ಪದ್ಯ ೨೮: ಅಶ್ವತ್ಥಾಮನು ಧೃಷ್ಟದ್ಯುಮ್ನನನ್ನು ಹೇಗೆ ಒದೆದನು?

ತೊಳತೊಗುವಿಕ್ಕೆಲದ ದೀಪದ
ಬೆಳಗಿನಲಿ ಮಣಿರುಚಿಯ ಚಿತ್ರಾ
ವಳಿಯ ಮೇಲ್ಕಟ್ಟಿನಲಿ ಲಲಿತಸ್ತರನ ಮಧ್ಯದಲಿ
ಹೊಳೆಹೊಳೆವ ನವರತ್ನಭೂಷಣ
ಕಳಿತಕಾಯನ ಕಂಡು ರೋಷ
ಪ್ರಳಯ ಭೈರವರೂಪನೊದೆದನು ವಾಮಪಾದದಲಿ (ಗದಾ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನ ಮಂಚದ ಎರಡೂ ಕಡೆ ದೀಪಗಳು ಬೆಳಗುತ್ತಿದ್ದವು. ಮಂಚದ ಮೇಲೆ ಒಳ್ಲೆಯ ಹಾಸು, ಚಿತ್ರಾವಳಿಯ ಮೇಲ್ಕಟ್ಟು, ನವರತ್ನ ಭೂಷಣಗಳನ್ನು ಧರಿಸಿ ಮಲಗಿದ್ದ ಧೃಷ್ಟದ್ಯುಮ್ನನನ್ನು ಕಂಡು ಪ್ರಳಯಕಾಲದ ಭೈರವನಂತಿದ್ದ ಅಶ್ವತ್ಥಾಮನು ಎಡಗಾಲಿನಿಂದ ಒದೆದನು.

ಅರ್ಥ:
ತೊಳಗು: ಕಾಂತಿ, ಪ್ರಕಾಶ; ಇಕ್ಕೆಲ: ಎರಡೂ ಕಡೆ; ದೀಪ: ಹಣತೆ; ಬೆಳಗು: ಪ್ರಕಾಶ; ಮಣಿ: ಬೆಲೆಬಾಳುವ ರತ್ನ; ಮಣಿರುಚಿ: ಮಣಿಗಳಿಂದ ಅಲಂಕೃತವಾದ; ಚಿತ್ರಾವಳಿ: ಪಟಗಳ ಸಾಲು; ಲಲಿತ: ಚೆಲುವು; ಸ್ತರ: ಪದರ, ವಿಭಾಗ; ಮಧ್ಯ: ನಡುವೆ; ಹೊಳೆ: ಪ್ರಕಾಶ; ನವ: ಒಂಬತ್ತು; ರತ್ನ: ಬೆಲೆಬಾಳುವ ಹರಳು; ಭೂಷಣ: ಅಲಂಕರಿಸುವುದು; ಕಳಿತ: ಪೂರ್ಣ ಹಣ್ಣಾದ; ಕಾಯ: ದೇಹ; ಕಂಡು: ನೋಡು; ರೋಷ: ಕೋಪ; ಪ್ರಳಯ: ನಾಶ, ಹಾಳು; ಭೈರವ: ಶಿವನ ಸ್ವರೂಪ; ರೂಪ: ಆಕಾರ; ಒದೆ: ತಳ್ಳು, ಕಾಲಿನಿಂದ ಹೊಡೆ; ವಾಮ: ಎಡ; ಪಾದ: ಚರಣ;

ಪದವಿಂಗಡಣೆ:
ತೊಳತೊಗುವ್+ಇಕ್ಕೆಲದ+ ದೀಪದ
ಬೆಳಗಿನಲಿ +ಮಣಿರುಚಿಯ +ಚಿತ್ರಾ
ವಳಿಯ +ಮೇಲ್ಕಟ್ಟಿನಲಿ +ಲಲಿತ+ಸ್ತರನ +ಮಧ್ಯದಲಿ
ಹೊಳೆಹೊಳೆವ +ನವರತ್ನ+ಭೂಷಣ
ಕಳಿತಕಾಯನ +ಕಂಡು +ರೋಷ
ಪ್ರಳಯ +ಭೈರವರೂಪನ್+ಒದೆದನು +ವಾಮ+ಪಾದದಲಿ

ಅಚ್ಚರಿ:
(೧) ಅಶ್ವತ್ಥಾಮನು ಒದೆದ ಪರಿ – ರೋಷ ಪ್ರಳಯ ಭೈರವರೂಪನೊದೆದನು ವಾಮಪಾದದಲಿ
(೨) ತೊಳಗು, ಹೊಳೆ – ಸಾಮ್ಯಾರ್ಥ ಪದಗಳು
(೩) ಧೃಷ್ಟದ್ಯುಮ್ನನನ್ನು ಕಳಿತಕಾಯ ಎಂದು ಕರೆದುದು
(೪) ತೊಳತೊಳಗು, ಹೊಳೆಹೊಳೆವ – ಪದಗಳ ಬಳಕೆ

ಪದ್ಯ ೯: ಅರ್ಜುನನನ್ನು ಕೆರಳಿಸಿದ್ದು ಯಾವುದಕ್ಕೆ ಸಮಾನ?

ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ (ಗದಾ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಕುರುಸೇನೆಯವರು ಅರ್ಜುನನನ್ನು ಕೆರಳಿಸಿದ್ದು, ಕಾಲರುದ್ರನೊಡನೆ ಸರಸವಾಡಿದಂತೆ, ಪ್ರಚಂಡ ಪ್ರಳಯಭೈರವನನ್ನು ಪರಿಹಾಸಮಾಡಿದಂತೆ, ಪ್ರಳಯಕಾಲದ ಯಮನನ್ನು ಮೂದಲಿಸಿ ಕರೆದಂತೆ ಆಯಿತು. ಆಗ ಅರ್ಜುನನ ಬಾಣ ಪ್ರಯೋಗದ ರೀತಿಯನ್ನು ವರ್ಣಿಸಲು ನನಗಾಗದು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಕೆರಳಿಸು: ಪ್ರಚೋದಿಸು; ಕಾಲರುದ್ರ: ಪ್ರಳಯ ಕಾಲದ ಶಿವ; ಸರಸ: ಚೆಲ್ಲಾಟ, ವಿನೋದ; ಪ್ರಚಂಡ: ಭಯಂಕರವಾದುದು; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಭೈರವ: ಶಿವನ ಒಂದು ಅವತಾರ; ಪರಿಭವ: ಅನಾದರ, ತಿರಸ್ಕಾರ; ಲಯ: ನಾಶ; ಕೃತಾಂತ: ಯಮ; ಕರೆ: ಬರೆಮಾಡು; ಮೂದಲಿಸು: ಹಂಗಿಸು; ಅರಿ: ತಿಳಿ; ಎಸು: ಬಾಣ ಪ್ರಯೋಗ ಮಾಡು; ಅಭಿವರ್ಣನೆ: ವಿಶೇಷ ವರ್ಣನೆ; ನಿರ್ಣಯ: ನಿರ್ಧಾರ;

ಪದವಿಂಗಡಣೆ:
ಅರಸ +ಕೇಳೈ +ಬಳಿಕ +ಪಾರ್ಥನ
ಕೆರಳಿಚಿದರೋ +ಕಾಲರುದ್ರನ
ಸರಸವಾಡಿದರೋ +ಪ್ರಚಂಡ+ಪ್ರಳಯ+ಭೈರವನ
ಪರಿಭವಿಸಿದರೊ +ಲಯ+ಕೃತಾಂತನ
ಕರೆದರೋ +ಮೂದಲಿಸಿ+ ನಾವಿನ್ನ್
ಅರಿಯೆವ್+ಅರ್ಜುನನ್+ಎಸುಗೆ+ಅಭಿವರ್ಣನೆಯ +ನಿರ್ಣಯವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲರುದ್ರನಸರಸವಾಡಿದರೋ, ಪ್ರಚಂಡಪ್ರಳಯಭೈರವನ ಪರಿಭವಿಸಿದರೊ, ಲಯಕೃತಾಂತನಕರೆದರೋ
(೨) ಪದದ ರಚನೆ – ನಾವಿನ್ನರಿಯೆವರ್ಜುನನೆಸುಗೆಯಭಿವರ್ಣನೆಯ

ಪದ್ಯ ೮: ಘಟೋತ್ಕಚನು ಸೈನ್ಯವನ್ನು ಹೇಗೆ ನಾಶ ಮಾಡಿದನು?

ಮಾಯದಲಿ ಹುಲಿಯಾಗಿ ಗರ್ಜಿಸಿ
ಹಾಯಿದನು ಕಲಿಸಿಂಹವಾಗಿ ಗ
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ
ಬಾಯಲಡಸಿದನಹಿತರನು ದಂ
ಡಾಯುಧದ ನಿಲವಿನಲಿ ಸುಭಟರ
ದಾಯಗೆಡಿಸಿದನೊಂದು ನಿಮಿಷದೊಳೊರಸಿದನು ಬಲವ (ದ್ರೋಣ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ಘಟೋತ್ಕಚನು ಮಾಯೆಯಿಂದ ಹುಲಿಯಾಗಿ ಗರ್ಜಿಸಿ, ಸಿಂಹನಾಗಿ ಸೈನ್ಯದ ಮೇಲೆ ಬಿದ್ದು, ಭೈರವರೂಪದಿಂದ ಗದೆಯಿಂದಪ್ಪಳಿಸಿ, ಬಾಯಲ್ಲಿ ಕೆಲವರನ್ನು ನುಂಗಿ, ದಂಡಾಯುಧದಂತೆ ನಿಂತು ಒಂದು ನಿಮಿಷ ಮಾತ್ರದಲ್ಲಿ ಶತ್ರುಗಳನ್ನು ಕೊಂದನು.

