ಪದ್ಯ ೩೪: ಭೀಮನು ಕೌರವನನ್ನು ಹೇಗೆ ಹಂಗಿಸಿದನು?

ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ್ಯ ಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೇವಲ ನಿಷ್ಪ್ರಯೋಜಕ ಮಾತುಗಳಿಂದ ಬೈದರೆ ನೀನೇನು ದೊಡ್ಡವನೇ? ಬಾಯಿಂದ ಗದಾಪ್ರಹಾರ ಮಾಡುವೆಯೋ ಅಥವ ಕೈಗಳಿಂದ ತೋರುವೆಯೋ? ನೀನು ಜಾತಿಯಿಂದ ಕ್ಷತ್ರಿಯನಲ್ಲವೇ? ನಿನ್ನ ಕೈಯಲ್ಲಿ ಆಯುಧವಿದೆ, ಗುರಿಯಾಗಿ ನಾನಿದ್ದೇನೆ, ನಿನ್ನಲ್ಲಡಗಿರುವ ಪರಾಕ್ರಮವನ್ನು ಪ್ರಕಟಿಸು ಎನ್ನುತ್ತಾ ಭಿಮನು ಕೌರವನನ್ನು ತಿವಿದನು.

ಅರ್ಥ:
ಹೊಯ್ದು: ಹೊಡೆ; ತೋರು: ಗೋಚರಿಸು; ಬಂಜೆ: ನಿಷ್ಫಲ; ನುಡಿ: ಮಾತು; ಬಯ್ದು: ಜರೆ, ಹಂಗಿಸು; ಅಧಿಕ: ಹೆಚ್ಚು; ಬಾಹು: ತೋಳು; ಮೇಣ್: ಅಥವ; ಮುಖ: ಆನನ; ಜಾತಿ: ಕುಲ; ಕಯ್ದು: ಆಯುಧ; ಪಣ: ಸ್ಪರ್ಧೆ, ಧನ; ಗುಪ್ತ: ಗುಟ್ಟು; ಪ್ರತಾಪ: ಶಕ್ತಿ, ಪರಾಕ್ರಮ; ಪ್ರಕಟಿಸು: ತೋರು; ತಿವಿ: ಚುಚ್ಚು;

ಪದವಿಂಗಡಣೆ:
ಹೊಯ್ದು +ತೋರಾ +ಬಂಜೆ +ನುಡಿಯಲಿ
ಬಯ್ದಡ್+ಅಧಿಕನೆ +ಬಾಹುವಿಂ +ಹೊರ
ಹೊಯ್ದವನೊ+ ಮೇಣ್ +ಮುಖದಲೋ +ನೀನಾರು +ಜಾತಿಯಲಿ
ಕಯ್ದು+ ನಿನಗಿದೆ +ಲಕ್ಷ್ಯ+ ಪಣ +ನಮಗ್
ಎಯ್ದುವಡೆ +ಗುಪ್ತ+ಪ್ರತಾಪವನ್
ಎಯ್ದೆ +ಪ್ರಕಟಿಸ್+ಎನುತ್ತ+ ತಿವಿದನು +ಭೀಮ +ಕುರುಪತಿಯ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಬಂಜೆ ನುಡಿಯಲಿಬಯ್ದಡಧಿಕನೆ
(೨) ಕೌರವನನ್ನು ಕೆರಳಿಸುವ ಪರಿ – ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ

ಪದ್ಯ ೨೮: ಅರ್ಜುನನು ಉತ್ತರನನ್ನು ಎಲ್ಲಿಗೆ ಬರಲು ಹೇಳಿದನು?

