ಪದ್ಯ ೪: ಸಾತ್ಯಕಿಯನ್ನು ಯಾರು ತಡೆದರು?

ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು
ಫಡಫಡೆಲವೋ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ (ಗದಾ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಸಂಜಯನನ್ನು ಬಡಿದು ನಿಂದಿಸಿ, ರಾವುತರನ್ನು ಕೊಲ್ಲಲು ಈ ಭಯಂಕರ ಪ್ರಸಂಗವನ್ನು ಕೇಳಿ ಅಶ್ವತ್ಥಾಮ ಕೃತವರ್ಮ ಕೃಪರು, ಛೇ, ಎಲೋ ಸಂಜಯನನ್ನು ಬಿಡು, ನಮ್ಮ ಮಹಾಶಸ್ತ್ರಕ್ಕೆ ತಲೆತೆರುವುದಾದರೆ ಇದಿರಾಗು ಎನ್ನುತ್ತಾ ಸಾತ್ಯಕಿಯನ್ನು ನಿಲ್ಲಿಸಿದರು.

ಅರ್ಥ:
ಹಿಡಿ: ಗ್ರಹಿಸು; ವಿಭಾಡಿಸು: ನಾಶಮಾಡು; ಕೆಡಹು: ಬೀಳಿಸು; ಬಲು: ಬಹಳ; ರಾವುತ: ಕುದುರೆಸವಾರ; ಅವಗಡ: ಅಸಡ್ಡೆ; ಸುತ: ಮಗ; ಫಡ: ತಿರಸ್ಕಾರದ ಮಾತು; ಬಿಡು: ತೊರೆ, ತ್ಯಜಿಸು; ಮದೀಯ: ನಮ್ಮ; ಮಹಾಶರ: ದೊಡ್ಡ ಅಸ್ತ್ರ; ತಲೆ: ಶಿರ; ಕೊಡು: ನೀಡು; ಇದಿರು: ಎದುರು; ತರುಬು: ತಡೆ, ನಿಲ್ಲಿಸು;

ಪದವಿಂಗಡನೆ:
ಹಿಡಿದು +ಸಂಜಯನನು +ವಿಭಾಡಿಸಿ
ಕೆಡಹಿದನು +ಬಲು+ರಾವುತರನ್+ಅವ
ಗಡವ +ಕೇಳಿದು +ದ್ರೋಣಸುತ+ ಕೃತವರ್ಮ+ ಗೌತಮರು
ಫಡಫಡ್+ಎಲವೋ +ಸಂಜಯನ+ ಬಿಡು
ಬಿಡು +ಮದೀಯ +ಮಹಾಶರಕೆ+ ತಲೆ
ಕೊಡುವಡ್+ಇದಿರಾಗೆನುತ +ತರುಬಿದರ್+ಇವರು +ಸಾತ್ಯಕಿಯ

ಅಚ್ಚರಿ:
(೧) ಸಾತ್ಯಕಿಯನ್ನು ಬಯ್ಯುವ ಪರಿ – ಫಡಫಡೆಲವೋ ಸಂಜಯನ ಬಿಡುಬಿಡು
(೨) ಸಾತ್ಯಕಿಯನ್ನು ಕೆಣಕುವ ಪರಿ – ಮದೀಯ ಮಹಾಶರಕೆ ತಲೆಗೊಡುವಡಿದಿರಾಗೆನುತ ತರುಬಿದರ್

ಪದ್ಯ ೩೩: ನಾರಾಯಣಾಸ್ತ್ರದ ಪ್ರಭಾವ ಹೇಗಿತ್ತು?

ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ (ದ್ರೋಣ ಪರ್ವ, ೧೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮಹಾಶಬ್ದವಾಯಿತು. ಕೌರವಸೇನೆ ಹರ್ಷದಿಮ್ದ ಮೈಮರೆಯಿತು. ಕೃಷ್ಣಾದಿಗಳು ಕೈ ಮರೆತರು. ಶಸ್ತ್ರಗಳು ಕೆಳಬಿದ್ದವು. ಹೊಗೆಯ ತೆಕ್ಕೆಗಳು ಹಬ್ಬಿದವು. ಕಿಡಿಗಳು ಎತ್ತೆತ್ತಲೂ ಸಿಡಿಯುತ್ತಿದ್ದವು, ಉರಿಯು ಧಗಧಗಿಸುತ್ತಿತ್ತು. ನಾರಾಯಣಾಸ್ತ್ರವು ಪಾಂಡವ ಸೇನೆಯ ಮೇಲೆ ದಾಳಿಯಿಟ್ಟಿತು.

