ಪದ್ಯ ೮: ಭಗದತ್ತನ ಪತ್ನಿಯರ ಸ್ಥಿತಿ ಹೇಗಿತ್ತು?

ಇತ್ತ ನೋಡೈ ದೇವಕೀಸುತ
ಮತ್ತಗಜ ಕಂಧರದೊಳಾ ಭಗ
ದತ್ತನನು ಕಂಡಾತನರಸಿಯರೈದೆ ಮೊಗವಿತ್ತಿ
ಸುತ್ತಬರುತೈದಾರೆ ದಂತಿಯ
ಹತ್ತಲರಿಯದೆ ನೂರುಮಡಿ ಶೋ
ಕೋತ್ತರದಲದೆ ಶಿವ ಎನುತ ಮರುಗಿದಳು ಗಾಂಧಾರಿ (ಗದಾ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ಗಾಂಧಾರಿಯು, ಕೃಷ್ಣಾ ಇತ್ತನೋಡು, ಭಗದತ್ತನ ಪತ್ನಿಯರು ಆನೆಯ ಮೇಲಿರುವ ಅವನ ದೇಹವನ್ನು ಕಂಡು ಮುಖವನ್ನೆತ್ತಿ ನೋಡುತ್ತಾ, ಆನೆಯನ್ನು ಹತ್ತಲಾರದೆ ನೂರುಮಡಿ ಶೋಕದಿಂದ ತತ್ತರಿಸುತ್ತಿದ್ದಾರೆ ಎಂದು ವ್ಯಥೆ ಪಟ್ಟಳು.

ಅರ್ಥ:
ನೋಡು: ವೀಕ್ಷಿಸು; ದೇವಕೀಸುತ: ಕೃಷ್ಣ; ಮತ್ತಗಜ: ಸೊಕ್ಕಿದಾನೆ; ಕಂಧರ: ಕೊರಳು, ಕಂಠ; ಕಂಡು: ನೋಡು; ಅರಸಿ: ರಾಣಿ; ಐದು: ಬಂದು ಸೇರು ಮೊಗ: ಮುಖ; ಎತ್ತು: ಮೇಲೆ ನೋಡು; ಸುತ್ತು: ತಿರುಗು; ದಂತಿ: ಆನೆ; ಹತ್ತು: ಮೇಲೇರು; ಅರಿ: ತಿಳಿ; ನೂರು: ಶತ; ಮಡಿ: ಪಟ್ಟು; ಶೋಕ: ದುಃಖ; ಮರುಗು: ತಳಮಳ, ಸಂಕಟ;

ಪದವಿಂಗಡಣೆ:
ಇತ್ತ +ನೋಡೈ +ದೇವಕೀಸುತ
ಮತ್ತಗಜ+ ಕಂಧರದೊಳ್+ಆ+ ಭಗ
ದತ್ತನನು +ಕಂಡ್+ಆತನ್+ಅರಸಿಯರ್+ಐದೆ+ ಮೊಗವಿತ್ತಿ
ಸುತ್ತಬರುತೈದಾರೆ +ದಂತಿಯ
ಹತ್ತಲ್+ಅರಿಯದೆ +ನೂರುಮಡಿ +ಶೋ
ಕೋತ್ತರದಲದೆ +ಶಿವ +ಎನುತ +ಮರುಗಿದಳು +ಗಾಂಧಾರಿ

ಅಚ್ಚರಿ:
(೧) ಇತ್ತ, ಮತ್ತ, ಭಗದತ್ತ, ಸುತ್ತ – ಪ್ರಾಸ ಪದಗಳು

ಪದ್ಯ ೨: ಭೀಮ ದುರ್ಯೋಧನರು ಯಾವ ರೀತಿ ಹೋರಾಡಿದರು?

