ಪದ್ಯ ೨೨: ಉತ್ತರನು ಅರ್ಜುನನಿಗೆ ಏನು ಹೇಳಿದ?

ಆಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ (ವಿರಾಟ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನ ನಾನು ಕರ್ಣನ ಬಾಣಗಳನ್ನು ನೋಡಾಲಾರೆ, ಬಾಣವನ್ನು ಬಿಟ್ಟು ಎರಡನೆಯದೇ ಇಲ್ಲ ಎಂದು ಉತ್ತರ ಕುಮಾರನು ಹೇಳಿ ತನ್ನ ಮುಖವನ್ನು ಮುಚ್ಚಿಕೊಳ್ಳಲು, ಎಲವೋ ಉತ್ತರಕುಮಾರ, ಇದೇನು ಸೋಜಿಗವಲ್ಲ ನನಗಿದು ಕಷ್ಟಕರವೂ ಅಲ್ಲ ನೋಡು ಎಂದು ಅರ್ಜುನನು ಕರ್ಣನ ಬಾಣಗಳ ಪಂಜರವನ್ನು ಕಡಿದನು.

ಅರ್ಥ:
ನೋಡು: ವೀಕ್ಷಿಸು; ಬಹಳ: ತುಂಬ; ಬಾಣ: ಅಂಬು; ಅದ್ವೈತ: ಎಣೆಯಿಲ್ಲದ, ಅಸಮಾನವಾದ; ಮಹಿ: ಭೂಮಿ; ಸಾರಥಿ: ಸೂತ; ಮುಚ್ಚು: ಮರೆಮಾಡು; ಗಹನ: ಸುಲಭವಲ್ಲದುದು; ನರ: ಅರ್ಜುನ; ಸಹಸ: ಪರಾಕ್ರಮಿ; ಕೆದರು: ಕೆರಳು; ಪಂಜರ: ಗೂಡು; ರಹ: ಸೋಜಿಗ, ಆಶ್ಚರ್ಯ;

ಪದವಿಂಗಡಣೆ:
ಆಹಹ +ಫಲುಗುಣ +ನೋಡಲಮ್ಮೆನು
ಬಹಳ +ಬಾಣ+ಅದ್ವೈತವಾದುದು
ಮಹಿ +ಮಹಾದೇವೆನುತ +ಸಾರಥಿ+ ಮುಚ್ಚಿದನು +ಮುಖವ
ರಹವ +ಮಾಡದಿರ್+ಎಲವೊ+ ತನಗಿದು
ಗಹನವೇ +ನೋಡೆನುತ +ನರನ್+ಅತಿ
ಸಹಸದಲಿ +ಕೆದರಿದನು +ಕರ್ಣನ +ಬಾಣ +ಪಂಜರವ

ಅಚ್ಚರಿ:
(೧) ಅರ್ಜುನನ ಪರಾಕ್ರಮ – ನರನತಿ ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ

ಪದ್ಯ ೩೨: ಭೀಮನು ಜಯದ್ರಥನನ್ನು ಹೇಗೆ ಬಂಧಿಸಿದನು?

