ಪದ್ಯ ೩: ಪಾಂಡವ ಸೇನೆಯು ಹೇಗೆ ಹತವಾಯಿತು?

ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ (ಶಲ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಈಚೆಕಡೆಯಲ್ಲಿ ಅಶ್ವತ್ಥಾಮ, ಸುಧರ್ಮ, ದುರ್ಯೋಧನ ಕೃತವರ್ಮ, ಕೃಪನೇ ಮೊದಲಾದವರು ಮುನ್ನುಗ್ಗಿ ಹೊಡೆಯಲು, ಅವರ ಬಾಣಗಳ ಏಟಿಗೆ ಬಿಸಿಗೆ ತುಪ್ಪದ ಸಾಗರವು ಕರಗಿದಂತೆ ಪಾಂಡವ ಸೇನೆಯು ನಾಶವಾಯಿತು.

ಅರ್ಥ:
ಕ್ಷಿತಿಪ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಸುತ: ಮಗ; ಆದಿ: ಮುಂತಾದ; ಮಸಗು: ಕೆರಳು; ತಿಕ್ಕು; ಘೃತ: ತುಪ್ಪ; ಸಮುದ್ರ: ಸಾಗರ; ಸೆರಗು: ಅಂಚು, ತುದಿ; ಸೋಂಕು: ಮುಟ್ಟು, ತಾಗು; ಹುತವಹ: ಅಗ್ನಿ; ಸೊಂಪು: ಸೊಗಸು, ಚೆಲುವು; ವೈರಿ: ಅರಿ, ಶತ್ರು; ಪ್ರತತಿ: ಗುಂಪು; ತರುಬು: ತಡೆ, ನಿಲ್ಲಿಸು; ತರಿ: ಕಡಿ, ಕತ್ತರಿಸು; ಸರಳ: ಬಾಣ; ಸಾರ: ಸತ್ವ;

ಪದವಿಂಗಡಣೆ:
ಕ್ಷಿತಿಪ +ಚಿತ್ತೈಸ್+ಈಚೆಯಲಿ +ಗುರು
ಸುತ +ಸುಶರ್ಮಕ +ಶಲ್ಯ+ ನಿನ್ನಯ
ಸುತನು +ಕೃತವರ್ಮನು +ಕೃಪಾಚಾರ್ಯ+ಆದಿಗಳು+ ಮಸಗಿ
ಘೃತ+ಸಮುದ್ರದ +ಸೆರಗ+ ಸೋಂಕಿದ
ಹುತವಹನ+ ಸೊಂಪಿನಲಿ +ವೈರಿ
ಪ್ರತತಿಯನು +ತರುಬಿದರು +ತರಿದರು+ ಸರಳ+ ಸಾರದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಘೃತಸಮುದ್ರದ ಸೆರಗ ಸೋಂಕಿದ ಹುತವಹನ ಸೊಂಪಿನಲಿ ವೈರಿ ಪ್ರತತಿಯನು ತರುಬಿದರು
(೨) ಸುತ – ೨, ೩ ಸಾಲಿನ ಮೊದಲ ಪದ

ಪದ್ಯ ೫೮: ಪಾಂಡವ ಸೇನೆಯು ಯಾವ ಮಾತುಗಳನ್ನಾಡುತ್ತಿತ್ತು?

ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ (ಶಲ್ಯ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಶಲ್ಯನು ಧರ್ಮಜನನ್ನು ಗೆದ್ದ, ಛೇ, ಇಲ್ಲ ಅವನು ನಮ್ಮ ದಳಪತಿಯನ್ನು ಸೋಲಿಸಿದನು, ಧರ್ಮಜನು ಹೆದರಿದ, ಅಜೇಯನಾದ ಶಲ್ಯನು ಹೆದರಿದನು, ಎಂಬ ತರತರದ ಮಾತುಗಳನ್ನು ಪಾಂಡವ ಸೇನೆಯು ಆಡುತ್ತಿತ್ತು.

ಅರ್ಥ:
ಗೆಲಿ: ಜಯಿಸು; ಅವನಿಪ: ರಾಜ; ತಿಲಕ: ಶ್ರೇಷ್ಠ; ಫಡ: ತಿರಸ್ಕಾರದ ಮಾತು; ಸುತ: ಮಗ; ದಳಪತಿ: ಸೇನಾಧಿಪತಿ; ಅದ್ದು: ತೋಯಿಸು, ಮುಳುಗು; ಪರಿಭವ: ಅನಾದರ, ತಿರಸ್ಕಾರ; ಸಮುದ್ರ: ಸಾಗರ; ಅಳುಕು: ಹೆದರು; ನೃಪ: ರಾಜ; ಬಲಾಧಿಪ: ಪರಾಕ್ರಮಿ; ಉಲುಕು: ಅಲ್ಲಾಡು, ನಡುಗು; ಅಂಜು: ಹೆದರು; ಲಗ್ಗೆ: ಆಕ್ರಮಣ; ಅಳಿ: ನಾಶ; ಮಸಗು: ಹರಡು; ಕೆರಳು; ಮೈದೋರು: ಎದುರು ನಿಲ್ಲು; ಆಚೆ: ಹೊರಗಡೆ; ಸಂದಣಿ: ಗುಂಪು;