ಹಳಚಿದರು ಸುಳಿ ಘಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು (ಗದಾ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಸುಳಿಗಾಳಿಯಂತೆ ಎರಗುವ ಗರುಡನಂತೆ ಹೊಯ್ದು ಸುತ್ತಿ ಬಿಗಿದು ಮದಗಜಗಳಂತೆ ಮೇಲ್ಬಿದ್ದು ಅಗ್ನಿಯಂತೆ ಮುನ್ನುಗ್ಗಿ ಸುಟ್ಟು, ಹಾವಿನಂತೆ ಅಪ್ಪಳಿಸಿ, ಪಾದರಸದಂತೆ ಚುರುಕಾಗಿ ವೀರರಿಬ್ಬರೂ ಕಾದಿದರು.

ಅರ್ಥ:
ಹಳಚು: ತಾಗು, ಬಡಿ; ಸುಳಿ: ಆವರಿಸು, ಮುತ್ತು; ಗಾಳಿ: ವಾಯು; ಖಗ: ಪಕ್ಷಿ; ಖಗಪತಿ: ಪಕ್ಷಿರಾಜ (ಗರುಡ); ಹೊಯ್ಲು: ಹೊಡೆ; ಬಳಸು: ಆವರಿಸು; ಬಿಗಿ: ಭದ್ರವಾಗಿರುವುದು; ಎರಗು: ಬೀಳು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಮತ್ತಗಜ: ಮದಕರಿ; ಶಿಖಿ: ಬೆಂಕಿ; ಚೂರಿಸು: ಚಳಪಳಿಸುವಂತೆ ತಿರುಗಿಸು; ನಿಲುಕು: ಬಿಡುವು, ವಿರಾಮ; ಫಣಿ: ಹಾವು; ಪಯ: ಪಾದ; ಲುಳಿ: ರಭಸ, ವೇಗ; ಒದೆ: ತುಳಿ, ಮೆಟ್ಟು; ಪಾದರಸ: ಒಂದು ಬಗೆಯ ದ್ರವ ರೂಪದ ಲೋಹ, ಪಾರಜ; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ಹಳಚಿದರು +ಸುಳಿ +ಘಾಳಿಯಂತಿರೆ
ಸುಳಿದು +ಖಗಪತಿಯಂತೆ +ಹೊಯ್ಲಲಿ
ಬಳಸಿ +ಬಿಗಿದ್+ಎರಗಿದರು +ಬಿಡೆಯದ +ಮತ್ತ+ಗಜದಂತೆ
ಅಳುವಿದರು +ಶಿಖಿಯಂತೆ +ಚೂರಿಸಿ
ನಿಲುಕಿದರು +ಫಣಿಯಂತೆ +ಪಯ+ಮೈ
ಲುಳಿಯಲ್+ಒಲೆದರು +ಪಾದರಸದಂದದಲಿ+ ಪಟುಭಟರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ

ಪದ್ಯ ೩೮: ಭೀಮನ ಆಕ್ರಮಣ ಹೇಗಿತ್ತು?

ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತು ಗಿವಿಗಳ ಡಾವರಿಪಡಾವರದ ಡಬ್ಬುಕದ
ವಾರೆಯ ಬಗೆಯದಾನೆಗ
ಕುತ್ತುಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ (ಗದಾ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಸಿಂಹನಾದವನ್ನು ಹೊರಹೊಮ್ಮುತ್ತಾ ರಭಸದಿಂದ ಬರಲು, ಜೋದರು ನೆತ್ತಿಗಿರಿದ ಅಂಕುಶವನ್ನೆತ್ತಿದೊಡನೆ ತಲೆಕೊಡವಿ ನಿಂತುಬಿಟ್ಟವು. ಬೆರಳಿಂದ ಕಿವಿಗಳನ್ನೊತ್ತಿದ ಹಾರೆಗೆ ಬೆದರಳೆ ಇಲ್ಲ. ಆನೆಗಳು ಹಿಮ್ಮೆಟ್ಟಿದವು.