ಅಂಜದಿರು ಕಮಲಾಕ್ಷಿ ಧೌಮ್ಯನಿ
ರಂಜನನ ಸುತಿವಾಕ್ಯವೇ ಪವಿ
ಪಂಜರವಲೇಯೆನುತ ಹಾಯ್ದನು ಪವನಸುತ ರಥಕೆ
ಕುಂಜರವು ಕೈಯಿಕ್ಕೆ ನಿಲುಕದೆ
ಕಂಜವನವನಿಲಜನ ಝಾಡಿಯ
ಜಂಜಡಕೆ ದಿಟ್ಟನೆ ಜಯದ್ರಥನರಸ ಕೇಳೆಂದ (ಅರಣ್ಯ ಪರ್ವ, ೨೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಭೀಮನು ದ್ರೌಪದಿಗೆ ಅಭಯವನ್ನು ಹೇಳುತ್ತಾ, ಪರಮಾತ್ಮ ಸ್ವರೂಪರಾದ ಧೌಮ್ಯ ಮಹರ್ಷಿಗಳ ಮಂತ್ರಗಳು ನಿನ್ನನ್ನು ವಜ್ರಪಂಜರದಂತೆ ಸಲಹುತ್ತಿವೆ. ನಂತರ ಭೀಮನು ಜಯದ್ರಥನ ರಥಕ್ಕೆ ಹಾರಿ ಅವನ ಮೇಲೆ ಆಕ್ರಮಣ ಮಾಡಿದನು. ಕಮಲವನವು ಆನೆಯ ಧಾಳಿಗೆ ಸಿಕ್ಕಂತೆ ಭೀಮನ ಧಾಳಿಗೆ ಸೈಂದವನು ಸಿಕ್ಕನು.

ಅರ್ಥ:
ಅಂಜು: ಹೆದರು; ಕಮಲಾಕ್ಷಿ: ಕಮಲದಂತ ಕಣ್ಣುಳ್ಳವಳು; ನಿರಂಜನ: ದೋಷರಹಿತವಾದ; ಸುತಿ:ಸ್ತೋತ್ರ, ಸ್ತುತಿಪದ್ಯ; ಪವಿ: ವಜ್ರ; ವಜ್ರಾಯುಧ; ಪಂಜರ: ಗೂಡು; ಹಾಯ್ದು: ಹೊಡೆ; ಪವನಸುತ: ವಾಯು ಪುತ್ರ (ಭೀಮ); ರಥ: ಬಂಡಿ; ಕುಂಜರ: ಆನೆ, ಗಜ; ಕೈ: ಹಸ್ತ; ನಿಲುಕು: ನೀಡುವಿಕೆ; ಕಂಜ: ಕಮಲ; ವನ: ಕಾಡು; ಅನಿಲಜ: ವಾಯುಪುತ್ರ (ಭೀಮ); ಝಾಡಿ: ಕಾಂತಿ; ಜಂಜಡ: ನೋವು, ತೊಂದರೆ; ದಿಟ್ಟ: ಧೈರ್ಯಶಾಲಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅಂಜದಿರು +ಕಮಲಾಕ್ಷಿ +ಧೌಮ್ಯ+ನಿ
ರಂಜನನ +ಸುತಿವಾಕ್ಯವೇ +ಪವಿ
ಪಂಜರವಲೇ+ಎನುತ +ಹಾಯ್ದನು +ಪವನಸುತ +ರಥಕೆ
ಕುಂಜರವು+ ಕೈಯಿಕ್ಕೆ +ನಿಲುಕದೆ
ಕಂಜವನವ್+ಅನಿಲಜನ +ಝಾಡಿಯ
ಜಂಜಡಕೆ +ದಿಟ್ಟನೆ +ಜಯದ್ರಥನ್+ಅರಸ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುಂಜರವು ಕೈಯಿಕ್ಕೆ ನಿಲುಕದೆ ಕಂಜವನವ
(೨) ಅಭಯವನ್ನು ನೀಡುವ ಪರಿ – ಧೌಮ್ಯ ನಿರಂಜನನ ಸುತಿವಾಕ್ಯವೇ ಪವಿಪಂಜರವಲೇ
(೩) ಭೀಮನನ್ನು ಕರೆದ ಪರಿ – ಪವನಸುತ, ಅನಿಲಜ

ಪದ್ಯ ೧೭: ಅರ್ಜುನನು ಯಾರನ್ನು ಕಂಡನು?

ಹರಮಹಾದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇಂತಹ ಅಪೂರ್ವ ಪರಿಮಳವು ಎಲ್ಲಿಂದ ಹರಡುತ್ತಿದೆ ಎಂದು ಮಲಗಿದ್ದ ಅರ್ಜುನನು
ಮೈಮುರಿದು ತಿರುಗಿದನು. ಪರಿಮಳಸಾರವನ್ನು ಬೀರುತ್ತಾ ದಿವ್ಯರತ್ನಾಭರಣಗಳ ಕಿರಣಗಳ ಪ್ರಭಾ ಪಂಜರದ ನಡುವೆ ನಿಂತ ಕಾಮನಿಂದ ಪೀಡಿತಳಾದ ಊರ್ವಶಿಯನ್ನು ಕಂಡನು.

ಅರ್ಥ:
ಹರ: ಶಿವ; ಮಹಾದೇವ: ಶಂಕರ; ಅಘಾಟ: ಅದ್ಭುತ, ಅತಿಶಯ; ಪರಿಮಳ: ಸುಗಂಧ; ಮೈ: ತನು; ಮುರಿ: ಸೀಳು; ಮೈಮುರಿ: ದೇಹವನ್ನು ಅಲ್ಲಾಡಿಸು; ಕಂಡು: ನೋಡು; ಅಪೂರ್ವ: ಹಿಂದೆಂದೂ ಕಾಣದ, ಆಶ್ಚರ್ಯ; ಸಾರ: ರಸ; ಕಿರಣ: ಕಾಂತಿ; ಲಹರಿ: ಅಲೆ, ರಭಸ, ಆವೇಗ; ದಿವ್ಯ: ಶ್ರೇಷ್ಠ; ರತ್ನಾಭರಣ: ಒಡವೆ; ರುಚಿರ: ಸೌಂದರ್ಯ, ಚೆಲುವು; ಪ್ರಭೆ: ಕಾಂತಿ; ಪಂಜರ: ಗೂಡು; ಹೊಳೆ: ಪ್ರಕಾಶಿಸು; ಮದನಾಲಸೆ: ಮನ್ಮಥಪೀಡಿತಳು;

ಪದವಿಂಗಡಣೆ:
ಹರ+ಮಹಾದೇವ್+ಈ+ಅಘಾಟದ್
ಪರಿಮಳವಿದ್+ಎತ್ತಣದ್+ಎನುತ+ ಮೈ
ಮುರಿದು +ಕಂಡನ್+ಅಪೂರ್ವ +ಪರಿಮಳ +ಸಾರದಲಿ +ಪಾರ್ಥ
ಕಿರಣ+ಲಹರಿಯ +ದಿವ್ಯ +ರತ್ನಾ
ಭರಣ+ ರುಚಿರತರ +ಪ್ರಭಾ +ಪಂ
ಜರದೊಳಗೆ +ಹೊಳೆಹೊಳೆವ +ಮದನಾಲಸೆಯನ್+ಊರ್ವಶಿಯ

ಅಚ್ಚರಿ:
(೧) ಊರ್ವಶಿಯು ಸೌಂದರ್ಯದ ಪಂಜರದಲ್ಲಿ ಬಂಧಿಯಾಗಿದ್ದಳು, ಅತೀವ ಸುಂದರಿ ಎಂದು ಹೇಳುವ ಪರಿ – ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ

ಪದ್ಯ ೬: ಬಾಣದ ಹೊಗೆಯು ಯಾವುದನ್ನು ಆವರಿಸಿತು?

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ (ಕರ್ಣ ಪರ್ವ, ೨೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಪ್ರಭಾವದಿಂದ ಅಕ್ಕಪಕ್ಕದವರ ಮೈಗಳು ಮರಗಟ್ಟಿದವು. ರಥದ ಕುದುರೆಗಳು ಆಯಾಸಗೊಂಡವು. ಶಲ್ಯನು ಅತಿಶಯ ವಿಸ್ಮಯದಲ್ಲಿ ಮುಳುಗಿಹೋದನು. ಉರಿ ಸುತ್ತಲೂ ಹಬ್ಬಿತು. ಹೊಗೆಯು ಆಗಸವನ್ನೇ ತುಂಬಿತು.

