ಪದ್ಯ ೨೯: ಭೀಮ ದುರ್ಯೋಧನರ ಯುದ್ಧದ ಲೆಕ್ಕಾಚಾರವು ಹೇಗಿತ್ತು?

ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ (ಗದಾ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅವರ ಲೆಕ್ಕಾಚಾರ ತಪ್ಪಿಹೋಗುತ್ತಿತ್ತು. ಮನಸ್ಸಿನ ಮೇಲುಗೈ ಮನಸ್ಸಿನಲ್ಲೇ ಉಳಿಯುತ್ತಿತ್ತು. ಹೊಡೆತದ ಪೆಟ್ಟುಗಳು ಮನಸ್ಸಿನಲ್ಲೇ ನಿಲ್ಲುತ್ತಿದ್ದವು. ಕೋಪವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ಮನಸ್ಸುಗಳು ಕುದಿಯುತ್ತಿದ್ದವು. ಜಯವನ್ನು ಶೀಘ್ರವಾಗಿ ಸಾಧಿಸುವ ಛಲದಿಂದ ಇಬ್ಬರೂ ಕಾದಿದರು.

ಅರ್ಥ:
ನೆನಹು: ಜ್ಞಾಪಕ; ನೆಗ್ಗು: ಕುಗ್ಗು, ಕುಸಿ; ಉಪ್ಪರ: ಎತ್ತರ, ಉನ್ನತಿ; ಕೈ: ಹಸ್ತ; ಮನ: ಮನಸ್ಸು; ಕಬಳಿಸು: ನುಂಗು; ತೆರಹು: ಬಿಚ್ಚು, ಎಡೆ, ಜಾಗ; ಬಿಮ್ಮು: ದೊಡ್ಡತನ, ಘನತೆ; ಬಿಗಿ: ಬಂಧಿಸು; ತೆಗೆ: ಹೊರತರು; ಘಾಯ: ಪೆಟ್ಟು; ಘಾತಿ: ಹೊಡೆತ; ಕೋಪ: ಕುಪಿತ; ಕುದಿ: ಶಾಖದಿಂದ ಉಕ್ಕು, ಮರಳು; ಕರಣ: ಕೆಲಸ, ಜ್ಞಾನೇಂದ್ರಿಯ; ತನು: ದೇಹ; ಜಯ: ಗೆಲುವು; ತವಕ: ಬಯಕೆ, ಆತುರ; ತನಿ:ಹೆಚ್ಚಾಗು; ಮನ: ಮನಸ್ಸು; ತೋಟಿಕಾರ: ಜಗಳಗಂಟ; ಕಾದಿದರು: ಹೋರಾಡು; ಕಡುಗು: ತೀವ್ರವಾಗು;

ಪದವಿಂಗಡಣೆ:
ನೆನಹು +ನೆಗ್ಗಿದುದ್+ಉಪ್ಪರದ+ ಕೈ
ಮನವ +ಕಬಳಿಸಿ +ತೆರಹು +ಬಿರು+ಬಿ
ಮ್ಮಿನಲಿ +ಬಿಗಿದುದು +ತೆಗೆದವ್+ಇಬ್ಬರ+ ಘಾಯಘಾತಿಗಳು
ಕೊನರ್ವ+ ಕೋಪದ +ಕುದಿವ +ಕರಣದ
ತನುವಿಗುಪ್ತಿಯ +ಜಯದ +ತವಕದ
ತನಿಮನದ +ಕಡು+ತೋಟಿಕಾರರು +ಕಾದಿದರು +ಕಡುಗಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊನರ್ವ ಕೋಪದ ಕುದಿವ ಕರಣದ

ಪದ್ಯ ೨೧: ರಾಜರು ಯಾವ ಅವಸ್ಥೆಯಲ್ಲಿದ್ದರು?

ತಳಿತ ಮುಸುಕಿನ ಬೆರಲ ಮೂಗಿನ
ನೆಲನ ನೋಟದ ಮೆಯ್ಯ ತೂಕದ
ಝಳದ ಸುಯ್ಲಿನ ಮುಖದ ಮೋನದ ನಸಿದ ನೆನಹುಗಳ
ಕಳಿದ ಕಡುಹಿನ ಬೀತ ಬಿರುದಿನ
ಬಲಿದ ಭಂಗದ ನೃಪತಿಗಳನ
ಗ್ಗಳೆಯ ರವಿಸುತ ಕಂಡು ಹೊಗಳಿದನಾ ಘಟೋತ್ಕಚನ (ದ್ರೋಣ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮುಖಕ್ಕೆ ಹಾಕಿಕೊಂಡು ಮುಸುಕುಗಳ, ಮೂಗಿನ ಮೇಲಿಟ್ಟ ಬೆರಳುಗಳ, ತಲೆತಗ್ಗಿಸಿ ನೆಲವನ್ನೇ ನೋಡುವ ನೋಟಗಳ, ಭಾರೈಸಿದ ಮೈಗಳ, ಕುಗ್ಗಿದ ಪರಾಕ್ರಮದ ತೊರೆದ ಬಿರುದುಗಳ, ಅನುಭವಿಸಿದ ಮಹಾಭಂಗಗಳ ರಾಜರನ್ನು ನೋಡಿ ಕರ್ಣನು ಘಟೋತ್ಕಚನನ್ನು ಹೊಗಳಿದನು.

