ಪದ್ಯ ೬೫: ಕುರುಸೇನೆಯು ಏಕೆ ಚಿಂತೆಗೊಳಗಾದರು?

ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ (ಗದಾ ಪರ್ವ, ೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ಶಲ್ಯನು ಸತ್ತನು, ದೊರೆಯು ಭಯಗ್ರಸ್ತನಾಗಿದ್ದಾನೆ, ವಿರೋಧಿ ಬಲದಲ್ಲಿ ವಿಜಯದ ಕಹಳೆ ಕೇಳಿ ಬರುತ್ತಿದೆ. ಕೃಪ, ಅಶ್ವತ್ಥಾಮರು ಉಳಿದರೋ, ಅಳಿದರೋ, ರಥವನ್ನಿಳಿದು ಶಸ್ತ್ರತ್ಯಾಗ ಮಾಡಿದರೋ ಏನಾಯಿತೋ ಎಂದು ಕುರುಸೇನೆಯು ಚಿಂತೆಗೊಳಗಾದರು.

ಅರ್ಥ:
ದಳಪತಿ: ಸೇನಾಧಿಪತಿ; ಪವಡಿಸು: ನಿದ್ರಿಸು; ಅರಸ: ರಾಜ; ಸುಳಿವು: ಗುರುತು, ಕುರುಹು; ಸಿಲುಕು: ದೊರಕು; ಭಯ: ಹೆದರಿಕೆ; ಬಲೆ: ಜಾಲ; ಮೊಳಗು: ಧ್ವನಿಮಾಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸುಮ್ಮಾನ: ಸಂತೋಷ, ಹಿಗ್ಗು; ರಿಪುಬಲ: ವೈರಿ ಸೈನ್ಯ; ಉಳಿದ: ಮಿಕ್ಕ; ಸೂನು: ಮಗ; ಅಳಿ: ನಾಶ; ಪಾಳೆಯ: ಬೀಡು, ಶಿಬಿರ; ರಥ: ಬಂಡಿ; ಇಳಿ: ಕೆಳಕ್ಕೆ ಬಾ; ಚಿಂತಿಸು: ಯೋಚಿಸು;

ಪದವಿಂಗಡಣೆ:
ದಳಪತಿಯು +ಪವಡಿಸಿದನ್+ಅರಸನ
ಸುಳಿವು +ಸಿಲುಕಿತು +ಭಯದ +ಬಲೆಯಲಿ
ಮೊಳಗುತದೆ +ನಿಸ್ಸಾಳ +ಸುಮ್ಮಾನದಲಿ +ರಿಪುಬಲದ
ಉಳಿದರೋ +ಗುರುಸೂನು +ಕೃಪರೇನ್
ಅಳಿದರೋ +ಪಾಳೆಯದೊಳಗೆ+ ರಥವ್
ಇಳಿದರೋ +ತಾನೇನೆನುತ+ ಚಿಂತಿಸಿತು +ಕುರುಸೇನೆ

ಅಚ್ಚರಿ:
(೧) ಉಳಿದರೋ, ಅಳಿದರೋ, ಇಳಿದರೋ – ಪದಗಳ ಬಳಕೆ

ಪದ್ಯ ೩೩: ಸೈನ್ಯದ ತುಂಬಾ ಏನು ತುಂಬಿದವು?

ತೆರಹ ಕೊಟ್ಟೊಳಹೊಗಿಸಿ ಸದೆದನು
ಬರಸಿಡಿಲು ಜಡಿವಂತೆ ರಿಪುಬಲ
ವೊರಲಿ ಕೆಡೆದುದು ಘಾಯವಡೆದುದು ಬೇಹ ನಾಯಕರು
ದುರುದುರಿಪ ತಲೆಮಿದುಳ ದಂಡೆಯ
ಹರಿಗರುಳ ನೆನವಸೆಯ ಮೂಳೆಯ
ಮುರಿಕುಗಳ ಕಡಿಖಂಡಮಯವಾಯ್ತಖಿಳ ಚತುರಂಗ (ದ್ರೋಣ ಪರ್ವ, ೧೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಶತ್ರು ಸೇನೆಗೆ ಜಾಗಬಿಟ್ಟು ಒಳಕ್ಕೆ ನುಗ್ಗಿದ ಮೇಲೆ ಬರಸಿಡಿಲು ಬಡಿಯುವಂತೆ ಅವರನ್ನು ಬಡೆದು ಹಾಕಿದನು. ಶತ್ರುಸೇನೆಯು ಒರಲಿ ಕೆಳಗೆ ಬಿದ್ದು ಸತ್ತಿತು. ಸೇನಾನಾಯಕರು ಗಾಯಗೊಂಡರು. ಮಿದುಳದಂಡೆ, ಹರಿದ ಕರುಳುಗಳು, ಕೊಬ್ಬಿನ ಜಿಡ್ಡು, ಮೂಳೆಯ ತುಂಡುಗಳು, ಮಾಂಸಖಂಡಗಳು ಚತುರಂಗ ಸೈನ್ಯದ ತುಂಬಾ ತುಂಬಿದವು.