ಪದವಿಂಗಡಣೆ:
ಗೆಲಿದನೋ +ಮಾದ್ರೇಶನ್+ಅವನಿಪ
ತಿಲಕನನು +ಫಡ +ಧರ್ಮಸುತನ್+ಈ
ದಳಪತಿಯನ್+ಅದ್ದಿದನು +ಪರಿಭವಮಯ +ಸಮುದ್ರದಲಿ
ಅಳುಕಿದನು +ನೃಪನ್+ಈ+ ಬಲಾಧಿಪನ್
ಅಲುಕನ್+ಅಂಜಿದನೆಂಬ +ಲಗ್ಗೆಯಲ್
ಅಳಿ +ಮಸಗಿ +ಮೈದೋರಿತ್+ಆಚೆಯ +ಸೇನೆ +ಸಂದಣಿಸಿ

ಅಚ್ಚರಿ:
(೧) ರೂಪಕದ ಪ್ರಯೋಗ – ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
(೨) ಜೋಡಿ ಪದಗಳ ಬಳಕೆ – ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ

ಪದ್ಯ ೪: ಕೌರವ ಸೈನಿಕರು ಘಟೋತ್ಕಚನನ್ನು ಹೇಗೆ ಆಕ್ರಮಣ ಮಾಡಿದರು?

ಹೊಕ್ಕ ಸುಭಟರು ಮರಳದಿರಿ ಖಳ
ಸಿಕ್ಕಿದನು ಸಿಕ್ಕಿದನು ಚಲಿಸುವ
ಚುಕ್ಕಿಗರ ಹೊಯ್ ಬೀಳಗುತ್ತೆನುತರಸನುಬ್ಬರಿಸೆ
ಹೊಕ್ಕು ತಿವಿದರು ನೀಡಿ ಹರಿಗೆಯ
ನಿಕ್ಕಿ ನಿಂದರು ತಮತಮಗೆ ಮೇ
ಲಿಕ್ಕಿದರು ತೆರೆ ಮುರಿಯೆ ಬಳಿದೆರೆ ಮಸಗಿ ಕವಿವಂತೆ (ದ್ರೋಣ ಪರ್ವ, ೧೬ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನು, ಮುಂದೆ ನುಗ್ಗಿದ ಯೋಧರು ಹಿಮ್ಮೆಟ್ಟಬೇಡಿರಿ ರಾಕ್ಷಸನು ಸಿಕ್ಕೇಬಿಟ್ಟ ಸಿಕ್ಕೇಬಿಟ್ಟ, ಹೆದರುವ ಚುಕ್ಕೆಗಳನ್ನು ನೀವೇ ಹೊಡೆದು ಕೆಡವಿರಿ, ಎಂದು ಗರ್ಜಿಸಲು, ಸೈನಿಕರು ಹೊಕ್ಕು ಘಟೋತ್ಕಚನನ್ನು ತಿವಿದರು. ಅವನ ಹೊಡೆತಗಳನ್ನು ಗುರಾಣಿಗಳಿಂದ ತಪ್ಪಿಸಿಕೊಂಡರು. ಒಂದು ತೆರೆಯ ಹಿಂದೆ ಮತ್ತೊಂದು ತರೆ ಮೇಲೆ ಬಂದಮ್ತೆ ಘಟೋತ್ಕಚನ ಮೇಲೆ ನುಗ್ಗಿದರು.

ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ಮರಳು: ಹಿಂದಿರುಗು; ಇರಿ: ಸೀಳು; ಖಳ: ದುಷ್ಟ; ಸಿಕ್ಕು: ತೊಡಕು; ಚಲಿಸು: ನಡೆ; ಚುಕ್ಕಿ: ಬಿಂದು, ಚಿಹ್ನೆ; ಹೊಯ್: ಹೊಡೆ; ಬೀಳು: ಕುಗ್ಗು; ಅರಸ: ರಾಜ; ಉಬ್ಬರಿಸು: ಜೋರು ಮಾಡು; ತಿವಿ: ಸೀಳು; ಹರಿಗೆ: ಚಿಲುಮೆ, ತಲೆಪೆರಿಗೆ; ನಿಂದು: ನಿಲ್ಲು; ತೆರೆ: ತೆಗೆ, ಬಿಚ್ಚು; ಮುರಿ: ಸೀಳು; ಬಳಿ: ಸಾರಿಸು, ಒರೆಸು; ಮಸಗು: ಹರಡು; ಕೆರಳು; ತಿಕ್ಕು; ಕವಿ: ಆವರಿಸು;

