ಪದ್ಯ ೮: ಅರಮನೆಯ ದುಃಖವು ಯಾವ ನಗವರನ್ನು ಆವರಿಸಿತು?

ಎನಲು ಬಿದ್ದನು ನೆಲಕೆ ಸಿಂಹಾ
ಸನದಿನಾ ಮುನಿವಚನಶರ ಮರು
ಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ
ಜನಪನಿರೆ ಗಾಂಧಾರಿ ನೃಪ ಮಾ
ನಿನಿಯರೊರಲಿತು ರಾಜಗೃಹ ರೋ
ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ (ಗದಾ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ವ್ಯಾಸ ಮುನಿಗಳು ಈ ರೀತಿ ನುಡಿದೊಡೆ ದುಃಖದಿಂದ ಧೃತರಾಷ್ಟ್ರನು ಸಿಂಹಾಸನದಿಂದ ನೆಲಕ್ಕೆ ಬಿದ್ದನು. ಮೊದಲೇ ಆದ ನೋವಿಗೆ ವ್ಯಾಸರ ವಚನ ಬಾಣವು ಮತ್ತೆ ಚುಚ್ಚಿ, ಮೂರ್ಛೆ ಹೋಗಲು, ಗಾಂಧಾರಿಯೂ ರಾಣೀವಾಸದವರೂ ಒರಲಿಕೊಂಡರು. ಆ ರೋದನವು ಅರಮನೆಯನ್ನು ತುಂಬಿ ಹೊರಬಿದ್ದು ಇಡೀ ಹಸ್ತಿನಾಪುರವನ್ನೇ ತುಂಬಿತು.

ಅರ್ಥ:
ಬಿದ್ದು: ಜಾರು; ನೆಲ: ಭೂಮಿ; ಸಿಂಹಾಸನ: ರಾಜನು ಕೂರುವ ಸ್ಥಳ, ಭದ್ರಾಸನ; ಮುನಿ: ಋಷಿ; ವಚನ: ಮಾತು; ಮರು: ಎರಡನೆಯ, ದ್ವಿತೀಯ; ಮೊನೆ: ತುದಿ; ಬಂದು: ಆಗಮಿಸು; ಬಹಳ: ತುಂಬ; ಮೂರ್ಛೆ: ಎಚ್ಚರ ತಪ್ಪಿದ ಸ್ಥಿತಿ; ವಶ್ಯ: ಅಧೀನಗೊಳಿಸಬಹುದಾದ; ಅಪಾರ: ದೊಡ್ಡ; ಜನಪ: ರಾಜ; ನೃಪ: ರಾಜ; ಮಾನಿನಿ: ಹೆಣ್ಣು; ಒರಲು: ಅರಚು, ಕೂಗಿಕೊಳ್ಳು; ರಾಜಗೃಹ: ಅರಮನೆ; ರೋದನ: ದುಃಖ; ಧ್ವನಿ: ರವ; ಮೀರಿ: ಹೆಚ್ಚಾಗು; ಮೊಗೆ: ಬಾಚು, ತುಂಬು;

ಪದವಿಂಗಡಣೆ:
ಎನಲು +ಬಿದ್ದನು +ನೆಲಕೆ +ಸಿಂಹಾ
ಸನದಿನ್+ಆ+ ಮುನಿ+ವಚನ+ಶರ +ಮರು
ಮೊನೆಗೆ +ಬಂದುದು+ ಬಹಳ +ಮೂರ್ಛ+ಅಪಾರವಶ್ಯದಲಿ
ಜನಪನಿರೆ +ಗಾಂಧಾರಿ +ನೃಪ+ ಮಾ
ನಿನಿಯರ್+ಒರಲಿತು +ರಾಜಗೃಹ +ರೋ
ದನ +ಮಹಾಧ್ವನಿ+ ಮೀರಿ +ಮೊಗೆದುದು +ಹಸ್ತಿನಾಪುರವ

ಅಚ್ಚರಿ:
(೧) ರೂಪಕದ ಪ್ರಯೋಗ – ಮುನಿವಚನಶರ ಮರುಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ

ಪದ್ಯ ೨: ಸರೋವರದಲ್ಲಿ ಯಾವ ರೀತಿ ತಳಮಳವಾಯಿತು?

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು (ಗದಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಮಹಾ ಶಬ್ದಕ್ಕೆ ಸರೋವರದ ತಲದ ಮಳಲು ಮೇಲೆದ್ದು ನೀರು ಕದಡಿತು. ಜಲಚರಕಗಳು ವೈರವನ್ನು ಮರೆತು ಒಟ್ಟಾಗಿ ಮೇಲಕ್ಕೆ ನೆಗೆದವು. ಕಮಲಪುಷ್ಪಗಳಲ್ಲಿದ್ದ ದುಂಬಿಗಳು ಬೆದರಿ ಅಲ್ಲಿಯೇ ಅಡಗಿಕೊಂಡವು. ಹಂಸಗಳು ಹಾರಿಹೋದವು. ಚಕ್ರವಾಕ ಪಕ್ಷಿಗಳು ಜಾರಿಕೊಂಡು ಆಚೆಗೆ ಹೋದವು.