ಅರ್ಥ:
ತೆರಹು: ಎಡೆ, ಜಾಗ, ಸಮಯ; ಕೊಟ್ಟು: ನೀಡು; ಸದೆ: ಕುಟ್ಟು, ಪುಡಿಮಾಡು; ಬರಸಿಡಿಲು: ಆಕಸ್ಮಿಕ; ಜಡಿ: ಗದರಿಸು, ಬೆದರಿಸು; ರಿಪು: ವೈರಿ; ಬಲ: ಸೈನ್ಯ; ಒರಲು: ಅರಚು; ಕೆಡೆ: ಬೀಳು, ಕುಸಿ; ಘಾಯ: ಪೆಟ್ಟು; ಬೇಹು: ಗುಪ್ತಚಾರಿಕೆ; ನಾಯಕ: ಒಡೆಯ; ದುರುದುರಿಪ: ಒಂದೇ ಸಮನಾಗಿ ಹೊರಚಿಮ್ಮುವ; ತಲೆ: ಶಿರ; ಮಿದುಳು: ಮಸ್ತಿಷ್ಕ; ದಂಡೆ: ತಟ, ಕೂಲ, ದಡ; ಹರಿ: ಸೀಳು, ಹಾಳಾಗು; ಕರುಳು: ಪಚನಾಂಗ; ನೆಣವಸೆ: ಹಸಿಯಾದ ಕೊಬ್ಬು; ಮೂಳೆ: ಎಲುಬು; ಮುರಿ: ಸೀಳು; ಕಡಿ: ಸೀಳು; ಖಂಡ: ತುಂಡು, ಚೂರು; ಅಖಿಳ: ಎಲ್ಲಾ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;

ಪದವಿಂಗಡಣೆ:
ತೆರಹ +ಕೊಟ್ಟ್+ಒಳಹೊಗಿಸಿ+ ಸದೆದನು
ಬರಸಿಡಿಲು +ಜಡಿವಂತೆ +ರಿಪುಬಲವ್
ಒರಲಿ +ಕೆಡೆದುದು +ಘಾಯವಡೆದುದು +ಬೇಹ +ನಾಯಕರು
ದುರುದುರಿಪ +ತಲೆಮಿದುಳ +ದಂಡೆಯ
ಹರಿ+ಕರುಳ +ನೆನವಸೆಯ +ಮೂಳೆಯ
ಮುರಿಕುಗಳ +ಕಡಿ+ಖಂಡಮಯವಾಯ್ತ್+ಅಖಿಳ +ಚತುರಂಗ

ಅಚ್ಚರಿ:
(೧) ಉಪಮಾನದ ಪ್ರಯೋಗ – ತೆರಹ ಕೊಟ್ಟೊಳಹೊಗಿಸಿ ಸದೆದನು ಬರಸಿಡಿಲು ಜಡಿವಂತೆ

ಪದ್ಯ ೩೨: ಘಟೋತ್ಕಚನು ಕರ್ಣನಿಗೆ ಏನು ಹೇಳಿದ?

ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ (ದ್ರೋಣ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಎಲೋ ಕರ್ಣ, ನೀಣು ಭಾರೀ ಗಂಡಸು. ನನ್ನನ್ನು ಎದುರಿಸಿ ನಿಂತದ್ದೇ ಸಾಕು, ಮಹಾಪರಾಕ್ರಮಿಗಳಾದ ದೇವತೆಗಳನ್ನೂ ಸೀಳಿಹಾಕಬಲ್ಲೆ. ಮನುಷ್ಯರ ಪಾಡೇನು? ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ, ಯುದ್ಧದಲ್ಲಿ ಸತ್ತರೂ ಕೀರ್ತಿ ಬರುತ್ತದೆ. ವೈರಿಸೈನ್ಯದಲ್ಲಿ ನೀನು ದಿಟ್ಟ ಎಂದು ಇದಿರಾದನು.

