ಪದ್ಯ ೧೮: ಕೌರವನನ್ನು ಉತ್ತರನಿಗೆ ಹೋಲಿಸಿ ಹೇಗೆ ಹಂಗಿಸಿದನು?

ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕೆನೆ ವಿರಾಟಜನೆಂದನಾ ಭೂಪ (ಗದಾ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹಿಂದೆ ಗೋಗ್ರಹಣದಲ್ಲಿ ಉತ್ತರಕುಮಾರನನೆಂಬ ಪಲಾಯನ ಪಂಡಿತನನ್ನು ನೋಡಿದ್ದೇವೆ, ನೀನು ಅವನನ್ನು ಪಲಾಯನ ಸಂಪತ್ತಿನಲ್ಲಿ ಮೀರಿಸಿದೆ. ರಾಜರಲ್ಲಿ ಇಬ್ಬರು ಭಂಡರು. ಆ ಭಂಡನನ್ನು ನೀನು ಮೀರಿಸಿದೆ. ಉತ್ತರನು ಓಡಿಹೋದ, ಅವನೇನು ನಿನ್ನಂತೆ ನೀರನ್ನು ಹೊಕ್ಕನೆ ಎಂದು ಹೇಳಿ ಹಂಗಿಸಿದನು.

ಅರ್ಥ:
ಕಂಡು: ನೋಡು; ಪಲಾಯನ: ಓಡುವಿಕೆ, ಪರಾರಿ; ಪಂಡಿತ: ತಿಳಿದವ, ವಿದ್ವಾಂಸ; ಗಂಡ: ಯಜಮಾನ; ಸಿರಿ: ಐಶ್ವರ್ಯ; ಸೂರೆ: ಲೂಟಿ; ಭಂಡ: ನಾಚಿಕೆ, ಲಜ್ಜೆ; ಭೂಮಿ: ಇಳೆ; ಮಿಗಿಲು: ಹೆಚ್ಚು; ಸಲಿಲ: ಜಲ; ಹೊಕ್ಕು: ಸೇರು; ವಿರಾಟಜ: ಉತ್ತರ (ವಿರಾಟನ ಮಗ); ಭೂಪ: ರಾಜ;

ಪದವಿಂಗಡಣೆ:
ಕಂಡೆವ್+ಅಂದ್+ಒಬ್ಬನ +ಪಲಾಯನ
ಪಂಡಿತನನ್+ಉತ್ತರನನ್+ಆತನ
ಗಂಡ +ನೀನಾದೈ +ಪಲಾಯನ+ಸಿರಿಯ +ಸೂರೆಯಲಿ
ಭಂಡರಿಬ್ಬರು+ ಭೂಮಿಪರೊಳ್+ಆ
ಭಂಡನಿಗೆ +ನೀ +ಮಿಗಿಲು +ಸಲಿಲದ
ಕೊಂಡದಲಿ+ ಹೊಕ್ಕೆನೆ+ ವಿರಾಟಜನೆಂದನಾ +ಭೂಪ

ಅಚ್ಚರಿ:
(೧) ಹೋಲಿಸುವ ಪರಿ – ಪಲಾಯನ ಪಂಡಿತನನುತ್ತರನನಾತನ ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
(೨) ೨ನೇ ಸಾಲು ಒಂದೇ ಪದವಾಗಿ ರಚನೆ – ಪಂಡಿತನನುತ್ತರನನಾತನ
(೩) ಉತ್ತರಕುಮಾರನನ್ನು – ಉತ್ತರ, ವಿರಾಟಜ ಎಂದು ಕರೆದಿರುವುದು

ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೬೧: ಭೀಮನು ದುರ್ಯೋಧನನನ್ನು ಹೇಗೆ ಹಂಗಿಸಿದನು?

ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ (ಗದಾ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೀಮನು ರಥವನ್ನು ಬಿಟ್ಟು ಭೂಮಿಗೆ ಧುಮುಕಿ, ಕೌರವರಾಯ, ಈಗ ಕಾಣಿಸಿಕೊಂಡೆ, ವೀರನಾಗಿ ನಿಲ್ಲು ಹೇಡಿಯಂತೆ ಓಡಬೇಡ. ಆನೆಗಳ ರೌದ್ರ ಯುದ್ಧದಲ್ಲಿ ನೀನು ನಿಪುಣನಲ್ಲವೇ? ತೆಗೆದುಕೋ ಎಂದು ಜೋದರು ಬಿಡುವ ಬಾಣಗಳನ್ನು ಕಡೆಗಣಿಸಿ ಆನೆಗಳನ್ನು ಓಡಿಸಿದನು.

