ಪದ್ಯ ೧೭: ಚಂದ್ರನು ಹೇಗೆ ಹೊಳೆದನು?

ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ (ದ್ರೋಣ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ವಿರಹಿಜನಗಳ ಎದೆಗಿಚ್ಚು, ಮನ್ಮಥನ ಪಟ್ಟಾಭಿಷೇಕಕ್ಕೆ (ನೀರು ತುಂಬಿದ) ಘಟ, ಕಮಲಗಳ ಕಗ್ಗೊಲೆಗಾರ, ಕುಮುದವನಕ್ಕೆ ವಿದೂಷಕ (ಚಂದ್ರ ಕುಮುದಗಳ ಪ್ರೀತಿಗೆ ಸಹಕಾರಿ), ಮನ್ಮಥನ ಗುರಾಣಿ, ವಿಲಾಸಿನಿಯರ ಮನೋರಥ ಫಲ ಎನ್ನುವಂತೆ ಚಂದ್ರನು ಉದಯಪರ್ವತದ ಚಾವಡಿಯಲ್ಲಿ ಹೊಳೆದನು.

ಅರ್ಥ:
ವಿರಹಿ:ವಿಯೋಗಿ; ಜನ: ಮನುಷ್ಯ; ಕಿಚ್ಚು: ಬೆಂಕಿ, ಅಗ್ನಿ; ಮನುಮಥ: ಕಾಮದೇವ; ಅರಸು: ರಾಜ; ಅಭಿಷೇಕ: ಮಂಗಳಸ್ನಾನ; ಘಟ: ದೇಹ; ತಾವರೆ: ಕಮಲ; ಕಗ್ಗೊಲೆ: ಸಾಯಿಸು; ಉತ್ಪಳ: ಕನ್ನೈದಿಲೆ; ವಿದೂಷಕ: ಹಾಸ್ಯದ, ತಮಾಷೆಯ; ಹರ: ಶಂಕರ; ಹಗೆ: ವೈರತ್ವ; ಅಡ್ಡಣ: ನಡುವೆ; ವಿಳಾಸಿನಿ: ಒಯ್ಯಾರಿ, ಬೆಡಗಿ; ಮನೋರಥ: ಆಸೆ, ಬಯಕೆ; ಫಲ: ಪ್ರಯೋಜನ; ಮಿಗೆ: ಹೆಚ್ಚು; ಮೆರೆ: ಹೊಳೆ, ಪ್ರಕಾಶಿಸು; ಉದಯಾಚಲ: ಪೂರ್ವದ ಬೆಟ್ಟ; ಚಾವಡಿ: ಸಭಾಸ್ಥಾನ; ಸುಧಾಸೂತಿ: ಕ್ಷೀರಸಾಗರದಲ್ಲಿ ಹುಟ್ಟಿದವನು, ಚಂದ್ರ;

ಪದವಿಂಗಡಣೆ:
ವಿರಹಿಜನದ್+ಎದೆ+ಕಿಚ್ಚು +ಮನುಮಥನ್
ಅರಸುತನದ್+ಅಭಿಷೇಕ+ಘಟ+ ತಾ
ವರೆಯ +ಕಗ್ಗೊಲೆಕಾರನ್+ಉತ್ಪಳವನ +ವಿದೂಷಕನು
ಹರನ+ ಹಗೆ+ಅಡ್ಡಣ +ವಿಳಾಸಿನಿ
ಯರ +ಮನೋರಥಫಲವ್+ಎನಲು +ಮಿಗೆ
ಮೆರೆದನ್+ಉದಯಾಚಲದ +ಚಾವಡಿಯಲಿ +ಸುಧಾಸೂತಿ

ಅಚ್ಚರಿ:
(೧) ಚಂದ್ರನನ್ನು ಹಲವು ರೀತಿಯಲ್ಲಿ ಕರೆದಿರುವ ಪರಿ – ವಿರಹಿಜನದೆದೆಗಿಚ್ಚು, ವಿಳಾಸಿನಿಯರ, ತಾವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು ಮನೋರಥಫಲ

ಪದ್ಯ ೧೦: ಮಾವುತರು ಎಲ್ಲಿ ನಿದ್ರಿಸಿದರು?

