ಪದ್ಯ ೨: ಭೀಮ ದುರ್ಯೋಧನರು ಯಾವ ರೀತಿ ಹೋರಾಡಿದರು?

ಹಳಚಿದರು ಸುಳಿ ಘಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು (ಗದಾ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಸುಳಿಗಾಳಿಯಂತೆ ಎರಗುವ ಗರುಡನಂತೆ ಹೊಯ್ದು ಸುತ್ತಿ ಬಿಗಿದು ಮದಗಜಗಳಂತೆ ಮೇಲ್ಬಿದ್ದು ಅಗ್ನಿಯಂತೆ ಮುನ್ನುಗ್ಗಿ ಸುಟ್ಟು, ಹಾವಿನಂತೆ ಅಪ್ಪಳಿಸಿ, ಪಾದರಸದಂತೆ ಚುರುಕಾಗಿ ವೀರರಿಬ್ಬರೂ ಕಾದಿದರು.

ಅರ್ಥ:
ಹಳಚು: ತಾಗು, ಬಡಿ; ಸುಳಿ: ಆವರಿಸು, ಮುತ್ತು; ಗಾಳಿ: ವಾಯು; ಖಗ: ಪಕ್ಷಿ; ಖಗಪತಿ: ಪಕ್ಷಿರಾಜ (ಗರುಡ); ಹೊಯ್ಲು: ಹೊಡೆ; ಬಳಸು: ಆವರಿಸು; ಬಿಗಿ: ಭದ್ರವಾಗಿರುವುದು; ಎರಗು: ಬೀಳು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಮತ್ತಗಜ: ಮದಕರಿ; ಶಿಖಿ: ಬೆಂಕಿ; ಚೂರಿಸು: ಚಳಪಳಿಸುವಂತೆ ತಿರುಗಿಸು; ನಿಲುಕು: ಬಿಡುವು, ವಿರಾಮ; ಫಣಿ: ಹಾವು; ಪಯ: ಪಾದ; ಲುಳಿ: ರಭಸ, ವೇಗ; ಒದೆ: ತುಳಿ, ಮೆಟ್ಟು; ಪಾದರಸ: ಒಂದು ಬಗೆಯ ದ್ರವ ರೂಪದ ಲೋಹ, ಪಾರಜ; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ಹಳಚಿದರು +ಸುಳಿ +ಘಾಳಿಯಂತಿರೆ
ಸುಳಿದು +ಖಗಪತಿಯಂತೆ +ಹೊಯ್ಲಲಿ
ಬಳಸಿ +ಬಿಗಿದ್+ಎರಗಿದರು +ಬಿಡೆಯದ +ಮತ್ತ+ಗಜದಂತೆ
ಅಳುವಿದರು +ಶಿಖಿಯಂತೆ +ಚೂರಿಸಿ
ನಿಲುಕಿದರು +ಫಣಿಯಂತೆ +ಪಯ+ಮೈ
ಲುಳಿಯಲ್+ಒಲೆದರು +ಪಾದರಸದಂದದಲಿ+ ಪಟುಭಟರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ

ಪದ್ಯ ೨೩: ಸೈನ್ಯವು ಹೇಗೆ ಸಿದ್ಧವಾಯಿತು?

ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ (ದ್ರೋಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುದ್ಧ ಲಂಪಟರಾದ ವೀರರು, ಸೈಂಧವನ ಸೇಡು ನಮ್ಮದು, ಅರ್ಜುನನನ್ನು ಕರೆಯಿರಿ ಎಂದು ಅಬ್ಬರಿಸಿ ನುಗ್ಗಿದರು. ಒಂದೇ ಸಾಲಿನಲ್ಲಿ ಉತ್ಸಾಹಿಸಿ ಸೈನ್ಯವು ರಾತ್ರಿಯಲ್ಲಿ ನಿಂತಿತು. ಅವರ ಉತ್ಸಾಹವು ಶತ್ರು ವೀರರ ಧೈರ್ಯವನ್ನು ಅಲುಗಾಡಿಸಿತು.

ಅರ್ಥ:
ನರ: ಅರ್ಜುನ; ಕರೆ: ಬರೆಮಾಡು; ರಾಜ: ಅರಸ; ಹರಿಬ: ಕೆಲಸ, ಕಾರ್ಯ; ಅಬ್ಬರಿಸು: ಗರ್ಜಿಸು; ನೂಕು: ತಳ್ಳು; ಕದನ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ಪಟುಭಟ: ಪರಾಕ್ರಮಿ; ಸರಿಸ:ನೇರವಾಗಿ, ಸರಳವಾಗಿ; ಲಟಕಟ: ಉದ್ರೇಕ, ಚಕಿತನಾಗು; ಮೋಹರ: ಯುದ್ಧ; ಮರಳಿ: ಹಿಂದಿರುಗು ನಿಂದು: ನಿಲ್ಲು; ರಣ: ಯುದ್ಧ; ರಜನೀ: ರಾತ್ರಿ; ಚರರು: ಓಡಾಡುವ; ಥಟ್ಟಣೆ: ಗುಂಪು; ಧಾತು: ತೇಜಸ್ಸು, ಮೂಲವಸ್ತು; ಕೆಡಿಸು: ಹಾಳುಮಾಡು; ದಿಟ್ಟ: ವೀರ; ಉಬ್ಬಟೆ: ಅತಿಶಯ, ಹಿರಿಮೆ;