ಅರ್ಥ:
ತಳಮಳ: ಗೊಂದಲ; ಮೊಗೆ: ಹೊರಹಾಕು; ಕದಡು: ಬಗ್ಗಡ, ರಾಡಿ, ಕಲಕಿದ ದ್ರವ; ಕೊಳ: ಸರೋವರ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ನಿಚಯ: ಗುಂಪು; ಬೊಬ್ಬುಳಿ: ನೀರುಗುಳ್ಳೆ; ಉಬ್ಬು: ಅತಿಶಯ, ಹೆಚ್ಚಾಗು; ನೆಗೆ: ಜಿಗಿ; ವಿಗತ: ಮರೆತ; ವೈರ: ಶತ್ರು, ಹಗೆತನ; ದಳ: ಸೈನ್ಯ; ಬಿಗಿ: ಗಟ್ಟಿ,ದೃಢ; ಅಂಬುಜ: ತಾವರೆ; ಅಡಗು: ಬಚ್ಚಿಟ್ಟುಕೊಳ್ಳು; ಅಳಿ: ದುಂಬಿ; ನಿಕರ: ಗುಂಪು; ಹಾರು: ಲಂಘಿಸು; ಹಂಸ: ಮರಾಲ; ಜವಾಯಿಲತನ: ವೇಗ, ಕ್ಷಿಪ್ರತೆ; ಜಗುಳು: ಜಾರು, ಸಡಿಲವಾಗು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಆವಳಿ: ಗುಂಪು;

ಪದವಿಂಗಡಣೆ:
ತಳಮಳಲ +ಮೊಗೆಮೊಗೆದು +ಕದಡಿತು
ಕೊಳನ +ಜಲಚರ+ನಿಚಯವ್+ಈ+ ಬೊ
ಬ್ಬುಳಿಕೆ +ಮಿಗಲೊಬ್ಬುಳಿಕೆ+ ನೆಗೆದವು+ ವಿಗತ+ ವೈರದಲಿ
ದಳವ +ಬಿಗಿದ್+ಅಂಬುಜದೊಳ್+ಅಡಗಿದವ್
ಅಳಿ+ನಿಕರ +ಹಾರಿದವು +ಹಂಸಾ
ವಳಿ +ಜವಾಯಿಲತನದಿ +ಜಗುಳ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧) ನಿಕರ, ನಿಚಯ, ಆವಳಿ – ಸಮಾನಾರ್ಥಕ ಪದ
(೨) ಜ ಕಾರದ ತ್ರಿವಳಿ ಪದ – ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು

ಪದ್ಯ ೨೫: ಶಕುನಿಯ ಸೈನ್ಯವನ್ನು ಯಾರು ನಾಶಮಾಡಿದರು?

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ (ಗದಾ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮ ಸುದರ್ಶನನ ಮಾಂಸಖಂಡಗಳನ್ನು ತರಿದು ಕೊಂದನು. ನಕುಲನು ಇಪ್ಪತ್ತೈದು ಬಾಣಗಳಿಂದ ಉಲೂಕನನ್ನು ಸಂಹರಿಸಿದನು. ಸಹದೇವನು ಬಾಣಗಳ ಮೊಳಗಿನಿಂದ ಶಕುನಿಯ ಸೈನ್ಯವನ್ನು ಚಚ್ಚಿ ಸಂಹರಿಸಿದನು.

ಅರ್ಥ:
ಕೆಡಹು: ಬೀಳಿಸು; ತಮ್ಮ: ಸಹೋದರ; ಅಡಗು: ಮಾಂಸ; ಉದರು: ಹರಡು; ಉಳೂಕ: ಗೂಬೆ; ಕಡಿ: ಸೀಲು; ಬಿಸುಟು: ಹೊರಹಾಕು; ಬಾಣ: ಅಂಬು, ಶರ; ತುಡುಕು: ಹೋರಾಡು, ಸೆಣಸು; ಅಂಬು: ಬಾಣ; ಗಡಣ: ಗುಂಪು; ಸೌಬಲ: ಶಕುನಿ; ಸೇನೆ: ಸೈನ್ಯ; ಕಡಲ: ಸಾಗರ; ಮೊಗೆ: ತುಂಬಿಕೊಳ್ಳು, ಬಾಚು; ಮೋದು: ಪೆಟ್ಟು, ಹೊಡೆತ; ಶರಜಾಲ: ಬಾಣಗಳ ಗುಂಪು; ಝಂಕಿಸು: ಆರ್ಭಟಿಸು;