ಪೊಡವಿಪತಿಗಳ ಬಸಿರಬಂದೀ
ಯೊಡಲ ಕಕ್ಕುಲಿತೆಯಲಿ ಕಾಳಗ
ದೆಡೆಗೆ ಬಾರದರಿಲ್ಲ ಭೂತ ಭವದ್ಭವಿಷ್ಯದಲಿ
ನುಡಿಯಲಹುದೇ ಬಂಜೆನುಡಿಯನು
ಸುಡುಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರಗೆ ಕಾದಲು ಬೇಡ ಬಾಯೆಂದ (ವಿರಾಟ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ರಾಜನ ಬಸಿರಿನಲ್ಲಿ ಹುಟ್ಟಿ ಕ್ಷತ್ರಿಯ ಜಾತಿಯವನಾಗಿ ದೇಹವನ್ನುಳಿಸಿಕೊಳ್ಳಬೇಕೆಂಬ ಚಿಂತೆಯಿಂದ ಯುದ್ಧವೇ ಬೇಡವೆಂದು ಹೋಗುವವನು, ಹಿಂದೂ, ಮುಂದೂ, ಇಂದೂ ಇಲ್ಲ. ವ್ಯರ್ಥವಾದ ಮಾತನ್ನಾಡಬಹುದೇ? ಸುಡು ಆ ವ್ಯರ್ಥದ ಮಾತುಗಳನ್ನು ಎಲವೋ ರಾಜಕುಲಕ್ಕೆ ಹೊರಗಿನವನಾದವನೇ ರಥಕ್ಕೆ ಬಾ, ಯುದ್ಧವನ್ನು ಮಾಡಬೇಡೆಂದು ಹೇಳಿದನು.

ಅರ್ಥ:
ಪೊಡವಿ: ಭೂಮಿ; ಪತಿ: ಒಡೆಯ; ಪೊಡವಿಪತಿ: ರಾಜ; ಬಸಿರು: ಹೊಟ್ಟೆ; ಒಡಲು: ದೇಹ; ಕಕ್ಕುಲಿತೆ: ಚಿಂತೆ, ಪ್ರೀತಿ; ಕಾಳಗ: ಯುದ್ಧ; ಬಾರದು: ಬಂದು; ಭೂತ: ಹಿಂದಿನ; ಭವಿಷ್ಯ: ಮುಂದೆ ನಡೆಯುವ; ನುಡಿ: ಮಾತು; ಬಂಜೆ: ಗೊಡ್ಡು; ಸುಡು: ದಹಿಸು; ಬಾಹಿರ: ಹೊರಗಿನವ; ವರೂಥ: ತೇರು, ರಥ; ಹೊರಗೆ: ಬಾಹಿರ; ಕಾದು: ಹೋರಾಡು; ಬೇಡ: ಸಲ್ಲದು, ಕೂಡದು; ಬಾ: ಆಗಮಿಸು;

ಪದವಿಂಗಡಣೆ:
ಪೊಡವಿಪತಿಗಳ +ಬಸಿರಬಂದ್+ಈ
ಒಡಲ +ಕಕ್ಕುಲಿತೆಯಲಿ +ಕಾಳಗದ್
ಎಡೆಗೆ +ಬಾರದರಿಲ್ಲ+ ಭೂತ +ಭವದ್+ಭವಿಷ್ಯದಲಿ
ನುಡಿಯಲಹುದೇ +ಬಂಜೆ+ನುಡಿಯನು
ಸುಡುಸುಡ್+ಎಲವೋ +ರಾಜಬಾಹಿರ
ನಡೆ +ವರೂಥದ +ಹೊರಗೆ +ಕಾದಲು +ಬೇಡ +ಬಾಯೆಂದ

ಅಚ್ಚರಿ:
(೧) ಉತ್ತರನನ್ನು ಒಲಿಸುವ ಪರಿ – ಎಲವೋ ರಾಜಬಾಹಿರ ನಡೆ ವರೂಥದ ಹೊರಗೆ ಕಾದಲು ಬೇಡ ಬಾಯೆಂದ
(೨) ಪೊಡವಿಪತಿ, ರಾಜ – ಸಮನಾರ್ಥಕ ಪದಗಳು

ಪದ್ಯ ೨೬: ಕ್ಷಮೆಗೆ ಮಿತಿಯೆಂಬು ಇರಬೇಕೆ?

