ಪದ್ಯ ೫: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ (ದ್ರೋಣ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ಅರವಟ್ಟಿಗೆಯಲ್ಲಿ ಸಾಗರವನ್ನಿಟ್ಟಾಗ ಅದನ್ನು ಕುಡಿಯಲು ಬಂಡ ವಡಬನಂತೆ, ಶತ್ರುಗಳ ಮುತ್ತಿಗೆಯನ್ನು ಘಟೋತ್ಕಚನು ಲೆಕ್ಕಿಸಲೇ ಇಲ್ಲ. ಮುತ್ತಿದ ವೀರರ ಮುಖಗಳು ಕಪ್ಪಾದವು. ಸೊಗಸಾದ ಕೈಚಳಕದಿಂದ ನಿಮಿಷ ಮಾತ್ರದಲ್ಲಿ ಅನೇಕ ಯೋಧರ ಗುಂಪುಗಳನ್ನು ಎತ್ತಿಹಾಕಿ ಸಂಹರಿಸಿದನು.

ಅರ್ಥ:
ಅಗಡು: ತುಂಟತನ; ದಾನವ: ರಾಕ್ಷಸ; ಕಡ್ಡಿ: ಸಣ್ಣ ಸಿಗುರು, ಚಿಕ್ಕದೇಟು; ಬಗೆ: ಯೋಚಿಸು; ಸಾಗರ: ಸಮುದ್ರ; ಅರವಟ್ಟಿಗೆ: ದಾರಿಹೋಕರಿಗೆ ನೀರು ಪಾನಕ, ಆಹಾರ, ಇತ್ಯಾದಿ ಕೊಡುವ ಸ್ಥಳ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ನೀರು: ಜಲ; ಕುಡಿ: ಪಾನ ಮಾದು; ಹೊಗೆ: ಸುಡು, ದಹಿಸು; ಹೆಚ್ಚು: ಅಧಿಕ; ಆಳು: ಸೈನಿಕ; ನಗೆ: ಹರ್ಷ; ಮೊಗ: ಮುಖ; ಮೋಡ: ಮುಗಿಲು, ಮೇಘ; ಮೋಡಿ: ರೀತಿ, ಶೈಲಿ; ಮಗುಚು: ಹಿಂದಿರುಗಿಸು, ಮರಳಿಸು; ನಿಮಿಷ: ಕ್ಷನ; ಹೇರಾಳ: ಹೆಚ್ಚು; ರಾಶಿ: ಗುಂಪು;

ಪದವಿಂಗಡಣೆ:
ಅಗಡು +ದಾನವನ್+ಇವನು +ಕಡ್ಡಿಗೆ
ಬಗೆವನೇ +ಸಾಗರವನ್+ಅರವ
ಟ್ಟಿಗೆಯನಿಟ್ಟರೆ +ವಡಬನಲ್ಲಾ +ನೀರ +ಕುಡಿವವನು
ಹೊಗೆದುದೈ +ಹೆಚ್ಚಾಳುಗಳ +ನಗೆ
ಮೊಗವು +ಮೋಡಾಮೋಡಿಯಲಿ +ಕೈ
ಮಗುಚಿ +ಕಳೆದನು +ನಿಮಿಷದಲಿ +ಹೇರಾಳ +ರಾಶಿಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಅಗಡು ದಾನವನಿವನು ಕಡ್ಡಿಗೆ ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು

ಪದ್ಯ ೮: ನೋಟಕರೇಕೆ ಹೊಗಳಿದರು?

ಲುಳಿಯ ಪಯಪಾಡುಗಳ ಬವರಿಯ
ಸುಳಿವುಗಳ ಜಾರುಗಳ ಘಾಯದ
ಕಳವುಗಲ ಕೈಮೆಗಳ ಮೋಡಾಮೋಡಿಯುಬ್ಬಣದ
ಲಲಿತ ಚಿತ್ರದ ಚದುರ ಭಟರ
ವ್ವಳಿಸಿ ಹೊಯ್ದಾಡಿದರು ನೋಟಕ
ರುಲಿದುದಿಬ್ಬರ ಶ್ರಮದ ಶೌರ್ಯದ ವೆಗ್ಗಳೆಯತನಕೆ (ದ್ರೋಣ ಪರ್ವ, ೧೪ ಸಂಧಿ, ೮ ಪದ್ಯ
)