ಅರ್ಥ:
ಜಗ: ಪ್ರಪಂಚ; ಅಲುಗು: ಅಲ್ಲಾಡು; ಹುಯ್ಯಲು: ಅಳು; ಜಡಿ:ಬೆದರಿಕೆ, ಹೆದರಿಕೆ; ಅಭ್ರ: ಆಗಸ; ಹರುಷ: ಸಂತಸ; ಸೊಗಸು: ಚೆಂದ; ಮೈಮರೆ: ಎಚ್ಚರತಪ್ಪು; ಕೈ: ಹಸ್ತ; ಮರೆ: ನೆನಪಿನಿಂದ ದೂರವಾಗು; ಹೊಗೆ: ಧೂಮ; ಹೊರಳಿ: ಗುಂಪು, ಸಮೂಹ; ಕಿಡಿ: ಬೆಂಕಿ; ಥಟ್ಟು: ಗುಂಪು; ತಗೆ: ಹೊರತರು; ಉರಿ: ಬೆಂಕಿ; ತೆಕ್ಕೆ: ಗುಂಪು, ಸಮೂಹ; ಧಗ: ಬೆಂಕಿಯ ತೀವ್ರತೆಯನ್ನು ತೋರುವ ಶಬ್ದ; ಧಾಳಿ: ಆಕ್ರಮಣ; ಶರ: ಬಾಣ; ಅಹಿತ: ವೈರಿ; ಮೋಹರ: ಸೈನ್ಯ, ದಂಡು;

ಪದವಿಂಗಡಣೆ:
ಜಗದ +ಹುಯ್ಯಲು +ಜಡಿಯಲ್+ಅಭ್ರದ
ಲಗಿದು+ ಕೌರವಸೇನೆ +ಹರುಷದ
ಸೊಗಸಿನಲಿ +ಮೈಮರೆಯೆ +ಕೃಷ್ಣಾದಿಗಳು +ಕೈಮರೆಯೆ
ಹೊಗೆಯ +ಹೊರಳಿಯ +ಕಿಡಿಯ +ಥಟ್ಟಿನ
ತಗೆದುರಿಯ +ತೆಕ್ಕೆಯಲಿ +ಧಗಧಗ
ಧಗಿಸಿ +ಧಾಳಿಟ್ಟುದು +ಮಹಾಶರವ್+ಅಹಿತ+ಮೋಹರಕೆ

ಅಚ್ಚರಿ:
(೧) ಧಾಳಿಯಿಡುವ ಪರಿ – ಹೊಗೆಯ ಹೊರಳಿಯ ಕಿಡಿಯ ಥಟ್ಟಿನ ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ

ಪದ್ಯ ೧೪: ನಾರಾಯಣಾಸ್ತ್ರವು ಹೇಗೆ ತೋರಿತು?

ದನುಜಹರ ಮಂತ್ರವನು ಮನದಲಿ
ನೆನೆದು ಕೈ ನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ (ದ್ರೋಣ ಪರ್ವ, ೧೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರ ಮಮ್ತ್ರವನ್ನು ಮನಸ್ಸಿನಲ್ಲಿ ಜಪಿಸಿ, ತುದಿಯಿಂದ ಕಿಡಿಯುಗುಳುವ, ಕೆಂಪನೆಯ ಜ್ವಾಲೆಗಳು ಹೊರಹೊಮ್ಮುವ, ದಟ್ಟವಾಗಿ ಹೊಗೆ ಹಬ್ಬುವ, ಕನಕರೇಖೆಗಳಿಂದ ಕೂಡಿದ ನಾರಾಯಣಾಸ್ತ್ರಕ್ಕೆ ಅಶ್ವತ್ಥಾಮನು ಕೈನೀಡಿದನು.

