ಪದ್ಯ ೨: ಪಾಂಡವರು ಹೇಗೆ ಸನ್ನದ್ಧರಾದರು?

ನರನ ರಥ ಕುಣಿದುದು ಯುಧಿಷ್ಠಿರ
ನುರು ವರೂಥ ಸಗಾಢದೊಳು ಚೀ
ತ್ಕರಿಸಿತನಿಲಾತ್ಮಜನ ಸ್ಯಂದನ ಮುಂದುವರಿಯುತಿರೆ
ಭರದಿ ಮಾದ್ರೀಸುತರ ತೇರುಗ
ಳುರವಣಿಸಲಭಿಮನ್ಯು ಸಾತ್ಯಕಿ
ಯಿರದೆ ಕೈಕೊಳಲಾಯಿತಿತ್ತಲು ಕದನಕುದ್ಯೋಗ (ಭೀಷ್ಮ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನ, ಧರ್ಮಜ, ಭೀಮ, ನಕುಲ, ಸಹದೇವರು ಇವರ ರಥಗಳು ಮುಂದುವರಿಯಲು ಸಾತ್ಯಕಿ, ಅಭಿಮನ್ಯುಗಳೂ ಯುದ್ಧಸನ್ನದ್ಧರಾಗಿ ಹೊರಟರು.

ಅರ್ಥ:
ನರ: ಅರ್ಜುನ; ರಥ: ಬಂಡಿ; ಕುಣಿ: ನರ್ತಿಸು; ಉರು: ಶ್ರೇಷ್ಠ; ವರೂಥ: ತೇರು, ರಥ; ಸಗಾಢ: ಹೆಚ್ಚಾದ, ಅತಿಶಯವಾದ; ಚೀತ್ಕರಿಸು: ಗಟ್ಟಿಯಾಗಿ ಅರಚು, ಆರ್ತನಾದ ಮಾಡು; ಆತ್ಮಜ: ಮಗ; ಸ್ಯಂದ: ಸ್ರವಿಸುವಿಕೆ; ಮುಂದುವರಿ: ಮುನ್ನುಗ್ಗು; ಭರದಿ: ರಭಸ, ವೇಗ; ಸುತ: ಮಕ್ಕಳು; ತೇರು: ಬಂಡಿ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕದನ: ಯುದ್ಧ; ಉದ್ಯೋಗ: ಕಾರ್ಯ, ಕೆಲಸ; ಅನಿಲ: ವಾಯು;

ಪದವಿಂಗಡಣೆ:
ನರನ +ರಥ +ಕುಣಿದುದು +ಯುಧಿಷ್ಠಿರನ್
ಉರು +ವರೂಥ +ಸಗಾಢದೊಳು +ಚೀ
ತ್ಕರಿಸಿತ್+ಅನಿಲ್+ಆತ್ಮಜನ +ಸ್ಯಂದನ +ಮುಂದುವರಿಯುತಿರೆ
ಭರದಿ+ ಮಾದ್ರೀಸುತರ+ ತೇರುಗಳ್
ಉರವಣಿಸಲ್+ಅಭಿಮನ್ಯು +ಸಾತ್ಯಕಿ
ಯಿರದೆ +ಕೈಕೊಳಲಾಯಿತ್+ಇತ್ತಲು+ ಕದನಕ್+ಉದ್ಯೋಗ

ಅಚ್ಚರಿ:
(೧) ತೇರುಗಳು ಮುಂದುವರೆದುದನ್ನು ತಿಳಿಸಲು ಬಳಸಿದ ಪದಗಳು – ಕುಣಿ, ಚೀತ್ಕರಿಸು, ಸ್ಯಂದ, ಉರವಣಿಸು

ಪದ್ಯ ೧೩: ಧರ್ಮಜನ ಸ್ವಭಾವವನ್ನು ಶಕುನಿ ಹೇಗೆ ವಿವರಿಸಿದನು?

ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಘಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಮನು ಬಾಯ್ಬಡುಕ, ಅರ್ಜುನನು ಮಹಾಗರ್ವದ ನೀಚನು, ನಕುಲ ಸಹದೇವರು ಇವರಿಬ್ಬರ ನೆರಳಿದ್ದಮ್ತೆ, ಅವರ ಮಕ್ಕಳು ಮಹಾಸಾಹಸಿಗಳು, ನಿಮ್ಮ ನಿಮ್ಮ ಮಕ್ಕಳ ಬಗೆಗೆ ಧರ್ಮಜನಲ್ಲಿ ಅನುಕಂಪವಿದ್ದೀತು, ಆದರೆ ತಮ್ಮಂದಿರ ಮತ್ತು ಮಕ್ಕಳ ಜೊತೆ ಸೇರಿ ವಿರೋಧಿಯಾಗುತ್ತಾನೆ, ಧರ್ಮಜನು ದ್ವಂದ್ವ ಸ್ವಭಾವದವನು, ದ್ರೋಹಿ ಎಂದು ಶಕುನಿ ದೂರಿದನು.

ಅರ್ಥ:
ಗಳಹ: ಅತಿಯಾಗಿ ಮಾತಾಡುವುದು; ಅನಿಲಜ: ವಾಯುಪುತ್ರ; ಗಾಢ: ತುಂಬ; ಗರ್ವ: ಅಹಂಕಾರ; ಹುಳು: ಕ್ರಿಮಿ; ದೇಹ: ಕಾಯ; ನೆಳಲು: ನೆರಳು; ಸುತ: ಮಕ್ಕಳು; ಮಕ್ಕಳು: ಪುತ್ರರು; ವಿಪುಳ: ತುಂಬ; ಸಾಹಸ: ಪರಾಕ್ರಮಿ; ಅಳಲು: ದುಃಖ; ಅರಸ: ರಾಜ; ಘಳಿಗೆ: ಸಮಯ; ತಿಳಿ: ಗೊತ್ತುಪಡಿಸು; ಸಂಗ: ಜೊತೆ; ಮನ: ಮನಸ್ಸು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ಗಳಹನ್+ಅನಿಲಜ +ಗಾಢ+ಗರ್ವದ
ಹುಳುಕನ್+ಅರ್ಜುನನ್+ಅವರ +ದೇಹದ
ನೆಳಲು+ ಮಾದ್ರೀಸುತರು +ಮಕ್ಕಳು +ವಿಪುಳ +ಸಾಹಸರು
ಅಳಲಬಹುದ್+ಅರಸಂಗೆ +ಘಳಿಗೆಗೆ
ತಿಳಿವನ್+ಅವದಿರ +ಸಂಗದಲಿ +ಮನ
ಮುಳಿವನ್+ಎರಡಿಟ್ಟಿಹನು +ಧರ್ಮಜನೆಂದನಾ +ಶಕುನಿ

ಅಚ್ಚರಿ:
(೧) ಪಾಂಡವರನ್ನು ಬಯ್ಯುವ ಪರಿ – ಗಳಹನನಿಲಜ ಗಾಢಗರ್ವದಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು

ಪದ್ಯ ೧೭: ಸಹದೇವನು ಜಂಬೂಫಲದ ಬಗ್ಗೆ ಏನು ಹೇಳಿದನು?

ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲ ಜ್ಞಾನಿ ಮಾದ್ರೀಸುತನು ಭೂಪತಿಗೆ (ಅರಣ್ಯ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮಜನು ಆ ಹಣ್ಣಿನ ಬಗ್ಗೆ ತ್ರಿಕಾಲ ಜ್ಞಾನಿಯಾದ ಸಹದೇವನನ್ನು ಕೇಳಿದನು. ಸಹದೇವನು, ಈ ಹಣ್ಣು ಕಣ್ವ ಮುನಿಗಳ ಆಶ್ರಮದ್ದು, ಇದನ್ನು ತರುವಂತದಲ್ಲ, ಈ ಹಣ್ಣ ಕಣ್ವ ಮುನಿಗಳಿಗೆ ಕಾಣದಿದ್ದರೆ ಅವರು ತ್ರಿಮೂರ್ತಿಗಳಿಗೂ ಶಾಪವನ್ನು ಕೊಡಬಲ್ಲ ಸಮರ್ಥರು, ಈ ಹಣ್ಣನ್ನು ನಾವಿಲ್ಲಿ ತಂದಿದ್ದರಿಂದ ನಮಗೆ ಅಪಾಯ ತಪ್ಪಿದ್ದಲ್ಲ ಎಂದನು.