ಅರ್ಥ:
ಮಾಯ: ಇಂದ್ರಜಾಲ; ಹುಲಿ: ವ್ಯಾಘ್ರ; ಗರ್ಜಿಸು: ಆರ್ಭಟಿಸು; ಹಾಯಿ: ಹೊಡೆ; ಕಲಿ: ಶೂರ; ಸಿಂಹ: ಕೇಸರಿ; ಗದೆ: ಮುದ್ಗರ; ಅಪ್ಪಳಿಸು: ತಟ್ಟು, ತಾಗು; ಭೈರವ: ಶಿವನ ರೂಪ; ರೂಪ: ಆಕಾರ; ಅಡಸು: ಬಿಗಿಯಾಗಿ ಒತ್ತು; ಅಹಿತ: ವೈರಿ; ದಂಡ: ಕೋಲು, ದಡಿ; ಆಯುಧ; ಶಸ್ತ್ರ; ನಿಲವು: ನಿಲ್ಲು; ಸುಭಟ: ಸೈನಿಕ; ಕೆಡಿಸು: ಹಾಳುಮಾಡು; ಆಯ: ಉದ್ದೇಶ; ನಿಮಿಷ: ಕಾಲದ ಪ್ರಮಾಣ; ಒರಸು: ನಾಶ; ಬಲ: ಸೈನ್ಯ;

ಪದವಿಂಗಡಣೆ:
ಮಾಯದಲಿ +ಹುಲಿಯಾಗಿ +ಗರ್ಜಿಸಿ
ಹಾಯಿದನು +ಕಲಿ+ಸಿಂಹವಾಗಿ +ಗ
ದಾಯುಧದಲ್+ಅಪ್ಪಳಿಸಿದನು +ಭೈರವನ +ರೂಪಾಗಿ
ಬಾಯಲ್+ಅಡಸಿದನ್+ಅಹಿತರನು +ದಂ
ಡಾಯುಧದ +ನಿಲವಿನಲಿ +ಸುಭಟರದ್
ಆಯಗೆಡಿಸಿದನ್+ಒಂದು+ನಿಮಿಷದೊಳ್+ಒರಸಿದನು +ಬಲವ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಬಾಯಲಡಸಿದನಹಿತರನು, ಸುಭಟರದಾಯಗೆಡಿಸಿದನೊಂದು

ಪದ್ಯ ೪೫: ಭೀಮನನ್ನು ಯಾರು ಕೆಣಕಿದರು?

ಪವನಜನ ಬಡಿಹೋರಿ ಹೋದನೆ
ರವಿ ಸುತನು ಹೋಗಲಿ ವೃಕೋದರ
ನವಯವವ ಕೇಣಿಯನು ಕೊಟ್ಟೆವು ಬಾಣತತಿಗೆನುತ
ತವ ಕುಮಾರರು ಮತ್ತೆ ಬಹಳಾ
ಹವವ ಹೊಕ್ಕರು ಹಕ್ಕಲಾದವ
ರವಗಡಿಸಿ ಕೆಣಕಿದರು ರಿಪುಕಲ್ಪಾಂತ ಭೈರವನ (ದ್ರೋಣ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಕರ್ಣನು ಹಿಮ್ಮೆಟ್ಟಲು, ನಿನ್ನ ಮಕ್ಕಳು, ಭೀಮನ ಬಡಿಹೋರಿಯಾದ ಕರ್ಣನು ಹೋದನೇ? ಹೋಗಲಿ, ನಮ್ಮ ಬಾಣಗಳಿಗೆ ಭೀಮನ ದೇಹವನ್ನು ಕೇಣಿ ಕೊಟ್ಟಿದ್ದೇವೆ, ಎಂದು ಅಬ್ಬರಿಸುತ್ತಾ ಅತ್ತಿತ್ತ ಹೋದವರೆಲ್ಲಾ ಸೇರಿ ಶತ್ರುಗಳ ಕಲ್ಪಾಂತ ಭೈರವನಾದ ಭೀಮನನ್ನು ಕೆಣಕಿದರು.