ಅರ್ಥ:
ಹೊರೆ: ರಕ್ಷಣೆ, ಆಶ್ರಯ, ಸಮೀಪ; ಮರನಾದರು: ಗಟ್ಟಿಯಾಗು, ಬಿರುಸಾದ; ರಥ: ಬಂಡಿ; ತುರಗ: ಕುದುರೆ; ತತಿ: ಗುಂಪು, ಸಮೂಹ; ಲಟಕಟಿಸು: ಉದ್ರೇಕಗೊಳ್ಳು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಅದ್ದು: ತೋಯ್ದು; ನಿಮಿಷ: ಕಾಲ ಪ್ರಮಾಣ; ಉರಿ: ಬೆಂಕಿಯ ಕಿಡಿ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಪೂತ: ತೂರಿದ; ಕೃತಿ: ಕೆಲಸ; ಪಂಜರ: ಹಕ್ಕಿ, ಪ್ರಾಣಿಗಳನ್ನು ಕೂಡುವ ಸಾಧನ; ಪಲ್ಲವಿಸು: ವಿಕಸಿಸು; ಉಬ್ಬು: ಹೆಚ್ಚಾಗು, ಹಿಗ್ಗು; ಹೊರಳು: ತಿರುವು, ಬಾಗು; ಹೊಗೆ: ಧೂಮ; ಅಂಬರ: ಆಗಸ; ತುಂಬು: ಪೂರ್ತಿಗೊಳ್ಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊರೆಯವರು +ಮರನಾದರ್+ಆ+ ರಥ
ತುರಗ+ತತಿ +ಲಟಕಟಿಸಿದವು+ ನಿ
ಬ್ಬರದ +ಬೆರಗಿನೊಳ್+ಅದ್ದು +ಹೋದನು +ಶಲ್ಯ +ನಿಮಿಷದಲಿ
ಉರಿ+ ಛಡಾಳಿಸಿ +ಪೂತ್ಕೃತಿಯ+ ಪಂ
ಜರದೊಳಗೆ +ಪಲ್ಲವಿಸಿತ್+ಉಬ್ಬಿದ
ಹೊರಳಿ+ಹೊಗೆ+ಅಂಬರವ+ ತುಂಬಿತು +ಭೂಪ +ಕೇಳೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪೂತ್ಕೃತಿಯ ಪಂಜರದೊಳಗೆ ಪಲ್ಲವಿಸಿತುಬ್ಬಿದ

ಪದ್ಯ ೪೨: ಕರ್ಣನೇಕೆ ಯುಧಿಷ್ಠಿರನೆದುರು ಯುದ್ಧ ಮಾಡಲು ಹೆದರುತ್ತಾನೆ?

ಅಂಜುವೆವು ನಿಮಗರಸರೇ ಬಲ
ಪಂಜರದ ಗಿಣಿ ನೀವು ಸೊಕ್ಕಿದ
ಮಂಜರನ ಪಡಿಮುಖಕೆ ನಿಲುವುದು ಉಚಿತವೇ ನಿಮಗೆ
ಭಂಜನೆಗೆ ಬಲುಹುಳ್ಳೊಡೆಯು ನಿಮ
ಗಂಜುವರು ಗುರು ಭೀಷ್ಮರಾಪರಿ
ರಂಜಕರು ತಾವಲ್ಲೆನುತ ತಾಗಿದನು ಭೂಪತಿಯ (ಕರ್ಣ ಪರ್ವ, ೧೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನೆದುರು ಬಂದುದನ್ನು ಕಂಡ ಕರ್ಣನು, ಅರಸರೇ! ನಾವು ನಿಮಗೆ ಹೆದರುತ್ತೇವೆ, ಏಕೆಂದರೆ ನಿಮ್ಮ ಸೈನ್ಯದ ಪಂಜರದಲ್ಲಿಯ ಗಿಣಿಯಂತೆ ಇರುವವರು ನೀವು. ಸೊಕ್ಕಿದ ಬೆಕ್ಕಿಗೆದುರು ನಿಲ್ಲುವುದು ಉಚಿತವೇ? ನಿಮ್ಮನ್ನು ಭಂಜಿಸುವ ಶಕ್ತಿಯಿದ್ದರೂ ಭೀಷ್ಮ ದ್ರೋಣರು ನಿಮಗ ಹೆದರುತ್ತಿದ್ದರು. ಅವರಂತೆ ತೋರಿಕೆಯ ಯುದ್ಧ ಮಾದುವವರು ನಾವಲ್ಲ ಎಂದು ಕರ್ಣನು ಗುಡುಗಿದನು.