ತಾತ್ಪರ್ಯ:
ರಭಸದಿಂದ ಕಾಲನ್ನು ಇಡುತ್ತಾ ಸುತ್ತಿ, ಸುಳಿದು ಜಾರಿ, ಗಾಯವಾಗುವಂತೆ ಕೈಚಳಕದಿಂದ ಕದ್ದು ತಿವಿದು, ವಿವಿಧ ಪಟ್ಟುಗಳನ್ನು ಹಾಕುತ್ತಾ, ಚತುರರಾದ ಇಬ್ಬರೂ ಬಂಧುರವಾಗಿ ಹೋರಾಡುವುದನ್ನು ನೋಡಿ ಅವರಿಬ್ಬರ ಅಭ್ಯಾಸ ಶೌರ್ಯಗಳನ್ನು ನೋಟಕರು ಹೊಗಳಿದರು.

ಅರ್ಥ:
ಲುಳಿ: ರಭಸ, ವೇಗ; ಪಯ: ಕಾಳಗದಲ್ಲಿ ಒಂದು ವರಸೆ, ಯುದ್ಧದಲ್ಲಿ ಹೆಜ್ಜೆ ಹಾಕುವ ಒಂದು ಕ್ರಮ; ಪಾಡು: ರೀತಿ; ಬವರಿ: ತಿರುಗುವುದು; ಸುಳಿವು: ತಿರುಗು, ಕಾಣಿಸಿಕೊಳ್ಳು; ಜಾರು: ನುಣುಚಿಕೊಳ್ಳು; ಘಾಯ: ಪೆಟ್ಟು; ಕಳವು: ಕಾಣೆಯಾಗು; ಕೈಮೆ: ಕೈಚಳಕ, ಹಸ್ತಕೌಶಲ, ನೈಪುಣ್ಯ; ಮೋಡ: ಮುಗಿಲು, ಮೇಘ; ಮೋಡಿ: ರೀತಿ, ಶೈಲಿ; ಉಬ್ಬಣ: ಚೂಪಾದ ಆಯುಧ; ಲಲಿತ: ಚೆಲುವಾದ; ಚಿತ್ರ: ಬರೆದ ಆಕೃತಿ; ಚದುರ: ಜಾಣ, ಬುದ್ಧಿವಂತ; ಭಟ: ಸೈನಿಕ; ಅವ್ವಳಿಸು: ಆರ್ಭಟಿಸು; ಹೊಯ್ದಾಡು: ಹೊಡೆದಾಡು; ನೋಟ: ವೀಕ್ಷಣೆ; ಉಲಿ: ಶಬ್ದ; ಶ್ರಮ: ಆಯಾಸ; ಶೌರ್ಯ: ಪರಾಕ್ರಮ; ವೆಗ್ಗಳ: ಶ್ರೇಷ್ಠತೆ, ಹಿರಿಮೆ;

ಪದವಿಂಗಡಣೆ:
ಲುಳಿಯ +ಪಯ+ಪಾಡುಗಳ +ಬವರಿಯ
ಸುಳಿವುಗಳ +ಜಾರುಗಳ +ಘಾಯದ
ಕಳವುಗಳ +ಕೈಮೆಗಳ +ಮೋಡಾಮೋಡಿ+ಉಬ್ಬಣದ
ಲಲಿತ +ಚಿತ್ರದ +ಚದುರ +ಭಟರ್
ಅವ್ವಳಿಸಿ +ಹೊಯ್ದಾಡಿದರು +ನೋಟಕರ್
ಉಲಿದುದ್+ಇಬ್ಬರ+ ಶ್ರಮದ +ಶೌರ್ಯದ +ವೆಗ್ಗಳೆಯತನಕೆ

ಅಚ್ಚರಿ:
(೧) ಲುಳಿ, ಸುಳಿ – ಪ್ರಾಸ ಪದ
(೨) ಕತ್ತಿವರಸೆಯ ಯುದ್ಧವನ್ನು ವಿವರಿಸಿರುವ ಪರಿ

ಪದ್ಯ ೩: ಸುಗಂಧವು ಹೇಗೆ ಮುನಿಜನರನ್ನು ಮೋಹಿಸಿತು?

ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾ ಮೋಡಿಯಲಿಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ (ಅರಣ್ಯ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಚೆಲುವಾದ ಸೌಗಂಧಿಕ ಪುಷ್ಪದ ಪರಿಮಳವು, ಅದು ಬೆಳೆದ ಸರೋವರದ ತೆರೆಗಳಿಂದೆದ್ದ ನೀರಿನ ತುಂತುರಿನಿಂದಲೂ, ಸದ್ದು ಮಾಡುವ ದುಂಬಿಗಳ ಹಿಂಡುಗಳಿಂದಲೂ ಆಶ್ಚರ್ಯಕರವಾಗಿ ಸಕಲ ಮುನಿಗಳ ಇಂದ್ರಿಯಗಳನ್ನು ಮೋಹಿಸಿತು.

ಅರ್ಥ:
ಸರಸ: ಚೆಲ್ಲಾಟ, ವಿನೋದ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪರಿಮಳ: ಸುಗಂಧ; ಭರ:ಭಾರ, ಹೆಚ್ಚಳ; ಭಾರವಣೆ: ಘನತೆ, ಗೌರವ; ಉರುಬು: ರಭಸ, ವೇಗ; ತಿಳಿ: ನಿರ್ಮಲ, ಶುದ್ಧ; ಎರೆ: ಸುರಿ; ತಿವಿಗುಳಿ: ತಿವಿತ, ಚುಚ್ಚು; ತುಂತುರು: ಸಣ್ಣ ಸಣ್ಣ ಹನಿ; ತುಷಾರ: ಹಿಮ, ಮಂಜು; ಮೊರೆ:ದುಂಬಿಯ ಧ್ವನಿ, ಝೇಂಕಾರ; ಮರಿ: ಚಿಕ್ಕ; ದುಂಬಿ: ಭ್ರಮರ; ಮೋಹರ: ದಂಡು, ಸೈನ್ಯ; ಮೋಡಾಮೋಡಿ: ಆಶ್ಚರ್ಯಕರ; ಆವರಿಸು: ಸುತ್ತು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಸಕಲ: ಎಲ್ಲಾ; ಮುನಿಜನ: ಋಷಿಗಳ ಗುಂಪು; ಒಂದು: ಕೂಡು;

ಪದವಿಂಗಡಣೆ:
ಸರಸ +ಸೌಗಂಧಿಕದ +ಪರಿಮಳ
ಭರದ +ಭಾರವಣೆಯಲಿ +ತಿಳಿಗೊಳನ್
ಉರುಬುದ್+ಎರೆಗಳ +ತಿವಿಗುಳಿನ +ತುಂತುರು +ತುಷಾರದಲಿ
ಮೊರೆದೊಗುವ +ಮರಿದುಂಬಿಗಳ+ ಮೋ
ಹರದ +ಮೋಡಾಮೋಡಿಯಲಿಡ್+
ಆವರಿಸಿತೈದ್+ಇಂದ್ರಿಯದಲ್+ಒಂದಿರೆ+ ಸಕಲ+ ಮುನಿಜನವ

ಅಚ್ಚರಿ:
(೧) ತ ಕಾರದ ಸಾಲು ಪದ – ತಿಳಿಗೊಳನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
(೨) ಮ ಕಾರದ ಸಾಲು ಪದ – ಮೊರೆದೊಗುವ ಮರಿದುಂಬಿಗಳ ಮೋಹರದ ಮೋಡಾ ಮೋಡಿಯಲಿಡಾವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ

ಪದ್ಯ ೯: ಕೌರವ ಸೇನೆಯು ಭೀಮನನ್ನು ಹೇಗೆ ಆವರಿಸಿತು?

ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ (ಕರ್ಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ರಣದುತ್ಸಾಹಿಗಳಾಗಿ ಕರ್ಣದ್ರೋಹಿಯೆಲ್ಲಿ ತೋರಿಸಿ ಎಂದು ಕೂಗುತ್ತಾ ಬಂದು ಎದುರಾಳಿ ಸೈನ್ಯವನ್ನು ಮುತ್ತಿದರು. ಭಲ್ಲೆಹಗಳ ತಿವಿತ, ಎಸೆದ ಚಕ್ರ, ಮುತ್ತುವ ಬಾಣ, ಬೀಸಿದ ಖಡ್ಗಗಳು ಭೀಮನನ್ನು ಮುತ್ತಿದವು.