ಪದವಿಂಗಡಣೆ:
ನರನ +ಕರೆ +ಕರೆ +ಸಿಂಧುರಾಜನ
ಹರಿಬವ್+ಎಮ್ಮದು +ತಮ್ಮದೆಂದ್
ಅಬ್ಬರಿಸಿ +ನೂಕಿತು +ಕದನ +ಲಂಪಟರಾಗಿ +ಪಟುಭಟರು
ಸರಿಸದಲಿ +ಲಟಕಟಿಸಿ +ಮೋಹರ
ಮರಳಿ +ನಿಂದುದು +ರಣಕೆ +ರಜನೀ
ಚರರ +ಥಟ್ಟಣೆ +ಧಾತುಗೆಡಿಸಿತು +ದಿಟ್ಟರ್+ಉಬ್ಬಟೆಯ

ಅಚ್ಚರಿ:
(೧) ಶೂರರ ಉತ್ಸಾಹ – ಅಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
(೨) ಲಟಕಟಿಸಿ, ಲಂಪಟ – ಲ ಕಾರದ ಪದಗಳ ಬಳಕೆ

ಪದ್ಯ ೫: ಕರ್ಣನು ಕೋಪದಿಂದ ಏನೆಂದು ನುಡಿದನು?

ಇತ್ತ ದುಗುಡವ ಹಿಡಿದ ರಾಯನ
ಕೆತ್ತ ಮುಖವನು ಕಂಡು ಭಟರೆದೆ
ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ
ಇತ್ತ ನೋಡವನೀಶ ಸೈಂಧವ
ನೆತ್ತಲಿಹನತ್ತಲು ಮುರಾರಿಯ
ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ (ದ್ರೋಣ ಪರ್ವ, ೧೫ ಸಂಧಿ, ೫ ಪದ್ಯ)

ತಾತ್ಪರ್ಯ:
ಕೌರವರ ಪಾಳಯದಲ್ಲಿ ದುಃಖಿಸುತ್ತಿದ್ದ ದುರ್ಯೋಧನನ ಮುಖ ವಿವರ್ಣವಾಗಿತ್ತು. ಅದನ್ನು ಕಂಡು ಕೌರವ ಸೈನ್ಯದ ವೀರರ ಎದೆಗಳಲ್ಲಿ ಕೋಪಾಗ್ನಿಯುಕ್ಕಿತು. ಮುಖ ಕಪ್ಪಿಟ್ಟವು. ಕರ್ಣನು ರಾಜಾ ಇತ್ತ ನೋಡು, ಸೈಂಧವನೆಲ್ಲಿರುವನೋ ಅಲ್ಲಿಗೆ ಕೃಷ್ಣನ ಆಶ್ರಿತರನ್ನು (ಪಾಂಡವರನ್ನಿ) ಕಳಿಸುತ್ತೇನೆ ಎಂದು ಕೋಪದಿಂದ ನುಡಿದನು.

ಅರ್ಥ:
ದುಗುಡ: ದುಃಖ; ಹಿಡಿ: ಗ್ರಹಿಸು; ರಾಯ: ರಾಜ; ಮುಖ: ಆನನ; ಕಂಡು: ನೋಡು; ಭಟ: ಸೈನಿಕ; ಹೊತ್ತು: ಹತ್ತಿಕೊಳ್ಳು, ಉರಿ; ಹೊಗೆ: ಧೂಮ; ತೋರು: ಗೋಚರಿಸು; ಮೋರೆ: ಮುಖ; ಪಟುಭಟ: ಶೂರನಾದ ಯೋಧ; ಅವನೀಶ: ರಾಜ; ಮುರಾರಿ: ಕೃಷ್ಣ; ತೆತ್ತು: ಮೋಸ; ಖಾತಿ: ಕೋಪ; ತೆತ್ತಿಗ: ನೆಂಟ, ಗೆಳೆಯ;