ಅರ್ಥ:
ದನುಜ: ದಾನವ; ಹರ: ನಾಶ; ಮಂತ್ರ: ದೇವತಾ ಸ್ತುತಿ; ಮನ: ಮನಸ್ಸು; ನೆನೆ: ಜ್ಞಾಪಿಸು; ಕೈ: ಹಸ್ತ; ನೀಡು: ಒಡ್ಡು; ತುದಿ: ಅಗ್ರ; ಅಂಬು: ಬಾಣ; ತುರುಗು: ಸಂದಣಿ, ದಟ್ಟಣೆ; ಕಿಡಿ: ಬೆಂಕಿ; ಬಿರು: ಗಟ್ಟಿ; ಕೇಸರಿ: ಕೆಂಪು ಬಣ್ಣ; ಧಾಳಿ: ಲಗ್ಗೆ, ಮುತ್ತಿಗೆ; ತನಿ: ಚೆನ್ನಾಗಿ ಬೆಳೆದುದು; ತನಿವೊಗರು: ಹೆಚ್ಚಾದ ಕಾಂತಿ; ಬಲು: ಬಹಳ; ಹೊಗೆ: ಧೂಮ; ಹೊರಳಿ: ಗುಂಪು; ಕನಕ: ಚಿನ್ನ; ರಸ: ಸಾರ; ರೇಖೆ: ಗೆರೆ, ಗೀಟು; ಆವಳಿ: ಗುಂಪು; ಮೈ: ದೇಹ; ಮಿನುಗು: ಪ್ರಕಾಶ; ಹೊಂಗರಿ: ಚಿನ್ನದ ಗರಿ; ಮಹಾ: ಶ್ರೇಷ್ಠ; ಶರ: ಬಾಣ;

ಪದವಿಂಗಡಣೆ:
ದನುಜಹರ +ಮಂತ್ರವನು +ಮನದಲಿ
ನೆನೆದು +ಕೈ +ನೀಡಿದನು+ ತುದಿ+
ಅಂಬಿನಲಿ +ತುರುಗಿದ +ಕಿಡಿಯ +ಬಿರು+ಕೇಸರಿಯ +ಧಾಳಿಗಳ
ತನಿವೊಗರ+ ಬಲು+ವೊಗೆಯ +ಹೊರಳಿಯ
ಕನಕರಸ +ರೇಖಾವಳಿಯ +ಮೈ
ಮಿನುಗುಗಳ +ಹೊಂಗರಿಯ+ ನಾರಾಯಣ +ಮಹಾಶರಕೆ

ಅಚ್ಚರಿ:
(೧) ನಾರಾಯಣ ಎಂದು ಹೇಳಲು ದನುಜಹರ ಪದದ ಬಳಕೆ
(೨) ವೊಗರ, ವೊಗೆಯ – ಪದಗಳ ಬಳಕೆ

ಪದ್ಯ ೩೮: ಕೃಷ್ಣನು ಯಾವ ಅಭಯವನ್ನು ಅರ್ಜುನನಿಗೆ ನೀಡಿದನು?

ದೇವ ರವಿಯಸ್ತಮಿಸಿದನು ನೀ
ವಾವುದುಚಿತವ ಕಂಡಿರೆನೆ ನಿನ
ಗಾವ ಭಯ ಬೇಡಾಡಬಾರದು ತೊಡು ಮಹಾಶರವ
ಈ ವಿರೋಧಿಯ ಕೆಡಹು ಸೂರ್ಯನ
ನಾವು ತೋರಿಸಿ ಕೊಡುವೆವೆನೆ ಗಾಂ
ಡೀವದಲಿ ಹೂಡಿದನು ಫಲುಗುಣ ಪಾಶುಪತಶರವ (ದ್ರೋಣ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ದೇವ, ಸೂರ್ಯನು ಮುಳುಗಿದನು, ಈಗ ಅವನನ್ನು ಕೊಲ್ಲುವುದರಲ್ಲಿ ಯಾವ ಔಚಿತ್ಯವನ್ನು ಕಂಡಿರಿ ಎಂದು ಅರ್ಜುನನು ಹೇಳಲು, ಕೃಷ್ಣನು ಅರ್ಜುನನಿಗೆ ಅಭಯವನ್ನು ನೀಡುತ್ತಾ, ಹೆದರಬೇಡ, ಹೇಳುವ ಹಾಗಿಲ್ಲ, ನೀನು ಮಹಾಸ್ತ್ರದಿಂದ ವೈರಿಯ ತಲೆಯನ್ನು ಕೆಡಹು, ನಾವು ನಿನಗೆ ಸೂರ್ಯನನ್ನು ತೋರಿಸುತ್ತೇವೆ ಎಂದು ಹೇಳಲು, ಅರ್ಜುನನು ಗಾಂಡೀವದಲ್ಲಿ ಪಾಶುಪತಾಸ್ತ್ರವನ್ನು ಹೂಡಿದನು.

