ಪದ್ಯ ೨೧: ಅರ್ಜುನ ಭೀಷ್ಮರ ಯುದ್ಧವು ಹೇಗೆ ನಡೆಯಿತು?

ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ (ಭೀಷ್ಮ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನ ಹೊಡೆತಗಳಿಂದ ನೊಂದ ಅರ್ಜುನನು ಸೈರಿಸಿಕೊಂಡು ಶಿವನೇ ಭಲೇ ಎನ್ನುತ್ತಿರಲು ಭೀಷ್ಮನ ಮೇಲೆ ಬಾಣಪ್ರಯೋಗ ಮಾಡಿದನು. ಅರ್ಜುನನೆದುರು ನಿಲ್ಲಲಾರದೆ ಭೀಷ್ಮನು ಮೆಲ್ಲನೆ ಸುಧಾರಿಸಿಕೊಡು ಪಕ್ಕಕ್ಕೆ ಸರಿದು, ಸಿಟ್ಟಿನಿಂದ ಮತ್ತೆ ಮತ್ತೆ ಅರ್ಜುನನನ್ನು ಘಾತಿಸಲಾರಂಭಿಸಿದನು.

ಅರ್ಥ:
ನೊಂದು: ನೋವುಂಡು; ಸೈರಿಸು: ತಾಳು, ಸಹಿಸು; ಸರಳು: ಬಾಣ; ಸಂದಣಿ: ಗುಂಪು; ಸೈ:ಸರಿಯಾದುದು, ತಕ್ಕದ್ದು; ಕರೆದು: ಬರೆಮಾಡು; ಇಂದುಧರ: ಈಶ್ವರ; ಮಝ: ಭಲೇ; ಭಾಪು: ಭೇಷ್; ಪಸರಿಸು: ಹರಡು; ಅಂಬು: ಬಾಣ; ಮುಂದೆ: ಎದುರು; ನಿಲಲು: ನಿಲ್ಲಲು; ವಿತಾಳಿಸು: ಹೆಚ್ಚಾಗು, ಅಧಿಕವಾಗು; ಮಂದಗತಿ: ನಿಧಾನ; ಕೆಲಸಿಡಿ: ಪಕ್ಕಕ್ಕೆ ಹಾರು; ಹರಿ: ಇಂದ್ರ; ನಂದನ: ಮಗ; ಬಿಡು: ತೊರೆ; ಎಸು: ಬಾಣ ಪ್ರಯೋಗ ಮಾಡು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ನೊಂದು +ಸೈರಿಸಿ+ ಮತ್ತೆ +ಸರಳಿನ
ಸಂದಣಿಯ +ಸೈಗರೆದನ್+ಅರ್ಜುನನ್
ಇಂದುಧರ +ಮಝ +ಭಾಪುರೆನೆ +ಪಸರಿಸಿದವ್+ಅಂಬುಗಳು
ಮುಂದೆ +ನಿಲಲ್+ಅರಿಯದೆ+ ವಿತಾಳಿಸಿ
ಮಂದಗತಿಯೊಳು +ಕೆಲಸಿಡಿದು+ ಹರಿ
ನಂದನನ+ ಬಿಡದ್+ಎಸುತ +ಬಂದನು +ಭೀಷ್ಮ +ಮುಳಿಸಿನಲಿ

ಅಚ್ಚರಿ:
(೧) ಭೀಷ್ಮನನ್ನು ಹೊಗಳಿದ ಪರಿ – ಸರಳಿನ ಸಂದಣಿಯ ಸೈಗರೆದನರ್ಜುನನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು

ಪದ್ಯ ೫೫: ಯಕ್ಷಸೈನಿಕರು ಏನೆಂದು ಚಿಂತಿಸಿದರು?

ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನು ಹೇಳುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಚಿಂತಿಸಿತು ಭಟನಿಕರ (ಅರಣ್ಯ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಕ್ಷಸರು ಓಡಿದರು, ಯಕ್ಷರು ಬಿಲ್ಲುಗಳನ್ನು ಬಿಸಾಡಿದರು, ಗುಹ್ಯಕರು ನಿಂತಲ್ಲಿ ನಿಲ್ಲಲಿಲ್ಲ, ಕಿನ್ನರರ ಪಾಡನ್ನು ನಾನೇನು ಹೇಳಲಿ, ಇವನಾರೋ ನಮ್ಮನ್ನು ಜಯಿಸಿದ, ಖಂಡಿತವಾಗಿ ಇವನು ಮನುಷ್ಯನಲ್ಲ, ನಮಗೆ ಇಂತಹ ಭಯ ಅಪಮಾನಗಳು ವಿಧಿವಶದಿಂದಾದವು ಭಾಪುರೆ ವಿಧಿ ಎಂದು ಯಕ್ಷ ಯೋಧರು ಚಿಂತಿಸಿದರು.

