ಪದ್ಯ ೨೮: ಶಲ್ಯನು ಪಾಂಡವ ಸೇನೆಗೆ ಯಾರನ್ನು ಕರೆತರಲು ಹೇಳಿದನು?

ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಲ್ಯನು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿ, ನಿಮ್ಮ ದೊರೆಯೆಲ್ಲಿ? ಅವನು ಯುದ್ಧಕ್ಕೆ ಬರಲಿ, ನೀವು ಯುದ್ಧ ಮಾಡಬಹುದು, ನಾನು ಅದನ್ನು ಸ್ವೀಕರಿಸುವುದಿಲ್ಲ. ಕೌರವನೊಡನೆ ಯುದ್ಧಮಾಡುವುದು ಧರ್ಮಜನಿಗೆ ಸಲ್ಲದು, ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಕ್ಕೆ ಬರಲಿ ಎಂದು ಘೋಷಿಸಿದನು.

ಅರ್ಥ:
ತಡೆ: ನಿಲ್ಲಿಸು; ನಿಂದು: ನಿಲ್ಲು; ಪರಬಲ: ವೈರಿಸೈನ್ಯ; ಒಡೆಯ: ನಾಯಕ; ಆವೆಡೆ: ಯಾವ ಕಡೆ; ಸೇನೆ: ಸೈನ್ಯ; ಕದನ: ಯುದ್ಧ; ಕೊಂಬು: ಸ್ವೀಕರಿಸು; ಕೈದು: ಆಯುಧ; ಸೆಳೆ: ಆಕರ್ಷಿಸು; ಉಳಿದ: ಮಿಕ್ಕ; ಪೊಡವಿ: ಭೂಮಿ; ಸಲ್ಲದು: ಸರಿಯಾದುದಲ್ಲ; ಗಡ: ಅಲ್ಲವೆ; ಶರಾಸನ: ಬಿಲ್ಲು; ಆಸನ: ಕೂರುವ ಸ್ಥಳ; ಶರ: ಬಾಣ; ವಿಡಿದು: ಹಿಡಿದು, ಗ್ರಹಿಸು; ಉರುಬು: ಅತಿಶಯವಾದ ವೇಗ;

ಪದವಿಂಗಡಣೆ:
ತಡೆದು +ನಿಂದನು +ಪರಬಲವ +ನಿಮ್ಮ್
ಒಡೆಯನ್+ಆವೆಡೆ+ ಸೇನೆ +ಕದನವ
ಕೊಡಲಿ +ಕೊಂಬವನಲ್ಲ+ ಕೈದುವ +ಸೆಳೆಯೆನ್+ಉಳಿದರಿಗೆ
ಪೊಡವಿಗ್+ಒಡೆಯನು +ಕೌರವೇಶ್ವರ
ನೊಡನೆ +ಸಲ್ಲದು +ಗಡ +ಶರಾಸನ+
ವಿಡಿಯ +ಹೇಳಾ +ಧರ್ಮಜನನೆಂದ್+ಉರುಬಿದನು +ಶಲ್ಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ
(೨) ಕ ಕಾರದ ಸಾಲು ಪದ – ಕದನವ ಕೊಡಲಿ ಕೊಂಬವನಲ್ಲ ಕೈದುವ

ಪದ್ಯ ೧೮: ಭೂರಿಶ್ರವನು ಯಾದವರನ್ನು ಯಾವುದಕ್ಕೆ ಹೋಲಿಸಿದನು?

ಪೊಡವಿಯೊಳು ಯಾದವರು ಕ್ಷತ್ರಿಯ
ಗೆಡುಕರದರೊಳು ಹುಟ್ಟಿದನು ಕೊಲೆ
ಗಡಿಗ ಹಾವಿನ ಹುತ್ತದಲಿ ಹಾವ್ಮೆಕ್ಕೆ ಬೆಳೆದಂತೆ
ನಡೆವಳಿಯ ನೋಡಿದರೆ ಲೋಗರ
ಮಡದಿಯರು ತನ್ನವರು ಠಕ್ಕಿನ
ಕಡಲು ಕೃಷ್ಣನ ನಂಬಲಿಹಪರವಿಲ್ಲ ನಿಮಗೆಂದ (ದ್ರೋಣ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭೂಮಿಯಲ್ಲಿ ಯಾದವರು ಕ್ಷತ್ರಿಯ ಕೆಡುಕರು. ಅವರ ಕುಲದಲ್ಲಿ ಹುಟ್ಟಿದರೆ, ಹುತ್ತದಲ್ಲಿ ಹಾವುಮೆಕ್ಕೆ ಹುಟ್ಟಿದಂತೆ, ಈ ಕೃಷ್ಣನು ಹುಟ್ತಿದ್ದಾನೆ, ಇವನ ನಡತೆಯೋ, ಹೇಳಲೇಬಾರದು, ಕಂಡವರ್ ಅಹೆಂಡ್ರೇ ಇವನವರು. ಇವನು ಮೋಸದ ಸಾಗರ. ಇವನನ್ನು ನಂಬಿದರೆ ನಿಮಗೆ ಇಹವೂ ಇಲ್ಲ ಪರವೂ ಇಲ್ಲ ಎಂದು ಕೃಷ್ಣನ ಬಗ್ಗೆ ಹೇಳಿದನು.

