ಪದ್ಯ ೪೯: ಭೀಮನೆಂದು ಜನಿಸಿದನು?

ಅವನಿಸುತವಾರ ತ್ರಯೋದಶಿ
ದಿವದ ಮಧ್ಯದೊಳರ್ಕನಿರೆ ಸಂ
ಭವಿಸಿದನು ಮಘೆಯಲಿ ಶುಭಗ್ರಹ ಲಗ್ನದುದಯದಲಿ
ಭವದ ಮಾತ್ರದೊಳಹಿತ ಪಾರ್ಥಿವ
ನಿವಹ ನಡುಗಿತು ಭೂಮಿಪತಿ ಹೇ
ಳುವೆನದೇನನು ಭೀಮಸೇನನ ಜನನದದ್ಭುತವ (ಆದಿ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಂಗಳವಾರ, ತ್ರಯೋದಶೀ ದಿನದಂದು ಮಧ್ಯಾಹ್ನ ಕಾಲದಲ್ಲಿ ಮಘಾ ನಕ್ಷತ್ರದ ಶುಭಲಗ್ನದಲ್ಲಿ ಭೀಮನು ಜನಿಸಿದನು. ಅವನು ಜನಿಸುತ್ತಲೇ ಶತ್ರುರಾಜರೂ ನಡುಗಿದರು. ಜನಮೇಜಯ ರಾಜ, ಕೇಳು ಅವನ ಜನನಕ್ಕೆ ಹೊಂದಿದ ಅದ್ಭುತವ.

ಅರ್ಥ:
ಅವನಿಸುತ: ಭೂಮಿಯ ಮಗ (ಮಂಗಳ); ವಾರ: ದಿನ; ತ್ರಯೋದಶಿ: ಹದಿಮೂರು; ಮಧ್ಯ: ಮಧ್ಯಾಹ್ನ; ಅರ್ಕ: ಸೂರ್ಯ; ಸಂಭವಿಸು: ಹುಟ್ಟು; ಮಘೆ: ಮಾಘಮಾಸ; ಶುಭ: ಮಂಗಳ; ಗ್ರಹ: ಆಕಾಶಚರಗಳು; ಲಗ್ನ: ಶುಭ ಸಮಯ; ಉದಯ: ಹುಟ್ಟು; ಭವ: ಇರುವಿಕೆ, ಅಸ್ತಿತ್ವ, ಹುಟ್ಟು; ಅಹಿತ: ವೈರಿ; ಪಾರ್ಥಿವ: ಭೂಮಿಯನ್ನು ಆಳುವವನು; ನಿವಹ: ಗುಂಪು; ನಡುಗು: ಅಲ್ಲಾಡು; ಭೂಮಿಪತಿ: ರಾಜ; ಹೇಳು: ತಿಳಿಸು; ಜನನ: ಹುಟ್ಟು; ಅದ್ಭುತ: ಆಶ್ಚರ್ಯ;

ಪದವಿಂಗಡಣೆ:
ಅವನಿಸುತವಾರ +ತ್ರಯೋದಶಿ
ದಿವದ +ಮಧ್ಯದೊಳ್+ಅರ್ಕನಿರೆ +ಸಂ
ಭವಿಸಿದನು +ಮಘೆಯಲಿ +ಶುಭಗ್ರಹ+ ಲಗ್ನದ್+ಉದಯದಲಿ
ಭವದ +ಮಾತ್ರದೊಳ್+ಅಹಿತ +ಪಾರ್ಥಿವ
ನಿವಹ +ನಡುಗಿತು +ಭೂಮಿಪತಿ +ಹೇ
ಳುವೆನ್+ಅದೇನನು +ಭೀಮಸೇನನ +ಜನನದ್+ಅದ್ಭುತವ