ಅರ್ಥ:
ಒದೆ: ನೂಕು; ರಥ: ಬಂಡಿ; ಧರೆ: ಭೂಮಿ; ಧುಮ್ಮಿಕ್ಕು: ಜಿಗಿ; ರಾಯ: ರಾಜ; ಮೈದೋರು: ವೀರನಾಗಿ ನಿಲ್ಲು, ಕಾಣಿಸಿಕೊ; ಕಲಿ: ಶೂರ; ಪಾಲಿಸು: ಅನುಕರಿಸು; ಪಲಾಯಣ: ಓಡು; ರದನಿ: ಆನೆ; ರೌದ್ರ: ಭಯಂಕರ; ಆಹವ: ಯುದ್ಧ; ಕೋವಿದ: ಪಂಡಿತ; ಕರಿ: ಆನೆ; ಕೆದರು: ಹರಡು; ಕಲಿ: ಶೂರ; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವವ; ಅಂಬು: ಬಾಣ; ಸೈರಿಸು: ತಾಳು, ಸಹನೆ;

ಪದವಿಂಗಡಣೆ:
ಒದೆದು +ರಥವನು +ಧರೆಗೆ +ಧುಮ್ಮಿ
ಕ್ಕಿದನು +ಕೌರವರಾಯ +ಮೈದೋ
ರಿದೆಯಲಾ +ಕಲಿಯಾಗು +ಪಾಲಿಸದಿರು +ಪಲಾಯನವ
ರದನಿಗಳ+ ರೌದ್ರ+ಆಹವಕೆ +ಕೋ
ವಿದನಲೇ +ಕೊಳ್ಳೆನುತ +ಕರಿಗಳ
ಕೆದರಿದನು +ಕಲಿ+ಜೋದರ್+ಅಂಬಿನ +ಸರಿಯ +ಸೈರಿಸುತ

ಅಚ್ಚರಿ:
(೧) ದುರ್ಯೋಧನನನ್ನು ಹಂಗಿಸುವ ಪರಿ – ಕೌರವರಾಯ ಮೈದೋರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
(೨) ಕ ಕಾರದ ಸಾಲು ಪದ – ಕೋವಿದನಲೇ ಕೊಳ್ಳೆನುತ ಕರಿಗಳ ಕೆದರಿದನು ಕಲಿಜೋದರಂಬಿನ

ಪದ್ಯ ೧೭: ದುರ್ಯೋಧನನ ತನ್ನ ಸೈನ್ಯವನ್ನು ಹೇಗೆ ಮೂದಲಿಸಿದನು?

ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ (ಗದಾ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಬಲಪಕ್ಕದ ಸೇನಾನಾಯಕರು ಓಡಿದರು. ತಾವು ಅಜೇಯರೆಂದು ಕೊಚ್ಚಿಕೊಳ್ಳುವ ಸುಭಟರು ದೂರಕ್ಕೋಡಿ ಸುಧಾರಿಸಿಕೊಂಡರು ದುರ್ಯೋಧನನು ತನ್ನ ಸೈನ್ಯದ ಪಲಾಯನವನ್ನು ನೋಡಿ, ಇವರು ಪ್ರಾಣದ ಹಾನಿಗೆ ಅಂಜಿದರು ಎಂದು ರಾಜರನ್ನು ಮೂದಲಿಸಿದನು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಬಲ: ಸೈನ್ಯ; ಬಾಹೆ: ಹೊರಗೆ; ನಾಯಕ: ಒಡೆಯ; ಜಾರು: ಬೀಳು; ವಾಮ: ಎಡಭಾಗ; ಅಜೇಯ: ಗೆಲ್ಲಲಾಗದುದು; ಸುಭಟ: ಪರಾಕ್ರಮಿ; ಸಿಡಿ: ಸೀಳು; ತರಹರಿಸು: ತಡಮಾಡು; ಕಳವಳಿಸು; ದೂರ: ಆಚೆ; ಕಂಡು: ನೋಡು; ಬಳಿಕ: ನಂತರ; ಪಲಾಯನ: ಓಡು; ಪರಿವಿಡಿ: ವ್ಯವಸ್ಥಿತವಾದ ಕ್ರಮ, ಅನುಕ್ರಮ; ಅಸು: ಪ್ರಾಣ; ಬೀಯ: ವ್ಯಯ, ನಷ್ಟ; ಅಂಜು: ಹೆದರು; ಮೂದಲಿಸು: ಹಂಗಿಸು; ನೃಪ: ರಾಜ;