ಅರ್ಥ:
ಪವನಜ: ಭೀಮ; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವನು; ಹೋಗು: ತೆರಳು; ರವಿ: ಭಾನು; ಸುತ: ಪುತ್ರ; ಹೋಗು: ತೆರಳು; ವೃಕೋದರ: ಭೀಮ; ಅವಯವ: ಮೂಳೆ; ಕೇಣಿ: ಮೈತ್ರಿ, ಗೆಳೆತನ; ಕೊಡು: ನೀಡು; ಬಾಣ: ಅಂಬು; ತತಿ: ಗುಂಪು; ಕುಮಾರ: ಪುತ್ರ; ಬಹಳ: ತುಂಬ; ಆಹವ: ಯುದ್ಧ; ಹೊಕ್ಕು: ಸೇರು; ಅವಗಡಿಸು: ಕಡೆಗಣಿಸು; ಕೆಣಕು: ರೇಗಿಸು; ರಿಪು: ವೈರಿ; ಕಲ್ಪಾಂತ: ಪ್ರಳಯ; ಭೈರವ: ಶಿವನ ಒಂದು ಅವತಾರ;

ಪದವಿಂಗಡಣೆ:
ಪವನಜನ +ಬಡಿಹೋರಿ +ಹೋದನೆ
ರವಿ +ಸುತನು +ಹೋಗಲಿ +ವೃಕೋದರನ್
ಅವಯವವ +ಕೇಣಿಯನು +ಕೊಟ್ಟೆವು +ಬಾಣ+ತತಿಗೆನುತ
ತವ +ಕುಮಾರರು +ಮತ್ತೆ +ಬಹಳ
ಆಹವವ +ಹೊಕ್ಕರು +ಹಕ್ಕಲಾದವರ್
ಅವಗಡಿಸಿ +ಕೆಣಕಿದರು+ ರಿಪು+ಕಲ್ಪಾಂತ +ಭೈರವನ

ಅಚ್ಚರಿ:
(೧) ಪವನಜ, ವೃಕೋದರ, ಕಲ್ಪಾಂತ ಭೈರವ – ಭೀಮನನ್ನು ಕರೆದ ಪರಿ

ಪದ್ಯ ೧೫: ಅರ್ಜುನನ ಮುಂದೆ ಯಾರ ಬಿರುದುಗಳನ್ನು ಹೇಳಿದರು?

ಉದಯವಾಗುವ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ (ದ್ರೋಣ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯೋದಯವಾಗುವ ಮೊದಲೇ ತ್ರಿಗರ್ತರು ಗುಂಪಾಗಿ ತಮ್ಮೊಡನೆ ಕಾಳಗಕ್ಕೆ ಬರಬೇಕೆಂದು ಮದೋನ್ಮತ್ತ ಶತ್ರುಭಟ ಭೈರವನಾದ ಅರ್ಜುನನಿಗೆ ದೂತರೊಡನೆ ಹೇಳಿಕಳುಹಿಸಿದರು. ಅವರು ಬಂದು ಅರ್ಜುನನ ಮುಂದೆ ಸಂಶಪ್ತಕರ ಬಿರುದುಗಳನ್ನು ಉದ್ಘೋಷಿಸಿದರು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ:ರಣರಂಗ; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಕದನ: ಯುದ್ಧ; ಅಳವಿ: ಯುದ್ಧ; ಕೊಡು: ನೀಡು; ಬೇಗ: ಶೀಘ್ರ; ಮದ:ಅಹಂಕಾರ; ಅರಿ: ವೈರಿ; ಭಟ: ಸೈನಿಕ; ಭೈರವ: ಶಿವನ ರೂಪ; ಅಟ್ಟು: ಹಿಂಬಾಲಿಸು; ಭಟ್ಟ: ಪರಾಕ್ರಮಿ; ಬಂದು: ಆಗಮಿಸು; ಒದರು: ಹೇಳು; ಬಿರುದು: ಗೌರವಸೂಚಕ ಪದ;

ಪದವಿಂಗಡಣೆ:
ಉದಯವಾಗುವ +ಮುನ್ನ +ಕಳನೊಳು
ಹೊದರು+ಕಟ್ಟಿದರ್+ಈ+ ತ್ರಿಗರ್ತರು
ಕದನಕ್+ಎಮ್ಮೊಳಗ್+ಅಳವಿ+ಕೊಡುವುದು +ಬೇಗ +ಬಹುದೆಂದು
ಮದವದ್+ಅರಿಭಟ+ ಭೈರವಂಗ್
ಅಟ್ಟಿದರು +ಭಟ್ಟರನ್+ಅವರು +ಬಂದ್+ಒದ
ರಿದರು +ಪಾರ್ಥನ +ಮುಂದೆ+ ಸಮಸಪ್ತಕರ +ಬಿರುದುಗಳ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಅರಿಭಟ ಭೈರವ

ಪದ್ಯ ೧೬: ಕೌರವರ ಕೇಣಿಕಾರನಾರು?