ಪದವಿಂಗಡಣೆ:
ಇತ್ತ +ದುಗುಡವ +ಹಿಡಿದ +ರಾಯನಕ್
ಎತ್ತ +ಮುಖವನು +ಕಂಡು +ಭಟರೆದೆ
ಹೊತ್ತಿದವು +ಹೊಗೆ+ತೋರಿದವು +ಮೋರೆಗಳು +ಪಟುಭಟರ
ಇತ್ತ +ನೋಡ್+ಅವನೀಶ +ಸೈಂಧವನ್
ಎತ್ತಲಿಹನ್+ಅತ್ತಲು +ಮುರಾರಿಯ
ತೆತ್ತಿಗರ +ಕಳುಹಿಸುವೆನೆಂದನು +ಖಾತಿಯಲಿ +ಕರ್ಣ

ಅಚ್ಚರಿ:
(೧) ಇತ್ತ, ಎತ್ತ – ೧,೨,೪, ೫ ಸಾಲಿನ ಮೊದಲ ಪದ
(೨) ಪಾಂಡವರು ಎಂದು ಹೇಳುವ ಪರಿ – ಮುರಾರಿಯ ತೆತ್ತಿಗರ

ಪದ್ಯ ೨: ಧರ್ಮಜನು ಚಿಂತೆಗೊಂಡು ಯಾರ ಮುಖವನ್ನು ನೋಡಿದನು?

ಕಳುಹಲತ್ತಲು ಹೋಗಿ ಸಾತ್ಯಕಿ
ತಿಳಿದು ಮರಳಿದುದಿಲ್ಲ ಫಲುಗುಣ
ನಳಿದನೋ ಮೇಣುಳಿದನೋ ಶರಹತಿಗೆ ಬಳಲಿದನೊ
ತಿಳಿದು ಹೇಳುವರಾರು ಪಟುಭಟ
ರೊಳಗೆ ಮಕುಟದ ಮಹಿಮರೆನುತಳ
ವಳಿದು ಭೀಮನ ವದನವನು ನೋಡಿದನು ಭೂಪಾಲ (ದ್ರೋಣ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಏನಾಯಿತೋ ನೋಡಿಕೊಂಡು ಬಾ ಎಂದು ಸಾತ್ಯಕಿಯನ್ನು ಕಳಿಸಿದರೆ, ಅವನು ಇನ್ನೂ ಮರಳಿಬರಲಿಲ್ಲ. ಅರ್ಜುನನು ಅಳಿದನೋ, ಉಳಿದನೋ, ಅಥವ ಶತ್ರುಗಳ ಹೊಡೆತದಿಂದ ಬಳಲಿರುವನೋ ಎನ್ನುವುದನ್ನು ತಿಳಿದು ಹಿಂದಿರುಗಿ ಬಂದು ಹೇಳುವಷ್ಟು ಸಮರ್ಥರು ನಮ್ಮ ರಾಜರಲ್ಲಿ ಯಾರಿದ್ದಾರೆ ಎಂದು ಧರ್ಮಜನು ಹಂಬಲಿಸಿ ಭೀಮನ ಮುಖವನ್ನು ನೋಡಿದನು.

ಅರ್ಥ:
ಕಳುಹು: ತೆರಳು, ಬೀಳ್ಕೊಡು; ಹೋಗು: ತೆರಳು; ತಿಳಿ: ಅರಿ; ಮರಳು: ಹಿಂದಿರುಗು; ಅಳಿ: ಸಾವು, ನಾಶ; ಮೇಣ್: ಅಥವ; ಉಳಿ: ಜೀವಿಸು; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಬಳಲು: ಆಯಸಗೊಳ್ಳು; ತಿಳಿ: ಅರಿ; ಹೇಳು: ತಿಳಿಸು; ಪಟುಭಟ: ಪರಾಕ್ರಮಿ; ಮಕುಟ: ಕಿರೀಟ; ಮಹಿಮ: ಸಮರ್ಥ; ಅಳವಳಿ: ಶಕ್ತಿಗುಂದು; ನೋಡು: ವೀಕ್ಷಿಸು; ಭೂಪಾಲ: ರಾಜ;

ಪದವಿಂಗಡಣೆ:
ಕಳುಹಲ್+ಅತ್ತಲು +ಹೋಗಿ +ಸಾತ್ಯಕಿ
ತಿಳಿದು +ಮರಳಿದುದಿಲ್ಲ+ ಫಲುಗುಣನ್
ಅಳಿದನೋ +ಮೇನ್+ಉಳಿದನೋ +ಶರಹತಿಗೆ+ ಬಳಲಿದನೊ
ತಿಳಿದು +ಹೇಳುವರಾರು+ ಪಟುಭಟ
ರೊಳಗೆ +ಮಕುಟದ +ಮಹಿಮರ್+ಎನುತ್+ಅಳ
ವಳಿದು +ಭೀಮನ +ವದನವನು +ನೋಡಿದನು +ಭೂಪಾಲ

ಅಚ್ಚರಿ:
(೧) ಸಮರ್ಥರು ಎಂದು ಹೇಳುವ ಪರಿ – ಪಟುಭಟರೊಳಗೆ ಮಕುಟದ ಮಹಿಮರ್

ಪದ್ಯ ೬೯: ಭೀಮನನ್ನು ಯಾರು ಮುತ್ತಿದರು?

ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡಜೋಡು ಬಲುಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬದುದು ನಿಬ್ಬರವಾಗಿ ಬಹುವಿಧ ವಾದ್ಯ ನಿರ್ಘೋಷ (ದ್ರೋಣ ಪರ್ವ, ೨ ಸಂಧಿ, ೬೯ ಪದ್ಯ)

ತಾತ್ಪರ್ಯ:
ಗದೆಯಿಂದ ವೈರಿಗಳನ್ನು ಬಡಿಯುತ್ತಾ ಬಂದ ಭೀಮನನ್ನು ಎಡಕ್ಕೆ, ಬಲಕ್ಕೆ ಎಲ್ಲಾ ದಿಕ್ಕುಗಳಲ್ಲಿ ಕೌರವ ವೀರರು ಮುತ್ತಿದರು. ಆನೆ, ಕುದುರೆ, ರಥಗಳು ಹಿಂಡುಹಿಂಡಾಗಿ ಬಂದವು. ರಣವಾದ್ಯಗಳು ಕರ್ಣಕಠೋರವಾಗಿ ಮೊರೆದವು.

ಅರ್ಥ:
ಗದೆ: ಮುದ್ಗರ; ಘಾತಘಾತಿಕಾರ: ಹಿಂಸೆ ಮಾಡುವವನು; ಇದಿರು: ಎದುರು; ದೆಸೆ: ದಿಕ್ಕು; ಹಬ್ಬು: ಹರಡು; ಬಲ: ಸೈನ್ಯ; ಜೋಡು: ಜೊತೆ, ಜೋಡಿ; ಬಲು: ತುಂಬ; ಭಾರಣೆ: ಮಹಿಮೆ, ಗೌರವ; ಪಟುಭಟ: ಪರಾಕ್ರಮಿ; ಮದ: ದರ್ಪ; ಗಜ: ಆನೆ; ನಿಡು: ಉದ್ದವಾದ, ದೀರ್ಘ; ತೇರು: ಬಂಡಿ; ಕುದುರೆ: ಅಶ್ವ; ಕಾಹು: ರಕ್ಷಣೆ; ಕೊಬ್ಬು: ಆಧಿಕ್ಯ, ಸಮೃದ್ಧಿ; ನಿಬ್ಬರ: ಅತಿಶಯ, ಹೆಚ್ಚಳ; ಬಹುವಿಧ: ಬಹಳ; ವಾದ್ಯ: ಸಂಗೀತದ ಸಾಧನ; ನಿರ್ಘೋಷ: ದೊಡ್ಡ ಘೋಷಣೆ;

ಪದವಿಂಗಡಣೆ:
ಗದೆಯ +ಘಾತಾಘಾತಿಕಾರನನ್
ಇದಿರುಗೊಂಡುದು +ದೆಸೆದೆಸೆಗೆ +ಹ
ಬ್ಬಿದುದು +ಬಲನ್+ಎಡಜೋಡು +ಬಲುಭಾರಣೆಯ +ಪಟುಭಟರು
ಮದಗಜದ +ನಿಡುವರಿಯ +ತೇರಿನ
ಕುದುರೆಕಾರರ +ಕಾಹಿನಲಿ +ಕೊ
ಬ್ಬದುದು +ನಿಬ್ಬರವಾಗಿ +ಬಹುವಿಧ +ವಾದ್ಯ +ನಿರ್ಘೋಷ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುದುರೆಕಾರರ ಕಾಹಿನಲಿ ಕೊಬ್ಬದುದು

ಪದ್ಯ ೧೩: ಭೀಷ್ಮರ ಸಾವಿನ ನಂತರ ಕೌರವರ ಪರಿಸ್ಥಿತಿ ಹೇಗಾಯಿತು?

ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ (ಭೀಷ್ಮ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಷ್ಮರ ಅವಸಾನವಾಗಲು, ಭಯವು ತೀರದ ನಿಧಿಯಾಯಿತು, ವೀರರ ಎದೆಗಳು ಎರದು ಹೋಳಾದವು, ಕೌರವ ವೀರರ ಏಳಿಗೆಯು ಕೈಸೂರೆಯಾಯಿತು. ಮನಸ್ಸಿನ ಸಂತೋಷ ಸುಕ್ಕಿತು. ಕೌರವ ಸೇನೆಯು ಗುಂಪಾಗಿರುವುದನ್ನು ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋಯಿತು. ಕೌರವರಾಜರು ಭಯ ಸಮುದ್ರದಲ್ಲಿ ತೇಲಿದರು.