ಪದವಿಂಗಡಣೆ:
ರಾಯ+ ಕೇಳೈ +ಬಲದ +ಬಾಹೆಯ
ನಾಯಕರು +ಜಾರಿದರು +ವಾಮದ್
ಅಜೇಯ +ಸುಭಟರು +ಸಿಡಿದು +ತರಹರಿಸಿದರು +ದೂರದಲಿ
ರಾಯ +ಕಂಡನು +ಬಳಿಕ +ಬಲದ +ಪ
ಲಾಯನದ +ಪರಿವಿಡಿಯನ್+ಅಸುವಿನ
ಬೀಯಕ್+ಇವರ್+ಅಂಜಿದರ್+ಎನುತ +ಮೂದಲಿಸಿದನು +ನೃಪರ

ಅಚ್ಚರಿ:
(೧) ಹಂಗಿಸುವ ಪರಿ – ಅಸುವಿನ ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ

ಪದ್ಯ ೫೮: ಶಲ್ಯನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು?

ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲವೋ ಯುಧಿಷ್ಠಿರ, ಬಾಣಗಳಿಂದ ನನ್ನ ಖಡ್ಗ ಗುರಾಣಿಗಳನ್ನು ಕತ್ತರಿಸಿಹಾಕು, ನೀನು ಬಿಲ್ಲು ವಿದ್ಯೆಯಲ್ಲಿ ಚತುರನೆನ್ನುತ್ತಾರೆ, ನನಗೆ ಕವಚವಿಲ್ಲ, ರಥವಿಲ್ಲ. ಪ್ರಾಣವನ್ನುಳಿಸಿಕೊಳ್ಳಲು ಓಡಿ ಹೋಗುವುದೊಂದೇ ದಾರಿ. ಕ್ಷತ್ರಿಯನಾದುದರಿಂದ ಓಡಿ ಹೋಗುವಂತಿಲ್ಲ. ನಿನ್ನಲ್ಲಿ ಸಾಹಸವಿದ್ದುದೇ ಆದರೆ ನಿಲ್ಲು ಎಂದು ಶಲ್ಯನು ಮೂದಲಿಸಿದನು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಎಸು: ಬಾಣ ಪ್ರಯೋಗ; ಖಡ್ಗ: ಕತ್ತಿ; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಚಾಪ: ಬಿಲ್ಲು ಕುಶಲ: ಚಾತುರ್ಯ; ತನುತ್ರ: ಕವಚ; ರಥ: ಬಂಡಿ; ಅಸು: ಪ್ರಾಣ; ತಡೆ: ನಿಲ್ಲು; ರಣ: ಯುದ್ಧಭೂಮಿ; ಪಲಾಯನ: ಓಡು; ಸಾಹಸಿ: ಪರಾಕ್ರಮಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಎಸು+ ಯುಧಿಷ್ಠಿರ +ಹಲಗೆ +ಖಡ್ಗವ
ಕುಸುರಿದ್+ಅರಿ+ಆ +ಚಾಪವಿದ್ಯಾ
ಕುಶಲನೆಂಬರಲೈ +ತನುತ್ರ +ರಥಂಗಳಿಲ್ಲ್+ಎಮಗೆ
ಅಸುವ +ತಡೆವರೆ +ರಣ+ಪಲಾಯನವ್
ಎಸೆವುದೇ +ಕ್ಷತ್ರಿಯರಿಗ್+ಅತಿ+ಸಾ
ಹಸಿಕನಾದಡೆ +ನಿಲ್ಲೆನುತ +ಮೂದಲಿಸಿದನು +ಶಲ್ಯ

ಅಚ್ಚರಿ:
(೧) ಎಸು, ಅಸು – ಪ್ರಾಸ ಪದ
(೨) ಹಲಗೆ, ಖಡ್ಗ, ಚಾಪ – ಆಯುಧಗಳನ್ನು ಹೆಸರಿಸುವ ಶಬ್ದ
(೩) ಕ್ಷತ್ರಿಯರ ಧರ್ಮ – ಅಸುವ ತಡೆವರೆ ರಣಪಲಾಯನವೆಸೆವುದೇ ಕ್ಷತ್ರಿಯರಿಗ್

ಪದ್ಯ ೧೨: ಭೀಮನ ಹೊಡೆತದ ಪ್ರಭಾವ ಹೇಗಿತ್ತು?

ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ (ಶಲ್ಯ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಸಾವಿರ ಕುದುರೆಗಳು, ಮೂರು ಸಾವಿರ ರಥಗಳು ಭೀಮನ ಹೊಡೆತಕ್ಕೆ ಸಿಕ್ಕಿ ನೆಲಕ್ಕೆ ಬಿದ್ದವು. ಬಿಲ್ಲು, ಹರಿಗೆ ಸಬಳಗಳನ್ನು ಹಿಡಿದ ಎಂಟು ಲಕ್ಷ ಸೈನಿಕರನ್ನು ಸಂಹರಿಸಿದನು. ಉಳಿದವರು ಯುದ್ಧದಿಂದ ಪಲಾಯನ ಮಾಡಿದರು.

ಅರ್ಥ:
ಅಳಿ: ನಾಶ; ಸಾವಿರ: ಸಹಸ್ರ; ಬಲು: ಸೈನ್ಯ; ಕುದುರೆ: ಅಶ್ವ; ರಥ: ಬಂಡಿ; ನೆಲ: ಭೂಮಿ; ವರ್ತಿಸು: ಚಲಿಸು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಬಿಲು: ಬಿಲ್ಲು, ಚಾಪ; ಸಬಳ: ಈಟಿ; ಪದಾತಿ: ಕಾಲಾಳು, ಸೈನಿಕ; ತಲೆ: ಶಿರ; ತೊಡಸು: ಸಿಕ್ಕಿಸು; ಲಕ್ಕ: ಲಕ್ಷ; ಉಳಿದ: ಮಿಕ್ಕ; ಬಲ: ಸೈನ್ಯ; ಓಲೈಸು: ಪ್ರೀತಿಸು; ಘನ: ಶ್ರೇಷ್ಠ; ಪಲಾಯನ: ಹಿಂದಿರುಗು, ಪರಾರಿ;

ಪದವಿಂಗಡಣೆ:
ಅಳಿದುದ್+ಐನೂರ್+ಆನೆ +ಸಾವಿರ
ಬಲು+ಕುದುರೆ +ರಥ +ಮೂರು +ಸಾವಿರ
ನೆಲಕೆ+ ಕೈವರ್ತಿಸಿತು +ಭೀಮನ +ಹೊಯ್ಲ +ಹೋರಟೆಗೆ
ಬಿಲುಹರಿಗೆ +ಸಬಳದ+ ಪದಾತಿಯ
ತಲೆಯ +ತೊಡಸಿದನ್+ಎಂಟು +ಲಕ್ಕವನ್
ಉಳಿದ +ಬಲವ್+ಓಲೈಸುತಿರ್ದುದು +ಘನ +ಪಲಾಯನವ

ಅಚ್ಚರಿ:
(೧) ಓಡಿದರು ಎಂದು ಹೇಳುವ ಪರಿ – ಉಳಿದ ಬಲವೋಲೈಸುತಿರ್ದುದು ಘನ ಪಲಾಯನವ

ಪದ್ಯ ೪೩: ದ್ರೋಣನು ಯಾರ ಮೇಲೆ ಯುದ್ಧಕ್ಕೆ ಹೊರಟನು?

ಎನಿತು ಬಾರಿ ಪಲಾಯನವ ಸಿರಿ
ನಿನಗೆ ಸೇರಿತು ವೀರ ಭಂಡನೊ
ಳೆನಗೆ ನೂಕದು ಸಾಕು ಧೃಷ್ಟದ್ಯುಮ್ನ ನಿಲ್ಲೆನುತ
ಅನಿಲಜವದಲಿ ರಥವ ಬಿಟ್ಟನು
ಜನಪತಿಯ ಮೋಹರಕೆ ಕವಿದುದು
ತನತನಗೆ ರಾಯನ ವಿಪತ್ತಿನೊಳಖಿಳ ಭಟನಿಕರ (ದ್ರೋಣ ಪರ್ವ, ೧೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ನೀನು ವೀರನೆಂದು ನಿನ್ನನ್ನೇ ಕರೆದುಕೊಳ್ಳುವ ನಾಚಿಕೆಯಿಲ್ಲದವನು. ಎಷ್ಟು ಬಾರಿ ನೀನು ಒದೆ ತಿಂದು ಓಡಿ ಹೋಗಿರುವೆಯೋ ಲೆಕ್ಕವೇ ಇಲ. ನಿನ್ನೊಡನೆ ನಾನು ಯುದ್ಧ ಮಾಡಲಾರೆ, ಎನ್ನುತ್ತಾ ವಾಯುವೇಗದಿಂದ ಧರ್ಮಜನ ಸೇನೆಗೆ ರಥಾಲ್ಲಿ ನುಗ್ಗಲು, ದೊರೆಗೆ ವಿಪತ್ತು ಬಂದಿತೆಂದು ಭೀಮ ಸೇನನ ಸೈನಿಕರು ದ್ರೋಣನನ್ನು ಮುತ್ತಿದರು.

