ಪದ್ಯ ೨೦: ಶಲ್ಯನೇ ಯುದ್ಧದ ಮುಂಚೂಣಿಗೇಕೆ ಬಂದನು?

ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ (ಶಲ್ಯ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕುರುಸೇನೆಯು ಅಶ್ವತ್ಥಾಮನನ್ನು ಹಿಂದಿಟ್ಟು ಪಾಂಡವ ಬಲವನ್ನು ಇದಿರಿಸಲು, ಶಲ್ಯನು ಆ ಸೇನೆಯನ್ನು ನೋಡಿ, ಯುದ್ಧ ಮಾಡಲು ನಾನಿರಲಾಗಿ, ಕಾರಣವಿಲ್ಲದೆ ಸೇನೆಯನ್ನು ಕೊಲ್ಲಿಸಿದರೆ ಭೀಷ್ಮ ದ್ರೋಣಾದಿಗಳು ನನ್ನನ್ನು ಕಂಡು ನಗದಿರುವರೇ ಎಂದುಕೊಂಡು ತಾನೇ ಯುದ್ಧಕ್ಕೆ ಬಂದನು.

ಅರ್ಥ:
ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸುತ: ಮಕ್ಕಳು; ಹಿಂದಿರಿಸು: ಹಿಂದಕ್ಕೆ ತಳ್ಳು; ಪರಬಲ: ವೈರಿ ಸೈನ್ಯ; ಅಭಿಮುಖ: ಎದುರು; ಮೋಹರ: ಯುದ್ಧ; ನಿಂದು: ನಿಲ್ಲು; ಕಂಡು: ನೋಡು; ಬಲ: ಶಕ್ತಿ, ಸೈನ್ಯ; ಧುರ: ಯುದ್ಧ, ಕಾಳಗ; ಸಂಹರ: ನಾಶ; ನಗೆ: ನಗು, ಸಂತಸ; ತೆಗೆ: ಹೊರತರು; ನಡೆ: ಚಲಿಸು;

ಪದವಿಂಗಡಣೆ:
ಉರವಣಿಸಿತಿದು+ ಗುರುಸುತನ +ಹಿಂ
ದಿರಿಸಿ +ಪರಬಲದ್+ಅಭಿಮುಖಕೆ +ಮೋ
ಹರಿಸಿ +ನಿಂದುದು +ಕಂಡನಿತ್ತಲು +ಶಲ್ಯನಾ +ಬಲವ
ಧುರಕೆ +ನಾವಿರೆ +ಸೇನೆ+ಉಪಸಂ
ಹರಿಸಬಹುದೇ +ದ್ರೋಣ +ಭೀಷ್ಮಾ
ದ್ಯರಿಗೆ +ನಗೆಗೆಡೆ+ ನಾವಹೆವೆ+ ತೆಗೆ+ಎನುತ +ನಡೆತಂದ

ಅಚ್ಚರಿ:
(೧) ಹಿಂದಿರಿಸಿ, ಮೋಹರಿಸಿ, ಉರವಣಿಸಿ – ಪ್ರಾಸ ಪದಗಳು

ಪದ್ಯ ೩೮: ದುರ್ಯೋಧನನು ಷಡುರಥರನ್ನು ಹೇಗೆ ಹಂಗಿಸಿದನು?

ಗೆಲಿದರಭಿಮನ್ಯುವನು ತನ್ನವ
ರೆಲವೊ ತಾ ವೀಳೆಯವನೆನುತವೆ
ಮೆಲುನಗೆಯಲತಿರಥರ ಜರೆದನು ಕೌರವರ ರಾಯ
ಬಳಿಕ ಎಡಬಲವಂಕದಲಿ ಮಂ
ಡಲಿಸಿ ಮೋಹರಿಸಿತ್ತು ರಿಪುಬಲ
ಜಲಧಿ ವಡಬನೊಳಾಂತು ತಾಗಿದರಂದು ಷಡುರಥರು (ದ್ರೋಣ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ದುರ್ಯೋಧನನು, ಎಲವೋ ಅಭಿಮನ್ಯುವನ್ನು ಆ ಆರು ಪರಾಕ್ರಮಿಗಳು ಗೆದ್ದರಂತೆ, ಅವರಿಗೆ ವಿಜಯದ ತಾಂಬೂಲವನ್ನು ನೀಡೋಣ ಎಂದು ಹಂಗಿಸಿದನು. ಆಗ ಆರು ಪರಾಕ್ರಮಿಗಳು ಎಡಬಲಗಳಲ್ಲಿ ಬಂದು ಸೇರಿ ಅಭಿಮನ್ಯುವಿನ ಮೇಲೆ ಆಕ್ರಮಣ ಮಾಡಿದರು.

