ಪದ್ಯ ೩: ಯಾರ ವಿಷಬೀಜವು ಬಾಧಕವಾಯಿತು?

ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸಗೊಂಡ (ಗದಾ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ಅಯ್ಯೋ ನಮ್ಮ ಪೂರ್ವರಾಜರಿಗೆ ಇಂತಹ ವಿಧಿ ಬಂದಿತು. ಕೌರವನು ಧರ್ಮಕಂಟಕನಾಗಿಬಿಟ್ಟನು. ಶಕುನಿಯ ಅಭಿಪ್ರಾಯವೆಂಬ ವಿಷಬೀಜವು ದುರ್ಯೋಧನನ ಐಶ್ವರ್ಯಕ್ಕೆ ಬಾಧಕವಾಯಿತು. ಯುಧಿಷ್ಠಿರನ ಸೇನೆ ಎಷ್ಟು ಉಳಿಯಿತು ಎಂದು ಕೇಳಿದನು.

ಅರ್ಥ:
ಅಕಟ: ಅಯ್ಯೋ; ಪೂರ್ವ: ಹಿಂದಿನ; ರಾಜ: ನೃಪ; ಪ್ರಕರ: ಗುಂಪು, ಸಮೂಹ; ವಿಧಿ: ನಿಯಮ; ಕಂಟಕ: ವಿಪತ್ತು; ಪ್ರಭಾವ: ಬಲ, ಪರಾಕ್ರಮ; ಮತ: ವಿಚಾರ; ವಿಷ: ನಂಜು; ಬೀಜ: ಉತ್ಪತ್ತಿ ಸ್ಥಾನ, ಮೂಲ; ಬಾಧಕ: ತೊಂದರೆ; ತಂದು: ಬರೆಮಾಡು; ಸಕಲ: ಎಲ್ಲಾ; ಬಲ: ಶಕ್ತಿ; ಪರಿಶೇಷ: ಉಳಿದ; ಅರಸ: ರಾಜ; ಬೆಸ: ಅಪ್ಪಣೆ, ಆದೇಶ;

ಪದವಿಂಗಡಣೆ:
ಅಕಟ +ನಮ್ಮಯ +ಪೂರ್ವರಾಜ
ಪ್ರಕರಕ್+ಈ+ ವಿಧಿಯಾಯ್ತಲಾ +ಕಂ
ಟಕನಲಾ +ಧರ್ಮಪ್ರಭಾವಕೆ +ಕೌರವೇಶ್ವರನು
ಶಕುನಿ+ಮತ +ವಿಷ+ಬೀಜವೇ+ ಬಾ
ಧಕವ+ ತಂದುದಲಾ+ ಯುಧಿಷ್ಠಿರ
ಸಕಲ +ಬಲ +ಪರಿಶೇಷವೇನೆಂದ್+ಅರಸ+ ಬೆಸಗೊಂಡ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕಂಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
(೨) ಶಕುನಿಯನ್ನು ನೋಡಿದ ಪರಿ – ಶಕುನಿಮತ ವಿಷಬೀಜವೇ ಬಾಧಕವ ತಂದುದಲಾ

ಪದ್ಯ ೩೭: ದ್ರೋಣನು ಪಾಂಡವ ಸೈನ್ಯಕ್ಕೆ ಏನೆಂದು ಹೇಳಿದನು?

ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾಗದೆ ಜೋಡಿಸೆನುತಿದಿರಾದನಾ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃಷ್ಣನ ಕಪಟಮಂತ್ರವೇ ನಮಗೆ ಬಾಧಕವಾಗಿ ಈ ಹಗಲು ನಾವು ಸೋತೆವು. ಅಯ್ಯೋ ಕುನ್ನಿಗಳೇ, ನೀವಲ್ಲ ಗೆದ್ದದ್ದು, ನಿಮಗೆ ಕುರುಸೇನೆ ಸೋತೀತೇ? ಸಮಸ್ತ ಸನ್ನಾಹದೊಡನೆ ಈ ರಾತ್ರಿ ನಾವು ಯಾದವರೊಡನೆ ಯುದ್ಧಕ್ಕೆ ಬಂದಿದ್ದೇವೆ, ವಿಸ್ಮಯ ಪಡದೆ ಯುದ್ಧಕ್ಕೆ ಬನ್ನಿ ಎಂದು ದ್ರೋಣನು ಕೂಗಿದನು.

