ಪದ್ಯ ೫೨: ಭೀಮನು ಕೃಷ್ಣನಿಗೇನು ಹೇಳಿದನು?

ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತು ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ (ಗದಾ ಪರ್ವ, ೫ ಸಂಧಿ, ೫೨ ಪದ್ಯ)

ತಾತ್ಪರ್ಯ:
ಆಗ ಭೀಮನು, ಹೇ ಕೃಷ್ಣ ನಿನ್ನ ಮುಂದೆ ನಾನು ಹೆಚ್ಚಿನವನೆಂದು ಹೇಳಿಕೊಳ್ಳುವುದಿಲ್ಲ. ನಿಮ್ಮ ಪಾದಗಳ ಅಮೃತಸಮಾನವಾದ ಕರುಣೆಯೇ ನನಗೆ ವಜ್ರಕವಚ. ನನ್ನನ್ನು ವಿರೋಧಿಸಿ ನಿಂತವನೊಡನೆ ಹೋರಾಡಿ ಗದೆಯಿಂದ ಅರಸನ ಬಿರುದುಗಳನ್ನು ಬರೆದು ಎತ್ತಿ ಹಿಡಿಯುತ್ತೇನೆ ಎಂದನು.

ಅರ್ಥ:
ಮುರಾಂತಕ: ಕೃಷ್ಣ; ಮುಂದೆ: ಎದುರು; ಅಗ್ಗಳೆ: ಶ್ರೇಷ್ಠ; ನಿಮ್ಮಡಿ: ನಿಮ್ಮ ಪಾದ; ಸುಧಾ: ಅಮೃತ; ಕರುಣ: ದಯೆ; ಅವಧಾನ: ಏಕಚಿತ್ತತೆ; ವಜ್ರ: ಗಟ್ಟಿ; ಕವಚ: ಹೊದಿಕೆ; ಮಲೆ: ಉದ್ಧಟತನದಿಂದ ಕೂಡಿರು; ಹಗೆ: ವೈರ; ಪಡಿ: ಎದುರು; ಮುಖ: ಎದುರು; ಬಲುವಲಗೆ: ಹೋರಾಡು; ಗದೆ: ಮುದ್ಗರ; ರಾಯ: ರಾಜ; ಬಲುಹ: ಶಕ್ತಿ; ಬಿರುದಾವಳಿ: ಗೌರವ ಸೂಚಕ ಪದ; ಬರೆ: ಲಿಖಿತ; ಕೇಳು: ಆಲಿಸು;

ಪದವಿಂಗಡಣೆ:
ಎಲೆ +ಮುರಾಂತಕ +ನಿಮ್ಮ +ಮುಂದ್
ಅಗ್ಗಳೆಯತನವ್+ಎಮಗಿಲ್ಲ+ ನಿಮ್ಮಡಿ
ಗಳ+ ಸುಧಾ+ಕರುಣ+ಅವಧಾನವೆ +ವಜ್ರ+ಕವಚವಲಾ
ಮಲೆತು +ಹಗೆವನ +ಪಡಿಮುಖದ +ಬಲು
ವಲಗೆಯಲಿ +ಗದೆಯಿಂದ +ರಾಯನ
ಬಲುಹ+ ಬಿರುದಾವಳಿಯ +ಬರೆವೆನು +ಕೃಷ್ಣ+ ಕೇಳೆಂದ

ಅಚ್ಚರಿ:
(೧) ಕೃಷ್ಣನ ಗುಣಗಾನ – ನಿಮ್ಮಡಿಗಳ ಸುಧಾಕರುಣಾವಧಾನವೆ ವಜ್ರಕವಚವಲಾ

ಪದ್ಯ ೪೦: ಯುದ್ಧದ ಅಂತ್ಯದಲ್ಲಿ ಯಾರು ಉಳಿದಿದ್ದರು?

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿಧಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು (ಗದಾ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವನಿದಿರಿನಲ್ಲಿ ಛತ್ರ, ಚಾಮರಗಳನ್ನು ಹಿಡಿಯುವವರು, ತಾಂಬೂಲದ ಹಡಪವನ್ನು ಹಿಡಿದವರು, ಬಿರುದಾವಳಿಯವರು, ಪಾಠಕರು, ವಾದ್ಯ ವಾದಕರು, ಗಾಯಕರು, ನೀರು ತಿಂಡಿಗಳನ್ನು ಕೊಡುವವರು, ಆನೆ ಕುದುರೆಗಳ ಗಾಯಗಳನ್ನು ಚಿಕಿತ್ಸೆ ಮಾಡುವವರು, ರಥದ ಗಾಲಿಗಳನ್ನು ದಬ್ಬುವವರು, ಬಿಲ್ಲು ಬಾಣಗಳನ್ನು ಕೊಡುವವರು ಮಾತ್ರ ಇದ್ದರು.