ಅರ್ಥ:
ನೆರೆ: ಗುಂಪು; ಗಂಡು: ಗಂಡಸು, ಪರಾಕ್ರಮಿ; ಮಲೆ: ಉದ್ಧಟತನದಿಂದ ಕೂಡಿರು; ಸುರ: ದೇವತೆ; ಸಿತಗ: ಕಾಮುಕ, ಜಾರ; ಸೀಳು: ಚೂರು, ತುಂಡು; ಮಾನವ: ನರ; ಪಾಡು: ರೀತಿ, ಬಗೆ; ಕಲಿ: ಶೂರ; ಮೆಚ್ಚು: ಒಲುಮೆ, ಪ್ರೀತಿ; ಸತ್ತರೆ: ಮರಣ ಹೊಂದಿದರೆ; ಮೊಳೆ: ಚಿಗುರು, ಅಂಕುರಿಸು; ಕೀರ್ತಿ: ಖ್ಯಾತಿ; ರಿಪು: ವೈರಿ; ದಿಟ್ಟ: ಧೈರ್ಯಶಾಲಿ; ಅಸುರ: ರಾಕ್ಷಸ; ಮಾರಾಂತು: ಎದುರಾಗಿ, ಯುದ್ಧಕ್ಕೆ ನಿಂತು;

ಪದವಿಂಗಡಣೆ:
ಎಲವೊ +ನೆರೆ +ಗಂಡಹೆ +ಕಣಾ +ನೀ
ಮಲೆತು +ನಿಂದುದು +ಸಾಲದೇ +ಸುರ
ರೊಳಗೆ +ಸಿತಗರ +ಸೀಳುವೆನು +ಮಾನವರ +ಪಾಡೇನು
ಕಲಿತನಕೆ +ಮೆಚ್ಚಿದೆನು +ಸತ್ತರೆ
ಮೊಳೆಯದಿಹುದೇ +ಕೀರ್ತಿ +ರಿಪುಬಲ
ದೊಳಗೆ +ದಿಟ್ಟನು +ಕರ್ಣ +ನೀನೆನುತ್+ಅಸುರ +ಮಾರಾಂತ

ಅಚ್ಚರಿ:
(೧) ಘಟೋತ್ಕಚನ ಹಿರಿಮೆ – ಸುರರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು

ಪದ್ಯ ೩೨: ಭೀಮನನ್ನು ಕೌರವ ಸೈನ್ಯದವರು ಹೇಗೆ ಹಂಗಿಸಿದರು?

ಕಾದಲೆನ್ನಳವಲ್ಲ ಬಲ ದು
ರ್ಭೇದವಿದು ಶಿವಶಿವಯೆನುತ್ತ ವೃ
ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ
ಕೈದೆಗೆಯೆ ರಿಪುಬಲದ ಸುಭಟರು
ಕಾದಿದನು ಕಲಿ ಭೀಮ ಗೆಲಿದನು
ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ (ದ್ರೋಣ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಈ ವ್ಯೂಹದಲ್ಲಿ ಯುದ್ಧಮಾಡುವುದು ನನಗೆ ಅಸಾಧ್ಯ, ಇದನ್ನು ಭೇದಿಸಲು ಆಗುವುದಿಲ್ಲ, ಎಂದು ಚಿಂತಿಸಿ ಭೀಮನು ದುಃಖಿಸಿ ಹಿಂದಿರುಗಿದನು. ಅವನು ಹಿಂದಿರುಗಲು ಕೌರವ ಯೋಧರು ಮಹಾ ಪರಾಕ್ರಮಿ ಭೀಮನು ಕಾದಿ ಗೆದ್ದು ಹೋದನು ಎಂದು ಕೈತಟ್ಟಿ ಕೂಗಿದರು.

ಅರ್ಥ:
ಕಾದು: ಹೋರಾದು; ಅಳವು: ಶಕ್ತಿ; ಬಲ: ಸೈನ್ಯ; ಭೇದ: ಬಿರುಕು, ಸೀಳು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಮರಳು: ಹಿಂದಿರುಗು; ದುಗುಡ: ದುಃಖ; ತೆತ್ತು: ಕೊಡು, ನೀಡು; ಮುಖ: ಆನನ; ಕೈದು: ಆಯುಧ; ರಿಪುಬಲ: ವೈರಿ ಸೈನ್ಯ; ಸುಭಟ: ಪರಾಕ್ರಮಿ; ಕಲಿ: ಶೂರ; ಗೆಲಿದ: ಜಯಿಸಿದ; ಪೋದು: ಹೋಗು; ಕೂಡ: ಜೊತೆ; ಹೊಯ್ದು: ಹೋರಾಡು; ಹೊಡೆ;

ಪದವಿಂಗಡಣೆ:
ಕಾದಲೆನ್ನ್+ಅಳವಲ್ಲ+ ಬಲ+ ದು
ರ್ಭೇದವಿದು+ ಶಿವಶಿವ+ಎನುತ್ತ +ವೃ
ಕೋದರನು +ಮರಳಿದನು +ದುಗುಡಕೆ +ತೆತ್ತು +ನಿಜಮುಖವ
ಕೈದೆಗೆಯೆ +ರಿಪುಬಲದ+ ಸುಭಟರು
ಕಾದಿದನು+ ಕಲಿ+ ಭೀಮ +ಗೆಲಿದನು
ಪೋದನೆಂದರು +ಕೂಡೆ +ಕೈಗಳ+ ಹೊಯ್ದು +ತಮತಮಗೆ

