ಪದ್ಯ ೨೮: ಮುನಿಗಳು ಭೀಷ್ಮರಿಗೆ ಯಾವ ವಿಷಯವನ್ನು ತಿಳಿಸಿದರು?

ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋರ್ಧ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನವರಿಗರುಹಿದರು (ಆದಿ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪಾಂಡವರ ಜನನವನ್ನೂ, ಪಾಂಡುವಿನ ಪರಾಕ್ರಮವನ್ನೂ, ಋಷಿಗಳು ಹೊಗಳಿದರು. ನಂತರ ಪಾಂಡುವಿನ ಮರಣ, ಮಾದ್ರಿಯ ಸಹಗಮನ, ಅವರ ಅಪರಕ್ರಿಯೆಗಳ ವಿಷಯಗಳೆಲ್ಲವನ್ನೂ ಭೀಷ್ಮನೇ ಮೊದಲಾದವರಿಗೆ ತಿಳಿಸಿದರು.

ಅರ್ಥ:
ಜನನ: ಹುಟ್ಟು; ಕ್ರಮ: ನಡೆಯುವಿಕೆ; ವಿಕ್ರಮ: ಶೌರ್ಯ; ತಪೋಧನ: ಋಷಿ; ನಿವಹ: ಗುಂಪು; ಕೊಂಡಾಡು: ಹೊಗಳು; ಬಳಿಕ: ನಂತರ; ಮರಣ: ಸಾವು; ಸಂಗತಿ: ವಿಚಾರ; ಅವನಿಪ: ರಾಜ; ಸಂಸ್ಕಾರ: ತಿದ್ದುಪಾಟು, ಪರಿಷ್ಕರಣ; ಯುವತಿ: ಹೆಣ್ಣು; ಸಹಗಮನ: ಪತಿಯ ಶವದ ಜೊತೆಯಲ್ಲಿಯೇ ಪತ್ನಿಯು ಚಿತೆಯೇರುವುದು; ಊರ್ಧ್ವ: ಕ್ರಿಯೆ ಅಂತ್ಯಕ್ರಿಯೆ; ದೇಹಿಕ: ಬೇಡುವವ; ವಿವಿಧ: ಹಲವಾರು; ಕೃತ್ಯ: ಕಾರ್ಯ; ಪ್ರಪಂಚ: ಜಗತ್ತು; ಅರುಹು: ಹೇಳು;

ಪದವಿಂಗಡಣೆ:
ಇವರ +ಜನನ +ಕ್ರಮವನ್+ಆ+ ಪಾಂ
ಡುವಿನ +ವಿಕ್ರಮವನು+ ತಪೋಧನ
ನಿವಹ +ಕೊಂಡಾಡಿದುದು +ಬಳಿಕಿನ +ಮರಣ+ಸಂಗತಿಯ
ಅವನಿಪನ +ಸಂಸ್ಕಾರ +ಮಾದ್ರೀ
ಯುವತಿ +ಸಹಗಮನ+ಊರ್ಧ್ವ +ದೇಹಿಕ
ವಿವಿಧ +ಕೃತ್ಯವನೀ +ಪ್ರಪಂಚವನ್+ಅವರಿಗ್+ಅರುಹಿದರು

ಅಚ್ಚರಿ:
(೧) ಮುನಿಗಳು ಎಂದು ಹೇಳಲು ತಪೋಧನ ಪದದ ಬಳಕೆ

ಪದ್ಯ ೨೯: ಶಂತನು ಭೀಷ್ಮನಿಗೆ ಯಾವ ವರವನ್ನಿತ್ತನು?

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವು ನಿನ್ನಿಚ್ಛೆ ಹೋಗೆಂದ (ಆದಿ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಪಲ್ಲಕ್ಕಿಯನ್ನು ತರಿಸಿ, ಕೋಲನ್ನು ಹಿಡಿದ ವಂದಿಮಾಗಧರು ಹೊಗಳುತಿರಲು, ಯೋಜನಗಂಧಿಯನ್ನು ಕರೆದುಕೊಂಡು ಬಂದು ಶಂತನುವಿನೊಡನೆ ಮದುವೆ ಮಾಡಿಸಿದನು. ಭೀಷ್ಮನು ಮಾಡಿದ ಪ್ರತಿಜ್ಞೆಯನ್ನು ಕೇಳಿದ ಶಂತನು ಅವನಿಗೆ ನಿನ್ನಿಚ್ಛೆ ಬಂದಾಗ ಮರಣ ಬರಲಿ ಎಂಬ ವರವನ್ನು ಕೊಟ್ಟನು.