ಅಚ್ಚರಿ:
(೧) ಮಂಗಳವಾರವನ್ನು ಅವನಿಸುತವಾರ ಎಂದು ಕರೆದಿರುವುದು
(೨) ಭೀಮನ ಪರಾಕ್ರಮವನ್ನು ಹೇಳುವ ಪರಿ – ಭವದ ಮಾತ್ರದೊಳಹಿತ ಪಾರ್ಥಿವನಿವಹ ನಡುಗಿತು
(೩) ಸಂಭವಿಸು, ಉದಯ, ಜನನ, ಭವ – ಸಾಮ್ಯಾರ್ಥ ಪದಗಳು

ಪದ್ಯ ೨೮: ಕೌರವನ ರಕ್ಷಣೆಗೆ ಯಾರು ನಿಂತರು?

ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ (ಗದಾ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ಸರೋವರದ ಮಧ್ಯದಲ್ಲಿ ನಿಂತು, ಪಾಳೆಯವನ್ನು ಹಸ್ತಿನಾಪುರಕ್ಕೆ ಕಳುಹಿಸು ಎನಲು, ನಾನಿಲ್ಲಿಗೆ ಬಂದೆನು. ದಾರಿಯ ನಡುವೆ ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮರನ್ನು ನೋಡಿದೆ, ಅವರನ್ನು ಕೌರವನ ರಕ್ಷಣೆಗಾಗಿ ದೊರೆಯ ಬಳಿಗೆ ಕಳುಹಿಸಿದೆ ಎಂದು ಸಂಜಯನು ಹೇಳಿದನು.

ಅರ್ಥ:
ಇಳಿ: ಕೆಳಗೆ ಹೋಗು; ಸರಸಿ: ಸರೋವರ; ಮಧ್ಯ: ನಡುವೆ; ನೃಪ: ರಾಜ; ತಿಲಕ: ಶ್ರೇಷ್ಠ; ನಿಂದು: ನಿಲ್ಲು; ಪಾಳೆಯ: ಬಿಡಾರ; ಕಳುಹು: ತೆರಳು; ಗಜಪುರಿ: ಹಸ್ತಿನಾಪುರ; ಬಂದು: ಆಗಮಿಸು; ಪಥ: ಮಾರ್ಘ; ಮಧ್ಯ: ನಡುವೆ; ಸುಳಿ: ಕಾಣಿಸಿಕೊಳ್ಳು; ಕಂಡು: ನೋಡು; ಗುರು: ಆಚಾರ್ಯ; ಮಗ: ಸುತ; ಉಳಿದ: ಮಿಕ್ಕ; ಕಳುಹು: ಬೀಳ್ಕೊಡು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಇಳಿದು +ಸರಸಿಯ +ಮಧ್ಯದಲಿ +ನೃಪ
ತಿಲಕ +ನಿಂದನು +ಪಾಳೆಯವ +ನೀ
ಕಳುಹು +ಗಜಪುರಿಗ್+ಎನಲು +ಬಂದೆನು +ಪಥದ +ಮಧ್ಯದಲಿ
ಸುಳಿವ +ಕಂಡೆನು +ಕೃಪನನ್+ಆ+ ಗುರು
ಗಳ+ ಮಗನ+ ಕೃತವರ್ಮಕನನಂದ್
ಉಳಿದ +ಮೂವರ +ಕಳುಹಿದೆನು+ ಕುರುಪತಿಯ+ ಹೊರೆಗಾಗಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ನೃಪತಿಲಕ, ಕುರುಪತಿ

ಪದ್ಯ ೨೧: ಮದ್ರದೇಶದ ಜನರ ಗುಣ ಎಂತಹುದು?

ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ಕೋಪದಿಂದ ಎಲವೋ ಶಲ್ಯ ನಿನ್ನ ಮಾದ್ರದೇಶದ ಜನರೆಂತಹವರು ಎಂದು ನಾನು ಹೇಳಬೇಕೆ, ನಿಮ್ಮ ದೇಶದವರು ಯುದ್ಧ ಸಮಯದಲ್ಲಿ ಒಡೆಯನನ್ನು ಜರಿದು ಜಾರಿಕೊಂಡು ಓಡಿ ಹೋಗುವವರು, ಅವರು ಮಾತನಾಡುವುದೇ ಒಂದು, ನಡತೆಯೇ ಮತ್ತೊಂದು, ಮದ್ಯವನ್ನು ಕಂಠಪೂರ್ತಿ ಕುಡಿದು ಅತಿಯಾಗಿ ಸೊಕ್ಕಿ ಗಣಿಕೆಯರ ನಡುವೆ ಬತ್ತಲೆಯಾಗಿ ಕುಣಿಯುವ ಭಂಡರು ನೀವು ಎಂದು ಕರ್ಣನು ಶಲ್ಯನನ್ನು ಜರಿದನು.

ಅರ್ಥ:
ರಣ: ಯುದ್ಧ; ಒಡೆಯ: ದೊರೆ; ಜರೆ: ಬಯ್ಯುವುದು, ತೆಗಳು; ಜಾರುವ: ನುಣುಚಿಕೊಳ್ಳು, ಹಾಳಾಗು; ಗುಣ: ಸ್ವಭಾವ; ಸಮುದ್ರ: ಸಾಗರ; ಭಣಿತೆ:ಸಂಭಾಷಣೆ; ಬೇರೆ: ಅನ್ಯ;ನಡೆವಳಿ: ನಡವಳಿಕೆ, ವರ್ತನೆ; ಗಣಿಕೆ: ಸೂಳೆ, ವೇಶ್ಯೆ; ಮಧ್ಯ: ನಡುವೆ; ತಣಿವು:ತೃಪ್ತಿ, ಸಮಾಧಾನ; ತನಿ: ಹೆಚ್ಚಾಗು, ಅತಿಶಯವಾಗು; ಸೊಕ್ಕು: ಅಮಲು, ಮದ; ಬತ್ತಲೆ: ನಗ್ನವಾಗಿ; ಕುಣಿ: ನರ್ತಿಸು; ಭಂಗಿ: ದೇಹದ ನಿಲುವು, ವಿನ್ಯಾಸ; ಭಂಡ:ನಾಚಿಕೆ ಇಲ್ಲದವನು; ಕೇಳು: ಆಲಿಸು;

ಪದವಿಂಗಡಣೆ:
ರಣದೊಳ್+ಒಡೆಯನ +ಜರೆದು +ಜಾರುವ
ಗುಣಸಮುದ್ರರು +ಮಾದ್ರದೇಶದ
ಭಣಿತೆ +ತಾನದು +ಬೇರೆ +ನಡೆವಳಿಯಂಗವದು +ಬೇರೆ
ಗಣಿಕೆಯರ +ಮಧ್ಯದಲಿ +ಮದ್ಯದ
ತಣಿವಿನಲಿ +ತನಿಸೊಕ್ಕಿ +ಬತ್ತಲೆ
ಕುಣಿವ +ಭಂಗಿಯ +ಭಂಡರ್+ಎಲವೋ +ಶಲ್ಯ +ಕೇಳೆಂದ

ಅಚ್ಚರಿ:
(೧) ಗುಣಸಮುದ್ರರು – ಜರೆದು ಜಾರುವ ಗುಣ ನಿಮ್ಮಲ್ಲಿ ಅಧಿಕವಾಗಿದೆ ಎಂದು ಹೇಳಲು ಬಳಸಿದ ಪದ
(೨) ನುಡಿದಂತೆ ನಡೆಯರು ಎಂದು ಹೇಳಲು – ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
(೩) ಜೋಡಿ ಪದಗಳು – ಮಧ್ಯದಲಿ ಮದ್ಯದ; ತಣಿವಿನಲಿ ತನಿಸೊಕ್ಕಿ; ಭಂಗಿಯ ಭಂಡರ್;

ಪದ್ಯ ೧೦೮: ದರ್ಭೆಯಲ್ಲಿ ಯಾರು ನೆಲೆಸಿದ್ದಾರೆ?

ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯೊಳು ಗಿರಿಜೇಶನೀ ತ್ರೈಮೂರ್ತಿಮಯವಾಗಿ
ಕಾದುಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ದರ್ಭೆಯ ಮಹಿಮೆಯನ್ನು ತಿಳಿಸುವ ಪದ್ಯ. ದರ್ಭೆಯ ಆದಿಯಲ್ಲಿ ಬ್ರಹ್ಮನು, ಮಧ್ಯದಲ್ಲಿ ವಿಷ್ಣುವು ಮತ್ತು ತುದಿಯಲ್ಲಿ ಶಿವನು, ಹೀಗೆ ತ್ರಿಮೂರ್ತಿಗಳ ಸಮಾಗಮವಾದ ದರ್ಭೆಯು ತ್ರಿಮೂರ್ತಿಮಯವಾಗಿದೆ. ಅವರು ಲೋಕವನ್ನು ಕಾಯುತ್ತಿದ್ದಾರೆ. ದರ್ಭೆಯ ಮಹಿಮೆಯನ್ನು ವರ್ಣಿಸಲು ಯಾರಿಗೆ ಸಾಧ್ಯವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಆದಿ: ಮೊದಲು; ಕಮಲಾಸನ: ಬ್ರಹ್ಮ; ಕಮಲ: ಪದ್ಮ; ಆಸನ: ಕುಳಿತುಕೊಳ್ಳುವ; ಮಧುಸೂದನ: ವಿಷ್ಣು; ಮಧ್ಯ: ನಡು; ಮೇಲಣ: ಮೊದಲು; ಹಾದಿ: ಮಾರ್ಗ, ರೀತಿ; ಗಿರಿಜೇಶ: ಶಿವ; ತ್ರೈಮೂರ್ತಿ: ತ್ರಿಮೂರ್ತಿ, ಬ್ರಹ್ಮ ವಿಷ್ಣು ಮಹೇಶ್ವರ; ಮಯ: ವ್ಯಾಪಿಸಿರುವುದು; ಕಾದು: ಕಾಯು; ಅಖಿಳ: ಎಲ್ಲಾ; ಲೋಕ: ಜಗತ್ತು; ಐದೆ: ವಿಶೇಷವಾಗಿ; ಅಂಕುರ: ಮೊಳಕೆ, ಚಿಗುರು, ಹುಟ್ಟು; ಮಹಿಮೆ: ಶ್ರೇಷ್ಠತೆ, ಔನ್ನತ್ಯ, ವೈಶಿಷ್ಟ್ಯ; ಭೇದ: ಗುಟ್ಟನ್ನು ರಟ್ಟು ಮಾಡುವುದು; ಬಣ್ಣಿಸು: ವಿವರಿಸು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆದಿಯಲಿ+ ಕಮಲಾಸನನು +ಮಧು
ಸೂದನನು +ಮಧ್ಯದಲಿ +ಮೇಲಣ
ಹಾದಿಯೊಳು +ಗಿರಿಜೇಶನ್+ಈ+ ತ್ರೈಮೂರ್ತಿ+ಮಯವಾಗಿ
ಕಾದುಕೊಂಡಿಹರ್+ಅಖಿಳ +ಲೋಕವನ್
ಐದೆ+ ದರ್ಭಾಂಕುರದ +ಮಹಿಮೆಯ
ಭೇದವನು +ಬಣ್ಣಿಸುವನಾವನು+ ಭೂಪ +ಕೇಳೆಂದ

ಅಚ್ಚರಿ:
(೧) ಆದಿ, ಮಧ್ಯ, ಮೇಲಣ, ಕಮಲಾಸನ, ಮಧುಸೂದನ, ಗಿರಿಜೇಶನ – ಪದಗಳ ಬಳಕೆ
(೨) ಬ ಕಾರದ ಸಾಲು ಪದಗಳ ಬಳಕೆ – ಭೇದವನು ಬಣ್ಣಿಸುವನಾವನು ಭೂಪ