ಅಚ್ಚರಿ:
(೧) ವೃಕೋದರ, ಭೀಮ – ಹೆಸರನ್ನು ಕರೆದ ಪರಿ
(೨) ಹಂಗಿಸುವ ಪರಿ – ಕಾದಿದನು ಕಲಿ ಭೀಮ ಗೆಲಿದನುಪೋದನೆಂದರು ಕೂಡೆ ಕೈಗಳ ಹೊಯ್ದು

ಪದ್ಯ ೬೨: ಅರ್ಜುನನೇಕೆ ಧನುವನ್ನು ಕೆಳಗಿಟ್ಟನು?

ಕೌತುಕವನಿದ ಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನೆ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ (ದ್ರೋಣ ಪರ್ವ, ೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಭಗದತ್ತನು ಎಸೆದ ಮಹಾಂಕುಶವು ಕೃಷ್ಣನ ಎದೆಯ ಮೇಲೆ ಆಭರಣವಾದ ಈ ವಿಸ್ಮಯಕರ ಸಂಗತಿಯನ್ನು ಕಂಡು ಅರ್ಜುನನು ಏನು, ಶ್ರೀಕೃಷ್ಣನು ಸೂತತನಕ್ಕೆ ಬೇಸರಪಟ್ಟನೆ? ಹಾಗಾದರೆ ಅವನೇ ಕೌರವನೊಡನೆ ಹೋರಾಡಲಿ, ನನಗೆ ಸೂತತನವೇ ಸಾಕು ಎಂದು ಹಿಡಿದಿದ್ದ ಗಾಂಡೀವವನ್ನು ಕೆಳಗಿಟ್ಟು ದುಗುಡವನ್ನು ಹೊತ್ತು ಕುಳಿತನು.

ಅರ್ಥ:
ಕೌತುಕ: ಆಶ್ಚರ್ಯ; ಕಂಡು: ನೋಡು; ಕಾತರ: ಕಳವಳ; ನುಡಿ: ಮಾತು; ಮುರಾಂತಕ: ಕೃಷ್ಣ; ಸೂತ: ರಥವನ್ನು ನಡೆಸುವವನು, ಸಾರ; ಅಲಸು: ಬೇಸರಗೊಳ್ಳು; ಸಾಕು: ನಿಲ್ಲಿಸು; ತತುಕ್ಷಣ: ತಕ್ಷಣ, ಕೂಡಲೆ; ಧನು: ಬಿಲ್ಲು; ಬಿಸುಟು: ಹೊರಹಾಕು; ವಿಧೂತ: ಅಲುಗಾಡುವ; ರಿಪು: ವೈರಿ; ಬಲ: ಸೈನ್ಯ; ಹೊತ್ತು: ಹತ್ತಿಕೊಳ್ಳು; ದುಗುಡ: ದುಃಖ;

ಪದವಿಂಗಡಣೆ:
ಕೌತುಕವನಿದ +ಕಂಡು +ಫಲುಗುಣ
ಕಾತರಿಸಿ+ ನುಡಿದನು +ಮುರಾಂತಕ
ಸೂತತನಕಲಸಿದನೆ +ಕಾದಲಿ+ ಕೌರವನ +ಕೂಡೆ
ಸೂತತನವೇ +ಸಾಕು +ತನಗೆನುತ್
ಆ+ ತತುಕ್ಷಣ +ಧನುವ +ಬಿಸುಟು +ವಿ
ಧೂತ +ರಿಪುಬಲ+ ಪಾರ್ಥನಿದ್ದನು +ಹೊತ್ತ +ದುಗುಡದಲಿ

ಅಚ್ಚರಿ:
(೧) ಕೃಷ್ಣನ ಬಗ್ಗೆ ಬೇಸರಗೊಂಡ ಪರಿ – ಮುರಾಂತಕಸೂತತನಕಲಸಿದನೆ ಕಾದಲಿ ಕೌರವನ ಕೂಡೆ

ಪದ್ಯ ೧೪: ಭೀಷ್ಮನ ಬಾಣದ ಕೈಚಳಕ ಹೇಗಿತ್ತು?

