ಪದ್ಯ ೩೫: ಅಂಬೆಯು ಯಾರನ್ನು ಹಸ್ತಿನಾಪುರಕ್ಕೆ ಕರೆತಂದಳು?

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ (ಆದಿ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅಮ್ಬೆಯನ್ನುವವಳು ದುಷ್ಟೆ. ಭೀಷ್ಮನೊಡನೆ ಕೂಟವಿಲ್ಲದಿದ್ದರೆ ಮರಣದೊಡನೆ ಕೂಟವೆಂದು ಪಂಥವನ್ನು ಮಾಡಿದಳು. ಭೀಷ್ಮನ ಗುರುವಾದ ಪರಶುರಾಮರ ಬಳಿಗೆ ಹೋಗಿ ಅವರಿಗೆ ತನ್ನ ವಿಷಯವನ್ನು ತಿಳಿಸಿ, ಅವರನ್ನು ಹಸ್ತಿನಾವತಿಗೆ ಕರೆತಂದಳು. ಅಂಬೆಯನ್ನು ಮದುವೆಯಾಗೆಂದು ಪರಶುರಾಮರಿಂದ ಭೀಷ್ಮನಿಗೆ ಹೇಳಿಸಿದಳು.

ಅರ್ಥ:
ಅರಸ: ರಾಜ; ಚಿತ್ತೈಸು: ಆಲಿಸು; ದುರುಳೆ: ಪಾಪಿ; ಕೂಟ: ಜೊತೆ; ಮರಣ: ಸಾವು; ಎಡೆ: ಹತ್ತಿರ; ಬೆರಸು; ಸೇರು; ಪಂಥ: ಪ್ರತಿಜ್ಞೆ, ಶಪಥ; ಭಜಿಸು: ಸ್ಮರಿಸು; ತಂದಳು: ಬಂದಳು; ಸುರನದೀನಂದನ: ಭೀಷ್ಮ; ಸುರನದಿ: ಗಂಗೆ; ಪರಿ: ರೀತಿ;

ಪದವಿಂಗಡಣೆ:
ಅರಸ +ಚಿತ್ತೈಸ್+ಅಂಬೆ+ಎಂಬಳು
ದುರುಳೆ +ಭೀಷ್ಮನ+ ಕೂಟವಲ್ಲದೆ
ಮರಣದೆಡೆಯಲಿ +ಬೆರಸಿದಲ್ಲದೆ +ಪಂಥವಿಲ್ಲೆಂದು
ಪರಶುರಾಮನ +ಭಜಿಸಿ +ಹಸ್ತಿನ
ಪುರಕೆ +ತಂದಳು +ಹೇಳಿಸಿದಳೀ
ಸುರನದೀನಂದನನು +ಮಾಡಿದ +ಪರಿಯ +ಕೇಳೆಂದ

ಅಚ್ಚರಿ:
(೧) ಸುರನದೀನಂದನ, ಭೀಷ್ಮ – ಭೀಷ್ಮರನ್ನು ಕರೆದ ಪರಿ

ಪದ್ಯ ೧೧: ಯಾವ ಕಾರ್ಯವು ಧರ್ಮಕ್ಕೆ ಭಾರವಾದುದು?

ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ (ಗದಾ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಚ್ಚರವಿಲ್ಲದಿದ್ದಾಗ ಕೊಲ್ಲುವುದು ಧರ್ಮಮಾರ್ಗವಲ್ಲ. ನಿದ್ರಿಸುತ್ತಿರುವವರನ್ನು ಕೊಲ್ಲುವುದು ಯಾವ ಸನಾತನ ಧರ್ಮ ಮಾರ್ಗ? ತಿಳಿಯದೆ ಕಾರ್ಯಾರಮ್ಭ ಮಾಡಿದ್ದೇವೆ, ನೂರಾರು ವಿಘ್ನಗಳು ಬಾರದಿರುವುದಿಲ್ಲ. ಈ ಕೆಲಸ ಮುಗಿದರೆ ನಾವು ಕೃತಾರ್ಥರೇ ಸರಿ ಎಂದು ಹೇಳಿದನು.

ಅರ್ಥ:
ಮರಹು: ಮರವೆ, ವಿಸ್ಮೃತಿ, ಎಚ್ಚರವಿಲ್ಲದ ಸ್ಥಿತಿ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಧರ್ಮ: ಧಾರಣೆ ಮಾಡಿದುದು; ಹೊರಿಗೆ: ಭಾರ, ಹೊರೆ; ನಿದ್ರೆ: ಶಯನ; ಐದು: ಬಂದುಸೇರು; ಇರಿ: ಚುಚ್ಚು; ಪಂಥ: ಮಾರ್ಗ; ಪೌರಾಣ: ಹಿಂದೆ ನಡೆದ, ಪುರಾಣ; ಮಾರ್ಗ: ದಾರಿ; ಅರಿ: ತಿಳಿ; ಆರಂಭಿಸು: ಶುರುಮಾಡು; ಸಮಾಪ್ತಿ: ಕೊನೆ; ಕಂಡು: ನೋಡು; ನೆರೆ: ಗುಂಪು; ಕೃತಾರ್ಥ: ಧನ್ಯ; ವಿಘ್ನ: ತೊಡಕು; ಶತ: ನುರು; ಅಡ್ಡೈಸು: ಮಧ್ಯ ಬರುವುದು, ಅಡ್ಡಪಡಿಸು;