ಅರ್ಥ:
ಗೆಲಿದ: ಜಯಿಸಿದ; ವೀಳೆ: ತಾಂಬೂಲ; ಮೆಲುನಗೆ: ಮಂದಸ್ಮಿತ; ಅತಿರಥ: ಪರಾಕ್ರಮಿ; ಜರೆ: ಬಯ್ಯು; ರಾಯ: ರಾಜ; ಬಳಿಕ: ನಂತರ; ಎಡಬಲ: ಅಕ್ಕಪಕ್ಕ; ಮಂಡಲಿ: ಸಮೂಹ, ಗುಂಪು; ಮೋಹರ: ಯುದ್ಧ; ರಿಪು: ವೈರಿ; ಬಲ: ಸೈನ್ಯ; ಜಲಧಿ: ಸಾಗರ; ವಡಬ: ಸಮುದ್ರದೊಳಗಿರುವ ಬೆಂಕಿ; ತಾಗು: ಮುಟ್ಟು;

ಪದವಿಂಗಡಣೆ:
ಗೆಲಿದರ್+ಅಭಿಮನ್ಯುವನು +ತನ್ನವರ್
ಎಲವೊ +ತಾ +ವೀಳೆಯವನ್+ಎನುತವೆ
ಮೆಲುನಗೆಯಲ್+ಅತಿರಥರ+ ಜರೆದನು +ಕೌರವರ +ರಾಯ
ಬಳಿಕ +ಎಡಬಲವಂಕದಲಿ+ ಮಂ
ಡಲಿಸಿ+ ಮೋಹರಿಸಿತ್ತು +ರಿಪುಬಲ
ಜಲಧಿ+ ವಡಬನೊಳಾಂತು +ತಾಗಿದರಂದು +ಷಡುರಥರು

ಅಚ್ಚರಿ:
(೧) ದುರ್ಯೋಧನನು ಹಂಗಿಸುವ ಪರಿ – ಎಲವೊ ತಾ ವೀಳೆಯವನೆನುತವೆ ಮೆಲುನಗೆಯಲತಿರಥರ ಜರೆದನು ಕೌರವರ ರಾಯ

ಪದ್ಯ ೩: ದ್ರೋಣನು ಎಷ್ಟು ದಿನ ಸೇನಾಧಿಪತಿಯಾಗಿದ್ದ?

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರ ರನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ (ದ್ರೋಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಐದು ದಿವಸಗಳ ಕಾಲ ಯುದ್ಧಮಾಡಿ, ಶತ್ರು ಸೈನ್ಯವನ್ನು ಹೊಡೆದು ಕುಟ್ಟಿ, ವೈರಿರಾಜರನ್ನು ಸಂಹರಿಸಿ ತನ್ನ ಭುಜಬಲವನ್ನು ಮೆರೆದನು. ಆಯುಧದಾರಿಗಳ ಗುರುವಾದ ದ್ರೋಣನು ಆ ಬಳಿಕ ಅಮರಾವತಿಗೆ ಪ್ರಯಾಣ ಮಾಡಿದನು ಎಂದು ಸಂಜಯನು ಹೇಳಲು ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಬಿದ್ದಿತು.

ಅರ್ಥ:
ದಿವಸ: ದಿನ; ಅಹಿತ: ವೈರಿ; ಬಲ: ಸೈನ್ಯ; ಹೊಯ್ದು: ಹೋರಾಡು; ಹೊಡೆ: ಏಟು; ಕುಟ್ಟು: ಅಪ್ಪಳಿಸು; ರಿಪು: ವೈರಿ; ಐದು: ಬಂದುಸೇರು; ದೊರೆ: ರಾಜ; ಇರಿ: ಚುಚ್ಚು; ಮೆರೆ: ಹೊಳೆ; ಭುಜ: ಬಾಹು; ಮಹೋನ್ನತಿ: ಅತಿಶಯ, ಹೆಚ್ಚುಗಾರಿಗೆ; ಕೈದು: ಆಯುಧ; ಗುರು: ಆಚಾರ್ಯ; ಛಡಾಳಿಸು: ಪ್ರಜ್ವಲಿಸು, ಥಳಥಳಿಸು; ಮೈ: ತನು; ತೆಗೆ: ಹೊರತಉ; ನಿರ್ಜರ: ದೇವತೆ; ನಗರ: ಊರು; ಹಾಯ್ದು: ಹಾರು, ಉರಿ: ಬೆಂಕಿ; ಜಠರ: ಹೊಟ್ಟೆ; ಮೋಹರ: ಸೈನ್ಯ, ಯುದ್ಧ; ಅವನಿಪ: ರಾಜ;