ಅರ್ಥ:
ನೆತ್ತಿ: ಶಿರ; ಅಗತೆ: ತೋಡು; ಊರು: ಭದ್ರವಾಗಿ ನಿಲಿಸು; ಅಂಕುಶ: ಹಿಡಿತ, ಹತೋಟಿ; ತಲೆ: ಶಿರ; ಕೊಡು: ನೀಡು; ಬೆರಳು: ಅಂಗುಲಿ; ಒತ್ತು: ಚುಚ್ಚು, ತಿವಿ; ಕಿವಿ: ಕರ್ಣ; ಡಾವರಿಸು: ನೋಯಿಸು; ಡಬ್ಬುಕ: ಡಬ್ ಡಬ್ ಸಪ್ಪಳ; ಡಾವರ: ಕ್ಷೋಭೆ; ಬಗೆ: ಎಣಿಸು; ಆನೆ: ಗಜ; ಕುತ್ತು: ತಿವಿ; ಮುರಿ: ಸೀಳು; ಸಿಂಹನಾದ: ಗರ್ಜನೆ; ಮತ್ತಗಜ: ಅಮಲಿನಿಂದ ಕೂಡಿದ ಆನೆ; ಮೊಗ: ಮುಖ, ಮೋರೆ; ದಳ: ಸೈನ್ಯ; ಉಳಿಸು: ರಕ್ಷಿಸು;

ಪದವಿಂಗಡಣೆ:
ನೆತ್ತಿ+ಅಗತೆಯೊಳ್+ಊರಿದ್+ಅಂಕುಶವ್
ಎತ್ತಿದಡೆ +ತಲೆ+ಕೊಡಹಿದವು +ಬೆರಳ್
ಒತ್ತು + ಕಿವಿಗಳ +ಡಾವರಿಪ + ಡಾವರದ +ಡಬ್ಬುಕದ
ವಾರೆಯ +ಬಗೆಯದ್+ಆನೆಗ
ಕುತ್ತುಳ್+ಇತ್ತ +ಮುರಿದವು +ಸಿಂಹನಾದಕೆ
ಮತ್ತಗಜ+ ಮೊಗದ್+ಇರುಹಿದವು + ದಳವುಳಿಸಿದನು +ಭೀಮ

ಅಚ್ಚರಿ:
(೧) ಡ ಕಾರದ ಪದಗಳು – ಡಾವರಿಪ ಡಾವರದ ಡಬ್ಬುಕದ
(೨) ಭೀಮನ ಗರ್ಜನೆಯ ಶಕ್ತಿ – ಮುರಿದವು ಸಿಂಹನಾದಕೆ ಮತ್ತಗಜ ಮೊಗದಿರುಹಿದವು

ಪದ್ಯ ೧೭: ಸೈನ್ಯವು ಅರ್ಜುನನನ್ನು ಹೇಗೆ ಮುತ್ತಿತು?

ಮುತ್ತಿದವು ರಥವೇಳನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸಿದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದೆನೆ ಕೈದುಗಳ ರುಚಿ ವೇಢೈಸಿತರ್ಜುನನ (ಗದಾ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಏಳುನೂರರವತ್ತು ರಥಗಳು, ಐನೂರು ಕುದುರೆಗಳು, ಸಾವಿರ ಆನೆಗಳು, ಇಪ್ಪತ್ತು ಸಾವಿರ ಕಾಲಾಳುಗಳು, ಅರ್ಜುನನನ್ನು ಮುತ್ತಿ ಬಾಣಗಳನ್ನು ಬಿಟ್ಟರು. ಖಡ್ಗಗಳನ್ನು ಝಳುಪಿಸಿದರು. ಮುಖವನ್ನೇ ಕೆತ್ತಿದವೋ ಎಂಬಂತೆ ವೈರಿಗಳ ಶಸ್ತ್ರಗಳು ಅರ್ಜುನನನ್ನು ಮುತ್ತಿದವು.