ಪದವಿಂಗಡಣೆ:
ಮರಹಿನಲಿ +ಮುಡುಹುವುದು +ಧರ್ಮದ
ಹೊರಿಗೆಯಲ್ಲದು+ ನಿದ್ರೆಗ್+ಐದರನ್
ಇರಿವುದೇನ್+ಇದು +ಪಂಥವೇ +ಪೌರಾಣ+ಮಾರ್ಗದಲಿ
ಅರಿಯದ್+ಆರಂಭಿಸಿದೆವ್+ಇದರಲಿ
ಪರಿಸಮಾಪ್ತಿಯ+ ಕಂಡೆವಾದಡೆ
ನೆರೆ +ಕೃತಾರ್ಥರು +ವಿಘ್ನಶತವ್+ಅಡ್ಡೈಸದಿರವೆಂದ

ಅಚ್ಚರಿ:
(೧) ಧರ್ಮಕ್ಕೆ ವಿರುದ್ಧವಾದುದು – ಮರಹಿನಲಿ ಮುಡುಹುವುದು ಧರ್ಮದ ಹೊರಿಗೆಯಲ್ಲದು
(೨) ಪಂಥ, ಮಾರ್ಗ – ಸಮಾನಾರ್ಥಕ ಪದಗಳು

ಪದ್ಯ ೩೧: ಕೃಷ್ಣನು ಗಜಬಜವನ್ನು ಹೇಗೆ ನಿಲಿಸಿದನು?

ಬೇರೆ ತಮಗೊಂದಾಳುತನವುರಿ
ಸೂರೆಗೊಳುತಿದೆ ಜಗವನಿತ್ತಲು
ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ
ತೋರಲಾಪರೆ ಬಾಹು ಸತ್ವವ
ತೋರಿರೈ ದಿಟ ಪಂಥದೋಲೆಯ
ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು (ದ್ರೋಣ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ನಿಮ್ಮ ಪ್ರತಿಷ್ಠೆ ಈಗಲ್ಲ. ನಾರಾಯಣಾಸ್ತ್ರದ ಉರಿ ಜಗತ್ತನ್ನೂ ನಮ್ಮನ್ನೂ ಸುಟ್ಟು ಸೂರೆಗೊಳ್ಳಲು ಮುನ್ನುಗ್ಗುತ್ತಿದೆ. ಅದರ ಸುತ್ತಲೂ ಕರಿಹೊಗೆಯ ಕವಚವಿದೆ. ನಿಮ್ಮ ತೋಳ್ಬಲವನ್ನು ಅಸ್ತ್ರದೆದುರು ತೋರಿಸಿರಿ. ಪಂಥಕಟ್ಟುವ ಯೋಧರೇನೋ ನೀವು ನಿಜ ಆದರೆ ಅದನ್ನು ಅಸ್ತ್ರದೆದುರು ತೋರಿಸಿರಿ ಎಂದು ಗೊಂದಲವನ್ನು ನಿಲ್ಲಿಸಿದನು.

ಅರ್ಥ:
ಬೇರೆ: ಅನ್ಯ; ಆಳುತನ: ಪರಾಕ್ರಮ; ಉರಿ: ಬೆಂಕಿ; ಸೂರೆ: ಕೊಳ್ಳೆ; ಜಗ: ಪ್ರಪಂಚ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಕಾಲಾಗ್ನಿ:ಪ್ರಳಯಕಾಲದ ಬೆಂಕಿ; ಕಬ್ಬೊಗೆ: ದಟ್ಟವಾದ ಹೊಗೆ; ಕವಚ: ಹೊದಿಕೆ; ತೋರು: ಗೋಚರಿಸು; ಬಾಹು: ಭುಜ; ಸತ್ವ: ಶಕ್ತಿ, ಸಾರ; ದಿಟ: ಸತ್ಯ; ಪಂಥ: ಪ್ರತಿಜ್ಞೆ, ಶಪಥ; ಓಲೆಯಕಾರ: ಸೇವಕ; ಅಸುರರಿಪು: ಕೃಷ್ಣ; ಗಜಬಜ: ಗೊಂದಲ; ನಿಲಿಸು: ತಡೆ;