ಅರ್ಥ:
ಬೆದರು: ಹೆದರು; ತವ: ನಿನ್ನ; ತವನಿಧಿ: ಕೊನೆಯಾಗದ ಭಂಡಾರ; ನಿಧಿ: ಐಶ್ವರ್ಯ; ಪಟುಭಟ: ಪರಾಕ್ರಮಿ; ಎದೆ: ವಕ್ಷಸ್ಥಳ; ಇಬ್ಬಗಿ: ಎರಡು ಹೋಳು; ವೀರ: ಶೂರ; ಅಭ್ಯುದಯ: ಏಳಿಗೆ; ಕೈಸೆರೆ: ಬಂಧನ; ಸುಕ್ಕು: ತೆರೆಗಟ್ಟಿರುವುದು; ಮನ: ಮನಸ್ಸು; ಸುಮ್ಮಾನ: ಸಂತೋಷ, ಹಿಗ್ಗು; ಹೊದರು: ತೊಡಕು, ತೊಂದರೆ; ಒಡೆ: ಸೀಳು; ಓಡು: ಧಾವಿಸು; ಭಯ: ಅಂಜಿಕೆ; ಜಲಧಿ: ಸಾಗರ; ತೇಕು: ತೇಲು, ಏಗು; ಜನಪ: ರಾಜ; ಅವಸಾನ: ಸಾವು, ಅಂತ್ಯ;

ಪದವಿಂಗಡಣೆ:
ಬೆದರು+ ತವನಿಧಿಯಾಯ್ತು +ಪಟು +ಭಟರ್
ಎದೆಗಳ್+ಇಬ್ಬಗಿಯಾಯ್ತು +ವೀರ
ಅಭ್ಯುದಯ +ಕೈಸೆರೆಯೋಯ್ತು +ಸುಕ್ಕಿತು +ಮನದ +ಸುಮ್ಮಾನ
ಹೊದರೊಡೆದು +ಕುರುಸೇನೆ +ತೆಗೆದ್
ಓಡಿದುದು +ಭಯಜಲಧಿಯಲಿ +ತೇಕಾ
ಡಿದರು +ಕೌರವ +ಜನಪರ್+ಈ+ ಭೀಷ್ಮ+ಅವಸಾನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಯಜಲಧಿಯಲಿ ತೇಕಾಡಿದರು ಕೌರವ ಜನಪ

ಪದ್ಯ ೫೯: ಕೌರವರು ಅರ್ಜುನನನ್ನು ಹೇಗೆ ಮುತ್ತಿದರು?

ಮತ್ತೆ ಹೊಸ ರಥ ನೂತನಾಸ್ತ್ರದ
ಲುತ್ತಮ ಪ್ರತ್ಯುಗ್ರ ಚಾಪದ
ಲೊತ್ತರಿಸಿ ಕವಿದುದು ಕಿರೀಟಿಯ ರಥವ ಮುರಿಯೆಸುತ
ಮತ್ತೆ ಕಡಿದನು ರಥವ ಚಾಪವ
ಮತ್ತೆ ಹೊಸ ಹೂಟೆಯೊಳು ಹೊಕ್ಕರು
ತೆತ್ತು ಸವೆಯರು ಶೌರ್ಯದಭಿಮಾನವನು ಪಟುಭಟರು (ಭೀಷ್ಮ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಕೌರವ ವಿರರೆಲ್ಲರೂ ಮತ್ತೆ ಹೊಸ ರಥ, ಕುದುರೆ, ಸಾರಥಿಯರೊಡನೆ ಹೊಸ ಬಿಲ್ಲುಗಳನ್ನು ಹಿಡಿದು ಅರ್ಜುನನ ರಥವನ್ನು ಮುರಿ ಎಂದಬ್ಬರಿಸುತ್ತಾ ಬರಲು ಮತ್ತೆ ಅರ್ಜುನನು ಮತ್ತೆ ಅವರ ಕುದುರೆ ರಥ ಸಾರಥಿ, ಧನುಸ್ಸುಗಳನ್ನು ಕದಿದನು. ಅವರು ಮತ್ತೆ ಹೊಸ ಓಜಿನಿಂದ ಅರ್ಜುನನನ್ನು ಮುತ್ತಿದರು. ಅರವ ಶೌರ್ಯ ಅಭಿಮಾನಗಳು ಸವೆಯಲಿಲ್ಲ.