ಅರ್ಥ:
ಮುತ್ತು: ಆವರಿಸು; ನೂರು: ಶತ; ಹಯ: ಕುದುರೆ; ಸಾವಿರ: ಸಹಸ್ರ; ಮತ್ತ: ಅಮಲು; ಗಜ: ಆನೆ; ಪಾಯದಳ: ಸೈನಿಕ; ಸಹಿತ: ಜೊತೆ; ತೆತ್ತು: ಕೂಡಿಸು; ಅಂಬು: ಬಾಣ; ಉರವಣೆ: ಆತುರ, ಅವಸರ; ದೂಹತ್ತಿ: ಎರಡುಕಡೆ ಚೂಪಾದ ಕತ್ತಿ; ಹೊಳೆ: ಪ್ರಕಾಶ; ಸಮರ: ಯುದ್ಧ; ಮುಖ: ಆನನ; ಕೈದು: ಆಯುಧ; ರುಚಿ: ಆಸ್ವಾದ, ಸವಿ; ವೇಡೈಸು: ಸುತ್ತುವರಿ;

ಪದವಿಂಗಡಣೆ:
ಮುತ್ತಿದವು +ರಥವ್+ಏಳನೂರ್+ಅರು
ವತ್ತು +ಹಯವ್+ಐನೂರು +ಸಾವಿರ
ಮತ್ತಗಜವ್+ಇಪ್ಪತ್ತು +ಸಾವಿರ +ಪಾಯದಳ +ಸಹಿತ
ತೆತ್ತಿಸಿದವಂಬ್+ಉರವಣಿಸಿ +ದೂ
ಹತ್ತಿ +ಹೊಳೆದವು +ಸಮರದಲಿ +ಮುಖ
ಕೆತ್ತುದೆನೆ +ಕೈದುಗಳ +ರುಚಿ +ವೇಢೈಸಿತ್+ಅರ್ಜುನನ

ಅಚ್ಚರಿ:
(೧) ಮುತ್ತಿ, ತೆತ್ತಿ, ದೂಹತ್ತಿ – ಪ್ರಾಸ ಪದ

ಪದ್ಯ ೪೫: ಅಭಿಮನ್ಯುವು ಹೇಗೆ ಯುದ್ಧಮಾಡುವೆನೆಂದು ಹೇಳಿದನು?

ಕೆತ್ತು ಕೊಂಡಿರೆ ಬಿಡಿಸುವೆನು ರಥ
ವೆತ್ತಲುರುಬಿದರತ್ತ ಕಣನೊಳು
ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ
ಹೊತ್ತಿ ಹೊಗೆವ ಪರಾಕ್ರಮಾಗ್ನಿಯ
ತುತ್ತು ಪದ್ಮವ್ಯೂಹ ದೇವರು
ಚಿತ್ತಯಿಸುವುದು ಹೊತ್ತುಗಳೆಯದೆ ಎನ್ನ ಕಳುಹೆಂದ (ದ್ರೋಣ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ವೈರಿಗಳು ನನ್ನನ್ನು ಆವರಿಸಿದರೆ ಅವರ ಮುತ್ತಿಗೆಯನ್ನು ನಾನು ಬಿಡಿಸಿಕೊಳ್ಳುತ್ತೇನೆ. ರಥವು ಎತ್ತಹೋದರೂ ಅಲ್ಲಿ ಮದಾನೆಯಂತೆ ಶತ್ರುಸೈನ್ಯವನ್ನು ಸಂಹರಿಸುತ್ತೇನೆ. ನನ್ನ ಪರಾಕ್ರಮಾಗ್ನಿಯು ಹೊಗೆದು ಹೊತ್ತಿಕೊಂಡಾಗ ಪದ್ಮವ್ಯೂಹವು ಅದಕ್ಕೆ ತುತ್ತಾಗುತ್ತದೆ. ಕಾಲಕಳೆಯದೆ ನನ್ನನ್ನು ಕಳಿಸಿಕೊಡಿ ಎಂದು ಅಭಿಮನ್ಯುವು ಧರ್ಮಜನಲ್ಲಿ ಕೇಳಿದನು.

