ಪದ್ಯ ೩೫: ಅರ್ಜುನನು ಧರ್ಮಜನ ಮಾತಿನ ಹಿರಿಮೆಯನ್ನು ಹೇಗೆ ಹೇಳಿದನು?

ಧರ್ಮವಾಗಲಿ ಮೇಣು ಜಗದಲ
ಧರ್ಮವಾಗಲಿ ರಾಜಮಂತ್ರದ
ಮರ್ಮವಾಗಲಿ ನೀತಿ ಬಾಹಿರವಾಗಲದು ಮೇಣು
ಧರ್ಮಪುತ್ರನ ಬೆಸನು ವೈದಿಕ
ಧರ್ಮವೆಮಗದು ರಾಜಮಂತ್ರದ
ನಿರ್ಮಲಿನ ಮತವೆಮಗೆ ಬೇರೊಂದಿಲ್ಲ ಮತವೆಂದ (ಅರಣ್ಯ ಪರ್ವ, ೨೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧರ್ಮವೋ, ಅಧರ್ಮವೋ, ರಾಜಧರ್ಮದ ರಹಸ್ಯವೋ, ನೀತಿಬಾಹಿರವೋ, ಧರ್ಮರಾಯನು ಮಾಡಿದ ಆಜ್ಞೆಯು ನಮಗೆ ವೈದಿಕ ವಿಧಿಯಿದ್ದಂತೆ, ನಮಗೆ ಅವನಾಜ್ಞೆಯೇ ರಾಜನೀತಿಯ ಅಂತಿಮ ತೀರ್ಮಾನ ಎಂದು ಅರ್ಜುನನು ಧರ್ಮಜನ್ ಆಜ್ಞೆಯ ಹಿರಿಮೆಯನ್ನು ತಿಳಿಸಿದನು.

ಅರ್ಥ:
ಧರ್ಮ: ಧಾರಣೆ ಮಾಡಿದುದು; ಮೇಣ್: ಅಥವ; ಜಗ: ಪ್ರಪಂಚ; ಅಧರ್ಮ: ನ್ಯಾಯವಲ್ಲದುದು; ರಾಜಮಂತ್ರ; ರಾಜ ನೀತಿ; ಮರ್ಮ: ಒಳ ಅರ್ಥ, ಗುಟ್ಟು; ಬಾಹಿರ: ಹೊರಗಡೆ; ಬೆಸ: ಕಾರ್ಯ; ವೈದಿಕ: ವೇದೋಕ್ತ; ನಿರ್ಮಲಿನ: ಕೆಟ್ಟದಲ್ಲದ; ಮತ: ಅಭಿಪ್ರಾಯ; ಬೇರೆ: ಅನ್ಯ;

ಪದವಿಂಗಡಣೆ:
ಧರ್ಮವಾಗಲಿ +ಮೇಣು +ಜಗದಲ್
ಅಧರ್ಮವಾಗಲಿ +ರಾಜಮಂತ್ರದ
ಮರ್ಮವಾಗಲಿ +ನೀತಿ +ಬಾಹಿರವಾಗಲದು+ ಮೇಣು
ಧರ್ಮಪುತ್ರನ+ ಬೆಸನು +ವೈದಿಕ
ಧರ್ಮವೆಮಗದು +ರಾಜಮಂತ್ರದ
ನಿರ್ಮಲಿನ +ಮತವೆಮಗೆ +ಬೇರೊಂದಿಲ್ಲ +ಮತವೆಂದ

ಅಚ್ಚರಿ:
(೧) ವಿರುದ್ಧ ಪದ – ಧರ್ಮ, ಅಧರ್ಮ
(೨) ಧರ್ಮ, ಮರ್ಮ – ಪ್ರಾಸ ಪದ
(೩) ಧರ್ಮ – ೧,೨,೪,೫ ಸಾಲಿನ ಮೊದಲ ಪದ

ಪದ್ಯ ೭೯: ವಿದುರನು ಧೃತರಾಷ್ಟ್ರನ ಮಾತನ್ನು ಏಕೆ ಒಪ್ಪಿದನು?