ಪದವಿಂಗಡಣೆ:
ಕೆಡಹಿ+ ದುರ್ಯೋಧನನ +ತಮ್ಮನನ್
ಅಡಗ್+ಉದರಿ +ಮಾಡಿದನ್+ಉಳೂಕನ
ಕಡಿದು +ಬಿಸುಟನು +ನಕುಲನ್+ಇಪ್ಪತ್ತೈದು +ಬಾಣದಲಿ
ತುಡುಕಿದನು +ಸಹದೇವನ್+ಅಂಬಿನ
ಗಡಣದಲಿ +ಸೌಬಲನ +ಸೇನೆಯ
ಕಡಲ +ಮೊಗೆದನು +ಮೋದಿದನು +ಶರಜಾಲ +ಝಂಕೃತಿಯ

ಅಚ್ಚರಿ:
(೧) ರೌದ್ರತೆಯ ವರ್ಣನೆ – ಕೆಡಹಿ ದುರ್ಯೋಧನನ ತಮ್ಮನನಡಗುದರಿ ಮಾಡಿದನು

ಪದ್ಯ ೨೩: ಧರ್ಮಜನು ಯಾವ ಅಪ್ಪಣೆಯನ್ನು ನೀಡಿದನು?

ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಲ್ಯನು ಬಂಗಾರದ ರಥವನ್ನು ತರಿಸಿ ಸಜ್ಜು ಮಾಡಿಸಿ, ಧ್ವಜವನ್ನು ಮೇಲೆ ಹಾರಿಸಿದನು. ಬಾಣಗಳು ತುಮ್ಬಿದ ಬಂಡಿಗಳನ್ನು ರಥದ ಮಗ್ಗುಲಿಗೆ ಒಪ್ಪ್ವಾಗಿ ಜೋಡಿಸಿದನು. ಬಿರುದನ್ನು ಹೊಗಳುವ ಪಾಠಕರಿಗೆ ರತ್ನಗಳನ್ನೂ, ಬಂಗಾರವನ್ನೂ ಕೊಟ್ಟು ಉತ್ಸಾಹದಿಂದುಬ್ಬಿ, ಧರ್ಮಜನನ್ನು ಯುದ್ಧಕ್ಕೆ ಕರೆಯಿರಿ ಎಂದಪ್ಪಣೆ ನೀಡಿದನು.

ಅರ್ಥ:
ತರಿಸು: ಬರೆಮಾಡು; ಕಾಂಚನ: ಹೊನ್ನು, ಚಿನ್ನ; ರಥ: ಬಂಡಿ; ಸಂವರಿಸು: ಸಂಗ್ರಹಿಸು; ಟೆಕ್ಕೆ:ಬಾವುಟ, ಧ್ವಜ; ಸರಳ: ಬಾಣ; ತುಂಬು: ಪೂರ್ಣವಾದ; ಬಂಡಿ: ರಥ; ಕೆಲಬಲ: ಅಕ್ಕಪಕ್ಕ; ಜೋಡಿಸು: ಕೂಡಿಸು; ಬಿರುದು: ಗೌರವ ಸೂಚಕ ಪದ; ಒದರು: ಹೊರಹಾಕು, ಹೇಳು; ಪಾಠಕ: ಹೊಗಳುಭಟ್ಟ; ಮೋಹರ: ಯುದ್ಧ; ಮಣಿ: ಬೆಲೆಬಾಳುವ ರತ್ನ; ಮೊಗೆ: ಹೊರಹಾಕು, ಹೊರಹೊಮ್ಮಿಸು; ಅರರೆ: ಅಶ್ಚರ್ಯ ಸೂಚಕ ಪದ; ಕರೆ: ಬರೆಮಾಡು; ಉಬ್ಬು: ಹಿಗ್ಗು, ಗರ್ವಿಸು;

ಪದವಿಂಗಡಣೆ:
ತರಿಸಿ +ಕಾಂಚನಮಯ +ರಥವ+ ಸಂ
ವರಿಸಿದನು +ಟೆಕ್ಕೆಯವನ್+ಎತ್ತಿಸಿ
ಸರಳ+ ತುಂಬಿದ +ಬಂಡಿಗಳ +ಕೆಲಬಲಕೆ +ಜೋಡಿಸಿದ
ಬಿರುದನ್+ಒದರುವ +ಪಾಠಕರ+ ಮೋ
ಹರಕೆ+ ಮಣಿ+ಕಾಂಚನವ +ಮೊಗೆದಿತ್ತ್
ಅರರೆ +ಕರೆಯೋ +ಧರ್ಮಜನನ್+ಎಂದುಬ್ಬಿದನು+ ಶಲ್ಯ

ಅಚ್ಚರಿ:
(೧) ಹೊಗಳುಭಟ್ಟರ ಕೆಲಸವನ್ನು ಹೇಳುವ ಪರಿ – ಬಿರುದನೊದರುವ ಪಾಠಕರ

ಪದ್ಯ ೧೦: ವೈರಿ ಸೈನ್ಯವನ್ನು ಹೇಗೆ ನಿರ್ನಾಮ ಮಾಡಿದರು?

ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ (ಶಲ್ಯ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಬತ್ತು ಹೋಗುತ್ತಿದ್ದ ಸಮಯದಲ್ಲಿ, ನಿನ್ನ ಮಗ ಬಹಳ ಶೌರ್ಯದಿಂದ ಮುನ್ನುಗ್ಗಿದನು. ಐವತ್ತು ಸಾವಿರ ಕುದುರೆಗಳೊಡನೆ ಶಕುನಿಯು ಯುದ್ಧಕ್ಕೆ ಮುಂದಾದನು. ಆಯುಧಗಳನ್ನು ಹಿಡಿದು ಆನೆಗಳ ಮೇಲೆ ಬರುತ್ತಿದ್ದ ಸೈನಿಕರು ಕೈ ಸನ್ನೆ ಕೊಡುವ ಮೊದಲೇ ವೈರಿ ಸೈನ್ಯವನ್ನು ನಿರ್ನಾಮ ಮಾಡಿದವು.

ಅರ್ಥ:
ಸಮಯ: ಕಾಲ; ಬಹಳ: ತುಂಬ; ಶೌರ್ಯ: ಪರಾಕ್ರಮ; ಆವೇಶ: ರೋಷ; ನೂಕು: ತಳ್ಳು; ಸಾವಿರ: ಸಹಸ್ರ; ತುರಗ: ಕುದುರೆ; ದಳ: ಗುಂಪು; ಸಹಿತ: ಜೊತೆ; ಕೇಸುರಿ: ಕೆಂಪು ಉರಿ; ಕರ್ಬೊಗೆ: ಕಪ್ಪಾದ ಧೂಮ; ನಿಟ್ಟಾಸಿ: ಭಯಂಕರವಾದ; ಆಯುಧ: ಶಸ್ತ್ರ; ಆನೆ: ಕರಿ, ಗಜ; ಕೈವೀಸು: ಕೈ ಸನ್ನೆಮಾಡು; ಮುನ್ನ: ಮುಂಚೆ; ಮೊಗೆ:ನುಂಗು, ಕಬಳಿಸು; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ಆ +ಸಮಯದಲಿ +ಬಹಳ +ಶೌರ್ಯ
ಆವೇಶದಲಿ +ನಿನ್ನಾತ +ನೂಕಿದನ್
ಆ+ ಶಕುನಿ+ಐವತ್ತು +ಸಾವಿರ +ತುರಗದಳ +ಸಹಿತ
ಕೇಸುರಿಯ +ಕರ್ಬೊಗೆಯವೊಲು +ನಿ
ಟ್ಟಾಸಿನ್+ಆಯುಧದ್+ಆನೆಗಳು +ಕೈ
ವೀಸುವಲ್ಲಿಂ +ಮುನ್ನ +ಮೊಗೆದುವು +ವೈರಿ+ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೇಸುರಿಯ ಕರ್ಬೊಗೆಯವೊಲು

ಪದ್ಯ ೫: ಅಶ್ವತ್ಥಾಮ ಮತ್ತು ಅರ್ಜುನರ ಯುದ್ಧದ ತೀವ್ರತೆ ಹೇಗಿತ್ತು?

ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದವು ಗುರುಸುತನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿ ಬಿಟ್ಟ ಬಾಣಗಳನ್ನು ಅರ್ಜುನನು ಮೊಗೆದು ಹಾಕಿದನು. ಅಶ್ವತ್ಥಾಮನ ಬಾಣಗಳು ಅರ್ಜುನನನ್ನು ಬಂಧಿಸಿದವು. ಕಿಡಿಗಳನ್ನು ತಗಡಿನಂತೆ ಸೂಸುತ್ತಾ, ಉರಿಯ ಧಾರೆಗಳನ್ನುಗುಳುತ್ತಾ ಅರ್ಜುನನ ಘೃತಲೇಪನದ ಅಂಬುಗಳು ಅಶ್ವತ್ಥಾಮನ ಬಾಣಗಳನ್ನು ಮುಚ್ಚಿಹಾಕಿದನು.

