ಪದ್ಯ ೫೦: ರಥದ ಸುತ್ತಲ್ಲಿದ್ದವರೇಕೆ ಆಶ್ಚರ್ಯ ಪಟ್ಟರು?

ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವರಥಾಮ್ಗರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ (ಗದಾ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಹನುಮಮ್ತನು ಧ್ವಜದ ಹಲಗೆಯನ್ನು ಬಿಟ್ಟು ಹಾರಿ ತನ್ನ ನೆಲೆಗೆ ಹೋದನು. ರಥಾಶ್ವ, ಗಾಲಿಗಳು ಹೊಗೆಯಿಂದ ಮುಚ್ಚಿದವು. ಅರ್ಜುನ ಭೀಮ ಮೊದಲಾದವರು ಅತಿ ಆಶ್ಚರ್ಯದಿಂದ ಇದೇನು ಬೆಂಕಿಯ ಆಕಸ್ಮಿಕ ಎಂದು ಹೆದರಿದರು.

ಅರ್ಥ:
ಧ್ವಜ: ಬಾವುಟ; ಹಲಗೆ: ಪಲಗೆ, ಮರ; ಒದೆ: ನೂಕು; ಹಾಯ್ದು: ಹಾರು; ನಿವಾಸ: ಆಲಯ; ಧೂಮ: ಹೊಗೆ; ರಥ: ಬಂಡಿ; ಅಶ್ವ: ಕುದುರೆ; ಅಂಗ: ಭಾಗ; ರಾಜಿ: ಗುಂಪು, ಸಮೂಹ; ವಿಜಯ: ಅರ್ಜುನ, ಗೆಲುವು; ಆದಿ: ಮುಂತಾದ; ಕಂಡು: ನೋಡು; ಅಕ್ಕಜ: ಆಶ್ಚರ್ಯ; ಆಕಸ್ಮಿಕ: ಅನಿರೀಕ್ಷಿತವಾದ; ಕಿಚ್ಚು: ಬೆಂಕಿ; ಗಜಬಜ: ಗೊಂದಲ; ನೆರೆ: ಗುಂಪು; ಬೆಚ್ಚು: ಹೆದರು; ಭೀತಿ: ಭಯ;

ಪದವಿಂಗಡಣೆ:
ಧ್ವಜದ+ ಹಲಗೆಯನ್+ಒದೆದು +ಹಾಯ್ದನು
ನಿಜ+ನಿವಾಸಕೆ +ಹನುಮ +ಧೂಮ
ಧ್ವಜನಮಯವಾದುದು +ರಥ+ಅಶ್ವ+ರಥಾಂಗ+ರಾಜಿಯಲಿ
ವಿಜಯ +ಭೀಮಾದಿಗಳು +ಕಂಡ್
ಅಕ್ಕಜದೊಳ್+ಆಕಸ್ಮಿಕದ +ಕಿಚ್ಚಿನ
ಗಜಬಜವಿದೇನ್+ಎನುತ +ನೆರೆ +ಬೆಚ್ಚಿದರು +ಭೀತಿಯಲಿ

ಅಚ್ಚರಿ:
(೧) ಅರ್ಜುನನನ್ನು ವಿಜಯ ಎಂದು ಕರೆದಿರುವುದು
(೨) ಧ್ವಜ, ಗಜಬಜ, ನಿಜ – ಪ್ರಾಸ ಪದಗಳು

ಪದ್ಯ ೨೪: ಧೃಷ್ಟದ್ಯುಮ್ನನು ಯಾವ ಆಕಾರದಲ್ಲಿ ಸೈನ್ಯವನ್ನು ರಚಿಸಿದನು?

ಕರಸಿ ಧೃಷ್ಟದ್ಯುಮ್ನ ನಿಜ ಮೋ
ಹರವ ರಚಿಸಿದನರ್ಧಚಂದ್ರೋ
ತ್ಕರ ವಿಳಾಸದೊಳಳ್ಳಿರಿವ ನಿಸ್ಸಾಳ ಕೋಟಿಗಳ
ಧುರಕೆ ನಿಗುರುವ ಭಟರ ತೂಳುವ
ಕರಿಘಟೆಯ ಕೆಲಬಲಕೆ ಸೂಸುವ
ತುರಗ ರಾಜಿಯ ತೇರ ಗಮನದ ಗಜರು ಘಾಡಿಸಿತು (ದ್ರೋಣ ಪರ್ವ, ೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಇತ್ತ ಧೃಷ್ಟದ್ಯುಮ್ನನು ಪಾಂಡವ ಸೇನೆಯನ್ನು ಅರ್ಧಚಂದ್ರಾಕಾರದಲ್ಲಿ ನಿಲ್ಲಿಸಿದನು. ರಣತವಕದಿಂದ ಮುನ್ನುಗ್ಗುವ ಭಟರು, ಕುದುರೆಗಳು, ಆನೆಗಳು, ರಥಗಳು ಮಹಾಕೋಲಾಹಲವನ್ನುಂಟು ಮಾದಿದವು. ಲೆಕ್ಕವಿಲ್ಲದಷ್ಟು ರನಭೇರಿಗಳು ಮೊರೆದವು.