ಅರ್ಥ:
ಕೆತ್ತು:ನಡುಕ, ಸ್ಪಂದನ; ಬಿಡಿಸು: ಸಡಲಿಸು; ರಥ: ಬಂಡಿ; ಉರುಬು: ಮೇಲೆ ಬೀಳು, ಅತಿಶಯ; ಕಣ: ರಣರಂಗ; ಮತ್ತಗಜ: ಮದ್ದಾನೆ; ಮುರಿ: ಸೀಳು; ಕದಡು: ಚೆದುರಿಸು; ಅಹಿತ: ವೈರಿ; ಮೋಹರ: ಯುದ್ಧ; ಹೊತ್ತು: ಹತ್ತಿಕೊಳ್ಳು, ಉರಿ; ಹೊಗೆ: ಧೂಮ; ಪರಾಕ್ರಮ: ಶೂರತ್ವ; ಅಗ್ನಿ: ಬೆಂಕಿ; ತುತ್ತು: ನುಂಗು; ದೇವರು: ಭಗವಂತ; ಚಿತ್ತಯಿಸು: ಮನಸ್ಸನ್ನು ನೀಡು; ಹೊತ್ತು: ಸಮಯ; ಕಳೆ: ವ್ಯಯಿಸು; ಕಳುಹು: ಬೀಳ್ಕೊಡು;

ಪದವಿಂಗಡಣೆ:
ಕೆತ್ತು+ ಕೊಂಡಿರೆ +ಬಿಡಿಸುವೆನು +ರಥ
ವೆತ್ತಲ್+ಉರುಬಿದರ್+ಅತ್ತ +ಕಣನೊಳು
ಮತ್ತಗಜ+ ಮುರಿದಂತೆ +ಕದಡುವೆನ್+ಅಹಿತ +ಮೋಹರವ
ಹೊತ್ತಿ +ಹೊಗೆವ +ಪರಾಕ್ರಮಾಗ್ನಿಯ
ತುತ್ತು +ಪದ್ಮವ್ಯೂಹ +ದೇವರು
ಚಿತ್ತಯಿಸುವುದು +ಹೊತ್ತುಗಳೆಯದೆ +ಎನ್ನ +ಕಳುಹೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಣನೊಳು ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ

ಪದ್ಯ ೫೨: ಅರ್ಜುನನು ಕೌರವ ಸೈನ್ಯವನ್ನು ಎಷ್ಟರ ಮಟ್ಟಿಗೆ ನಾಶಮಾಡಿದನು?

ಮತ್ತೆ ಮುರಿದನು ಹತ್ತು ಸಾವಿರ
ಮತ್ತಗಜವನು ರಥಚಯವ ನು
ಗ್ಗೊತ್ತಿದನು ಹನ್ನೆರಡು ಸಾವಿರವನು ರಣಾಗ್ರದಲಿ
ಹೊತ್ತಿ ತಾತನ ವಿಕ್ರಮಾಗ್ನಿಗೆ
ಹತ್ತು ಲಕ್ಷ ಪದಾತಿ ರಾವ್ತರು
ತೆತ್ತರಸುವನು ಲಕ್ಷ ಕೌರವರಾಯ ಸೇನೆಯಲಿ (ಭೀಷ್ಮ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನ ಸೇನೆಯಲ್ಲಿ ಮತ್ತೆ ಹತ್ತು ಸಾವಿರ ಆನೆಗಳನ್ನೂ, ಹನ್ನೆರಡು ಸಾವಿರ ರಥಗಳನ್ನೂ, ಲಕ್ಷ ರಾವುತರನ್ನೂ, ಹತ್ತು ಲಕ್ಷ ಕಾಲಾಳುಗಳನ್ನೂ ಸಂಹರಿಸಿದನು.