ನೀರು ಹೊರಗಿಕ್ಕುವುದು ಮೂರೇ
ಬಾರಿ ಬಳಿಕದು ಪಾಪಿ ಝಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷದ ಬಗೆ ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕ್ಷಮೆಗೂ ಒಂದು ಮಿತಿ ಇದೆ. ತನ್ನಲ್ಲಿ ಮುಳುಗಿದವನನ್ನು ನೀರು ಮೂರು ಬಾರಿ ಮಾತ್ರ ಮೇಲಕ್ಕೆತ್ತುತ್ತದೆ. ನಾಲ್ಕನೆಯ ಬಾರಿ ಝಾಡಿಸಿದರೆ ಮುಳುಗಿಸಿಯೇ ಬಿಡುತ್ತದೆ. ಅನ್ಯಾಯ ಮಿತಿಮೀರಿರುವ ಈಗ ನಾನೇನು ಮಾಡಲಿ, ಸೈರಣೆಗೂ ಒಂದು ಮಿತಿಯಿಲ್ಲವೇ? ಪೌರುಷವು ಬಂಜೆಯಾಯಿತೆ? ನ್ಯಾಯ ವಿಮರ್ಶೆಯಲ್ಲಿ ಮೆಲ್ಲನೆ ಜಾರಿಕೊಂಡು ಹೋಗುತ್ತಿರುವಿರಿ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ನೀರು: ಜಲ; ಹೊರಗೆ: ಆಚೆ; ಬಾರಿ: ಸರದಿ; ಬಳಿಕ: ನಂತರ; ಪಾಪಿ: ದುಷ್ಟ; ಝಾಡಿಸು: ಜೋರಾಗಿ ತಳ್ಳು; ಸೈರಿಸು: ತಾಳ್ಮೆ; ಅನ್ಯಾಯ: ಸರಿಯಲ್ಲದ; ಬಹುಳತೆ: ಹೆಚ್ಚು; ಅವಧಿ: ಕಾಲ; ಪೌರುಷ: ವೀರತನ; ಬಗೆ: ರೀತಿ; ಬಂಜೆ: ಮಕ್ಕಳಿಲ್ಲದ ಸ್ಥಿತಿ; ಆರಯಿಕೆ: ನೋಡಿಕೊಳ್ಳು; ಜುಣುಗು: ಜಾರಿಕೊಳು; ಜಾರು: ಕೆಳಗೆ ಬೀಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ನೀರು +ಹೊರಗಿಕ್ಕುವುದು +ಮೂರೇ
ಬಾರಿ +ಬಳಿಕದು +ಪಾಪಿ +ಝಾಡಿಸೆ
ಸೈರಿಸದು+ ಅನ್ಯಾಯ +ಬಹುಳತೆಗೇನ+ ಮಾಡುವೆನು
ಸೈರಣೆಗೆ+ ತಾನ್+ಅವಧಿಯಿಲ್ಲಾ
ಪೌರುಷದ+ ಬಗೆ +ಬಂಜೆಯಾಯಿತು
ಆರಯಿಕೆಯಲಿ +ಜುಣುಗಿ +ಜಾರುವಿರೆಂದಳ್+ಇಂದುಮುಖಿ

ಅಚ್ಚರಿ:
(೧) ಲೋಕದ ನುಡಿ – ನೀರು ಹೊರಗಿಕ್ಕುವುದು ಮೂರೇಬಾರಿ ಬಳಿಕದು ಪಾಪಿ ಝಾಡಿಸೆ ಸೈರಿಸದು
(೨) ಪೌರುಷವು ಕಡಿಮೆಯಾಯಿತೆ ಎಂದು ಹೇಳಲು – ಪೌರುಷದ ಬಗೆ ಬಂಜೆಯಾಯಿತು

ಪದ್ಯ ೫೧: ಮನುಷ್ಯರಲ್ಲಿ ಉತ್ತಮನಾದವನ ಲಕ್ಷಣಗಳೇನು?