ಅರ್ಥ:
ಜನಪ: ರಾಜ; ಬೆಸ: ವಿಚಾರಿಸುವುದು, ಪ್ರಶ್ನಿಸುವುದು; ಬಿನ್ನಹ: ಕೇಳು; ದನುಜರಿಪು: ರಾಕ್ಷಸರ ವೈರಿ (ವಿಷ್ಣು); ಹರ: ಶಿವ; ಕಮಲಭವ: ಕಮಲದಿಂದ ಹುಟ್ಟಿದವ (ಬ್ರಹ್ಮ); ಶಾಪ: ನಿಷ್ಠುರದ ನುಡಿ; ಕೊಡು: ನೀಡು; ಅನುವ: ಆಸ್ಪದ, ಅನುಕೂಲ; ಕಾಣೆ: ತೋರು; ಮುನಿ: ಋಷಿ; ಮುನಿ: ಕೋಪ; ತ್ರಿಕಾಲ: ಮೂರ ಕಾಲ; ಜ್ಞಾನಿ: ತಿಳಿದವ; ಸುತ: ಮಗ; ಭೂಪತಿ: ರಾಜ;

ಪದವಿಂಗಡಣೆ:
ಎನಲು +ಸಹದೇವನ+ ಯುಧಿಷ್ಠಿರ
ಜನಪ +ಬೆಸಗೊಳುತಿರಲು+ ಬಿನ್ನಹ
ದನುಜರಿಪು +ಹರ +ಕಮಲಭವರಿಗೆ +ಕೊಡುವ +ಶಾಪವನು
ಅನುವ +ಕಾಣೆನು +ಕಣ್ವಮುನಿ+ ತಾ
ಮುನಿದನಾದರೆ +ಶಪಿಸುವನು +ಯೆಂ
ದನು +ತ್ರಿಕಾಲ +ಜ್ಞಾನಿ +ಮಾದ್ರೀಸುತನು +ಭೂಪತಿಗೆ

ಅಚ್ಚರಿ:
(೧) ೧, ೬ ಸಾಲಿನ ಕೊನೆ ಪದ ಯುಧಿಷ್ಠಿರನನ್ನು ಕುರಿತಾಗಿರುವುದು
(೨) ಸಹದೇವನ ಗುಣವಾಚಕ ತ್ರಿಕಾಲ ಜ್ಞಾನಿ ಎಂದು ಬಳಸಿರುವುದು
(೩) ತ್ರಿಮೂರ್ತಿಗಳನ್ನು – ದನುಜರಿಪು ಹರ ಕಮಲಭವ ಎಂಬ ಪದ ಪ್ರಯೋಗ

ಪದ್ಯ ೭: ಸಹದೇವ ಮತ್ತು ದುಶ್ಯಾಸನ ಯುದ್ಧವು ಹೇಗೆ ನಡೆಯಿತು?

ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೇ ನೀನೇನಹೆ ಮಹಾ
ಸಂಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ (ಕರ್ಣ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಸಹದೇವನು ದುಶ್ಯಾಸನೆದುರು ಯುದ್ಧಕ್ಕೆ ನಿಂತನು. ಅವನ ಬಿಡುವ ಬಾಣಗಳನ್ನು ಸೈರಿಸಿಕೊಂಡು ದುಶ್ಯಾಸನು ಅಬ್ಬರಿಸಿ ಸಹದೇವನನ್ನು ಬಾಣಗಳಿಂದ ನೋಯಿಸಿದನು. ಅವನು ಸಹ ಸುಧಾರಿಸಿಕೊಂಡು ದುಶ್ಯಾಸನಮೇಲೆ ಬಾಣಗಳನ್ನು ಬಿಟ್ಟನು. ದುಶ್ಯಾಸನು ಸಹದೇವನಿಗೆ, ಹುಚ್ಚಾ ಈ ಮಹಾ ಸಂಗ್ರಾಮದಲ್ಲಿ ನೀನೇನು ಮಾಡಬಲ್ಲೆ, ನಿನ್ನವರನ್ನು ಕರೆಸಿಕೋ ಎಂದು ಬಾಣ ಪ್ರಯೋಗ ಮಾಡಲು ಸಹದೇವನ ಕವಚನು ಹರಿದು ದಿಕ್ಕು ದಿಕ್ಕುಗಳಿಗೆ ಹಾರಿದವು.

ಅರ್ಥ:
ಸರಳ: ಬಾಣ; ಸೈರಿಸು: ತಾಳು, ಸಹಿಸು; ಮಗ: ಸುತ; ಅಬ್ಬರ: ಆರ್ಭಟ; ಸುತ: ಮಗ; ಎಚ್ಚ: ಬಾಣ ಬಿಡು; ತರಹರಿಸು:ತಡಮಾಡು, ಸೈರಿಸು; ಮಗುಳು: ಪುನಃ, ಮತ್ತೆ; ಅನುಜ: ತಮ್ಮ; ಮರುಳ: ಮೂಢ; ಮಹಾ: ಶ್ರೇಷ್ಠ; ಸಂಗರ: ಯುದ್ಧ; ಕಳುಹು: ಬರೆಮಾಡು; ಉರವ: ಬೇಗ; ಜರಿ: ಬೀಳು; ಜೋಡು: ಕವಚ, ಅಂಗರಕ್ಷೆ; ಚಿಪ್ಪು: ಹೊರ ಆವರಣ, ಮೇಲ್ಮೈ; ದೆಸೆ: ದಿಶೆ, ದಿಕ್ಕು;

ಪದವಿಂಗಡಣೆ:
ಸರಳ+ ಸೈರಿಸಿ +ನಿನ್ನ +ಮಗನ್
ಅಬ್ಬರಿಸಿ +ಮಾದ್ರೀಸುತನ್+ಎಚ್ಚನು
ತರಹರಿಸಿ+ ಮಗುಳ್+ಎಚ್ಚನ್+ಆತನು +ಕೌರವ+ಅನುಜನ
ಮರುಳೇ +ನೀನೇನಹೆ +ಮಹಾ
ಸಂಗರಕೆ +ಕಳುಹಾ +ನಿನ್ನವರನ್+ಎನುತ್
ಉರವನ್+ಎಚ್ಚನು +ಜರಿಯೆ +ಜೋಡಿನ +ಚಿಪ್ಪು +ದೆಸೆದೆಸೆಗೆ

ಅಚ್ಚರಿ:
(೧) ದುಶ್ಯಾಸನನ್ನು – ನಿನ್ನ ಮಗನ್ (ಸಂಜಯ ಧೃತರಾಷ್ಟ್ರನಿಗೆ ಹೇಳ್ಳುತ್ತಿರುವ ತಿಳಿಸುವ ರೀತಿ), ಕೌರವಾನುಜ ಎಂದು ಕರೆದಿರುವುದು
(೨) ಎಚ್ಚನು – ೨, ೩, ೬ ಸಾಲಿನಲ್ಲಿ ಬರುವ ಪದ – ಬಾಣಬಿಡು
(೩) ಜರಿಯೆ ಜೋಡಿನ ಚಿಪ್ಪು – ಪದ ಪ್ರಯೋಗ
(೪) ಸುತ, ಮಗ – ಸಮನಾರ್ಥಕ ಪದ

ಪದ್ಯ ೨೧: ಮಕ್ಕಳು ಕುಂತಿಯ ಸ್ಥಿತೆಗೆ ಹೇಗೆ ಸ್ಪಂದಿಸಿದರು?

