ಪದ್ಯ ೪೫: ಪಾಂಡವರು ಜಯವಾಗಲು ಕಾರಣವೇನು?

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಜಯನು ದೂರದಲ್ಲಿ ಕೃಪ, ಅಶ್ವತ್ಥಾಮ, ಕೃತವರ್ಮರನ್ನು ನೋಡಿ, ಇವರು ಶತ್ರುರಥಿಕರಾಗಿರಲಾರರು ಎಂದುಕೊಂಡನು. ಭರತಕುಲ ಒಂದಾಗಿದ್ದುದು ಬಳಿಕ ಎರಡಾಯ್ತು. ಒಂದು ಪಕ್ಷಕ್ಕೆ ಶ್ರೀಕೃಷ್ಣನ ದಯೆಯಿಂದ ಜಯವುಂಟಾಯಿತು ಎಂದು ಚಿಂತಿಸಿದನು.

ಅರ್ಥ:
ಬರುತ: ಆಗಮಿಸು; ದೂರ: ಅಂತರ; ಗುರು: ಆಚಾರ್ಯ; ಸುತ: ಮಗ; ಕಂಡು: ನೋಡಿ; ಅರಿ: ವೈರಿ; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ಪರಾಕ್ರಮ; ಕುಲ: ವಂಶ; ಬಳಿಕ: ನಂತರ; ಕವಲು: ವಂಶ ಯಾ ಕುಲದ ಶಾಖೆ; ಜಯ: ಗೆಲುವು; ವಿಸ್ತರಣ: ಹಬ್ಬುಗೆ, ವಿಸ್ತಾರ; ಕರುಣ: ದಯೆ;

ಪದವಿಂಗಡಣೆ:
ಬರುತ +ಸಂಜಯ +ದೂರದಲಿ +ಕೃಪ
ಗುರುಸುತರ +ಕೃತವರ್ಮಕನ +ಕಂಡ್
ಅರಿ+ರಥಿಗಳ್+ಇವರಲ್ಲಲೇ +ಶಿವಶಿವ +ಮಹಾದೇವ
ಭರತಕುಲ+ ಮೊದಲೊಂದು +ಬಳಿಕಾಯ್ತ್
ಎರಡು+ಕವಲ್+ಒಬ್ಬರಿಗೆ +ಜಯ+ವಿ
ಸ್ತರಣ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪರಿ – ಶಿವಶಿವ ಮಹಾದೇವ

ಪದ್ಯ ೪೩: ದುರ್ಯೋಧನನ ದೇಹವು ಯಾರಿಗೆ ಮೀಸಲು?

ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯಿಂದೆಸು ವಿಭಾಡಿಸು ರಚಿಸು ಭಾಷೆಗಳ
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ (ಗದಾ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನಿಗೆ, ನಿನ್ನ ದೇಹವು ಭೀಮನಿಗೆ ಮೀಸಲಾದುದರಿಂದ ನಿನ್ನನ್ನು ನಾನು ಕೊಲ್ಲುವುದು ಅನುಚಿತ. ನಿನಗೆ ಹೇಗೆ ಬೇಕೋ ಹಾಗೆ ಶಸ್ತ್ರಾಸ್ತ್ರಗಳಿಂದ ನನ್ನನ್ನು ಹೊಡೆ, ಯಾವ ಪ್ರತಿಜ್ಞೆಯನ್ನಾದರೂ ಮಾಡು, ನಾನು ನಿನಗೆ ಹೆದರಿದ್ದೇನೆ ಎಂದು ಹೇಳಿ ಅವನ ಸುತ್ತಲಿನ ಚತುರಂಗ ಸೈನ್ಯವನ್ನು ಬಾಣಗಳಿಂದ ಚುಚ್ಚಿ ಕೊಂದನು.

ಅರ್ಥ:
ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಮೀಸಲು: ಕಾಯ್ದಿರಿಸಿದ; ತನು: ದೇಹ; ಒಲಿ: ಪ್ರೀತಿಸು; ಪರಿ: ರೀತಿ; ವಿಭಾಡಿಸು: ನಾಶಮಾಡು; ರಚಿಸು: ನಿರ್ಮಿಸು; ಭಾಷೆ: ನುಡಿ; ಅಳುಕು: ಹೆದರು; ರಾಯ: ರಾಜ; ಬಳಿ: ಹತ್ತಿರ; ಜೋದರು: ಆನೆ ಮೇಲೆ ಕುಳಿತು ಯುದ್ಧ ಮಾಡುವವರು; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಪದಾತಿ: ಕಾಲಾಳು, ಸೈನಿಕ; ಇಕ್ಕು: ಇರಿಸು, ಇಡು; ಸೆಕ್ಕು: ಒಳಸೇರುವಿಕೆ, ಕುಗ್ಗುವಿಕೆ; ಸರಳು: ಬಾಣ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಕೊಲುವಡ್+ಅನುಚಿತವ್+ಇಂದು +ಭೀಮಗೆ
ಕಳೆದ +ಮೀಸಲು +ನಿನ್ನ +ತನು +ನೀ
ನೊಲಿದ +ಪರಿಯಿಂದ್+ಎಸು +ವಿಭಾಡಿಸು +ರಚಿಸು +ಭಾಷೆಗಳ
ಅಳುಕಿದೆವು +ನಿನಗೆಂದು +ರಾಯನ
ಬಳಿಯ +ಜೋದರ +ರಾವುತರ+ ರಥಿ
ಗಳ +ಪದಾತಿಯನ್+ಇಕ್ಕಿದನು +ಸೆಕ್ಕಿದನು +ಸರಳುಗಳ

ಅಚ್ಚರಿ:
(೧) ದುರ್ಯೋಧನನ ದೇಹವು ಯಾರಿಗೆ ಮೀಸಲು – ಭೀಮಗೆ ಕಳೆದ ಮೀಸಲು ನಿನ್ನ ತನು
(೨) ದುರ್ಯೋಧನನನ್ನು ಹಂಗಿಸುವ ಪರಿ – ಅಳುಕಿದೆವು ನಿನಗೆಂದು, (ನಾನು ನಿನಗೆ ಹೆದರಿದ್ದೇನೆ)