ಮೊದಲಲಿದು ಸದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿದ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ (ಸಭಾ ಪರ್ವ, ೧೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮೊದಲನೆಯದಾಗಿ ಇದು ಒಳ್ಳೆಯ ದ್ಯೂತ ಪಂದ್ಯವಾಗಿ ಆರಂಭವಾದರೂ ಕೊನೆಗೆ ಕಷ್ಟಕರವಾದ ದ್ಯೂತವಾಗಿಬಿಡುತ್ತದೆ. ಮರ್ಮವನ್ನು ಚುಚ್ಚುವ ಕತ್ತಿಯನ್ನು ತಪ್ಪಿಸಲಾಗುತ್ತದೆಯೇ? ಈ ದ್ಯೂತವು ಕೊನೆಗೆ ಕೌರವರ ವಿನಾಶದ ಬೀಜವಾಗುತ್ತದೆ. ನಿಮಗೆ ಇದು ಸರಿಯೆಂದು ಕಾಣಿಸಿತೇ? ಆಗಲಿ ನಾನು ಒಪ್ಪಿಕೊಂಡೆ ಎಂದು ವಿದುರನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮೊದಲು: ಮುನ್ನ; ಸುದ್ಯೂತ: ಒಳ್ಳೆಯ ಪಗಡೆಯಾಟ; ವಿಷಮ: ಕೆಟ್ಟ, ದುಷ್ಟ; ಅವಸಾನ:ಅಂತ್ಯ, ಮುಕ್ತಾಯ; ದ್ಯೂತ: ಪಗಡೆ, ಜೂಜು; ನಿಲುವುದು: ನಿಂತುಕೊಳ್ಳು, ಸ್ಥಾನ; ನಿವಾರಣೆ: ಕಳೆಯುವಿಕೆ; ಮರ್ಮ: ಒಳ ಅರ್ಥ, ಗುಟ್ಟು; ಸಬಳ: ಈಟಿ, ಭರ್ಜಿ; ಇರಿ: ಚುಚ್ಚು; ತುದಿ: ಕೊನೆ; ಪಥ್ಯ: ಯೋಗ್ಯವಾದುದು; ವರ್ಗ: ಗುಂಫು; ವಿನಾಶ: ಹಾಳು, ಅಂತ್ಯ; ಬೀಜ: ಮೂಲ, ಕಾರಣ; ಸೊಗಸು: ಚೆಲುವು; ಕೈಕೊಂಡು: ಒಪ್ಪು;

ಪದವಿಂಗಡಣೆ:
ಮೊದಲಲ್+ಇದು +ಸದ್ಯೂತವ್+ಅವಸಾ
ನದಲಿ +ವಿಷಮ +ದ್ಯೂತದಲಿ +ನಿಲು
ವುದು +ನಿವಾರಣವುಂಟೆ +ಮರ್ಮವನ್+ಇರಿದ +ಸಬಳದಲಿ
ತುದಿಗೆ+ ತಾನಿದ+ಪಥ್ಯ +ಕುರು+ವ
ರ್ಗದಿ +ವಿನಾಶಕ +ಬೀಜವದು+ ನಿಮಗ್
ಇದರೊಳಗೆ+ ಸೊಗಸಾದುದೇ +ಕೈಕೊಂಡೆ +ನಾನೆಂದ

ಅಚ್ಚರಿ:
(೧) ಸದ್ಯೂತ, ವಿಷಮದ್ಯೂತ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ನಿವಾರಣವುಂಟೆ ಮರ್ಮವನಿರಿದ ಸಬಳದಲಿ

ಪದ್ಯ ೧೪: ಶ್ರೀಕೃಷ್ಣನು ಯಾವ ವೇಷದಲ್ಲಿ ಕರ್ಣನ ಬಳಿಗೆ ಬಂದನು?

ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ (ಕರ್ಣ ಪರ್ವ, ೨೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನು ಬಿಟ್ಟ ಅಂಜಲಿಕ ಬಾಣವು ಉರಿಯನ್ನುಗುಳುತ್ತ ಕರ್ಣನ ಎದೆಯನ್ನು ಪೂರ್ಣಭೇದಿಸಿ ಗಟ್ಟಿಯಾಗಿ ನಾಟಿತು. ಆದರೆ ಅವನ ಪ್ರಾಣವು ಹೋಗಲಿಲ್ಲ, ಇದರ ಮರ್ಮವನ್ನು ಅರಿತ ಶ್ರೀಕೃಷ್ಣನು ತನ್ನ ಕುದುರೆಯ ಲಗಾಮನ್ನು ಬಿಟ್ಟು ಬ್ರಾಹ್ಮಣ ವೇಷದಲ್ಲಿ ಕರ್ಣನ ಬಳಿ ಬಂದನು.

ಅರ್ಥ:
ಉರಿ: ಬೆಂಕಿ; ಉಗುಳು: ಹೊರ ಸೂಸು; ಚಿಮ್ಮು; ಬಾಣ: ಶರ; ಕತ್ತರಿಸು: ಸೀಳು; ಎಸಲು: ಚಿಗುರು; ಸಮರ: ಯುದ್ಧ; ಉರ: ಎದೆ, ವಕ್ಷಸ್ಥಳ; ಕೀಲಿಸು: ತಾಟಿತು; ಅಂಬು: ಬಾಣ; ಗರಿಗಡಿ:ಪೂರ್ಣಭೇದಿಸಿ; ಗಾಢ: ಹೆಚ್ಚಳ, ಅತಿಶಯ; ಹರಣ: ಜೀವ, ಪ್ರಾಣ; ತೊಲಗು: ಹೊರಟುಹೋಗು; ಮರ್ಮ: ಒಳ ಅರ್ಥ, ಗುಟ್ಟು; ಮುರಹರ: ಕೃಷ್ಣ; ಕಂಡು: ನೋಡು; ರಥ: ಬಂಡಿ, ತೇರು; ವಾಘೆ: ಲಗಾಮು; ಇರಿಸು: ಇಟ್ಟು; ಹೊರೆ:ಹತ್ತಿರ, ಸಮೀಪ; ಬಂದು: ಆಗಮಿಸು; ವಿಪ್ರ: ಬ್ರಾಹ್ಮಣ; ವೇಷ: ಉಡುಗೆ ತೊಡುಗೆ;

ಪದವಿಂಗಡಣೆ:
ಉರಿಯನ್+ಉಗುಳುವ +ಬಾಣದಲಿ +ಕ
ತ್ತರಿಸಿ +ಕರ್ಣನನ್+ಎಸಲು +ಸಮರದಲ್
ಉರವ+ ಕೀಲಿಸಿತ್+ಅಂಬು +ಗರಿಗಡಿಯಾಗಿ +ಗಾಢದಲಿ
ಹರಣ+ ತೊಲಗದ+ ಮರ್ಮವನು +ಮುರ
ಹರನು +ಕಂಡನು +ರಥದ +ವಾಘೆಯನ್
ಇರಿಸಿ+ ಕರ್ಣನ +ಹೊರೆಗೆ +ಬಂದನು +ವಿಪ್ರವೇಷದಲಿ

ಅಚ್ಚರಿ:
(೧) ಕತ್ತರಿಸಿ, ಇರಿಸಿ – ಪ್ರಾಸ ಪದ
(೨) ಅಂಬು, ಬಾಣ – ಸಮನಾರ್ಥಕ ಪದ

ಪದ್ಯ ೨೯: ಕರ್ಣನು ಯುಧಿಷ್ಥಿರನ ಮೇಲೆ ಹೇಗೆ ದಾಳಿ ಮಾಡಿದನು?