ಅನುಜರೆಲ್ಲರ ಕೂಡಿ ಶಮನನ
ತನುಜ ಬಂದನು ಮನೆಗೆ ಮಾತೆಗೆ
ವಿನಯದಿಂದೆರಗಿದನು ದುಗುಡವೆ ಶಿವ ಮಹಾದೇವ
ಅನಿಲಸುತ ನಾವ್ ಹಸಿದೆವೇಳೇ
ಳೆನಲು ಮಾದ್ರೀಸುತರು ತಮ್ಮಯ
ಜನನಿಯಿರವನು ಕಂಡು ಮರುಗಿದರರಸ ಕೇಳೆಂದ (ಆದಿ ಪರ್ವ, ೨೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು (ಶಮನ ಸುತ) ತನ್ನ ತಮ್ಮಂದಿರ ಜೊತೆ ಮನೆಗೆ ಹಿಂದಿರುಗಿ, ತಾಯಿಗೆ ನಮಸ್ಕರಿಸಿದನು, ಆಕೆಯ ಸ್ಥಿತಿಯನ್ನು ಕಂಡು, ನೀವು ದುಃಖಿತರಾಗಿದ್ದೀರೆ ಶಿವ ಶಿವ ಎಂದು ಕೇಳಲು, ಭೀಮನು ತಮಗೆ ತುಂಬ ಹಸಿವಾಗಿದೆ ಏನಾದರು ಬಡಿಸಿ ಎಂದು ಕೇಳಿದನು, ಮಾದ್ರಿಸುತರು ತಾಯಿಯ ದುಃಖಸ್ಥಿತಿಯನ್ನು ಕಂಡು ಮರುಗಿದರು.

ಅರ್ಥ:
ಅನುಜ: ತಮ್ಮಂದಿರು; ಕೂಡಿ: ಜೊತೆ; ಶಮನ:ಯಮ; ತನುಜ: ಪುತ್ರ; ಬಂದನು: ಆಗಮಿಸು; ಮನೆ: ಗೃಹ; ಮಾತೆ: ತಾಯಿ; ವಿನಯ: ಸೌಜನ್ಯ; ಎರಗು: ನಮಸ್ಕರಿಸು; ದುಗುಡ: ದುಃಖ; ಅನಿಲಸುತ: ಭೀಮ; ಹಸಿವು: ಅತಿಯಾಗಿ ಬಯಸು; ಸುತ: ಮಗ; ಜನನಿ: ಮಾತೆ; ಇರವು: ಸ್ಥಿತಿ; ಮರುಗು: ಕನಿಕರಿಸು; ಅರಸ: ರಾಜ;

ಪದವಿಂಗಡಣೆ:
ಅನುಜರೆಲ್ಲರ +ಕೂಡಿ +ಶಮನನ
ತನುಜ+ ಬಂದನು +ಮನೆಗೆ+ ಮಾತೆಗೆ
ವಿನಯದಿಂದ್+ಎರಗಿದನು+ ದುಗುಡವೆ +ಶಿವ +ಮಹಾದೇವ
ಅನಿಲಸುತ +ನಾವ್ +ಹಸಿದೆವ್+ಏಳ್
ಎನಲು+ ಮಾದ್ರೀ+ಸುತರು +ತಮ್ಮಯ
ಜನನಿ+ಯಿರವನು +ಕಂಡು +ಮರುಗಿದರ್+ಅರಸ +ಕೇಳೆಂದ

ಅಚ್ಚರಿ:
(೧) ಅನುಜ, ತನುಜ – ಪ್ರಾಸ ಪದ
(೨) ತನುಜ, ಸುತ – ಸಮನಾರ್ಥಕ ಪದ, ಶಮನನತನುಜ, ಅನಿಲಸುತ, ಮಾದ್ರೀಸುತ
(೩) ಮಾತೆ, ಜನನಿ – ಸಮನಾರ್ಥಕ ಪದ
(೪) ದುಃಖದ ತೀವ್ರತೆಯನ್ನು ವರ್ಣಿಸಲು – ಶಿವ ಮಹಾದೇವ