ಅರ್ಥ:
ಕವಿದು: ಆವರಿಸು; ಗರಿಗಟ್ಟು: ಸಂಭ್ರಮಗೊಳ್ಳು; ನಿವಹ: ಗುಂಪು; ಮೋಡಾಮೋಡಿ: ಆಶ್ಚರ್ಯಕರ; ರಣ: ಯುದ್ಧ; ರಣದವಕಿ: ಯುದ್ಧದಲ್ಲಿ ಉತ್ಸುಕನಾದವ; ದ್ರೋಹಿ: ವೈರಿ; ತೋರು: ಗೋಚರ, ಕಾಣಿಸು; ತಿವಿ: ಚುಚ್ಚು; ಬಲ್ಲೆ:ಈಟಿ; ಚಕ್ರ: ಗಾಲಿ; ಕವಿ: ಮುಚ್ಚು; ಬಾಣ: ಶರ; ಹೊಯ್ವ: ಹೊಡೆಯುವ; ಖಡ್ಗ: ಕತ್ತಿ; ವಿವಿಧ: ಹಲವಾರು; ಬಲ; ಶಕ್ತಿ; ಔಕು: ಒತ್ತು; ಮುತ್ತು: ಆವರಿಸು; ಪವನ: ವಾಯು; ನಂದನ: ಮಗ;

ಪದವಿಂಗಡಣೆ:
ಕವಿದುದಿದು +ಗರಿಗಟ್ಟಿ+ ಕೌರವ
ನಿವಹ +ಮೋಡಾಮೋಡಿಯಲಿ +ರಣ
ದವಕಿ+ ಕರ್ಣ+ದ್ರೋಹಿಯಾವೆಡೆ+ ತೋರು +ತೋರೆನುತ
ತಿವಿವ+ ಬಲ್ಲೆಹದ್+ಇಡುವ +ಚಕ್ರದ
ಕವಿವ +ಬಾಣದ +ಹೊಯ್ವ +ಖಡ್ಗದ
ವಿವಿಧಬಲ+ ಬಿಡದೌಕಿ+ ಮುತ್ತಿತು+ ಪವನ+ನಂದನನ

ಅಚ್ಚರಿ:
(೧) ಉತ್ಸಾಹದ ಮಾತುಗಳು – ತೋರು ತೋರೆನುತ
(೨) ಬಲ್ಲೆಹ, ಚಕ್ರ, ಬಾಣ, ಖಡ್ಗ – ಆಯುಧಗಳ ವಿವರ

ಪದ್ಯ ೪೪: ನಿಡುನೋಟ ಮತ್ತು ನಸುನೋಟಗಳ ಯುದ್ಧ ಹೇಗಿತ್ತು?

