ಪದ್ಯ ೩೨: ಧರ್ಮಜನು ಯುದ್ಧವು ಯಾರಿಗಿರಲಿ ಎಂದನು?

ರಾಯದಳದಲಿ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ (ಗದಾ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನ ಸುತ್ತಲಿದ್ದ ಚತುರಂಗ ಸೈನ್ಯದ ಸಾವು, ವೀರರನ್ನು ಹೆದರಿಸಿತು. ಕೃಪ, ಭೋಜ, ಅಶ್ವತ್ಥಾಮರು ದೊಡ್ಡ ದೊಡ್ಡ ಸೇನಾಧಿಪತಿಗಳಿಗಿದಿರಾಗಿ ನಿಂತರು. ಈ ಯುದ್ಧ ನನಗಿರಲಿ ಎಂದು ಧರ್ಮಜನು ಶತ್ರು ಸೇನೆಯನ್ನು ಹೊಗಲು, ಕಿವಿವರೆಗೆ ಬಾಣವನ್ನು ಸೆಳೆದಿದ್ದ ಅರ್ಜುನನು ಇದನ್ನು ಕಂಡನು.

ಅರ್ಥ:
ರಾಯ: ರಾಜ; ದಳ: ಸೈನ್ಯ; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬೀಯ: ವ್ಯಯ, ಹಾಳು; ಬೆದರಿಸು: ಹೆದರಿಸು; ಅದಟ: ಶೂರ, ಪರಾಕ್ರಮಿ; ಬಲು: ಬಹಳ; ನಾಯಕ: ಒಡೆಯ; ಇದಿರು: ಎದುರು; ಒಡ್ಡು: ರಾಶಿ, ಸಮೂಹ; ಸುತ: ಮಗ; ರಣ: ಯುದ್ಧ; ಹೊಕ್ಕು: ಸೇರು; ಬಳಿಕ: ನಂತರ; ಆಯತ: ವಿಶಾಲವಾದ; ಅಸ್ತ್ರ: ಶಸ್ತ್ರ; ಕಂಡು: ನೋಡು; ಅದ್ಭುತ: ಆಶ್ಚರ್ಯ; ಕರ್ಣ: ಕಿವಿ;

ಪದವಿಂಗಡಣೆ:
ರಾಯ+ದಳದಲಿ +ಚಾತುರಂಗದ
ಬೀಯ +ಬೆದರಿಸಿತ್+ಅದಟರನು +ಬಲು
ನಾಯಕರಿಗ್+ಇದಿರೊಡ್ಡಿದರು +ಕೃಪ +ಭೋಜ +ಗುರು+ಸುತರು
ಆಯಿತೀ +ರಣವೆನುತ+ ಪಾಂಡವ
ರಾಯ +ಹೊಕ್ಕನು +ಬಳಿಕಲಾ +ಕ
ರ್ಣಾಯತ+ಅಸ್ತ್ರನು+ ಕಂಡನ್+ಅರ್ಜುನನಾ +ಮಹಾದ್ಭುತವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀಯ ಬೆದರಿಸಿತದಟರನು ಬಲುನಾಯಕರಿಗಿದಿರೊಡ್ಡಿದರು

ಪದ್ಯ ೨೧: ಶಲ್ಯನು ಕೌರವನಿಗೆ ಏನು ಹೇಳಿದ?