ಪದವಿಂಗಡಣೆ:
ಹೊಕ್ಕ +ಸುಭಟರು +ಮರಳದಿರಿ +ಖಳ
ಸಿಕ್ಕಿದನು +ಸಿಕ್ಕಿದನು +ಚಲಿಸುವ
ಚುಕ್ಕಿಗರ +ಹೊಯ್ +ಬೀಳಗುತ್ತೆನುತ್+ಅರಸನ್+ಉಬ್ಬರಿಸೆ
ಹೊಕ್ಕು +ತಿವಿದರು +ನೀಡಿ +ಹರಿಗೆಯನ್
ಇಕ್ಕಿ +ನಿಂದರು +ತಮತಮಗೆ +ಮೇ
ಲಿಕ್ಕಿದರು +ತೆರೆ +ಮುರಿಯೆ +ಬಳಿದೆರೆ +ಮಸಗಿ +ಕವಿವಂತೆ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಮೇಲಿಕ್ಕಿ, ಚುಕ್ಕಿ – ಪ್ರಾಸ ಪದಗಳು

ಪದ್ಯ ೩೩: ಎಲ್ಲರೂ ತಮಗೆ ಮಹಾನವಮಿ ಇಂದೇ ಎಂದೇಕೆ ಯೋಚಿಸಿದರು?

ನೊಂದು ಮರಳದೆ ಮಸಗಿ ಸೂರ್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಮಿಮಾಂಬುಧಿಯ (ದ್ರೋಣ ಪರ್ವ, ೧೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳಿಂದ ನೊಂದ ಕರ್ಣನು ಹಿಂದಿರುಗದೆ ಸಿಟ್ಟಿನಿಂದ ಅರ್ಜುನನನ್ನು ಬಾಣಗಳಿಂದ ತಾಗಿದನು. ಅಶ್ವತ್ಥಾಮನು ಅರ್ಜುನನು ತನ್ನ ತಲೆಯನ್ನು ಹಾರಿಸಿದರೆ ನನ್ನ ದೇಹಕ್ಕೆ ಸಾಕಷ್ಟು ಪರಾಕ್ರಮವಿದೆ ಎಂದು ಮುಮ್ದುವರಿದನು. ಎಲ್ಲಾ ವೀರರೂ ಇಂದೆ ನಮ್ಮ ತಲೆಗಳಿಗೆ ಮಹಾನವಮಿ ಎಂದು ಅರ್ಜುನನನ್ನು ಮುತ್ತಿದರು. ಸೂರ್ಯನು ಮೆಲ್ಲಗೆ ಪಶ್ಚಿಮ ಸಮುದ್ರಕ್ಕೆ ಸಮೀಪನಾದನು.

ಅರ್ಥ:
ನೊಂದು: ನೋವನ್ನುಂಡು; ಮರಳು: ಹಿಂದಿರುಗು; ಮಸಗು: ಹರಡು; ಕೆರಳು; ಸೂರ್ಯ: ನೇಸರ; ನಂದನ: ಮಗ; ತಾಗು: ಮುಟ್ಟು; ಗುರುಸುತ: ಆಚಾರ್ಯರ ಪುತ್ರ (ಅಶ್ವತ್ಥಾಮ); ಮುಂದುವರಿ: ಮುಂದೆ ಚಲಿಸು; ತಲೆ: ಶಿರ; ಹರಿದು: ಸೀಳು; ಕಲಿ: ಶೂರ; ಇಂದು: ಇವತ್ತು; ಕವಿ: ಆವರಿಸು; ಸಕಲ: ಎಲ್ಲಾ; ಭಟ: ಸೈನಿಕ; ಅರವಿಂದ: ಕಮಲ; ಸಖ: ಮಿತ್ರ; ಹೊದ್ದು: ಸೇರು, ತಬ್ಬಿಕೊ; ಮೆಲ್ಲನೆ: ನಿಧಾನವಾಗಿ; ಪಶ್ಚಿಮ: ಪಡುವಣ; ಅಂಬುಧಿ: ಸಾಗರ;

ಪದವಿಂಗಡಣೆ:
ನೊಂದು +ಮರಳದೆ+ ಮಸಗಿ +ಸೂರ್ಯನ
ನಂದನನು +ತಾಗಿದನು +ಗುರುಸುತ
ಮುಂದುವರಿದನು +ತಲೆ +ಹರಿದರ್+ಎನ್ನಟ್ಟೆ +ಕಲಿಯೆನುತ
ಇಂದಿನಲಿ+ ಮಹನವಮಿ +ತಲೆಗಳಿ
ಗೆಂದು +ಕವಿದರು +ಸಕಲ +ಭಟರ್
ಅರವಿಂದಸಖ+ ಹೊದ್ದಿದನು +ಮೆಲ್ಲನೆ +ಪಶ್ಮಿಮ+ಅಂಬುಧಿಯ