ಅರ್ಥ:
ದೇವ: ಭಗವಂತ; ರವಿ: ಸೂರ್ಯ; ಅಸ್ತಮಿಸಿದ: ಮುಳುಗಿಹೋದ; ಉಚಿತ: ಸರಿಯಾದುದು; ಕಂಡು: ನೋಡು; ಭಯ: ಅಂಜಿಕೆ; ಬೇಡ: ಸಲ್ಲದು; ತೊಡು: ಹೂಡು; ಶರ: ಬಾಣ; ವಿರೋಧಿ: ವೈರಿ; ಕೆಡಹು: ಕೊನೆಗಾಣಿಸು, ಬೀಳಿಸು; ಸೂರ್ಯ: ರವಿ; ತೋರು: ಗೋಚರ; ಹೂಡು: ತೊಡು; ಶರ: ಬಾಣ;

ಪದವಿಂಗಡಣೆ:
ದೇವ +ರವಿ+ಅಸ್ತಮಿಸಿದನು +ನೀವ್
ಆವುದ್+ಉಚಿತವ +ಕಂಡಿರ್+ಎನೆ+ ನಿನಗ್
ಆವ +ಭಯ +ಬೇಡಾಡಬಾರದು +ತೊಡು +ಮಹಾಶರವ
ಈ +ವಿರೋಧಿಯ +ಕೆಡಹು +ಸೂರ್ಯನ
ನಾವು +ತೋರಿಸಿ+ ಕೊಡುವೆವ್+ಎನೆ +ಗಾಂ
ಡೀವದಲಿ +ಹೂಡಿದನು +ಫಲುಗುಣ +ಪಾಶುಪತ+ಶರವ

ಅಚ್ಚರಿ:
(೧) ಕೃಷ್ಣನ ಅಭಯ – ಈ ವಿರೋಧಿಯ ಕೆಡಹು ಸೂರ್ಯನ ನಾವು ತೋರಿಸಿ ಕೊಡುವೆವ್
(೨) ಮಹಾಶರವ, ಪಾಶುಪತಶರವ – ಪದಗಳ ಬಳಕೆ

ಪದ್ಯ ೨೬: ಉತ್ತರಕುಮಾರನನ್ನು ಯಾರು ಕೊಂದರು?

ಎಸಲು ಶಲ್ಯನ ಸರಳ ಖಂಡಿಸಿ
ನಿಶಿತ ಬಾಣದಲುತ್ತರನು ತೆಗೆ
ದೆಸಲು ಖತಿಯಲಿ ಶಲ್ಯನಭಿಮಂತ್ರಿಸಿ ಮಹಾಶರವ
ಅಸಮಬಲನಾಕರ್ಣಪೂರದಿ
ನೆಸೆ ವಿರಾಟಕುಮಾರನಸು ಲಂ
ಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ (ಭೀಷ್ಮ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಆಗ ಉತ್ತರನು ಶಲ್ಯನ ಬಾಣಗಳನ್ನು ಕತ್ತರಿಸಿ, ಚೂಪಾದ ಬಾಣದಿಂದ ಶಲ್ಯನನ್ನು ಘಾತಿಸಲು, ಶಲ್ಯನು ಮಹಾಶರವೊಂದನ್ನು ಅಭಿಮಂತ್ರಿಸಿ, ಕಿವಿಯವರೆಗೆಳೆದು ಬಿಡಲು ಉತ್ತರನು ಅಪ್ಸರ ಸ್ತ್ರೀಯರ ತೆಕ್ಕೆಯಲ್ಲಿ ಕಾಣಿಸಿಕೊಂಡನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಸರಳ: ಬಾಣ; ಖಂಡಿಸು: ನಾಶಮಾಡು; ನಿಶಿತ: ಹರಿತವಾದುದು; ಬಾಣ: ಅಂಬು; ತೆಗೆ: ಹೊರತರು; ಖತಿ: ಕೋಪ; ಅಭಿಮಂತ್ರಿಸು: ಶಕ್ತಿಯುತವನ್ನಾಗಿ ಮಾಡು; ಶರ: ಬಾಣ; ಅಸಮಬಲ: ಸಮವಲ್ಲದ ಶಕ್ತಿ; ಕರ್ಣ; ಕಿವಿ; ಎಸೆ: ಬಾಣಪ್ರಯೋಗ; ಲಂಘಿಸು: ಸಮವಲ್ಲದ; ಕಾಯ: ಶರೀರ; ಖಚರ: ಆಕಾಶಗಾಮಿ, ಗಂಧರ್ವ; ಕುಚ: ಎದೆ; ಆಸು: ಪ್ರಾಣ;