ಒಲಿದ ಕಾಂತೆಯ ಕೂಡೆ ಮನುಮಥ
ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು ರಜನಿಯಲಿ
ಒಲಿದ ಸಮರಶ್ರಮದಲತಿವೆ
ಗ್ಗಳ ಗಜರೋಹಕರು ಕುಂಭ
ಸ್ಥಳದ ಮೇಲೊರಗಿದರು ನಿದ್ರಾ ಮುದ್ರಿತೇಕ್ಷಣರು (ದ್ರೋಣ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪ್ರೀತಿಯ ಪತ್ನಿಯೊಡನೆ ಮನ್ಮಥ ಕಲಹದಲ್ಲಿ ಬೆಂಡಾಗಿರುವ ಪತಿಯು ಕಳಶ ಕುಚಗಳ ಮಧ್ಯದಲ್ಲಿ ತಲೆಯಿಟ್ಟು ಮಲಗುವಂತೆ, ಯುದ್ಧ ಶ್ರಮದಿಂದ ಬೆಂಡಾದ ಮಾವುತರು ಆನೆಗಳ ಕುಂಭ ಸ್ಥಳಗಳ ಮೇಲೆ ಮಲಗೆ ಕಣ್ಣು ಮುಚ್ಚಿ ನಿದ್ರಿಸಿದರು.

ಅರ್ಥ:
ಒಲಿದ: ಪ್ರೀತಿಯ; ಕಾಂತೆ: ಪ್ರಿಯತಮೆ; ಕೂಡು: ಜೊತೆ; ಮನುಮಥ: ಮನ್ಮಥ, ಕಾಮದೇವ; ಕಲಹ: ಜಗಳ; ಬೆಂಡು: ತಿರುಳಿಲ್ಲದುದು; ಕಾಂತ: ಪ್ರಿಯತಮ; ಕಳಶ: ಕೊಡ; ಕುಚ: ಮೊಲೆ, ಸ್ತನ; ಮಧ್ಯ: ನಡುವೆ; ಮಲಗು: ನಿದ್ರಿಸು; ರಜನಿ: ರಾತ್ರಿ; ಸಮರ: ಯುದ್ಧ; ಶ್ರಮ: ದಣಿವು; ವೆಗ್ಗಳ: ಶ್ರೇಷ್ಠ; ಗಜ: ಆನೆ; ಗಜರೋಹಕ: ಮಾವುತ; ಕುಂಭ: ಕೊಡ, ಕಲಶ; ಸ್ಥಳ: ಜಾಗ; ಒರಗು: ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ನಿದ್ರೆ: ಶಯನ; ಈಕ್ಷಣ: ಕಣ್ಣು, ನೋಟ; ಮುದ್ರಿತ: ಗುರುತು;

ಪದವಿಂಗಡಣೆ:
ಒಲಿದ +ಕಾಂತೆಯ +ಕೂಡೆ +ಮನುಮಥ
ಕಲಹದಲಿ +ಬೆಂಡಾದ +ಕಾಂತನು
ಕಳಶ+ಕುಚ +ಮಧ್ಯದಲಿ+ ಮಲಗುವವೋಲು +ರಜನಿಯಲಿ
ಒಲಿದ +ಸಮರ+ಶ್ರಮದಲ್+ಅತಿ+ವೆ
ಗ್ಗಳ+ ಗಜರೋಹಕರು+ ಕುಂಭ
ಸ್ಥಳದ +ಮೇಲೊರಗಿದರು +ನಿದ್ರಾ +ಮುದ್ರಿತ+ಈಕ್ಷಣರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಲಿದ ಕಾಂತೆಯ ಕೂಡೆ ಮನುಮಥ ಕಲಹದಲಿ ಬೆಂಡಾದ ಕಾಂತನು
ಕಳಶಕುಚ ಮಧ್ಯದಲಿ ಮಲಗುವವೋಲು

ಪದ್ಯ ೧೦: ಊರ್ವಶಿಯ ಹಿರಿಮೆ ಎಂತಹುದು?

ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನದೇವನರಮನೆಗೆ (ಅರಣ್ಯ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಊರ್ವಶಿಯು ಜನಗಳ ನೋಟಕ್ಕೆ ಸೆರೆಮನೆ, ಕಣ್ಣೆಂಬ ಮೃಗಗಳನ್ನು ತಡೆದು ನಿಲ್ಲಿಸಬಲ್ಲ ಬೇಟೆಕಾತಿ, ಸತ್ತಿದ್ದ ಮನ್ಮಥನಿಗೆ ಸಂಜೀವಿನಿಯನ್ನು ಕೊಟ್ಟು ಬದುಕಿಸಿದವಳು, ಮನ್ಮಥನ ಜನರನ್ನು ಪರಿಭವಗೊಳಿಸಲು ಹಾಕಿದ ಕೊಕ್ಕೆ, ಕಾಮುಕರ ಜೀವಕ್ಕೆ ಒಡತಿ, ಅಂತಹ ಊರ್ವಶಿ ಅರ್ಜುನನ ಅರಮನೆಗೆ ಬಂದಳು.

ಅರ್ಥ:
ಜನ: ಗುಂಪು, ಮನುಷ್ಯ; ಮನ: ಮನಸ್ಸು; ಸಂಕಲೆ:ಬೇಡಿ, ಸೆರೆ; ಲೋಚನ: ಕಣ್ಣು; ಮೃಗ: ಜಿಂಕೆ; ತಡೆ: ನಿಲ್ಲಿಸು; ತಡೆವೇಂಟೆಕಾತಿ: ತಡೆಯುವ ಬೇಟೆಕಾರಳು; ಮನುಮಥ: ಕಾಮ; ಸಂಜೀವ: ಚೈತನ್ಯ, ಮರುಜೇವಣಿ; ಮಾರಾಂಕ: ಪ್ರತಿಯುದ್ಧ; ಕಾಮುಕ: ಕಾಮಾಸಕ್ತನಾದವನು; ಜೀವಾರ್ಥ: ಬದುಕುವ ಅರ್ಥ; ವಿಭು:ಒಡೆಯ, ಅರಸು; ಬಂದಳು: ಆಗಮಿಸು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಜನಮನದ+ ಸಂಕಲೆವನೆಯೊ+ ಲೋ
ಚನಮೃಗದ +ತಡೆವೇಂಟೆಕಾತಿಯೊ
ಮನುಮಥನ +ಸಂಜೀವನ್+ಔಷಧಿಯೋ +ಮಹಾದೇವ
ಮನಸಿಜನ +ಮಾರಾಂಕ +ಕಾಮುಕ
ಜನದ+ ಜೀವಾರ್ಥಕ್ಕೆ +ವಿಭುವೆಂ
ದೆನಿಸಿದ್+ಊರ್ವಶಿ +ಬಂದಳ್+ಅರ್ಜುನದೇವನ್+ಅರಮನೆಗೆ

ಅಚ್ಚರಿ:
(೧) ಊರ್ವಶಿಯ ಹಿರಿಮೆಯನ್ನು ಹೇಳುವ ಪರಿ – ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ ಮನುಮಥನ ಸಂಜೀವನೌಷಧಿಯೋ ಮಹಾದೇವ