ಅರ್ಥ:
ಹೊಸ: ನವೀನ; ರಥ: ಬಂಡಿ; ನೂತನ: ಹೊಸ; ಅಸ್ತ್ರ: ಶಸ್ತ್ರ; ಉತ್ತಮ: ಹೊಸ; ಪ್ರತಿ: ಎದುರು; ಉಗ್ರ: ಭಯಂಕರ; ಚಾಪ: ಬಿಲ್ಲು; ಕವಿ: ಆವರಿಸು; ಕಿರೀಟಿ: ಅರ್ಜುನ; ರಥ: ಬಂಡಿ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಕಡಿ: ಕತ್ತರಿಸು; ಮತ್ತೆ: ಪುನಃ; ಹೊಕ್ಕು: ಸೇರು; ತೆತ್ತು: ವಂಚನೆ; ಸವೆ: ನಿರ್ಮಿಸು; ಶೌರ್ಯ: ಪರಾಕ್ರಮ; ಅಭಿಮಾನ: ಹೆಮ್ಮೆ; ಪಟುಭಟ: ಶೂರ; ಹೂಟೆ: ಹೂಡುವುದು;

ಪದವಿಂಗಡಣೆ:
ಮತ್ತೆ +ಹೊಸ +ರಥ +ನೂತನ+ಅಸ್ತ್ರದಲ್
ಉತ್ತಮ +ಪ್ರತ್ಯುಗ್ರ +ಚಾಪದಲ್
ಒತ್ತರಿಸಿ+ ಕವಿದುದು +ಕಿರೀಟಿಯ +ರಥವ +ಮುರಿ+ಎಸುತ
ಮತ್ತೆ +ಕಡಿದನು +ರಥವ +ಚಾಪವ
ಮತ್ತೆ +ಹೊಸ +ಹೂಟೆಯೊಳು +ಹೊಕ್ಕರು
ತೆತ್ತು +ಸವೆಯರು +ಶೌರ್ಯದ್+ಅಭಿಮಾನವನು +ಪಟುಭಟರು

ಅಚ್ಚರಿ:
(೧) ಹೊಸ, ನೂತನ – ಸಮನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹೊಸ ಹೂಟೆಯೊಳು ಹೊಕ್ಕರು

ಪದ್ಯ ೯: ಪಾಂಡವರ ಸೈನ್ಯವು ಭೀಷ್ಮನ ಎದುರಿಗೆ ಹೇಗೆ ಸೋತವು?

ಚಳಶಿಳೀಮುಖರವಕೆ ಪಟುಭಟ
ರಳುಕಿದರು ವಿರಹಿಗಳಾವೊಲು ಸ
ಮ್ಮಿಳಿತ ಶಾಸ್ತ್ರಧ್ವನಿಗೆ ಸೆಡೆದರು ಮೂರ್ಖರಂದದಲಿ
ಕಲಿತ ಬಲ ಶತ ಕೋಟಿಗಿದಿರಾ
ಗಳಿದವದ್ರಿಗಳಂತೆ ಹರಿಪದ
ವಳಯ ವಿದಳಿತವಾಯ್ತು ಮೇಘವ್ರಾತದಂದದಲಿ (ಭೀಷ್ಮ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣಗಳ ಪ್ರಯೋಗಕ್ಕೆ (ದುಂಬಿಯ ನಾದಕ್ಕೆ) ಪಟು ಭಟರು ವಿರಹಿಗಳಂತೆ ಅಳುಕಿದರು. ಬೆರೆಸಿ ಹೊಯ್ದಾಡುವ ಶಾಸ್ತ್ರವಿಧಿಗೆ ಮೂರ್ಖರಂತೆ ಮುಖತಿರುಹಿದರು. ನಾವು ಜೋಡಿಸಿದ ಸೈನ್ಯವು, ವಿರೋಧಿ ಬಲಕ್ಕೆ ಇದಿರಾಗಿ ಬೆಟ್ಟಗಳು ಇಂದ್ರನ ಹೊಡೆತಕ್ಕೆ ಮುರಿದು ಹೋದಂತೆ ಸೋತವು. ಕುದುರೆಗಳು ಆಕಾಶದ ಮೋಡಗಳಂತೆ ಛಿದ್ರವಾದವು.

ಅರ್ಥ:
ಚಳಶಿಳೀಮುಖ: ಚಲಸಿತ್ತುರಿವ ಬಾಣ; ಪಟುಭಟ: ಶೂರನಾದ ಯೋಧ; ಅಳುಕು: ಹೆದರು; ವಿರಹಿ: ಪ್ರಿಯ ಯಾ ಪ್ರಿಯೆಯನ್ನು ಅಗಲಿದ ವ್ಯಕ್ತಿ; ಸಮ್ಮಿಳಿತ: ಚೆನ್ನಾಗಿ ಸೇರಿದ; ಶಾಸ್ತ್ರ: ಅಸ್ತ್ರ; ಧ್ವನಿ: ಶಬ್ದ; ಸೆಡೆ: ಗರ್ವಿಸು, ಅಹಂಕರಿಸು; ಮೂರ್ಖ: ತಿಳಿಗೇಡಿ; ಕಲಿತ: ಕೂಡಿದ; ಬಲ: ಶಕ್ತಿ; ಶತ: ನೂರು; ಕೋಟಿ: ಅಸಂಖ್ಯಾತ; ಅದ್ರಿ: ಬೆಟ್ಟ; ಹರಿ: ಕುದುರೆ; ಪದ: ಚರಣ; ವಿದಳಿತ: ನಾಶಮಾಡಿದ; ಮೇಘ: ಮೋಡ; ವ್ರಾತ: ಗುಂಪು;