ಅರ್ಥ:
ಮೊಗೆ: ನುಂಗು, ಕಬಳಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬಿಗಿ: ಬಂಧಿಸು; ಶರಜಾಲ: ಬಾಣಗಳ ಗುಂಪು; ತಗಡು: ದಟ್ಟಣೆ, ಸಾಂದ್ರತೆ; ಕಿಡಿ: ಬೆಂಕಿ; ಸೂಸು: ಹೊರಹೊಮ್ಮು; ಧಾರೆ: ಮಳೆ; ಘೃತ: ತುಪ್ಪ; ಲೇಪನ: ಬಳಿಯುವಿಕೆ, ಹಚ್ಚುವಿಕೆ; ಬಂಧ: ಕಟ್ಟು; ಹೊಗರು: ಕಾಂತಿ, ಪ್ರಕಾಶ; ಹೂಳು: ಮುಚ್ಚು; ಅಂಬುಧಿ: ಸಾಗರ;

ಪದವಿಂಗಡಣೆ:
ಮೊಗೆದವ್+ಅಶ್ವತ್ಥಾಮನ್+ಎಚ್ಚ್
ಅಂಬುಗಳನ್+ಅರ್ಜುನನ್+ಅಂಬು +ಪಾರ್ಥನ
ಬಿಗಿದವಾ +ನಿಮಿಷದಲಿ +ಭಾರದ್ವಾಜ +ಶರಜಾಲ
ತಗಡು+ಕಿಡಿಗಳ +ಸೂಸು+ಉರಿ+ಧಾ
ರೆಗಳ+ ಘೃತ+ಲೇಪನದ +ಬಂಧದ
ಹೊಗರುಗಣೆ +ಹೂಳಿದವು +ಗುರುಸುತನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಅಂಬು ಪದದ ಬಳಕೆ – ಗುರುಸುತನಂಬಿನಂಬುಧಿಯ
(೨) ಉಪಮಾನದ ಪ್ರಯೋಗ – ತಗಡುಗಿಡಿಗಳ ಸೂಸುವುರಿಧಾರೆಗಳ ಘೃತಲೇಪನದ ಬಂಧದ ಹೊಗರುಗಣೆ ಹೂಳಿದವು

ಪದ್ಯ ೬೪: ದ್ರೋಣನು ಸೇನೆಯ ಮೇಲೆ ಹೇಗೆ ಎಗರಿದನು?

ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಮ್ತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ (ದ್ರೋಣ ಪರ್ವ, ೧೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದ್ರೋಣನು ಬಿಲ್ಲನ್ನು ಹಿಡಿದು ಹೆದೆಗೆ ಬಾನವನ್ನೇರಿಸಿ ಶತ್ರುಸೇನೆಗೆ ಇದಿರಾದನು. ಬಲೆ ಹರಿದ ಮೃಗ ಹೊರಬಂದು ಇಕ್ಕಟ್ಟಾದ ಗುಂಡಿಯಲ್ಲಿ ಬಿದ್ದಂತೆ ಯುದ್ಧತಾಮಸದಿಂದ ಮತಿಗೆಟ್ಟನು. ಮುನಿಗಳು ಬಂದು ಬೋಧಿಸಿ ಹೋದರೂ, ಜ್ಞಾನವನ್ನು ಮರೆವು ಆವರಿಸಲು ಪಾಂಡವ ಸೈನ್ಯ ಸಾಗರವನ್ನು ಸಂಹರಿಸಲು ಆರಂಭಿಸಿದನು.

ಅರ್ಥ:
ದುಡುಕು: ಆಲೋಚನೆ ಮಾಡದೆ ಮುನ್ನುಗ್ಗುವುದು; ಬಲು: ಹೆಚ್ಚು; ಸರಳ: ಬಾಣ; ಮಲೆತ: ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ; ಮಾರ್ಬಲ: ಶತ್ರು ಸೈನ್ಯ; ಬಲೆ: ಜಾಲ; ಕಳಚು: ಬೇರ್ಪಡಿಸು; ಮೃಗ: ಪ್ರಾಣಿ; ಬಿದ್ದು: ಬೀಳು; ಇರುಬು: ಇಕ್ಕಟ್ಟು ; ಕುಳಿ: ಗುಂಡಿ, ಗುಣಿ, ಹಳ್ಳ; ಮುನಿ: ಋಷಿ; ತಿಳಿವು: ಅರಿವು; ತೊಟ್ಟು: ಮೊದಲಾಗಿ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಮೊಗೆ: ಮಣ್ಣಿನ ಗಡಿಗೆ; ಸಾಗರ: ಸಮುದ್ರ;