ಆಗ ಹೂಡಿದನಾಗ ಬಾಣವ
ತೂಗಿ ಬರೆಸೆಳೆದೆಚ್ಚನಹಿತರ
ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ
ಬಾಗಿಹುದು ಬಲು ಬಿಲ್ಲು ಕಿವಿವರೆ
ಗಾಗಿ ರಿಪುಬಲ ನಿಮಿಷ ನಿಮಿಷಕೆ
ನೀಗಿಹುದು ನಿಟ್ಟುಸಿರನೆಲೆ ಭೂಪಾಲ ಕೇಳೆಂದ (ಭೀಷ್ಮ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರಣೆಯನ್ನು ನೀಡುತ್ತಾ, ಆಗಲೇ ಬಾಣವನ್ನು ಹೂಡಿ, ಕಿವಿವರೆಗೆ ಹೆದೆಯನ್ನು ಆ ಕ್ಷಣದಲ್ಲೆಳೆದು ಅದೇ ಕಾಲದಲ್ಲೇ ಭೀಷ್ಮನು ಬಾಣವನ್ನು ಬಿಡುತ್ತಿದ್ದನು. ಬಿಲ್ಲು ಯಾವಾಗಲೂ ಕಿವಿವರೆಗೆ ಬಾಗಿಯೇ ಇತ್ತು. ನಿಮಿಷ ನಿಮಿಷಕ್ಕೆ ಶತ್ರು ಸೈನ್ಯವು ನಿಟ್ಟುಸಿರು ಬಿಟ್ಟು ಪ್ರಾಣತ್ಯಾಗ ಮಾದುತ್ತಿತ್ತು. ಭೀಷ್ಮನ ಕೈಯ ವೇಗವನ್ನು ಊಹಿಸಲು ಯಾರಿಗೆ ಸಾಧ್ಯ!

ಅರ್ಥ:
ಹೂಡು: ರಚಿಸು, ನಿರ್ಮಿಸು; ಬಾಣ: ಅಂಬು; ತೂಗು: ಅಲ್ಲಾಡಿಸು; ಬರೆಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಎಚ್ಚು: ಬಾಣ ಪ್ರಯೋಗ ಮಾಡು; ಅಹಿತ: ಶತ್ರು; ತಾಗು: ಮುಟ್ಟು; ಬಲ್ಲವ: ತಿಳಿದವ; ಲುಳಿ: ರಭಸ, ವೇಗ; ಬಾಗು: ಬಗ್ಗು, ಮಣಿ; ಬಲು: ಬಹಳ; ಬಿಲ್ಲು: ಚಾಪ; ಕಿವಿ: ಕರ್ಣ; ರಿಪು: ವೈರಿ; ಬಲ: ಸೈನ್ಯ; ನಿಮಿಷ: ಕ್ಷಣ, ಕಾಲದ ಪ್ರಮಾಣ; ನೀಗು: ನಿವಾರಿಸಿಕೊಳ್ಳು; ನಿಟ್ಟುಸಿರು: ಬಿಸುಸುಯ್; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಗ +ಹೂಡಿದನಾಗ +ಬಾಣವ
ತೂಗಿ +ಬರೆಸೆಳೆದ್+ಎಚ್ಚನ್+ಅಹಿತರನ್
ಆಗ+ ತಾಗಿದವ್+ಅಂಬು +ಬಲ್ಲವರಾರು +ಕೈಲುಳಿಯ
ಬಾಗಿಹುದು +ಬಲು +ಬಿಲ್ಲು +ಕಿವಿವರೆಗ್
ಆಗಿ+ ರಿಪುಬಲ +ನಿಮಿಷ +ನಿಮಿಷಕೆ
ನೀಗಿಹುದು +ನಿಟ್ಟುಸಿರನ್+ಎಲೆ+ ಭೂಪಾಲ +ಕೇಳೆಂದ

ಅಚ್ಚರಿ:
(೧) ನಿ ಕಾರದ ಸಾಲು ಪದ – ನಿಮಿಷ ನಿಮಿಷಕೆ ನೀಗಿಹುದು ನಿಟ್ಟುಸಿರನೆಲೆ
(೨) ಅಹಿತ, ರಿಪು – ಸಮಾನಾರ್ಥಕ ಪದ

ಪದ್ಯ ೮೩: ಆನೆಗಳು ಹೇಗೆ ಯುದ್ಧ ಮಾಡಿದವು?