ಪದವಿಂಗಡಣೆ:
ಐದು +ದಿವಸದೊಳ್+ಅಹಿತ +ಬಲವನು
ಹೊಯ್ದು +ಹೊಡೆ+ಕುಟ್ಟಾಡಿ +ರಿಪುಗಳೊಳ್
ಐದೆ+ ದೊರೆಗಳನ್+ಇರಿದು +ಮೆರೆದನು +ಭುಜ+ಮಹೋನ್ನತಿಯ
ಕೈದುಕಾರರ+ ಗುರು +ಛಡಾಳಿಸಿ
ಮೈದೆಗೆದು +ನಿರ್ಜರರ+ನಗರಿಗೆ
ಹಾಯ್ದನ್+ಎನಲ್+ಉರಿ+ ಜಠರದಲಿ+ ಮೋಹರಿಸಿತ್+ಅವನಿಪನ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕೈದುಕಾರರ ಗುರು ಛಡಾಳಿಸಿಮೈದೆಗೆದು ನಿರ್ಜರರ ನಗರಿಗೆಹಾಯ್ದನ್
(೨) ಐದು, ಹೊಯ್ದು, ಕೈದು – ಪ್ರಾಸ ಪದಗಳು

ಪದ್ಯ ೬: ಭೀಷ್ಮರು ಕೌರವ ಸೇನಾನಾಯಕರಿಗೆ ಏನು ಹೇಳಿದರು?

ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡವೆ ಯಮಪುರಕೆ ಮೋಹರಿಸಿ ನೀವೆಂದ (ಭೀಷ್ಮ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶತ್ರುವು ನಮ್ಮನ್ನು ಹಿಮ್ಮೆಟ್ಟುವಂತೆ ಮಾಡಲು ಬಿಡುವರೇ? ಶತ್ರುವಿನ ಮೇಲೆ ಆಕ್ರಮಣಮಾಡಿ ಹಿಂದಕ್ಕೆ ಬರುವುದೇ? ಅರ್ಜುನನು ಪರಬಲಕ್ಕೆ ಮೃತ್ಯುವೇ? ಇರಲಿ, ಏನೆಂದರೇನು ಪ್ರಯೋಜನ, ಅರ್ಜುನನನ್ನು ಮತ್ತೆ ಕೆಣಕಿ ನನ್ನ ಕಡೆಗೆ ಬರಲು ಬಿಡದಿದ್ದರೆ ಶತ್ರು ಸೈನ್ಯವನ್ನು ಕಿತ್ತು ಯಮಪುರಕ್ಕೆ ಕಳಿಸುತ್ತೇನೆ, ನೀವೆಲ್ಲರೂ ಸೈನ್ಯ ಸನ್ನದ್ಧರಾಗಿರಿ ಎಂದು ಭೀಷ್ಮರು ಕೌರವ ಸೇನಾನಾಯಕರಿಗೆ ತಿಳಿಸಿದರು.

ಅರ್ಥ:
ಒತ್ತು: ಆಕ್ರಮಿಸು, ಮುತ್ತು; ಹಗೆ: ವೈರ; ಹಜ್ಜೆ: ಪಾದ; ತೆಗೆ: ಹೊರತರು; ಪರಬಲ: ವೈರಿ ಸೈನ್ಯ; ಮೃತ್ಯು: ಸಾವು; ಸಾಕು: ನಿಲ್ಲಿಸು; ಹೋಗು: ತೆರಳು; ಫಲವೇನು: ಪ್ರಯೋಜನವೇನು; ಕೆಣಕು: ರೇಗಿಸು; ಬಿಡು: ತೊರೆ; ವೈರಿ: ಶತ್ರು; ಸೇನೆ: ಸೈನ್ಯ; ಕಿತ್ತು: ಕೀಳು; ಬಿಸುಡು: ಹೊರಹಾಕು; ಯಮ: ಜವ; ಪುರ: ಊರು; ಮೋಹರ: ಯುದ್ಧ;

ಪದವಿಂಗಡಣೆ:
ಒತ್ತುಗೊಡುವರೆ +ಹಗೆಗೆ+ ಹಜ್ಜೆಯನ್
ಇತ್ತು +ತೆಗೆವರೆ+ ಪಾರ್ಥ +ಪರಬಲ
ಮೃತ್ಯುವೇ +ಸಾಕಿನ್ನು +ಹೋಗಲಿಯೆಂದು +ಫಲವೇನು
ಮತ್ತೆ +ಕೆಣಕುವುದ್+ಅರ್ಜುನನ +ನ
ಮ್ಮತ್ತ +ಬಿಡದಿರೆ+ ವೈರಿಸೇನೆಯ
ಕಿತ್ತು +ಬಿಸುಡವೆ+ ಯಮಪುರಕೆ+ ಮೋಹರಿಸಿ+ ನೀವೆಂದ

