ್ಕೆ ಭಾರತವಂಶವೆಂದು ಹೆಸರಾಯ್ತು. ಭರತನ ಮಗನು ಸುಹೋತ್ರ, ಅವನ ಮಗನು ಹಸ್ತಿ, ಚಂದ್ರವಂಶದ ಅರಸರ ರಾಜಧಾನಿಯಾಗಿ ಹಸ್ತಿಯಿಂದ ಹಸ್ತಿನಾಪುರಿ ಎಂಬ ಹೆಸರು ಬಂದಿತು.

ಅರ್ಥ:
ಅವತರಿಸು: ಹುಟ್ಟು; ಪೂರ್ವ: ಹಿಂದಿನ; ನೃಪ: ರಾಜ; ಹಿರಿದು: ದೊಡ್ಡ; ಸಂದ: ಕಳೆದ, ಹಿಂದಿನ; ಬಳಿಕ: ನಂತರ; ವಂಶ: ಕುಲ; ಸೂನು: ಮಗ; ವರ: ಶ್ರೇಷ್ಠ; ಕುಮಾರ: ಮಗ; ಹೆಸರು: ನಾಮ; ಕೇಳು: ಆಲಿಸು;

ಪದವಿಂಗಡಣೆ:
ಭರತನ್+ಆ+ ದುಷ್ಯಂತನಿಂದ್+ಅವ
ತರಿಸಿದನು +ತತ್ಪೂರ್ವ+ ನೃಪರಿಂ
ಹಿರಿದು +ಸಂದನು +ಬಳಿಕ +ಭಾರತ +ವಂಶವಾಯ್ತಲ್ಲಿ
ಭರತಸೂನು +ಸುಹೋತ್ರನ್+ಆತನ
ವರ+ ಕುಮಾರಕ +ಹಸ್ತಿ+ ಹಸ್ತಿನ
ಪುರಿಗೆ+ ಹೆಸರಾಯ್ತ್+ಆತನಿಂದವೆ +ನೃಪತಿ+ ಕೇಳೆಂದ

ಅಚ್ಚರಿ:
(೧) ಸೂನು, ಕುಮಾರ – ಸಮಾನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹಸ್ತಿ ಹಸ್ತಿನಪುರಿಗೆ ಹೆಸರಾಯ್ತಾತನಿಂದವೆ

ಪದ್ಯ ೩೨: ಉತ್ತರನೇಕೆ ಅರ್ಜುನನನ್ನು ಒಡೆಯನೆಂದು ಹೇಳಿದ?

ನಡೆಗೊಳಿಸಿದನು ರಥವ ಮುಂದಕೆ
ನಡೆಸುತುತ್ತರ ನುಡಿದ ಸಾರಥಿ
ಕೆಡಿಸದಿರು ವಂಶವನು ರಾಯನ ಹಿಂದೆ ಹೆಸರಿಲ್ಲ
ಬಿಡು ಮಹಾಹವವೆನಗೆ ನೂಕದು
ತೊಡೆಯದಿರು ನೊಸಲಕ್ಕರವ ನೀ
ನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ (ವಿರಾಟ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಉತ್ತರನು ರಥವನ್ನು ಮುಂದಕ್ಕೆ ಚಲಿಸುತ್ತಾ, ಈಗ ನಾನು ಸಾರಥಿ, ನಾನು ಸತ್ತರೆ ನಮ್ಮಪ್ಪನ ಹೆಸರು ಹೇಳಲು ಇನ್ನೊಬ್ಬರಿಲ್ಲ, ನಮ್ಮ ವಂಶವನ್ನು ನಾಶಮಾಡಬೇಡ, ಈ ಮಹಾಯುದ್ಧವು ನನ್ನಕೈಯ್ಯಲ್ಲಾಗುವುದಿಲ್ಲ. ಬದುಕಬೇಕೆಂದು ಹಣೆಯ ಮೇಲೆ ಬರೆದಿರುವ ಅಕ್ಷರವನ್ನು ನೀನು ಅಳಿಸಬೇಡ, ಇಂದಿನಿಂದ ನೀನೇ ಒಡೆಯ ನಾನೆ ಸೇವಕನೆಂದು ತಿಳಿಸಿದ.