ಇತ್ತಲಿದು ಕಲ್ಪಾಂತರುದ್ರನ
ಮೊತ್ತ ಕಾಳೋರಗನ ಜಂಗುಳಿ
ಮೃತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ
ತೆತ್ತಿಗರ ದಾವಣಿಯೊಳಣ್ಣನ
ಮತ್ತವಾರಣ ಭೀಮಸೇನನ
ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು (ಭೀಷ್ಮ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ದುರ್ಯೋಧನ, ಈ ಕಡೆಯ ಸೈನ್ಯವನ್ನು ನೋಡು, ಅದು ಪ್ರಳಯರುದ್ರರ ಮೊತ್ತ, ಕಪ್ಪು ನಾಗರಗಳ ಗುಂಪು, ಮೃತ್ಯುವಿನ ಸೈನ್ಯ, ಯಮನ ಪರಿವಾರ, ಭೈರವನ ಆಳುಗಳ ಗುಂಪು, ಆ ಸೈನ್ಯದ ನಡುವೆ ಅಣ್ಣನಾದ ಧರ್ಮಜನ ಮದದಾನೆಯಾದ ಭೀಮಸೇನನಿದ್ದಾನೆ, ಅವನು ಕೌರವರ ಸಂಹಾರಕ್ಕೆ ಗುತ್ತಿಗೆಯನ್ನು ಪಡೆದಿದ್ದಾನೆ ಎಂದು ಭೀಷ್ಮರು ವಿವರಿಸಿದರು.

ಅರ್ಥ:
ಕಲ್ಪಾಂತ: ಯುಗದ ಅಂತ್ಯಕಾಲ; ರುದ್ರ: ಶಿವ; ಮೊತ್ತ: ರಾಶಿ, ಒಟ್ಟಲು; ಕಾಳೋರಗ: ಕಪ್ಪುನಾಗರ ಹಾವು; ಜಂಗುಳಿ: ಗುಂಪು; ಮೃತ್ಯು: ಸಾವು; ಮೋಹರ: ಸೈನ್ಯ; ಕೃತಾಂತ: ಯಮ; ಥಟ್ಟು: ಪಕ್ಕ, ಕಡೆ; ಭೈರವ: ಶಿವನ ಅವತಾರ; ತೆತ್ತು: ಹೊಂದಿಕೊಂಡಿರು; ದಾವಣಿ: ಕಟ್ಟು, ಬಂಧನ; ಅಣ್ಣ: ಸಹೋದರ; ವಾರಣ: ಆನೆ; ಕೇಣಿಕಾರ: ಗುತ್ತಿಗೆದಾರ; ಮತ್ತ: ಮದ;

ಪದವಿಂಗಡಣೆ:
ಇತ್ತಲಿದು +ಕಲ್ಪಾಂತ+ರುದ್ರನ
ಮೊತ್ತ +ಕಾಳ್+ಉರಗನ+ ಜಂಗುಳಿ
ಮೃತ್ಯುವಿನ +ಮೋಹರ +ಕೃತಾಂತನ +ಥಟ್ಟು +ಭೈರವನ
ತೆತ್ತಿಗರ+ ದಾವಣಿಯೊಳ್+ಅಣ್ಣನ
ಮತ್ತ+ವಾರಣ+ ಭೀಮಸೇನನನ್
ಇತ್ತ +ನೋಡೈ +ಮಗನೆ +ಕುರುಕುಲ +ಕೇಣಿಕಾರನನು

ಅಚ್ಚರಿ:
(೧) ಭೀಮನನ್ನು ವಿವರಿಸುವ ಪರಿ – ಕಲ್ಪಾಂತರುದ್ರನ ಮೊತ್ತ ಕಾಳೋರಗನ ಜಂಗುಳಿ ಮೃತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ ತೆತ್ತಿಗರ ದಾವಣಿಯೊಳಣ್ಣನ ಮತ್ತವಾರಣ ಭೀಮಸೇನ

ಪದ್ಯ ೬೯: ಅರ್ಜುನನನ್ನು ಹೇಗೆ ಮೂದಲಿಸಿದನು?

ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಪೋರೆಯೊಳವಗಡಿಸಿ ಹೊಂ
ದೇರ ದೂವಾಳಿಸುತ ಮೂದಲಿಸಿದನು ಫಲುಗುಣನ (ವಿರಾಟ ಪರ್ವ, ೯ ಸಂಧಿ, ೬೯ ಪದ್ಯ)

ತಾತ್ಪರ್ಯ:
ವೀರರಾದವರು ಶತ್ರುವನ್ನು ಎದುರಿಸುವ ಹೊತ್ತಿನಲ್ಲಿ ವೀರರಂತೆ ಕಂಡರೂ ಪರಾಕ್ರಮರಹಿತರಾದರು. ಇವರು ವೀರರೆನಿಸಿಕೊಂಡರಷ್ಟೇ! ಪರಾಕ್ರಮವನ್ನು ಮೆರೆಯಲಿಲ್ಲ ಅಲ್ಲದೆ ಭೈರವನ ಸಾರೂಪ್ಯ ಹೋಂದಿದರು. ಭಲೇ ಎನ್ನುತ್ತಾ ಕರ್ಣಾದಿಗಳನ್ನು ಕೊಂಕುಮಾತಿನಿಂದ ಆಕ್ಷೇಪಿಸಿ, ಹೊನ್ನಿನ ರಥದಲ್ಲಿ ಕುಳಿತು ಅರ್ಜುನನ ಬಳಿಗೆ ಹೋಗಿ ಮೂದಲಿಸಿದನು.