ದಳವ ತೆಗೆತೆಗೆ ತಾನಿರಲು ಕುರು
ಬಲಕೆ ಬೀಯವೆ ಕೌರವೇಂದ್ರನ
ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳು
ನಿಲಲಿ ಶಕುನಿಯ ತುರುಗದಳ ಹಿ
ನ್ನೆಲೆಗೆ ಹೋಗಲಿ ರಾಯದಳವೆ
ಮ್ಮಳವ ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ (ಶಲ್ಯ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಶಲ್ಯನು ಕೌರವನಿಗೆ, ನಾನಿರಲಾಗಿ ಕೌರವಸಿನ್ಯವು ನಾಶವಾಗುವುದೆಂದರೇನು? ಸೈನ್ಯವನ್ನು ಹೊರತನ್ನಿ, ಕೃಪ ಅಶ್ವತ್ಥಾಮರು ನಿನ್ನ ಬೆಂಬಲಕ್ಕೆ ಇರಲಿ. ಶಕುನಿಯ ಕುದುರೆಯದಳವು ಹಿಂದಕ್ಕೆ ಸರಿಯಲಿ. ಸೈನ್ಯವೆಲ್ಲವೂ ನನ್ನ ಸಾಮರ್ಥ್ಯವನ್ನು ನೋಡುತ್ತಿರಲಿ ಎಂದು ಹೇಳಿದನು.

ಅರ್ಥ:
ದಳ: ಸೈನ್ಯ; ತೆಗೆ: ಹೊರತರು; ಬಲ: ಸೈನ್ಯ; ಬೀಯ: ವ್ಯಯ, ನಷ್ಟ; ಕೆಲಬಲ: ಅಕ್ಕಪಕ್ಕ, ಎಡಬಲ; ಸುಯಿಧಾನ: ರಕ್ಷಣೆ; ಸುತ: ಮಗ; ಆದಿ: ಮುಂತಾದ; ತುರಗ: ಅಶ್ವ; ಹಿನ್ನೆಲೆ: ಹಿಂಬದಿ, ಹಿಂಭಾಗ; ರಾಯ: ರಾಜ; ಅಳವು: ಶಕ್ತಿ; ನೋಡು: ವೀಕ್ಷಿಸು; ಪತಿ: ಒಡೆಯ;

ಪದವಿಂಗಡಣೆ:
ದಳವ +ತೆಗೆತೆಗೆ +ತಾನಿರಲು +ಕುರು
ಬಲಕೆ +ಬೀಯವೆ +ಕೌರವೇಂದ್ರನ
ಕೆಲಬಲದ +ಸುಯಿಧಾನದಲಿ +ಕೃಪಗುರುಸುತಾದಿಗಳು
ನಿಲಲಿ +ಶಕುನಿಯ +ತುರುಗದಳ +ಹಿ
ನ್ನೆಲೆಗೆ+ ಹೋಗಲಿ+ ರಾಯದಳವ್
ಎಮ್ಮಳವ +ನೋಡುತ್ತಿರಲಿಯೆಂದನು +ಶಲ್ಯ +ಕುರುಪತಿಗೆ

ಅಚ್ಚರಿ:
(೧) ದಳ, ರಾಯದಳ, ತುರಗದಳ – ದಳ ಪದದ ಪ್ರಯೋಗ
(೨) ಕೌರವೇಂದ್ರ, ಕುರುಪತಿ, ರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೧೧: ಸೈನ್ಯವು ಹೇಗೆ ಯುದ್ಧಕ್ಕೆ ಬಂತು?

ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ
ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ (ಶಲ್ಯ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅವರ ಸೈನ್ಯವು ಹೋರಾಡಲು ಮುಂದೆ ಬಂತು. ಸೈನ್ಯದ ಮೂಂದೆ ವಂದಿಮಾಗಹರು, ಅವರನ್ನು ಕಾಪಾಡಲು ಹಿಮ್ದೆ ಬಿಲ್ಲಾಳುಗಳು, ಅವರ ಹಿಂದೆ ಸಬಳಗಳನ್ನು ಹಿಡಿದವರು, ಅವರ ಹಿಂದೆ ರಾವುತರು, ಅವರ ಹಿಂದೆ ಆನೆಗಳು ಮಣಿರಥಗಳನ್ನೇರಿದ ರಥಿಕರು ಗುಂಪಾಗಿ ಬಂದರು.