ಪದ್ಯ ೧: ಅರ್ಜುನನ ಮನಸ್ಥೈರ್ಯ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲುರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳು ಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸರಸ್ರ ಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ (ಅರಣ್ಯ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ತನುವಿನ ಒಂದು ಕೂದಲೂ ಕಾಮನ ಖಡ್ಗದ ಹೊಡೆತದಿಂದ ಮುಕ್ಕಾಗಲಿಲ್ಲ, ಇತ್ತ ಊರ್ವಶಿಯು ಚಿತ್ರಸೇನನನ್ನು ಕಳುಹಿಸಿ, ತನ್ನ ಸಾವಿರಾರು ಸೇವಕಿಯರನ್ನು ಕರೆಸಿದಳು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಮೈಯ: ತನು; ಹುಲು: ಅಲ್ಪ; ರೋಮಾಳಿ: ಕೂದಲು; ಹರಿ: ಚಲಿಸು, ಸೀಳು; ಮನುಮಥ: ಕಾಮ; ಖಂಡೆಯ: ಕತ್ತಿ, ಖಡ್ಗ; ಗಾಯ: ಪೆಟ್ಟು; ಬೀಳುಕೊಡು: ತೆರಳು, ಕಳುಹಿಸು; ಲತಾಂಗಿ: ಸುಂದರಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ; ಖೇಳ: ಆಟ; ಮೇಳ: ಗುಂಪು; ಸತಿ: ಹೆಂಗಸು; ಕರೆಸು: ಬರೆಮಾಡು; ಹರುಷ: ಸಂತಸ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾರ್ಥನ +ಮೈಯ +ಹುಲು+ರೋ
ಮಾಳಿ+ ಹರಿಯದು +ಮನುಮಥನ +ಖಂಡೆಯದ +ಗಾಯದಲಿ
ಬೀಳು +ಕೊಟ್ಟಳು +ಚಿತ್ರಸೇನನನ್
ಆ +ಲತಾಂಗಿ +ಸರಸ್ರ +ಸಂಖ್ಯೆಯ
ಖೇಳಮೇಳದ +ಸತಿಯರನು +ಕರೆಸಿದಳು+ ಹರುಷದಲಿ

ಅಚ್ಚರಿ:
(೧) ಖೇಳಮೇಳ – ಪದದ ರಚನೆ
(೨) ಪಾರ್ಥನ ಸ್ಥೈರ್ಯ: ಪಾರ್ಥನ ಮೈಯ ಹುಲುರೋಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ

ಪದ್ಯ ೨೭: ಧರ್ಮರಾಯನು ಕೊನೆಯದಾಗಿ ಯಾರನ್ನು ಸೋತನು?

ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿಕಾತಿಯನಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನ ಚಿತ್ತಭಿತ್ತಿಯಲಿ (ಸಭಾ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮರಾಯನು ಆಟವಾಡಿ ಮನ್ಮಥನ ಕಟ್ಟಾಳಾದ, ಮದನಮಂತ್ರದ ಅಭಿಮಾನದೇವತೆಯಾದ ದ್ರೌಪದಿಯನ್ನೂ ಸೋತನು. ಶಕುನಿಯು ತಾನು ಆತದಲ್ಲಿ ಕಡಿದ ಕಾಯಿಗಳನ್ನು ಕುಟ್ಟಿ, ಧರ್ಮಜನ ಮನಸ್ಸಿನಲ್ಲಿ ಅವನಸೋಲನ್ನು ಚಿತ್ರಿಸಿದನು.