ಎಚ್ಚನರಸನ ಭುಜವ ಕೆಲಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ (ಕರ್ಣ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕರ್ಣನು ಯುಧಿಷ್ಠಿರನೆದುರು ಯುದ್ಧಕ್ಕೆ ನಿಂದು ಅವನ ಭುಜಕ್ಕೆ ತನ್ನ ಬಾಣಗಳನ್ನು ಹೊಡೆದನು, ಪಕ್ಕಕ್ಕೆ ಸರಿದು ಸಾರಥಿಯ ಮೇಲೆ ಬಾಣ ಪ್ರಯೋಗದಿಂದ ನೋವನ್ನುಂಟು ಮಾಡಿ, ರಥದ ಅಚ್ಚನ್ನೂ, ಧ್ವಜವನ್ನೂ ಬಾಣದಿಂದ ಹೊಡೆದು ಅವನನ್ನು ಮೂದಲಿಸಿದನು. ಮತ್ತೆ ಹೊಡೆದು ಮರ್ಮಾಘಾತವಾಗುವಂತೆ ಚುಚ್ಚು ಮಾತುಗಳನ್ನಾಡಿ ಯುಧಿಷ್ಠಿರನಿಗೆ ಘಾಸಿಮಾಡಿದನು.

ಅರ್ಥ:
ಎಚ್ಚು: ಸವರು, ಬಾಣಬಿಡು; ಅರಸ: ರಾಜ; ಭುಜ: ತೋಲು; ಸಾರು: ಬಳಿ, ಲೇಪಿಸು; ಕೆಲ: ಸ್ವಲ್ಪ; ಸಾರಥಿ: ಸೂತ, ರಥವನ್ನು ಓಡಿಸುವ; ರಥ: ಬಂಡಿ; ಅಚ್ಚು: ನಡುಗೂಟ, ಕೀಲು, ಚಕ್ರ; ಹಯ: ಕುದುರೆ; ಅವನೀಪತಿ: ರಾಜ; ಟೆಕ್ಕೆ: ಧ್ವಜ; ಮೂದಲಿಸು: ಹಂಗಿಸು; ಪುನರಪಿ: ಪುನಃ, ಮತ್ತೆ; ಭಂಗ: ತುಂಡು, ಚೂರು; ನೃಪ: ರಾಜ; ಮರ್ಮ: ದೇಹದ ಆಯಕಟ್ಟಿನ ಸ್ಥಳ; ಚುಚ್ಚು: ಇರಿ; ನುಡಿ: ಮಾತಾಡು; ಘಾಸಿ: ಹಿಂಸೆ, ಕಷ್ಟ; ನೃಪಾಲಕ: ರಾಜ;

ಪದವಿಂಗಡಣೆ:
ಎಚ್ಚನ್+ಅರಸನ+ ಭುಜವ +ಕೆಲ+ಸಾರ್ದ್
ಎಚ್ಚನ್+ಆತನ +ಸಾರಥಿಯ +ರಥದ್
ಅಚ್ಚನ್+ಆತನ +ಹಯವನ್+ಅವನೀಪತಿಯ +ಟೆಕ್ಕೆಯವ
ಎಚ್ಚು +ಮೂದಲಿಸಿದನು +ಪುನರಪಿ
ಯೆಚ್ಚು+ ಭಂಗಿಸಿ+ ನೃಪನ+ ಮರ್ಮವ
ಚುಚ್ಚಿ+ ನುಡಿದನು +ಘಾಸಿ +ಮಾಡಿದನಾ +ನೃಪಾಲಕನ

ಅಚ್ಚರಿ:
(೧) ಅರಸ, ನೃಪಾಲಕ, ಅವನೀಪತಿ – ಸಮನಾರ್ಥಕ ಪದಗಳು
(೨) ಮೂದಲಿಸು, ಘಾಸಿ ಮಾಡು, ಚುಚ್ಚು ನುಡಿ – ನೋವನ್ನುಂಟು ಮಾಡಿದ ಎಂದು ಹೇಳುವ ಪದಗಳು

ಪದ್ಯ ೮೮: ಕಾರ್ಯಸಿದ್ಧಿಯ ಮರ್ಮವಾವುದು?