ಅರ್ಥ:
ಕರಸು: ಬರೆಮಾಡು; ನಿಜ: ತನ್ನ; ಮೋಹರ: ಯುದ್ಧ; ರಚಿಸು: ನಿರ್ಮಿಸು; ಉತ್ಕರ: ರಾಶಿ, ಸಮೂಹ; ವಿಳಾಸ: ಬೆಡಗು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಧುರ: ಯುದ್ಧ, ಕಾಳಗ; ನಿಗುರು:ಹರಡು, ವ್ಯಾಪಿಸು; ಭಟ: ಸೈನಿಕ; ತೂಳು:ಆವೇಶ, ಉನ್ಮಾದ; ಕರಿಘಟೆ: ಆನೆಗಳ ಗುಂಪು; ಕೆಲಬಲ: ಅಕ್ಕಪಕ್ಕ; ಸೂಸು: ಹರಡು; ತುರಗ: ಕುದುರೆ; ರಾಜಿ: ಗುಂಪು, ಸಮೂಹ; ತೇರು: ರಥ, ಬಂಡಿ; ಗಮನ: ವೇಗ; ಗಜರು: ಆರ್ಭಟಿಸು; ಘಾಡಿಸು: ವ್ಯಾಪಿಸು;

ಪದವಿಂಗಡಣೆ:
ಕರಸಿ +ಧೃಷ್ಟದ್ಯುಮ್ನ +ನಿಜ+ ಮೋ
ಹರವ +ರಚಿಸಿದನ್+ಅರ್ಧ+ಚಂದ್ರೋ
ತ್ಕರ+ ವಿಳಾಸದೊಳ್+ಅಳ್ಳಿರಿವ+ ನಿಸ್ಸಾಳ +ಕೋಟಿಗಳ
ಧುರಕೆ+ ನಿಗುರುವ +ಭಟರ +ತೂಳುವ
ಕರಿಘಟೆಯ +ಕೆಲಬಲಕೆ+ ಸೂಸುವ
ತುರಗ +ರಾಜಿಯ +ತೇರ +ಗಮನದ +ಗಜರು +ಘಾಡಿಸಿತು

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಮನದ ಗಜರು ಘಾಡಿಸಿತು
(೨) ಉತ್ಕರ, ರಾಜಿ – ಸಮಾನಾರ್ಥಕ ಪದ

ಪದ್ಯ ೪೬: ಯುದ್ಧಕ್ಕೆ ಎಲ್ಲರೂ ಹೇಗೆ ಸಿದ್ಧರಾದರು?

ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ (ದ್ರೋಣ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಗುರಾಣಿ ಹಿಡಿದ ಸೈನ್ಯ ಮುನ್ನುಗ್ಗಿತು. ಬಿಲ್ಲಾಳುಗಳು ವೇಗವಾಗಿ ಚಲಿಸಿದರು. ಇವರನ್ನು ಹಿಂದಿಟ್ಟು ಸಬಳಿಗರು ಮುಂದಾದರು. ಕತ್ತಿ ಹಿಡಿದವರು ಅವರನ್ನು ಹಿಂದಿಟ್ಟು ನಡೆದರು. ಆನೆ ಕುದುರೆ ರಥಗಳ ಮುಂಚೂಣಿ ದೊರೆಯ ನಿರ್ದೇಶನದಂತೆ ಯುದ್ಧರಂಗಕ್ಕೆ ಬಂದವು.

ಅರ್ಥ:
ಹರಿ: ದಾಳಿ ಮಾಡು, ಮುತ್ತಿಗೆ ಹಾಕು; ಮುಂದೆ: ಎದುರು, ಮುಂಚೂಣೀ; ಬಿಲ್ಲಾಳು: ಬಿಲ್ಲುಗಾರರು; ಉರವಣೆ: ರಭಸ; ಮೋಹರ: ಯುದ್ಧ, ಸೈನ್ಯ; ಮಿಕ್ಕು: ಉಳಿದ; ಉರುಬು: ಅತಿಶಯವಾದ ವೇಗ; ಸಬಳ: ಈಟಿ, ಭರ್ಜಿ; ರಣ: ಯುದ್ಧಭೂಮಿ; ಖಡ್ಗಿ: ಕತ್ತಿಯನ್ನು ಹಿಡಿದವ; ತುರಗ: ಕುದುರೆ; ಕವಿ: ಆವರಿಸು; ದಂತಿಘಟೆ: ಆನೆಯ ಗುಂಪು; ತುರುಗು: ಸಂದಣಿಸು; ರಥ: ಬಂಡಿ; ರಾಜಿ: ಪಂಕ್ತಿ, ಗುಂಪು; ಮುಂಗುಡಿ: ಮುಂದೆ; ಅವನೀಪತಿ: ರಾಜ; ಚೂಣಿ: ಮೊದಲು; ನೃಪ: ರಾಜ; ಜೋಕೆ: ಎಚ್ಚರಿಕೆ;

ಪದವಿಂಗಡಣೆ:
ಹರಿಗೆ +ಹರಿದವು +ಮುಂದೆ +ಬಿಲ್ಲಾಳ್
ಉರವಣಿಸಿದರು +ಮೋಹರವ+ ಮಿಕ್ಕ್
ಉರುಬಿದರು +ಸಬಳಿಗರು +ಮುಂಚಿತು +ರಣಕೆ +ಖಡ್ಗಿಗಳು
ತುರಗ +ಕವಿದವು +ದಂತಿಘಟೆಗಳು
ತುರುಗಿದವು +ರಥ +ರಾಜಿ +ಮುಂಗುಡಿ
ವರಿದುದ್+ಅವನೀಪತಿಯ +ಚೂಣಿಯ +ನೃಪರ +ಜೋಕೆಯಲಿ

ಅಚ್ಚರಿ:
(೧) ಅವನೀಪತಿ, ನೃಪ – ಸಮಾನಾರ್ಥಕ ಪದ
(೨) ಆನೆ ಕುದುರೆಗಳು ಸಜ್ಜಾದ ಪರಿ – ತುರಗ ಕವಿದವು ದಂತಿಘಟೆಗಳು
ತುರುಗಿದವು