ಪದ್ಯ ೧೪: ದ್ರೋಣರು ಭೀಮನಿಗೆ ಯಾವ ಮಾರ್ಗ ಸೂಚಿಸಿದರು?

ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪುವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ (ದ್ರೋಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಾಗದರೆ ಎಲವೋ ಭೀಮ, ಅರ್ಜುನನ ಬಳಿಗೆ ಈಗಾಗಲೇ ಸಾತ್ಯಕಿ ಹೋಗಿದ್ದಾನೆ ಅವನು ನನಗೆ ನಮಸ್ಕರಿಸಿ ದಾರಿ ಪಡೆದ ರೀತಿ ನೀನು ಸಹ ನನಗೆ ನಮಸ್ಕರಿಸು ಆಗ ನಿನಗ ದಾರಿ ಸಿಗುತ್ತದೆ, ಬಿರುಸಿನ ಮಾತು ಒರಟು ನಡೆಗಳಿಂದ ನಿನ್ನ ಕೆಲಸವಾಗದು, ನನ್ನ ಕಾಲಿಗೆ ಶರಣಾಗತನಾಗಿ ಬೀಳು, ವ್ಯೂಹದೊಳಕ್ಕೆ ಹೋಗು, ಇಲ್ಲವೋ ಯುದ್ಧಬೇಕಾದರೆ ಧನುಸ್ಸನ್ನು ಹಿಡಿ ಎಂದು ದ್ರೋಣರು ನುಡಿದರು.

ಅರ್ಥ:
ಹಾದಿ: ಮಾರ್ಗ; ಗಮಿಸು: ನಡೆ, ಚಲಿಸು; ಹೋಗು: ತೆರಳು; ವಂದಿಸು: ನಮಸ್ಕರಿಸು; ಮಾರ್ಗ: ದಾರಿ; ಪಡೆ: ದೊರಕು; ಒಪ್ಪು: ಸರಿಯಾದುದು; ಬಿಉಸು: ವೇಗ; ಬೀಳು: ಎರಗು; ಚರಣ: ಪಾದ; ಕಾದು: ಹೋರಾಡು; ಹಿಡಿ: ಗ್ರಹಿಸು; ಧನು: ಬಿಲ್ಲು; ಅನಿಲಜ: ವಾಯುಪುತ್ರ;

ಪದವಿಂಗಡಣೆ:
ಆದರ್+ಎಲವೋ +ಭೀಮ +ಪಾರ್ಥನ
ಹಾದಿಯಲಿ +ಗಮಿಸುವರೆ+ ಸಾತ್ಯಕಿ
ಹೋದವೊಲು +ನೀನೆಮಗೆ +ವಂದಿಸಿ +ಮಾರ್ಗವನು +ಪಡೆದು
ಹೋದಡ್+ಒಪ್ಪುವುದ್+ಅಲ್ಲದೇ +ಬಿರು
ಸಾದಡ್+ಅಹುದೇ +ಬೀಳು +ಚರಣಕೆ
ಕಾದುವರೆ +ಹಿಡಿ +ಧನುವನ್+ಎಂದನು +ದ್ರೋಣನ್+ಅನಿಲಜನ

ಅಚ್ಚರಿ:
(೧) ಭೀಮ, ಅನಿಲಜ – ಭೀಮನನ್ನು ಕರೆದ ಪರಿ
(೨) ವಂದಿಸು, ಬೀಳು ಚರಣಕೆ – ಸಮಾನಾರ್ಥಕ ಪದ

ಪದ್ಯ ೩೬: ಅರ್ಜುನನು ರಥವನ್ನು ಹೇಗೆ ಏರಿದನು?

ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಮ್ಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚಾ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ರಥದ ಕುದುರೆಗಳ ಖುರಪುಟಗಳಿಗೆ ರತ್ನಗಳನ್ನು ಅರ್ಪಿಸಿ ನಮಸ್ಕರಿಸಿ, ಧ್ವಜದಲ್ಲಿದ್ದ ಹನುಮಂತನಿಗೆ ವಂದಿಸಿ, ದೇವತಾ ಸಮೂಹಕ್ಕೆ ಕೈಮುಗಿದು, ರಥವನ್ನು ಪ್ರದಕ್ಷಿಣೆ ಮಾಡಿ, ಕವಚವನ್ನು ಧರಿಸಿ ಕೈಗೆ ವಜ್ರದ ಖಡೆಯವನ್ನು ಹಾಕಿಕೊಂಡು ರಥವನ್ನೇರಿದನು.

ಅರ್ಥ:
ಖುರ:ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ರತುನ: ಮಣಿ; ಸುರಿ: ಚೆಲ್ಲು; ತೇರು: ಬಂಡಿ; ತುರಗ: ಅಶ್ವ; ವಂದಿಸು: ನಮಸ್ಕರಿಸು; ಪಳಹರ: ಬಾವುಟ; ಹನುಮ: ಆಂಜನೇಯ; ಎರಗು: ನಮಸ್ಕರಿಸು; ಸುರಕುಲ: ದೇವತೆ; ಕೈಮುಗಿ: ನಮಸ್ಕರಿಸು; ವರ: ಶ್ರೇಷ್ಠ; ರಥ: ಬಂಡಿ; ಕವಚ: ಉಕ್ಕಿನ ಅಂಗಿ; ಬರಿ: ಪಕ್ಕ, ಬದಿ; ಬಿಗಿ: ಕಟ್ಟು; ಕೈ: ಹಸ್ತ; ವಜ್ರ: ಗಟ್ಟಿಯಾದ; ಅವಚು: ಅಪ್ಪಿಕೊಳ್ಳು; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ಖುರಕೆ +ರತುನವ +ಸುರಿದು +ತೇರಿನ
ತುರಗವನು +ವಂದಿಸಿದನಾ +ಪಳ
ಹರದ +ಹನುಮಂಗ್+ಎರಗಿದನು +ಸುರಕುಲಕೆ +ಕೈಮುಗಿದು
ವರರಥವ+ ಬಲಗೊಂಡು +ಕವಚವ
ಬರಿಗೆ +ಬಿಗಿದನು +ಕೈಗೆ +ವಜ್ರದ
ತಿರುವೊಡೆಯನ್+ಅವಚಿದನು +ರಥವೇರಿದನು +ಕಲಿಪಾರ್ಥ

ಅಚ್ಚರಿ:
(೧) ವಂದಿಸು, ಎರಗು, ಕೈಮುಗಿ – ಸಾಮ್ಯಾರ್ಥ ಪದಗಳು