ಅರ್ಥ:
ಚೆಲ್ಲು: ಹರಡು; ರಕ್ಕಸ: ರಾಕ್ಷಸ; ಯಕ್ಷ: ದೇವತೆಗಳ ಒಂದು ಗುಂಪು; ಬಿಲ್ಲು: ಚಾಪ; ಬಿಸುಟು: ಹೊರಹಾಕು; ಗುಹ್ಯಕ: ಯಕ್ಷ; ನಿಲ್ಲು: ಸ್ಥಿರವಾಗು; ಕಿನ್ನರ: ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಗೆಲುವು: ಜಯ; ಲೇಸು: ಒಳಿತು; ಮಾನವ: ನರ; ಭಂಗ: ಮುರಿ, ತುಂಡು; ಭಯ: ಭೀತಿ; ರಸ: ಸಾರ; ಭಾಪುರೆ: ಭಲೆ; ವಿಧಿ: ಸೃಷ್ಟಿಕರ್ತ, ಬ್ರಹ್ಮ; ಚಿಂತಿಸು: ಯೋಚಿಸು; ಭಟ: ಸೈನ್ಯ; ನಿಕರ: ಗುಂಪು;

ಪದವಿಂಗಡಣೆ:
ಚೆಲ್ಲಿದರು +ರಕ್ಕಸರು +ಯಕ್ಷರು
ಬಿಲ್ಲ +ಬಿಸುಟರು +ಗುಹ್ಯಕರು +ನಿಂ
ದಲ್ಲಿ +ನಿಲ್ಲರು +ಕಿನ್ನರರನ್+ಇನ್ನೇನು +ಹೇಳುವೆನು
ಗೆಲ್ಲವಿದು +ಲೇಸಾಯ್ತು +ಮಾನವ
ನಲ್ಲ +ನಮಗೀ +ಭಂಗ +ಭಯರಸ
ವೆಲ್ಲಿ +ಭಾಪುರೆ+ ವಿಧಿಯೆನುತ +ಚಿಂತಿಸಿತು +ಭಟನಿಕರ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭಂಗ ಭಯರಸವೆಲ್ಲಿ ಭಾಪುರೆ

ಪದ್ಯ ೨೧: ಹನುಮಂತ ಕರ್ಣನ ಗುಣಗಾನವನ್ನು ಹೇಗೆ ಮಾಡಿದ?

ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ (ಕರ್ಣ ಪರ್ವ, ೨೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಪರಮತೇಜಃಪುಂಜವೊಂದು ಕರ್ಣನ ದೇಹದಿಂದ ಹೊರಟು ಮೇಲಕ್ಕೆ ಹಾರಿ ಸೂರ್ಯಮಂಡಲದ ಮಧ್ಯವನ್ನು ಪ್ರವೇಶಿಸಿತು. ಇದನ್ನು ನೋಡುತ್ತಿದ್ದ ಆಂಜನೇಯನು, ಭಲೇ ಕರ್ಣ ಭಲೇ ಪರಾಕ್ರಮಿಗಳಲ್ಲಿ ಅಗ್ರಗಣ್ಯನಾದ ನಿನಗೆ ಸರಿಸಮಾನರಾದವರನ್ನು ನಾನು ಎರಡು ಯುಗಗಳಲ್ಲಿ ಕಾಣಲಿಲ್ಲ ಎಂದು ದುಃಖಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒಡಲು: ದೇಹ; ಪರಮ: ಶ್ರೇಷ್ಠ; ತೇಜ: ಹೊಳಪು, ಕಾಂತಿ; ಪುಂಜ: ಸಮೂಹ, ಗುಂಪು; ಒದೆ: ತಳ್ಳು; ಉಪ್ಪರ: ಎತ್ತರ; ಹಾಯ್ದು: ಹಾರು; ಹೊಳೆ: ಪ್ರಕಾಶಿಸು; ದಿನಮಂಡಲ: ಸೂರ್ಯಮಂಡಲ; ಮಧ್ಯ: ನಡುವೆ; ಅರರೆ: ಓಹೋ; ಭಾಪುರೆ: ಭೇಷ್; ಮಝ: ಭಲೇ; ಭಟಾಗ್ರಣಿ: ಪರಾಕ್ರಮಿ, ಭಟರಲ್ಲಿ ಅಗ್ರಗಣ್ಯ; ಸರಿದೊರೆ: ಸಮಾನರು; ಯುಗ: ಕಾಲದ ಪ್ರಮಾಣ; ಕಾಣು: ತೋರು; ಅಳಲು: ದುಃಖಿಸು;

ಪದವಿಂಗಡಣೆ:
ಅರಸ+ ಕೇಳೈ +ಕರ್ಣನ್+ಒಡಲಲಿ
ಪರಮ+ತೇಜಃಪುಂಜವ್+ಒದೆದ್
ಉಪ್ಪರಿಸಿ +ಹಾಯ್ದುದು +ಹೊಳೆದು+ ದಿನಮಂಡಲದ+ ಮಧ್ಯದಲಿ
ಅರರೆ+ ಭಾಪುರೆ+ ಕರ್ಣ +ಮಝ +ಭಾ
ಪುರೆ +ಭಟಾಗ್ರಣಿ+ ನಿನ್ನ+ ಸರಿದೊರೆ
ಎರಡು +ಯುಗದಲಿ +ಕಾಣೆನೆಂದ್+ಅಳಲಿದನು +ಹನುಮಂತ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪದಗಳು – ಭಾಪುರೆ, ಮಝ, ಭಟಾಗ್ರಣಿ