ಅರ್ಥ:
ಉಳಿದ: ಮಿಕ್ಕ; ಇದಿರು: ಎದುರು; ಛತ್ರ: ಕೊಡೆ; ಚಮರಾವಳಿ: ಚಾಮರ; ಹಡಪಿಗ: ಅಡಕೆ ಎಲೆಯ ಚೀಲವನ್ನು ಹಿಡಿದವ; ಬಿರುದಾವಳಿ: ಗೌರವ ಸೂಚಕದ ಹೆಸರು; ಪಾಠಕ: ಹೊಗಳುಭಟ್ಟ; ವಾದ್ಯ: ಸಂಗೀತದ ಸಾಧನ; ಮಲ್ಲಗಾಯಕ: ಸಂಗೀತದಲ್ಲಿ ನಿಪುಣನಾದವ; ಸಲಿಲ: ನೀರು; ಭಕ್ಷ್ಯ: ಊಟ; ವಿಧಾನ: ರೀತಿ; ಗಜ: ಆನೆ; ಹಯ: ಕುದುರೆ; ಕುಲ: ವಂಶ; ರಕ್ಷ: ರಕ್ಷಣೆ, ಕಾಪಾಡು; ವ್ರಣ: ಹುಣ್ಣು; ಚಿಕಿತ್ಸ: ರೋಗಕ್ಕೆ ಮದ್ದು ನೀಡುವವ; ರಥ: ಬಂಡಿ; ಚಾರಕ: ಓಡಿಸುವ; ಕಾರ್ಮುಕ: ಬಿಲ್ಲು; ಬಾಣ: ಶರ;

ಪದವಿಂಗಡಣೆ:
ಉಳಿದುದ್+ಇದಿರಲಿ +ಛತ್ರ+ ಚಮರಾ
ವಳಿಯವರು +ಹಡಪಿಗರು +ಬಿರುದಾ
ವಳಿಯವರು +ಪಾಠಕರು +ವಾದ್ಯದ +ಮಲ್ಲಗಾಯಕರು
ಸಲಿಲ +ಭಕ್ಷ್ಯ+ವಿಧಾನ+ಗಜ+ಹಯ
ಕುಲದ+ ರಕ್ಷ+ವ್ರಣ+ಚಿಕಿತ್ಸಕ
ದಳಿತ+ ರಥಚಾರಕರು +ಕಾರ್ಮುಕ+ಬಾಣದಾಯಕರು

ಅಚ್ಚರಿ:
(೧) ಯುದ್ಧದಲ್ಲಿ ಸಹಾಯ ಮಾಡುವವರು – ಚಮರಾವಳಿ, ಹಡಪಿಗ, ಬಿರುದಾವಳಿ, ಪಾಠಕ, ಮಲ್ಲಗಾಯಕ, ವ್ರಣಚಿಕಿತ್ಸಕ, ರಥಚಾರಕ, ಬಾಣದಾಯಕ

ಪದ್ಯ ೧೩: ಕೌರವ ಸೇನೆಯು ರಣರಂಗಕ್ಕೆ ಹೇಗೆ ಬಂದಿತು?

ಕೆದರಿದವು ನಿಸ್ಸಾಳ ಬರಸಿಡಿ
ಲದುಭುತ ಧ್ವನಿಯಲಿ ನಿರಂತರ
ವೊದರಿ ಬಯ್ದವು ಕಹಳೆ ಬಿರುದಾವಳಿಯಲತಿರಥರ
ಕದುಬಿದವು ತಂಬಟದ ದನಿ ದಿಗು
ಸದನವನು ಬಲು ಬೊಬ್ಬೆಯಲಿ ನೆಲ
ನದಿರೆ ನಡೆದುದು ಸೇನೆ ಕಲಶೋದ್ಭವನ ನೇಮದಲಿ (ದ್ರೋಣ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ದ್ರೋಣನ ಅಪ್ಪಣೆಯಂತೆ ಕೌರವ ಸೇನೆಯು ರಣರಂಗಕ್ಕೆ ಬಂದಿತು. ನಿಸ್ಸಾಳಗಳು ಅದ್ಭುತ ಧ್ವನಿ ಮಾಡಿದವು. ಕಹಳೆಗಳು ಅತಿರಥರನ್ನು ಕೆರಳಿಸಿದವು. ದಿಕ್ತಟಗಳನ್ನು ತಮ್ಮಟೆಗಳು ಚುಚ್ಚಿದವು.