ಅರ್ಥ:
ನಡೆ: ಚಲಿಸು; ರಥ: ಬಂಡಿ; ಮುಂದೆ: ಎದುರು; ನುಡಿ: ಮಾತಾಡು; ಸಾರಥಿ: ಸೂತ; ಕೆಡಿಸು: ಹಾಳುಮಾದು; ವಂಶ: ಕುಲ; ರಾಯ: ರಾಜ; ಹಿಂದೆ: ಹಿಂಬದಿ; ಹೆಸರು: ನಾಮ; ಬಿಡು: ತೊರೆ; ಮಹಾಹವ: ದೊಡ್ಡ ಯುದ್ಧ; ನೂಕು: ತಳ್ಳು; ತೊಡೆ: ಒರಸು, ಅಳಿಸು; ನೊಸಲು: ಹಣೆ; ಅಕ್ಕರ: ಅಕ್ಷರ; ಒಡೆಯ: ರಾಜ, ಯಜಮಾನ; ಕಿಂಕರ: ಸೇವಕ;

ಪದವಿಂಗಡಣೆ:
ನಡೆಗೊಳಿಸಿದನು +ರಥವ +ಮುಂದಕೆ
ನಡೆಸುತ್+ಉತ್ತರ +ನುಡಿದ +ಸಾರಥಿ
ಕೆಡಿಸದಿರು +ವಂಶವನು +ರಾಯನ +ಹಿಂದೆ +ಹೆಸರಿಲ್ಲ
ಬಿಡು +ಮಹಾಹವವ್+ಎನಗೆ +ನೂಕದು
ತೊಡೆಯದಿರು+ ನೊಸಲ್+ಅಕ್ಕರವ+ ನೀನ್
ಒಡೆಯ +ಕಿಂಕರರ್+ಆಗಿಹೆವು +ನಾವಿಂದು +ಮೊದಲಾಗಿ

ಅಚ್ಚರಿ:
(೧) ಹಣೆಬರಹ ಎಂದು ಹೇಳಲು – ನೊಸಲಕ್ಕರ
(೨) ನಾನು ದಾಸನೆಂದು ಹೇಳುವ ಪರಿ – ನೀನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ

ಪದ್ಯ ೩೩: ದ್ರೌಪದಿಯು ಮುಂದಾಗುವ ಅನುಹುತದ ಬಗ್ಗೆ ಹೇಗೆ ಹೇಳಿದಳು?

ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೋ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳರಾಣಿಯರೆಂದಳಿಂದುಮುಖಿ (ವಿರಾಟ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ವೃಥಾ ಮಾತಾಡಬೇಡ, ಅಯ್ಯೋ ಇವನೊಬ್ಬನು ಹುಟ್ಟಿ ವಂಶವನ್ನೇ ನಾಶ ಮಾಡಿದನೆಂಬ ಅಪಕೀರ್ತಿ ನಿನಗೆ ಬರುವುದು. ಅದು ಶಾಶ್ವತವಾಗಿ ಉಳಿಯುವುದು, ನಿನಗೊಬ್ಬನಿಗೇ ಅಪಕೀರ್ತಿ ಬಾರದು, ಈ ಪಾಪಿ ಹೆಂಗಸು ಕೊಲೆಗಡುಕಿ, ಇವಳಿಂದ ಹಲವರು ಸತ್ತರು, ಇವಳನ್ನು ಸುಡಬೇಕು ಎಂದು ನಿನ್ನ ರಾಣಿಯರು ಅಳುತ್ತಾರೆ, ಇದು ಖಂಡಿತ, ಎಂದು ದ್ರೌಪದಿಯು ಕೀಚಕನಿಗೆ ಹೇಳಿದಳು.

ಅರ್ಥ:
ಕುಲ: ವಂಶ; ಜನಿಸು: ಹುಟ್ಟು; ವಂಶ: ಅನ್ವಯ; ಅಳಿ: ನಾಶ; ಅಕಟಕಟ: ಅಯ್ಯೋ; ದುರ್ಯಶ: ಅಪಜಯ, ಕುಖ್ಯಾತಿ; ಉಳಿ: ಇರು; ಲೇಸು: ಒಳಿತು; ಕಾಣು: ತೋರು; ಬರಿ: ಶೂನ್ಯ; ಗಳಹು: ಪ್ರಲಾಪಿಸು, ಹೇಳು; ಕೊಲೆ: ಸಾಯಿಸು; ಪಾಪಿ: ದುಷ್ಟ; ಹೆಂಗಸು: ಹೆಣ್ಣು; ಹಲಬರು: ಹಲವಾರು; ಸುಡು: ದಹಿಸು; ಅಳು: ರೋದಿಸು, ದುಃಖಿಸು; ಅಖಿಳ: ಎಲ್ಲಾ; ರಾಣಿ: ಅರಸಿ; ಇಂದುಮುಖಿ: ಚಂದ್ರನಂತಿರುವ ಮುಖ;