ಅರ್ಥ:
ಮೋಹರ: ಯುದ್ಧ; ಬಲ: ಶಕ್ತಿ; ಔಘ: ಗುಂಪು, ಸಮೂಹ; ಮುಂದೆ: ಎದುರು; ಪಾಠಕ: ಭಟ್ಟಂಗಿ, ಹೊಗಳುಭಟ್ಟ; ಕಾಹು: ಸಂರಕ್ಷಣೆ; ಬಿಲ್ಲಾಳ: ಬಿಲ್ಲುಗಾರ; ಸುಯ್ದಾನ: ರಕ್ಷಣೆ, ಕಾಪು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಹಿಂದೆ: ಹಿಂಭಾಗ; ತುರಗ: ಅಶ್ವ; ಸಮೂಹ: ಗುಂಪು; ಗಜಘಟೆ: ಆನೆಗಳ ಗುಂಪು; ಗಜ: ಆನೆ; ಬಳಿ: ಹತ್ತಿರ; ಸಂದಣೆ: ಗುಂಪು; ರಾಯ: ರಾಜ; ದಳ: ಸೈನ್ಯ; ಮಣಿರಥ: ರತ್ನದಿಂದ ಕೂಡಿದ ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ಬಂದುದ್+ಆ+ ಮೋಹರ +ಬಲೌಘದ
ಮುಂದೆ +ಪಾಠಕರ್+ಅವರ+ ಕಾಹಿಗೆ
ಹಿಂದೆ +ಬಿಲ್ಲಾಳ್+ಅವರ+ ಸುಯ್ದಾನದಲಿ +ಸಬಳಿಗರು
ಹಿಂದೆ +ತುರಗ +ಸಮೂಹವ್+ಅಲ್ಲಿಂ
ಹಿಂದೆ+ ಗಜಘಟೆ+ ಗಜದ +ಬಳಿಯಲಿ
ಸಂದಣಿಸಿದುದು +ರಾಯದಳ+ ಮಣಿರಥ +ನಿಕಾಯದಲಿ

ಅಚ್ಚರಿ:
(೧) ಔಘ, ನಿಕಾಯ, ಸಮೂಹ, ಘಟೆ, ಸಂದಣೆ – ಸಮಾನಾರ್ಥಕ ಪದ
(೨) ಪಾಠಕ, ಬಿಲ್ಲಾಳು, ಸಬಳಿಗ, ತುರಗ ಸಮೂಹ, ಗಜಘಟೆ, ರಾಯದಳ – ಸೈನ್ಯದಲ್ಲಿದ್ದ ಗುಂಪುಗಳು
(೩) ಹಿಂದೆ, ಮುಂದೆ – ವಿರುದ್ಧ ಪದ

ಪದ್ಯ ೬೨: ಕೌರವರ ಪರಾಕ್ರಮ ಹೇಗೆ ಮಾಯವಾಯಿತು?

ದಿಟ್ಟತನ ಪೊಳ್ಳಾಯ್ತು ಶೌರ್ಯದ
ಘಟ್ಟಿ ಕರಗಿತು ಸುಭಟಧರ್ಮದ
ಬಟ್ಟೆಯನು ಹೂಳಿದರು ಹಂಗಿಗರಾದರಿಹಪರಕೆ
ಬೆಟ್ಟವಾಯಿತು ಭಂಗ ಭರದಲಿ
ಬಿಟ್ಟುಹೋಯಿತು ರಾಯದಳ ಜಗ
ಜಟ್ಟಿಗಳು ಭಗದತ್ತ ಸೈಂಧವ ಗುರುಸುತಾದಿಗಳ (ಭೀಷ್ಮ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಧೈರ್ಯ ಪೊಳ್ಳಾಯಿತು, ಶೌರ್ಯದ ಗಟ್ಟಿ ಕರಗಿತು. ವೀರಯೋಧರ ಧರ್ಮವನ್ನು ತ್ಯಜಿಸಿದರು. ಇಹದಲ್ಲಿ ತಮ್ಮ ಒಡೆಯನಿಗೂ, ಪರದಲ್ಲಿ ಸದ್ಗತಿಗೂ ಹಂಗಿಗರಾದರು. ತೇಜೋಭಂಗವು ಬೆಟ್ಟದಂತೆ ಬೆಳೆಯಿತು. ಕೌರವ ಸೈನ್ಯದಲ್ಲಿ ಜಗಜಟ್ಟಿಗಳೆಂದು ಮೆರೆಯುತ್ತಿದ್ದ ಅಶ್ವತ್ಥಾಮ, ಭಗದತ್ತ, ಸೈಂಧವರು ಪಲಾಯನ ಮಾಡಿದರು.