ಅರ್ಥ:
ಪೊಡವಿ: ಭೂಮಿ; ಕೆಡುಕ: ದುಷ್ಟ; ಹುಟ್ಟು: ಜನಿಸು; ಕೊಲೆ: ಸಾಯಿಸು; ಹಾವು: ಉರಗ; ಹುತ್ತ: ಹಾವು ವಾಸಿಸುವ ಸ್ಥಳ; ಮೆಕ್ಕೆ: ಒಂದು ಬಗೆಯ ಜೋಳ; ಬೆಳೆ: ದೊಡ್ಡದಾಗು; ನಡೆವಳಿ: ವರ್ತನೆ, ನಡವಳಿಕೆ; ನೋಡು: ವೀಕ್ಷಿಸು; ಲೊಗ: ಜನ; ಮಡದಿ: ಹೆಂಡತಿ; ಠಕ್ಕು: ಮೋಸ; ಕಡಲು: ಸಾಗರ; ನಂಬು: ವಿಶ್ವಾಸವಿಡು; ಇಹಪರ: ಈ ಲೋಕ ಮತ್ತು ಪರಲೋಕ;

ಪದವಿಂಗಡಣೆ:
ಪೊಡವಿಯೊಳು +ಯಾದವರು +ಕ್ಷತ್ರಿಯ
ಕೆಡುಕರ್+ಅದರೊಳು +ಹುಟ್ಟಿದನು +ಕೊಲೆ
ಗಡಿಗ +ಹಾವಿನ +ಹುತ್ತದಲಿ +ಹಾವ್ಮೆಕ್ಕೆ +ಬೆಳೆದಂತೆ
ನಡೆವಳಿಯ +ನೋಡಿದರೆ +ಲೋಗರ
ಮಡದಿಯರು +ತನ್ನವರು +ಠಕ್ಕಿನ
ಕಡಲು +ಕೃಷ್ಣನ +ನಂಬಲ್+ಇಹಪರವಿಲ್ಲ +ನಿಮಗೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾವಿನ ಹುತ್ತದಲಿ ಹಾವ್ಮೆಕ್ಕೆ ಬೆಳೆದಂತೆ
(೨) ಕೃಷ್ಣನನ್ನು ಕರೆದ ಪರಿ – ಠಕ್ಕಿನ ಕಡಲು, ಯಾದವರು ಕ್ಷತ್ರಿಯ ಗೆಡುಕರದರೊಳು ಹುಟ್ಟಿದನು ಕೊಲೆ
ಗಡಿಗ

ಪದ್ಯ ೫೭: ಭಗದತ್ತನು ಏನನ್ನು ಅರ್ಜುನನ ಕಡೆಗೆ ಎಸೆದನು?

ಕುಡಿ ಕಿರೀಟಿಯ ರಕುತವನು ಹಗೆ
ಕೆಡಲಿ ಕೌರವ ರಾಯನಾಳಲಿ
ಪೊಡವಿಯನು ಪರಿತೋಷವಾಗಲಿ ನೃಪನ ಮಿತ್ರರಿಗೆ
ತಡೆದು ಹಲಕಾಲದಲುಪಾಸಂ
ಬಡಿಸಿದೆನ್ನದು ದೋಷ ಖಾತಿಯ
ಹಿಡಿಯದಿರು ನೀನೆನುತ ತಿರುಹಿಟ್ಟನು ಮಹಾಂಕುಶವ (ದ್ರೋಣ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಭಗದತ್ತನು, ನಿನ್ನನ್ನು ಪ್ರಯೋಗಿಸದೆ ಬಹಳ ಕಾಲವಾಗಿದೆ, ನಿನಗೆ ಬಲಿಯನ್ನು ಕೊಡದೆ ಉಪವಾಸಮಾಡಿಸಿದೆ ಎಂದು ನನ್ನನ್ನು ದೂಷಿಸಿ ಸಿಟ್ಟಾಗಬೇಡ. ಇದೋ ನಿನ್ನನ್ನು ಪ್ರಯೋಗಿಸುತ್ತಿದ್ದೇನೆ, ನೀನು ಹೋಗಿ ಅರ್ಜುನನ ರಕ್ತವನ್ನು ಕುಡಿದು ತೃಪ್ತನಾಗು, ಕೌರವನ ವೈರಿಗಳು ಕೆಡಲಿ, ಕೌರವನು ರಾಜ್ಯವನ್ನಾಳಲಿ, ಅವನ ಮಿತ್ರರಿಗೆ ಅತಿ ಹೆಚ್ಚು ಸಂತೋಷವಾಗಲಿ ಎಂದು ಅಂಕುಶಕ್ಕೆ ಹೇಳಿ, ಅದನ್ನು ತಿರುಗಿಸಿ ಅರ್ಜುನನಿಗೆ ಗುರಿಯಿಟ್ಟು ಎಸೆದನು.