ಅರ್ಥ:
ಮುರಿ: ಸೀಳು; ಸಾವಿರ: ಸಹಸ್ರ; ಮತ್ತ: ಮತ್ತೇರಿದ, ಅಮಲೇರಿದ; ಗಜ: ಆನೆ; ರಥ: ಬಂಡಿ; ಚಯ: ಸಮೂಹ, ರಾಶಿ, ಗುಂಪು; ನುಗ್ಗು: ತಳ್ಳು; ಒತ್ತು: ಮುತ್ತು, ಚುಚ್ಚು; ರಣಾಗ್ರ: ಮುಂಚೂಣಿಯಲ್ಲಿರುವ ಸೈನ್ಯ; ರಣ: ಯುದ್ಧಭೂಮಿ, ರಣರಂಗ; ಹೊತ್ತು: ಹತ್ತಿಕೊಳ್ಳು, ಉರಿ; ತಾತ: ತಂದೆ, ಅಜ್ಜ; ವಿಕ್ರಮ: ಸಾಹಸ; ಅಗ್ನಿ: ಬೆಂಕಿ; ಪದಾತಿ: ಕಾಲಾಳು; ರಾವ್ತರು: ಕುದುರೆ ಸವಾರ, ಅಶ್ವಾರೋಹಿ; ತೆತ್ತು: ತಿರಿಚು, ಸುತ್ತು; ಅಸು: ಪ್ರಾಣ; ಸೇನೆ: ಸೈನ್ಯ;

ಪದವಿಂಗಡಣೆ:
ಮತ್ತೆ +ಮುರಿದನು +ಹತ್ತು +ಸಾವಿರ
ಮತ್ತಗಜವನು +ರಥಚಯವ +ನುಗ್ಗ್
ಒತ್ತಿದನು +ಹನ್ನೆರಡು +ಸಾವಿರವನು +ರಣಾಗ್ರದಲಿ
ಹೊತ್ತಿ +ತಾತನ +ವಿಕ್ರಮಾಗ್ನಿಗೆ
ಹತ್ತು +ಲಕ್ಷ +ಪದಾತಿ +ರಾವ್ತರು
ತೆತ್ತರ್+ಅಸುವನು +ಲಕ್ಷ +ಕೌರವರಾಯ +ಸೇನೆಯಲಿ

ಅಚ್ಚರಿ:
(೧) ಒಟ್ಟು ನಾಶಮಾಡಿದ ಸಂಖ್ಯೆ: ಹನ್ನೊಂದು ಲಕ್ಷದ ೨೨ ಸಾವಿರ

ಪದ್ಯ ೭: ಸುರರ ಸತಿಯರ ಸ್ಥಿತಿ ಹೇಗಾಯಿತು?

ಕೆತ್ತ ಕದ ತೆಗೆಯದು ಸುರೌಘದ
ಹೊತ್ತ ಸರಕಿಳಿಯದ್ದು ಸುಕಲ್ಪಿತ
ಮತ್ತಗಜ ರಥ ವಾಜಿ ತೆಗೆಯವು ಪುರದಬಾಹೆಯಲಿ
ತೆತ್ತು ಹರಿಯದು ಕಾದಿರಣದಲಿ
ಸತ್ತು ಹಿಂಗದು ಸುರರ ಸತಿಯರು
ತೊತ್ತಿರಾದರು ಖಳರ ಮನೆಗಳಿಗೆಂದನಮರೇಂದ್ರ (ಅರಣ್ಯ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ಸ್ವರ್ಗದಲ್ಲಿ ಮನೆಗಳ ಬಾಗಿಲುಗಳನ್ನೇ ತೆಗೆಯುವುದಿಲ್ಲ. ಹೊತ್ತುತಂದ ನಮ್ಮ ಸರಕು ಕೆಳಕಿಳಿಯುವುದಿಲ್ಲ, ನಮ್ಮ ಚತುರಂಗ ಸೈನ್ಯವು ಊರ ಹೊರಗೆ ಕಾವಲು ನಿಂತೇ ಇರುತ್ತದೆ, ಅವರಿಗೆ ಕಪ್ಪ ಕಾಣಿಕೆಯನ್ನು ಎಷ್ಟು ತೆತ್ತರೂ ಕಾಟ ತಪ್ಪುವುದಿಲ್ಲ. ಯುದ್ಧಕ್ಕೆ ಹೋದ ಸೈನ್ಯ ಅಲ್ಲೇ ಸತ್ತು ಬೀಳುವುದೇ ಹೊರತು ಹಿಂದಿರುಗುವುದಿಲ್ಲ. ದೇವತಾಂಗನೆಯರು ಆ ರಾಕ್ಷಸರ ಮನೆಯಲ್ಲಿ ದಾಸಿಗಳಾಗಿದ್ದಾರೆ ಎಂದು ದೇವತೆಗಳ ಸ್ಥಿತಿಯನ್ನು ಇಂದ್ರನು ತಿಳಿಸಿದನು.