ಅರ್ಥ:
ಆಡು: ಕ್ರೀಡಿಸು; ಸೂನು: ಮಗ; ಮಿಗೆ: ಮತ್ತೆ; ಹೋಗಾಡು: ಕಳೆದುಹಾಕು; ಮನುಮಥ: ಮನ್ಮಥ; ಖಾಡಾಖಾಡಿ: ಕೈಕೈ ಯುದ್ಧ; ಕಾತಿ: ಗರತಿ, ಮುತ್ತೈದೆ; ಅಕಟ: ಅಯ್ಯೋ; ಮದನ: ಮನ್ಮಥ; ಮಂತ್ರ: ವಿಚಾರ, ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ದೇವತೆ: ದೇವಿ; ಕೂಡೆ: ಜೊತೆ; ತಿವಿ: ಹೊಡೆತ, ಗುದ್ದು, ಚುಚ್ಚು; ಕಟ್ಟು: ಬಂಧಿಸು; ಕಳಿ: ಕಳೆದುಹೋಗು, ಸಾಯು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸೋಲು: ಪರಾಭವ; ಖೋಡಿ: ದುರುಳತನ; ಚಿತ್ರಿಸು: ಆಕೃತಿಯನ್ನು ತೋರುವ; ಅರಸ: ರಾಜ; ಚಿತ್ತ: ಮನಸ್ಸು; ಭಿತ್ತಿ: ಮುರಿಯುವ, ಒಡೆಯುವ;

ಪದವಿಂಗಡಣೆ:
ಆಡಿದನು +ಯಮಸೂನು +ಮಿಗೆ +ಹೋ
ಗಾಡಿದನು+ ಮನುಮಥನ+ ಖಾಡಾ
ಖಾಡಿಕಾತಿಯನ್+ಅಕಟ +ಮದನನ +ಮಂತ್ರ+ದೇವತೆಯ
ಕೂಡೆ +ತಿವಿದನು +ಕಟ್ಟಿದನು +ಕಳಿ
ದೋಡಿಸಿದ+ ಸಾರಿಗಳ +ಸೋಲದ
ಖೋಡಿಯನು +ಚಿತ್ರಿಸಿದನ್+ಅರಸನ +ಚಿತ್ತ+ಭಿತ್ತಿಯಲಿ

ಅಚ್ಚರಿ:
(೧) ದ್ರೌಪದಿಯನ್ನು ವಿವರಿಸುವ ಬಗೆ – ಮನುಮಥನ ಖಾಡಾಖಾಡಿಕಾತಿಯನಕಟ ಮದನನ ಮಂತ್ರದೇವತೆಯ
(೨) ಶಕುನಿಯು ಧರ್ಮರಾಯನು ಸೋತನೆಂದು ಹೇಳುವ ಪರಿ – ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನ ಚಿತ್ತಭಿತ್ತಿಯಲಿ

ಪದ್ಯ ೬೫: ಯಾವುವು ಸರ್ವಶ್ರೇಷ್ಠವಾದವು?

ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರ ಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನುಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಯಾವುದು ಶ್ರೇಷ್ಠ ಎಂದು ವಿದುರ ಇಲ್ಲಿ ವಿವರಿಸಿದ್ದಾರೆ. ಕಾಲದೊಳಗೆ ವಸಂತಕಾಲ ಶ್ರೇಷ್ಠವಾದುದು, ಹಾಗೆಯೆ ವಿದ್ಯೆಗಳಲ್ಲಿ ಕವಿತ್ವವು, ಕಾವ್ಯರಚನೆಯು ಶ್ರೇಷ್ಠ, ಆನೆಯ ವಿಹಾರದಲ್ಲಿ ಇಂದ್ರನು, ಸ್ನೇಹಿತರಲ್ಲಿ ಸರಸ್ವತಿಯು (ತಾನಾಡುವ ಮಾತುಗಳು), ದೇವತೆಗಳಲ್ಲಿ ಶಿವನು, ಧನುರ್ಧಾರಿಗಳಲ್ಲಿ ಮನ್ಮಥನು ಹಾಗೂ ಧನದಲ್ಲಿ ಅಭಿಮಾನವು, ಇವೇ ಸರ್ವಶ್ರೇಷ್ಠವಾದವುಗಳು ಎಂದು ವಿದುರ ತಿಳಿಸಿದ.