ಅರ್ಥ:
ಕುಡಿ: ಪಾನಮಾಡು; ಕಿರೀಟಿ: ಅರ್ಜುನ; ರಕುತ: ನೆತ್ತರು; ಹಗೆ: ವೈರಿ; ಕೆಡಲಿ: ಹಾಳಾಗಲಿ; ರಾಯ: ರಾಜ; ಆಳು: ಅಧಿಕಾರ ನಡೆಸು; ಪೊಡವಿ: ಪೃಥ್ವಿ, ಭೂಮಿ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ನೃಪ: ರಾಜ; ಮಿತ್ರ: ಸ್ನೇಹಿತ; ತಡೆ: ನಿಲ್ಲಿಸು; ಹಲಕಾಲ: ಬಹಳ ಕಾಲ; ಉಪಾಸ: ಉಪವಾಸ, ಆಹಾರ ತೆಗೆದುಕೊಳ್ಳದಿರುವಿಕೆ; ದೋಷ: ಕುಂದು, ಕಳಂಕ; ಖಾತಿ: ಕೋಪ; ಹಿಡಿ: ಗ್ರಹಿಸು; ತಿರುಹಿಟ್ಟು: ಗಿರುಗಿಸು; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ;

ಪದವಿಂಗಡಣೆ:
ಕುಡಿ +ಕಿರೀಟಿಯ +ರಕುತವನು +ಹಗೆ
ಕೆಡಲಿ +ಕೌರವ +ರಾಯನ್+ಆಳಲಿ
ಪೊಡವಿಯನು +ಪರಿತೋಷವಾಗಲಿ+ ನೃಪನ+ ಮಿತ್ರರಿಗೆ
ತಡೆದು+ ಹಲಕಾಲದಲ್+ಉಪಾಸಂ
ಬಡಿಸಿದ್+ಎನ್ನದು +ದೋಷ +ಖಾತಿಯ
ಹಿಡಿಯದಿರು +ನೀನೆನುತ + ತಿರುಹಿಟ್ಟನು +ಮಹಾಂಕುಶವ

ಅಚ್ಚರಿ:
(೧) ೧-೩ ಸಾಲಿನ ಮೊದಲೆರಡು ಪದಗಳು ಒಂದೇ ಅಕ್ಷರದ್ದು – ಕುಡಿ ಕಿರೀಟಿ, ಕೆಡಲಿ ಕೌರವ, ಪೊಡವಿಯನು ಪರಿತೋಷವಾಗಲಿ
(೨) ಅಂಕುಶವನ್ನು ಮಾತನಾಡಿಸುವ ಪರಿ – ತಡೆದು ಹಲಕಾಲದಲುಪಾಸಂಬಡಿಸಿದೆನ್ನದು ದೋಷ ಖಾತಿಯ
ಹಿಡಿಯದಿರು

ಪದ್ಯ ೩೫: ಶ್ರೀಕೃಷ್ಣನು ಯಾರ ಬಳಿ ನುಗ್ಗಿದನು?

ತುಡುಕಿದನು ಚಕ್ರವನು ರಥದಿಂ
ಪೊಡವಿಯೊಳು ಧುಮ್ಮಿಕ್ಕಿದನು ಹ
ತ್ತಡವ ಹಾಯಿಕಿ ಹರಿದನೊಡಬಿದ್ದವರನೊಡೆ ತುಳಿದು
ಸುಡುವೆನಹಿತಾನ್ವಯವ ಭೀಷ್ಮನ
ಕಡಿದು ಭೂತಗಣಕ್ಕೆ ಬೋನವ
ಬಡಿಸುವೆನು ನೋಡಿಲ್ಲಿ ಮೇಳವೆಯೆನುತ ಸೈವರಿದ (ಭೀಷ್ಮ ಪರ್ವ, ೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಕೈಚಾಚಿ ಎಳೆದುಕೊಂಡು ರಥದಿಂದ ಭೂಮಿತೆ ಧುಮುಕಿದನು. ಅತಿವೇಗದಿಮ್ದ ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ, ಅಡ್ಡ ಬಿದ್ದವರನ್ನು ತುಳಿಯುತ್ತಾ, ಶತ್ರುವಂಶವನ್ನೇ ಸುಟ್ಟು ಹಾಕುತ್ತೇನೆ, ಭೀಷ್ಮನನ್ನು ಕಡಿದು ಭೂತಗಣಗಳ ಊಟಕ್ಕೆ ಬಡಿಸುತ್ತೇನೆ, ಅವನು ನನಗೆ ಸಮವೇ, ಏ ಭೀಷ್ಮ ನೋಡಿಲ್ಲಿ ಎನ್ನುತ್ತಾ ಭೀಷ್ಮನತ್ತ ನೇರವಾಗಿ ನುಗ್ಗಿದನು.