ಅಚ್ಚರಿ:
(೧) ಸೂರ್ಯ, ಅರವಿಂದ ಸಖ – ಸಾಮ್ಯಾರ್ಥ ಪದಗಳು
(೨) ಅರ್ಜುನನ ಹಿರಿಮೆ – ಇಂದಿನಲಿ ಮಹನವಮಿ ತಲೆಗಳಿಗೆಂದು ಕವಿದರು ಸಕಲ ಭಟರರ
(೩) ಸಂಜೆಯಾಯಿತು ಎಂದು ಹೇಳಲು – ಅರವಿಂದಸಖ ಹೊದ್ದಿದನು ಮೆಲ್ಲನೆ ಪಶ್ಮಿಮಾಂಬುಧಿಯ

ಪದ್ಯ ೬: ರಣಭೂಮಿಯು ಯಾವುದರಿಂದ ಅಲಂಕೃತಗೊಂಡಿತು?

ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಲ ರಂಜಿಸಿತು (ದ್ರೋಣ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವ ಯೋಧರ ಗಾಯಗಳು ರಕ್ತವನ್ನು ಕಾರಿದವು. ಮಾಂಸಖಂಡ, ನೆಣ, ಪಿತ್ತಕೋಶಗಳು ಹೊರಬಂದು ಬಿಳಿಯ ನೊರೆ ಕಾಣಿಸಿದವು. ಕೆಟ್ಟವಾಸನೆ ಹಬ್ಬಿತು. ಎಲುಬುಗಳು ತುಂಡಾಗಿ ಚರ್ಮದಿಂದ ಹೊರಕ್ಕೆ ಇಣುಕಿದವು. ಪೂರ್ತಿಯಾಗಿ ಗಾಯಗೊಂಡು ಬಿದ್ದ ಹೆಣಗಳ ರಾಶಿ ಎಲ್ಲೆಲ್ಲೂ ಕಾಣಿಸುತ್ತಿತ್ತು.

ಅರ್ಥ:
ಏರು: ಹತ್ತು, ಆರೋಹಿಸು; ಬುದುಬುದಿಸು: ಒಂದೇ ಸಮನೆ, ದಪದಪ; ರಕುತ: ನೆತ್ತರು; ಕಾರು: ಹರಿ; ಕಾಳಿಜ: ಪಿತ್ತಾಶಯ; ಖಂಡ: ತುಂಡು; ನೆಣ: ಕೊಬ್ಬು, ಮೇದಸ್ಸು; ಜಿಗಿ: ಹಾರು; ತೋರು: ಕಾಣಿಸು; ಬೆಳು: ಬಿಳುಪು; ನೊರೆ: ಬುರುಗು, ಫೇನ; ಮಸಗು: ಹರಡು; ನಸು: ಕೊಂಚ; ಬಿಸಿ: ಕಾವು; ಹೊನಲು: ಕಾಂತಿ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಕಡಿ: ಸೀಳು; ಮೊಗ: ಮುಖ; ತೋರು: ಗೋಚರ; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ತಾರು: ಸೊರಗು, ಬಡಕಲಾಗು; ಥಟ್ಟು: ಪಕ್ಕ, ಕಡೆ, ಗುಂಪು; ಹೆಣ: ಜೀವವಿಲ್ಲದ ಶರೀರ; ರಂಜಿಸು: ಹೊಳೆ, ಪ್ರಕಾಶಿಸು; ಎಲು: ಮೂಳೆ;

ಪದವಿಂಗಡಣೆ:
ಏರುಗಳು +ಬುದುಬುದಿಸಿ +ರಕುತವ
ಕಾರಿ +ಕಾಳಿಜ +ಖಂಡ +ನೆಣ +ಜಿಗಿ
ದೋರಿ +ಬೆಳುನೊರೆ +ಮಸಗಿ +ನಸು+ಬಿಸಿ+ರಕುತ +ಹೊನಲಿಡಲು
ಕೌರಿಡಲು +ಕಡಿದುಡಿದವ್+ಎಲು +ಮೊಗ
ದೋರುಗಳ+ ಪೂರಾಯ +ಘಾಯದ
ತಾರುಥಟ್ಟಿನ +ಹೆಣನ +ಮೆದೆ +ಹೇರಾಲ +ರಂಜಿಸಿತು

ಅಚ್ಚರಿ:
(೧) ರಣಭೂಮಿಯಲ್ಲು ರಂಜನೆಯ ಕಲ್ಪನೆಯನ್ನು ತೋರುವ ಕವಿ – ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಲ ರಂಜಿಸಿತು

ಪದ್ಯ ೩೫: ಭೀಮ ಮತ್ತು ಸುಪ್ರತೀಕದ ಯುದ್ಧ ಹೇಗಿತ್ತು?

ಚಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದವು ನಗಂಗಳ
ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ
ಜಿಗಿವ ರಕುತದ ಗದೆಯ ಬಿರುವೊ
ಯ್ಲುಗಳೊಲಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ (ದ್ರೋಣ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನು ಹಾರಿ, ಸುಪ್ರತೀಕದೊಡನೆ ಕಾಳಗಮಾಡಲು ದಿಗ್ಗಜಗಳ ಎದೆಯೊಡೆಯಿತು. ಬೆಟ್ಟಗಳು ಅಲುಗಾಡಿದವು. ಪಾದಗಳ ತುಳಿತಕ್ಕೆ ಭೂಮಿ ಕುಸಿಯಿತು. ಭೀಮನ ಗದೆಯ ಮೇಲೆಲ್ಲಾ ರಕ್ತಧಾರೆಯಾದವು. ಅವನು ಹೊಡೆದಾಗ ಕಿಡಿಗೆದರಿ ಕರಿಹೊಗೆ ಹಬ್ಬಿತು. ಭೀಮನು ಹಾರಿ ಆನೆಯ ತಲೆಗೆ ಹೊಡೆದನು.

ಅರ್ಥ:
ಚಿಗಿ: ಬೆರಳುಗಳಿಂದ ಚಿಮ್ಮಿಸು, ನೆಗೆ; ಹರಿ: ವಾಯು; ಹರಿಸುತ: ಭೀಮ; ಹಳಚು: ತಾಗುವಿಕೆ; ಕುಲ: ವಂಶ; ಇಭ: ಆನೆ; ಎದೆ: ವಕ್ಷಸ್ಥಳ; ಒಡೆ: ಸೀಳು; ನಗ: ಪರ್ವತ, ಬೆಟ್ಟ; ಬಿಗುಹು: ದೃಢತೆ; ಸಡಿಲಿಸು: ಬಿಗಿಯಿಲ್ಲದಿರುವುದು, ಶಿಥಿಲ; ನೆಗ್ಗು: ಕುಗ್ಗು, ಕುಸಿ; ಧರಣಿ: ಭೂಮಿ; ನೆಗ್ಗು: ಜಿಗಿ; ಚರಣ: ಪಾದ; ಹತಿ: ಪೆಟ್ಟು, ಹೊಡೆತ; ಜಿಗಿ: ನೆಗೆ; ರಕುತ: ನೆತ್ತರು; ಗದೆ: ಮುದ್ಗರ; ಬಿರು: ಗಟ್ಟಿಯಾದುದು; ಕಿಡಿ: ಬೆಂಕಿ; ಮಸಗು: ಹರಡು, ತಿಕ್ಕು; ಕಬ್ಬೊಗೆ: ಕರಿಹೊಗೆ; ನೆಗೆ: ಜಿಗಿ; ಹೊಯ್ದು: ಹೊಡೆ; ಲಂಘಿಸು: ಎಗರು; ಗಜ: ಆನೆ; ಮಸ್ತಕ: ಶಿರ;

ಪದವಿಂಗಡಣೆ:
ಚಿಗಿದು +ಹರಿಸುತ +ಹಳಚಿದರೆ +ಕುಲದಿಗ್
ಇಭವೆದೆ+ಒಡೆದವು +ನಗಂಗಳ
ಬಿಗುಹು +ಸಡಿಲಿತು +ಧರಣಿ +ನೆಗ್ಗಿತು +ಚರಣ +ಹತಿಗಳಲಿ
ಜಿಗಿವ +ರಕುತದ +ಗದೆಯ +ಬಿರುವೊಯ್ಲ್
ಉಗಳೊಲಗೆ+ ಕಿಡಿ+ ಮಸಗಿ +ಕಬ್ಬೊಗೆ
ನೆಗೆಯೆ +ಹೊಯ್ದನು +ಭೀಮ +ಲಂಘಿಸಿ +ಗಜದ +ಮಸ್ತಕವ

ಅಚ್ಚರಿ:
(೧) ಯುದ್ಧದ ತೀವ್ರತೆಯನ್ನು ಚಿತ್ರಿಸುವ ಪರಿ – ಕುಲದಿಗಿಭವೆದೆಯೊಡೆದವು ನಗಂಗಳ ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ

ಪದ್ಯ ೫೫: ದ್ರೋಣರು ದ್ರುಪದನಿಗೆ ಹೇಗೆ ಉತ್ತರಿಸಿದರು?

ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ಧಾರೆಗಳ ಕಿಡಿ
ಹೊರಳಿಗಳ ಹೊರರಂಬು ಹೊಕ್ಕವು ಪಾಂಡು ಸೈನ್ಯದಲಿ (ದ್ರೋಣ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಪರ್ವತಗಳ ಮಕ್ಕಳು (ಚಿಕ್ಕ ಬೆಟ್ಟ, ಗುಡ್ಡ ಮುಂತಾದವು) ಗುಂಪುಗೂಡಿ ವಜ್ರಾಯುಧದೊಡನೆ ಸರಸವಾಡುವ ಕಾಲ ಬಂದಿತೇ ಶಿವ ಶಿವಾ ಎಂತಹ ಆಶ್ಚರ್ಯ ಎಂದುಕೊಂಡು ದ್ರೋಣನು ಕೋಪದಿಂದ ತಿರುವಿನಲ್ಲಿ ಹೂಡಿ ಬಾಣಗಳನ್ನು ಕಾರಿಸಿದನು. ಕಠೋರವಾದ ಸದ್ದುಮಾಡುತ್ತಾ ಬಾಯಲ್ಲಿ ಕಿಡಿಗಳ ಧಾರೆಗಳು ಸೂಸುತ್ತಿರಲು ಹೊಳೆಯುವ ಬಾಣಗಳು ಪಾಂಡವ ಸೈನ್ಯವನ್ನು ಮುತ್ತಿದವು.

ಅರ್ಥ:
ಗಿರಿ: ಬೆಟ್ಟ; ಮಕ್ಕಳು: ಸುತರು; ನೆರೆ: ಗುಂಪು; ವಜ್ರ: ಗಟ್ಟಿಯಾದ; ಸರಸ: ಚೆಲ್ಲಾಟ; ಕಾಲ: ಸಮಯ; ಹರಹರ: ಶಿವಶಿವಾ; ವಿಸ್ಮಯ: ಆಶ್ಚರ್ಯ; ಅತಿ: ಬಹಳ; ಹೊಗರು: ಕಾಂತಿ, ಪ್ರಕಾಶ; ಏರು: ಮೇಲೆ ಬಾ; ಖತಿ: ಕೋಪ; ಮಸಗು: ಹರಡು; ಕೆರಳು; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಕಠೋರ: ಬಿರುಸಾದ; ಮೊರಹು: ಸದ್ದು; ಧಾರೆ: ವರ್ಷ; ಕಿಡಿ: ಬೆಂಕಿ; ಹೊರಳು: ಉರುಳು, ಜಾರು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ಹೊಕ್ಕು: ಸೇರು; ಸೈನ್ಯ: ಸೇನೆ;

ಪದವಿಂಗಡಣೆ:
ಗಿರಿಯ +ಮಕ್ಕಳು +ನೆರೆದು +ವಜ್ರವ
ಸರಸವಾಡುವ +ಕಾಲವಾಯಿತೆ
ಹರಹರ್+ಅತಿ +ವಿಸ್ಮಯವೆನುತ +ಹೊಗರೇರಿ +ಖತಿ +ಮಸಗಿ
ತಿರುವ +ಕಾರಿಸಿದನು +ಕಠೋರದ
ಮೊರಹುಗಳ +ಬಾಯ್ಧಾರೆಗಳ+ ಕಿಡಿ
ಹೊರಳಿಗಳ +ಹೊರರ್+ಅಂಬು +ಹೊಕ್ಕವು +ಪಾಂಡು +ಸೈನ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ಮಕ್ಕಳು ನೆರೆದು ವಜ್ರವಸರಸವಾಡುವ ಕಾಲವಾಯಿತೆ ಹರಹರ
(೨) ಹ ಕಾರದ ತ್ರಿವಳಿ ಪದ – ಹೊರಳಿಗಳ ಹೊರರಂಬು ಹೊಕ್ಕವು

ಪದ್ಯ ೬: ಭೀಮನು ಏಕೆ ಬೇಸತ್ತನು?

ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ (ಭೀಷ್ಮ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ಭೀಮನು ಯುದ್ಧದಲ್ಲಿ ಆನೆಗಳನ್ನು ಕೊಂದು ಕೊಂದು ಬೇಸತ್ತನು. ದುಶ್ಯಾಸನನು ಎದುರಿಸಿದರೂ ಲೆಕ್ಕಿಸದೆ ಬೇಸತ್ತು ಕೋಪಗೊಂಡು, ರಾಜ್ಯ ಲೋಭದ ಬುದ್ಧಿಯು ಮರಣದಿಂದಲೇ ಫಲಿಸಬೇಕು, ದುರ್ಯೋಧನನು ಯುದ್ಧಕ್ಕೆ ಬರಲಿ ಕರೆಯಿರಿ ಎಂದು ಗದೆಯನ್ನು ತೂಗಿ ಗರ್ಜಿಸಿದನು.

