ಪದ್ಯ ೩೧: ವಿಚಿತ್ರವೀರ್ಯನು ರಾಜನೆಂದು ಆದನು?

ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ (ಆದಿ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶಂತನುವು ಕಾಲಗತಿಯಿಂದ ಸ್ವರ್ಗಸ್ಥನಾದನು. ಅವನ ನಂತರ ಚಿತ್ರಾಂಗದನು ರಾಜನಾದನು. ಜನಮೇಜಯ ರಾಜ ಕೇಳು, ಕೆಲವು ಕಾಲ ಕಳೆದ ಮೇಲೆ ಚಿತ್ರಾಂಗದನು ಗಂಧರ್ವರೊಡನೆ ಕಾದಿ ಮೃತನಾದನು. ನಂತರ ವಿಚಿತ್ರವೀರ್ಯನು ರಾಜನಾದನು.

ಅರ್ಥ:
ಮಹೀಪತಿ: ರಾಜ; ಸುರ: ದೇವತೆ; ಸೇರು: ಜೊತೆಗೂಡು; ಬಳಿಕ: ನಂತರ; ಧರಣಿಯೊಡೆಯ: ರಾಜ; ಕುಮಾರ: ಮಗ; ಅರಸ: ರಾಜ; ಕೇಳು: ಆಲಿಸು; ಕಾಲಾಂತರ: ಸಮಯದ ನಂತರ; ಕಾದು: ಯುದ್ಧಮಾಡು; ಮಡಿ: ಸಾವು; ಪಟ್ಟ: ಅಧಿಕಾರ;

ಪದವಿಂಗಡಣೆ:
ಇರಲಿರಲು+ ಶಂತನು +ಮಹೀಪತಿ
ಸುರರೊಳಗೆ +ಸೇರಿದನು +ಬಳಿಕೀ
ಧರಣಿ+ಒಡೆತನವಾಯ್ತು +ಚಿತ್ರಾಂಗದ +ಕುಮಾರಂಗೆ
ಅರಸ +ಕೇಳೈ +ಕೆಲವು +ಕಾಲಾಂ
ತರದಲ್+ಆತನು +ಕಾದಿ +ಗಂಧ
ರ್ವರಲಿ +ಮಡಿದನು +ಪಟ್ಟವಾಯ್ತು +ವಿಚಿತ್ರವೀರ್ಯಂಗೆ

ಅಚ್ಚರಿ:
(೧) ಮಹೀಪತಿ, ಅರಸ, ಧರಣಿಯೊಡೆಯ – ಸಮಾನಾರ್ಥಕ ಪದ
(೨) ಸತ್ತನು ಎಂದು ಹೇಳುವ ಪರಿ – ಮಹೀಪತಿ ಸುರರೊಳಗೆ ಸೇರಿದನು, ಮಡಿದನು

ಪದ್ಯ ೭: ಯಾರಿಗೆ ಯಾವ ಪದ ಸಿಕ್ಕಿತು?

ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು
ವರ ಕುಮಾರರು ಯಮಳರಲ್ಲಿಗೆ
ಹಿರಿಯ ಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ್ವಾಧಿಕಾರದಲಿ (ಗದಾ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಧರ್ಮಜನಿಗೆ ಪಟ್ಟ, ಭೀಮನಿಗೆ ಯವುರಾಜ, ಅರ್ಜುನನು ಸೇನಾಧಿಪತಿ, ನಕುಲ ಸಹದೇವರೊಡನೆ ಪ್ರಧಾನಮಂತ್ರಿ ವಿದುರ, ಯುಯುತ್ಸುವಿಗೆ ಸರ್ವಾಧಿಕಾರವನ್ನು ನೀಡಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪಟ್ಟ: ಅಧಿಕಾರ ಸೂಚಕವಾದ ಚಿನ್ನದ ಪಟ್ಟಿ, ಹಣೆಗಟ್ಟು; ಹಿರಿ: ದೊಡ್ಡ; ಅರಸ: ರಾಜ; ಯುವರಾಜ: ರಾಜನ ಉತ್ತರಾಧಿಕಾರಿ; ಹರಿ: ವಾಯು; ತನೂಜ: ಮಗ; ಸೇನಾಪತಿ: ಸೇನದ ಮುಖ್ಯಸ್ತ; ವರ: ಶ್ರೇಷ್ಠ; ಕುಮಾರ: ಮುಗ; ಯಮಳ: ಅವಳಿ; ಪರುಠವಿಸು: ಸಿದ್ಧಗೊಳಿಸು; ಸಚಿವ: ಮಂತ್ರಿ; ಅವನಿಪ: ರಾಜ; ಅಧಿಕಾರ: ನಡೆಸುವ;

