ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