ಅರ್ಥ:
ಕಲಹ: ಯುದ್ಧ; ಕರಿಘಟೆ: ಆನೆಗಳ ಗುಂಪು; ಹೊಯ್ದು: ಹೊಡೆದು; ಅಲಸು: ಬಳಲಿಕೆ; ಅನುಜ: ತಮ್ಮ; ಮುಂಕೊಳಿಸು: ಎದುರಿಸು; ಕಳುಹು: ತೆರಳು; ಬೇಸರ: ಬೇಜಾರು; ಅನಿಲಸುತ: ವಾಯುಪುತ್ರ; ಮಸಗು:ಹರಡು, ತಿಕ್ಕು; ನೆಲ: ಭೂಮಿ; ಲೋಭಿ: ಕೃಪಣ, ಜಿಪುಣ; ಬುದ್ಧಿ: ತಿಳಿವು, ಅರಿವು; ಮರಣ: ಸಾವು; ಫಲಿಸು: ಕೈಗೂಡು; ಬವರ: ಕಾಳಗ, ಯುದ್ಧ; ಗದೆ: ಒಂದು ಬಗೆಯ ಆಯುಧ, ಮುದ್ಗರ; ತೂಗು:ತೂಗಾಡಿಸು;

ಪದವಿಂಗಡಣೆ:
ಕಲಹದೊಳು +ಕರಿಘಟೆಯ +ಹೊಯ್ +ಹೊ
ಯ್ದ್+ಅಲಸಿ +ಕೌರವನ್+ಅನುಜನನು +ಮುಂ
ಕೊಳಿಸಿ +ಕೊಳ್ಳದೆ +ಕಳುಹಿ +ಬೇಸರುತ್+ಅನಿಲಸುತ +ಮಸಗಿ
ನೆಲನ +ಲೋಭಿಯ +ಬುದ್ಧಿ +ಮರಣಕೆ
ಫಲಿಸಬೇಹುದು +ಕರೆ+ ಸುಯೋಧನ
ನಿಲಲಿ+ ಬವರಕ್ಕೆನುತ +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಭೀಮನ ಖಾರವಾದ ಮಾತು – ನೆಲನ ಲೋಭಿಯ ಬುದ್ಧಿ ಮರಣಕೆ ಫಲಿಸಬೇಹುದು ಕರೆ ಸುಯೋಧನ

ಪದ್ಯ ೭೭: ಯಾರು ಯುದ್ಧಕ್ಕೆ ಸಿದ್ಧರಾದರು?

ನೊಂದನವನಿಪನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು
ಒಂದು ಕಡೆಯೊಳು ಮಸಗಿದನು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯೊಳು ಭೀಷ್ಮ ದುಶ್ಯಾಸನ ಕೃಪಾದಿಗಳು (ವಿರಾಟ ಪರ್ವ, ೯ ಸಂಧಿ, ೭೭ ಪದ್ಯ)

ತಾತ್ಪರ್ಯ:
ಕೌರವನು ನೊಂದಿದ್ದಾನೆ, ಇದಕ್ಕೆ ಪ್ರತಿಯಾಗಿ ಅರ್ಜುನನನ್ನು ಸಂಹರಿಸಿ ತೋರಿಸುತ್ತೇನೆ ಎಂದು ನಿಶ್ಚಯಿಸಿ ಬಿಲ್ಲಿನ ಹೆದೆಯನ್ನು ಮಿಡಿದು ಕರ್ಣನು ಒಂದು ಕಡೆ ಕೌರವನ ಬಳಿಗೆ ಬಂದನು. ಅಶ್ವತ್ಥಾಮನು ಇನ್ನೊಂದು ಕಡೆಯಿಂದ ಬಂದನು. ವೃಷಸೇನ, ಜಯದ್ರಥ, ಭೀಷ್ಮ, ಕೃಪ, ದುಶ್ಯಾಸನರು ಮತ್ತೊಂದು ಕಡೆಯಿಂದ ಬಂದರು.

ಅರ್ಥ:
ನೊಂದು: ನೋವನುಂಡು; ಅವನಿಪ: ರಾಜ; ಕೊಂದು: ಕೊಲ್ಲು; ತೋರು: ಗೋಚರ; ರವಿಸುತ: ಸೂರ್ಯನ ಮಗ (ಕರ್ಣ); ಕಡೆ: ಬದಿ; ಮೊಳಗು: ಸದ್ದು; ಬಲು: ಬಹಳ; ಬಿಲ್ಲು: ಚಾಪ; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಮಸಗು: ಹರಡು, ಕೆರಳು; ನಂದನ: ಮಗ; ಆದಿ: ಮುಂತಾದವರು;