ಅರ್ಥ:
ಅಂಜು: ಹೆದರು; ಅರಸ: ರಾಜ; ಬಲ: ಸೈನ್ಯ; ಪಂಜರ: ಗೂಡು; ಗಿಣಿ: ಶುಕ; ಸೊಕ್ಕು: ಕೊಬ್ಬಿದ; ಮಂಜರ: ಬೆಕ್ಕು; ಪಡಿ; ವಿರುದ್ಧ; ಪಡಿಮುಖ: ಎದುರಾಳಿ; ಮುಖ: ಆನನ; ನಿಲುವು: ನಿಂತುಕೊಳ್ಳು; ಉಚಿತ: ಸರಿಯಾದ; ಭಂಜನೆ: ಸೀಳು, ಹೋರಾಡು; ಬಲುಹು: ಶಕ್ತಿ; ಅಂಜು: ಹೆದರು; ಗುರು: ದ್ರೋಣ; ಪರಿ: ರೀತಿ; ರಂಜಕ: ರಂಜಿಸುವವ,ಮನೋಹರ; ತಾಗು: ಮುಟ್ಟು, ಅಪ್ಪಳಿಸು; ಭೂಪತಿ: ರಾಜ (ಯುಧಿಷ್ಠಿರ);

ಪದವಿಂಗಡಣೆ:
ಅಂಜುವೆವು +ನಿಮಗ್+ಅರಸರೇ +ಬಲ
ಪಂಜರದ+ ಗಿಣಿ +ನೀವು +ಸೊಕ್ಕಿದ
ಮಂಜರನ+ ಪಡಿಮುಖಕೆ+ ನಿಲುವುದು +ಉಚಿತವೇ +ನಿಮಗೆ
ಭಂಜನೆಗೆ +ಬಲುಹುಳ್ಳೊಡೆಯು+ ನಿಮಗ್
ಅಂಜುವರು +ಗುರು +ಭೀಷ್ಮರ್+ಆ+ಪರಿ
ರಂಜಕರು+ ತಾವಲ್ಲೆನುತ +ತಾಗಿದನು +ಭೂಪತಿಯ

ಅಚ್ಚರಿ:
(೧) ಯುಧಿಷ್ಥಿರನನ್ನು ಬಲಪಂಜರದ ಗಿಣಿ ಎಂದು ಕರೆದಿರುವುದು
(೨) ಪಂಜರ, ಮಂಜರ – ಪ್ರಾಸ ಪದಗಳು

ಪದ್ಯ ೪೮: ಭೀಮನ ಬಾಣಪಂಜರವನ್ನು ಯಾರು ಮುರಿದರು?