ಅರ್ಥ:
ತರಿಸು: ಬರೆಮಾಡು; ದಂಡಿ: ಕೋಲು; ದಂಡಿಗೆ: ಪಲ್ಲಕ್ಕಿ; ಚರ: ಸೇವಕ; ಉಗ್ಗಡಣೆ: ಕೂಗು; ಸರಸಿರುಹಮುಖಿ: ಕಮಲದಂತ ಮುಖವುಳ್ಳವಳು, ಸುಂದರಿ, ಹೆಣ್ಣು; ಮದುವೆ: ವಿವಾಹ; ಪಿತ: ತಮ್ದೆ; ಉರವಣಿಸು: ಉತ್ಸಾಹ, ಆತುರಿಸು; ಮಗ: ಪುತ್ರ; ನುಡಿ: ಮಾತಾಡು; ಭಾಷೆ: ನುಡಿ; ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ವರ: ಅನುಗ್ರಹ, ಕೊಡುಗೆ; ಮರಣ: ಸಾವು; ಇಚ್ಛೆ: ಆಸೆ; ಹೋಗು: ತೆರಳು;

ಪದವಿಂಗಡಣೆ:
ತರಿಸಿದನು+ ದಂಡಿಗೆಯ +ದಂಡಿಯ
ಚರರ +ನೆಲನ್+ಉಗ್ಗಡಣೆಯಲಿ +ಸರ
ಸಿರುಹಮುಖಿಯನು +ತಂದು+ ಮದುವೆಯ +ಮಾಡಿದನು +ಪಿತಗೆ
ಉರವಣಿಸಿ +ಮಗ +ನುಡಿದ +ಭಾಷೆಯನ್
ಅರಸ +ಕೇಳಿದು +ಬಳಿಕ +ಭೀಷ್ಮಗೆ
ವರವನಿತ್ತನು+ ಮರಣವು +ನಿನ್ನಿಚ್ಛೆ+ ಹೋಗೆಂದ

ಅಚ್ಚರಿ:
(೧) ದಂಡಿ ಪದದ ಬಳಕೆ – ದಂಡಿಗೆಯ ದಂಡಿಯ ಚರರ
(೨) ಯೋಜನಗಂಧಿಯನ್ನು ಕರೆದ ಪರಿ – ಸರಸಿರುಹಮುಖಿ

ಪದ್ಯ ೨೬: ಭೀಷ್ಮನು ವೇಗವಾಗಿ ಎಲ್ಲಿಗೆ ಬಂದನು?

ವಿರಹ ದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ (ಆದಿ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿರಹದ ಕುಲುಮೆಯ ಬೆಂಕಿಯು ಅವನನ್ನು ಆವರಿಸಿತು. ಆ ತಾಪವನ್ನು ಬಣ್ಣಿಸಲಾರೆ. ಏಳೋ, ಎಂಟೋ, ಒಂಬತ್ತು ದಿನಗಳಲ್ಲಿ ಇವನ ಮರಣವು ನಿಶ್ಚಿತವೆಂದು ಜನರು ಗುಜುಗುಜು ಮಾತನಾಡಿದರು. ಅದನ್ನು ಕೇಳಿ ಭೀಷ್ಮನು ಯಮುನಾ ನದಿಯ ತೀರಕ್ಕೆ ವೇಗದಿಂದ ಬಂದನು.

ಅರ್ಥ:
ವಿರಹ: ಅಗಲಿಕೆ, ವಿಯೋಗ; ದಾವು: ತಾಪ, ಧಗೆ; ಕಿಚ್ಚು: ಬೆಂಕಿ; ಭೂಮೀಶ್ವರ: ರಾಜ; ಮುಸುಕು: ಆವರಿಸು; ಬಲಿ: ಹೆಚ್ಚಾ, ಗಟ್ಟಿ; ಅವಸ್ಥೆ: ಸ್ಥಿತಿ; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಬಳಿ: ನಂತರ; ಮರಣ: ಸವು; ಉಬ್ಬರ: ಅತಿಶಯ; ಗುಜುಗುಜು: ಮಾತು; ಅರಿ: ತಿಳಿ; ನದಿ: ಸರೋವರ; ತೀರ: ದಡ; ಬಂದು: ಆಗಮಿಸು; ವಹಿಲ: ವೇಗ;