ಅರ್ಥ:
ದಿಟ್ಟ: ಧೈರ್ಯ; ಪೊಳ್ಳು: ತಿರುಳಿಲ್ಲದುದು, ಟೊಳ್ಳು; ಶೌರ್ಯ: ಪರಾಕ್ರಮ; ಘಟ್ಟಿ: ಹೆಪ್ಪುಗಟ್ಟಿದುದು; ಕರಗು: ಕಡಿಮೆಯಾಗು; ಸುಭಟ: ಪರಾಕ್ರಮಿ; ಧರ್ಮ: ಧಾರಣೆ ಮಾಡಿದುದು; ಬಟ್ಟೆ: ವಸ್ತ್ರ; ಹೂಳು: ಮುಚ್ಚು; ಹಂಗು: ದಾಕ್ಷಿಣ್ಯ, ಆಭಾರ; ಇಹಪರ: ಈ ಲೋಕ ಮತ್ತು ಪರಲೋಕ; ಬೆಟ್ಟ: ಗಿರಿ; ಭಂಗ: ಮುರಿಯುವಿಕೆ; ಭರ: ವೇಗ; ಬಿಟ್ಟು: ಬಿಡು, ತ್ಯಜಿಸು; ರಾಯ: ರಾಜ; ದಳ: ಸೈನಿಕ; ಜಗಜಟ್ಟಿ: ಪರಾಕ್ರಮಿ; ಸುತ: ಮಕ್ಕಳು;

ಪದವಿಂಗಡಣೆ:
ದಿಟ್ಟತನ +ಪೊಳ್ಳಾಯ್ತು +ಶೌರ್ಯದ
ಘಟ್ಟಿ +ಕರಗಿತು +ಸುಭಟ+ಧರ್ಮದ
ಬಟ್ಟೆಯನು +ಹೂಳಿದರು+ ಹಂಗಿಗರ್+ಆದರ್+ಇಹಪರಕೆ
ಬೆಟ್ಟವಾಯಿತು +ಭಂಗ +ಭರದಲಿ
ಬಿಟ್ಟುಹೋಯಿತು+ ರಾಯದಳ+ ಜಗ
ಜಟ್ಟಿಗಳು +ಭಗದತ್ತ+ ಸೈಂಧವ +ಗುರುಸುತಾದಿಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಸುಭಟಧರ್ಮದ ಬಟ್ಟೆಯನು ಹೂಳಿದರು
(೨) ಬ ಕಾರದ ಸಾಲು ಪದ – ಬೆಟ್ಟವಾಯಿತು ಭಂಗ ಭರದಲಿ ಬಿಟ್ಟುಹೋಯಿತು

ಪದ್ಯ ೪೫: ಭೀಮನು ಕೌರವಸೇನೆಯನ್ನು ಹೇಗೆ ಧ್ವಂಸ ಮಾಡುತ್ತಿದ್ದನು?

ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ (ಕರ್ಣ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ಭೀಮಾರ್ಜುನರ ಮೇಲೆ ಹೋರಾಡಲು ಹಂಗಿಸುತ್ತಾ ಹೇಳಲು, ಇವನ ಮಾತನ್ನು ಕೇಳಿದ ಕರ್ಣನು ಕಿಡಿಕಿಡಿಯಾಗಿ ಕೋಪಗೊಂಡು ಹಾಗಾದರೆ ಭೀಮಾರ್ಜುನರನ್ನು ತೋರಿಸು ಎಂದು ಧನುಷ್ಟಂಕಾರವನ್ನು ಮಾಡಿ ಗರ್ಜಿಸಿದನು. ಇತಾ ಭೀಮನು ಕಾಡಾನೆಯು ಬಾಳೆಯವನದಲ್ಲಿ ನುಗ್ಗಿದಂತೆ ವನಚರರು ಕಾಡಿನಲ್ಲಿ ಮೃಗಗಳನ್ನು ಬೇಟೆಯಾಡಿದಂತೆ ಕೌರವ ಸೇನೆಯ ಮೇಲೆ ಸ್ವೇಚ್ಛೆಯಿಂದ ಯುದ್ಧ ಮಾಡುತ್ತಿದ್ದರು.

ಅರ್ಥ:
ಕಿಡಿಕಿಡಿವೋಗು: ಅತ್ಯಂತ ಕೋಪಗೊಳ್ಳು; ತೋರು: ಕಾಣಿಸು, ಗೋಚರವಾಗು; ಧನು: ಧನಸ್ಸು, ಬಿಲ್ಲು; ಮಿಡಿ: ಬಿಲ್ಲಿನ ಹೆದೆಯನ್ನು ಮೀಟು; ಅಬ್ಬರಿಸು: ಗರ್ಜಿಸು; ರಾಯ: ರಾಜ; ದಳ: ಸೈನ್ಯ; ಅನಿಲಜ: ವಾಯು ಪುತ್ರ (ಭೀಮ); ಕಾಲಾಟ: ಕುಣಿತ; ಕದಳೀ: ಬಾಳೆ; ವನ: ಕಾಡು; ಆನೆ: ಗಜ; ಮೃಗ: ಪ್ರಾಣಿಗಳ ಗುಂಪು; ಆಳಿ: ಸಾಲು; ವನಚರ: ಕಾಡಿನ ಪ್ರಾಣಿಗಳು; ದೆಖ್ಖಾಳ:ಗಲಭೆ; ಅಬ್ಬರ: ಗರ್ಜನೆ; ಕಾಣಲು: ತೋರಲು;

ಪದವಿಂಗಡಣೆ:
ಎನಲು +ಕಿಡಿಕಿಡಿವೋಗಿ +ಭೀಮಾ
ರ್ಜುನರ +ತೋರಾದರೆ+ ಎನುತ+ ನಿಜ
ಧನುವ +ಮಿಡಿದಬ್ಬರಿಸಲ್+ಇತ್ತಲು +ರಾಯದಳದೊಳಗೆ
ಅನಿಲಜನ +ಕಾಲಾಟ +ಕದಳೀ
ವನದ +ಕಾಡಾನೆಯ +ಮೃಗಾಳಿಯ
ವನಚರರ+ ದೆಖ್ಖಾಳದ್+ಅಬ್ಬರ +ಕಾಣಲಾಯ್ತೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅನಿಲಜನ ಕಾಲಾಟ ಕದಳೀವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ

ಪದ್ಯ ೨೨: ಕರ್ಣನ ವೇಗವನ್ನು ಯಾವುದು ನಿಲ್ಲಿಸಿದವು?