ಅರ್ಥ:
ಕಾಲ: ಸಮಯ, ಋತು; ವಸಂತ: ಒಂದು ಋತುವಿನ ಹೆಸರು, ಋತುಗಳ ರಾಜ; ವಿದ್ಯ: ಜ್ಞಾನ; ಜಾಲ: ಸಮೂಹ; ಕವಿತ್ವ: ಕಾವ್ಯ ರಚನೆ; ಗಜ: ಆನೆ; ವೈಹಾಳಿ: ವಿಹಾರ; ದೇವೇಂದ್ರ: ಇಂದ್ರ; ಮಿತ್ರ: ಸ್ನೇಹಿತ; ಶ್ರೇಣಿ: ಗುಂಪು, ಸಮೂಹ; ವಾಣಿ: ಸರಸ್ವತಿ; ಭಾಳ: ಹಣೆ, ಲಲಾಟ; ನೇತ್ರ: ನಯನ; ದೈವ: ಸುರ, ದೇವತೆ; ಬಿಲ್ಲು:ಧನುಸ್ಸು, ಚಾಪ; ಮನ್ಮಥ:ಕಾಮ, ಅನಂಗ; ಧನ: ಐಶ್ವರ್ಯ; ಅಭಿಮಾನ:ಹೆಮ್ಮೆ, ಅಹಂಕಾರ, ಆತ್ಮಗೌರವ;

ಪದವಿಂಗಡಣೆ:
ಕಾಲದೊಳಗೆ +ವಸಂತ+ ವಿದ್ಯಾ
ಜಾಲದೊಳಗೆ+ ಕವಿತ್ವ+ ಗಜ+ ವೈ
ಹಾಳಿಯಲಿ +ದೇವೇಂದ್ರ +ಮಿತ್ರ +ಶ್ರೇಣಿಯೊಳು +ವಾಣಿ
ಭಾಳನೇತ್ರನು+ ದೈವದಲಿ+ ಬಿ
ಲ್ಲಾಳಿನಲಿ+ ಮನುಮಥನು+ ಧನದಲಿ
ಹೇಳಲೇನ್+ಅಭಿಮಾನವೇ+ ಧನವೆಂದನಾ +ವಿದುರ

ಅಚ್ಚರಿ:
(೧) ಧನದಲಿ ಅಭಿಮಾನವೇ ಧನ – ಧನ ಪದದ ಬಳಕೆ
(೨) ವೈಹಾಳಿ, ಬಿಲ್ಲಾಳಿ; ಜಾಲ, ಕಾಲ – ಪ್ರಾಸ ಪದ

ಪದ್ಯ ೨೫: ಆಸ್ಥಾನದಲ್ಲಿ ಯಾರು ಕುಳಿತಿದ್ದರು?

ಹರಿ ವಿರಾಟ ದ್ರುಪದ ಕೈಕಯ
ರಿರವು ಬಲವಂಕದಲಿ ವಾಮದ
ಲಿರೆ ವೃಕೋದರ ಫಲುಗುಣಾದಿಗಳಖಿಳ ಮಂತ್ರಿಗಳು
ತರುಣಿಯರು ಪರಿಮಳದ ಜಂಗಮ
ಭರಣಿಯರು ಮನುಮಥವಿರಿಂಚನ
ತರುಣಿಯರು ಕುಳ್ಳಿರ್ದರರಸನ ಹಿಂದೆ ಮೋಹರಿಸಿ (ಉದ್ಯೋಗ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧರ್ಮರಾಯನ ಆಸ್ಥಾನದಲ್ಲಿ ಧರ್ಮರಾಯನು ಮಧ್ಯಭಾಗದಲ್ಲಿ ಕುಳಿತಿದ್ದರೆ, ಅವನ ಬಲಭಾಗದಲ್ಲಿ ಕೃಷ್ಣ, ವಿರಾಟ ರಾಜ, ದ್ರುಪದ, ಕೈಕಯರಿದ್ದರು, ಎಡಭಾಗದಲ್ಲಿ ಭೀಮ, ಅರ್ಜುನ, ನಕುಲ ಸಹದೇವ ಮತ್ತು ಮಂತ್ರಿಗಳಿದ್ದರು. ನಡೆಯುವ ಸುಗಂಧದ ಭರಣಿಗಳಂತಿದ್ದ ಮನ್ಮಥನೆಂಬ ಬ್ರಹ್ಮನ ವಿನೂತನ ಸೃಷ್ಟಿಗಳೆಂಬಂತಿದ್ದ ತರುಣಿಯರು ರಾಜನ ಹಿಂಭಾಗದಲ್ಲಿದ್ದರು.