ಪದವಿಂಗಡಣೆ:
ವಿರಹ +ದಾವುಗೆ +ಕಿಚ್ಚು +ಭೂಮೀ
ಶ್ವರನ +ಮುಸುಕಿತು +ಬಲಿದ್+ಅವಸ್ಥೆಯನ್
ಅರಸ +ಬಣ್ಣಿಸಲ್+ಅರಿಯೆನ್+ಏಳೆಂಟೊಂಬತರ +ಬಳಿಯ
ಮರಣವ್+ಈತಂಗ್+ಎಂಬ +ಜನದ್
ಉಬ್ಬರದ +ಗುಜುಗುಜುವ್+ಅರಿದು +ಯಮುನಾ
ವರ+ನದಿಯ +ತೀರಕ್ಕೆ+ ಬಂದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ವಿರಹದ ತೀವ್ರತೆಯನ್ನು ಹೇಳುವ ಪರಿ – ವಿರಹ ದಾವುಗೆ ಕಿಚ್ಚು ಭೂಮೀಶ್ವರನ ಮುಸುಕಿತು

ಪದ್ಯ ೭: ಹಿರಣ್ಯಕಶಿಪುವಿನ ಮರಣವು ಹೇಗಾಯಿತು?

ಮರಣವೆಂದಿಂಗಾಗದಂತಿರೆ
ವರವಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ (ಗದಾ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಹಿಂದೆ ಹಿರಣ್ಯಕಶಿಪುವು ತನಗೆ ಮರಣವೇ ಸಂಭವಿಸದಂತಹ ವರವನ್ನು ಪಡೆದು ದೇವತೆಗಳು ಮನುಷ್ಯರು ನಾಗರನ್ನು ಹೊಡೆದು ಗೆದ್ದು ಮೆರೆಯುತ್ತಿರಲು, ವಿಷ್ಣುವು ನರಸಿಂಹ ರೂಪದಿಂದ ಅವನ ಮಾಯೆಯನ್ನು ಗೆದ್ದನು.

ಅರ್ಥ:
ಮರಣ: ಸಾವು; ವರ: ಶ್ರೇಷ್ಠ; ಅಸುರ: ರಾಕ್ಷಸ; ಸುರ: ದೇವ; ಉರಗ: ಹಾವು; ವಿಭಾಡಿಸು: ನಾಶಮಾಡು; ಪದ್ಧತಿ: ಹೆಜ್ಜೆಯ ಗುರುತು; ಧರ್ಮ: ಧಾರಣೆ ಮಾಡಿದುದು; ಧರಧುರ: ಆರ್ಭಟ, ಕೋಲಾಹಲ; ಕೇಸರಿ: ಸಿಂಹ; ರೂಪ: ಆಕಾರ; ವಿಶ್ವ: ಜಗತ್ತು; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಗೆಲಿದು: ಜಯಿಸು; ಮಾಯೆ: ಗಾರುಡಿ; ಅಭಿಯೋಗ: ಯುದ್ಧ, ಆಕ್ರಮಣ;

ಪದವಿಂಗಡಣೆ:
ಮರಣವ್+ಎಂದಿಂಗ್+ಆಗದಂತಿರೆ
ವರವಕೊಂಡು +ಹಿರಣ್ಯಕ+ಅಸುರ
ಸುರ+ನರ+ಉರಗರನು +ವಿಭಾಡಿಸಿ+ ಧರ್ಮಪದ್ಧತಿಗೆ
ಧರಧುರವ +ಮಾಡಿದಡೆ +ನರಕೇ
ಸರಿಯ +ರೂಪಿನೊಳ್+ಆದಿವಿಶ್ವಂ
ಭರನು +ಗೆಲಿದನು +ಮಾಯೆಯನು +ಮಾಯಾಭಿಯೋಗದಲಿ

ಅಚ್ಚರಿ:
(೧) ವಿಷ್ಣುವನ್ನು ಆದಿವಿಶ್ವಂಭರ ಎಂದು ಕರೆದಿರುವುದು
(೨) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ

ಪದ್ಯ ೬೧: ದ್ರೋಣನ ಮನಸ್ಸು ಎತ್ತಕಡೆ ತಿರುಗಿತು?

