ಪದ್ಯ ೧೧: ಪಾಂಡುರಾಜರನ್ನು ಯಾರು ಬೇಟೆಗೆ ಕರೆದರು?

ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡುನೃಪಾಲಕನೋಲಗಕೆ (ಆದಿ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಂತ್ರಪಿಂಡವನ್ನು ಸೇವಿಸಿ, ಗರ್ಭವತಿಯಾದಳು. ವೇದವ್ಯಾಸರು ಆಶ್ರಮಕ್ಕೆ ಹಿಂದಿರುಗಿದರು. ಹೀಗೆ ರಾಜನ ಅಭ್ಯುದಯವಾಗುತ್ತಿರಲು, ರಾಜ ಜನಮೇಜಯ ಕೇಳು, ಬೇಟೆಗಾರರು ಪಾಂಡುರಾಜನ ಓಲಗಕ್ಕೆ ಬಂದು, ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಬೇಟೆಗೆ ಬರಬೇಕೆಂದು ಕರೆದರು.

ಅರ್ಥ:
ಧರಿಸು: ಹೊರು; ಗರ್ಭ: ಹೊಟ್ಟೆ; ಉತ್ಕರ: ರಾಶಿ, ಸಮೂಹ; ಆಶ್ರಮ: ಕುಟೀರ; ಮುನಿ: ಋಷಿ; ತಿರುಗು: ಹಿಂತಿರುಗು, ಹೊರಡು; ದಿನ: ವಾರ; ಉಬ್ಬು: ಹೆಚ್ಚಾಗು; ರಾಯ: ರಾಜ; ಅಭ್ಯುದಯ: ಏಳಿಗೆ; ಅರಸ: ರಾಜ; ಕೇಳು: ಆಲಿಸು; ಬೇಂಟೆಗಾರ: ಬೇಡ; ಕರೆ: ಕೂಗು; ಬಂದು: ಆಗಮಿಸು; ಮೃಗ: ಪ್ರಾಣಿ; ನಿಕಾಯ: ವಾಸಸ್ಥಳ; ನೆರವಿ: ಗುಂಪು, ಸಮೂಹ; ನೆಲೆ: ವಾಸಸ್ಥಳ; ನೃಪಾಲ: ರಾಜ; ಓಲಗ: ದರಬಾರು;

ಪದವಿಂಗಡಣೆ:
ಧರಿಸಿದಳು +ಗಾಂಧಾರಿ +ಗರ್ಭೋ
ತ್ಕರವನ್+ಇತ್ತ+ ನಿಜಾಶ್ರಮಕೆ +ಮುನಿ
ತಿರುಗಿದನು +ದಿನದಿನದೊಳ್+ಉಬ್ಬಿತು +ರಾಯನ್+ಅಭ್ಯುದಯ
ಅರಸ+ ಕೇಳೈ +ಬೇಂಟೆಗಾರರು
ಕರೆಯ +ಬಂದರು +ಮೃಗ+ನಿಕಾಯದ
ನೆರವಿಗಳ +ನೆಲೆಗೊಳಿಸಿ +ಪಾಂಡು+ನೃಪಾಲಕನ್+ಓಲಗಕೆ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ

ಪದ್ಯ ೩೧: ದುರ್ಯೋಧನನು ಸಂಜಯನನ್ನು ಅಳಿಮನವೆಂದು ಏಕೆ ಕರೆದನು?

ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಈ ಹೀನನೈ ನೀನಕಟ ಸಂಜಯ ಎಂದನಾ ಭೂಪ (ಗದಾ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಾಡನ್ನು ಸುಡಲು ಅಗ್ನಿಯು ಗಾಳಿಯ ಸಹಾವನ್ನು ಬಯಸುತ್ತಾನೆ, ನಿಜ ಆದರೆ ಕತ್ತಲನ್ನು ತೊಲಗಿಸಲು ಸೂರ್ಯನು ಯಾರ ಸಹಾಯವನ್ನು ಬಯಸುತ್ತಾನೆ? ಈ ಸಮರ್ಥವಾದ ಗದೆಯಿರಲು, ಕುಂತಿಯ ಮಕ್ಕಳನ್ನು ಲೆಕ್ಕುಸುವೆನೇ? ಸಂಜಯ ನಿನ್ನ ಮನ ಸಣ್ಣದ್ದು ಎಂದು ಹೇಳಿದನು.

ಅರ್ಥ:
ಕಾನನ: ಕಾಡು; ಕೈಯಿಕ್ಕು: ಮುಟ್ಟು; ಪವಮಾನ: ವಾಯು; ಪಾವಕ: ಬೆಂಕಿ; ಬಯಸು: ಆಸೆ ಪಡು, ಇಚ್ಛಿಸು; ಭಾನು: ಸೂರ್ಯ; ಭಾರಿ: ದೊಡ್ಡ; ತಮ: ಅಂಧಕಾರ; ನೆರವು: ಸಹಾಯ; ನಿಭೃತ: ಗುಟ್ಟು, ರಹಸ್ಯ; ಗದೆ: ಮುದ್ಗರ; ಸೂನು: ಮಕ್ಕಳು; ಕೈಕೊಂಬು: ಹಿಡಿ, ಲೆಕ್ಕಿಸು; ಮನ:ಮನಸ್ಸು; ಹೀನ: ಕೆಟ್ಟದು; ಅಕಟ: ಅಯ್ಯೋ; ಭೂಪ: ರಾಜ;