ಅರ್ಥ:
ತುಡುಕು: ಬೇಗನೆ ಹಿಡಿಯುವುದು; ಚಕ್ರ: ಸುದರ್ಶನ ಚಕ್ರ; ರಥ: ಬಂಡಿ; ಪೊಡವಿ: ಪೃಥ್ವಿ, ಭೂಮಿ; ಧುಮ್ಮಿಕ್ಕು: ಧುಮುಕು; ಹತ್ತ: ಹಸ್ತ, ಕೈ; ಹಾಯಿಕು: ಕಳಚು, ತೆಗೆ; ಹರಿ: ಸೀಳು; ತುಳಿ: ಮೆಟ್ಟು; ಸುಡು: ದಹಿಸು; ಅಹಿತ: ವೈರಿ; ಅನ್ವಯ: ವಂಶ; ಕಡಿ: ಸೀಳು; ಭೂತ: ದೆವ್ವ; ಗಣ: ಗುಂಪು; ಭೋನ: ಊಟ; ಬಡಿಸು: ಉಣಿಸು; ನೋಡು: ವೀಕ್ಷಿಸು; ಮೇಳ: ಗುಂಪು; ಸೈವರಿ: ಮುಂದಕ್ಕೆ ಹೋಗು;

ಪದವಿಂಗಡಣೆ:
ತುಡುಕಿದನು +ಚಕ್ರವನು+ ರಥದಿಂ
ಪೊಡವಿಯೊಳು +ಧುಮ್ಮಿಕ್ಕಿದನು +ಹ
ತ್ತಡವ +ಹಾಯಿಕಿ +ಹರಿದನ್+ಒಡಬಿದ್ದವರನ್+ಒಡೆ +ತುಳಿದು
ಸುಡುವೆನ್+ಅಹಿತ+ಅನ್ವಯವ +ಭೀಷ್ಮನ
ಕಡಿದು +ಭೂತಗಣಕ್ಕೆ+ ಬೋನವ
ಬಡಿಸುವೆನು +ನೋಡಿಲ್ಲಿ +ಮೇಳವೆ+ಎನುತ +ಸೈವರಿದ

ಅಚ್ಚರಿ:
(೧) ಕೃಷ್ಣನ ಕೋಪದ ನುಡಿ: ಸುಡುವೆನಹಿತಾನ್ವಯವ ಭೀಷ್ಮನ ಕಡಿದು ಭೂತಗಣಕ್ಕೆ ಬೋನವ ಬಡಿಸುವೆನು

ಪದ್ಯ ೨೭: ಅರ್ಜುನನು ಯಾವ ಕಿವಿಮಾತನ್ನು ಉತ್ತರನಿಗೆ ಹೇಳಿದನು?

ಒಡಲು ಕಿಡುವುದು ನಾಳೆ ನಾಡಿದು
ಪೊಡವಿಯುಳ್ಳನ್ನ ಬರ ಲೋಕದೊ
ಳಡಗದಿಹುವಪಕೀರ್ತಿ ಕೀರ್ತಿಗಳೆಂಬುವಿದು ನಿರುತ
ಸುಡಲಿ ಜೀವನದಾಶೆಯನು ಕಿಡು
ವೊಡಲ ಭುಕ್ತಿಯ ಭೋಗಕೋಸುಗ
ಕಿಡಿಬೇಡಿಹಪರದ ಕೀರ್ತಿಯನೆಂದನಾ ಪಾರ್ಥ (ವಿರಾಟ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರಿಸಿ, ದೇಹವು ಇಂದೋ ನಾಳೆಯೋ ಬಿದ್ದು ಹೋಗುತ್ತದೆ. ಅಪಕೀರ್ತಿ, ಕೀರ್ತಿಗಳು ಭೂಮಿಯಿರುವವರೆಗೆ ಇರುತ್ತವೆ ಎನ್ನುವುದು ಸತ್ಯ. ಬದುಕಬೇಕೆಂಬಾಶೆಯನ್ನು ಸುಡಬೇಕು, ನಶ್ವರ ದೇಹದ ಭೋಗಕ್ಕಾಗಿ ಇಹಪರದ ಕೀರ್ತಿಗಳನ್ನು ಹಾಳುಮಾಡಿಕೊಳ್ಳಬೇಡ ಎಂದು ಉಪದೇಶಿಸಿದನು.

ಅರ್ಥ:
ಒಡಲು: ದೇಹ; ಕಿಡು: ಅಳಿ, ನಾಶವಾಗು; ಪೊಡವಿ: ಪೃಥ್ವಿ, ಭೂಮಿ; ಬರ: ಅಭಾವ, ಕೊರತೆ; ಅಡಗು: ಅವಿತುಕೊಳ್ಳು; ಕೀರ್ತಿ: ಯಶಸ್ಸು; ನಿರುತ: ದಿಟ, ಸತ್ಯ; ಸುಡು: ದಹಿಸು; ಜೀವನ: ಬಾಳು, ಬದುಕು; ಆಶೆ: ಆಸೆ, ಬಯಕೆ; ಭುಕ್ತಿ: ಸುಖಾನುಭವ, ಭೋಗ; ಭೋಗ: ಸುಖವನ್ನು ಅನುಭವಿಸುವುದು; ಓಸುಗ: ಓಸ್ಕರ; ಇಹಪರ: ಈ ಲೋಕ ಮತ್ತು ಪರಲೋಕ;