ತಿರುಗಿದುದು ಮುನಿನಿಕರವತ್ತಲು
ಮರಳಿತೀತನ ಬುದ್ಧಿಯಿತ್ತಲು
ತೆರೆಯ ಹಿಡಿದುದು ಮರವೆ ಸಮ್ಯಜ್ಞಾನದೀಧಿತಿಗೆ
ಅರಸನನು ಬೆಸಗೊಂಬ ತನುಜನ
ಮರಣ ಹುಸಿಯೋ ದಿಟವೊ ಭೀಮನ
ಸೊರಹ ನಂಬೆನೆನುತ್ತ ರಾಯನನರಸುತೈತಂದ (ದ್ರೋಣ ಪರ್ವ, ೧೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಮುನಿಗಳು ಹೊರಟು ಹೋದರು. ದ್ರೋಣನ ಬುದ್ಧಿ ಆತ್ಮಜ್ಞಾನದ ಕಡೆಗೆ ತಿರುಗಿತು. ನಿಜವಾದ ಅರಿವಿನ ಬೆಳಕಿಗೆ ಮರವೆಯು ತೆರೆಯನ್ನು ಹಾಕಿತು. ಭೀಮನ ಮಾತು ನಿಜವೋ ಸುಳ್ಳೋ ತಿಳಿಯದು. ಅವನ ಮಾತನ್ನು ನಾನು ನಂಬುವುದಿಲ್ಲ, ಅಶ್ವತ್ಥಾಮನ ಮರಣ ದಿಟವೋ ಸುಳ್ಳೋ ಎಂದು ಧರ್ಮರಾಯನನ್ನು ಕೇಳುತ್ತೇನೆ ಎಂದುಕೊಂಡು ಅವನನ್ನು ಹುಡುಕುತ್ತಾ ಹೊರಟನು.

ಅರ್ಥ:
ತಿರುಗು: ಸಂಚರಿಸು; ಮುನಿ: ಋಷಿ; ನಿಕರ: ಗುಂಫು; ಮರಳು: ಹಿಂದಿರುಗು; ಬುದ್ಧಿ: ಜ್ಞಾನ; ತೆರೆ: ಬಿಚ್ಚುವಿಕೆ; ಹಿಡಿ: ಗ್ರಹಿಸು; ಮರವು: ಜ್ಞಾಪಕವಿಲ್ಲದ ಸ್ಥಿತಿ; ದೀಧಿತಿ: ಹೊಳಪು; ಅರಸ: ರಾಜ; ಬೆಸ: ಕೆಲಸ, ಕಾರ್ಯ; ತನುಜ: ಮಗ; ಮರಣ: ಸಾವು; ಹುಸಿ: ಸುಳ್ಳು; ದಿಟ: ನಿಜ; ಸೊರಹು: ಅತಿಯಾಗಿ ಮಾತನಾಡುವಿಕೆ, ಗಳಹುವಿಕೆ; ನಂಬು: ವಿಶ್ವಾಸ; ರಾಯ: ರಾಜ; ಅರಸು: ಹುಡುಕು; ಐತಂದು: ಬಂದು ಸೇರು;

ಪದವಿಂಗಡಣೆ:
ತಿರುಗಿದುದು +ಮುನಿ+ನಿಕರವ್+ಅತ್ತಲು
ಮರಳಿತ್+ಈತನ +ಬುದ್ಧಿ+ಇತ್ತಲು
ತೆರೆಯ +ಹಿಡಿದುದು +ಮರವೆ +ಸಮ್ಯಜ್ಞಾನ+ದೀಧಿತಿಗೆ
ಅರಸನನು +ಬೆಸಗೊಂಬ +ತನುಜನ
ಮರಣ +ಹುಸಿಯೋ +ದಿಟವೊ+ ಭೀಮನ
ಸೊರಹ+ ನಂಬೆನ್+ಎನುತ್ತ +ರಾಯನನ್+ಅರಸುತ್+ಐತಂದ

ಅಚ್ಚರಿ:
(೧) ರಾಯ, ಅರಸು – ಪದಗಳ ಬಳಕೆ
(೨) ಅತ್ತಲು, ಇತ್ತಲು – ಪ್ರಾಸ ಪದಗಳು

ಪದ್ಯ ೨೯: ಮೊದಲು ಯಾರನ್ನು ಸಂಹರಿಸಲು ದುರ್ಯೋಧನನು ಹೇಳಿದನು?