ಅರ್ಥ:
ಕೆತ್ತು: ಅದಿರು, ನಡುಗು; ಕದ: ಬಾಗಿಲು; ತೆಗೆ: ಈಚೆಗೆ ತರು, ಹೊರತರು; ಸುರ: ದೇವತೆ; ಔಘ:ಗುಂಪು, ಸಮೂಹ; ಹೊತ್ತು: ಭಾರವನ್ನು ಏರಿಸಿ ತರುವುದು; ಸರಕು: ವಸ್ತು; ಇಳಿ: ಕೆಳಕ್ಕೆ ತರು; ಕಲ್ಪಿತ: ಕಾಲ್ಪನಿಕವಾದ, ಊಹಿಸಿದ; ಮತ್ತ: ಅಮಲು, ಮದ; ಗಜ: ಆನೆ; ರಥ: ಬಂಡಿ ವಾಜಿ: ಕುದುರೆ; ತೆಗೆ: ಹೊರತರು; ಪುರ: ಊರು; ಬಾಹೆ: ಹೊರಗೆ; ತೆತ್ತು: ತಿರಿಚು, ಸುತ್ತು; ಹರಿ: ಕಡಿ, ಕತ್ತರಿಸು; ಕಾದು: ಹೋರಾಡು; ರಣ; ಯುದ್ಧ; ಸತ್ತು: ಮರಣ; ಹಿಂಗು: ಕಡಮೆಯಾಗು; ಸುರ: ದೇವತೆ; ಸತಿ: ಹೆಂಡತಿ; ತೊತ್ತು: ದಾಸಿ; ಖಳ: ದುಷ್ಟ; ಮನೆ: ಆಲಯ; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಕೆತ್ತ +ಕದ +ತೆಗೆಯದು +ಸುರೌಘದ
ಹೊತ್ತ +ಸರಕಿಳಿಯದು+ ಸುಕಲ್ಪಿತ
ಮತ್ತ+ಗಜ+ ರಥ+ ವಾಜಿ +ತೆಗೆಯವು +ಪುರದ+ಬಾಹೆಯಲಿ
ತೆತ್ತು +ಹರಿಯದು +ಕಾದಿ+ರಣದಲಿ
ಸತ್ತು +ಹಿಂಗದು+ ಸುರರ +ಸತಿಯರು
ತೊತ್ತಿರಾದರು+ ಖಳರ +ಮನೆಗಳಿಗ್+ಎಂದನ್+ಅಮರೇಂದ್ರ

ಅಚ್ಚರಿ:
(೧) ದೇವತೆಗಳ ಸ್ಥಿತಿ – ಸುರರ ಸತಿಯರು ತೊತ್ತಿರಾದರು ಖಳರ ಮನೆಗಳಿಗೆಂದನಮರೇಂದ್ರ

ಪದ್ಯ ೧೫: ರಾಜಸೂಯದ ಸಿದ್ಧತೆ ಹೇಗೆ ಆರಂಭವಾಯಿತು?