ಪದವಿಂಗಡಣೆ:
ಬೇರೆ +ತಮಗೊಂದ್+ ಆಳುತನವ್+ಉರಿ
ಸೂರೆಗೊಳುತಿದೆ+ ಜಗವನ್+ಇತ್ತಲು
ಕೌರಿಡುವ +ಕಾಲಾಗ್ನಿಯಿದೆ +ಕಬ್ಬೊಗೆಯ +ಕವಚದಲಿ
ತೋರಲಾಪರೆ +ಬಾಹು +ಸತ್ವವ
ತೋರಿರೈ +ದಿಟ +ಪಂಥದ್+ಓಲೆಯ
ಕಾರರಹಿರ್+ಎನುತ್+ಅಸುರರಿಪು +ಗಜಬಜವ +ನಿಲಿಸಿದನು

ಅಚ್ಚರಿ:
(೧) ಕ ಕಾರದ ಸಾಲು ಪದ – ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ

ಪದ್ಯ ೧೫: ಭೀಮನು ದ್ರೋಣರಿಗೇಕೆ ದಾರಿ ಬಿಡಿ ಎಂದನು?

ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ (ದ್ರೋಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲೈ ದ್ರೋಣನೇ, ಅರ್ಜುನ, ಸಾತ್ಯಕಿಯರು ಇನ್ನೂ ಬಾಲಕರು, ಅವರಿಗೆಂತಹ ಹುರುಡು, ಪಂಥ? ನನ್ನಲ್ಲದು ನಡೆಯದು, ಗರುಡಿಯಲ್ಲಿ ನೀವು ನಮಗೆ ಆಚಾರ್ಯರು ಅಲ್ಲಿ ನಮಸ್ಕರಿಸುತ್ತೇನೆ, ಯುದ್ಧಭೂಮಿಯಲ್ಲಿ ಎಂತಹ ನಮಸ್ಕಾರ? ನೀವು ಬಹಳ ವೃದ್ಧರು, ನಿಮಗೆದುರಾಡಬಾರದು, ನಿಮ್ಮ ಸತ್ವ ನನಗೆ ಗೊತ್ತು, ಸುಮ್ಮನೆ ಪಕ್ಕಕ್ಕೆ ಸರಿಯಿರಿ ಎಂದು ಭೀಮನು ದ್ರೋಣರಿಗೆ ಹೇಳಿದನು.

ಅರ್ಥ:
ತರಳ: ಬಾಲಕ; ಅವದಿರು: ಅಷ್ಟುಜನ; ಪಂಥವ: ಹಟ, ಛಲ, ಸ್ಪರ್ಧೆ; ಗರುಡಿ: ವ್ಯಾಯಾಮ ಶಾಲೆ; ವಂದಿಸು: ನಮಸ್ಕರಿಸು; ವಂದನೆ: ನಮಸ್ಕಾರ; ಸಮರ: ಯುದ್ಧ; ಮರುಳು: ಮೂಢ; ಮರುಮಾತು: ಎದುರುತ್ತರ; ವೃದ್ಧ: ಮುದುಕ; ಚಿತ್ತ: ಮನಸ್ಸು; ಹುರುಳು: ಸತ್ತ್ವ, ಸಾರ; ಬಲ್ಲೆ: ತಿಳಿ; ಪಥ: ದಾರಿ; ಬಿಡು: ತೊರೆ; ಕೆಲಸಾರು: ಪಕ್ಕಕ್ಕೆ ಹೋಗು;

ಪದವಿಂಗಡಣೆ:
ತರಳರ್+ಅರ್ಜುನ +ಸಾತ್ಯಕಿಗಳ್+ಅವ
ದಿರಿಗೆ +ಪಂಥವದೇಕೆ +ನಿಮ್ಮನು
ಗರುಡಿಯಲಿ +ವಂದಿಸುವ +ವಂದನೆ+ಯುಂಟೆ +ಸಮರದಲಿ
ಮರುಳಲಾ+ ಮರುಮಾತು +ಕಡು+ವೃ
ದ್ಧರಿಗ್+ಅದೇಕೆಂಬಂತೆ+ ಚಿತ್ತದ
ಹುರುಳ +ಬಲ್ಲೆನು +ಪಥವ+ ಬಿಡಿ +ಕೆಲಸಾರಿ +ಸಾಕೆಂದ

ಅಚ್ಚರಿ:
(೧) ಭೀಮನ ಬಿರುಸು ನುಡಿ – ವಂದನೆಯುಂಟೆ ಸಮರದಲಿ

ಪದ್ಯ ೩೨: ಕರ್ಣನು ಭೀಷ್ಮರನ್ನು ಹೇಗೆ ಬೀಳ್ಕೊಟ್ಟನು?

ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿ ಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ (ದ್ರೋಣ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿ ಭೀಷ್ಮನು, ಎಲೈ ಸೂರ್ಯಸಮಾನನೇ, ನೀನು ಹಿಂದಿರುಗು, ಕೌರವನ ಹಾನಿ ಅಭಿವೃದ್ಧಿಗಳು ನಿನಗೆ ಸೇರಿವೆ, ನೀನು ಪಂಥದಲ್ಲಿ ಬುದ್ಧಿವಂತನಲ್ಲವೇ, ವಿಜಯಶಾಲಿಯಾಗು ಹೋಗು ಎನ್ನಲು ಕರ್ಣನು ಭೀಷ್ಮನ ಪಾದಗಳಿಗೆ ನಮಸ್ಕರಿಸಿ ಅವನನ್ನು ಬೀಳ್ಕೊಂಡು ಕೌರವನ ದರ್ಬಾರಿಗೆ ಬಂದನು.