ಅರ್ಥ:
ಅಕಟ: ಅಯ್ಯೋ; ಫಡ: ತಿರಸ್ಕಾರದ ಮಾತು; ಕುನ್ನಿ: ನಾಯಿ; ಅಸುರ: ರಾಕ್ಷಸ; ಅಂತಕ: ಸಾವು; ಅಸುರಾಂತಕ: ಕೃಷ್ಣ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಬಾಧಕ: ತೊಂದರೆ ಮಾಡುವವ; ಸೋಲು: ಪರಾಭವ; ಸಕಲ: ಎಲ್ಲಾ; ಸನ್ನಾಹ: ಸನ್ನೆ, ಸುಳಿವು; ನಿಕರ: ಗುಂಪು; ಸಹೀತ: ಜೊತೆ; ಇರುಳು: ರಾತ್ರಿ; ರಣ: ಯುದ್ಧ; ಚಕಿತ: ಬೆರಗುಗೊಂಡು; ಜೋಡಿಸು: ಸೇರಿಸು; ಇದಿರು: ಎದುರು;

ಪದವಿಂಗಡಣೆ:
ಅಕಟ+ ಫಡ +ಕುನ್ನಿಗಳಿಗ್+ಅಸುರಾಂ
ತಕನ +ಕಪಟದ +ಮಂತ್ರವೇ +ಬಾ
ಧಕವ್+ಇದಲ್ಲದೆ +ನಿಮಗೆ +ಸೋಲುವುದುಂಟೆ +ಕುರುಸೇನೆ
ಸಕಲ +ಸನ್ನಾಹದಲಿ +ಯಾದವ
ನಿಕರ+ ಸಹಿತ್+ಈ+ಇರುಳು +ರಣದಲಿ
ಚಕಿತರಾಗದೆ +ಜೋಡಿಸೆನುತ್+ಇದಿರಾದನಾ +ದ್ರೋಣ

ಅಚ್ಚರಿ:
(೧) ಕೌರವರಿಗೆ ತೊಂದರೆಯಾದದ್ದು – ಅಸುರಾಂತಕನ ಕಪಟದ ಮಂತ್ರವೇ ಬಾಧಕವ್
(೨) ಪಾಂಡವರನ್ನು ತೆಗಳುವ ಪರಿ – ಅಕಟ ಫಡ ಕುನ್ನಿಗಳ್

ಪದ್ಯ ೨೨: ಊರ್ವಶಿಯು ಏಕೆ ಕರಗಿದಳು?

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತದು ವಾಮಪಾದವ
ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನ ಭಾವನೆಯನ್ನು ಕಂಡು, ಊರ್ವಶಿಯು ಅರ್ಜುನನನ್ನು ನೋಡಿ, ಇವನೇನು ಮತಿಹೀನನೋ, ಅಥವ ನಪುಂಸಕನೋ, ತಿಳುವಳಿಕೆಯಿಲ್ಲದವನೋ, ಬ್ರಾಹ್ಮಣನೋ, ಪರರಿಗೆ ಬಾಧೆಕೊಡುವ ಸ್ವಭಾವದವನೋ, ನೀಚನೋ, ದುಷ್ಟನೋ, ಮಾನವಾಕಾರವಿರುವ ಇನ್ನೇನೋ? ಮಹಾ ತಪಸ್ಸನ್ನು ಮಾಡಿದ ದೇವ ದಾನವರು ಬಂದು ತಮ್ಮ ಕಿರೀಟವನ್ನು ಎಡಪಾದಕ್ಕೆ ಇಟ್ಟು ನನ್ನನ್ನು ಬೇಡಿಕೊಳ್ಳುತ್ತಿದ್ದರು, ಅಂತಹ ನಾನು ಈಗ ಕೆಟ್ಟೆನಲ್ಲಾ ಎಂದು ಚಿಂತಿಸುತ್ತಾ ಊರ್ವಶಿಯು ಕರಗಿಹೋದಳು.