ಅರ್ಥ:
ಹರಿ: ಕೃಷ್ಣ; ವಂಕ: ಬದಿ, ಮಗ್ಗುಲು; ಬಲ: ದಕ್ಷಿಣ ಪಾರ್ಶ್ವ; ವಾಮ: ಎಡಭಾಗ; ಮಂತ್ರಿ: ಸಚಿವ; ತರುಣಿ: ಹುಡುಗಿ; ಪರಿಮಳ: ಸುಗಂಧ; ಜಂಗಮ: ಚಲಿಸುವ; ಭರಣಿ:ಹೆಂಗಸರು ಹಣೆಗೆ ಹಚ್ಚಿಕೊಳ್ಳುವ ಸಾದು, ಹೆಂಗಸರು; ಮನುಮಥ: ರತೀಶ, ಕಾಮ;ವಿರಿಂಚ: ಬ್ರಹ್ಮ; ಕುಳ್ಳಿರ್ದರು: ಆಸೀನರಾಗಿದ್ದರು; ಅರಸ: ರಾಜ; ಹಿಂದೆ:ಹಿಂಬದಿ; ಮೋಹ: ಆಕರ್ಷಣೆ;

ಪದವಿಂಗಡಣೆ:
ಹರಿ +ವಿರಾಟ +ದ್ರುಪದ +ಕೈಕಯ
ರಿರವು +ಬಲ+ವಂಕದಲಿ+ ವಾಮದ
ಲಿರೆ +ವೃಕೋದರ +ಫಲುಗುಣಾದಿಗಳ್+ಅಖಿಳ +ಮಂತ್ರಿಗಳು
ತರುಣಿಯರು +ಪರಿಮಳದ +ಜಂಗಮ
ಭರಣಿಯರು +ಮನುಮಥ+ವಿರಿಂಚನ
ತರುಣಿಯರು +ಕುಳ್ಳಿರ್ದರ್+ಅರಸನ +ಹಿಂದೆ +ಮೋಹರಿಸಿ

ಅಚ್ಚರಿ:
(೧) ತರುಣಿಯರು – ೪, ೬ ಸಾಲಿನ ಮೊದಲ ಪದ
(೨) ತರುಣಿಯರ ವರ್ಣನೆ – ಪರಿಮಳದ ಜಂಗಮ ಭರಣಿಯರು ಮನುಮಥವಿರಿಂಚನ ತರುಣಿಯರು

ಪದ್ಯ ೧೭: ಹಿಡಿಂಬಿಯು ಹಿಮಾಚಲಕ್ಕೆ ಹೋಗುವ ಎಂದು ಹೇಳಿದುದಕ್ಕೆ ಭೀಮನ ಉತ್ತರವೇನು?