ಧರಣಿಪತಿ ಕೇಳಖಿಳ ಪೃಥ್ವೀ
ಶ್ವರರ ಬಹಳಾಸ್ಥಾನದಲಿ ಮೊ
ಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
ಅರಸುಗಳ ನಿಡುನೋಟವಲ್ಲಿಯ
ಗರುವೆಯರ ನಸುನೋಟ ತಮ್ಮೊಳು
ಬೆರೆಸಿ ಹೊಯ್ದಾಡಿದವು ಖಾಡಾಖಾಡಿಯಂದದಲಿ (ಆದಿ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು (ಅಲ್ಲಲ್ಲಿ ಈ ಕಥೆ ಜನಮೇಜಯನಿಗೆ ಹೇಳುತ್ತಿರುವುದು ಎಂದು ಎಚ್ಚರಿಸಲು ಉಪಯೋಗಿಸುವ ಪದಪುಂಜ), ದ್ರೌಪದಿಯ ಸ್ವಯಂವರದ ಮಂಟಪದಲ್ಲಿ ಭೂಮಿಯ ಎಲ್ಲಾ ಪ್ರತಿಷ್ಠಿತ ರಾಜರ ಸಮಾಗಮವಾಗಿತ್ತು, ಅಲ್ಲಿ ದ್ರೌಪದಿಯ ಸಖೀಸೈನ್ಯ ಮುಂದೆಬರಲು, ಆ ಸೌಂದರ್ಯವತಿಯರನ್ನು ರಾಜರು ನೆಟ್ಟದೃಷ್ಟಿಯನ್ನು ಕದಲದೆ ಅವರನ್ನೇ ನೋಡುತ್ತಿದ್ದರು, ಸಖಿಯರು ಕೂಡ ರಾಜರನ್ನು ಕೊಂಚ ಸಮಯಕ್ಕೆ ನೋಡಿ ಮತ್ತೆ ಮತ್ತೊಬ್ಬ ರಾಜನ ನೋಟಕ್ಕೆ ದೃಷ್ಟಿ ಸೇರಿಸಿ ದೃಷ್ಟಿ ಯುದ್ಧವಾಗುತ್ತಿತ್ತು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಕೇಳು: ಆಲಿಸು; ಅಖಿಳ: ಎಲ್ಲಾ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಬಹಳ: ತುಂಬ; ಆಸ್ಥಾನ: ದರ್ಬಾರು, ರಾಜ ಸಭೆ; ಮೊಹರು: ಮುದ್ರೆ, ಶಿಕ್ಕಾ; ಮೋಹನ: ಆಕರ್ಷಣೆ, ಸುಂದರವಾದ; ಮೋಡಾಮೋಡಿ: ಸೊಗಸಾದ ರೀತಿ, ಕೈಚಳಕ; ಅಬಲೆ: ಹುಡುಗಿ; ಅರಸು: ರಾಜ; ನಿಡುನೋಟ: ನೀಳವಾದ ನೋಟ; ಗರುವೆ: ಚೆಲುವೆ, ಸೊಗಸುಗಾತಿ; ನಸುನೋಟ: ಕೊಂಚ ನೋಟ; ಬೆರೆಸಿ:ಕಲಸಿ; ಹೊಯ್ದಾಡು: ಕಿತಾಡು; ಖಾಡಾಖಾಡಿ: ಖಂಡಿತವಾದುದು, ಸ್ಪಷ್ಟವಾದುದು;

ಪದವಿಂಗಡಣೆ:
ಧರಣಿಪತಿ+ ಕೇಳ್+ಅಖಿಳ +ಪೃಥ್ವೀ
ಶ್ವರರ +ಬಹಳ್+ಆಸ್ಥಾನದಲಿ+ ಮೊ
ಹರಿಸಿದರು+ ಮೋಹನದ +ಮೋಡಾಮೋಡಿಯ+ಅಬಲೆಯರು
ಅರಸುಗಳ+ ನಿಡುನೋಟವ್+ಅಲ್ಲಿಯ
ಗರುವೆಯರ +ನಸುನೋಟ +ತಮ್ಮೊಳು
ಬೆರೆಸಿ+ ಹೊಯ್ದಾಡಿದವು +ಖಾಡಾಖಾಡಿ+ಯಂದದಲಿ

ಅಚ್ಚರಿ:
(೧) ಧರಣಿಪತಿ, ಪೃಥ್ವೀಶ್ವರ, ಅರಸು; ಅಬಲೆ, ಗರುವೆ – ಸಮಾನಾರ್ಥಕ ಪದ
(೨) “ಮೊ” ಕಾರದ ತ್ರಿವಳಿ ಪದ – ಮೊಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
(೩) ನಿಡುನೋಟ, ನಸುನೋಟ – ನೋಟದ ಬಗೆ, ನೀಳವಾದ ನೋಟ, ಕೊಂಚ (ಸ್ವಲ್ಪ) ನೋಟ
(೪) ಮೋಡಾಮೋಡಿ, ಖಾಡಾಖಾಡಿ – ಪದಗಳ ಬಳಕೆ
(೫) ೧ ಸಾಲಿನ ಮೊದಲ ಮತ್ತು ಕೊನೆಯ ಪದ ಭೂಮಿ ಅರ್ಥವನ್ನು ಕೊಡುವ ಪದಗಳು