ಪದ್ಯ ೧೫: ದ್ರೋಣರು ರಥದಲ್ಲಿ ಹೇಗೆ ಕಂಡರು?

ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ (ದ್ರೋಣ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಲ್ಲಗಂಟಿನಿಂದ ವಸ್ತ್ರವನ್ನುಟ್ಟು, ಬೆರಳಿನಲ್ಲಿದ್ದ ದರ್ಭೆಯನ್ನು ಕಿತ್ತೆಸೆದನು. ಕವಚ, ಶಿರಸ್ತ್ರಾಣ, ಬಾಹುರಕ್ಷೆಗಳನ್ನು ಭದ್ರವಾಗಿ ಧರಿಸಿದನು. ಬ್ರಾಹ್ಮನರನ್ನರ್ಚಿಸಿ ಅವರ ಆಶೀರ್ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಜಯ ಶಬ್ದವು ಎತ್ತೆತ್ತ ಮೊಳಗುತ್ತಿರಲು ರಥವನ್ನೇರಿದನು.

ಅರ್ಥ:
ನಿರಿ: ಸೀರೆಯ ಮಡಿಕೆ; ಉಡಿಗೆ: ಉಟ್ಟುಕೊಳ್ಳುವ ಬಟ್ಟೆ; ಮಲ್ಲ: ಕುಸ್ತಿಪಟು; ಗಂಟು: ಸೇರಿಸಿ ಕಟ್ಟಿದುದು; ಸೆರಗು:ಸೀರೆಯಲ್ಲಿ ಹೊದೆಯುವ ಭಾಗ; ಮೋಹಿಸು: ಅಪ್ಪಳಿಸುವಂತೆ ಮಾಡು; ಬೆರಳು: ಅಂಗುಲಿ; ದರ್ಭೆ: ಹುಲ್ಲು; ಹರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಮುರುಹು: ತಿರುಗಿಸು; ಬಿಗಿ: ಭದ್ರವಾಗಿ; ನಿಖಿಳ: ಎಲ್ಲಾ; ಭೂಸುರ: ಬ್ರಾಹ್ಮನ; ಉರು: ವಿಶೇಷವಾದ; ಮಂತ್ರಾಕ್ಷತೆ: ಆಶೀರ್ವದಿಸಿದ ಅಕ್ಕಿ; ಕೊಳು: ತೆಗೆದುಕೋ; ಇರಿ: ಚುಚ್ಚು, ಕರೆ; ಜಯ: ಗೆಲುವು; ರವ: ಶಬ್ದ; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ನಿರಿ+ಉಡಿಗೆಯಲಿ +ಮಲ್ಲ+ಗಂಟಿನ
ಸೆರಗ+ ಮೋಹಿಸಿ +ಬೆರಳ+ ದರ್ಭೆಯ
ಹರಿದು +ಬಿಸುಟನು +ಜೋಡು +ಸೀಸಕ +ಬಾಹು+ರಕ್ಷೆಗಳ
ಮುರುಹಿ +ಬಿಗಿದನು +ನಿಖಿಳ+ಭೂಸುರರ್
ಉರುವ +ಮಂತ್ರಾಕ್ಷತೆಯ +ಕೊಳುತಳ್
ಇರಿವ +ಜಯರವದೊಡನೆ +ರಥವೇರಿದನು +ಕಲಿ+ದ್ರೋಣ

ಅಚ್ಚರಿ:
(೧) ಬ್ರಾಹ್ಮಣ ವೇಷವನ್ನು ಕಳಚಿದ ಎಂದು ಹೇಳಲು – ಬೆರಳ ದರ್ಭೆಯ ಹರಿದು ಬಿಸುಟನು

ಪದ್ಯ ೧೪: ಕರ್ಣನ ಬಾಣಗಳನ್ನು ತಪ್ಪಿಸಲು ಯಾವ ಸಾಧನ ಉಪಯೋಗಿಸಿದರು?