ಪದವಿಂಗಡಣೆ:
ಒಡಲು +ಕಿಡುವುದು +ನಾಳೆ +ನಾಡಿದು
ಪೊಡವಿಯುಳ್ಳನ್ನ+ ಬರ+ ಲೋಕದೊಳ್
ಅಡಗದಿಹುವ್+ಅಪಕೀರ್ತಿ +ಕೀರ್ತಿಗಳೆಂಬುವ್+ಇದು +ನಿರುತ
ಸುಡಲಿ +ಜೀವನದಾಶೆಯನು +ಕಿಡು
ವೊಡಲ+ ಭುಕ್ತಿಯ+ ಭೋಗಕೋಸುಗ
ಕಿಡಿಬೇಡ್+ಇಹಪರದ +ಕೀರ್ತಿಯನೆಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಉಪದೇಶ – ಅಡಗದಿಹುವಪಕೀರ್ತಿ ಕೀರ್ತಿಗಳೆಂಬುವಿದು ನಿರುತ

ಪದ್ಯ ೫: ಉತ್ತರನು ಸೈನ್ಯದ ಬಲವನ್ನು ಹೇಗೆ ಕಂಡನು?

ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವಿಲಾಡಲಾರದು
ಒಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವಶಿವ ಕಾದಿಗೆಲಿದೆವು ಬಲಕೆ ನಮೊ ಎಂದ (ವಿರಾಟ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಕಣ್ಣೂಗಳು ಈ ಸೈನ್ಯದ ಕಡೆಗೆ ಹಾಯುವುದೇ ಇಲ್ಲ. ಈ ಸೈನ್ಯ ಸಮುದ್ರವನ್ನು ಮನಸ್ಸು ಈಜಿ ದಾಟಲು ಸಾಧ್ಯವಿಲ್ಲ. ಬದುಕಿದ್ದರೆ ಎಂತೆಂತಹ ಅದ್ಭುತಗಳನ್ನೋ ನೋಡಬಹುದು. ಭೂಮಿಯೇ ಈ ಸೈನ್ಯವನ್ನು ಈದಿರಬೇಕು. ಇದರೊಡನೆ ಯಾರು ಯುದ್ಧ ಮಾಡುವನೋ ಅವನೇ ಶಿವ, ಶಿವ ಶಿವಾ ಇದರೊಡನೆ ಯುದ್ಧ ಮಾಡಿದೆ, ಗೆದ್ದೆ, ಈ ಸೈನ್ಯಕ್ಕೆ ನಮೋ ಎಂದು ಚಿಂತಿಸಿದನು.

ಅರ್ಥ:
ಕಡೆ: ಕೊನೆ; ಹಾಯು: ಕೊಂಡೊಯ್ಯು; ಕಂಗಳು: ಕಣ್ಣು; ಬಲ: ಸೈನ್ಯ; ಕಡಲು: ಸಾಗರ; ಮನ: ಮನಸ್ಸು; ಈಸು: ಈಜು; ಒಡಲು: ದೇಹ; ಕಾಣು: ತೋರು; ಅದ್ಭುತ: ಆಶ್ಚರ್ಯ; ಪೊಡವಿ: ಪೃಥ್ವಿ, ಭೂಮಿ; ಮೋಹರ: ಯುದ್ಧ; ಕಾದು: ಯುದ್ಧ; ಮೃಡ: ಶಿವ; ಗೆಲುವು: ಜಯ;

ಪದವಿಂಗಡಣೆ:
ಕಡೆಗೆ +ಹಾಯವು +ಕಂಗಳ್ +ಈ+ಬಲ
ಕಡಲ +ಮನವ್+ಈಸ್+ಆಡಲಾರದು
ಒಡಲುವ್+ಇಡಿದಿರಲ್+ಏನ +ಕಾಣಲು +ಬಾರದ್+ಅದ್ಭುತವ
ಪೊಡವಿ+ಈದುದೊ +ಮೋಹರವನ್+ಇದರ್
ಒಡನೆ +ಕಾದುವನ್+ಆವನ್+ಆತನೆ
ಮೃಡನು+ ಶಿವಶಿವ+ ಕಾದಿ+ಗೆಲಿದೆವು +ಬಲಕೆ+ ನಮೊ+ ಎಂದ

ಅಚ್ಚರಿ:
(೧) ಉತ್ತರನ ಹೋಲಿಸುವ ಪರಿ – ಪೊಡವಿಯೀದುದೊ ಮೋಹರವನಿದರೊಡನೆ ಕಾದುವನಾವನಾತನೆ
ಮೃಡನು

ಪದ್ಯ ೬: ದೇವತೆಗಳ ಸ್ಥಿತಿ ಹೇಗಿತ್ತು?