ಅರರೆ ಮೃತ್ಯುವಿನರಕೆಗೌಷದ
ವರೆವವೊಲು ರಿಪುಬಲವನಸಿಯಿ
ಟ್ಟರೆದ ವಿಭಬರಿಕೈಯ ಭಾರಿಯ ಲಾಳವುಂಡಿಗೆಯ
ಸರಿಸಗುಂಡಿನೊಳೊಂದನೊಂದಿ
ಟ್ಟೊರಸಿದವು ಕೊಡಹಿದವು ಸೀಳಿದು
ಹೊರಳಿಚಿದಎರಗಿದವು ನಾನಾವಿಧದ ಕೊಲೆಗಳಲಿ (ಭೀಷ್ಮ ಪರ್ವ, ೪ ಸಂಧಿ, ೮೩ ಪದ್ಯ)

ತಾತ್ಪರ್ಯ:
ಸಾವು ಸಾಕಾಗಲಿಲ್ಲವೆಂದು ಮೃತ್ಯುದೇವತೆ ಬಗೆದರೆ ಅದಕ್ಕೆ ಔಷಧ ಪರಿಹಾರವನ್ನು ಕೊಡುವಂತೆ, ಆನೆಗಳು ಉದ್ದವಾದ ಲಾಳವಿಂಡಿಗೆಗಳಿಂದಲೂ, ಗುಂಡಿನಿಂದಲೂ ಒಂದನ್ನೊಂದು ಬದಿದು ಕೊಂದು ಕೊಡವಿದರು, ಸೀಳಿ ಕೆಡಹಿದವು.

ಅರ್ಥ:
ಅರರೆ: ಆಶ್ಚರ್ಯದ ನುಡಿ; ಮೃತ್ಯು: ಸಾವು; ಅರಕೆ:ನ್ಯೂನತೆ; ಔಷದ: ಮದ್ದು; ರಿಪು: ವೈರಿ; ಬಲ: ಸೈನ್ಯ; ಅಸಿ: ಕತ್ತಿ; ಅರೆ: ನುಣ್ಣಗೆ ಮಾಡು, ತೇಯು; ಇಭ: ಆನೆ; ಭಾರಿ: ದೊಡ್ಡ; ಲಾಳ: ಎತ್ತುಗಳ ಪಾದಗಳಿಗೆ ರಕ್ಷಣೆಗಾಗಿ ಹಾಕುವ ಕಬ್ಬಿಣದ ಸಾಧನ; ಉಂಡಿಗೆ: ಮೊಹರು, ಮುದ್ರೆ; ಸರಿಸ:ಸಾಟಿ; ಗುಂಡು: ಗುಂಡುಕಲ್ಲು; ಒರಸು: ನಾಶಮಾದು; ಕೊಡಹು: ಜಾಡಿಸು; ಸೀಳು: ಚೂರು; ಹೊರಳು:ತಿರುವು, ಬಾಗು; ಎರಗು: ಬಾಗು; ವಿಧ: ರೀತಿ; ಕೊಲೆ: ಸಾಯಿಸು;

ಪದವಿಂಗಡಣೆ:
ಅರರೆ +ಮೃತ್ಯುವಿನರಕೆಗ್+ಔಷದವ್
ಅರೆವವೊಲು +ರಿಪುಬಲವನ್+ಅಸಿ+
ಇಟ್ಟರೆದವ್ +ಇಭ+ಬರಿಕೈಯ+ ಭಾರಿಯ +ಲಾಳವುಂಡಿಗೆಯ
ಸರಿಸಗುಂಡಿನೊಳ್+ಒಂದನೊಂದ್
ಇಟ್ಟೊರಸಿದವು +ಕೊಡಹಿದವು +ಸೀಳಿದು
ಹೊರಳಿಚಿದವ್+ಎರಗಿದವು +ನಾನಾವಿಧದ +ಕೊಲೆಗಳಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೃತ್ಯುವಿನರಕೆಗೌಷದವರೆವವೊಲು ರಿಪುಬಲವನಸಿಯಿ
ಟ್ಟರೆದ ವಿಭಬರಿಕೈಯ ಭಾರಿಯ ಲಾಳವುಂಡಿಗೆಯ

ಪದ್ಯ ೨೭: ಕೃಷ್ಣನು ಅರ್ಜುನನನ್ನು ಹೇಗೆ ಉತ್ತೇಜಿಸಿದನು -೨?

ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ (ಭೀಷ್ಮ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೆ ಧನಂಜಯ, ಶತ್ರುಸೈನ್ಯವು ಹೆಗ್ಗಾಡಿನಂತಿದೆ, ಸೈನ್ಯ ಪರ್ವತವೆದುರಿಗಿದೆ, ನೀನು ಇಂದ್ರಪುತ್ರ, ವಜ್ರಾಯುಧದಿಂದ ಪರ್ವತಗಳನ್ನು ಖಂಡಿಸುವ ಶಕ್ತಿಯಿದೆ, ಎಲೆ ವಾಯುಪುತ್ರನ ತಮ್ಮನೇ, ನಿನ್ನೆದುರಿನಲ್ಲಿ ವೈರಸೈನ್ಯವೆಂಬ ಪ್ರಳಯ ಮೇಘವಿದೆ, ನಿನ್ನ ಭುಜಬಲವನ್ನು ತೋರಿಸು, ಎಂದು ಶ್ರೀಕೃಷ್ಣನು ಅರ್ಜುನನನ್ನು ಉತ್ತೇಜಿಸಿದನು.