ಈಗಳೀ ದಾನವನ ಬಲೆಯಲಿ
ತಾಗಿ ಸಿಲುಕಿತು ನಮ್ಮ ಮೋಹರ
ಮೇಲೆ ಫಲುಗುಣನಾರ ಕೊಲುವನು ಮರಣ ನಮಗಾಗೆ
ನೀಗಿ ಕಳೆ ಕೊಲೆಗಡಿಗನನು ಜಯ
ವಾಗಲೀಗಳೆ ಮುಂದೆ ನರನು
ದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ (ದ್ರೋಣ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೊಧನನು ನುಡಿಯುತ್ತಾ, ಕರ್ಣಾ, ಈಗ ಈ ರಾಕ್ಷಸನ ಬಲೆಯಲ್ಲಿ ನಮ್ಮ ಸೈನ್ಯ ಸಿಕ್ಕುಹಾಕಿಕೊಂಡಿದೆ. ಈ ರಾತ್ರಿ ನಾವೇ ಸತ್ತು ಹೋದರೆ ಅರ್ಜುನನು ಇನ್ನಾರನು ಕೊಲ್ಲುತ್ತಾನೆ. ಈ ಕೊಲೆಗಡಿಕನನ್ನು ಕೊಂದುಹಾಕಿ ಜಯವನ್ನು ಸಾಧಿಸು. ಮುಂದೆ ಅರ್ಜುನನೆಂಬ ರೋಗಕ್ಕೆ ಮದನ್ನು ಕಂಡು ಹಿಡಿಯೋಣ ಎಂದು ಹೇಳಿದನು.

ಅರ್ಥ:
ದಾನವ: ರಾಕ್ಷಸ; ಬಲೆ: ಮೋಸ, ವಂಚನೆ; ತಾಗು: ಮುಟ್ಟು; ಸಿಲುಕು: ಬಂಧನಕ್ಕೊಳಗಾಗು; ಮೋಹರ: ಯುದ್ಧ; ಕೊಲು: ಸಾಯಿಸು; ಮರಣ: ಸಾವು; ನೀಗು: ನಿವಾರಿಸಿಕೊಳ್ಳು; ಕಳೆ: ತೊರೆ; ಕೊಲೆ: ಸಾಯಿಸು; ಜಯ: ಗೆಲುವು; ಮುಂದೆ: ಎದುರು; ಉದ್ಯೋಗ: ಕಾರ್ಯ; ಚಿಕಿತ್ಸೆ: ಮದ್ದು, ಶುಶ್ರೂಷೆ, ರೋಗವನ್ನು ಹೋಗಲಾಡಿಸುವ ಪರಿ; ಭೂಪ: ರಾಜ;

ಪದವಿಂಗಡಣೆ:
ಈಗಳ್+ಈ+ ದಾನವನ +ಬಲೆಯಲಿ
ತಾಗಿ +ಸಿಲುಕಿತು +ನಮ್ಮ +ಮೋಹರ
ಮೇಲೆ +ಫಲುಗುಣನ್+ಆರ +ಕೊಲುವನು +ಮರಣ+ ನಮಗಾಗೆ
ನೀಗಿ +ಕಳೆ +ಕೊಲೆಗಡಿಗನನು +ಜಯ
ವಾಗಲ್+ಈಗಳೆ+ ಮುಂದೆ +ನರನ್
ಉದ್ಯೋಗಕಾರೈವೆವು +ಚಿಕಿತ್ಸೆಯನ್+ಎಂದನಾ +ಭೂಪ

ಅಚ್ಚರಿ:
(೧) ಚಿಕಿತ್ಸೆ ಪದದ ಬಳಕೆ – ನರನುದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ

ಪದ್ಯ ೫೦: ಕೌರವೇಶನಿಗೆ ಗೂಢಚಾರರು ಏನು ಹೇಳಿದರು?

ಇರುಳು ಬೇಹಿನ ಚರರು ಪಾರ್ಥನ
ನಿರುಪಮಿತ ಗಾಡಪ್ರತಿಜ್ಞಾ
ಚರಿತವನು ಕೌರವನ ಸಭೆಯಲಿ ತಂದು ಹರಹಿದರು
ಮರಣ ಸೈಂಧವಗಲ್ಲದಿದ್ದರೆ
ಮರಣ ಪಾರ್ಥಂಗಲ್ಲದೆಡೆಯಲಿ
ಪರಿಹರಿಸುವುದ ಕಾಣೆವೆಂದರು ಚರರು ಭೂಪತಿಗೆ (ದ್ರೋಣ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಗೂಢಚಾರರು ಕೌರವನ ಸಭೆಗೆ ಬಂದು ಅರ್ಜುನನ ಕಠೋರ ಪ್ರತಿಜ್ಞೆಯನ್ನು ತಿಳಿಸಿದನು. ನಾಳೆ ಸೈಂಧವನಾದರೂ ಸಾಯಬೇಕು, ಇಲ್ಲವೇ ಅರ್ಜುನನು ಅಗ್ನಿಪ್ರವೇಶ ಮಾಡಬೇಕು. ಇವೆರಡರಲ್ಲಿ ಒಂದನ್ನು ಬಿಟ್ಟು, ಬೇರೇನೂ ಆಗುವಂತಿಲ್ಲ. ಇದನ್ನು ಪರಿಹರಿಸುವ ದಾರಿಯೇ ಇಲ್ಲ ಎಂದು ಚರರು ದೊರೆಗೆ ಹೇಳಿದರು.