ಸಿಡಿಲಕಾಲದೊಳೆರಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ತ್ಮಿಕದೊಳಿಳಿವಂತಿರೆ ರಸಾತಳಕೆ
ತುಡುಕುವುದು ರಕ್ಕಸರ ಭಯಹುಡಿ
ಹುಡಧುದು ಸುರವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೬ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಹೊಡೆವ ಬರಸಿಡಿಲಿನಂತೆ, ಕಲ್ಪಾಂತದಲ್ಲಿಸಮುದ್ರವು ಉಕ್ಕುವಂತೆ, ಆಕಸ್ಮಿಕವಾಗಿ ಭೂಮಿಯು ರಸಾತಳಕ್ಕಿಳಿಯುವಂತೆ ನಿವಾತಕವಚರೆಂಬ ರಾಕ್ಷಸರ ಭಯವು ನಮನ್ನು ಕಾಡುತ್ತಿದೆ. ದೇವತಾವೈಭವವು ಪುಡಿಪುಡಿಯಾಗುತ್ತದೆ, ಅವರು ನಮಗಿಂತ ಎರಡುಪಟ್ಟು ಬಲಿಷ್ಠರು ಎಂದು ದೇವತೆಗಳ ಸ್ಥಿತಿಯನ್ನು ಹೇಳಿದನು.

ಅರ್ಥ:
ಸಿಡಿಲು: ಅಶನಿ, ಗರ್ಜಿಸು; ಕಾಲ ಸಮಯ; ಎರಗು: ಮೇಲೆ ಬೀಳು; ಕಡಲು: ಸಾಗರ; ಕಲ್ಪ: ಸಹಸ್ರ ಯುಗ, ಪ್ರಳಯ; ಉಕ್ಕು: ಹಿಗ್ಗುವಿಕೆ, ಉತ್ಸಾಹ; ಪೊಡವಿ: ಪೃಥ್ವಿ, ಭೂಮಿ; ಆಕಸ್ಮಿಕ: ಅನಿರೀಕ್ಷಿತವಾದ ಘಟನೆ, ಅಪಘಾತ; ಇಳಿ: ಕೆಳಕ್ಕೆ ಬಾ; ರಸಾತಳ: ಭೂಮಿಯ ಮೇಲ್ಭಾಗ; ತುಡುಕು: ಹೋರಾಡು, ಸೆಣಸು; ರಕ್ಕಸ: ರಾಕ್ಷಸ; ಭಯ: ಅಂಜಿಕೆ; ಹುಡಿ: ಹಿಟ್ಟು, ಪುಡಿ; ಸುರವಿಭವ: ದೇವತೆಗಳ ವೈಭವ; ಇಮ್ಮಡಿ: ಎರಡರಷ್ಟು; ಕೇಳು: ಆಲಿಸು;

ಪದವಿಂಗಡಣೆ:
ಸಿಡಿಲ+ ಕಾಲದೊಳ್+ಎರಗುವಂತಿರೆ
ಕಡಲು+ ಕಲ್ಪದೊಳ್+ಉಕ್ಕುವಂತಿರೆ
ಪೊಡವಿ+ಆಕಸ್ತ್ಮಿಕದೊಳ್+ಇಳಿವಂತಿರೆ+ ರಸಾತಳಕೆ
ತುಡುಕುವುದು +ರಕ್ಕಸರ+ ಭಯ+ಹುಡಿ
ಹುಡಿದುದು+ ಸುರವಿಭವವ್+ಎಮಗ್
ಇಮ್ಮಡಿಯಲ್+ಅವರು +ನಿವಾತಕವಚರು+ ಪಾರ್ಥ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಡಿಲಕಾಲದೊಳೆರಗುವಂತಿರೆಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ತ್ಮಿಕದೊಳಿಳಿವಂತಿರೆ ರಸಾತಳಕೆ

ಪದ್ಯ ೩: ಯಾರ ಸಾವಿನ ಸುದ್ದಿಯನ್ನು ಸಂಜಯನು ತಿಳಿಸಿದನು?

ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ (ಕರ್ಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ತನ್ನ ಮಾತನ್ನು ಹೇಳುತ್ತಾ, ಒಡೆಯ ಧ್ವಜಗಳನ್ನು ಹಾರಿಸು, ಸಾಗರವು ಬತ್ತಿ ಹೋಯಿತು, ಮೇರು ಪರ್ವತ ಮುರಿಯಿತು, ಭೂಮಿಯು ತಿರುಗಿತು, ಸೂರ್ಯ ಮಂಡಲವು ಬಿದ್ದು ಪಾತಾಳಕ್ಕಿಳಿಯಿತು, ನಿನ್ನ ಮಹಾ ಪರಾಕ್ರಮಿ ಯೋಧನಾದ ಕರ್ಣನು ಮುರಿದು ಬಿದ್ದು ನಿಮ್ಮಿಮ್ದ ಬೀಳ್ಕೊಂಡನು ಇದರ ವಾರ್ತೆಯನ್ನು ತಿಳಿಸೆಂದು ಸಂಜಯನು ಹೇಳಿದನು.