ಅರ್ಥ:
ಭಾನು: ಸೂರ್ಯ; ಸನ್ನಿಭ: ಸಮಾನನಾದವನು, ಸದೃಶನಾದವನು; ಮರಳು: ಹಿಂದಿರುಗು; ಭೂಪ: ರಾಜ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಪಂಥ: ಛಲ, ಸ್ಪರ್ಧೆ; ಜಾಣ: ಬುದ್ಧಿವಂತ; ವಿಜಯ: ಗೆಲುವು, ಜಯ; ನದೀಸುತ: ಭೀಷ್ಮ; ಸುತ: ಮಗ; ಅಡಿ: ಪಾದ; ಎರಗು: ನಮಸ್ಕರಿಸು; ರವಿ: ಭಾನು; ಸೂನು: ಮಗ; ಕಳುಹಿಸು: ಬೀಳ್ಕೊಡು; ಬಹಳ: ತುಂಬ; ಮನ: ಮನಸ್ಸು; ಅನುರಾಗ: ಪ್ರೀತಿ; ಐದು: ಬಂದುಸೇರು; ಓಲಗ: ದರ್ಬಾರು; ರಾಯ: ರಾಜ;

ಪದವಿಂಗಡಣೆ:
ಭಾನು+ಸನ್ನಿಭ+ ಮರಳು +ಭೂಪನ
ಹಾನಿ +ವೃದ್ಧಿಗಳೆಲ್ಲ +ನಿನ್ನದು
ನೀನು +ಪಂಥದ +ಜಾಣನಲ್ಲಾ +ವಿಜಯನಾಗ್+ಎನಲು
ಆ +ನದೀಸುತನ್+ಅಡಿಗ್+ಎರಗಿ +ರವಿ
ಸೂನು +ಕಳುಹಿಸಿ +ಕೊಂಡು +ಬಹಳ+ ಮ
ನೋನುರಾಗದಲ್+ಐದಿದನು +ಕುರುರಾಯನ್+ಓಲಗವ

ಅಚ್ಚರಿ:
(೧) ಭಾನು, ರವಿ; ಸುತ, ಸೂನು; ಭೂಪ, ರಾಯ – ಸಮಾನಾರ್ಥಕ ಪದ

ಪದ್ಯ ೧೦೯: ದ್ರೌಪದಿಯು ಸಹಾಯಕ್ಕಾಗೆ ಮತ್ತಾರರಲ್ಲಿ ಮೊರೆಯಿಟ್ಟಳು?

ಧಾರುಣೀಪತಿಗಳಿರ ರಾಜ ಕು
ಮಾರರಿರ ಮಂತ್ರಿಗಳಿರಾ ಪರಿ
ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು
ನಾರಿಯೊಬ್ಬಳನಕಟ ಸಭೆಯಲಿ
ಸೀರೆಯುಡಿಯುರುವರು ಕೆಟ್ಟೆನು
ಕಾರುಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ಸಭೆಯಲ್ಲಿರುವ ರಾಜರೇ, ರಾಜ ಕುಮಾರರೇ, ಮಂತ್ರಿಗಳೆ, ಪರಿವಾರಕ್ಕೆ ಹತ್ತಿರವಾಗಿರುವ ಜನರೇ, ದುಶ್ಯಾಸನು ಹಿಡಿದ ಮಾರ್ಗವು ನೀವು ಸರಿಯೆನ್ನುವಿರಾ? ನೀವೇ ವಿಚಾರಮಾಡಿ, ಒಬ್ಬ ನಿರಪರಾಧಿ ಹೆಣ್ಣಿನ ಸೀರೆಯ ಉಡಿಯನ್ನು ಬಿಚ್ಚುತ್ತಿದ್ದರೆ ಕರುಣೆಯಿಂದಾದರೂ ಇದನ್ನು ತಪ್ಪಿಸುವರಿಲ್ಲವೇ ಶಿವ ಶಿವಾ ಎಂದು ದ್ರೌಪದಿ ಗೋಳಿಟ್ಟಳು.

