ಪದ್ಯ ೩೧: ದ್ರುಪದನೇಕೆ ದ್ರೋಣನನ್ನು ಭೇಟಿಯಾಗಲಿಲ್ಲ?

ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿವರ್ಗ
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯಬೇಡೆನೆ ಬಂದು ಬಾಗಿಲಲವ ನಿವಾರಿಸಿದ (ಆದಿ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧನಮದ ಅಧಿಕವಾದ ಪ್ರತಾಪದ ಮದ ಮೊದಲಾದವು ದ್ರುಪದನ ಮನಸ್ಸಿನಲ್ಲಿ ಹೊಕ್ಕು ಅವುಗಳ ಪಾದಧೂಳಿಯಿಂದ ಮನಸ್ಸಿನ ಸ್ವಚ್ಛತೆಯು ಮಾಸಿಹೋಯಿತು. ದ್ರುಪದನು ದ್ವಾರಪಾಲಕನಿಗೆ ತಿರುಗಾಡುವ ಬ್ರಾಹ್ಮನನೊಡನೆ ರಾಜನಿಗೆ ಎಲ್ಲಿಯ ಸ್ನೇಹ? ಅವನನ್ನು ಕರೆಯಬೇಡ, ಹೋಗಿಬಿಡಲಿ ಎಂದು ಹೇಳಿದನು. ದ್ವಾರಪಾಲಕನು ಬಂದು ದೊರೆಯ ಮಾತನ್ನು ಹೇಳಿ ದ್ರೋಣನನ್ನು ತಡೆದನು.

ಅರ್ಥ:
ಸಿರಿ: ಐಶ್ವರ್ಯ; ಮದ: ಅಹಂಕಾರ; ಅಧಿಕ: ಹೆಚ್ಚು; ಪ್ರತಾಪ: ಪರಾಕ್ರಮ; ಉತ್ಕರ: ಹೆಚ್ಚು; ಮೊದಲಾದ: ಮುಂತಾದ; ಸಂಚರಣ: ಸಂಚಾರ; ರಜ: ಧೂಳು, ಹುಡಿ, ಅಂಧಕಾರ; ಮಾಸು: ಮಲಿನವಾಗು, ಕೊಳೆಯಾಗು; ಮನ: ಮನಸ್ಸು; ಮಡಿ: ಸ್ವಚ್ಛ; ವರ್ಗ: ಗುಂಪು; ತಿರಿ: ಸುತ್ತಾಡು; ಹಾರುವ: ಬ್ರಾಹ್ಮಣ; ಭೂಮೀಶ್ವರ: ರಾಜ; ಎತ್ತಣ: ಎಲ್ಲಿಯ; ಮೈತ್ರಿ: ಸ್ನೇಹ; ಹೋಗು: ತೆರಳು; ಕರೆ: ಬರೆಮಾಡು; ಬಾಗಿಲಲವ: ಕಾವಲುಗಾರ; ನಿವಾರಿಸು: ಹೋಗಲಾಡಿಸು;

ಪದವಿಂಗಡಣೆ:
ಸಿರಿಯ +ಮದವಧಿಕ +ಪ್ರತಾಪ
ಉತ್ಕರದ +ಮದ +ಮೊದಲಾದ +ಮದ +ಸಂ
ಚರಣ+ ರಜದಲಿ +ಮಾಸಿತ್+ಈತನ +ಮನದ+ ಮಡಿವರ್ಗ
ತಿರಿವ+ ಹಾರುವರೊಡನೆ+ ಭೂಮೀ
ಶ್ವರರಿಗ್+ಎತ್ತಣ +ಮೈತ್ರಿ +ಹೋಗಲಿ
ಕರೆಯಬೇಡ್+ಎನೆ +ಬಂದು +ಬಾಗಿಲಲವ +ನಿವಾರಿಸಿದ

ಅಚ್ಚರಿ:
(೧) ಅಹಂಕಾರದ ಮಾತು: ತಿರಿವ ಹಾರುವರೊಡನೆ ಭೂಮೀಶ್ವರರಿಗೆತ್ತಣ ಮೈತ್ರಿ
(೨) ಮದ ಪದದ ಬಳಕೆ – ಸಿರಿಯ ಮದವಧಿಕ ಪ್ರತಾಪೋತ್ಕರದ ಮದ ಮೊದಲಾದ ಮದ
(೩) ರೂಪಕದ ಬಳಕೆ – ಮದ ಸಂಚರಣ ರಜದಲಿ ಮಾಸಿತೀತನ ಮನದ ಮಡಿವರ್ಗ

ಪದ್ಯ ೧೬: ಶ್ರೀಕೃಷ್ಣನು ದ್ರೌಪದಿಯನ್ನು ಹೇಗೆ ಸಂತೈಸಿದನು?

ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿತಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಿಳಿಸಿತಡಿಗಡಿಗೆ (ಅರಣ್ಯ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಅಳಲನ್ನು ಕಂಡು, ಶ್ರೀ ಕೃಷ್ಣನು ಪಾಂಚಾಲಿ, ನೀನು ಬಹಳವಾಗಿ ನೊಂದು ಅಳಲುತ್ತಿರುವೆ, ತಂಗೀ ಏಳು ಎಂದು ಕೃಪೆಯಿಂದ ದ್ರೌಪದಿಯ ಕಣ್ಣೀರೊರೆಸಿ, ಮೈಧೂಳನ್ನು ಕೊಡವಿದನು. ಪೊರೆ ಕಳಚಿದ ಹಾವಿನಂತೆ, ದ್ರೌಪದಿಯ ಶೋಕವು ತೀವ್ರತರವಾಗಿ ಹೆಚ್ಚಿತು.

ಅರ್ಥ:
ಏಳು: ಮೇಲೇಳು; ತಾಯೆ: ಮಾತೆ; ಸರೋಜಮುಖಿ: ಕಮಲದಂತೆ ಮುಖವುಳ್ಳವಳು, ಸುಂದರಿ (ದ್ರೌಪದಿ); ಪಾಂಚಾಲೆ: ದ್ರೌಪದಿ; ನೊಂದು: ನೋವನ್ನುಂಡು; ತಂಗಿ: ಸಹೋದರಿ; ಕೃಪಾಳು: ದಯೆ, ಕಾರುಣ್ಯ; ಕಂಬನಿ: ಕಣ್ಣೀರು; ಒಡೆದು: ಸೀಳಿ; ಕೊಡಹು: ಒದರು; ಅವಯವ: ದೇಹ; ರಜ: ಧೂಳು; ಮೇಲು: ಹೊರಭಾಗ; ಮುಚ್ಚಳ: ಕರಡಿಗೆ ಪಾತ್ರೆಗಳ ಮುಚ್ಚುವ ಸಾಧನ; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ತನು: ದೇಹ; ಹೇಳಿಗೆ: ಬುಟ್ಟಿ; ಶೋಕ: ದುಃಖ; ಅಹಿ: ಹಾವು; ಲೋಲ: ತಲ್ಲೀನನಾದವನು, ಆಸಕ್ತ, ಅತ್ತಿತ್ತ ಅಲುಗಾಡುವ ; ಲೋಚನೆ: ಕಣ್ಣು; ಮಿಗೆ: ಮತ್ತು; ಹೆಕ್ಕಳಿಸು: ಅಧಿಕವಾಗು; ಅಡಿಗಡಿಗೆ: ಮತ್ತೆ ಮತ್ತೆ;

ಪದವಿಂಗಡಣೆ:
ಏಳು +ತಾಯೆ +ಸರೋಜಮುಖಿ +ಪಾಂ
ಚಾಲೆ +ನೊಂದೌ +ತಂಗಿ+ಎನುತ +ಕೃ
ಪಾಳು +ಕಂಬನಿದ್+ಒಡೆದು +ಕೊಡಹಿದನ್+ಅವಯವದ +ರಜವ
ಮೇಲು +ಮುಚ್ಚಳ +ತೆರೆದ +ತನುವಿನ
ಹೇಳಿಗೆಯ +ಶೋಕ+ಅಹಿತಂತಿರೆ
ಲೋಲಲೋಚನೆ+ಅಳಲು +ಮಿಗೆ+ ಹೆಕ್ಕಿಳಿಸಿತ್+ಅಡಿಗಡಿಗೆ

ಅಚ್ಚರಿ:
(೧) ದ್ರೌಪದಿಯನ್ನು ಕರೆಯುವ ಪರಿ – ಸರೋಜಮುಖಿ, ಪಾಂಚಾಲೆ, ತಂಗಿ, ತಾಯೆ, ಲೋಲಲೋಚನೆ
(೨) ಉಪಮಾನದ ಪ್ರಯೋಗ – ಮೇಲು ಮುಚ್ಚಳ ತೆರೆದ ತನುವಿನ ಹೇಳಿಗೆಯ ಶೋಕಾಹಿತಂತಿರೆ

ಪದ್ಯ ೧೮: ಕೃಷ್ಣನ ಮೂರುಗುಣಗಳ ಮಹತ್ವವೇನು?