ದಿನವ ಬಂಜೆಯ ಮಾಡದಾವಗ
ವಿನಯಪರನಹ ದೈವ ಗುರು ಪೂ
ಜನೆಯ ಬುಧಸೇವನೆಯ ಕಾಲೋಚಿತದಿ ವಿವರಿಸುವ
ಮನನದಿಂದಾ ಶ್ರವಣ ನಿಧಿ ಧ್ಯಾ
ಸನದೆ ದಿನವನು ಕಳೆಯುವಾತನು
ಮನುರರೊಳಗುತ್ತಮನಲೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮನುಷ್ಯರಲ್ಲಿ ಶ್ರೇಷ್ಠನಾದವನ ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸುತ್ತಾನೆ. ದಿನವನ್ನು ನಿಷ್ಪ್ರಯೋಜವಾಗಿ ಕಳೆಯದೆ, ವಿನಯ ಸಂಪನ್ನನು, ದೇವರ ಗುರುಗಳ ಆರಾಧನೆಯನ್ನು ಮಾಡುವ, ವಿದ್ವಾಂಸರ ಗೋಷ್ಠಿಗಳನ್ನು ಉಚಿತ ಕಾಲದಲ್ಲಿ ಮಾಡುತ್ತಾ, ಆತ್ಮ ವಿಚಾರದ ಶ್ರವಣ, ಮನನ, ಅದರ ಮೇಲೆ ಏಕಾಗ್ರಚಿತ್ತನಾಗಿ ಆಲೋಚಿಸುವವನು ಹೀಗೆ ಉಪಯುಕ್ತವಾಗಿ ದಿನವನ್ನು ಕಳೆಯುವವನು ಮನುಷ್ಯರಲ್ಲಿ ಉತ್ತಮನಾದವನು ಎಂದು ವಿದುರ ನುಡಿದ.

ಅರ್ಥ:
ದಿನ: ವಾರ; ಬಂಜೆ:ನಿಷ್ಫಲ; ವಿನಯ: ಒಳ್ಳೆಯತನ, ಸೌಜನ್ಯ; ದೈವ: ದೇವರು; ಗುರು: ಆಚಾರ್ಯ; ಪೂಜನೆ: ಆರಾಧನೆ, ಪೂಜೆ; ಬುಧ: ವಿದ್ವಾಂಸ; ಸೇವನೆ: ಉಪಚಾರ, ಶುಶ್ರೂಷೆ; ಕಾಲ: ಸಮಯ; ಉಚಿತ: ಸರಿಯಾದ; ವಿವರ: ವಿಸ್ತಾರ; ಮನನ: ಅಂತರಂಗದಲ್ಲಿ ಆಲೋಚಿಸುವುದು; ಶ್ರವಣ: ಕೇಳುವುದು; ನಿಧಿಧ್ಯಾಸನ: ಏಕಾಗ್ರತೆ; ಕಳೆಯುವ: ವ್ಯಯಿಸುವ; ಮನುಜ: ಮನುಷ್ಯ; ಉತ್ತಮ: ಶ್ರೇಷ್ಠ;

ಪದವಿಂಗಡಣೆ:
ದಿನವ +ಬಂಜೆಯ +ಮಾಡದ್+ಆವಗ
ವಿನಯಪರನಹ +ದೈವ +ಗುರು +ಪೂ
ಜನೆಯ +ಬುಧ+ಸೇವನೆಯ +ಕಾಲ+ಉಚಿತದಿ +ವಿವರಿಸುವ
ಮನನದಿಂದಾ +ಶ್ರವಣ +ನಿಧಿ ಧ್ಯಾ
ಸನದೆ +ದಿನವನು +ಕಳೆಯುವ್+ಆತನು
ಮನುರರೊಳಗ್+ಉತ್ತಮನಲೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ವ್ಯರ್ಥವಾಗಿ ಕಳೆಯಬಾರದು ಎಂದು ಹೇಳಲು ಬಂಜೆಯ ಮಾಡದ ಪದದ ಪ್ರಯೋಗ
(೨) ಶ್ರವಣ, ಮನನ, ನಿಧಿಧ್ಯಾಸನ – ಪದಗಳ ಪ್ರಯೋಗ
(೩) ದಿನವ – ೨ ಬಾರಿ ಪ್ರಯೋಗ