ಪದವಿಂಗಡಣೆ:
ಅರಸ +ಕೇಳೈ +ಪಟ್ಟವದು +ಹಿರಿ
ಅರಸನದು +ಯುವರಾಜಪಟ್ಟವೆ
ಹರಿ+ತನೂಜನೊಳಾಯ್ತು+ ಸೇನಾಪತಿ +ಧನಂಜಯನು
ವರ +ಕುಮಾರರು +ಯಮಳರಲ್ಲಿಗೆ
ಹಿರಿಯ +ಸಚಿವನು +ವಿದುರನ್+ಅವನಿಪ
ಪರುಠವಿಸಿದ+ ಯುಯುತ್ಸುವನು+ ಸರ್ವಾಧಿಕಾರದಲಿ

ಅಚ್ಚರಿ:
(೧) ಅರಸ, ಹಿರಿಯರಸ – ಅರಸ ಪದದ ಬಳಕೆ

ಪದ್ಯ ೫೬: ಶಲ್ಯನು ಧರ್ಮಜನನ್ನು ಹೇಗೆ ಕೆಣಕಿದನು?

ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೨ ಸಂಧಿ, ೫೬ ಪದ್ಯ)

ತಾತ್ಪರ್ಯ:
ಬರೀ ಅಬ್ಬರಿಸುವೆಯೋ? ಬಾಣಗಳಿಂದ ಹೊಡೆಯುವುದು ಹೇಗೆಂಬ ಅರಿವಿದೆಯೋ? ನಿಮ್ಮೈವರಿಗೂ ದ್ರೌಪದಿಯು ಪತ್ನಿ, ಹಾಗೆಯೇ ಭೂಮಿಯು ಸಹ. ಕೌರವನಾದರೋ ಹೊರಗಿನವನು, ಅವನನ್ನು ಬಿಟ್ಟು, ಈ ಭೂಮಿಯ ಚಕ್ರಾಧಿಪತ್ಯದ ಅಭಿಷೇಕ ನೆನಗೆ ಎಂದಾಗುತ್ತದೆ ಎಂದು ಹೇಳುತ್ತ ಬಾಣಗಳನ್ನು ಬಿಟ್ಟನು.

ಅರ್ಥ:
ಬರಿ: ಕೇವಲ; ಬೊಬ್ಬಾಟ: ಆರ್ಭಟ, ಅಬ್ಬರ; ಶರಾವಳಿ: ಬಾಣಗಳ ಸಾಲು; ಕೆಲಸ: ಕಾರ್ಯ; ಧರಣಿ: ಭೂಮಿ; ಎರಕ: ಪ್ರೀತಿ, ಅನುರಾಗ; ಗಡ: ಅಲ್ಲವೆ; ಸಮ: ಸರಿಯಾದ; ಹೊರಗು: ಆಚೆಯವ; ರಾಯ: ರಾಜ; ಮುಡಿ: ತಲೆ; ಸಿರಿ: ಐಶ್ವರ್ಯ; ನೀರು: ಜಲ; ಎರೆವ: ಹಾಕುವ, ಸಲುಹು; ಪಟ್ಟ: ಅಧಿಕಾರ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬರಿಯ +ಬೊಬ್ಬಾಟವೊ +ಶರಾವಳಿ
ಯಿರಿ+ಕೆಲಸವೇನುಂಟೊ +ಧರಣಿಯಲ್
ಎರಕ +ನಿಮ್ಮೈವರಿಗೆ+ ಗಡ+ ದ್ರೌಪದಿಗೆ +ಸಮವಾಗಿ
ಹೊರಗು+ ಗಡ+ ಕುರುರಾಯನ್+ಈಗಳೊ
ಮರುದಿವಸವೋ +ಸಿರಿಮುಡಿಗೆ+ ನೀ
ರೆರೆವ+ ಪಟ್ಟವದೆಂದು +ನಿಮಗೆನುತ್+ಎಚ್ಚನಾ +ಶಲ್ಯ