ಅರ್ಥ:
ವೀರ: ಶೂರ; ಇದಿರು: ಎದುರು; ಹೊತ್ತು: ಉಂಟಾಗು, ತಳಹಿಡಿ; ರಣ: ಯುದ್ಧ; ಮರಳಿ: ಮತ್ತೆ; ತೆಗೆ: ಹೊರತರು; ಭೈರವ: ಶಿವನ ಅವತಾರ; ಸಾರೂಪ್ಯ: ಸಮಾನ ರೂಪತ್ವ, ತಾದ್ರೂಪ್ಯ; ಪೂತು: ಹೊಗಳುವ ನುಡಿ; ಮಝ: ಭಲೆ; ಆದಿ: ಮುಂತಾದ; ನುಡಿ: ಮಾತು; ಓರೆ:ವಕ್ರ, ಡೊಂಕು; ಅವಗಡಿಸು: ಕಡೆಗಣಿಸು; ಹೊಂದೇರು: ಚಿನ್ನರ ತೇರು; ದೂವಾಳಿ: ವೇಗವಾಗಿ ಓಡು; ಮೂದಲಿಸು: ಹಂಗಿಸು;

ಪದವಿಂಗಡಣೆ:
ವೀರರ್+ಇದಿರಹ +ಹೊತ್ತು +ರಣ+ ಮೈ
ಲಾರರಾದರು +ಮರಳಿ +ತೆಗೆವುತ
ಭೈರವನ +ಸಾರೂಪ್ಯವಾದರು+ ಪೂತು+ ಮಝರೆನುತ
ಕೌರವನು +ಕರ್ಣಾದಿಗಳ+ ನುಡಿ
ಓರೆ +ಪೋರೆಯೊಳ್+ಅವಗಡಿಸಿ+ ಹೊಂ
ದೇರ +ದೂವಾಳಿಸುತ +ಮೂದಲಿಸಿದನು +ಫಲುಗುಣನ

ಅಚ್ಚರಿ:
(೧) ಓರೆ, ಪೋರೆ – ಪ್ರಾಸ ಪದಗಳು

ಪದ್ಯ ೫೭: ಅಶ್ವತ್ಥಾಮನ ರಥವು ಹೇಗಿತ್ತು?

ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾದನೀತನು
ಶಿವನ ನೊಸಲಂದದಲಿ ಮೆರೆವವ
ನಿವನು ಜಿತ ಸಂಗ್ರಾಮನಶ್ವತ್ಥಾಮ ನೋಡೆಂದ (ವಿರಾಟ ಪರ್ವ, ೭ ಸಂಧಿ, ೫೭ ಪದ್ಯ)

ತಾತ್ಪರ್ಯ:
ನವರತ್ನಗಳ ಕುಚ್ಚು ಕಟ್ಟಿದ ರಥ, ಸಿಂಹಧ್ವಜ, ಅತಿ ವೇಗವಾಗಿ ಓಡುವ ಕುದುರೆಗಳು, ಭಯಂಕರ ಆಯುಧಗಳನ್ನು ಹೊಂದಿದವನು, ಯುದ್ಧದಲ್ಲಿ ಯಾವಾಗಲೂ ಗೆಲ್ಲುವ, ಶಿವನ ಹಣೆಗಣ್ಣಿನಂತೆ ಭಯಂಕರನಾಗಿರುವವನಾದ ಅಶ್ವತ್ಥಾಮನನ್ನು ನೋಡು ಎಂದು ಉತ್ತರನಿಗೆ ತೋರಿಸಿದನು.

ಅರ್ಥ:
ನವ: ಒಂಬತ್ತು; ರತುನ: ರತ್ನ, ಬೆಲೆಬಾಳುವ ಮಣಿ; ಕೇವಣ: ಕೂಡಿಸುವುದು, ಕೆಚ್ಚುವುದು; ರಥ: ಬಂಡಿ; ಜವ: ವೇಗ; ತೇಜಿ: ಕುದುರೆ; ತೆಕ್ಕೆ: ಅಪ್ಪುಗೆ, ಆಲಿಂಗನ; ರೌರವ: ಭಯಂಕರವಾದ; ರೌದ್ರಾಯುಧ: ಭಯಂಕರವಾದ ಆಯುಧ; ಗಡಣ: ಗುಂಪು, ಸಮೂಹ; ಹರಿ: ಸಿಂಹ; ಹಳವಿಗೆ: ಬಾವುಟ; ಬವರ: ಕಾಳಗ, ಯುದ್ಧ; ಭೈರವ: ಶಿವನ ಒಂದು ಅವತಾರ; ಶಿವ: ಶಂಕರ; ನೊಸಲು: ಹಣೆ; ಅಂದ: ಚೆಲುವು; ಮೆರೆ: ಪ್ರಕಾಶಿಸು; ಜಿತ: ಗೆದ್ದದ್ದು; ಸಂಗ್ರಾಮ: ಯುದ್ಧ; ನೋಡು: ವೀಕ್ಷಿಸು;