ಅರ್ಥ:
ಬಾರಿ: ಸರದಿ, ಸಲ; ಪಲಾಯನ: ಓಡುವಿಕೆ, ಪರಾರಿ; ಸಿರಿ: ಐಶ್ವರ್ಯ; ಸೇರು: ಹೊಂದು; ವೀರ: ಶೂರ; ಭಂಡ: ನಾಚಿಕೆ, ಲಜ್ಜೆ; ನೂಕು: ತಳ್ಳು; ಸಾಕು: ನಿಲ್ಲು; ಅನಿಲ: ವಾಯು; ಜವ: ವೇಗ; ರಥ: ಬಂಡಿ; ಬಿಟ್ಟು: ತೊರೆ; ಜನಪತಿ: ರಾಜ; ಮೋಹರ: ಯುದ್ಧ; ಕವಿ: ಆವರಿಸು; ರಾಯ: ರಾಜ; ವಿಪತ್ತು: ಅಪಾಯ, ಆಪತ್ತು; ಅಖಿಳ: ಎಲ್ಲಾ; ಭಟ: ಸೈನಿಕ; ನಿಕರ: ಗುಂಪು;

ಪದವಿಂಗಡಣೆ:
ಎನಿತು+ ಬಾರಿ +ಪಲಾಯನವ +ಸಿರಿ
ನಿನಗೆ +ಸೇರಿತು +ವೀರ +ಭಂಡನೊಳ್
ಎನಗೆ +ನೂಕದು +ಸಾಕು +ಧೃಷ್ಟದ್ಯುಮ್ನ +ನಿಲ್ಲೆನುತ
ಅನಿಲ+ಜವದಲಿ +ರಥವ +ಬಿಟ್ಟನು
ಜನಪತಿಯ +ಮೋಹರಕೆ+ ಕವಿದುದು
ತನತನಗೆ +ರಾಯನ +ವಿಪತ್ತಿನೊಳ್+ಅಖಿಳ +ಭಟ+ನಿಕರ

ಅಚ್ಚರಿ:
(೧) ಸೋತಿರುವೆ ಎಂದು ಹೇಳಲು – ಪಲಾಯನ ಸಿರಿ ಪದದ ಬಳಕೆ
(೨) ವಾಯುವೇಗ ಎಂದು ಹೇಳಲು ಅನಿಲಜವ ಪದದ ಬಳಕೆ
(೩) ಜನಪತಿ, ರಾಯ – ಸಮಾನಾರ್ಥಕ ಪದ

ಪದ್ಯ ೨೮: ದ್ರೋಣನು ಎಷ್ಟು ಜನರನ್ನು ಸಂಹರಿಸಿದನು?