ನಿನ್ನ ನೊಲ್ಲೆನು ಮುನಿದೆಯಾದಡೆ
ನಿನ್ನ ದೈತ್ಯನ ಕೊಂಡು ಬಾ ಹೋ
ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ
ಮುನ್ನಲೇ ಮನುಮಥನ ಶರದಲಿ
ಖಿನ್ನೆಯಾಗಿಹೆ ಮರೆಯ ಹೊಕ್ಕೆನು
ತನ್ನನೀಪರಿ ಮುರಿದು ನುಡಿವರೆ ಎಂದಳಿಂದುಮುಖಿ (ಆದಿ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಾನು ನಿನ್ನನ್ನು ಒಲ್ಲೆನು, ಇದಕ್ಕೆ ನಿನಗೆ ಸಿಟ್ಟು ಬಂದರೆ ನಿನ್ನ ರಾಕ್ಷಸನಾದ ಅಣ್ಣನನ್ನು ಕರೆದುಕೊಂಡು ಬಾ ಹೋಗು, ಆಗ ನನ್ನ ಬಲವನ್ನು ನೋಡು ಎಂದು ಭೀಮನು ಹೇಳಲು, ಹಿಡಿಂಬಿಯು ವಿನಯದಿಂದ, ನಾನು ಮುಂಚೆಯೆ ಮನ್ಮಥನ ಬಾಣದಿಂದ ಪೀಡಿತಳಾಗಿ ದುಃಖಿತನಾಗಿ ನಿನ್ನ ಮರೆಹೊಕ್ಕಿದ್ದೇನೆ, ನನ್ನ ಮನಸ್ಸನ್ನು ಮುರಿದು ಹೀಗೆ ಮಾತನಾಡಬೇಡ ಎಂದಳು.

ಅರ್ಥ:
ಒಲ್ಲೆನು: ಬಯಸದಿರುವಿಕೆ, ಪ್ರೀತಿಯಿಲ್ಲದಿರುವಿಕೆ; ಮುನಿ: ಮುನಿಸು, ಕೋಪ; ದೈತ್ಯ: ರಾಕ್ಷಸ; ಹೋಗು: ದೂರ ಸರೆ; ಬಲುಹು: ಪರಾಕ್ರಮ; ಅಸುರೆ: ರಾಕ್ಷಸಿ; ವಿನಯ: ಸೌಜನ್ಯ, ಒಳ್ಳೆಯತನ; ಮುನ್ನ: ಮುಂಚೆ; ಮನುಮಥ: ಕಾಮ; ಶರ: ಬಾಣ; ಖಿನ್ನ: ವಿಷಾದ, ನೊಂದುದು; ಮರೆಹೋಗು: ಆಶ್ರಯಿಸು, ಶರಣಾಗು;ಮುರಿದು: ಬಾಗು, ವಕ್ರವಾಗು; ನುಡಿ: ಮಾತು; ಇಂದು: ಚಂದ್ರ; ಮುಖ: ಆನನ;

ಪದವಿಂಗಡನೆ:
ನಿನ್ನನ್+ಒಲ್ಲೆನು +ಮುನಿದೆ+ಯಾದಡೆ
ನಿನ್ನ+ ದೈತ್ಯನ+ ಕೊಂಡು +ಬಾ +ಹೋಗ್
ಎನ್ನ+ ಬಲುಹನು+ ನೋಡು +ನೀನ್+ಎನಲ್+ಅಸುರೆ+ ವಿನಯದಲಿ
ಮುನ್ನಲೇ +ಮನುಮಥನ+ ಶರದಲಿ
ಖಿನ್ನೆಯಾಗಿಹೆ+ ಮರೆಯ ಹೊಕ್ಕೆನು
ತನ್ನನ್+ಈ+ಪರಿ+ ಮುರಿದು+ ನುಡಿವರೆ+ ಎಂದಳ್+ಇಂದು+ಮುಖಿ

ಅಚ್ಚರಿ:
(೧) ನಿನ್ನ, ನಿನ್ನ, ಎನ್ನ – ಮೊದಲ ೩ ಸಾಲುಗಳ ಮೊದಲ ಪದಗಳು
(೨) ದೈತ್ಯ, ಅಸುರೆ – ಪುಲ್ಲಿಂಗ ಸ್ತ್ರೀಲಿಂಗದ ರೂಪ
(೩) ಪ್ರೇಮದಲ್ಲಿ ಮುಳಿಗಿದವರು ಹೇಳುವ ಮಾತು: ಖಿನ್ನೆಯಾಗಿಹೆ ಮರೆಯ ಹೊಕ್ಕೆನು ತನ್ನನೀಪರಿ ಮುರಿದು ನುಡಿವರೆ