ಹತ್ತು ಯೋಜನವಳಯದಲಿ ಮಿಗೆ
ಸುತ್ತು ಬೇಲಿಯ ಮಧ್ಯದಲಿ ಹಯ
ಮತ್ತಗಜ ರಥ ಗೋಮಹಿಷಿ ವರ ಸೈರಿಭದ ಚಯಕೆ
ಉತ್ತಮಾಂಗನೆಯರಿಗೆ ಭವನಗ
ಳಿತ್ತ ಬೇರಿರವಾಯ್ತು ನೃಪ ಯಾ
ಗೋತ್ತಮಕೆ ಪರುಠವಿಸಿದರು ಭೂಪಾಲ ಕೇಳೆಂದ (ಸಭಾ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಹತ್ತು ಯೋಜನ ಸುತ್ತಳತೆಯಲ್ಲಿ ಬೇಲಿಯನ್ನು ಕಟ್ಟಿ ಅದರ ನಡುವೆ ಕುದುರೆ, ಆನೆ, ರಥಗಳು, ಹಸುಗಳು, ಎಮ್ಮೆಗಳು, ಮತ್ತು ಕೋಣಗಳನ್ನು ಕಟ್ಟಿದರು. ಸ್ತ್ರೀಯರಿಗೆ ಭವನಗಳನ್ನು ಪ್ರತ್ಯೇಕವಾಗಿ ರಚಿಸಿ ರಾಜಸೂಯಕ್ಕೆ ಸಿದ್ಧತೆ ಮಾಡಿದರು.

ಅರ್ಥ:
ಹತ್ತು: ದಶ; ಯೋಜನ: ಅಳತೆಯ ಪ್ರಮಾಣ; ಮಿಗೆ: ಮತ್ತು; ಸುತ್ತು: ಆವರಿಸು; ಬೇಲಿ: ಆವರಣ, ಸುತ್ತುಗೋಡೆ; ಮಧ್ಯ: ನಡು; ಹಯ: ಕುದುರೆ; ಗಜ: ಆನೆ; ಮತ್ತ:ಸೊಕ್ಕಿದವನು; ರಥ: ಬಂಡಿ; ಗೋ: ಹಸು; ಮಹಿಷಿ: ಎಮ್ಮೆ; ವರ: ಶ್ರೇಷ್ಠ; ಸೈರಿಭ:ಕೋಣ; ಚಯ: ಸಮೂಹ, ರಾಶಿ, ಗುಂಪು; ಉತ್ತಮ: ಶ್ರೇಷ್ಠ; ಅಂಗನೆ: ಸ್ತ್ರೀ; ಭವನ: ಆಲಯ; ಬೇರೆ: ಪ್ರತ್ಯೇಕ; ನೃಪ: ರಾಜ; ಪರುಠವ: ವಿಸ್ತಾರ, ಅಧಿಕ್ಯ; ಭೂಪಾಲ: ರಾಜ;

ಪದವಿಂಗಡಣೆ:
ಹತ್ತು +ಯೋಜನ+ವಳಯದಲಿ +ಮಿಗೆ
ಸುತ್ತು +ಬೇಲಿಯ +ಮಧ್ಯದಲಿ +ಹಯ
ಮತ್ತಗಜ+ ರಥ+ ಗೋ+ಮಹಿಷಿ +ವರ +ಸೈರಿಭದ+ ಚಯಕೆ
ಉತ್ತಮ+ಅಂಗನೆಯರಿಗೆ+ ಭವನಗಳ್
ಇತ್ತ +ಬೇರಿರವ್+ಆಯ್ತು +ನೃಪ+ ಯಾಗ
ಉತ್ತಮಕೆ+ ಪರುಠವಿಸಿದರು +ಭೂಪಾಲ+ ಕೇಳೆಂದ

ಅಚ್ಚರಿ:
(೧) ಯಾಗಗಳಲ್ಲಿ ಶ್ರೇಷ್ಠವಾದ – ಯಾಗೋತ್ತಮ – ರಾಜಸೂಯ
(೨) ಉತ್ತಮ – ೩, ೬ ಸಾಲಿನ ಮೊದಲ ಪದ
(೩) ಹತ್ತು, ಸುತ್ತು – ೧, ೨ ಸಾಲಿನ ಪ್ರಾಸ ಪದ