ಪದವಿಂಗಡಣೆ:
ಬಿಲುದುಡುಕಿ +ಬಲುಸರಳ +ತಿರುವಾಯ್
ಗೊಳಿಸಿ +ಮಲೆತನು +ಮಾರ್ಬಲಕೆ +ಬಲೆ
ಕಳಚಿದರೆ+ ಮೃಗ +ಬಿದ್ದುದ್+ಇರುಬಿನ+ ಕುಳಿಯೊಳೆಂಬಂತೆ
ತಿಳುಹಿ +ಹೋದರು +ಮುನಿಗಳ್+ಈತನ
ತಿಳಿವು +ತೊಟ್ಟುದು +ಮರವೆಯನು+ ಮುಂ
ಕೊಳಿಸಿ +ಮೊಗೆದನು +ಮತ್ತೆ +ಪಾಂಡವ+ಸೈನ್ಯ+ಸಾಗರವ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮರವೆಯನು ಮುಂಕೊಳಿಸಿ ಮೊಗೆದನು ಮತ್ತೆ

ಪದ್ಯ ೬೪: ರಣರಂಗವು ಹೇಗೆ ತೋರಿತು?

ಉರು ತಿಮಿಂಗಿಳನಬುಧಿಯಲಿ ಡಾ
ವರಿಸುವುದು ಹುಲುಮೀನಿನಂತಿರ
ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ
ಅರಿದ ಕೊರಳಿನ ಬಸಿವ ಬಂಬಲು
ಗರುಳ ಜರಿವ ಕಪಾಲದೊಗುನೆ
ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ (ದ್ರೋಣ ಪರ್ವ, ೧೫ ಸಂಧಿ, ೬೪ ಪದ್ಯ)

ತಾತ್ಪರ್ಯ:
ತಿಮಿಂಗಿಲವು ಸಮುದ್ರದಲ್ಲಿ ರಭಸದಿಂದ ಚಲಿಸಿ ಮೀನುಗಳನ್ನು ನುಂಗುತ್ತದೆ. ಕೌರವ ಪಕ್ಷದ ದೈತ್ಯರು ಹುಲು ಮೀನುಗಳಿದ್ದಂತೆ. ಅವರನ್ನು ಘಟೋತ್ಕಚನು ಸಮೂಲವಾಗಿ ಧಟ್ಟಿಸಿದನು. ಕತ್ತರಿಸಿದ ಕೊರಳು, ಜೋಲುವ ಕರುಳು, ಕಡಿದು ಬಿದ್ದ ಕಪಾಲಗಳು ಇವುಗಳಿಂದ ರಕ್ತ ಸುರಿದು ರಣರಂಗವು ರೌದ್ರರಸವನ್ನು ತೋರಿತು.

ಅರ್ಥ:
ಉರು: ವಿಶೇಷವಾದ; ಅಬುಧಿ: ಸಾಗರ; ಡಾವರಿಸು: ಸುತ್ತು, ತಿರುಗಾಡು; ಹುಲು: ಕ್ಷುದ್ರ, ಅಲ್ಪ; ಮೀನು: ಮತ್ಸ್ಯ; ಅರಸ: ರಾಜ; ಹೇಳು: ತಿಳಿಸ್; ಮೊಗೆ: ಮಣ್ಣಿನ ಗಡಿಗೆ; ದೈತ್ಯ: ರಾಕ್ಷಸ; ಜಲನಿಧಿ: ಸಾಗರ; ಅರಿ: ಸೀಳು; ಕೊರಳು: ಕಂಠ; ಬಸಿ: ಒಸರು, ಸ್ರವಿಸು; ಬಂಬಲು: ರಾಶಿ; ಕರುಳು: ಪಚನಾಂಗ; ಜರಿ: ತಿರಸ್ಕರಿಸು; ಕಪಾಲ: ಕೆನ್ನೆ; ನೆತ್ತರ: ರಕ್ತ; ರಣ: ಯುದ್ಧರಂಗ; ಅವನಿ: ಭೂಮಿ; ಕರೆವು: ಬರೆಮಾಡು; ರೌದ್ರ: ಭಯಂಕರ; ರಸ: ಸಾರ;

ಪದವಿಂಗಡಣೆ:
ಉರು +ತಿಮಿಂಗಿಳನ್+ಅಬುಧಿಯಲಿ+ ಡಾ
ವರಿಸುವುದು +ಹುಲು+ಮೀನಿನಂತಿರಲ್
ಅರಸ +ಹೇಳುವುದೇನು +ಮೊಗೆದನು +ದೈತ್ಯ +ಜಲನಿಧಿಯ
ಅರಿದ+ ಕೊರಳಿನ+ ಬಸಿವ +ಬಂಬಲು
ಕರುಳ +ಜರಿವ +ಕಪಾಲದೊಗುನ್
ಎತ್ತರ +ರಣ+ಅವನಿ +ಕರೆವುತಿರ್ದುದು +ರೌದ್ರಮಯ+ರಸವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರು ತಿಮಿಂಗಿಳನಬುಧಿಯಲಿ ಡಾವರಿಸುವುದು ಹುಲುಮೀನಿನಂತಿರ
(೨) ಅಬುಧಿ, ಜಲನಿಧಿ – ಸಮಾನಾರ್ಥಕ ಪದ

ಪದ್ಯ ೨೫: ಭೀಮನು ಯಾರ ಮೇಲೆ ಕೋಪಗೊಂಡನು?