ಅಚ್ಚರಿ:
(೧) ರಾಜ್ಯಾಭಿಷೇಕ ಎಂದು ಹೇಳುವ ಪರಿ – ಸಿರಿಮುಡಿಗೆ ನೀರೆರೆವ ಪಟ್ಟ
(೨) ಧರ್ಮಜನನ್ನು ಹಂಗಿಸುವ ಪರಿ – ಬರಿಯ ಬೊಬ್ಬಾಟವೊ ಶರಾವಳಿಯಿರಿಗೆಲಸವೇನುಂಟೊ

ಪದ್ಯ ೪೯: ಯಾರ ಮಕ್ಕಳು ಕೃಷ್ಣನಿಂದ ಪಟ್ಟಾಭಿಷಿಕ್ತರಾದರು?

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ತ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿರಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜರಾಸಂಧನ ಮಗ, ಸಾಲ್ವ, ಹಂಸ, ನಿಶುಂಭ, ನರಕ, ಪೌಂಡ್ರಕ, ದಂತವಕ್ತ್ರ ಇವರ ಮಕ್ಕಳೂ ಯುದ್ಧದಲ್ಲಿ ಕೃಷ್ಣನಿಂದ ತಮ್ಮ ತಂದೆಯರನ್ನು ಕಳೆದುಕೊಂಡ ನಂತರ ಕೃಷ್ಣನಿಂದಲೇ ಪಟ್ಟಕ್ಕೆ ಬಂದವರಲ್ಲವೇ ಎಂದು ಭೀಷ್ಮರು ಕೇಳಿದರು.

ಅರ್ಥ:
ಸುತ: ಮಗ; ಮಗಧಸುತ: ಜರಾಸಂಧ; ಹಗೆ: ವೈರತ್ವ; ಮುರಾಂತಕ: ಕೃಷ್ಣ; ಕಾಳಗ: ಯುದ್ಧ;ಇಕ್ಕು: ಸಾಯಿಸು; ಪಟ್ಟ: ಪದವಿ; ಬಿರಿಸು: ಕಟ್ಟು; ಹೇಳು: ತಿಳಿಸು;

ಪದವಿಂಗಡಣೆ:
ಮಗಧಸುತನ್+ಈ+ ಸಾಲ್ವ +ಹಂಸನ
ಮಗ +ನಿಶುಂಭನ+ ಸೂನು +ನರಕನ
ಮಗನು +ಪೌಂಡ್ರಕ +ದಂತವಕ್ತ್ರನ+ ತನುಜರ್+ಇವರೆಲ್ಲ
ಹಗೆಯ +ಮಾಡಿ +ಮುರಾಂತಕನ+ ಕಾ
ಳಗದೊಳ್+ಎಲ್ಲರನ್+ಇಕ್ಕಿ +ಪಟ್ಟವ
ಬಿರಿಸಿಕೊಂಡವರ್+ಅಲ್ಲವೇ +ಹೇಳೆಂದನಾ +ಭೀಷ್ಮ

ಅಚ್ಚರಿ:
(೧) ಮಗ, ಸೂನು, ತನುಜ – ಸಮನಾರ್ಥಕ ಪದ
(೨) ಮಗ – ೧-೩ ಸಾಲಿನ ಮೊದಲ ಪದ