ಪದವಿಂಗಡಣೆ:
ಎಸಲು +ಶಲ್ಯನ +ಸರಳ +ಖಂಡಿಸಿ
ನಿಶಿತ+ ಬಾಣದಲ್+ಉತ್ತರನು +ತೆಗೆದ್
ಎಸಲು +ಖತಿಯಲಿ +ಶಲ್ಯನ್+ಅಭಿಮಂತ್ರಿಸಿ +ಮಹಾಶರವ
ಅಸಮಬಲನ್+ಆ+ಕರ್ಣಪೂರದಿನ್
ಎಸೆ +ವಿರಾಟಕುಮಾರನ್+ಅಸು +ಲಂ
ಘಿಸಿತು +ಕಾಯವನ್+ಒದೆದು +ಖಚರೀಜನದ +ಕುಚಯುಗಕೆ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ವಿರಾಟಕುಮಾರನಸು ಲಂಘಿಸಿತು ಕಾಯವನೊದೆದು ಖಚರೀಜನದ ಕುಚಯುಗಕೆ
(೨) ಸರಳ, ಬಾಣ, ಶರ – ಸಮನಾರ್ಥಕ ಪದ

ಪದ್ಯ ೫೮: ಭೀಷ್ಮಾರ್ಜುನರ ಯುದ್ಧ ಹೇಗೆ ನಡೆಯಿತು?

ಒರೆತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ (ವಿರಾಟ ಪರ್ವ, ೯ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅರ್ಜುನನ ದೇಹದಿಂದ ರಕ್ತವು ರಭಸದಿಂದ ಹರಿಯಿತು. ಅದನ್ನು ತಡೆದುಕೊಂಡು ಅರ್ಜುನನು ಮಹಾಬಾಣವೊಂದನ್ನು ಬಿಡಲು ಭೀಷ್ಮನು ಗರ್ಜಿಸಿ ಆ ಬಾಣವನ್ನು ಮಧ್ಯದಲ್ಲೇ ಕಡಿದು ಹಾಕಿದನು. ಅರ್ಜುನನು ಆಗ್ನೇಯಾಸ್ತ್ರವನ್ನು ಬಿಡಲು ಕೌರವ ಸೇನೆಯು ಗೊಂದಲಕ್ಕೀಡಾಯಿತು.

ಅರ್ಥ:
ಒರೆ: ಗುಣ, ದೋಷ ಪರೀಕ್ಷೆಮಾಡು, ಶೋಧಿಸಿ ನೋಡು; ಒಡಲು: ದೇಹ; ದುರುದುರಿಸಿ: ರಭಸ; ಸುರಿ: ಹರಿ; ಅರುಣ: ಕೆಂಪು; ಜಲ: ನೀರು; ನೆರವಣಿಗೆ: ಪರಿಪೂರ್ಣತೆ; ನಿಂದು: ನಿಲ್ಲು; ತೊಟ್ಟು: ತೊಡು; ನರ: ಅರ್ಜುನ; ಮಹಾಶರ: ಶ್ರೇಷ್ಠವಾದ ಬಾಣ; ತರಿ: ಕಡಿ, ಕತ್ತರಿಸು; ಉರೆ: ಹೆಚ್ಚು; ಬೊಬ್ಬಿರಿ: ಕೂಗು, ಗಟ್ಟಿಯಾಗಿ ಹೇಳು, ಉದ್ಘೋಷಿಸು; ಬಳಿಕ: ನಂತರ; ಆಗ್ನಿ: ಬೆಂಕಿ; ಬಾಣ: ಶರ; ಗರಿ: ಪುಕ್ಕ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಹೂಡು: ತೊಡು; ಕಳವಳ: ಗೊಂದಲ;

