ಪದ್ಯ ೪೭: ಕವಚವು ದ್ರೋಣನ ಬಳಿ ಹೇಗೆ ಬಂದಿತು?

ಇದು ಮಹಾದೇವರದು ವೃತ್ರನ
ಕದನದಲಿ ಕೈ ಸಾರ್ದುದೀಶನಿ
ನಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ (ದ್ರೋಣ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಇದು ಶಿವನ ಕವಚ, ವೃತ್ರನೊಡನೆ ಯುದ್ಧಮಾದುವಾಗ ಶಿವನು ದೇವೇಂದ್ರನಿಗೆ ಕೊಟ್ಟನು, ಇಂದ್ರನು ಇದನ್ನು ಆಂಗಿರನಿಗೆ ನೀಡಿದನು, ಅವನು ಇದನ್ನು ಬೃಹಸ್ಪತಿಗೆ ಕೊಟ್ಟನು. ಅದು ಬೃಹಸ್ಪತಿಯಿಂದ ಭರದ್ವಾಜನಿಗೆ ಬಂದಿತು, ಭರದ್ವಾಜನು ಇದನ್ನು ನನಗೆ ನೀಡಿದನು ಎಂದು ದ್ರೋಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಹಾದೇವ: ಶಿವ, ಶಂಕರ; ಕದನ: ಯುದ್ಧ; ಸುರೇಂದ್ರ: ಇಂದ್ರ; ಇತ್ತು: ನೀಡು; ಬಳಿಕ: ನಂತರ; ಕರುಣ: ದಯೆ;

ಪದವಿಂಗಡಣೆ:
ಇದು +ಮಹಾದೇವರದು +ವೃತ್ರನ
ಕದನದಲಿ +ಕೈ +ಸಾರ್ದುದ್+ಈಶನಿ
ನಿದು +ಸುರೇಂದ್ರಂಗ್+ಆ+ ಸುರೇಶ್ವರನ್+ಆಗಿರಂಗಿತ್ತ
ಇದು +ಬೃಹಸ್ಪತಿಗ್+ಆಂಗಿರನನಿನಾ
ದುದು +ಭರದ್ವಾಜಂಗೆ +ಬಳಿಕಾ
ದುದು +ಭರದ್ವಾಜಾಖ್ಯನಿತ್ತನು +ತನಗೆ +ಕರುಣದಲಿ

ಅಚ್ಚರಿ:
(೧) ಕವಚವು ಬಂದ ಪರಿ – ಮಹಾದೇವ, ಸುರೇಂದ್ರ, ಆಂಗಿರ, ಬೃಹಸ್ಪತಿ, ಭಾರದ್ವಾಜ, ದ್ರೋಣ

ಪದ್ಯ ೧೪: ಕೃಷ್ಣನು ಯಾವ ಮುನಿಗಳನ್ನು ಕಂಡನು?

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ (ಉದ್ಯೋಗ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚಂಚಲಕಣ್ಣುಳ್ಳವಳಾದ ದ್ರೌಪದಿಯು ಕೃಷ್ಣನ ಅಭಯವನ್ನು ಪಡೆದು ಮರಳಿದಳು. ಕೃಷ್ಣನು ತನ್ನ ಮಾರ್ಗದಲ್ಲಿ ಬರುತ್ತಾ ಶ್ರೇಷ್ಠರಾದ ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮುನಿಗಳನ್ನು ಕಂಡನು.

ಅರ್ಥ:
ಮರಳು: ಹಿಂದಿರುಗು; ತರಳ:ಚಂಚಲವಾದ; ಅಕ್ಷಿ: ಕಣ್ಣು; ರಿಪು: ವೈರಿ; ಬಟ್ಟೆ: ಹಾದಿ, ಮಾರ್ಗ; ಬರುತ: ಆಗಮಿಸು; ಕಂಡನು: ನೋಡಿದನು; ಪ್ರಮುಖ: ಮುಖ್ಯ; ಮುನಿ: ಋಷಿ; ವರ: ಶ್ರೇಷ್ಠ; ಆಖ್ಯ: ಹೆಸರು

ಪದವಿಂಗಡಣೆ:
ಮರಳಿದಳು +ತರಳಾಕ್ಷಿ +ಮುರರಿಪು
ಬರುತಲಾ +ಬಟ್ಟೆಯಲಿ+ ಕಂಡನು
ವರ +ಭರದ್ವಾಜ+ಆಖ್ಯ+ ಗೌತಮ+ ಕಣ್ವಮುನಿವರರ
ಉರಗಮಾಲಿ +ಮತಂಗ +ಗಾರ್ಗ್ಯ+ಅಂ
ಗಿರಸ+ ನಾರದ +ಶುಕ +ಪರಾಶರ
ಪರಶುರಾಮ +ಶ್ವೇತಕೇತು+ ಪ್ರಮುಖ +ಮುನಿವರರ

ಅಚ್ಚರಿ:
(೧) ಮುನಿಗಳ ಹೆಸರುಳ್ಳ ಪದ್ಯ: ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು
(೨) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು

ಪದ್ಯ ೫೬: ವ್ರತವನ್ನು ನೋಡಲು ಯಾರು ಆಗಮಿಸಿದರು?