ರಾಯದಳದೊಳು ಮಡಿವ ಕರಿ ವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ (ಕರ್ಣ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧರ್ಮರಾಯನ ಸೈನ್ಯದಲ್ಲಿ ಸತ್ತ ಆನೆ, ಕುದುರೆಗಳಿಗೆ ಕಡೆಯಿರಲಿಲ್ಲ. ರಥಗಳು ಎಷ್ಟು ನಾಶವಾದವೋ, ಎಷ್ಟು ಮಂದಿ ಕಾಲಾಳುಗಳು ಮಡಿದರೋ ಹೇಳಲಾಗುವುದಿಲ್ಲ. ಕರ್ಣನನ್ನು ತಡೆಯುವವರೇ ಇಲ್ಲವೆಂದು ವೈರಿ ಸೈನ್ಯ ಬಾಯ ಬಿಟ್ಟಿತು, ಆದರೆ ಕರ್ಣನು ಕೆಳಗುರುಳಿಸಿದ ಹೆಣಗಳು, ಆಯುಧಗಳೇ ಅವನ ವೇಗವನ್ನು ತಡೆಯುತ್ತಿದ್ದವು.

ಅರ್ಥ:
ರಾಯ: ರಾಜ,ನೃಪ; ದಳ: ಸೈನ್ಯ; ಮಡಿ: ಸಾವು; ಕರಿ: ಆನೆ; ವಾನಾಯುಜ: ಕುದುರೆ; ಕಡೆ: ಕೊನೆ; ರಥಿಕ: ರಥದಲ್ಲಿ ಯುದ್ಧ ಮಾಡುವವ; ಪಾಯದಳ: ಕಾಲಾಳು, ಸೈನಿಕ; ಅಳಿ: ಸಾವು; ಅರಿ: ತಿಳಿ; ಬಾಯಬಿಟ್ಟು: ಆಶ್ಚರ್ಯದ ಸೂಚಕ; ಸೇನೆ: ಸೈನ್ಯ; ಕಡಿಖಂಡ: ಕತ್ತರಿಸಿದ ಭಾಗ; ಆಯತ: ವಿಶಾಲವಾದ; ಹೆಣ: ಶವ; ಒಟ್ಟು: ಸೇರಿ; ಮುರಿದ: ಸೀಳು; ಆಯುಧ: ಶಸ್ತ್ರ; ಸಂದಣಿ: ಗುಂಪು, ರಾಶಿ; ನಿಲಿಸು: ತಡೆ; ಬಳಿಕ: ನಂತರ; ರವಿಸುತ: ಕರ್ಣ;

ಪದವಿಂಗಡಣೆ:
ರಾಯದಳದೊಳು+ ಮಡಿವ +ಕರಿ +ವಾ
ನಾಯುಜಕೆ+ ಕಡೆಯಿಲ್ಲ +ರಥಿಕರು
ಪಾಯದಳವ್+ಎನಿತ್+ಅಳಿದುದೋ+ ನಾನರಿಯೆನ್+ಅದರೊಳಗೆ
ಬಾಯಬಿಟ್ಟುದು +ಸೇನೆ +ಕಡಿಖಂಡ
ಆಯತದ +ಹೆಣನೊಟ್ಟಲಿನ +ಮುರಿದ್
ಆಯುಧದ +ಸಂದಣಿಯೆ +ನಿಲಿಸಿತು +ಬಳಿಕ +ರವಿಸುತನ

ಅಚ್ಚರಿ:
(೧) ಆಶ್ಚರ್ಯಪಟ್ಟರು ಎಂದು ತಿಳಿಸಲು – ಬಾಯಬಿಟ್ಟುದು ಸೇನೆ
(೨) ಕರ್ಣನಿಗೆ ತಡೆಯುಂಟು ಮಾಡಿದ್ದು – ಹೆಣನೊಟ್ಟಲಿನ ಮುರಿದಾಯುಧದ ಸಂದಣಿಯೆ ನಿಲಿಸಿತು

ಪದ್ಯ ೩೬: ಭೀಮನು ವೃಷಸೇನ ಮತ್ತು ಸುಷೇಣರಿಗೆ ಏನು ಹೇಳಿದನು?

