ಪದ್ಯ ೧೩: ಸುಯೋಧನನು ಶಲ್ಯನನ್ನು ನಂಬೆ ಕೆಟ್ಟನೆಂದು ಕರ್ಣನು ಏಕೆಂದು ಕೊಂಡನು?

ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀತನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ (ಕರ್ಣ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಮೇಲಿನ ಪಕ್ಷಪಾತವು ಶಲ್ಯನಿಗೆ ಇಷ್ಟು ಬಲವಾಗಿದೆಯೇ? ಶಿವ ಶಿವಾ ದುರ್ಯೋಧನನು ಇವನನ್ನು ಇಷ್ಟು ನಂಬಿರುವವನು, ನಾನೀಗ ಏನು ಮಾಡಲಿ, ಸೂರ್ಯಕಾಂತ ಶಿಲೆಯ ಶಿರಸ್ತ್ರಾಣವನ್ನು ಧರಿಸಿ ಸೂರ್ಯನೊಡನೆ ಕಾಳಗ ಮಾದುವವನಂತೆ, ಅಯ್ಯೋ ನನ್ನ ಒಡೆಯನು ಇವನನ್ನು ನಂಬಿ ಕೆಟ್ಟನಲ್ಲಾ ಎಂದುಕೊಂಡನು.

ಅರ್ಥ:
ಈಸು: ಇಷ್ಟು; ಪಕ್ಷ: ಕಡೆ, ಪಂಗಡ; ಪಕ್ಷಾವೇಶಿ: ಒಂದು ಗುಂಪಿನ ಮೇಲೆ ರೋಷ; ನಂಬು: ವಿಶ್ವಾಸವಿಡು; ಸೀಸಕ: ಶಿರಸ್ತ್ರಾಣ; ರವಿ: ಭಾನು; ಕಾಂತಿ: ಪ್ರಕಾಶ; ದಿನೇಶ: ಭಾನು,ಸೂರ್ಯ; ಕೆಣಕು: ಪ್ರಚೋದಿಸು; ಅವನೀಶ: ರಾಜ; ಕೆಟ್ಟನು: ಹಾಳಾದನು; ಅಕಟ: ಅಯ್ಯೋ;

ಪದವಿಂಗಡಣೆ:
ಈಸು +ನೀನ್+ಅರ್ಜುನನ +ಪಕ್ಷಾ
ವೇಶಿಯೇ +ಶಿವಶಿವ +ಮಹಾದೇವ
ಈಸು +ನಂಬಿಹನೋ +ಸುಯೋಧನನ್+ಏನ +ಮಾಡುವೆನೊ
ಸೀಸಕವೆ+ ರವಿಕಾಂತವಾಗಿ+ ದಿ
ನೇಶನನು +ಕೆಣಕಿದವೊಲ್+ಇಂದ್+ಅವ
ನೀತನ್+ಈತನ +ನಂಬಿ +ಕೆಟ್ಟನು +ಕೆಟ್ಟನ್+ಅಕಟೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದವೊಲು
(೨) ಪದಗಳ ಬಳಕೆ – ಅವನೀತನ ಈತನ, ಕೆಟ್ಟನು ಕೆಟ್ಟನು, ಶಿವಶಿವ ಮಹಾದೇವ