ಅರ್ಥ:
ಗುಡಿ: ಧ್ವಜ, ದೇವಾಲಯ, ಬಾವುಟ; ಕಟ್ಟಿಸು: ನಿರ್ಮಿಸು; ಬರತು: ಬತ್ತು, ನೀರಿಲ್ಲದ; ಕಡಲು: ಸಾಗರ; ಮುರಿ: ಸೀಳು; ಮೇರು: ಮೇರು ಪರ್ವತ; ತಿರುಗು: ಸುತ್ತಾಡು; ಪೊಡವಿ: ಭೂಮಿ; ಬಿದ್ದು: ಕೆಳಕ್ಕೆ ಜಾರು; ಭಾನು: ಸೂರ್ಯ; ಮಂಡಲ: ವರ್ತುಲಾಕಾರ; ಅಹಹ: ನೋವಿನ ನುಡಿ; ವಿತಳ: ಪಾತಾಳ; ಮಡಿ: ಸಾವು; ಆನೆ: ಗಜ, ಬಲ, ಪರಾಕ್ರಮಿ; ಉಗ್ಗಡ:ಉತ್ಕಟತೆ, ಅತಿಶಯ; ಭಟ: ಸೈನಿಕ; ಬೀಳ್ಕೊಂಡನು: ಮಡಿದನು; ಕಡಿ: ಸೀಳು, ಮುರಿ; ಕಲಿ: ಶೂರ;
ಒಸಗೆ: ಸುದ್ದಿ, ಸಂದೇಶ; ಮಾಡಿಸು: ನೆರವೇರಿಸು;

ಪದವಿಂಗಡಣೆ:
ಗುಡಿಯ +ಕಟ್ಟಿಸು +ಜೀಯ +ಬರತುದು
ಕಡಲು +ಮುರಿದುದು +ಮೇರು +ತಿರುಗಿತು
ಪೊಡವಿ +ಬಿದ್ದುದು +ಭಾನುಮಂಡಲವ್+ಅಹಹ+ ವಿತಳದಲಿ
ಮಡಿದುದೈ +ನಿನ್ನಾನೆ +ನಿನ್ನ್
ಉಗ್ಗಡದ +ಭಟ +ಬೀಳ್ಕೊಂಡನೈ +ಕಡಿ
ವಡೆದನೈ+ ಕಲಿ +ಕರ್ಣನ್+ಒಸಗೆಯ +ಮಾಡಹೇಳೆಂದ

ಅಚ್ಚರಿ:
(೧) ಕರ್ಣನನ್ನು ಆನೆಗೆ ಹೋಲಿಸಿರುವುದು
(೨) ಉಪಮಾನದ ಬಳಕೆ – ಬರತುದು ಕಡಲು; ಮುರಿದುದು ಮೇರು; ತಿರುಗಿತು
ಪೊಡವಿ; ಬಿದ್ದುದು ಭಾನುಮಂಡಲವಹಹ ವಿತಳದಲಿ

ಪದ್ಯ ೧೯: ಲೋಕ ಕೆಡಲು ಕಾರಣವೇನು?

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುರೋಹಿತ
ರೆಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಕವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯ ನರಿಯದೆ ಕೆಡುವುದೀ ಜಗವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ರಾಜ್ಯದಲ್ಲಿ ನಡೆಯುವ ಪಾಪವು ರಾಜನನ್ನು ಸುತ್ತುತ್ತದೆ. ಅದು ರಾಜಪುರೋಹಿತನಿಗೆ ಸೇರುತ್ತದೆ ಮೂರ್ಖನಾದ ಶಿಷ್ಯನ ದೋಷವು ಗುರುವಿಗೆ ಸೇರುತ್ತದೆ. ಹೆಂಡತಿಯ ಪಾಪ ಗಂಡನಿಗೆ ಸೇರುತ್ತದೆ. ಈ ಕ್ರಮವನ್ನರಿಯದೆ ಲೋಕ ಕೆಡುತ್ತದೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಪೊಡವಿ:ಪೃಥ್ವಿ, ಭೂಮಿ, ನೆಲ; ಉದಯಿಸು: ಹುಟ್ಟು; ದುಷ್ಕೃತ: ಕೆಟ್ಟ ಕೆಲಸ; ಬಿಡದು: ಹೋಗದು; ಭೂಪ: ರಾಜ; ಪುರೋಹಿತ: ಧಾರ್ಮಿಕ ವ್ರತವನ್ನು ಮಾಡಿಸುವವ; ಬಳಿಕ: ನಂತರ; ಮೂರ್ಖ: ಮೂಢ; ಶಿಷ್ಯ: ವಿದ್ಯಾರ್ಥಿ; ದೋಷ: ತಪ್ಪು; ಗುರು: ಆಚಾರ್ಯ; ಮಡದಿ: ಹೆಂಡತಿ; ಪಾತಕ: ಕೆಟ್ಟಕೆಲಸ, ಪಾಪ; ಪತಿ: ಗಂಡ, ಯಜಮಾನ; ಪರಮಾರ್ಥ: ಶ್ರೇಷ್ಠವಾದ ತಿಳುವಳಿಕೆ; ಪರಿವಿಡಿ: ವ್ಯವಸ್ಥಿತವಾದ ಕ್ರಮ; ಅರಿ: ತಿಳಿ; ಕೆಡು:ಹಾಳಾಗು, ಅಳಿ; ಜಗ: ವಿಶ್ವ; ಮುನಿ: ಋಷಿ;