ಅರ್ಥ:
ಹಗೆ: ವೈರತ್ವ; ಹೆಚ್ಚು: ಅಧಿಕ; ಹಳುವ: ಕಾಡು; ವಜ್ರ: ಗಟ್ಟಿಯಾದ; ಸುತ: ಮಗ; ವಜ್ರಿ: ಇಂದ್ರ; ಅಳವಿ: ಶಕ್ತಿ, ಯುದ್ಧ; ತರುಬು: ತಡೆ, ನಿಲ್ಲಿಸು; ಸೈನ್ಯ: ಸೇನೆ; ಗಿರಿ: ಬೆಟ್ಟ; ನಿಕರ: ಗುಂಪು; ಸಮೀರ: ವಾಯು; ಅನುಜ: ತಮ್ಮ; ರಿಪು:ವೈರಿ ಬಲ: ಶಕ್ತಿ, ಸೈನ್ಯ; ವಿಲಯ: ನಾಶ, ಪ್ರಳಯ; ಮೇಘ: ಮೋಡ; ನಿಕಾಯ: ಗುಂಪು; ಭುಜಬಲ: ಬಾಹುಬಲ; ತೋರು: ವೀಕ್ಷಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಎಲೆ+ ಧನಂಜಯ +ಹಗೆಯ +ಹೆಚ್ಚಿದ
ಹಳುವವಿದೆಲಾ +ವಜ್ರಿ+ಸುತ +ನಿನ್ನ್
ಅಳವಿಯಲಿ +ತರುಬಿದೆ+ ಸುಯೋಧನ+ಸೈನ್ಯ +ಗಿರಿ+ನಿಕರ
ಎಲೆ+ ಸಮೀರಜನ್+ಅನುಜ +ರಿಪು+ಬಲ
ವಿಲಯ +ಮೇಘ +ನಿಕಾಯವಿದೆ+ ಭುಜ
ಬಲವ +ತೋರೈ +ತಂದೆ +ನೋಡುವೆನೆಂದನ್+ಅಸುರಾರಿ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವಜ್ರಿಸುತ, ಸಮೀರಜನನುಜ
(೨) ಉಪಮಾನಗಳು – ಹಗೆಯ ಹೆಚ್ಚಿದ ಹಳುವ, ಸುಯೋದನ ಸೈನ್ಯ ಗಿರಿನಿಕರ, ರಿಪುಬಲ ವಿಲಯ ಮೇಘ ನಿಕಾಯ;

ಪದ್ಯ ೨೩: ಧರ್ಮಜನು ಏನೆಂದು ಚಿಂತಿಸಿದನು?

ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ವೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ (ಭೀಷ್ಮ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎರಡು ಸೈನ್ಯಗಳೂ ಯುದ್ಧಸನ್ನದ್ಧವಾಗಿ ಸನ್ನೆಗಾಗಿ ಕಾಯುತ್ತಿರಲು, ಧರ್ಮಜನು ಶತ್ರು ಸೈನ್ಯವನ್ನು ನೋಡಿ ತಲೆದೂಗಿದನು. ಇನ್ನು ಮಹಾಯುದ್ಧವು ಆರಂಭವಾಗುತ್ತದೆ, ಅದಕ್ಕೆ ಮೊದಲು ಭೀಷ್ಮನೇ ಮೊದಲಾದವರ ಮನಸ್ಸುಗಳನ್ನು ನಾವು ಭೇದೋಪಾಯದಿಂದ ಒಲಿಸಿಕೊಳ್ಳಬೇಕು ಎಂದು ಚಿಂತಿಸಿದನು.

ಅರ್ಥ:
ತಾಗು: ಮುಟ್ಟು; ಅನುವು: ಆಸ್ಪದ; ಕೈದು: ಆಯುಧ; ಬಲ: ಸೈನ್ಯ; ಕೈಲಾಗ: ಸನ್ನೆ; ಈಕ್ಷಿಸು: ನೋಡು; ರಿಪು: ವೈರಿ; ಸಾಗರ: ಸಮುದ್ರ; ಸೌರಂಭ: ಸಂಭ್ರಮ, ಸಡಗರ; ಮಿಗೆ: ಮತ್ತು, ಅಧಿಕವಾಗಿ; ಶಿರ: ತಲೆ; ಮಹಾಹವ: ದೊಡ್ಡ ಯುದ್ಧ; ಮುನ್ನ: ಮುಂಚೆ; ಭೇದ: ಮುರಿ, ಬಿರುಕು; ಮನ: ಮನಸ್ಸು; ಒಲಿಸು: ಸಮ್ಮತಿಸು, ಬಯಸು;