ಕೋಲ ಕೋಳಾಹಳಕೆ ತೇರಿನ
ಗಾಲಿಗಳನೊಡ್ಡಿದರು ಹರಿಗೆಯ
ಹೇಳಿದರು ಹಮ್ಮುಗೆಯ ಕೊಯ್ದೊಡ್ಡಿದರು ರೆಂಚೆಗಳ
ಮೇಳೆಯವ ಮೋಹಿದರು ಕಂಬುಗೆ
ನೂಲು ಹರಿಗೆ ತನುತ್ರ ಸೀಸಕ
ಜಾಲ ಗುಳ ಹಕ್ಕರಿಕೆ ಹಲ್ಲಣ ಬಾಹುರಕ್ಷೆಗಳ (ಕರ್ಣ ಪರ್ವ, ೨೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳು ಮಾಡಿದ ಆತಂಕಕ್ಕೆ ಸೈನ್ಯವು ಭಯಭೀತರಾದರು. ಬಾಣಗಳನ್ನು ತಡೆಯಲು ತೇರಿನ ಗಾಲಿಗಳನ್ನು ಮರೆಯೊಡ್ಡಿದರು. ಗುರಾಣಿಗಳನ್ನು ಮರೆಮಾಡಿದರು. ಅನೆಗಳಿಗೆ ಕಟ್ಟಿದ ಹಗ್ಗಗಳನ್ನು ಕೊಯ್ದು ಆನೆಗಳ ಕವಚಗಳನ್ನು ಇದಿರಾಗಿ ಹಿಡಿದರು. ರಥದ ಹಿಂಭಾಗಗಳನ್ನು ಬಿಚ್ಚಿ ಅಡ್ಡ ಹಿಡಿದರು. ಗುರಾಣಿ, ಕವಚ, ತಲೆಟೋಪಿ, ಆನೆಗಳ ರೆಂಚೆ, ಜೀನು ಭುಜರಕ್ಷೆಗಳನ್ನು ಒಡ್ಡಿದರು.

ಅರ್ಥ:
ಕೋಲ: ಬಾಣ; ಕೋಳಾಹಳ: ಅವಾಂತರ, ಗದ್ದಲ; ತೇರು: ರಥ; ಗಾಲಿ: ಚಕ್ರ; ಒಡ್ಡು: ತೋರು, ಎದುರು ಹಿಡಿ; ಹರಿಗೆ: ಗುರಾಣಿ; ಹಮ್ಮುಗೆ: ಹಗ್ಗ, ಪಾಶ; ಕೊಯ್ದು: ಸೀಳು, ಕತ್ತರಿಸು; ಓಡು: ಪಲಾಯನಮಾಡು; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಮೋಹು: ತುಂಬಿಕೊಳ್ಳು; ಕಂಬು: ಆನೆ; ನೂಲು: ದಾರ, ಎಳೆ, ಸೂತ್ರ; ತನುತ್ರ:ಕವಚ; ಸೀಸಕ: ಶಿರಸ್ತ್ರಾಣ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ಹಕ್ಕರಿಕೆ: ಕುದುರೆಯ ಜೀನು; ಹಲ್ಲಣ: ಜೀನು, ಕಾರ್ಯ; ಜೀನು: ಕುದುರೆಯ ಬೆನ್ನ ಮೇಲೆ ಕುಳಿತುಕೊಳ್ಳಲು ಹಾಕುವ ಚರ್ಮದ ಸಾಧನ; ಬಾಹು: ಭುಜ; ರಕ್ಷೆ: ಕವಚ;

ಪದವಿಂಗಡಣೆ:
ಕೋಲ +ಕೋಳಾಹಳಕೆ +ತೇರಿನ
ಗಾಲಿಗಳನ್+ಒಡ್ಡಿದರು +ಹರಿಗೆಯ
ಹೇಳಿದರು+ ಹಮ್ಮುಗೆಯ +ಕೊಯ್ದೊಡ್ಡಿದರು+ ರೆಂಚೆಗಳ
ಮೇಳೆಯವ +ಮೋಹಿದರು +ಕಂಬುಗೆ
ನೂಲು +ಹರಿಗೆ +ತನುತ್ರ +ಸೀಸಕ
ಜಾಲ +ಗುಳ +ಹಕ್ಕರಿಕೆ+ ಹಲ್ಲಣ +ಬಾಹುರಕ್ಷೆಗಳ

ಅಚ್ಚರಿ:
(೧) ಸಾಲು ಪದಗಳ ಬಳಕೆ – ಹರಿಗೆಯ ಹೇಳಿದರು ಹಮ್ಮುಗೆಯ

ಪದ್ಯ ೩೧: ಯುದ್ಧಭೂಮಿಯಲ್ಲಿ ಯಾವ ವಸ್ತುಗಳು ಬಿದ್ದಿದ್ದವು?