ಭರದಿ ಬಂದುದು ಸಕಲಮುನಿಜನ
ಪರಶುರಾಮ ವಸಿಷ್ಠ ಗೌತಮ
ವರಭರದ್ವಾಜಾತ್ರಿ ವಿಶ್ವಾಮಿತ್ರ ಮೊದಲಾದ
ಪರಮಮುನಿಜನರೈದೆ ಬಂದರು
ಹರುಷದಿಂದಿದಿರಾಗಿ ಬಂದರು
ಸುರನದೀಸುತ ವಿದುರ ಕೃಪದ್ರೋಣಾದಿಗಳು ಸಹಿತ (ಆದಿ ಪರ್ವ, ೨೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಪರಶುರಾಮ, ವಸಿಷ್ಠ, ಗೌತಮ, ಭರದ್ವಾಜ, ಅತ್ರಿ, ವಿಶ್ವಾಮಿತ್ರ ಮೊದಲಾದ ಎಲ್ಲಾ ಋಷಿಗಳು ಹಸ್ತಿನಾಪುರಕ್ಕೆ ಬರಲು, ಭೀಷ್ಮನು, ವಿದುರ, ಕೃಪ, ದ್ರೋಣಾಚಾರ್ಯರೇ ಮೊದಲಾದವರೊಡನೆ ಸಂತೋಷದಿಂದ ಸ್ವಾಗತಿಸಲು ಬಂದರು.

ಅರ್ಥ:
ಭರದಿ: ಬೇಗ; ಬಂದುದು: ಆಗಮಿಸಿದರು; ಸಕಲ: ಎಲ್ಲಾ; ಮುನಿ:ಋಷಿ; ಮೊದಲಾದ:ಮುಂತಾದ; ಪರಮ: ಶ್ರೇಷ್ಠ; ಹರುಷ: ಸಂತೋಷ; ಸುರನದಿ: ಗಂಗೆ; ಸುತ: ಮಗ; ಸಹಿತ: ಜೊತೆ;

ಪದವಿಂಗಡಣೆ:
ಭರದಿ +ಬಂದುದು +ಸಕಲ+ಮುನಿಜನ
ಪರಶುರಾಮ +ವಸಿಷ್ಠ+ ಗೌತಮ
ವರಭರದ್ವಾಜ+ಅತ್ರಿ+ ವಿಶ್ವಾಮಿತ್ರ +ಮೊದಲಾದ
ಪರಮಮುನಿಜನರ್+ಐದೆ +ಬಂದರು
ಹರುಷದಿಂದ್+ಇದಿರಾಗಿ+ ಬಂದರು
ಸುರನದೀಸುತ +ವಿದುರ +ಕೃಪ+ದ್ರೋಣಾದಿಗಳು+ ಸಹಿತ

ಅಚ್ಚರಿ:
(೧) ಬಂದರು – ೪,೫ ಸಾಲಿನ ಕೊನೆಯ ಪದ
(೩) ಪದ್ಯದ ೩ ಸಾಲಿನಲ್ಲಿ ಹೆಸರುಗಳನ್ನು ಅಳವಡಿಸಿರುವುದು

ಪದ್ಯ ೨೧: ದ್ರೋಣನ ಜನನ ಹೇಗಾಯಿತು?