ಪದವಿಂಗಡಣೆ:
ಚಳಶಿಳೀಮುಖರವಕೆ+ ಪಟುಭಟರ್
ಅಳುಕಿದರು +ವಿರಹಿಗಳವೊಲು +ಸ
ಮ್ಮಿಳಿತ +ಶಾಸ್ತ್ರಧ್ವನಿಗೆ +ಸೆಡೆದರು +ಮೂರ್ಖರಂದದಲಿ
ಕಲಿತ +ಬಲ+ ಶತ+ ಕೋಟಿಗಿದಿರ್
ಅಗಳಿದವ್+ಅದ್ರಿಗಳಂತೆ+ ಹರಿ+ಪದ
ವಳಯ +ವಿದಳಿತವಾಯ್ತು +ಮೇಘ+ವ್ರಾತದಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಚಳಶಿಳೀಮುಖರವಕೆ ಪಟುಭಟರಳುಕಿದರು ವಿರಹಿಗಲವೊಲು, ಕಲಿತ ಬಲ ಶತ ಕೋಟಿಗಿದಿರಾಗಳಿದವದ್ರಿಗಳಂತೆ

ಪದ್ಯ ೫೨: ಧರ್ಮರಾಯನೇಕೆ ಬೆದರಿದನು?

ತೋಳುಗಳ ಹಿಡಿದೆಳೆಯೆ ಭೀಮನು
ಕಾಲುಕಾಲುಗಳಿಂದ ಘಟ್ಟಿಸೆ
ಬೀಳುತೇಳುತ ಹೋರುತಿದ್ದರು ಅಸಮ ಪಟುಭಟರು
ಕೇಳುತಾರ್ಭಟ ಮಲ್ಲರಿಬ್ಬರ
ಏಳಿಗೆಯ ಕದನವನು ಕಾಣುತ
ಕಾಲನಂದನನಾಗ ಬೆದರಿದನಧಿಕ ಚಿಂತೆಯಲಿ (ವಿರಾಟ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಜೀಮೂತನು ತೋಳುಗಳನ್ನು ಹಿಡಿದು ಎಳೆಯಲು, ಭೀಮನು ಕಾಲುಗಳಿಂದ ಹೊಡೆದನು. ಬೀಳುತ್ತಾ, ಏಳುತ್ತಾ ಇಬ್ಬರೂ ಜೋರಾಗಿ ಹೋರಾಡುತ್ತಿದ್ದರು. ಅವರ ಆರ್ಭಟವನ್ನು ಕೇಳುತ್ತಾ ಮಲ್ಲಯುದ್ಧವನ್ನು ನೋಡುತ್ತಾ ಧರ್ಮರಾಯನು ಚಿಂತಿಸಿ ಬೆದರಿದನು.

ಅರ್ಥ:
ತೋಳು: ಬಾಹು; ಹಿಡಿ: ಬಂಧಿಸು; ಎಳೆ: ತನ್ನ ಕಡೆಗೆ ಸೆಳೆದುಕೊ; ಕಾಲು: ಪಾದ; ಘಟ್ಟಿಸು: ಹೊಡೆ; ಬೀಳು: ಜಾರು; ಏಳು: ಮೇಲೇಳು; ಹೋರು: ಜಗಳ, ಕಲಹ; ಅಸಮ: ಸಮವಲ್ಲದ; ಪಟುಭಟ: ಪರಾಕ್ರಮಿ; ಕೇಳು: ಆಲಿಸು; ಆರ್ಭಟ: ಗರ್ಜನೆ; ಮಲ್ಲ: ಜಟ್ಟಿ; ಏಳಿಗೆ: ಬೆಳವಣಿಗೆ; ಕದನ: ಯುದ್ಧ; ಕಾಣು: ವೀಕ್ಷಿಸು; ಕಾಲ: ಯಮ; ನಂದನ: ಮಗ; ಬೆದರು: ಹೆದರು; ಅಧಿಕ: ಹೆಚ್ಚು; ಚಿಂತೆ: ಯೋಚನೆ;

ಪದವಿಂಗಡಣೆ:
ತೋಳುಗಳ+ ಹಿಡಿದೆಳೆಯೆ +ಭೀಮನು
ಕಾಲುಕಾಲುಗಳಿಂದ +ಘಟ್ಟಿಸೆ
ಬೀಳುತ್+ಏಳುತ +ಹೋರುತಿದ್ದರು +ಅಸಮ +ಪಟುಭಟರು
ಕೇಳುತ್+ಆರ್ಭಟ +ಮಲ್ಲರಿಬ್ಬರ
ಏಳಿಗೆಯ +ಕದನವನು +ಕಾಣುತ
ಕಾಲನಂದನನ್+ಆಗ +ಬೆದರಿದನ್+ಅಧಿಕ+ ಚಿಂತೆಯಲಿ