ಲೀಲೆಯಿಂದ ರಜೋಗುಣಕೆ ಮನ
ಮೇಳವಾದರೆ ಮಾಡುವನು ಭುವ
ನಾಳಿಯನು ಸಲಹುವನು ಸಾತ್ವಿಕ ಗುಣಕೆ ಮನ ಮುರಿಯೆ
ಮೇಲೆ ತಾಮಸಗುಣಕೆ ತಿರುಗಿದೊ
ಡಾಲಯವ ಮಾಡುವನು ಗುಣಸಂ
ಮೇಳದೊಳು ಗುಣರಹಿತನೆಂಬ ಮಹಾತ್ಮ ನೋಡೀತ (ಉದ್ಯೋಗ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ವಿದುರನು ಕೃಷ್ಣನ ಗುಣಗಳನ್ನು ವರ್ಣಿಸುತ್ತಾ, ಈತ ತನ್ನ ಲೀಲೆಯಿಂದ ರಜೋಗುಣಕ್ಕೆ ಮನಸ್ಸು ಮಾಡಿದರೆ ಸೃಷ್ಟಿಸುತ್ತಾನೆ, ಸತ್ವಗುಣಕ್ಕೆ ಮನಸ್ಸು ಮಾಡಿದರೆ ಜಗತ್ತನ್ನು ಪಾಲಿಸುತ್ತಾನೆ ಮತ್ತು ತಮೋಗುಣದಲ್ಲಿ ಮನಸ್ಸಿಟ್ಟರೆ ಜಗತ್ತನಲ್ಲಿ ಪ್ರಳಯವಾಗಿ ಲಯಕರ್ತನಾಗುತ್ತಾನೆ. ಈ ಮೂರು ಗುಣಗಳಿಂದ ಕೂಡಿದರೂ ಈ ಮಹಾತ್ಮನು ಯಾವ ಗುಣಕ್ಕು ಅಂಟದೆ ಗುಣರಹಿತನಾಗಿದ್ದಾನೆ ಎಂದು ಹೇಳಿದ.

ಅರ್ಥ:
ಲೀಲೆ: ಆನಂದ, ಸಂತೋಷ; ರಜೋಗುಣ: ರಾಜಸಗುಣ; ಗುಣ:ನಡತೆ, ಸ್ವಭಾವ; ಮನ: ಮನಸ್ಸು; ಮೇಳ: ಸೇರು; ಮಾಡು: ಆಚರಿಸು; ಭುವನ: ಜಗತ್ತು; ಆಳಿ: ಗುಂಪು; ಸಲಹು: ಕಾಪಾಡು; ಸಾತ್ವಿಕ: ಒಳ್ಳೆಯತನ; ಮುರಿ: ಬಾಗು; ತಾಮಸ: ಕತ್ತಲೆ, ಅಂಧಕಾರ; ತಿರುಗು: ಸುತ್ತು; ಲಯ: ಪ್ರಳಯ, ಹಾಳು; ಸಂಮೇಳ: ಜೊತೆ; ರಹಿತ; ಇಲ್ಲದ; ಮಹಾತ್ಮ: ಶ್ರೇಷ್ಠ; ನೋಡು: ವೀಕ್ಷಿಸು;

ಪದವಿಂಗಡಣೆ:
ಲೀಲೆಯಿಂದ+ ರಜೋಗುಣಕೆ+ ಮನ
ಮೇಳವಾದರೆ +ಮಾಡುವನು +ಭುವ
ನಾಳಿಯನು +ಸಲಹುವನು +ಸಾತ್ವಿಕ +ಗುಣಕೆ +ಮನ +ಮುರಿಯೆ
ಮೇಲೆ +ತಾಮಸಗುಣಕೆ+ ತಿರುಗಿದೊ
ಡಾ+ಲಯವ +ಮಾಡುವನು +ಗುಣಸಂ
ಮೇಳದೊಳು +ಗುಣರಹಿತನೆಂಬ+ ಮಹಾತ್ಮ +ನೋಡೀತ

ಅಚ್ಚರಿ:
(೧) ಮೂರು ಗುಣಗಳ ವರ್ಣನೆ – ರಜ, ತಮ, ಸತ್ವ
(೨) ‘ಮ’ ಕಾರದ ತ್ರಿವಳಿ ಪದಗಳು – ಮನ ಮೇಳವಾದರೆ ಮಾಡುವನು; ಮನ ಮುರಿಯೆ ಮೇಲೆ;
(೩) ಗುಣಸಂಮೇಳ, ಗುಣರಹಿತ – ಪದಗಳ ಬಳಕೆ

ಪದ್ಯ ೩೯: ಪ್ರಪಂಚದಲ್ಲಿ ಯಾರು ಅತೀವ ದಡ್ಡ?

ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನ ಮತವೇನೆಂದನಾ ಶಕುನಿ (ಆದಿ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ರೋಗವನ್ನು, ಅಲ್ಲಾಡುವ ಹಲ್ಲನ್ನು, ಕಣ್ಣಲ್ಲಿ ಬಿದ್ದಿರುವ ಧೂಳನ್ನು, ಆಕಸ್ಮಿಕವಾಗಿ ಬಿದ್ದ ಬೆಂಕಿಯನ್ನು, ಸಾಲವನ್ನು, ಅವಿದ್ಯೆಯನ್ನು, ಮನೆಯಲ್ಲಿರುವ ಹಾವನ್ನು, ಪಾಪವನ್ನು, ಅಲುಗಾಡುವ ವಸ್ತುವನ್ನು, ಶತ್ರುಗಳನ್ನು ಉಳಿಸುವವನು ಅತಿ ದಡ್ಡ ಎಂದು ಸುಜನರು ಅಭಿಪ್ರಾಯ, ಇದಕ್ಕೆ ನಿನ್ನ ಮತವೇನೆಂದು ಶಕುನಿ ದುರ್ಯೋಧನನನ್ನು ಕೇಳಿದನು.

ಅರ್ಥ:
ರುಜೆ: ರೋಗ; ಅಲುಗುವ: ಅಲುಗಾಡುವ; ರದನ: ಹಲ್ಲು; ದ್ರುಗು: ದೃಕ್, ಕಣ್ಣು; ರಜ: ಧೂಳು, ಕೊಳೆ; ಅನುಚಿತ: ಯೋಗ್ಯವಲ್ಲದ; ಜಾತ: ಹುಟ್ಟಿದ; ಧೂಮ: ಹೊಗೆ; ರುಣ: ಸಾಲ; ಅವಿದ್ಯೆ: ವಿದ್ಯೆಯಿಲ್ಲದ; ಗೃಹ: ಮನೆ; ಕುಂಡಲಿ: ಸರ್ಪ; ವೃಜಿನ: ಪಾಪ, ರೋಗ, ಸಂಕಟ, ದೋಷ; ಕಂಪಿತ: ಅಲುಗಾಡು; ವೈರಿ:ಶತ್ರು; ವ್ರಜ: ಸಮೂಹ, ಗುಂಪು; ಉಳುಹು: ಉಳಿಸು; ಎಗ್ಗ: ದಡ್ಡ; ಸುಜನ: ತಿಳಿದವರು, ಸಜ್ಜನರು; ಅಭಿಮತ: ಅಭಿಪ್ರಾಯ, ಮತ; ಧ್ವಜ: ಪತಾಕೆ, ಗುರುತು;

ಪದವಿಂಗಡನೆ:
ರುಜೆಯನ್+ಅಲುಗುವ+ ರದನವ+ ದ್ರುಗು
ರಜವನ್+ಅನುಚಿತ+ಜಾತ+ ಧೂಮ
ಧ್ವಜವ+ ರುಣವನ್+ಅವಿದ್ಯೆಯನು +ಗೃಹವಾಸ +ಕುಂಡಲಿಯ
ವೃಜಿನವನು +ಕಂಪಿತವ+ ವೈರಿ
ವ್ರಜವನ್+ಉಳುಹುವನ್+ಎಗ್ಗನ್+ಎಂಬಿದು
ಸುಜನರ್+ಅಭಿಮತ+ ನಿನ್ನ+ ಮತವೇನ್+ಎಂದನಾ +ಶಕುನಿ

ಅಚ್ಚರಿ:
(೧) ೧೦ ಉದಾಹರಣೆಗಳನ್ನು ನೀಡಿ ದಡ್ಡ ಯಾರೆಂದು ಹೇಳಿರುವುದು
(೨) ರುಜೆ, ರದನ, ರಜ, ರುಣ – ರ ಕಾರದ ಪದಗಳು
(೩) ಮತ, ಅಭಿಮತ – ಸಮಾನಾರ್ಥಕ ಪದ
(೪) ರುಜೆ, ರಜ; ವೃಜಿ, ವ್ರಜ; ೧,೨,೪,೫ ಸಾಲಿನ ಮೊದಲ ಪದ