ಅರ್ಥ:
ಇರುಳು: ರಾತ್ರಿ; ಬೇಹು: ಗುಪ್ತಚಾರನ ಕೆಲಸ, ಗೂಢಚರ್ಯೆ; ಚರ: ಚಲಿಸುವವನು; ನಿರುಪಮಿತ: ಎಣೆ ಇಲ್ಲದ, ಹೋಲಿಕೆ ಇಲ್ಲದ; ಗಾಢ: ಅತಿಶಯ; ಪ್ರತಿಜ್ಞೆ: ಪ್ರಮಾಣ; ಚರಿತ: ನಡವಳಿಕೆ; ಸಭೆ: ಓಲಗ; ಹರಹು: ವಿಸ್ತಾರ, ವೈಶಾಲ್ಯ; ಮರಣ: ಸಾವು; ಸೈಂಧವ: ಜಯದ್ರಥ; ಪರಿಹರ: ನಿವಾರಣೆ; ಕಾಣು: ತೋರು; ಭೂಪತಿ: ರಾಜ;

ಪದವಿಂಗಡಣೆ:
ಇರುಳು +ಬೇಹಿನ +ಚರರು +ಪಾರ್ಥನ
ನಿರುಪಮಿತ +ಗಾಡ+ಪ್ರತಿಜ್ಞಾ
ಚರಿತವನು +ಕೌರವನ +ಸಭೆಯಲಿ +ತಂದು +ಹರಹಿದರು
ಮರಣ+ ಸೈಂಧವಗ್+ಅಲ್ಲದಿದ್ದರೆ
ಮರಣ +ಪಾರ್ಥಂಗ್+ಅಲ್ಲದ್+ಎಡೆಯಲಿ
ಪರಿಹರಿಸುವುದ +ಕಾಣೆವೆಂದರು +ಚರರು +ಭೂಪತಿಗೆ

ಅಚ್ಚರಿ:
(೧) ಪಾರ್ಥನ ಪ್ರತಿಜ್ಞೆಯ ಬಗ್ಗೆ ಹೇಳಿದ ಪರಿ – ಪಾರ್ಥನ ನಿರುಪಮಿತ ಗಾಡಪ್ರತಿಜ್ಞಾ ಚರಿತ

ಪದ್ಯ ೨೯: ಅಭಿಮನ್ಯುವಿನ ಸಾವಿಗೆ ಮೂಲ ಕಾರಣರಾರು?

ವಿರಥನಾದನು ಭೀಮ ನಕುಳನು
ತಿರುಗಿದನು ಸಹದೇವ ಕೊರಳಿನ
ಹರಣದಲಿ ಹಿಮ್ಮೆಟ್ಟಿದನು ದ್ರುಪದಾದಿ ನಾಯಕರು
ಧುರದೊಳೋಸರಿಸಿದರು ಸೈಂಧವ
ಹರನ ವರದಲಿ ನಮ್ಮ ಗೆಲಿದನು
ಮರಣವನು ಕಂದಂಗೆ ತಂದವನವನು ಕೇಳೆಂದ (ದ್ರೋಣ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸೈಂಧವನೊಡನೆ ಯುದ್ಧಮಾಡಿ ಭೀಮನು ವಿರಥನಾದನು ನಕುಲನು ಹಿಂದಕ್ಕೆ ತಿರುಗಿದನು. ಸಹದೇವನ ಪ್ರಾಣವು ಕೊರಳಿಗೆ ಬರಲು ಅವನು ಹಿಮ್ಮೆಟ್ಟಿದನು. ದ್ರುಪದನೇ ಮೊದಲಾದವರು ಹಿಂಜರಿದರು. ಅಭಿಮನ್ಯುವಿನ ಸಹಾಯಕ್ಕೆ ಯಾರೂ ಹೋಗದಂತೆ ಶಿವನ ವರದಿಂದ ಸೈಂಧವನು ನಮ್ಮನ್ನು ಗೆದ್ದುಬಿಟ್ಟನು. ಅಭಿಮನ್ಯುವಿಗೆ ಮರಣವನ್ನು ತಂದವನು ಸೈಂಧವನೇ ಎಂದು ಧರ್ಮಜನು ತಿಳಿಸಿದನು.