ಪದವಿಂಗಡಣೆ:
ಒರೆತುದ್+ಅರ್ಜುನನ್+ಒಡಲಿನಲಿ+ ದುರು
ದುರಿಸಿ +ಸುರಿದುದು +ಅರುಣಮಯ +ಜಲ
ನೆರವಣಿಗೆಯಲಿ +ನಿಂದು+ ತೊಟ್ಟನು+ ನರ +ಮಹಾ+ಶರವ
ತರಿದನ್+ಎಡೆಯಲಿ +ಭೀಷ್ಮನ್+ಉರೆ +ಬೊ
ಬ್ಬಿರಿದು +ಬಳಿಕ್+ಆಗ್ನೇಯ +ಬಾಣದ
ಗರಿಯ +ಮಂತ್ರಿಸಿ +ಹೂಡಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ರಕ್ತ ಹರಿಯಿತು ಎಂದು ಹೇಳುವ ಪರಿ – ಒರೆತುದರ್ಜುನನೊಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ

ಪದ್ಯ ೪೧: ಉತ್ತರನು ಯಾವ ಪ್ರಶ್ನೆಗಳನ್ನು ಕೇಳಿದನು?

ಹೇಳು ಸಾರಥಿ ಬಿಲ್ಲದಾವನ
ತೋಳಿಗಳವದುವುದು ಮಹಾಶರ
ಜಾಲ ಬೆಸರಿದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಸಾರಥೀ ಈ ದೊಡ್ಡ ಬಿಲ್ಲು ಯಾರ ತೋಳಿನಲ್ಲಿರುತ್ತದೆ? ಈ ಮಹಾಶರಗಳು ಯಾರ ಅಧೀನದಲ್ಲಿವೆ? ಉಳಿದ ಬಿಲ್ಲುಗಳು ಯಾರವು? ಯುದ್ಧದಲ್ಲಿ ಇವನ್ನಾರು ಉಪಯೋಗಿಸುತ್ತಾರೆ? ಉಳಿದ ಆಯುಧಗಳು ಯಾರವು? ನನ್ನ ಮನಸ್ಸಿನ ಸಂಶಯವನ್ನು ನಿವಾರಿಸು ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ಸಾರಥಿ: ಸೂತ; ಬಿಲ್ಲು: ಚಾಪ; ತೋಳು: ಬಾಹು; ಅಳವಡು: ಹೊಂದು, ಸೇರು, ಕೂಡು; ಮಹಾಶರ: ದೊಡ್ಡ ಬಾಣ; ಜಾಲ: ಗುಂಪು; ಬೆಸಗೈ: ಅಪ್ಪಣೆಮಾದು; ಮಿಕ್ಕ: ಉಳಿದ; ಕಾಳಗ: ಯುದ್ಧ; ತೆಗೆ:ಹೊರತರು; ಮೇಲು: ಹಿರಿಯ, ದೊಡ್ಡ; ಕೈದು: ಆಯುಧ, ಕತ್ತಿ; ಕೈಮೇಳ: ಕೈಗೆ ಸೇರುವ; ಮನ: ಮನಸ್ಸು; ಸಂಶಯ: ಅನುಮಾನ; ಹಿಂಗು: ತಗ್ಗು; ಹೇಳು: ತಿಳಿಸು;

ಪದವಿಂಗಡಣೆ:
ಹೇಳು +ಸಾರಥಿ+ ಬಿಲ್ಲದ್+ಆವನ
ತೋಳಿಗ್+ಅಳವಡುವುದು +ಮಹಾಶರ
ಜಾಲ +ಬೆಸರಿದಪವಿದಾರಿಗೆ+ ಮಿಕ್ಕ+ ಬಿಲ್ಲುಗಳು
ಕಾಳಗದೊಳ್+ಇವನಾರು +ತೆಗೆವರು
ಮೇಲು+ಕೈದುಗಳ್+ಆರಿಗಿವು+ ಕೈ
ಮೇಳವಿಸುವವು +ಮನದ+ ಸಂಶಯ +ಹಿಂಗೆ+ ಹೇಳೆಂದ

ಅಚ್ಚರಿ:
(೧) ಹೇಳು – ಪದ್ಯದ ಮೊದಲ ಹಾಗು ಕೊನೆ ಪದ

ಪದ್ಯ ೫೩: ಅರ್ಜುನನ ಮನಸ್ಸಿಗೆ ಯಾವ ಜಾಡ್ಯ ಆವರಿಸಿತೆಂದ್ ಹೇಳಿದನು?