ಅರ್ಥ:
ಕೆದರು: ಹರಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಅದುಭುತ: ಆಶ್ಚರ್ಯ; ಧ್ವನಿ: ರವ, ಶಬ್ದ; ನಿರಂತರ: ಯಾವಾಗಲು; ಒದರು:ಕಿರುಚು, ಗರ್ಜಿಸು; ಬಯ್ದು: ಜರಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಬಿರುದು: ಗೌರವ ಸೂಚಕ ಪದ; ಅತಿರಥ: ಪರಾಕ್ರಮಿ; ಕದುಬು: ಆವೇಶ, ಗಾಬರಿ; ತಂಬಟ: ತಮ್ಮಟೆ; ದನಿ: ಶಬ್ದ; ದಿಗು: ದಿಕ್ಕು; ಸದನ: ಮನೆ, ನಿವಾಸ; ಬಲು: ಬಹಳ; ಬೊಬ್ಬೆ: ಜೋರಾದ ಕೂಗು; ನೆಲ: ಭೂಮಿ; ಅದಿರು: ಅಲ್ಲಾಡು; ನಡೆ: ಚಲಿಸು; ಸೇನೆ: ಸೈನ್ಯ; ಕಲಶೋದ್ಭವ: ದ್ರೋಣ; ನೇಮ: ನಿಯಮ, ಆಜ್ಞೆ;

ಪದವಿಂಗಡಣೆ:
ಕೆದರಿದವು +ನಿಸ್ಸಾಳ +ಬರಸಿಡಿಲ್
ಅದುಭುತ +ಧ್ವನಿಯಲಿ +ನಿರಂತರ
ಒದರಿ+ ಬಯ್ದವು +ಕಹಳೆ +ಬಿರುದಾವಳಿಯಲ್+ಅತಿರಥರ
ಕದುಬಿದವು +ತಂಬಟದ +ದನಿ +ದಿಗು
ಸದನವನು +ಬಲು +ಬೊಬ್ಬೆಯಲಿ +ನೆಲನ್
ಅದಿರೆ +ನಡೆದುದು +ಸೇನೆ +ಕಲಶೋದ್ಭವನ +ನೇಮದಲಿ

ಅಚ್ಚರಿ:
(೧) ನಿಸ್ಸಾಳ, ತಂಬಟ, ಕಹಳೆ – ರಣರಂಗದ ವಾದ್ಯಗಳು
(೨) ಧ್ವನಿ, ದನಿ, ಒದರು, ಬೊಬ್ಬೆ – ಶಬ್ದವನ್ನು ಸೂಚಿಸುವ ಪದಗಳು

ಪದ್ಯ ೭೭: ಆನೆಗಳಿಗೆ ಯಾವುದರಿಂದ ತಿವಿದರು?

ಕುಲಗಿರಿಗಳಗ್ರದೊಳು ಕೈಗಳ
ನಿಳುಹಿಸಿದನೊ ರವಿಯೆನಲು ಮಿಗೆ ಹೊಳೆ
ಹೊಳೆವ ಕೂರಂಕುಶವನಿಕ್ಕಿದರಿಭದ ಮಸ್ತಕಕೆ
ಉಲಿದವಿದಿರೊಳು ಡೌಡೆ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರಲೊದರಿದವು ನಿಸ್ಸಾಳಕೋಟಿಗಳು (ಭೀಷ್ಮ ಪರ್ವ, ೪ ಸಂಧಿ, ೭೭ ಪದ್ಯ)

ತಾತ್ಪರ್ಯ:
ಕುಲಗಿರಿಗಳ ಶಿಖರದ ಮೇಲೆ ಸೂರ್ಯನು ಕೈಯಿಡುವಂತೆ, ಆನೆಗಳ ನೆತ್ತಿಗೆ ಹೊಳೆಯುವ ಅಂಕುಶಗಳಿಂದ ತಿವಿದರು. ಎದುರಿನಲ್ಲಿ ಡೌಡೆಗಳನ್ನು ಬಾರಿಸಿದರು, ಬಿರುದಿನ ಕಹಳೆಗಳೂ, ಭೇರಿಗಳೂ ಮೊಳಗಿದವು

ಅರ್ಥ:
ಕುಲಗಿರಿ: ದೊಡ್ಡ ಬೆಟ್ಟ; ಅಗ್ರ: ಮುಂಭಾಗ, ತುದಿ; ಕೈ: ಹಸ್ತ; ರವಿ: ಸೂರ್ಯ; ಇಳುಹು: ಇಳಿಸು; ಮಿಗೆ: ಮತ್ತು; ಹೊಳೆ: ಪ್ರಕಾಶ; ಕೂರಂಕುಶ: ಹರಿತವಾದ ಅಂಕುಶ, ಆಯುಧ; ಇಕ್ಕು: ಇರಿಸು, ಇಡು; ಇಭ: ಆನೆ; ಮಸ್ತಕ: ತಲೆ, ಶಿರ; ಉಲಿ: ಶಬ್ದ; ಇದಿರು: ಎದುರು; ಡೌಡೆ: ನಗಾರಿ; ಬಿರುದು: ಗೌರವಸೂಚಕ ಪದ; ಆವಳಿ: ಗುಂಪು; ಕಹಳೆ:ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಊದು: ಧ್ವನಿ ಮಾಡು, ನುಡಿಸು; ನೆಲ: ಭೂಮಿ; ಮೊಳಗು: ಧ್ವನಿ, ಸದ್ದು; ಒದರು: ಕಿರುಚು, ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ;