ಮನ್ನಣೆಗೆ ಹಿರಿಯಯ್ಯನೆಂದಾ
ನಿನ್ನು ಬೆಗೆವೆನೆ ಜವನಗಂಟಲ
ಮುನ್ನ ತಿರುಹುವೆನೆನುತ ಕಿಡಿಕಿಡಿಯೋದನಾ ಭೀಮ
ಇನ್ನೊದರಿ ಫಲವೇನು ಕುಡಿವೆನು
ಮುನ್ನಜಲವನು ಬಳಿಕ ನೋಡುವೆ
ನೆನ್ನವರ ಮಾರ್ಗವನೆನುತ ಮೊಗೆದನು ವಿಷೋದಕವ (ಅರಣ್ಯ ಪರ್ವ, ೨೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ದೊಡ್ಡಪ್ಪನೆಂದು ನಾನು ಯಮನನ್ನು ಇನ್ನು ಗೌರವಿಸುವುದಿಲ್ಲ. ಅವನ ಕತ್ತನ್ನು ತಿರುವಿ ಹಿಂಡುತ್ತೇನೆ, ಎಂದು ಭೀಮನು ಕಿಡಿಕಿಡಿಯಾಗಿ ಒದರಿ, ಬಳಿಕ ಸುಮ್ಮನೆ ಒದರಿದರೇನು ಬಂತು, ಮೊದಲು ನೀರನ್ನು ಕುಡಿದು, ಬಳಿಕ, ತಮ್ಮಂದಿರ ದಾರಿಯನ್ನು ನೋಡುತ್ತೇನೆ ಎಂದುಕೊಂಡು ಸರೋವರದ ವಿಷಜಲವನ್ನು ಬೊಗಸೆಯಲ್ಲಿ ತೆಗೆದುಕೊಂಡನು.

ಅರ್ಥ:
ಮನ್ನಣೆ: ಗೌರವ; ಹಿರಿ: ದೊಡ್ಡವ; ಅಯ್ಯ: ತಂದೆ; ಬಗೆ:ಆಲೋಚನೆ, ಯೋಚನೆ; ಜವ: ಯಮ; ಗಂಟಲು: ಕತ್ತು; ಮುನ್ನ: ಮೊದಲು; ತಿರುಹುವೆ: ತಿರುಗಿಸು; ಕಿಡಿ: ಬೆಂಕಿಯ ಜ್ವಾಲೆ, ಕೋಪ; ಒದರು: ಕೂಗು, ಗರ್ಜಿಸು; ಫಲ: ಪ್ರಯೋಜನ; ಕುಡಿ: ಪಾನಮಾದು; ಮುನ್ನ: ಮೊದಲು; ಜಲ: ನೀರು; ಬಳಿಕ: ನಂತರ; ನೋಡು: ವೀಕ್ಷಿಸು; ಮಾರ್ಗ: ದಾರಿ; ಮೊಗೆ: ತೋಡು, ತುಂಬಿಕೊಳ್ಳು; ವಿಷ: ಗರಳ; ಉದಕ: ನೀರು;

ಪದವಿಂಗಡಣೆ:
ಮನ್ನಣೆಗೆ+ ಹಿರಿ+ಅಯ್ಯನ್+ಎಂದಾ
ನಿನ್ನು+ ಬೆಗೆವೆನೆ +ಜವನ+ಗಂಟಲ
ಮುನ್ನ +ತಿರುಹುವೆನ್+ಎನುತ +ಕಿಡಿಕಿಡಿ+ಯೋದನಾ +ಭೀಮ
ಇನ್ನೊದರಿ+ ಫಲವೇನು +ಕುಡಿವೆನು
ಮುನ್ನ+ಜಲವನು +ಬಳಿಕ +ನೋಡುವೆನ್
ಎನ್ನವರ +ಮಾರ್ಗವನ್+ಎನುತ +ಮೊಗೆದನು +ವಿಷ+ಉದಕವ

ಅಚ್ಚರಿ:
(೧) ಉದಕ, ಜಲ – ಸಮನಾರ್ಥಕ ಪದ
(೨) ಹಿರಿಯಯ್ಯ, ಜವ – ಯಮನನ್ನು ಕರೆದ ಪರಿ

ಪದ್ಯ ೧೭: ಸಹದೇವನು ಏನು ಮಾಡಿದನು?