ಆರು ಸಾವಿರ ಕುದುರೆಯೊಂಬೈ
ನೂರು ಗಜಘಟೆ ಸಾವಿರದ ಮೂ
ನೂರು ರಥವೊಗ್ಗಾಗಿ ಬಿದ್ದುದು ಲಕ್ಷಪಾಯದಳ
ಏರುವಡೆದವರನು ಪಲಾಯನ
ಸೂರೆಕಾರರನವರ ದಳದಲಿ
ತೋರಿ ಹೇಳುವರೆನ್ನ ಹವಣೇ ಭೂಪ ಕೇಳೆಂದ (ದ್ರೋಣ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆರು ಸಾವಿರ ಕುದುರೆ, ಒಂಬೈನೂರು ಆನೆ, ಒಂದು ಸಾವಿರದ ಮುನ್ನೂರು ರಥಗಳು, ಲಕ್ಷ ಕಾಲಾಳುಗಳನ್ನು ದ್ರೋಣನು ಸಂಹರಿಸಿದನು. ಎಷ್ಟು ಜನ ಗಾಯಗೊಂಡರೋ ಎಷ್ಟು ಜನ ಓಡಿಹೋದರೋ ನಾನು ಹೇಳಲಾರೆ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಸಾವಿರ: ಸಹಸ್ರ; ಕುದುರೆ: ಅಶ್ವ; ಗಜಘಟೆ: ಆನೆಗಳ ಗುಂಪು; ರಥ: ಬಂಡಿ; ಬಿದ್ದು: ಬೀಳು; ಪಾಯದಳ: ಸೈನಿಕ; ಪಲಾಯನ: ಓಡುವಿಕೆ, ಪರಾರಿ; ಸೂರೆ: ಕೊಳ್ಳೆ, ಲೂಟಿ; ದಳ: ಸೈನ್ಯ; ತೋರು: ಗೋಚರಿಸು; ಹೇಳು: ತಿಳಿಸು; ಹವಣೆ: ಮಿತಿ, ಅಳತೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆರು +ಸಾವಿರ +ಕುದುರೆ+ಒಂಬೈ
ನೂರು +ಗಜಘಟೆ +ಸಾವಿರದ+ ಮೂ
ನೂರು +ರಥವೊಗ್ಗಾಗಿ+ ಬಿದ್ದುದು +ಲಕ್ಷ+ಪಾಯದಳ
ಏರುವಡೆದ್+ಅವರನು +ಪಲಾಯನ
ಸೂರೆಕಾರರನ್+ಅವರ +ದಳದಲಿ
ತೋರಿ +ಹೇಳುವರೆನ್ನ +ಹವಣೇ +ಭೂಪ +ಕೇಳೆಂದ

ಅಚ್ಚರಿ:
(೧) ನೂರು – ೨,೩ ಸಾಲಿನ ಮೊದಲ ಪದ

ಪದ್ಯ ೧೪: ಘಟೋತ್ಕಚನನೆದುರು ಕುರುಸೈನ್ಯವೇಕೆ ನಿಲ್ಲಲಿಲ್ಲ?

ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಘಟೋತ್ಕಚನ ದಾಳಿ, ಧೈರ್ಯ, ಯುದ್ಧದ ಚಾತುರ್ಯ, ಇವನ ಮೀರಿದ ಸತ್ವಗಳನ್ನು ದೇವತೆಗಳೂ ಎದುರಿಸಿ ನಿಲ್ಲಲಾರರು ಎಂದ ಮೇಲೆ ನಮ್ಮ ಕುರುಸೈನ್ಯದ ಪಾಡೇನು. ನಿಮ್ಮ ಸೈನ್ಯವು ಪಲಾಯನ ಮಾಡಿದರು.

ಅರ್ಥ:
ಧಾಳಿ: ಆಕ್ರಮಣ; ಧೈರ್ಯ: ದಿಟ್ಟತನ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಆಹವ: ಯುದ್ಧ; ಹೊರೆಗೆ: ಭಾರ, ಹೊರೆ; ಭಾರಿ: ಅತಿಶಯವಾದ; ವೆಗ್ಗಳಿಕೆ: ಶ್ರೇಷ್ಠತೆ; ದಿವಿಜ: ಅಮರರು; ನೂಕು: ತಳ್ಳು; ಪಾಡು: ಸ್ಥಿತಿ; ಪಲಾಯನ: ಓಡುವಿಕೆ, ಪರಾರಿ; ತವನಿಧಿ: ಕೊನೆಯಾಗದ ಭಂಡಾರ; ಬಲ: ಸೈನ್ಯ; ಕೇಳು: ಆಲಿಸು;

ಪದವಿಂಗಡಣೆ:
ಇವನ+ ಧಾಳಿಯನ್+ಇವನ +ಧೈರ್ಯವನ್
ಇವನ +ಹೂಣಿಗತನವನ್+ಇವನ್
ಆಹವದ +ಹೊರಿಗೆಯನ್+ಇವನ +ಭಾರಿಯ +ವೆಗ್ಗಳೆಯತನವ
ದಿವಿಜರಾನಲು +ನೂಕದಿದು+ ನ
ಮ್ಮವರ +ಪಾಡೇನೈ +ಪಲಾಯನ
ತವನಿಧಿಯಲೇ +ನಿಮ್ಮ +ಬಲ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಪಲಾಯನವನ್ನು ವಿವರಿಸುವ ಪರಿ – ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ

ಪದ್ಯ ೧೨: ಯೋಧರು ಸುಪ್ರತೀಕಗಜನನ್ನು ಕಂಡು ಏನು ಹೇಳಿದರು?