ಅರ್ಥ:
ವಿರಥ: ರಥವಿಲ್ಲದ ಸ್ಥಿತಿ; ತಿರುಗು: ಹಿಂದಿರುಗು; ಕೊರಳು: ಕಂಠ; ಹರಣ: ಜೀವ, ಪ್ರಾಣ; ಹಿಮ್ಮೆಟ್ಟು: ಹಿಂದೆ ನಡೆ; ನಾಯಕ: ಒಡೆಯ; ಧುರ: ಯುದ್ಧ; ಓಸರಿಸು: ಓರೆಮಾಡು, ಹಿಂಜರಿ; ಹರ: ಶಿವ; ವರ: ಆಶೀರ್ವಾದ; ಗೆಲಿದ: ಜಯಿಸಿದ; ಮರಣ: ಸಾವು; ಕಂದ: ಮಗು; ತಂದ: ಬರೆಮಾಡು; ಕೇಳು: ಆಲಿಸು;

ಪದವಿಂಗಡಣೆ:
ವಿರಥನಾದನು +ಭೀಮ+ ನಕುಳನು
ತಿರುಗಿದನು +ಸಹದೇವ +ಕೊರಳಿನ
ಹರಣದಲಿ+ ಹಿಮ್ಮೆಟ್ಟಿದನು+ ದ್ರುಪದಾದಿ +ನಾಯಕರು
ಧುರದೊಳ್+ಓಸರಿಸಿದರು +ಸೈಂಧವ
ಹರನ+ ವರದಲಿ +ನಮ್ಮ +ಗೆಲಿದನು
ಮರಣವನು +ಕಂದಂಗೆ +ತಂದವನ್+ಅವನು +ಕೇಳೆಂದ

ಅಚ್ಚರಿ:
(೧) ಮರಣವನು ಅಭಿಮನ್ಯುವಿಗೆ ತಂದವನು – ಸೈಂಧವ ಹರನ ವರದಲಿ ನಮ್ಮ ಗೆಲಿದನು ಮರಣವನು ಕಂದಂಗೆ ತಂದವನವನು

ಪದ್ಯ ೨೯: ಯಾರಿಗೆ ಮರಣ ತಪ್ಪದು?

ಉರಗ ನರ ದಿವಿಜಾದಿಗಳಿಗಿದು
ಪರಿಹರಿಸಲಳವಲ್ಲ ದೈವದ
ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು
ಅರಸನಾಗಲಿ ಧನಿಕನಾಗಲಿ
ಹಿರಿಯನಾಗಲಿ ಬಡವನಾಗಲಿ
ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳೆಂದ (ದ್ರೋಣ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪಾತಾಳದಲ್ಲಿರುವ ನಾಗಗಳು, ಭೂಮಿಯಲ್ಲಿರುವ ಮನುಷ್ಯರು, ಸ್ವರ್ಗದಲ್ಲಿರುವ ದೇವತೆಗಳು ಯಾರು ಇದನ್ನು ಮೀರಲಾರರು. ದೈವವು ಆದಿಯಲ್ಲಿ ಮೃತ್ಯುವನ್ನು ನಿರ್ಮಿಸಿತು. ಅರಸ, ಹಿರ್ಯ, ಧನಿಕ, ಬಡವ್ ಯಾರೇ ಆಗಲಿ ಹುಟ್ಟಿದ ಮೇಲೆ ಸಾಯಲೇಬೇಕು.