ತವಕ ಮಿಗೆ ನಡೆತಂದು ಮೈಮರೆ
ದವನ ಕಂಡನು ಬಹಳ ಢಗೆ ಪರಿ
ಭವಿಸಲುದಕವ ಕುಡಿದು ಬಳಿಕಾರೈವೆನಿದನೆನುತ
ಲವಲವಿಸಿ ತಾಳಿಗೆಯ ತಲ್ಲಣ
ದವನು ಹೊಕ್ಕನು ಕೊಳವನಮಳಾಂ
ಬುವನು ಮೊಗೆದನು ಮೊಗಕೆ ಮೋಹಲು ಮೇಲೆ ದನಿಯಾಯ್ತು (ಅರಣ್ಯ ಪರ್ವ, ೨೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಸಹದೇವನು ವೇಗವಾಗಿ ಬಂದು, ಬಿದ್ದ ನಕುಲನನ್ನು ನೋಡಿದನು. ಅತಿಶಯವಾದ ಬಾಯಾರಿಕೆಗೆ ಸೋತು ನೀರನ್ನು ಕುಡಿದು ಇದೇನೆಂದು ಪರೀಕ್ಷಿಸೋಣವೆಂದುಕೊಂಡು ವೇಗವಾಗಿ ಕೊಳಕ್ಕಿಳಿದು ಬಾಯೊಣಗಿದ ಸಹದೇವನು ನೀರನ್ನು ತುಂಬಿಕೊಂಡು ಮುಖದತ್ತ ಬೊಗಸೆಯನ್ನು ತಂದನು, ಆಗ ಆಗಸದಲ್ಲಿ ಸದ್ದಾಯಿತು.

ಅರ್ಥ:
ತವಕ: ಕಾತುರ; ಮಿಗೆ: ಅಧಿಕ; ನಡೆ: ಚಲಿಸು; ಮೈಮರೆ: ಜ್ಞಾನತಪ್ಪಿದ ಸ್ಥಿತಿ; ಕಂಡು: ನೋಡು; ಬಹಳ: ಅತೀವ; ಢಗೆ: ಬಾಯಾರಿಕೆ; ಪರಿಭವಿಸು: ಕಷ್ಟ, ದುಃಖಿಸು; ಉದಕ: ನೀರು; ಕುಡಿ: ಪಾನಮಾದು; ಬಳಿಕ: ನಂತರ; ಲವಲವಿಸು: ಚಟುವಿಟಿಕೆಯಿಂದ; ತಾಳು: ನಿಧಾನಿಸು; ತಲ್ಲಣ: ಅಂಜಿಕೆ, ಭಯ; ಹೊಕ್ಕು: ಸೇರು; ಕೊಳ: ಸರೋವರ; ಅಮಳ; ನಿರ್ಮಲ; ಅಂಬು: ನೀರು; ಮೊಗೆ: ತೋಡು, ತುಂಬಿಕೊಳ್ಳು; ಮೊಗ: ಮುಖ; ಮೋಹ: ಆಕರ್ಷಣೆ, ಪ್ರೀತಿ; ಮೇಲೆ: ಎತ್ತರ, ಆಗಸ; ದನಿ: ಶಬ್ದ;

ಪದವಿಂಗಡಣೆ:
ತವಕ +ಮಿಗೆ +ನಡೆತಂದು +ಮೈಮರೆದ್
ಅವನ +ಕಂಡನು +ಬಹಳ +ಢಗೆ +ಪರಿ
ಭವಿಸಲ್+ಉದಕವ +ಕುಡಿದು +ಬಳಿಕ+ಆರೈವೆನ್+ಇದನೆನುತ
ಲವಲವಿಸಿ +ತಾಳಿಗೆಯ+ ತಲ್ಲಣದ್
ಅವನು +ಹೊಕ್ಕನು +ಕೊಳವನ್+ಅಮಳ
ಅಂಬುವನು +ಮೊಗೆದನು +ಮೊಗಕೆ +ಮೋಹಲು +ಮೇಲೆ +ದನಿಯಾಯ್ತು

ಅಚ್ಚರಿ:
(೧) ಮೊ ಅಕ್ಷರದ ತ್ರಿವಳಿ ಪದ – ಮೊಗೆದನು ಮೊಗಕೆ ಮೋಹಲು
(೨) ಅಂಬು, ಉದಕ – ಸಮನಾರ್ಥಕ ಪದ