ಪದವಿಂಗಡಣೆ:
ನವರತುನ+ ಕೇವಣದ +ರಥವ್+ಅತಿ
ಜವದ +ತೇಜಿಯ +ತೆಕ್ಕೆಗಳ+ ರೌ
ರವದ+ ರೌದ್ರಾಯುಧದ +ಗಡಣದ +ಹರಿಯ +ಹಳವಿಗೆಯ
ಬವರ+ ಭೈರವನಾದನ್+ಈತನು
ಶಿವನ +ನೊಸಲಂದದಲಿ+ ಮೆರೆವವನ್
ಇವನು +ಜಿತ +ಸಂಗ್ರಾಮನ್+ಅಶ್ವತ್ಥಾಮ +ನೋಡೆಂದ

ಅಚ್ಚರಿ:
(೧) ಉಪಮಾನ – ಬವರ ಭೈರವನಾದನೀತನು ಶಿವನ ನೊಸಲಂದದಲಿ ಮೆರೆವವನಿವನು

ಪದ್ಯ ೨೯: ಎಂತಹ ರಾಕ್ಷಸರು ಯುದ್ಧಕ್ಕೆ ಬಂದರು?

ನೆರೆದರಸುರರು ಕಾಳಕೂಟದ
ಕರುವಿನೆರಕವೊ ಸಿಡಿಲದಳ್ಳುರಿ
ತಿರುಳ ದಡ್ಡಿಯೊ ಪ್ರಳಯ ಭೈರವನುಬ್ಬಟೆಯ ಪಡೆಯೊ
ಹರನ ನಯನಜ್ವಾಲೆಯವದಿರ
ಗರುಡಿಯೋ ಗಾಢಾಯ್ಲ ತೇಜದ
ದುರುಳದಾನವ ಭಟರು ಬಂದರು ಕೋಟಿ ಸಂಖ್ಯೆಯಲಿ (ಅರಣ್ಯ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕಾಳಕೂಟ ವಿಷದ ಮರಿಯ ಎರಕವೋ, ಸಿಡಿಲಿನ ದಳ್ಳುರಿಯ ತಿರುಳಿನ ಕವಾಟವೋ, ಪ್ರಳಯ ಕಾಲದ ಭೈರವನ ಮೀಸಲು ಪಡೆಯೋ, ಶಿವನ ಉರಿಗಣ್ಣಿನ ಜ್ವಾಲೆಯ ಗರುಡಿಯಾಳುಗಳೋ ಎನ್ನುವಂತಹ ದುಷ್ಟರಕ್ಕಸರು ಅಸಂಖ್ಯಾತರಾಗಿ ಬಂದರು.

ಅರ್ಥ:
ನೆರೆ: ಗುಂಪು; ಅಸುರ: ದಾನವ; ಕಾಳಕೂಟ: ವಿಷದ; ಕರು: ಚಿಕ್ಕ ಮರಿ; ಎರಕ: ಸುರಿ, ತುಂಬು, ಸ್ನೇಹ; ಸಿಡಿಲು: ಅಶನಿ, ಆರ್ಭಟಿಸು; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ತಿರುಳು: ಸಾರ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಉಬ್ಬಟೆ: ಅತಿಶಯ, ಹಿರಿಮೆ; ಪಡೆ: ಗುಂಪು; ಹರ: ಶಿವ; ನಯನ: ಕಣ್ಣು; ಜ್ವಾಲೆ: ಬೆಂಕಿ; ಅವದಿರು: ಅವರು; ಗರುಡಿ: ವ್ಯಾಯಾಮಶಾಲೆ; ಗಾಢಾಯ್ಲ: ದಟ್ಟವಾದ; ತೇಜ: ಕಾಂತಿ, ಪ್ರಕಾಶ; ದುರುಳ: ದುಷ್ಟ; ದಾನವ: ರಾಕ್ಷಸ; ಭಟ: ಸೈನಿಕರು; ಬಂದರು: ಆಗಮಿಸು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ನೆರೆದರ್+ಅಸುರರು +ಕಾಳಕೂಟದ
ಕರುವಿನ್+ಎರಕವೊ +ಸಿಡಿಲ+ದಳ್ಳುರಿ
ತಿರುಳ +ದಡ್ಡಿಯೊ +ಪ್ರಳಯ +ಭೈರವನ್+ಉಬ್ಬಟೆಯ +ಪಡೆಯೊ
ಹರನ +ನಯನ+ಜ್ವಾಲೆ+ಅವದಿರ
ಗರುಡಿಯೋ+ ಗಾಢಾಯ್ಲ +ತೇಜದ
ದುರುಳ+ದಾನವ +ಭಟರು +ಬಂದರು+ ಕೋಟಿ +ಸಂಖ್ಯೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ: ನೆರೆದರಸುರರು ಕಾಳಕೂಟದ ಕರುವಿನೆರಕವೊ, ಸಿಡಿಲದಳ್ಳುರಿ
ತಿರುಳ ದಡ್ಡಿಯೊ, ಪ್ರಳಯ ಭೈರವನುಬ್ಬಟೆಯ ಪಡೆಯೊ, ಹರನ ನಯನಜ್ವಾಲೆಯವದಿರ
ಗರುಡಿಯೋ