ಅರ್ಥ:
ಧಾರುಣಿ: ಭೂಮಿ; ಧಾರುಣೀಪತಿ: ರಾಜ; ರಾಜಕುಮಾರ: ಯುವರಾಜ; ಮಂತ್ರಿ: ಸಚಿವ; ಪರಿವಾರ: ಸುತ್ತಲಿನವರು, ಪರಿಜನ; ಪಂಥ: ಪಥ, ದಾರಿ; ವಿಚಾರಿಸು: ಆಲೋಚಿಸು; ನಿರಪರಾಧಿ: ತಪ್ಪು ಮಾಡದವಳು; ನಾರಿ: ಸ್ತ್ರೀ; ಅಕಟ: ಅಯ್ಯೋ; ಸಭೆ: ಓಲಗ; ಸೀರೆ: ಬಟ್ಟೆ, ವಸ್ತ್ರ; ಉರ್ಚು: ಹೊರಕ್ಕೆ ತೆಗೆ; ಕೆಟ್ಟೆ: ಹಾಳಾಗು; ಕಾರುಣಿಕ: ಕರುಣೆತೋರುವ; ಒರಲು: ಗೋಳಿಡು; ತರಳೆ: ಯುವತಿ; ಉಡಿ: ಮಡಿಲು, ತುಂಡುಮಾಡು;

ಪದವಿಂಗಡಣೆ:
ಧಾರುಣೀಪತಿಗಳಿರ+ ರಾಜ ಕು
ಮಾರರಿರ+ ಮಂತ್ರಿಗಳಿರಾ+ ಪರಿ
ವಾರಕಿದು+ ಪಂಥವೆ +ವಿಚಾರಿಸಿ+ ನಿರಪರಾಧಿಯನು
ನಾರಿಯೊಬ್ಬಳನ್+ಅಕಟ+ ಸಭೆಯಲಿ
ಸೀರೆ+ಉಡಿ+ಉರುವರು+ ಕೆಟ್ಟೆನು
ಕಾರುಣಿಕರಿಲ್ಲಾ+ ಶಿವಾ+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ಕುಮಾರ, ಪರಿವಾರ – ಪ್ರಾಸ ಪದ
(೨) ದ್ರೌಪದಿಯ ಸ್ಥಿತಿ – ನಾರಿಯೊಬ್ಬಳನಕಟ ಸಭೆಯಲಿ ಸೀರೆಯುಡಿಯುರುವರು ಕೆಟ್ಟೆನು
ಕಾರುಣಿಕರಿಲ್ಲಾ ಶಿವಾ

ಪದ್ಯ ೫೮: ಧರ್ಮರಾಯನು ಪಣದಲ್ಲಿ ಯಾರನ್ನು ಸೋತನು?

ಅರಸ ಸೋತೈ ನಾರಿಯರ ಜಯ
ಮರಳಿತಿತ್ತಲು ಮನಕೆ ಭೀತಿಯ
ಬೆರಕೆಯುಳ್ಳೊಡೆ ಬಿಟ್ಟುಕಳೆ ಪೈಸರಕೆ ಸಮಯವಿದು
ಅರಸು ಪಂಥದ ವಾಸಿ ಮನಕು
ಬ್ಬರಿಸುವೊಡೆ ಪಣವೇನು ಹೇಳೈ
ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಶಕುನಿಯ ದಾಳವ ರಾಣಿಯರ ಕಾವಲುಗಾರರನ್ನು ಗೆದ್ದಿತು. ಶಕುನಿಯು ಮಾತನ್ನು ಮುಂದುರಿಸುತ್ತಾ, ರಾಜ ದಾಸಿಯರನ್ನೂ ಕಿಂಕರರನ್ನೂ ಸೋತೆ, ಭಯವಾದರೆ ಜೂಜನ್ನು ನಿಲ್ಲಿಸಿ ಬಿಡು, ಹಿಂದಕ್ಕೆ ಸರಿಯಲು ಇದೇ ಸರಿಯಾದ ಸಮಯ. ಇನ್ನು ರಾಜತ್ವದ ನಡೆಯ ಹಿರಿಮೆಯನ್ನು ಉಳಿಸಿಕೊಳ್ಳಬೇಕೆಂದಿದ್ದರೆ, ಏನು ಪಣವನ್ನೊಡ್ಡುವೆ ಎಂದು ಶಕುನಿಯು ಕೇಳುತ್ತಾ ಕುಣಿದಾಡಿದನು.

ಅರ್ಥ:
ಅರಸ: ರಾಜ; ಸೋಲು: ಪರಾಭವ; ನಾರಿ: ಹೆಂಗಸು; ಜಯ: ಗೆಲುವು; ಮರಳಿ: ಮತ್ತೆ, ಪುನಃ; ಮನ: ಮನಸ್ಸು; ಭೀತಿ: ಭಯ; ಬೆರಕೆ:ಕೂಡುವುದು; ಬಿಟ್ಟು: ತ್ಯಜಿಸು; ಕಳೆ: ಬೀಡು, ಕಾಂತಿ; ಪೈಸರ:ಕುಗ್ಗುವುದು, ಜಾರುವಿಕೆ; ಸಮಯ: ಕಾಲ; ಪಂಥ: ಪ್ರತಿಜ್ಞೆ, ಶಪಥ; ವಾಸಿ: ಸ್ಪರ್ಧೆ; ಉಬ್ಬರಿಸು: ಹೆಚ್ಚಿಸು; ಪಣ: ಜೂಜಿಗೆ ಒಡ್ಡಿದ ವಸ್ತು; ಹೇಳು: ತಿಳಿಸು; ಧರಣಿಪಾಲ: ಅರಸ; ಧರಣಿ: ಭೂಮಿ; ರಿಂಗಣ: ಒಂದು ಬಗೆಯ ನೃತ್ಯ; ಕುಣಿ: ನರ್ತಿಸು;