ಪದವಿಂಗಡಣೆ:
ಕುಲಗಿರಿಗಳ್+ಅಗ್ರದೊಳು +ಕೈಗಳನ್
ಇಳುಹಿಸಿದನೊ+ ರವಿಯೆನಲು +ಮಿಗೆ +ಹೊಳೆ
ಹೊಳೆವ +ಕೂರಂಕುಶವನ್+ಇಕ್ಕಿದರ್+ಇಭದ+ ಮಸ್ತಕಕೆ
ಉಲಿದವ್+ಇದಿರೊಳು +ಡೌಡೆ +ಬಿರುದಾ
ವಳಿಯ +ಕಹಳೆಗಳ್+ಊದಿದವು +ನೆಲ
ಮೊಳಗಿದಂತಿರಲ್+ಒದರಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುಲಗಿರಿಗಳಗ್ರದೊಳು ಕೈಗಳನಿಳುಹಿಸಿದನೊ ರವಿಯೆನಲು

ಪದ್ಯ ೫೮: ರಾವುತರು ಹೇಗೆ ಆವರಿಸಿದರು?

ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುತ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿವ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು (ಭೀಷ್ಮ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸಮರದಲ್ಲಿ ಅದುವರೆಗೆ ಹಿಡಿದಿದ್ದ ಮೌನದ ತೆರೆಯನ್ನು ಸರಿಸಿ ಬಿರುದಾವಳಿಗಳು ಉಗ್ಗಡಿಸುತ್ತಿರಲು, ತಮ್ಮ ವಂಶದ ಕ್ರಮವನ್ನು ಪಾಲಿಸಿ, ದೂಹತ್ತಿ, ಲೌಡಿ ಮೊದಲಾದ ಆಯುಧಗಳನ್ನು ಲಗಾಮನ್ನು ಹಿಡಿದು ಶತ್ರುಗಳನ್ನು ಮೂದಲಿಸುತ್ತಾ ರಾವುತರು ಆವರಿಸಿದರು.

ಅರ್ಥ:
ಹಿಡಿ: ಬಂಧಿಸು; ಜವನಿಕೆ: ಪರದೆ; ಸಮರ: ಯುದ್ಧ; ಮೋನ: ಚೂಪಾದ; ಬಿಡುದಲೆ: ಬಿರಿಹೋಯ್ದ ಕೂದಲಿನ ತಲೆ; ಬಿರುದವಳಿ: ಗೌರವಸೂಚಕ ಹೆಸರು; ಉಗ್ಗಡಣೆ: ಉದ್ಘೋಷಣೆ, ಕೂಗು; ಸೋಲು: ಪರಾಭವ; ಅನ್ವಯ: ವಂಶ; ಪಾಲಿಸು: ನಡೆಸು; ಝಡಿಕೆ: ಅವಸರ; ದೂಹತ್ತಿ: ಎರಡು ಕಡೆ ಚೂಪಾದ ಹತ್ತಿ;
ಹಾಯ್ಕು: ತಿವಿ; ಹಿಡಿ: ಬಂಧಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಹತ್ತಳ:ಚಾವಟಿ, ಬಾರುಗೋಲು; ಗಡಣ: ಗುಂಪು; ಮೂದಲಿಸು: ಹಂಗಿಸು; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಹಿಡಿಯೆ +ಜವನಿಕೆ +ಸಮರ +ಮೋನದ
ಬಿಡುದಲೆಯ +ಬಿರುದಾವಳಿಯಲ್
ಉಗ್ಗಡಣೆಗಳ +ಸೋಲಿಸುತ +ತಮ್ಮ್+ಅನ್ವಯವ +ಪಾಲಿಸುತ
ಝಡಿವ +ದೂಹತ್ತಿಗಳ +ಹಾಯಿಕಿ
ಹಿಡಿವ +ಲೌಡಿಯ +ಹತ್ತಳದ+ ತನಿ
ಗಡಣಿಗರು +ಮೂದಲಿಸಿ+ ಕವಿದುದು +ರಾಯ+ರಾವುತರು

ಅಚ್ಚರಿ:
(೧) ದೂಹತ್ತಿ, ಲೌಡಿ, ಹತ್ತಳ – ಆಯುಧಗಳ ಹೆಸರು