ತೇರು ಹುಡಿಹುಡಿಯಾಗಿ ರಣದಲಿ
ಸಾರಥಿಯ ತಲೆ ಹೋಗಿ ಕಾಲಿನ
ಲಾರುಭಟೆಯಲಿ ನಿನ್ನ ಮಗನೆಸುತಿರ್ದನನಿಲಜನ
ಸಾರು ನೀ ಸಾರೆನುತ ಕರ್ಣಕು
ಮಾರನಡಹಾಯಿದನು ಭೀಮನ
ಭೂರಿ ಬಾಣದ ಪಂಜರವ ಭಂಜಿಸುತ ವಹಿಲದಲಿ (ಕರ್ಣ ಪರ್ವ, ೧೦ ಸಂಧಿ, ೪೮ ಪದ್ಯ)

ತಾತ್ಪರ್ಯ:
ದುಶ್ಯಾಸನ ತೇರು ಪುಡಿಪುಡಿಯಾಯಿತು, ಅವನ ಸಾರಥಿಯ ತಲೆ ಕೆಳಗೆ ಉರುಳಿತು. ಆರ್ಭಟಿಸುತ್ತಾ ನೆಲದ ಮೇಲೆ ನಿಂತೇ ಭೀಮನೊಡನೆ ಯುದ್ಧವನ್ನು ಮಾಡುತ್ತಿರಲು, ಕರ್ಣನ ಪುತ್ರನು ಈ ದೃಶ್ಯವನ್ನು ನೋಡಿ ಅವರಿಬ್ಬರ ನಡುವೆ ಅಡ್ಡಬಂದು ಭೀಮನಿಗೆ ಎದುರಾಗಿ, ದುಶ್ಯಾಸನನ್ನು ಆಚೆಗೆ ಕಳಿಸಿ, ಭೀಮನ ಬಾಣಪಂಜರವನ್ನು ಮುರಿದನು.

ಅರ್ಥ:
ತೇರು: ಬಂಡಿ, ರಥ; ಹುಡಿಹುಡಿ: ಪುಡಿಪುಡಿ; ರಣ: ಯುದ್ಧ; ಸಾರಥಿ: ಸೂತ, ರಥವನ್ನು ಓಡಿಸುವವ; ತಲೆ: ಶಿರ; ಹೋಗು: ನಾಶ, ಅಳಿವು; ಕಾಲು: ಪಾದ; ಆರುಭಟೆ: ಆರ್ಭಟ, ಕಿರುಚು; ಮಗ: ಸುತ; ಎಸು: ಹೊಡೆ; ಅನಿಲಜ: ವಾಯು ಪುತ್ರ (ಭೀಮ); ಸಾರು: ಹರಡು, ಈಚೆ ಬಾ, ದಾರಿ ಬಿಡು; ಕುಮಾರ: ಪುತ್ರ; ಅಡಹಾಯಿ: ಅಡ್ಡ ಬಂದು; ಭೂರಿ: ದೊಡ್ಡ, ಹೆಚ್ಚು, ಅಧಿಕ; ಬಾಣ: ಶರ; ಪಂಜರ: ಗೂಡು; ಭಂಜಿಸು: ಸೀಳು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ತೇರು +ಹುಡಿಹುಡಿಯಾಗಿ +ರಣದಲಿ
ಸಾರಥಿಯ +ತಲೆ +ಹೋಗಿ +ಕಾಲಿನಲ್
ಆರುಭಟೆಯಲಿ +ನಿನ್ನ +ಮಗನ್+ಎಸುತಿರ್ದನ್+ಅನಿಲಜನ
ಸಾರು+ ನೀ +ಸಾರೆನುತ +ಕರ್ಣ+ಕು
ಮಾರನ್+ಅಡಹಾಯಿದನು+ ಭೀಮನ
ಭೂರಿ +ಬಾಣದ +ಪಂಜರವ+ ಭಂಜಿಸುತ +ವಹಿಲದಲಿ

ಅಚ್ಚರಿ:
(೧) ಆಚೆ ಹೋಗು ಎಂದು ಹೇಳಲು – ಸಾರು ನೀ ಸಾರೆನುತ
(೨) ಬ ಕಾರದ ಸಾಲು ಪದ – ಭೀಮನ ಭೂರಿ ಬಾಣದ ಪಂಜರವ ಭಂಜಿಸುತ