ಪದ್ಯ ೩೬: ಯಾರ ಹೊಡೆತವು ಸೈನ್ಯವನ್ನು ಧೂಳಿಪಟ ಮಾಡಿತು?

ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು (ಗದಾ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನಮ್ಮ ಸೈನ್ಯದ ಪರಾಕ್ರಮವನ್ನು ಹೇಗೆ ವರ್ಣಿಸಲಿ, ಈ ಚತುರಂಗ ಸೈನ್ಯದ ಕಾಟವನ್ನು ಅತಿರಥರೂ ತಡೆಯಲಾರರು. ಆದರೆ ಈ ಪರಾಕ್ರಮವೆಲ್ಲವೂ ಕತ್ತಲ ಕಡಲಂತೆ, ಅರ್ಜುನನು ಅದರಲ್ಲಿ ಮುಳುಗಿದ ಸೂರ್ಯನಂತೆ, ಅವನ ಹೊಡೆತಕ್ಕೆ ಈ ಸೈನ್ಯವು ಧೂಳಿಪಟವಾಯಿತು.

ಅರ್ಥ:
ಜೀಯ: ಒಡೆಯ; ಬಲ: ಸೈನ್ಯ; ಆನೆ: ಗಜ; ವಿಕ್ರಮ: ಶೂರ, ಸಾಹಸ; ಅತಿರಥ: ಪರಾಕ್ರಮಿ; ನಿಲು: ನಿಲ್ಲು, ತಡೆ; ಕೆಲಬಲ: ಅಕ್ಕಪಕ್ಕ, ಎಡಬಲ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಪಹತಿ: ಹೊಡೆತ; ಭಾನು: ಸೂರ್ಯ; ಮಂಡಲ: ಜಗತ್ತು, ವರ್ತುಲಾಕಾರ; ಅಕಟ: ಅಯ್ಯೋ; ತಿಮಿರ: ಅಂಧಕಾರ; ಅಂಭೋನಿಧಿ: ಸಾಗರ; ಅಕ್ಕಾಡು: ನಷ್ಟವಾಗು; ನಿರಂತರ: ಯಾವಾಗಲು; ದಳ: ಸೈನ್ಯ; ಥಟ್ಟು: ಗುಂಪು; ಧೂಳಿ: ಮಣ್ಣಿನ ಪುಡಿ; ಧೂಳಿಪಟ: ನಾಶವಾಗುವಿಕೆ;

ಪದವಿಂಗಡಣೆ:
ಏನನೆಂಬೆನು+ ಜೀಯ +ಕುರುಬಲದ್
ಆನೆಗಳ+ ವಿಕ್ರಮವನ್+ಅತಿರಥರ್
ಏನ+ ನಿಲುವರು +ಕೆಲಬಲನ +ಚತುರಂಗದ್+ಉಪಹತಿಗೆ
ಭಾನುಮಂಡಲವ್+ಅಕಟ +ತಿಮಿರಾಂ
ಭೋನಿಧಿಯಲ್+ಅಕ್ಕಾಡಿತೆಂಬವೊಲ್
ಆ+ ನಿರಂತರ+ ದಳದ +ಥಟ್ಟಣೆ +ಧೂಳಿಪಟವಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುಮಂಡಲವಕಟ ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್
(೨) ಒಂದೇ ಪದವಾಗಿ ರಚನೆ – ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್

ಪದ್ಯ ೧: ಮುಂಜಾನೆಯನ್ನು ಹೇಗೆ ವಿವರಿಸಿದ್ದಾರೆ?

ಕೇಳು ಜನಮೇಜಯ ಧರಿತ್ರೀ
ಪಾಲ ಚರಿತಾಜ್ಞಾತವಾಸವ
ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು
ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ
ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ (ವಿರಾಟ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ಪಾಂಡವರು ತಾವು ಅನುಭವಿಸುತ್ತಿದ್ದ ಅಜ್ಞಾತವಾಸವನ್ನು ಬೀಳುಕೊಟ್ಟು ಸಂತೋಷದಿಂದ ಆ ರಾತ್ರಿಯನ್ನು ಕಳೆದರು. ಮುಂದೆ ಬರಲಿರುವ ಅವರ ಅಭ್ಯುದಯವನ್ನು ಅವರಿಗೆ ನೀಡುವಂತೆ ಪೂರ್ವ ಶೈಲದಲ್ಲಿ ಅರುಣೋದಯವಾಯಿತು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಚರಿತ: ನಡೆದುದು, ಗತಿ; ಅಜ್ಞಾತವಾಸ: ತಲೆಮರೆಸಿಕೊಂಡಿರುವುದು; ಬೀಳುಕೊಡು: ಮುಗಿಸು; ಬಹಳ: ತುಂಬ; ಹರುಷ: ಸಂತಸ; ಇರುಳು: ರಾತ್ರಿ; ನೂಕು: ತಳ್ಳು; ಮೇಲಣ: ಮುಂದೆ; ಅಭ್ಯುದಯ: ಏಳಿಗೆ; ಕೈಮೇಳವಿಸು: ಜೊತೆಗೂಡು; ಕೊಡು: ನೀಡು; ಮೂಡಣ: ಪೂರ್ವ; ಶೈಲ: ಬೆಟ್ಟ; ಮುಖ: ಆನನ; ಕೆಂಪು: ರಕ್ತವರ್ಣ, ಸಿಂಧೂರ; ಸುಳಿ: ಕಾಣಿಸಿಕೊಳ್ಳು; ಭಾನು: ರವಿ; ಭಾನುಮಂಡಲ: ಸೂರ್ಯಮಂಡಲ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ+ ಚರಿತ+ಅಜ್ಞಾತವಾಸವ
ಬೀಳುಕೊಟ್ಟರು +ಬಹಳ +ಹರುಷದಲ್+ಇರುಳ +ನೂಕಿದರು
ಮೇಲಣವರ್+ಅಭ್ಯುದಯವನು +ಕೈ
ಮೇಳವಿಸಿ +ಕೊಡುವಂತೆ +ಮೂಡಣ
ಶೈಲ +ಮುಖದಲಿ+ ಕೆಂಪು +ಸುಳಿದುದು +ಭಾನುಮಂಡಲದ