ಅರ್ಥ:
ವಿಕಳ:ಭ್ರಮೆ, ಭ್ರಾಂತಿ; ಮತಿ: ಬುದ್ಧಿ; ಮೇಣ್: ಅಥವ; ನಪುಂಸಕ: ಕೊಜ್ಜೆ, ಷಂಡ, ಖೋಜಾ, ನಿರ್ವೀರ್ಯ; ಜಡ: ಆಲಸ್ಯ, ಅಚೇತನ; ಶ್ರೋತ್ರಿ: ಬ್ರಾಹ್ಮಣ; ಬಾಧಕ: ತೊಂದರೆ ಕೊಡುವವ; ಖಳ: ಕ್ರೂರ; ಖೂಳ: ದುಷ್ಟ; ಮಾನವ: ನರ; ವಿಕಾರ: ಕುರೂಪ; ವಿಕಟ: ವಿಕಾರ, ಸೊಕ್ಕಿದ; ತಪಸ್ಸು: ಧ್ಯಾನ; ದೇವ: ಸುರರು; ದೈತ್ಯ: ರಾಕ್ಷಸ; ಮಕುಟ: ಕಿರೀಟ; ವಾಮಪಾದ: ಎಡ ಕಾಲು; ಅಕಟ: ಅಯ್ಯೋ; ಕೆಟ್ಟೆ: ಹಾಳಾಗು; ಕರಗು: ನೀರಾಗಿಸು, ಕನಿಕರ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ವಿಕಳಮತಿಯೋ +ಮೇಣ್+ಇವ +ನಪುಂ
ಸಕನೊ+ ಜಡನೋ +ಶ್ರೋತ್ರಿಯನೊ +ಬಾ
ಧಕನೊ+ ಖಳನೋ +ಖೂಳನೋ+ ಮಾನವ+ ವಿಕಾರವಿದೊ
ವಿಕಟ +ತಪಸಿನ +ದೇವ +ದೈತ್ಯರ
ಮಕುಟವಾಂತದು +ವಾಮಪಾದವನ್
ಅಕಟ+ ಕೆಟ್ಟೆನಲಾ+ಎನುತ +ಕರಗಿದಳು +ನಳಿನಾಕ್ಷಿ

ಅಚ್ಚರಿ:
(೧) ಅರ್ಜುನನನ್ನು ನೋಡಿದ ಬಗೆ – ವಿಕಳಮತಿ, ನಪುಂಸಕ, ಜಡ, ಶ್ರೋತ್ರಿ, ಬಾಧಕ, ಖಳ, ಖೂಳ, ವಿಕಾರ
(೨) ಊರ್ವಶಿಯ ಹಿರಿಮೆ – ವಿಕಟ ತಪಸಿನ ದೇವ ದೈತ್ಯರ ಮಕುಟವಾಂತದು ವಾಮಪಾದವ

ಪದ್ಯ ೩೬: ಧರ್ಮಜನ ಅಭಿಪ್ರಾಯವೇನು?

ಜನಪನಾಜ್ಞೆಯ ಮೀರಿ ಬಳಸುವು
ದನುಚಿತವು ನಮಗಿನ್ನು ಭೀಮಾ
ರ್ಜುನ ನಕುಲ ಸಹದೇವರಭಿಮತವೆಮ್ಮ ಮತವೆನಲು
ಮನಮೊದಲು ಕರಣಂಗಳಾತ್ಮಂ
ಗನುಚರರೊ ಬಾಧಕರೊ ನಿಮ್ಮಯ
ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು (ಸಭಾ ಪರ್ವ, ೧೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, ಧೃತರಾಷ್ಟ್ರನ ಆಜ್ಞೆಯನ್ನು ಮೀರುವುದು ಉಚಿತವಲ್ಲವೆಂಬುದು ನನ್ನ ಮತ. ಇಷ್ಟರಮೇಲೆ ನನ್ನ ತಮ್ಮಂದಿರೆಲ್ಲರ ಅಭಿಮತವೇ ನನ್ನ ಮತ ಎಂದನು. ಆಗ ಉಳಿದ ಪಾಂಡವರು ಮನಸ್ಸು ಇಂದ್ರಿಯಗಳೂ ಆತ್ಮನಿಗೆ ಸೇವಕರೋ ಅಥವ ಬಾಧಕರೋ, ನಾವೆಲ್ಲರೂ ನಿನ್ನ ಮನಸ್ಸಿನ ಒಲೆಯ ಉರಿಗಳಿದ್ದಂತೆ ಎಂದು ಹೇಳುತ್ತಾ ಧರ್ಮಜನ ಅಭಿಪ್ರಾಯವನ್ನು ಅನುಮೋದಿಸಿದರು.