ಪದವಿಂಗಡಣೆ:
ನೊಂದನ್+ಅವನಿಪನ್+ಇಂದು +ಪಾರ್ಥನ
ಕೊಂದು +ತೋರುವೆನ್+ಎಂದು +ರವಿಸುತನ್
ಒಂದು +ಕಡೆಯಲಿ +ಮೊಳಗಿದನು +ಬಲು +ಬಿಲ್ಲ +ಜೇವಡೆದು
ಒಂದು +ಕಡೆಯೊಳು +ಮಸಗಿದನು +ಗುರು
ನಂದನನು +ವೃಷಸೇನ +ಸೈಂಧವರ್
ಒಂದು +ಕಡೆಯೊಳು +ಭೀಷ್ಮ +ದುಶ್ಯಾಸನ +ಕೃಪಾದಿಗಳು

ಅಚ್ಚರಿ:
(೧) ಇಂದು, ಕೊಂದು, ಒಂದು, ಎಂದು – ಪ್ರಾಸ ಪದಗಳು

ಪದ್ಯ ೨೬: ಧರ್ಮಜನು ಅರ್ಜುನನ ಒಣದೊಡ್ಡಸ್ತಿಕೆಯನ್ನು ನಿಲ್ಲಿಸಲು ಏಕೆ ಹೇಳಿದ?

ಮಲೆತು ಧಾಳಾಧೂಳಿಯಲಿ ಬಲ
ಸುಳಿ ಮಸಗಿಯೆನ್ನೊಬ್ಬನನು ಮೈ
ಬಳಸಿ ಕಾದಿತು ವೀರ ಕರ್ಣನ ಕೂಡೆ ತಲೆಯೊತ್ತಿ
ಒಲವರವು ನಿನಗುಳ್ಳರಾಗಳೆ
ನಿಲಿಸಿದಾ ನೀ ಬಂದು ಬಯಲ
ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ (ಕರ್ಣ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಮ್ಮ ಸೈನ್ಯವೆಲ್ಲಾ ಕರ್ಣನನ್ನು ತಡೆದು ನನ್ನನ್ನು ಸುಟ್ಟುಗಟ್ಟಿ ಅವನೊಡನೆ ಘೋರತರವಾಗಿ ಯುದ್ಧಮಾಡಿತು. ನನ್ನ ಮೇಲೆ ಪ್ರೀತಿಯಿದಿದ್ದರೆ ಆಗ ನೀನು ಬಂದು ಕರ್ಣನನ್ನು ನಿಲ್ಲಿಸಿದೆಯಾ? ಕೇವಲ ಒಣದೊಡ್ಡಸ್ತಿಕೆಯನ್ನು ಹೇಳಿಕೊಳ್ಳಬೇಡ ಬಿಡು ಎಂದು ಧರ್ಮಜನು ಅರ್ಜುನನನ್ನು ಹಂಗಿಸಿದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲ: ಶಕ್ತಿ, ಸೈನ್ಯ; ಸುಳಿ: ಸುತ್ತು, ಆವರ್ತ; ಮಸಗು: ಹರಡು; ಕೆರಳು; ಮೈ: ತನು,ದೇಹ; ಬಳಸು: ಉಪಯೋಗಿಸು; ಕಾದು: ಹೋರಾಡು; ವೀರ: ಪರಾಕ್ರಮಿ; ಕೂಡೆ: ಜೊತೆ; ತೆಲೆ: ಶಿರ; ಒತ್ತು: ಚುಚ್ಚು, ತಿವಿ, ನೂಕು; ಒಲವು: ಪ್ರೀತಿ; ನಿಲಿಸು: ತಡೆ; ಬಂದು: ಆಗಮಿಸು; ಬಯಲ: ನಿರರ್ಥಕವಾದುದು; ಅಗ್ಗಳಿಕೆ: ಶ್ರೇಷ್ಠತೆ, ಹೊಗಳಿಕೆ; ಬಿಡು: ತ್ಯಜಿಸು; ಕೆದರು: ಹರಡು; ಮಾಣ್: ಬಿಡು; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಮಲೆತು +ಧಾಳಾಧೂಳಿಯಲಿ +ಬಲ
ಸುಳಿ +ಮಸಗಿ+ಎನ್ನೊಬ್ಬನನು +ಮೈ
ಬಳಸಿ +ಕಾದಿತು +ವೀರ +ಕರ್ಣನ +ಕೂಡೆ +ತಲೆಯೊತ್ತಿ
ಒಲವರವು+ ನಿನಗುಳ್ಳರ್+ಆಗಳೆ
ನಿಲಿಸಿದಾ +ನೀ +ಬಂದು +ಬಯಲ್
ಅಗ್ಗಳಿಕೆಯನೆ +ಬಿಡೆ +ಕೆದರುತಿಹೆ+ ಮಾಣೆಂದು +ನೃಪ +ನುಡಿದ

ಅಚ್ಚರಿ:
(೧) ಕೇವಲ ಹೊಗಳಿಕೆ ನಿಲ್ಲಿಸು ಎಂದು ಹೇಳುವ ಪರಿ – ಬಯಲಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