ಪದವಿಂಗಡಣೆ:
ಕುಲದೊಳ್+ಒಬ್ಬನು +ಜನಿಸಿ+ ವಂಶವನ್
ಅಳಿದನ್+ಅಕಟಕಟೆಂಬ+ ದುರ್ಯಶ
ಉಳಿವುದಲ್ಲದೆ +ಲೇಸ+ಕಾಣೆನು +ಬರಿದೆ+ ಗಳಹದಿರು
ಕೊಲೆಗಡಿಕೆಯೋ +ಪಾಪಿ +ಹೆಂಗಸು
ಹಲಬರನು +ಕೊಲಿಸಿದಳು +ಸುಡಲೆಂದ್
ಅಳಲುವರು +ನಿನ್ನ್+ಅಖಿಳ+ರಾಣಿಯರ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಕೀಚಕನ ಸ್ಥಿತಿಯನ್ನು ವರ್ಣಿಸಿದ ಪರಿ – ಕುಲದೊಳೊಬ್ಬನು ಜನಿಸಿ ವಂಶವನಳಿದನಕಟಕಟೆಂಬ ದುರ್ಯಶವುಳಿವುದಲ್ಲದೆ ಲೇಸಗಾಣೆನು

ಪದ್ಯ ೨೯: ಉತ್ಪಾತಗಳು ಏನನ್ನು ಸೂಚಿಸುತ್ತವೆ ಎಂದು ವ್ಯಾಸರು ನುಡಿದರು?

ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ವೇದವ್ಯಾಸರು, ಈ ಉತ್ಪಾತಗಳು ಕೌರವವಂಶದ ಅಭ್ಯುದಯಕ್ಕೆ ಬಂದೊದಗುವ ಕುತ್ತನ್ನು ಸೂಚಿಸುತ್ತವೆ. ದುರ್ಯೋಧನನು ಕೆಲವು ಕಾಲ ಸುಖದಿಮ್ದಿರುತ್ತಾನೆ, ಸಮಸ್ತ ಕ್ಷತ್ರಿಯ ಕುಲಗಳೆಂಬ ಮೋಡಗಳನ್ನು ಹಾರಿಸುವ ಬಿರುಗಾಳಿಯಿದು, ನಿಮಗೆ ಅಪಜಯವು ಕಾದಿದೆಯೆಂದು ಈ ಉತ್ಪಾತಗಳು ಸೂಚಿಸುತ್ತವೆ ಎಂದು ನುಡಿದರು.

ಅರ್ಥ:
ರಾಯ: ರಾಜ; ವಂಶ: ಕುಲ; ಅಭ್ಯುದಯ: ಏಳಿಗೆ; ವಿಗ್ರಹ: ರೂಪ; ಪೂರ್ವ: ಮೊದಲು, ಹಿಂದೆ; ಸೂಚಕ: ಸೂಚನೆ; ನೃಪ: ರಾಜ; ಕತಿಪಯ: ಕೆಲವು; ಕಾಲ: ಸಮಯ; ಸುಖ: ಸಂತಸ, ನೆಮ್ಮದಿ; ಬೀಜ: ಮೂಲ; ಸಮಸ್ತ: ಎಲ್ಲಾ; ಕ್ಷತ್ರ: ಕ್ಷತ್ರಿಯ; ಕುಲ: ವಂಶ; ವಾರಿದ: ಮೋಡ; ಘಟ: ದೊಡ್ಡ; ಉಚ್ಚಾಟನ: ಹೊರಹಾಕು; ಸಮೀರ: ಗಾಳಿ, ವಾಯು; ಫಲ: ಪ್ರಯೋಜನ; ಅಪಜಯ: ಪರಾಭವ; ಆವಹಿಸು: ಕೂಗಿ ಕರೆ;