ಅರ್ಥ:
ಉರಗ: ಹಾವು; ನರ: ಮನುಷ್ಯ; ದಿವಿಜ: ದೇವತೆ; ಆದಿ: ಮುಂತಾದ; ಪರಿಹರ: ನಿವಾರಣೆ; ಪರುಠವ: ವಿಸ್ತಾರ, ಹರಹು; ಮುನ್ನ: ಮುಂಚೆ; ಆದಿ: ಮುಂಚೆ; ನಿರ್ಮಿಸು: ರಚಿಸು; ಮೃತ್ಯು: ಸಾವು; ಅರಸ: ರಾಜ; ಧನಿಕ: ಶ್ರೀಮಂತ; ಹಿರಿಯ: ದೊಡ್ಡವ; ಬಡವ: ದರಿದ್ರ; ಮರಣ: ಸಾವು; ಜನಿಸು: ಹುಟ್ಟು; ಬಳಿಕ: ನಂತರ; ಮಗ: ಪುತ್ರ; ಕೇಳು: ಆಲಿಸು;

ಪದವಿಂಗಡಣೆ:
ಉರಗ +ನರ +ದಿವಿಜಾದಿಗಳಿಗ್+ಇದು
ಪರಿಹರಿಸಲ್+ಅಳವಲ್ಲ+ ದೈವದ
ಪರುಠವಣೆ+ ಮುನ್ನಾದಿಯಲಿ+ ನಿರ್ಮಿಸಿತು+ ಮೃತ್ಯುವನು
ಅರಸನಾಗಲಿ+ ಧನಿಕನಾಗಲಿ
ಹಿರಿಯನಾಗಲಿ+ ಬಡವನಾಗಲಿ
ಮರಣ +ಜನಿಸಿದ+ ಬಳಿಕ+ ತಪ್ಪದು +ಮಗನೆ+ ಕೇಳೆಂದ

ಅಚ್ಚರಿ:
(೧) ಗೀತೆಯ ವಾಕ್ಯವನ್ನು ಹೇಳುವ ಪರಿ – ಮರಣ ಜನಿಸಿದ ಬಳಿಕ ತಪ್ಪದು

ಪದ್ಯ ೪೦: ದುರ್ಯೋಧನನು ಬೇಡಿದುದಕ್ಕೆ ದ್ರೋಣನೇನೆಂದನು?

ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ (ದ್ರೋಣ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಯ್ಯೋ ದುರ್ಯೋಧನ, ಮರಣ ಮಂತ್ರವನ್ನು ಅನುಗ್ರಹಿಸಿ ಎಂದು ಕೇಳಬಹುದೇ? ಮಗೂ< ಅರ್ಜುನನ ಪರಾಕ್ರಮವು ನಿನಗೆ ಗೊತ್ತಿಲ್ಲವೇ? ಧರ್ಮಜನನ್ನು ಹಿಡಿಯಲು ಅವನು ಬಿಡುವನೇ? ಅಸಾಧ್ಯವಾದುದನ್ನು ಬೇಡಿದೆ, ಆಗಲಿ ಎಂದು ಒಪ್ಪಿ ಅದನ್ನು ಮಾಡದಿರುವ ಬಾಹಿರರು ನಾವಲ್ಲ, ದ್ರೋಣನು ಹೀಗೆ ಹೇಳಲು ಕೌರವನು ಉತ್ತರಿಸಿದನು.

ಅರ್ಥ:
ಮರಣ: ಸಾವು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅನುಗ್ರಹ: ಕೃಪೆ, ದಯೆ; ಧರಿಸು: ಹೊರು; ಮಗ: ಸುತ; ಪರಿ: ರೀತಿ; ಅರಿ: ತಿಳಿ; ಹಿಡಿ: ಬಂಧಿಸು; ಬೇಡು: ಕೇಳು; ನೂಕು: ತಳ್ಳು; ವಚನ: ಮಾತು; ಬಾಹಿರ: ಹೊರಗಿನವ; ರಾಯ: ರಾಜ;

ಪದವಿಂಗಡಣೆ:
ಮರಣ +ಮಂತ್ರ+ಅನುಗ್ರಹವನ್+ಅವ
ಧರಿಸಬಹುದೇ +ಮಗನೆ +ಪಾರ್ಥನ
ಪರಿಯನ್+ಅರಿಯಾ +ಹಿಡಿಯಲೀವನೆ+ ಧರ್ಮನಂದನನ
ಅರಿದ+ ಬೇಡಿದೆ +ತನಗೆ +ನೂಕದ
ವರವ+ ವಚನಿಸಿ +ಮಾಡದಿಹ +ಬಾ
ಹಿರರು +ನಾವಲ್ಲ್+ಎನಲು +ಕೌರವರಾಯನ್+ಇಂತೆಂದ

ಅಚ್ಚರಿ:
(೧) ದುರ್ಯೋಧನನು ಬೇಡಿದ ವರವು ಹೇಗಿತ್ತು – ಮರಣ ಮಂತ್ರಾನುಗ್ರಹವನವಧರಿಸಬಹುದೇ ಮಗನೆ