ಪದವಿಂಗಡಣೆ:
ಕಾನನಕೆ +ಕೈಯಿಕ್ಕುವರೆ +ಪವ
ಮಾನನನು +ಪಾವಕನು+ ಬಯಸುವ
ಭಾನು +ಭಾರಿಯ +ತಮವ್+ಅತಿವ್+ಇವನ್+ಅದಾರ+ ನೆರವಿಯಲಿ
ಈ +ನಿಭೃತ +ಗದೆಯಿರಲು +ಕುಂತೀ
ಸೂನುಗಳ +ಕೈಕೊಂಬೆನೇ +ಮನ
ಈ +ಹೀನನೈ +ನೀನಕಟ +ಸಂಜಯ +ಎಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು ಬಯಸುವ, ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
(೨) ಕೈಯಿಕ್ಕು, ಕೈಕೊಂಬು – ಪದಗಳ ಬಳಕೆ
(೩) ಜೋಡಿ ಪದಗಳು (ಕ, ಪ) – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು

ಪದ್ಯ ೪: ಪಾಂಚಾಲ ದೇಶದವರು ಅರ್ಜುನನ ಪರಾಕ್ರಮವನ್ನು ಹೇಗೆ ಕೊಂಡಾಡಿದರು?

ಈತನುದಯದೊಳಿಂದು ಭೂಸುರ
ಜಾತಿಗಾಯ್ತಗ್ಗಳಿಕೆ ಪಾರ್ಥಿವ
ರಾತರಿಂದುಬ್ಬಟೆಯ ಧನುವಿಂದಿವನ ವಶವಾಯ್ತು
ಸೋತು ತೆಗೆದ ಮಹೀಶ್ವರರ ಮಾ
ತೇತಕದು ಮಝ ಪೂತೆನುತ ಜನ
ವೀತನನು ಕೊಂಡಾಡುತಿರ್ದುದು ನೆರವಿ ನೆರವಿಯಲಿ (ಆದಿ ಪರ್ವ, ೧೬ ಸಂಧಿ, ೪ ಪದ್ಯ)

ತಾತ್ಪರ್ಯ:
ಬ್ರಾಹ್ಮಣ ವೇಷದಲ್ಲಿದ್ದ ಅರ್ಜುನನ ಶೌರ್ಯವನ್ನು ಗಮನಿಸಿದ ಪಾಂಚಾಲ ದೇಶದವರು, “ಇವನ ಹುಟ್ಟಿನಿಂದ ಇಡೀ ಬ್ರಾಹ್ಮಣ ಸಮೂಹಕ್ಕೆ ಹಿರಿಮೆಯುಂಟಾಯಿತು. ರಾಜರೆಲ್ಲರಿಂದಲು ಮುರಿಯಲಾಗದ ಅತಿಶಯವಾದ ಧನಸ್ಸು ಇವನಿಗೆ ವಶವಾಯಿತು, ಭಲೇ ಇವನೇ ವೀರ” ಎಂದು ಅಲ್ಲಿ ನೆರೆದಿದ್ದ ಜನರು ಕೊಂಡಾಡಿದರು.

ಅರ್ಥ:
ಉದಯ: ಹುಟ್ಟು; ಭೂಸುರ: ಬ್ರಾಹ್ಮಣ; ಅಗ್ಗಳಿಕೆ: ಹೊಗಳಿಕೆ, ಹಿರಿಮೆ; ಪಾರ್ಥಿವ: ರಾಜ; ಉಬ್ಬಟೆ: ಅತಿಶಯ, ಹಿರಿಮೆ; ಧನು: ಬಿಲ್ಲು; ವಶ: ಕೈಸೇರು; ಸೋತು: ಪರಾಜಯ; ಮಹೀಶ್ವರ: ರಾಜ; ಮಝ: ಕೊಂಡಾಟದ ಒಂದು ಮಾತು; ಪೂತ: ಪವಿತ್ರಾತ್ಮ; ಕೊಂಡಾಡು: ಹೊಗಳು; ನೆರವಿ: ಗುಂಪು;

ಪದವಿಂಗಡಣೆ:
ಈತನ್+ಉದಯದೊಳ್+ಇಂದು +ಭೂಸುರ
ಜಾತಿಗ್+ಆಯ್ತ್+ಅಗ್ಗಳಿಕೆ+ ಪಾರ್ಥಿವರ್
ಆತರ್+ಇಂದ್+ಉಬ್ಬಟೆಯ +ಧನುವ್+ಇಂದ್+ಇವನ +ವಶವಾಯ್ತು
ಸೋತು +ತೆಗೆದ +ಮಹೀಶ್ವರರ +ಮಾತ್
ಏತಕದು +ಮಝ +ಪೂತ್+ಎನುತ +ಜನವ್
ಈತನನು +ಕೊಂಡಾಡುತಿರ್ದುದು +ನೆರವಿ+ ನೆರವಿಯಲಿ

ಅಚ್ಚರಿ:
(೧) ಉಬ್ಬಟೆ, ಅಗ್ಗಳಿಕೆ – ಅತಿಶಯ ಪದದ ಸಮನಾರ್ಥಕ ಪದಗಳು
(೨) ನೆರವಿ ನೆರವಿ – ಜೋಡಿ ಪದವಾಗಿ ಬಳಕೆ, ಗುಂಪು ಗುಂಪಾಗಿ ಅರ್ಥದಲ್ಲಿ