ಪದವಿಂಗಡಣೆ:
ಇದು+ ಕಣಾ +ಕುರುರಾಯ +ವಂಶ
ಅಭ್ಯುದಯ +ವಿಗ್ರಹ+ಪೂರ್ವ +ಸೂಚಕವ್
ಇದು +ಸುಯೋಧನ+ ನೃಪನ+ ಕತಿಪಯ+ ಕಾಲ +ಸುಖಬೀಜ
ಇದು+ ಸಮಸ್ತ +ಕ್ಷತ್ರ +ಕುಲ+ ವಾ
ರಿದ +ಘಟೋಚ್ಚಾಟನ+ ಸಮೀರಣವ್
ಇದರ+ ಫಲ+ ನಿಮಗ್+ಅಪಜಯ+ಆವಹವೆಂದನಾ +ಮುನಿಪ

ಅಚ್ಚರಿ:
(೧) ಉತ್ಪಾತದ ತೀವ್ರತೆ ಬಗ್ಗೆ ತಿಳಿಸಿದ ವ್ಯಾಸರು – ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ

ಪದ್ಯ ೧೯: ದುರ್ಯೋಧನನು ಶಲ್ಯನಿಗೆ ಯಾವ ಕಾರ್ಯವನ್ನು ಮಾಡಲು ಹೇಳಿದನು?

ಮಾವ ಸಾರಥಿಯಾಗಿ ಕರ್ಣನ
ನೀವು ಕೊಂಡಾಡಿದಡೆ ಫಲುಗುಣ
ನಾವ ಪಾಡು ಸುರಾಸುರರ ಕೈಕೊಂಬನೇ ಬಳಿಕ
ಆವುದೆಮಗಭ್ಯುದಯವದ ನೀ
ನಾವ ಪರಿಯಲಿ ಮನ್ನಿಸಿದಡರೆ
ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ (ಕರ್ಣ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಲ್ಯನು ನೇರವಾಗಿ ಯಾವ ಸಹಾಯ ಬೇಕು ಎಂದು ಕೇಳಲು, ದುರ್ಯೋಧನನು ಮಾವ ನೀವು ಕರ್ಣನಿಗೆ ಸಾರಥಿಯಾದರೆ ಅರ್ಜುನನ ಪಾಡೇನು? ನಿಮ್ಮ ಸಹಾಯವಿದ್ದರೆ ಅವನು ದೇವ ದೈತ್ಯರನ್ನು ಲೆಕ್ಕಿಸುವುದಿಲ್ಲ. ನಮ್ಮ ಅಭ್ಯುದಯ ಯಾವುದರಿಂದಾಗುವುದೋ ಅದನ್ನು ನೀವು ಮಾಡಿದರೆ, ಅರ್ಧ ಜೀವದಲ್ಲಿರುವ ಕೌರವ ವಂಶಕ್ಕೆ ಪ್ರಾಣ ಬಂದಂತಾಗುವುದು ಎಂದು ಹೇಳಿದನು.

ಅರ್ಥ:
ಸಾರಥಿ: ರಥವನ್ನು ಓಡಿಸುವವ; ಕೊಂಡಾಡು: ಹೊಗಳು; ಪಾಡು: ಸ್ಥಿತಿ; ಸುರಾಸುರ: ದೇವತೆ ಮತ್ತು ದಾನವರು; ಕೈಕೊಂಬು: ಲೆಕ್ಕಿಸು, ಗಳಿಸು; ಬಳಿಕ: ನಂತರ; ಅಭ್ಯುದಯ: ಏಳಿಗೆ; ಪರಿ: ರೀತಿ; ಮನ್ನಿಸು: ಗೌರವಿಸು; ಅರೆ: ಅರ್ಧ; ಜೀವ: ಪ್ರಾಣ; ವಂಶ: ಕುಲ; ಸಪ್ರಾಣಿಸು:ಬದುಕಿಸು;

ಪದವಿಂಗಡಣೆ:
ಮಾವ +ಸಾರಥಿಯಾಗಿ +ಕರ್ಣನ
ನೀವು +ಕೊಂಡಾಡಿದಡೆ+ ಫಲುಗುಣನ್
ಆವ +ಪಾಡು +ಸುರ+ಅಸುರರ +ಕೈಕೊಂಬನೇ +ಬಳಿಕ
ಆವುದ್+ಎಮಗ್+ಅಭ್ಯುದಯವ್+ಅದ+ ನೀನ್
ಆವ +ಪರಿಯಲಿ +ಮನ್ನಿಸಿದಡ್+ಅರೆ
ಜೀವ +ಕೌರವ +ವಂಶವೇ +ಸಪ್ರಾಣಿಸುವುದೆಂದ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ – ಆವುದೆಮಗಭ್ಯುದಯವದ