ಪದ್ಯ ೩: ಕೊಳದ ಬಳಿ ಯಾರು ಬಂದು ನಿಂತರು?

ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ (ಗದಾ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ಶತ್ರುಸೇನೆಯು ಬಂದು ಕೊಳದ ತೀರವನ್ನು ಮುತ್ತಿ ಸುತ್ತುವರಿದು ಭೂಮಿ ಬಿರಿಯುವಂತೆ ಬೊಬ್ಬೆಯನ್ನು ಹಾಕಿದರು. ಯುಧಿಷ್ಠಿರನು ಪಲ್ಲಕ್ಕಿಯಲ್ಲಿ ಬಂದಿಳಿದು ನಿಂತನು. ಅವನೊಡನೆ ಭೀಮಾರ್ಜುನನಕುಲಸಹದೇವರೂ, ಶ್ರೀಕೃಷ್ಣನೂ ಧೃಷ್ಟದ್ಯುಮ್ನ ಶಿಖಂಡಿ ಬಂದು ನಿಂತರು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಕೊಳ: ಸರೋವರ; ತೀರ: ದಡ; ವೇಡೈಸು: ಸುತ್ತುವರಿ; ಸರಸಿ: ಸರೋವರ; ಬಂದಿಕಾರ: ಕಳ್ಳ, ಸೆರೆಹಿಡಿಯಲ್ಪಟ್ಟವ; ಬೊಬ್ಬಿರಿ: ಗರ್ಜಿಸು; ಅಬ್ಬರ: ಆರ್ಭಟ; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಅಂದಣ: ಪಲ್ಲಕ್ಕಿ, ಮೇನೆ; ಐತಂದು: ಬಂದು ಸೇರು; ಸೂನು: ಮಗ; ಸಹಿತ: ಜೊತೆ; ನಿಂದು: ನಿಲ್ಲು; ಯಮಳ: ನಕುಲ ಸಹದೇವ;

ಪದವಿಂಗಡಣೆ:
ಬಂದುದ್+ಅರಿಬಲ+ ಕೊಳನ +ತೀರದಲ್
ಅಂದು +ವೇಢೈಸಿದರು+ ಸರಸಿಯ
ಬಂದಿಕಾರರು +ಬೊಬ್ಬಿರಿದರ್+ಅಬ್ಬರಕೆ +ಧರೆ +ಬಿರಿಯೆ
ಅಂದಣದಲ್+ಐತಂದು +ಧರ್ಮಜ
ನಿಂದನ್+ಅರ್ಜುನ +ಭೀಮ +ಯಮಳ +ಮು
ಕುಂದ +ಸಾತ್ಯಕಿ +ದ್ರುಪದ+ಸೂನು +ಶಿಖಂಡಿಗಳು+ ಸಹಿತ

ಅಚ್ಚರಿ:
(೧) ಕೊಳ, ಸರಸಿ – ಸಮಾನಾರ್ಥಕ ಪದ
(೨) ಶಬ್ದದ ತೀವ್ರತೆ – ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ

ಪದ್ಯ ೧೯: ಕರ್ಣನು ಮೊದಲು ಯಾರ ಬಳಿಗೆ ಹೊರಟನು?

ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಮ್ದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರುಮಿಗೆ ಕುರುಭೂಮಿಗೈತಂದ (ದ್ರೋಣ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಹೀಗೆ ಹೇಳಿದ ಕರ್ಣನು ಕೌರವನನ್ನು ಬೀಳುಕೊಂಡು ರಣರಂಗಕ್ಕೆ ಬಂದನು. ದೀಪಗಳನ್ನು ಹಿಡಿದವರು ದಾರಿತೋರುತ್ತಿದ್ದರು. ಕತ್ತಿಯನ್ನು ಹಿರಿದ ಭಟರು ಅವನ ಸುತ್ತಲಿದ್ದರು. ಮುಂದೆ ಅವನನ್ನು ಹೊಗಳುತ್ತಾ ಭಟರು ಹೊರಟರು. ಕೋಲಾಹಲದ ನಡುವೆ ಕರ್ಣನು ಭೀಷ್ಮರತ್ತ ನಡೆದು ಬಂದನು. ಸಮರದಲ್ಲಿ ಮುಂದೆಹೆಜ್ಜೆಯನಿಡುತ್ತಾ ಸೈನಿಕರನ್ನು ಸೆರೆಹಿಡಿಯುವವನೇ ಸಾವಧಾನ, ಧೀರನೇ ಮುಂದೆ ಬಾ ಎಂದು ಘೋಷಿಸುತ್ತಿದ್ದರು.

ಅರ್ಥ:
ನೃಪತಿ: ರಾಜ; ಬೀಳುಕೊಂಡು: ತೆರಳು; ಇನ: ಸೂರ್ಯ; ನಂದನ: ಮಗ; ಬೊಂಬಾಳ: ಕಣ್ಣು ಕೋರೈಸುವ ಪ್ರಭೆಯುಳ್ಳ ದೀಪ; ದೀಪ: ಬೆಳಕು; ಸಂದಣಿ: ಗುಂಪು, ಸಮೂಹ; ಸೆಳೆ: ಆಕರ್ಷಿಸು; ಅಡಾಯ್ದ: ಕತ್ತಿ; ಭಟ: ಸೈನಿಕ; ಮುತ್ತಿಗೆ: ಆವರಿಸು; ಪಾಯವಧಾರು: ಎಚ್ಚರಿಕೆ; ರಿಪುನೃಪ: ವೈರಿರಾಜ; ಬಂದಿಕಾರ: ಸೈನಿಕರನ್ನು ಬಂಧಿಸುವವನೆ; ಅವಧಾರು: ಸಾವಧಾನ; ದಿರುಪ: ಧೀರ; ಕಳಕಳ: ಉದ್ವಿಗ್ನತೆ; ಗಜರು: ಗರ್ಜಿಸು; ಐತಂದು: ಬಂದು ಸೇರು;

ಪದವಿಂಗಡಣೆ:
ಎಂದು +ನೃಪತಿಯ +ಬೀಳುಕೊಂಡ್+ಇನ
ನಂದನನು + ಬೊಂಬಾಳ +ದೀಪದ
ಸಂದಣಿಗಳಲಿ +ಸೆಳೆದ್+ ಅಡಾಯ್ದದ +ಭಟರ +ಮುತ್ತಿಗೆಯ
ಮುಂದೆ +ಪಾಯವಧಾರು+ ರಿಪುನೃಪ
ಬಂದಿಕಾರವಧಾರು +ಧಿರುಪಯ
ವೆಂದು +ಕಳಕಳ +ಗಜರುಮಿಗೆ+ ಕುರುಭೂಮಿಗ್+ಐತಂದ

ಅಚ್ಚರಿ:
(೧) ಪಾಯವಧಾರು, ಬಂದಿಕಾರವಧಾರು – ಪದದ ಬಳಕೆ