ಅಚ್ಚರಿ:
(೧) ಬೀಳುತೇಳುತ, ಕಾಲುಕಾಲು, ಪಟುಭಟ – ಪದಗಳ ಬಳಕೆ
(೨) ಕ ಕಾರದ ತ್ರಿವಳಿ ಪದ – ಕದನವನು ಕಾಣುತ ಕಾಲನಂದನನಾಗ

ಪದ್ಯ ೨೫: ಅರ್ಜುನನ ಆಕ್ರಮಣ ಹೇಗಿತ್ತು?

ಗಜದ ಪದಘಟ್ಟಣೆಯ ಬಹಳಂ
ಬುಜದವೊಲು ರಥ ಚಕ್ರಹತಿಯಲಿ
ಗಿಜಿಗಜಿಯ ಮಾಡಿಸಿದ ಖೇಚರ ಚಟುಲ ಪಟುಭಟರ
ವಿಜಯನಲ್ಲಾ ಸುರಪುರದ ಮೌ
ರಜಿಗನಾವೆಡೆ ಕುರುಬಲದ ಗಜ
ಬಜದ ಗರುವನ ತೋರೆನುತ ತೂಳಿದನು ಕಲಿಪಾರ್ಥ (ಅರಣ್ಯ ಪರ್ವ, ೨೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಆನೆಯ ತುಳಿದ ಕಮಲವನದಂತೆ ಅರ್ಜುನನ ರಥ ಚರ್ಕ್ರದ ಹೊಡೆತ ರಭಸಗಳಿಗೆ ಗಂಧರ್ವ ಬಲವು ಗಿಜಿಗಿಜಿಯಾಯಿತು. ಅಮರಾವತಿಯ ಮೃದಂಗ ಮದ್ದಳೆ ವಾದಕನು, ಯುದ್ಧದಲ್ಲಿ ಗೆದ್ದವನು ಎಲ್ಲಿ? ಕುರುಬಲವನ್ನು ನಾಶಮಾಡಿದವನು ಎಲ್ಲಿ ತೋರಿಸಿರಿ ಎಂದು ಅರ್ಜುನನು ಮುಂದುವರಿದನು.

ಅರ್ಥ:
ಗಜ: ಆನೆ; ಪದ: ಪಾದ; ಘಟ್ಟಣೆ: ಗುಂಪು; ಬಹಳ: ತುಂಬ; ಅಂಬುಜ: ತಾವರೆ; ರಥ: ಬಂಡಿ; ಚಕ್ರ: ಗಾಲಿ; ಹತಿ: ಪೆಟ್ಟು, ಹೊಡೆತ; ಗಿಜಿಗಜಿ: ದಟ್ಟಣೆ; ಖೇಚರ: ಗಂಧರ್ವ; ಚಟುಲ: ವೇಗ, ತ್ವರಿತ; ಪಟುಭಟ: ಕುಶಲನಾದ ಸೈನಿಕ; ವಿಜಯ: ಗೆಲುವು; ಸುರಪುರ: ಅಮರಾವತಿ; ಮೌರಜಿಗ: ತಬಲ ಬಾರಿಸುವವ; ಬಲ: ಸೈನ್ಯ; ಗರುವ: ಹಿರಿಯ, ಶ್ರೇಷ್ಠ; ತೋರು: ಪ್ರದರ್ಶಿಸು; ತೂಳು: ಆವೇಶ, ಉನ್ಮಾದ; ಕಲಿ: ಶೂರ;

ಪದವಿಂಗಡಣೆ:
ಗಜದ +ಪದಘಟ್ಟಣೆಯ +ಬಹಳ್+ಅಂ
ಬುಜದವೊಲು +ರಥ +ಚಕ್ರಹತಿಯಲಿ
ಗಿಜಿಗಜಿಯ +ಮಾಡಿಸಿದ +ಖೇಚರ +ಚಟುಲ +ಪಟುಭಟರ
ವಿಜಯನಲ್ಲಾ+ ಸುರಪುರದ+ ಮೌ
ರಜಿಗನ್+ಆವೆಡೆ +ಕುರುಬಲದ +ಗಜ
ಬಜದ +ಗರುವನ+ ತೋರೆನುತ+ ತೂಳಿದನು+ ಕಲಿಪಾರ್ಥ

ಅಚ್ಚರಿ:
(೧) ಗಿಜಿಗಜಿ, ಗಜಬಜ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ಗಜದ ಪದಘಟ್ಟಣೆಯ ಬಹಳಂಬುಜದವೊಲು