ಏಸು ಬಾಣದೊಳೆಚ್ಚೊಡೆಯು ಹೊರ
ಸೂಸಿದವು ತಾನರಿದುದಿಲ್ಲ ಮ
ಹಾಶರವ ಕಳುಹಿದರೆ ನುಂಗಿದನೊಡನರಿಯೆ ನಾನು
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚೆತ್ತೆನೇ ಹಿಂ
ದೇಸು ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ (ಅರಣ್ಯ ಪರ್ವ, ೭ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಷ್ಟು ಬಾಣಗಳನ್ನು ಬಿಟ್ಟರೂ ಅವು ನಾಟದೆ ಹೊರಕ್ಕೆ ಹೋದವು. ಆಗ ನಾನು ತಿಳಿದುಕೊಳ್ಳಲಿಲ್ಲ. ದಿವ್ಯಾಸ್ತ್ರಗಳಿಂದ ಹೊಡೆದರೆ ಅವನ್ನು ನುಂಗಿ ಬಿಟ್ಟ ಆಗಲೂ ನನಗೆ ತಿಳಿಯಲಿಲ್ಲ. ಗಾಂಡೀವ ಧನುಸ್ಸನ್ನೇ ಸೆಳೆದುಕೊಂಡರೂ, ಖಡ್ಗವನ್ನೂ ಸೆಳೆದುಕೊಂಡರೂ ನನಗೆ ಎಚ್ಚರ ಬರೈಲ್ಲ. ಎಷ್ಟು ಜನ್ಮದ ಜಾಡ್ಯವು ನನ್ನ ಮತಿಗೆ ಮುಸುಕು ಹಾಕಿತೋ ಏನೋ ಎಂದು ಅರ್ಜುನನು ಹಲುಬಿದನು.

ಅರ್ಥ:
ಏಸು: ಎಷ್ಟು; ಬಾಣ: ಶರ; ಎಚ್ಚು: ಬಾಣ ಬಿಡು; ಹೊರ: ಆಚೆ; ಸೂಸು: ಎರಚು, ಚಲ್ಲು; ಅರಿ: ತಿಳಿ; ಮಹಾಶರ: ಶ್ರೇಷ್ಠವಾದ ಬಾಣ; ಕಳುಹು: ಹೊರಹಾಕು, ಬಿಡು; ನುಂಗು: ತಿನ್ನು; ಒಡನೆ: ಕೂಡಲೆ; ಅರಿ: ತಿಳಿ; ಶರಾಸನ: ಬಿಲ್ಲು; ಖಡ್ಗ: ಕತ್ತಿ; ಕೊಳಲು: ತೆಗೆದುಕೊ; ಎಚ್ಚರ: ನಿದ್ರೆಯಿಂದ ಏಳುವುದು; ಹಿಂದೆ: ಪೂರ್ವ; ಜನ್ಮ: ಜನನ; ಜಾಡ್ಯ: ಸೋಮಾರಿತನ; ಜವನಿಕೆ: ತೆರೆ, ಪರದೆ;

ಪದವಿಂಗಡಣೆ:
ಏಸು +ಬಾಣದೊಳ್+ಎಚ್ಚೊಡೆಯು +ಹೊರ
ಸೂಸಿದವು +ತಾನ್+ಅರಿದುದಿಲ್ಲ +ಮ
ಹಾಶರವ+ ಕಳುಹಿದರೆ+ ನುಂಗಿದನ್+ಒಡನ್+ಅರಿಯೆ+ ನಾನು
ಆ +ಶರಾಸನ +ಖಡ್ಗವನು+ ಕೊಳಲ್
ಐಸರೊಳಗ್+ಎಚ್ಚೆತ್ತೆನೇ +ಹಿಂದ್
ಏಸು +ಜನ್ಮದ +ಜಾಡ್ಯ +ಜವನಿಕೆಯೋದುದ್+ಎನಗೆಂದ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ
(೨) ಎಚ್ಚೊಡೆ, ಎಚ್ಚೆತ್ತು – ಪದಗಳ ಬಳಕೆ
(೩) ಶರಾಸನ – ಬಿಲ್ಲಿಗೆ ಬಳಸಿದ ಪದ