ಪದವಿಂಗಡಣೆ:
ಅರಸ +ಸೋತೈ +ನಾರಿಯರ+ ಜಯ
ಮರಳಿತ್+ಇತ್ತಲು +ಮನಕೆ +ಭೀತಿಯ
ಬೆರಕೆಯುಳ್ಳೊಡೆ+ ಬಿಟ್ಟುಕಳೆ+ ಪೈಸರಕೆ+ ಸಮಯವಿದು
ಅರಸು+ ಪಂಥದ +ವಾಸಿ +ಮನಕ್
ಉಬ್ಬರಿಸುವೊಡೆ +ಪಣವೇನು+ ಹೇಳೈ
ಧರಣಿಪಾಲ+ಎನುತ್ತ +ರಿಂಗಣ+ಕುಣಿದನಾ +ಶಕುನಿ

ಅಚ್ಚರಿ:
(೧) ಅರಸ, ಧರಣಿಪಾಲ – ಸಮನಾರ್ಥಕ ಪದ
(೨) ಧರ್ಮರಾಯನನ್ನು ಕೆರಳಿಸುವ ಬಗೆ – ಅರಸು ಪಂಥದ ವಾಸಿ ಮನಕುಬ್ಬರಿಸುವೊಡೆ ಪಣವೇನು

ಪದ್ಯ ೧೮: ಕರ್ಣನು ಅರ್ಜುನನಿಗೆ ಯಾವ ಯುದ್ಧದ ನಿಯಮವನ್ನು ತಿಳಿಸಿದನು?

ರೂಡಿಸಿದ ಭಟ ನೀನು ಪಂಥದ
ಪಾಡುಗಳ ಬಲ್ಲವನು ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ ಶಸ್ತ್ರ ಹೀನರ
ಕೂಡೆ ವಾಹನಹೀನರಲಿ ಕೈ
ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣ (ಕರ್ಣ ಪರ್ವ, ೨೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅರ್ಜುನನೊಂದಿಗೆ ಮಾತನಾಡುತ್ತಾ, ಅರ್ಜುನ ನೀನು ಹೆಸರಾಂತ ಪರಾಕ್ರಮಿ, ಯುದ್ಧದ ನೀತಿ ನಿಯಮಗಳನ್ನು ಚೆನ್ನಾಗಿ ಬಲ್ಲವನು. ಶಾಸ್ತ್ರವನ್ನು ಮೀರುವವನಲ್ಲ. ಲೌಕಿಕ, ವೈದಿಕ ಕಟ್ಟುಪಾಡುಗಳನ್ನು ಚೆನ್ನಾಗಿ ಬಲ್ಲವನು. ಶಸ್ತ್ರಹೀನರು ವಾಹನವಿಲ್ಲದವರ ಮೇಲೆ ಕೈಮಾಡುವುದು ಅನುಚಿತ ಎಂಬ ವಿಷಯ ನಿನಗೆ ಗೊತ್ತು ಎಂದು ಕರ್ಣನು ಹೇಳಿದನು.

ಅರ್ಥ:
ರೂಡಿ: ಆಚರಣೆಯಲ್ಲಿರುವ, ಹೆಸರಾಂತ; ಭಟ: ವೀರ, ಸೈನಿಕ; ಪಂಥ: ಪಂದ್ಯ; ಪಾಡು: ರೀತಿ; ಬಲ್ಲವ: ತಿಳಿದವ; ಶಾಸ್ತ್ರ: ವಿಧಿ, ನಿಯಮ; ಖೋಡಿ: ಹಾನಿ, ಕೇಡು, ಅಪರಾಧ; ಲೌಕಿಕ: ಲೋಕದ ನಡವಳಿಕೆಯನ್ನು ತಿಳಿದಿರುವವನು; ವೈದಿಕ: ವೇದದ ಅಧ್ಯಯನ ಮಾಡಿರುವವ; ಸ್ಥಿತಿ: ಅವಸ್ಥೆ; ನಾಡೆ: ವಿಶೇಷವಾಗಿ; ಬಲ್ಲಿರಿ: ತಿಳಿದಿರುವಿರಿ; ಶಸ್ತ್ರ: ಆಯುಧ; ಹೀನ: ಇಲ್ಲದಿರುವ; ಕೂಡೆ: ಜೊತೆ; ವಾಹನ: ಹೊರುವಿಕೆ, ಒಯ್ಯುವ ಸಾಧನ; ಕೈಮಾಡು: ಹೊಡೆ; ಅನುಚಿತ: ಸರಿಯಲ್ಲದ ಮಾರ್ಗ; ಮಾರ್ಗ: ರೀತಿ;