ರಾಯದಳದಲಿ ಸೆಣಸಲಿದು ಕ
ಜ್ಜಾಯವೇ ಮಕ್ಕಳಿರ ಮನ್ನಿಸಿ
ಕಾಯಿದೆನು ಬಳಿಕೇನು ನಿಮ್ಮಂಘವಣೆ ಲೇಸಾಯ್ತು
ಸಾಯಲೇತಕೆ ಹಿಂಗಿ ನಿಮ್ಮನು
ನೋಯಿಸುವುದನುಚಿತವು ಸೇನಾ
ನಾಯಕನು ನಿಮ್ಮಯ್ಯನಾತನ ಕಳುಹಿ ನೀವೆಂದ (ಕರ್ಣ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭಿಮನು ವೃಷಸೇನ ಮತ್ತು ಸುಷೇಣರನ್ನು ಕಂಡು, ಅಯ್ಯೋ ಮಕ್ಕಳಿರಾ! ಸೈನ್ಯದಲ್ಲಿ ಸೇರಿ ಯುದ್ಧ ಮಾಡಲು ಇದೇನು ಕಜ್ಜಾಯವೇ? ನಿಮ್ಮನ್ನು ಮನ್ನಿಸಿ ಕಾಪಾಡುತ್ತೇನೆ, ನಿಮ್ಮ ಪರಾಕ್ರಮವು ಹೊಗಳಲು ಯೋಗ್ಯವಾಗಿದೆ. ಸುಮ್ಮನೆ ಏಕೆ ಸಾಯುತ್ತೀರಿ? ಸೇನಾಧಿಪತಿಯಾದ ನಿಮ್ಮ ತಂದೆಯನ್ನು ಯುದ್ಧಕ್ಕೆ ಕಳಿಸಿರಿ ಎಂದು ಕರ್ಣನ ಮಕ್ಕಳಿಗೆ ಭೀಮನು ಹೇಳಿದನು.

ಅರ್ಥ:
ರಾಯ: ರಾಜ; ದಳ: ಸೈನ್ಯ; ಸೆಣಸು: ವಿರೋಧ, ಪ್ರತಿ ಭಟನೆ; ಕಜ್ಜಾಯ: ಅತಿರಸ, ಸಿಹಿತಿಂಡಿ; ಮಕ್ಕಳು: ತನುಜ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಕಾಯು:ಕಾಪಾಡು, ಕಾವಲಿರು; ಬಳಿಕ: ನಂತರ; ಅಂಘವಣೆ: ನೋಡಿ; ಲೇಸು: ಒಳಿತು; ಸಾಯಲು: ಸಾವು, ಮರಣ; ಹಿಂಗು: ಪರಿಹಾರವಾಗು, ನಿವಾರಣೆಯಾಗು; ನೋಯಿಸು: ಬೇನೆ, ಶೂಲೆ; ಅನುಚಿತ: ಸರಿಯಿಲ್ಲದ; ಸೇನಾನಾಯಕ: ಸೇನಾಧಿಪತಿ; ಅಯ್ಯ: ತಂದೆ; ಕಳುಹು: ಬರೆಮಾಡು;

ಪದವಿಂಗಡಣೆ:
ರಾಯದಳದಲಿ+ ಸೆಣಸಲಿದು+ ಕ
ಜ್ಜಾಯವೇ +ಮಕ್ಕಳಿರ+ ಮನ್ನಿಸಿ
ಕಾಯಿದೆನು +ಬಳಿಕೇನು +ನಿಮ್+ಅಂಘವಣೆ +ಲೇಸಾಯ್ತು
ಸಾಯಲೇತಕೆ+ ಹಿಂಗಿ +ನಿಮ್ಮನು
ನೋಯಿಸುವುದ್+ಅನುಚಿತವು +ಸೇನಾ
ನಾಯಕನು +ನಿಮ್ಮಯ್ಯನ್+ಆತನ +ಕಳುಹಿ +ನೀವೆಂದ

ಅಚ್ಚರಿ:
(೧) ಭೀಮನ ನುಡಿ: ರಾಯದಳದಲಿ ಸೆಣಸಲಿದು ಕಜ್ಜಾಯವೇ