ಪದವಿಂಗಡಣೆ:
ತಾಗಲ್+ಅನು+ಕೈದುಭಯ+ಬಲ +ಕೈ
ಲಾಗನ್+ಈಕ್ಷಿಸುತಿರಲು +ರಿಪುಬಲ
ಸಾಗರದ+ ಸೌರಂಭವನು+ ಮಿಗೆ+ ನೋಡಿ +ಧರ್ಮಜನು
ತೂಗಿದನು+ ಶಿರವನು+ ಮಹಾಹವ
ವೀಗಲಾಗದ+ ಮುನ್ನ +ಭೇದದ
ಲಾಗಿನಲಿ +ಭೀಷ್ಮಾದಿಗಳ +ಮನವೊಲಿಸ+ಬೇಕೆಂದ

ಅಚ್ಚರಿ:
(೧) ಕೈದುಭಯಬಲ, ರಿಪುಬಲ – ಬಲ ಪದದ ಬಳಕೆ
(೨) ಸೈನ್ಯವನ್ನು ವಿವರಿಸುವ ಪರಿ – ರಿಪುಬಲ ಸಾಗರದ ಸೌರಂಭವನು

ಪದ್ಯ ೨೭: ಭೀಷ್ಮರು ಯಾವ ನಿರ್ಧಾರಕ್ಕೆ ಬಂದರು?

ಆದಡೇನಿದಿರಾವ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮ ಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ (ಭೀಷ್ಮ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಷ್ಮನು ಯೋಚಿಸುತ್ತಾ, ಸ್ಥಿತಿಯು ಹೀಗಿರಲು ನಾನೇನು ಮಾಡಲಿ, ಎದುರಿಗೆ ಬಂದ ಶತ್ರುಸೈನ್ಯವನ್ನು ಕೊಂದು, ಮಕ್ಕಳನ್ನು ಸಂರಕ್ಷಿಸಿ, ಯುದ್ಧದಲ್ಲಿ ಈ ದೇಹವನ್ನು ಬಿಡುತ್ತೇನೆ, ಆದುದಾಗಲಿ ನಂತರ ಮಾಡುವ ಭಿನ್ನಾಭಿಪ್ರಾಯಗಳು ಬೇರಿಲ್ಲವೆಂದು ತಿಳಿದು ತನ್ನ ಮನಸ್ಸಿನ ಸಂವಾದವನ್ನು ನಿಲ್ಲಿಸಿ ಮಲಗಿಕೊಂಡನು.

ಅರ್ಥ:
ಇದಿರು: ಎದುರು; ರಿಪುಬಲ: ವೈರಿಸೈನ್ಯ; ಸಂಹರಿಸು: ನಾಶಮಾಡು; ಮಕ್ಕಳು: ಸುತರು; ಕಾದು: ಹೋರಾಟ, ಯುದ್ಧ; ಬಿಸುಡು: ಹೊರಹಾಕು; ಸಂಗ್ರಾಮ: ಯುದ್ಧ; ಭೂಮಿ: ನೆಲ; ಬಳಿಕ: ನಂತರ; ಭೇದ: ಬಿರುಕು, ಛಿದ್ರ; ಬೇರೆ: ಅನ್ಯ; ಹೃತ್: ಹೃದಯ, ತನ್ನಜೊತೆ; ಸಂವಾದ: ಮಾತುಕತೆ; ಬೀಳ್ಕೊಡು: ತೆರಳು; ಪವಡಿಸು: ಮಲಗು; ಒಡಲು: ದೇಹ;

ಪದವಿಂಗಡಣೆ:
ಆದಡೇನ್+ಇದಿರಾವ +ರಿಪುಬಲವ್
ಆದುದನು +ಸಂಹರಿಸಿ+ ಮಕ್ಕಳ
ಕಾದು +ಬಿಸುಡುವೆನ್+ಒಡಲನ್+ಆ+ ಸಂಗ್ರಾಮ +ಭೂಮಿಯಲಿ
ಆದುದಾಗಲಿ +ಬಳಿಕ+ ಮಾಡುವ
ಭೇದ +ಬೇರಿಲ್ಲೆನುತ +ಹೃತ್ಸಂ
ವಾದವನು +ಬೀಳ್ಕೊಟ್ಟು +ಗಂಗಾಸೂನು +ಪವಡಿಸಿದ

ಅಚ್ಚರಿ:
(೧) ಭೀಷ್ಮರ ನಿರ್ಣಯ – ಮಕ್ಕಳ ಕಾದು ಬಿಸುಡುವೆನೊಡಲನಾ ಸಂಗ್ರಾಮ ಭೂಮಿಯಲಿ