ಮುನಿ ಭರದ್ವಾಜಾಖ್ಯನಿರ್ದನು
ಘನ ತಪೋನಿಷ್ಠೆಯಲಿ ದಿವಿಜಾಂ
ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ
ತನು ಪರಿಚ್ಯುತ ವೀರ್ಯವನು ಸ
ತ್ಕನಕ ಕಲಶದೊಳಿರಿಸಲಲ್ಲಿಯೆ
ಜನಿಸಿದನು ದ್ರೋಣಾಭಿದಾನನು ಮುನಿಯ ದೆಸೆಯಿಂದ (ಆದಿ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮ ಪಾಂಡವರು ಮತ್ತು ಕೌರವರಿಗೆ ಶಸ್ತ್ರಾಸ್ತ್ರ ಅಭ್ಯಾಸಕ್ಕಾಗಿ ಗುರುಗಳನ್ನು ಹುಡುಕುತ್ತಿದ್ದನು. ಇಲ್ಲಿ ದ್ರೋಣನ ಪರಿಚಯ ಕುಮಾರವ್ಯಾಸ ಮಾಡುತ್ತಾನೆ.
ಹಿಂದೆ ಭಾರದ್ವಾಜ ಮುನಿಗಳು ತಪೋನಿಷ್ಠರಾಗಿದ್ದಾಗ ಒಬ್ಬ ಅಪ್ಸರ ಸ್ತ್ರೀಯನ್ನು (ಘೃತಾಚಿ) ಕಂಡು ಕಾಮಜ್ವರಿತರಾದರು. ಈ ಮದನನ ಬಾಣದ ಆಕ್ರಮಣದಿಂದ ಗಾಯಗೊಂಡ ಮುನಿಯು ಆ ಸಮಯದಲ್ಲಿ ಸ್ಖಲಿಸಿದ ಅವರ ವೀರ್ಯವನ್ನು ಒಂದು ಚಿನ್ನದ ಕಲಶದಲ್ಲಿಟ್ಟರು. ಈ ಕಲಶದಿಂದ ಮುಂದೆ ಒಂದು ಗಂಡು ಮಗುವು ಜನಿಸಿತು, ಆ ಮಗುವಿಗೆ ದ್ರೋಣ ನೆಂಬ ಹೆಸರನ್ನಿಟ್ಟರು.

ಅರ್ಥ:
ಮುನಿ: ಋಷಿ; ಆಖ್ಯಾತ: ಪ್ರಸಿದ್ಧನಾದ ವ್ಯಕ್ತಿ
ಘನ: ಗಟ್ಟಿಯಾದುದು, ಶ್ರೇಷ್ಠವಾದುದು, ಬಲ, ಶಕ್ತಿ
ತಪೋ: ತಪಸ್ಸು; ನಿಷ್ಠೆ: ಶ್ರದ್ಧೆ; ದಿವಿಜ: ದೇವತೆಗಳು
ಆಂಗನೆ: ಹೆಂಗಸು, ಸ್ತ್ರೀ; ಕಂಡು: ನೋಡಿ
ಗಾಯ: ಪೆಟ್ಟು; ಮದನ: ಕಾಮ; ರತೀಶ
ಎಸುಗೆ: ಬಾಣ ಪ್ರಯೋಗ ಮಾಡು
ತನು: ದೇಹ; ಪರಿಚ್ಯುತ: ಕೆಳಗೆ ಬಿದ್ದ, ಚೆಲ್ಲಿದ, ಸುರಿದ
ವೀರ್ಯ: ತೇಜಸ್ಸು; ಕನಕ: ಬಂಗಾರ, ಚಿನ್ನ
ಕಲಶ: ಬಿಂದಿಗೆ ಕೊಡ; ಜನಿಸು: ಹುಟ್ಟು
ಅಭಿದಾನ: ಹೆಸರು; ದೆಸೆ: ಕಾರಣ

ಪದವಿಂಗಡನೆ:
ಭಾರದ್ವಾಜ+ಅಖ್ಯನ್+ಇರ್ದನು; ಮದನನ್+ಎಸುಗೆಯಲಿ; ಕಲಶದೊಳ್+ಇರಿಸಲ್+ಅಲ್ಲಿಯೆ; ದ್ರೋಣ+ಅಭಿದಾನನು

ಅಚ್ಚರಿ:
(೧) ಮೊದಲ ಮತ್ತು ಕೊನೆಯ ಹಿಂದಿನ ಪದ “ಮುನಿ” ಆಗಿರುವುದು
(೨) ಕಲಶ ದಿಂದ ಜನಿಸಿದ ದ್ರೋಣ – ಇದು ಇಂದಿನ ವೈಜ್ಞಾನಿಕ ವಾಗಿ ಕರೆಯಲ್ಪಡುವ “ಟೆಸ್ಟ್ ಟ್ಯೂಬ್ ಬೇಬಿ” ಗೆ ಸಮಾನವೇ?
(೩) ಆಯುಧ ದಿಂದ ತಿವಿದರೆ ಗಾಯವಾಗುತ್ತದೆ, ಆದರೆ ಮದನನ ಹತ್ತಿರವಿರ್ವುದು ಹೂವಿನ ಬಾಣಗಳು, ಇದರಿಂದ ಹೊಡೆತ ತಿಂದ ಭರದ್ವಾಜ ಮುನಿಗಳಿಗೆ ಗಾಯ ವಾಯಿತು ಎಂದು ಕವಿ ವರ್ಣಿಸಿದ್ದಾನೆ.
(೪) ಎಂಥಹ ಸ್ಥಿತ ಪ್ರಜ್ಞರಿಗು ಮೋಹವನ್ನು ಗೆಲ್ಲಲು ಎಷ್ಟು ಕಷ್ಟ ಎಂದು ಈ ಕವನ ತಿಳಿಸುತ್ತದೆ