ಅರ್ಥ:
ಜನಪ: ರಾಜ; ಆಜ್ಞೆ: ಆದೇಶ; ಮೀರು: ಉಲ್ಲಂಘಿಸು; ಬಳಸು: ಭ್ರಮಣ, ಸುತ್ತುವರಿ; ಅನುಚಿತ: ಸರಿಯಲ್ಲದ್ದು; ಅಭಿಮತ: ಅಭಿಪ್ರಾಯ, ವಿಚಾರ; ಮತ: ಅಭಿಪ್ರಾಯ, ಆಶಯ; ಮನ: ಮನಸ್ಸು; ಮೊದಲು: ಮುಂಚೆ; ಕರಣ: ಕಿವಿ, ಮನಸ್ಸು; ಆತ್ಮ: ಜೀವ; ಅನುಚರ: ಅನುಸರಿಸಿ ನಡೆಯುವ, ಸೇವಕ; ಬಾಧಕ: ತೊಂದರೆ ಕೊಡುವವ; ಚೆಮ್ಮಾವು: ಕೆಂಪಾದ ಮಾವು; ಪವನಜ: ಭೀಮ; ಆದಿ: ಮುಂತಾದವರು;

ಪದವಿಂಗಡಣೆ:
ಜನಪನ್+ಆಜ್ಞೆಯ +ಮೀರಿ +ಬಳಸುವುದ್
ಅನುಚಿತವು +ನಮಗಿನ್ನು +ಭೀಮಾ
ರ್ಜುನ +ನಕುಲ +ಸಹದೇವರ್+ಅಭಿಮತವ್+ಎಮ್ಮ +ಮತವೆನಲು
ಮನಮೊದಲು+ ಕರಣಂಗಳ್+ಆತ್ಮಂಗ್
ಅನುಚರರೊ +ಬಾಧಕರೊ +ನಿಮ್ಮಯ
ಮನಕೆ+ ಚೆಮ್ಮಾವುಗೆಗಳ್+ಎಂದರು +ಪವನಜಾದಿಗಳು

ಅಚ್ಚರಿ:
(೧) ಪಾಂಡವರು ಧರ್ಮಜನ್ ಅಭಿಪ್ರಾಯವನ್ನು ಅನುಮೋದಿಸಿದ ಪರಿ – ನಿಮ್ಮಯ
ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು
(೨) ಉಪಮಾನದ ಪ್ರಯೋಗ – ಮನಮೊದಲು ಕರಣಂಗಳಾತ್ಮಂಗನುಚರರೊ ಬಾಧಕರೊ

ಪದ್ಯ ೧೫: ಯಾವುದನ್ನು ಮಾಡಿದರೆ ಸಂಸಾರದಿಂದ ಬಿಡುಗಡೆ ದೊರಕುತ್ತದೆ?

ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀ ನನ್ಯರುಗಳಲ್ಲಿ
ಯುಕುತಿಯಿಂದವೆ ಮಾಡದಿರೆ ನೀ
ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲ್ಲಾ ಧರ್ಮದ ಸಾರವಿದು, ಬುದ್ಧಿಪೂರ್ವಕವಾಗಿ ಅರಿತುಕೋ. ನಿನಗೆ ಯಾವುದು ತೊಂದರೆ ಆಗುತ್ತದೆಯೋ ಅದನ್ನು ನೀನು ಬೇರೆಯವರಿಗೆ ಮಾಡಬೇಡ. ಇದರಂತೆ ನಡೆದರೆ ಸಂಸಾರ ಸಾಗರದ ಸುಳಿಯಿಂದ ನೀನು ಬಿಡುಗಡೆ ಹೊಂದುವೆ. ಇದೊಂದೇ ಮೋಕ್ಷಕ್ಕೆ ಸಾಧನ, ಇದನ್ನು ಎಲ್ಲರು ಒಪ್ಪುತ್ತಾರೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಸಕಲ:ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಚಿತ್ತವಿಸು: ಗಮನವಿಡು; ಬಾಧಕ: ತೊಂದರೆ; ಅನ್ಯ: ಬೇರೆ; ಯುಕುತಿ: ತರ್ಕಬದ್ಧವಾದ ವಾದಸರಣಿ; ಮುಕುತ: ಮುಕ್ತಿ, ಮೋಕ್ಷ; ಸಂಸಾರ: ಹುಟ್ಟು ಸಾವುಗಳ ಚಕ್ರ; ಸಾಧಕ: ನಿಪುಣ; ಜನಮತ: ಅಭಿಪ್ರಾಯ; ಮುನಿಪ: ಋಷಿ;