ಪದ್ಯ ೧೪: ಭೀಮನು ಯಾರ ರೂಪವಾಗಿ ಶಲ್ಯನಿಗೆ ಕಂಡನು?

ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೊ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಲವಿದೇನೆಂದ (ಕರ್ಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನ ಇಂಗಿತವನ್ನು ಅವನು ಮನಸ್ಸಿನಲ್ಲಿ ಏನನ್ನು ದೃಢೀಕರಿಸಿ ಬರುತ್ತಿರುವ ರೀತಿಯನ್ನು ಶಲ್ಯ ಗಮನಿಸಿ ಕರ್ಣನನ್ನು ನೋಡಿ, ಭೀಮನನ್ನು ನೋಡೆಂದು ಸನ್ನೆ ಮಾಡಿ, ಇವನಾರೆಂದು ಬಲ್ಲೆಯ ಕರ್ಣ ಎಂದು ಕೇಳಿದ. ಇವನು ಭೀಮನೋ, ಭೈರವನೋ, ಶಿವನೋ, ನರಸಿಂಹನೋ, ಕಾಲಾಂತಕನೋ ತಿಳಿಯದಗಿದೆ ಇದೆಂತಹ ಕೋಲಾಹಲ ಎಂದನು.

ಅರ್ಥ:
ಪವನ: ಗಾಳಿ, ವಾಯು; ಸುತ: ಮಗ; ಪವನಸುತ: ವಾಯುವಿನ ಮಗ (ಭೀಮ); ಮನ: ಮನಸ್ಸು; ಅಂಘವಣೆ: ರೀತಿ, ಬಯಕೆ, ಉದ್ದೇಶ; ಮಾದ್ರೇಶ: ಮದ್ರ ದೇಶದ ಒಡೆಯ (ಶಲ್ಯ); ಕಂಡು: ನೋಡು; ರವಿಸುತ: ಕರ್ಣ; ಮುಖ: ಆನನ, ವಕ್ತ್ರ; ಮುರಿ: ಸೀಳು; ತೋರು: ಪ್ರದರ್ಶಿಸು; ಬಲ್ಲೈ: ತಿಳಿದು; ಭೈರವ: ಶಿವನ ಅವತಾರ; ಭರ್ಗ: ಶಿವ; ಮನುಜ: ನರ; ಕಂಠೀರವ: ಸಿಂಹ; ಕಾಲ: ಸಮಯ; ಅಂತಕ: ಯಮ; ಕೋಲಾಹಲ:ಗದ್ದಲ, ಅವಾಂತರ;

ಪದವಿಂಗಡಣೆ:
ಪವನಸುತನ್+ಇಂಗಿತವ +ಮನದ್
ಅಂಘವಣೆಯನು +ಮಾದ್ರೇಶ +ಕಂಡನು
ರವಿಸುತನ +ನೋಡಿದನು +ಮುಖದಲಿ +ಮುರಿದು +ತೋರಿದನು
ಇವನ+ ಬಲ್ಲೈ +ಭೀಮನೋ +ಭೈ
ರವನೊ+ ಭರ್ಗನೊ +ಮನುಜ +ಕಂಠೀ
ರವನೊ +ಕಾಲಾಂತಕನೊ +ಕೋಳಾಹಲವ್+ಇದೇನೆಂದ

ಅಚ್ಚರಿ:
(೧) ಭೀಮನು ಕಂಡ ಪರಿ – ಭರ್ಗ, ಮನುಜಕಂಠೀರವ, ಕಾಲಾಂತಕ, ಭೈರವ
(೨) ನರಸಿಂಹನನ್ನು ಮನುಜಕಂಠೀರವ ಎಂದು ಕರೆದಿರುವುದು