ತಮ್ಮ ಕಾರ್ಯನಿಮಿತ್ತ ಗರ್ವವ
ನೆಮ್ಮಿದೊಡೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಕೃತಿಯೊ
ಳಮ್ಮಹವನೈದುವ ವೊಲೊದಗುವ
ಕರ್ಮಿಗಳನೊಳಹೊಯ್ದುಕೊಳ್ವುದು ಮರ್ಮ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ತನ್ನ ಕಾರ್ಯ ಸಾಧನೆಯಾಗಬೇಕೆಂದರೆ, ಗರ್ವವನ್ನು ಬಿಡಬೇಕು, ಏಕೆಂದರೆ ಗರ್ವದಿಂದ ಕಾರ್ಯವು ಕಠಿಣವಾಗುತ್ತದೆ. ಮನುಷ್ಯರಾಗಲಿ, ಪ್ರಾಣಿಗಳಾಗಲಿ, ಚರಾಚರಗಳಾಗಲಿ ಅವುಗಳ ಬಳಿಗೆ ಹೋಗಿ ಅವರ ಉಪಕಾರವನ್ನು ಪಡೆದು ಅದರಿಂದ ಪರಮ ಸಂತೋಷಗೊಂಡು ಅವರ ಸೌಹಾರ್ದವನ್ನು ಗಳಿಸಿಕೊಳ್ಳುವುದೇ ಕಾರ್ಯಸಿದ್ಧಿಯ ಮರ್ಮವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತಮ್ಮ: ಅವರ; ಕಾರ್ಯ: ಕೆಲಸ; ನಿಮಿತ್ತ: ನೆಪ, ಕಾರಣ; ಗರ್ವ: ಅಹಂಕಾರ; ಉರೆ: ವಿಶೇಷವಾಗಿ; ದಿಮ್ಮಿತು: ದೊಡ್ಡದಾದ, ಬಲಿಷ್ಠವಾದ; ಮರ್ತ್ಯ: ಭೂಮಿ; ಚರಾಚರ: ಜೀವಿಸುವ ಮತ್ತು ಜೀವಿಸದ; ಮಮತೆ: ಪ್ರೀತಿ, ಅಭಿಮಾನ; ನಡೆದು: ಸಾಗಿ; ಉಪಕೃತಿ: ಉಪಕಾರ, ನೆರವು; ಐದು:ಹೊಂದು, ಸೇರು, ಹೋಗು; ಒದಗು: ಸಿಗುವ; ಕರ್ಮಿ: ಕೆಲಸಗಾರ; ಒಳಹೊಯ್ದು: ಸೇರಿಸಿಕೊಳ್ಳು; ಮರ್ಮ: ರಹಸ್ಯವಾಗಿ ಕಾರ್ಯ ನಿರ್ವಹಿಸುವವನು;

ಪದವಿಂಗಡಣೆ:
ತಮ್ಮ+ ಕಾರ್ಯ+ನಿಮಿತ್ತ +ಗರ್ವವನ್
ಎಮ್ಮಿದೊಡೆ +ತದ್ಗರ್ವದಿಂದ್+ಉರೆ
ದಿಮ್ಮಿತಹುದಾ +ಕಾರ್ಯ +ಮರ್ತ್ಯ +ಚರಾಚರಂಗಳಲಿ
ನಿರ್ಮಮತೆಯಲಿ +ನಡೆದ್+ಉಪಕೃತಿಯೊಳ್
ಅಮ್ಮಹವನ್+ಐದುವ +ವೊಲ್+ಒದಗುವ
ಕರ್ಮಿಗಳನ್+ಒಳಹೊಯ್ದುಕೊಳ್ವುದು +ಮರ್ಮ +ಕೇಳೆಂದ

ಅಚ್ಚರಿ:
(೧)ನಿರ್ಮಮತೆ, ಮರ್ಮ, ಕರ್ಮಿ, ಕರ್ಮ – ಪದಗಳ ಬಳಕೆ

ಪದ್ಯ ೮೫: ಧೃತರಾಷ್ಟ್ರನು ಮತ್ತಾವ ಪ್ರಶ್ನೆಗಳನ್ನು ಕೇಳಿದ?

ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜಮಂತ್ರದ
ಮರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಿರೆ ಸಾಕೆಂದು ಬಿನ್ನಹ ಮಾಡಿದನು ಭೂಪ (ಉದ್ಯೋಗ ಪರ್ವ, ೪ ಸಂಧಿ, ೮೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನಲ್ಲಿದ್ದ ಶಂಕೆಗಳನ್ನು ಪ್ರಶ್ನೆಯರೂಪದಲ್ಲಿ ಸನತ್ಸುಜಾತರ ಮುಂದೆ ಇಟ್ಟನು. ಈ ಜಗತ್ತಿನಲ್ಲಿ ಧರ್ಮಯೆಂದರೇನು, ಯಾವುದನ್ನು ಧರ್ಮವೆಂದು ಕರೆಯುತ್ತಾರೆ, ಹಾಗಾದರೆ ಅಧರ್ಮ ಯಾವುದು, ರಾಜನೀತಿಯ ಮರ್ಮವೇನು, ಒಳ್ಳೆಯ ಮಾರ್ಗ ಯಾವುದು ಹಾಗೆಯೇ ಕೆಟ್ಟ ಮಾರ್ಗ ಯಾವುದು, ವಿಧಿವಿಹಿತ ದುಷ್ಕರ್ಮವಾವುದು ಇದರ ಭೇದವನ್ನು ದಯಮಾಡಿ ತಿಳಿಸಿ ಎಂದು ತನ್ನ ಕೋರಿಕೆಯನ್ನು ಸನತ್ಸುಜಾತರರ ಮುಂದಿಟ್ಟನು.

ಅರ್ಥ:
ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಮೇಣು: ಮತ್ತು; ಜಗ: ಜಗತ್ತು; ಅಧರ್ಮ: ನ್ಯಾಯವಲ್ಲದುದು; ರಾಜಮಂತ್ರ: ಮಂತ್ರಾಲೋಚನೆ; ಮರ್ಮ: ಅಂತರಾರ್ಥ; ಮಾರ್ಗ: ದಾರಿ; ಅಮಾರ್ಗ: ಅಡ್ಡದಾರಿ; ಕರ್ಮ: ಕಾರ್ಯದ ಫಲ; ಧರ್ಮ, ಕೆಲಸ; ವಿಧಿ:ಆಜ್ಞೆ, ಆದೇಶ, ಬ್ರಹ್ಮ, ಕಟ್ಟಲೆ; ದುಷ್ಕರ್ಮ: ಕೆಟ್ಟ ನಡತೆ; ಭೇದ: ಅಂತರ, ವ್ಯತ್ಯಾಸ; ನಿರ್ಮಿಸು: ರಚಿಸು; ಸಾಕು: ಕೊನೆ, ಅಂತ್ಯ; ಬಿನ್ನಹ: ಕೋರಿಕೆ; ಭೂಪ: ರಾಜ;

ಪದವಿಂಗಡಣೆ:
ಧರ್ಮ+ವಾವುದು+ ಮೇಣು +ಜಗದೊಳ್
ಅಧರ್ಮ+ವಾವುದು +ರಾಜಮಂತ್ರದ
ಮರ್ಮ+ವಾವುದು+ ಮಾರ್ಗ+ವಾವುದ್+ಅಮಾರ್ಗವೆಂದೇನು
ಕರ್ಮವಾವುದು +ವಿಧಿವಿಹಿತ+ ದು
ಷ್ಕರ್ಮ+ವಾವುದದ್+ಎಂಬ +ಭೇದವ
ನಿರ್ಮಿಸಿರೆ +ಸಾಕೆಂದು +ಬಿನ್ನಹ +ಮಾಡಿದನು +ಭೂಪ

ಅಚ್ಚರಿ:
(೧) ಧರ್ಮ, ಅಧರ್ಮ; ಮಾರ್ಗ ಅಮಾರ್ಗ; ಕರ್ಮ ದುಷ್ಕರ್ಮ – ವಿರುದ್ಧ ಪದಗಳು
(೨) ಧರ್ಮ, ಅಧರ್ಮ, ಮರ್ಮ, ಕರ್ಮ, ದುಷ್ಕರ್ಮ – ಪ್ರಾಸ ಪದಗಳು