ಪದವಿಂಗಡಣೆ:
ರೂಡಿಸಿದ +ಭಟ +ನೀನು +ಪಂಥದ
ಪಾಡುಗಳ +ಬಲ್ಲವನು +ಶಾಸ್ತ್ರವ
ಖೋಡಿ+ಕಳೆವವನಲ್ಲ +ಲೌಕಿಕ +ವೈದಿಕ +ಸ್ಥಿತಿಯ
ನಾಡೆ +ಬಲ್ಲಿರಿ +ಶಸ್ತ್ರ +ಹೀನರ
ಕೂಡೆ +ವಾಹನ+ಹೀನರಲಿ +ಕೈ
ಮಾಡಲ್+ಅನುಚಿತವೆಂಬ +ಮಾರ್ಗವನೆಂದನಾ +ಕರ್ಣ

ಅಚ್ಚರಿ:
(೧) ಯುದ್ಧದ ನಿಯಮ – ನಾಡೆ ಬಲ್ಲಿರಿ ಶಸ್ತ್ರ ಹೀನರಕೂಡೆ ವಾಹನಹೀನರಲಿ ಕೈಮಾಡಲನುಚಿತ
(೨) ಅರ್ಜುನನ ಮೇಲಿನ ನಂಬಿಕೆ – ಶಾಸ್ತ್ರವ ಖೋಡಿಗಳೆವವನಲ್ಲ

ಪದ್ಯ ೩೪: ಕುರುಸೇನೆಯು ಏನು ಮಾತಾಡುತ್ತಿದ್ದರು?

ಸಿಕ್ಕಿದನು ಕುರುರಾಯನಾದುದು
ಮಕ್ಕಳಾಟಕೆ ಗುರುನದೀಸುತ
ರಿಕ್ಕಿ ಹೋದರು ನಮ್ಮ ದಳಪತಿ ಕಾದಿ ಬಳಲಿದನು
ಪೊಕ್ಕನರ್ಜುನನಿವರ ದರ್ಪವ
ನೊಕ್ಕಿ ತೂರಿದನಿನ್ನು ಪರಿವಾ
ರಕ್ಕೆ ಬಂದುದು ಪಂಥವೆನುತಿದ್ದುದು ಭಟಸ್ತೋಮ (ಕರ್ಣ ಪರ್ವ, ೨೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕುರುಸೇನೆಯ ಯೋಧರು ಯುದ್ಧದ ಬಗ್ಗೆ ವಿಚಾರಿಸುತ್ತಾ, ಕೌರವನು ಸೆರೆಯಾಗಲಿದ್ದಾನೆ, ಮಕ್ಕಳಾಟದಂತೆ ಭೀಷ್ಮ ದ್ರೋಣರು ಕೌರವನನ್ನು ಬಿಟ್ಟು ಹೋಗಿಬಿಟ್ಟರು, ಕರ್ಣನು ಯುದ್ಧಮಾಡಿ ಬಳಲಿದನು. ಅರ್ಜುನನು ನಮ್ಮ ಸೈನ್ಯವನ್ನು ಹೊಕ್ಕು, ಇವರೆಲ್ಲರ ದರ್ಪವನ್ನು ಒಕ್ಕಿ ತೂರಿದನು. ದುರ್ಯೋಧನನನ್ನು ಉಳಿಸುವ ಹೊಣೆ ಪರಿವಾರದವರಾದ ನಮ್ಮಮೇಲಿದೆ ಎಂದು ಮಾತಾಡಿಕೊಂಡರು.

ಅರ್ಥ:
ಸಿಕ್ಕು: ಗೊಂದಲ, ತೊಡಕು, ಅಡ್ಡಿ; ರಾಯ: ರಾಜ; ಮಕ್ಕಳು; ಚಿಕ್ಕ ಹುಡುಗರು: ಆಟ: ಕ್ರೀಡೆ; ಗುರು: ಆಚಾರ್ಯ; ನದೀಸುತ: ಭೀಷ್ಮ; ಇಕ್ಕು: ಹಾಕು, ತೊಡಿಸು; ಹೋದರು: ತೆರಳು; ದಳಪತಿ: ಸೇನಾಧಿಪತಿ; ಕಾದಿ: ಹೋರಾಡು; ಬಳಲು: ಆಯಾಸ, ದಣಿವು; ಪೊಕ್ಕು: ಹೊಕ್ಕು; ದರ್ಪ: ಅಹಂಕಾರ; ಒಕ್ಕು: ಹರಿ, ಪ್ರವಹಿಸು; ತೂರು: ಎಸೆ, ಬೀಸು, ನಿವಾರಿಸು; ಪಂಥ: ಯೋಗ್ಯವಾದ ಮಾರ್ಗ, ಕ್ರಮ, ಮತ, ಶಪಥ; ಭಟಸ್ತೋಮ: ಸೈನ್ಯ;