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಡಿದು ಬಿದ್ದ ಕುದುರೆಯ ಪಕ್ಕರೆ, ತುಂಡಾಗಿ ಬಿದ್ದ ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ನುಗ್ಗಾಗಿದ್ದ ಆನೆ ಕುದುರೆಗಳ ಪಕ್ಷರಕ್ಷೆ, ಸ್ಫೋಟಗೊಂಡಿದ್ದ ಶಿರಸ್ತ್ರಾಣಗಳು, ತುಂಡಾಗಿದ್ದ ಬಾಹು ಮತ್ತು ದೇಹ ಕವಚಗಳು, ಪಾದರಕ್ಷೆಗಳು, ಹರಿದು ಬಿದ್ದ ಹಗ್ಗ, ಮುಖವಾಡ, ಪೀಠ, ಕೈಗೋಲು, ಕಡಿವಾಣ, ಕಬ್ಬಿ ಇವುಗಳು ರಣಭೂಮಿಯಲ್ಲಿ ಚೆಲ್ಲಿದ್ದವು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ಕುದುರೆಯ ಜೀನು, ಪಕ್ಕರೆ; ಸೀಳು: ಚೂರು, ತುಂಡು; ದಡಿ: ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ವಸ್ತ್ರಗಳ ಅಂಚು; ನೆಗ್ಗು:ಕುಗ್ಗು, ಕುಸಿ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ:ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಸಿಡಿ:ಸ್ಫೋಟ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ, ಚಪ್ಪಲಿ; ಉಡಿ: ಮುರಿ, ತುಂಡು ಮಾಡು; ಮಿಣಿ:ಚರ್ಮದ ಹಗ್ಗ; ಮೊಗ: ಮುಖ; ಮೊಗರಂಬ: ಮುಖವಾಡ; ಗದ್ದುಗೆ: ಪೀಠ; ಬಡಿಗೆ: ಕೋಲು, ದೊಣ್ಣೆ; ಸೂತ್ರಿಕೆ: ದಾರ, ನೂಲು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಕಡಿ:ತುಂಡು, ಹೋಳು; ಕುಸುರಿ: ತುಂಡು,ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಕೂಡೆ: ಜೊತೆ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಕಡಿದ +ಹಕ್ಕರಿಕೆಗಳ +ಸೀಳಿದ
ದಡಿಯ +ನೆಗ್ಗಿದ +ಗುಳದ +ರೆಂಚೆಯ
ಸಿಡಿದ +ಸೀಸಕ+ ಬಾಹುರಕ್ಷೆಯ+ ಜೋಡು +ಮೊಚ್ಚೆಯದ
ಉಡಿದ +ಮಿಣಿ +ಮೊಗರಂಬ+ ಗದ್ದುಗೆ
ಬಡಿಗೆಗಳ+ ಸೂತ್ರಿಕೆಯ +ಕಬ್ಬಿಯ
ಕಡಿಯಣದ +ಕುಸುರಿಗಳಲ್+ಎಸೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ಕಡಿ, ದಡಿ, ಸಿಡಿ, ಉಡಿ, ಬಡಿ – ಪ್ರಾಸ ಪದಗಳು
(೨) ಹಕ್ಕರಿ, ದಡಿ, ರೆಂಚೆ, ಸೀಸಕ, ಬಾಹುರಕ್ಷೆ, ಮಿಣಿ, ಮೊಗರಂಬ, ಗದ್ದುಗೆ, ಸೂತ್ರಿಕೆ – ರಣರಂಗದಲ್ಲಿ ಚೆಲ್ಲಿದ ವಸ್ತುಗಳು