ಪದವಿಂಗಡಣೆ:
ಸಕಲ +ಧರ್ಮದ +ಸಾರವನು +ಮತಿ
ವಿಕಳನಾಗದೆ +ಚಿತ್ತವಿಸು +ಬಾ
ಧಕವದ್+ಆವುದು +ನಿನಗ್+ಅದನು +ನೀನ್ +ಅನ್ಯರುಗಳಲ್ಲಿ
ಯುಕುತಿಯಿಂದವೆ +ಮಾಡದಿರೆ +ನೀ
ಮುಕುತನಹೆ +ಸಂಸಾರದಲಿ +ಸಾ
ಧಕ+ವಿದೊಂದೇ +ಸಕಲ +ಜನಮತವೆಂದನಾ +ಮುನಿಪ

ಅಚ್ಚರಿ:
(೧) ಮತಿ, ಚಿತ್ತ – ಸಮನಾರ್ಥಕ ಪದ
(೨) ಸಾಧಕ, ಬಾಧಕ – ಪ್ರಾಸ ಪದ

ಪದ್ಯ ೫೮: ಮಗನ ಮಾತು ಕೇಳಿದ ಧೃತರಾಷ್ಟ್ರನು ಏನೆಂದನು?

ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ (ಆದಿ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸುಯೋಧನನ ಮಾತು ಕೇಳಿ, ಧೃತರಾಷ್ಟ್ರನು, ಅಯ್ಯೋ ಮಗನೇ, ಧರ್ಮರಾಯನು ನಿನಗೆ ಬಾಧಕನೆ, ಭೀಮಾರ್ಜುನರ ಮನಸ್ಸು ನಿನಗೆ ಕೆಡುಕನ್ನು ಮಾಡಲು ಒಪ್ಪುವುದಿಲ್ಲ, ಅವರು ಎಂದಿಗೂ ಧರ್ಮಜನ ಮಾತನ್ನು ಮೀರರು, ಸಕಲ ರಾಜ್ಯಕ್ಕೆ ಪಾಂಡುವೇ ರಾಜನಾದರು ನನ್ನೊಂದಿಗೆ ಎಂದು ತಪ್ಪಿ ನಡೆಯಲಿಲ್ಲ, ದುಷ್ಟಬುದ್ಧಿಗಳ ಉಪದೇಶವನ್ನು ಕೇಳಬೇಡ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ಅಕಟ: ಅಯ್ಯೊ; ಮಗ: ಸುತ; ಬಾಧಕ: ತೊಂದರೆ, ಕಂಟಕ; ಮತಿ: ಬುದ್ಧಿ; ಕಂಟಕ: ಕೆಡಕು; ಎರಗು: ಬೀಳು; ಮೀರು: ಉಲ್ಲಂಗಿಸು, ವಿರೋಧಿಸು; ನಡೆ: ಸಾಗು, ತೆರಳು; ನಂದನ: ಮಗ; ಸಕಲ: ಎಲ್ಲ; ರಾಜ್ಯ: ದೇಶ; ಪಾಲಕ: ರಾಜ; ವಿಕಳ: ದುರ್ಬುದ್ಧಿ, ದುಷ್ಟ; ಮತಿ: ಬುದ್ಧಿ;

ಪದವಿಂಗಡನೆ:
ಅಕಟ +ಮಗನೇ +ಧರ್ಮಸುತ+ ಬಾ
ಧಕನೆ+ ಭೀಮ+ಅರ್ಜುನರ+ ಮತಿ+ ಕಂ
ಟಕ+ದೊಳ್+ಎರಗದು +ಮೀರಿ +ನಡೆಯರು+ ಧರ್ಮನಂದನನ
ಸಕಲ+ರಾಜ್ಯಕೆ+ ಪಾಂಡುವೇ +ಪಾ
ಲಕನು+ ತನ್ನೊಳು+ ತಪ್ಪಿದನೆ+ ಬಿಡು
ವಿಕಳ+ಮತಿಗಳ+ ಮಾತನ್+ಎಂದನು +ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ಮಗ, ಸುತ, ನಂದನ; ಕಂಟಕ, ಬಾಧಕ; – ಸಮಾನಾರ್ಥಕ ಪದಗಳು
(೨) ಮಗ: ೧, ೬ ಸಾಲಿನಲ್ಲಿ ಕಾಣುವ ಪದಗಳು; ಮತಿ: ೨, ೬ ಸಾಲಿನಲ್ಲಿ ಕಾಣುವ ಪದಗಳು
(೩) ಜೋಡಿ ಪದಗಳು: ಪಾಂಡುವೇ ಪಾಲಕನು; ತನ್ನೊಳು ತಪ್ಪಿದನೆ