ಅಚ್ಚರಿ:
(೧) ಸೂರ್ಯೋದಯವನ್ನು ಪಾಂಡವರ ಏಳಿಗೆಗೆ ಹೋಲಿಸುವ ಪರಿ – ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ

ಪದ್ಯ ೩: ಯಾರ ಸಾವಿನ ಸುದ್ದಿಯನ್ನು ಸಂಜಯನು ತಿಳಿಸಿದನು?

ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ (ಕರ್ಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ತನ್ನ ಮಾತನ್ನು ಹೇಳುತ್ತಾ, ಒಡೆಯ ಧ್ವಜಗಳನ್ನು ಹಾರಿಸು, ಸಾಗರವು ಬತ್ತಿ ಹೋಯಿತು, ಮೇರು ಪರ್ವತ ಮುರಿಯಿತು, ಭೂಮಿಯು ತಿರುಗಿತು, ಸೂರ್ಯ ಮಂಡಲವು ಬಿದ್ದು ಪಾತಾಳಕ್ಕಿಳಿಯಿತು, ನಿನ್ನ ಮಹಾ ಪರಾಕ್ರಮಿ ಯೋಧನಾದ ಕರ್ಣನು ಮುರಿದು ಬಿದ್ದು ನಿಮ್ಮಿಮ್ದ ಬೀಳ್ಕೊಂಡನು ಇದರ ವಾರ್ತೆಯನ್ನು ತಿಳಿಸೆಂದು ಸಂಜಯನು ಹೇಳಿದನು.

ಅರ್ಥ:
ಗುಡಿ: ಧ್ವಜ, ದೇವಾಲಯ, ಬಾವುಟ; ಕಟ್ಟಿಸು: ನಿರ್ಮಿಸು; ಬರತು: ಬತ್ತು, ನೀರಿಲ್ಲದ; ಕಡಲು: ಸಾಗರ; ಮುರಿ: ಸೀಳು; ಮೇರು: ಮೇರು ಪರ್ವತ; ತಿರುಗು: ಸುತ್ತಾಡು; ಪೊಡವಿ: ಭೂಮಿ; ಬಿದ್ದು: ಕೆಳಕ್ಕೆ ಜಾರು; ಭಾನು: ಸೂರ್ಯ; ಮಂಡಲ: ವರ್ತುಲಾಕಾರ; ಅಹಹ: ನೋವಿನ ನುಡಿ; ವಿತಳ: ಪಾತಾಳ; ಮಡಿ: ಸಾವು; ಆನೆ: ಗಜ, ಬಲ, ಪರಾಕ್ರಮಿ; ಉಗ್ಗಡ:ಉತ್ಕಟತೆ, ಅತಿಶಯ; ಭಟ: ಸೈನಿಕ; ಬೀಳ್ಕೊಂಡನು: ಮಡಿದನು; ಕಡಿ: ಸೀಳು, ಮುರಿ; ಕಲಿ: ಶೂರ;
ಒಸಗೆ: ಸುದ್ದಿ, ಸಂದೇಶ; ಮಾಡಿಸು: ನೆರವೇರಿಸು;

ಪದವಿಂಗಡಣೆ:
ಗುಡಿಯ +ಕಟ್ಟಿಸು +ಜೀಯ +ಬರತುದು
ಕಡಲು +ಮುರಿದುದು +ಮೇರು +ತಿರುಗಿತು
ಪೊಡವಿ +ಬಿದ್ದುದು +ಭಾನುಮಂಡಲವ್+ಅಹಹ+ ವಿತಳದಲಿ
ಮಡಿದುದೈ +ನಿನ್ನಾನೆ +ನಿನ್ನ್
ಉಗ್ಗಡದ +ಭಟ +ಬೀಳ್ಕೊಂಡನೈ +ಕಡಿ
ವಡೆದನೈ+ ಕಲಿ +ಕರ್ಣನ್+ಒಸಗೆಯ +ಮಾಡಹೇಳೆಂದ

ಅಚ್ಚರಿ:
(೧) ಕರ್ಣನನ್ನು ಆನೆಗೆ ಹೋಲಿಸಿರುವುದು
(೨) ಉಪಮಾನದ ಬಳಕೆ – ಬರತುದು ಕಡಲು; ಮುರಿದುದು ಮೇರು; ತಿರುಗಿತು
ಪೊಡವಿ; ಬಿದ್ದುದು ಭಾನುಮಂಡಲವಹಹ ವಿತಳದಲಿ