ಪದವಿಂಗಡಣೆ:
ಸಿಕ್ಕಿದನು+ ಕುರುರಾಯನ್+ಆದುದು
ಮಕ್ಕಳಾಟಕೆ+ ಗುರುನದೀಸುತರ್
ಇಕ್ಕಿ +ಹೋದರು+ ನಮ್ಮ +ದಳಪತಿ+ ಕಾದಿ+ ಬಳಲಿದನು
ಪೊಕ್ಕನ್+ಅರ್ಜುನನ್+ ಇವರ+ ದರ್ಪವನ್
ಒಕ್ಕಿ +ತೂರಿದನಿನ್ನು +ಪರಿವಾ
ರಕ್ಕೆ+ ಬಂದುದು +ಪಂಥವ್+ಎನುತಿದ್ದುದು +ಭಟಸ್ತೋಮ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಒಕ್ಕಿ – ಪ್ರಾಸ ಪದಗಳು

ಪದ್ಯ ೪: ಧರ್ಮಜನು ಏನು ಅಪ್ಪಣೆಕೊಟ್ಟನು?

ಇಟ್ಟಣಿಸುವರಿಸೈನ್ಯಜಲಧಿಗೆ
ಕಟ್ಟೆಯಾದನು ಭೀಮನೊಬ್ಬನ
ಬಿಟ್ಟು ನೋಡುವುದುಚಿತವೇ ಪರಿವಾರ ಪಂಥದಲಿ
ಕೊಟ್ಟ ನೇಮವ ಯಮಳರಿಗೆ ಜಗ
ಜಟ್ಟಿ ಸಾತ್ಯಕಿ ಕಮಲಮುಖಿಯೊಡ
ಹುಟ್ಟಿದನು ಮೊದಲಾಗಿ ನೃಪಜನವೇಳಿ ನೀವೆಂದ (ಕರ್ಣ ಪರ್ವ, ೧೮ ಸಂಧಿ, ೪ ಪದ್ಯ)

ತಾತ್ಪರ್ಯ:
ಅರಸನು ಮುನ್ನುಗ್ಗಿ ಬರುವ ಶತ್ರುಸೈನ್ಯ ಸಮುದ್ರಕ್ಕೆ ಭೀಮನೊಬ್ಬನೇ ಕಟ್ಟೆಯಾಗಿ ಅಡ್ಡ ನಿಂತಿದ್ದಾನೆ. ಅವನೊಬ್ಬನನ್ನೇ ಬಿಟ್ಟು ನೋಡುವುದು ಉಚಿತವಲ್ಲ. ನಕುಲ ಸಹದೇವರು, ಸಾತ್ಯಕಿ, ಧೃಷ್ಟದ್ಯುಮ್ನ ಮೊದಲಾದ ರಾಜರು ಸಿದ್ಧರಾಗಿ ಎಂದು ಅಪ್ಪಣೆಕೊಟ್ಟನು.

ಅರ್ಥ:
ಇಟ್ಟಣಿಸು: ದಟ್ಟವಾಗು; ಅರಿ: ವೈರಿ; ಸೈನ್ಯ: ದಳ; ಜಲಧಿ: ಸಮುದ್ರ; ಕಟ್ಟೆ:ಒಡ್ಡು; ಬಿಡು: ತೊರೆ; ನೋಡು: ಗೋಚರಿಸು; ಉಚಿತ: ಸರಿಯಾದ; ಪರಿವಾರ: ಸಂಬಂಧಿಕರು; ಪಂಥ: ಮಾರ್ಗ; ನೇಮ: ವ್ರತ; ಯಮಳ: ಅವಳಿ ಮಕ್ಕಳು; ಜಗಜಟ್ಟಿ: ಪರಾಕ್ರಮಿ; ಕಮಲಮುಖಿ: ಕಮಲದಂತಹ ಮುಖ (ದ್ರೌಪದಿ); ಹುಟ್ಟು: ಜನನ; ಮೊದಲು: ಆದಿ; ನೃಪ: ರಾಜ;

ಪದವಿಂಗಡಣೆ:
ಇಟ್ಟಣಿಸುವ್+ಅರಿ+ಸೈನ್ಯ+ಜಲಧಿಗೆ
ಕಟ್ಟೆಯಾದನು+ ಭೀಮನೊಬ್ಬನ
ಬಿಟ್ಟು +ನೋಡುವುದ್+ಉಚಿತವೇ +ಪರಿವಾರ +ಪಂಥದಲಿ
ಕೊಟ್ಟ +ನೇಮವ +ಯಮಳರಿಗೆ +ಜಗ
ಜಟ್ಟಿ +ಸಾತ್ಯಕಿ +ಕಮಲಮುಖಿಯೊಡ
ಹುಟ್ಟಿದನು +ಮೊದಲಾಗಿ+ ನೃಪಜನವ್+ಏಳಿ +ನೀವೆಂದ

ಅಚ್ಚರಿ:
(೧) ಧೃಷ್ಟದ್ಯುಮ್ನ ಎಂದು ಹೇಳಲು ಕಮಲಮುಖಿಯೊಡಹುಟ್ಟಿದನು ಎಂಬ ಪದದ ಬಳಕೆ