ಇದು ಗಜಾಸುರನೋ ಮಹಾ ದೇ
ವಿದುವೆ ಮಹಿಷಾಸುರನ ಮಾಯಾ
ರದನಿಯೋ ದಿಟವಿದನು ಗೆಲುವರೆ ಭೀಮ ಫಲುಗುಣರು
ತ್ರಿದಶ ರಿಪುಗಳ ಗಂಡನಿದು ಕಾ
ದಿದೆವು ನಾವಿಂದೆನುತ ಸುಭಟರು
ಕದಡಿ ಸರಿದುದು ಸೂರೆಗೊಂಡುದು ಬಲ ಪಲಾಯನವ (ದ್ರೋಣ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಇದು ಬರಿಯ ಯುದ್ಧದಾನೆಯಲ್ಲ, ಇದು ಗಜಾಸುರನೋ, ಮಹಿಷಾಸುರನ ಮಾಯಾದಂತಿಯೋ ಇರಬೇಕು. ಇದನ್ನು ಭೀಮಾರ್ಜುನರು ಗೆಲ್ಲಬಹುದೇ? ಅಸುರರ ಗಂಡನಂತಿರುವ ಇದರೊಡನೆ ಕಾದಿ ಗೆದ್ದು ಬಿಟ್ಟೆವು, ಎಂದು ಯೋಧರು ಚದುರಿ ಪಲಾಯನ ಮಾಡಿದರು.

ಅರ್ಥ:
ಗಜ: ಆನೆ; ಅಸುರ: ರಾಕ್ಷಸ; ಗಜಾಸುರ: ಒಬ್ಬ ರಾಕ್ಷಸನ ಹೆಸರ್; ಮಹಾದೇವ: ಶಿವ; ಮಹಿಷ: ಎಮ್ಮೆ; ಮಾಯಾ: ಇಂದ್ರಜಾಲ; ರದನಿ: ಆನೆ, ದಂತವನ್ನು ಲೆಕ್ಕಣಿಕೆಯಾಗಿ ಉಳ್ಳವನು (ಗಣಪತಿ); ದಿಟ: ಸತ್ಯ; ಗೆಲುವು: ಜಯ; ತ್ರಿದಶ: ಮೂವತ್ತು; ರಿಪು: ವೈರಿ; ಗಂಡ: ಶೂರ, ವೀರ, ಪತಿ; ಕಾದು: ಹೋರಾಡು; ಸುಭಟ: ಪರಾಕ್ರಮಿ; ಕದಡು: ಕಲಕಿದ ದ್ರವ, ಕಲ್ಕ; ಸರಿ: ಸದೃಶ, ಸಾಟಿ; ಸೂರೆ:ಲೂಟಿ, ಕೊಳ್ಳೆ; ಬಲ: ಸೈನ್ಯ; ಪಲಾಯನ: ಓಡುವಿಕೆ, ಪರಾರಿ;

ಪದವಿಂಗಡಣೆ:
ಇದು+ ಗಜಾಸುರನೋ +ಮಹಾದೇವ
ಇದುವೆ +ಮಹಿಷಾಸುರನ +ಮಾಯಾ
ರದನಿಯೋ +ದಿಟವ್+ಇದನು +ಗೆಲುವರೆ+ ಭೀಮ +ಫಲುಗುಣರು
ತ್ರಿದಶ +ರಿಪುಗಳ+ ಗಂಡನಿದು+ ಕಾ
ದಿದೆವು +ನಾವಿಂದ್+ಎನುತ +ಸುಭಟರು
ಕದಡಿ +ಸರಿದುದು +ಸೂರೆಗೊಂಡುದು +ಬಲ +ಪಲಾಯನವ

ಅಚ್ಚರಿ:
(೧) ಸುಪ್ರತೀಕ ಗಜವನ್ನು ಹೋಲಿಸುವ ಪರಿ – ಗಜಾಸುರ, ಮಹಿಷಾಸುರ, ಮಾಯಾರದನಿ