ಅಚ್ಚರಿ:
(೧) ಒತ್ತು, ಇತ್ತು, ಕಿತ್ತು – ಪ್ರಾಸ ಪದಗಳು
(೨) ಹಗೆ, ವೈರಿ, ಪರಬಲ – ಸಮಾನಾರ್ಥಕ ಪದ
(೩) ಸಾಯಿಸುವೆ ಎಂದು ಹೇಳುವ ಪರಿ – ವೈರಿಸೇನೆಯ ಕಿತ್ತು ಬಿಸುಡವೆ ಯಮಪುರಕೆ

ಪದ್ಯ ೭೮: ಉಪಪಾಂಡವರು ಯುದ್ಧಕ್ಕೆ ಹೇಗೆ ಸಜ್ಜಾದರು?

ಬಂದರಿದಿರೊಳು ಕೌರವರ ಕಡೆ
ನಂದನರ ಕಡೆಯಾವುದೆನೆ ಸಾ
ವಂದದಲಿ ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ
ಎಂದು ತಮ್ಮೊಳು ನೆರೆದು ಸೇನಾ
ವೃಂದ ಸಜ್ಜೋಡಿನಲಿ ಕಾಳಗ
ಕಂದು ಮೋಹರಿಸಿದರು ಹಸ್ತಿನಪುರದ ಬಾಹೆಯಲಿ (ಸಭಾ ಪರ್ವ, ೧೫ ಸಂಧಿ, ೭೮ ಪದ್ಯ)

ತಾತ್ಪರ್ಯ:
ಪಾಂಡವರ ಪರಾಭವದ ಸುದ್ಧಿಯನ್ನು ಕೇಳಿದ ಉಪಪಾಂಡವರು ಯುದ್ಧಕ್ಕೆ ಸನ್ನದ್ಧರಾದರು. ಅವರ ರೋಷಾಗ್ನಿಯು ಹೆಚ್ಚಿತ್ತು, ಕೌರವರು ಇದಿರಾದರೆ ಅವರ ಕಡೆಯವರು ಯಾರು ನಮ್ಮ ಕಡೆಯವರು ಯಾರೆಂಬುದನ್ನು ನೋಡದೆ ಹೊಡೆದಾಡಿ ಅಪ್ಸರೆಯರ ತೋಳಲ್ಲಿರುತ್ತೇವೆಂದು ನಿಶ್ಚಯಿಇ ಸೈನ್ಯವನ್ನು ಸರಿಯಾಗಿ ಜೋಡಿಸಿ ನಗರದ ಹೊರಗೆ ಸಜ್ಜಾಗಿ ನಿಂತರು.

ಅರ್ಥ:
ಬಂದರೆ: ಆಗಮಿಸಿದರೆ; ಇದಿರೊಳು: ಎದುರು; ನಂದನ: ಕುಮಾರ; ಕಡೆ: ಬದಿ, ಭಾಗ; ಸಾವಂದ: ಚೆನ್ನಾಗಿ; ಹೊಯ್ದಾಡು: ಹೋರಾಡು; ಹಿಡಿ: ಬಂಧಿಸು; ಸುರ: ದೇವತೆ, ಅಮರ; ಸೂಳೆ: ವೇಶ್ಯೆ; ನೆರೆ: ಗುಂಪು; ಸೇನಾ: ಸೈನ್ಯ; ವೃಂದ: ಗುಂಪು; ಜೋಡಿ: ಜೊತೆ; ಕಾಳಗ: ಯುದ್ಧ; ಮೋಹರ: ಯುದ್ಧ; ಬಾಹೆ: ಹೊರಗೆ;

ಪದವಿಂಗಡಣೆ:
ಬಂದರ್+ಇದಿರೊಳು +ಕೌರವರ+ ಕಡೆ
ನಂದನರ+ ಕಡೆಯಾವುದೆನೆ+ ಸಾ
ವಂದದಲಿ +ಹೊಯ್ದಾಡಿ +ಹಿಡಿವೆವು+ ಸುರರ+ ಸೂಳೆಯರ
ಎಂದು +ತಮ್ಮೊಳು +ನೆರೆದು +ಸೇನಾ
ವೃಂದ +ಸಜ್ಜೋಡಿನಲಿ+ ಕಾಳಗ
ಕಂದು +ಮೋಹರಿಸಿದರು+ ಹಸ್ತಿನಪುರದ+ ಬಾಹೆಯಲಿ

ಅಚ್ಚರಿ:
(೧) ಸಾಯುತ್ತೇವೆ ಎನ್ನುವ ಪರಿ – ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