ಪದವಿಂಗಡಣೆ:
ಪೊಡವಿಯೊಳಗ್+ಉದಯಿಸಿದ +ದುಷ್ಕೃತ
ಬಿಡದು +ಭೂಪರನ್+ಅದು +ಪುರೋಹಿತ
ರೆಡೆಗೆ+ ಬಳಿಕ+ಆ+ ಮೂರ್ಖ +ಶಿಷ್ಯನ +ದೋಷ +ಗುರುವಿನದು
ಮಡದಿ+ ಮಾಡಿದ+ ಪಾತಕವು+ ಪತಿಗ್
ಒಡಲಹುದು +ಪರಮಾರ್ಥವಿದು +ಪರಿ
ವಿಡಿಯನ್ +ಅರಿಯದೆ +ಕೆಡುವುದೀ +ಜಗವೆಂದನಾ +ಮುನಿಪ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಮಡದಿ ಮಾಡಿದ, ಪಾತಕವು ಪತಿಗೆ
(೨) ದುಷ್ಕೃತ, ಪಾತಕ – ಸಮನಾರ್ಥಕ ಪದ

ಪದ್ಯ ೩೮: ಸೈನ್ಯದ ನಡೆ ಯಾವ ರಭಸದಲ್ಲಿತ್ತು?

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ (ವಿರಾಟ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ದುರ್ಯೋಧನನ ಸೈನ್ಯವು ಮುನ್ನುಗ್ಗಲು, ಭೂಮಿಯು ಕುಗ್ಗಿತು, ಹಾವಿನ (ಆಸಿಶೇಷನ) ಹೆಡೆಗಳು ಬಾಗಿದವು, ದಿಗ್ಗಜಗಳು ತಲೆತಗ್ಗಿಸಿದವು, ಕಡಲಿನ ಅಡಿಯಲ್ಲಿದ್ದ ರತುನಗಳು ಹೊರಬಂದವು, ಸಮುದ್ರವು ಬತ್ತಿತು, ಭೂಮಿ ಒಡೆಯಿತು, ಕಾಲುಧೂಳು ಸೂರ್ಯಮಂಡಲವನ್ನು ಮುಸುಕಿತು.

ಅರ್ಥ:
ಪೊಡವಿ: ಭೂಮಿ; ಜಡಿ: ಕುಗ್ಗು; ಫಣಿ: ಹಾವು; ಹೆಡೆ: ಪೆಡೆ, ಹಾವಿನ ಬಿಚ್ಚಿದ ತಲೆ, ಫಣಿ; ಮಡಿ: ತಗ್ಗಿಸು ಸಾವು; ಆಶಾದಂತಿ: ದಿಗ್ಗಜ; ತಲೆಗೊಡು: ಸಿದ್ಧನಾಗು; ಬಲ: ಶಕ್ತಿ; ಮೊಳಗು: ಹೊರಹೊಮ್ಮು; ಲಗ್ಗೆ:ಮುತ್ತಿಗೆ, ಆಕ್ರಮಣ; ಕಡಲು: ಸಮುದ್ರ; ಮೊಗೆ: ಹೊರಹಾಕು, ಹೊರಹೊಮ್ಮಿಸು; ರತುನ: ರತ್ನ, ಮಣಿ; ನೆಲ: ಭೂಮಿ; ಅಗ್ಗ:ಕಡಿಮೆ ಬೆಲೆ, ಶ್ರೇಷ್ಠ; ಸೇನೆ: ಸೈನ್ಯ; ವಹಿಲ: ಭೂಮಿ; ನಡೆ: ಮುನ್ನುಗ್ಗು; ಧೂಳು: ಮಣ್ಣಿನ ಪುಡಿ; ಮುಸುಕು: ಆವರಿಸು; ರವಿ: ಭಾನು; ಮಂಡಲ: ವರ್ತುಲಾಕಾರ;

ಪದವಿಂಗಡಣೆ:
ಪೊಡವಿ +ಜಡಿದುದು +ಫಣಿಯ +ಹೆಡೆಗಳು
ಮಡಿದವ್+ಆಶಾದಂತಿಗಳು +ತಲೆ
ಗೊಡಹಿದವು +ಬಲದೊಳಗೆ +ಮೊಳಗುವ +ಲಗ್ಗೆವರೆಗಳಲಿ
ಕಡಲು +ಮೊಗೆದುದು +ರತುನವನು +ನೆಲ
ನೊಡೆಯಲ್+ಅಗ್ಗದ +ಸೇನೆ +ವಹಿಲದಿ
ನಡೆದು +ಬರಲಾ +ಧೂಳಿ +ಮುಸುಕಿತು +ರವಿಯ +ಮಂಡಲವ

ಅಚ್ಚರಿ:
(೧) ಸಮುದ್ರದ ನೀರು ಕಡಿಮೆಯಾಯಿತು (ಉಕ್ಕಿತು) ಎಂದು ಹೇಳಲು – ಕಡಲು ಮೊಗೆದುದು ರತುನವನು