ಅರ್ಥ:
ತಳಿತ: ಚಿಗುರಿದ; ಮುಸುಕು: ಆವರಿಸು; ಮೂಗು: ನಾಸಿಕ; ನೆಲ: ಭೂಮಿ; ನೋಟ: ದೃಷ್ಟಿ; ಮೆಯ್ಯ: ತನು; ತೂಕ: ಭಾರ; ಝಳ: ಪ್ರಕಾಶ, ಕಾಂತಿ; ಸುಯ್ಲು: ನಿಡಿದಾದ ಉಸಿರು, ನಿಟ್ಟುಸಿರು; ಮುಖ: ಆನನ; ಮೋನ: ಮಾತನಾಡದಿರುವಿಕೆ, ಮೌನ; ನಸಿ: ಹಾಳಾಗು, ನಾಶವಾಗು; ನೆನಹು: ಜ್ಞಾಪಕ, ನೆನಪು; ಕಳಿ: ಕಳೆದುಹೋಗು; ಕಡುಹು: ಸಾಹಸ, ಹುರುಪು; ಬೀತ: ಜರುಗಿದ; ಬಿರುದು: ಗೌರವ ಸೂಚಕ ಪದ; ಬಲಿ: ಗಟ್ಟಿ; ಭಂಗ: ಮೋಸ, ವಂಚನೆ; ನೃಪತಿ: ರಾಜ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯಪುತ್ರ; ಕಂಡು: ನೋಡು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ತಳಿತ +ಮುಸುಕಿನ +ಬೆರಳ +ಮೂಗಿನ
ನೆಲನ +ನೋಟದ +ಮೆಯ್ಯ +ತೂಕದ
ಝಳದ +ಸುಯ್ಲಿನ +ಮುಖದ +ಮೋನದ +ನಸಿದ +ನೆನಹುಗಳ
ಕಳಿದ+ ಕಡುಹಿನ+ ಬೀತ +ಬಿರುದಿನ
ಬಲಿದ +ಭಂಗದ +ನೃಪತಿಗಳನ್
ಅಗ್ಗಳೆಯ +ರವಿಸುತ +ಕಂಡು +ಹೊಗಳಿದನಾ +ಘಟೋತ್ಕಚನ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೀತ ಬಿರುದಿನ ಬಲಿದ ಭಂಗದ
(೨) ಒಂದೇ ಅಕ್ಷರದ ಜೋಡಿ ಪದಗಳು – ಮುಖದ ಮೋನದ ನಸಿದ ನೆನಹುಗಳ ಕಳಿದ ಕಡುಹಿನ

ಪದ್ಯ ೪೮: ಕರ್ಣಾದಿಗಳು ತಮ್ಮ ಪ್ರಾಣವನ್ನು ಯಾರಿಗೆ ಮಾರಿದ್ದರು?

ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ (ದ್ರೋಣ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಸಿಟ್ಟಾಗಿ ಏನುಮಾಡಲು ಸಾಧ್ಯ. ಕೃಷ್ಣನ ಸಂಕಲ್ಪವು ಅಭೇದ್ಯ, ನಾವೋ ನಮ್ಮ ಪ್ರಾಣಗಳನ್ನು ಕೌರವನಿಗೆ ಮಾರಿಕೊಂಡಿದ್ದೇವೆ. ಚಿಂತಿಸಿ ಏನು ಪ್ರಯೋಜನ ಎಂದು ಕರ್ಣನೇ ಮೊದಲಾದವರು ವಿಷಾದದ ಕಡಲಿನಲ್ಲಿದ್ದರು. ಇತ್ತ ಗದುಗಿನ ವೀರನಾರಯಣನು ಅರ್ಜುನನ ರಥವನ್ನು ಹಿಂದಿರುಗಿಸಿದನು.

ಅರ್ಥ:
ಮುನಿ: ಕೋಪ, ಸಿಟ್ಟು; ನೆನಹು: ನೆನಪು; ಘನ: ದೊಡ್ಡ; ಅಸು: ಪ್ರಾಣ; ಜನಪ: ರಾಜ; ಮಾರು: ವಿಕ್ರಯಿಸು; ಚಿಂತೆ: ಯೋಚನೆ; ಇನ: ಸೂರ್ಯ; ಸುತ: ಮಗ; ಆದಿ: ಮೊದಲಾದ; ಮನ: ಮನಸ್ಸು; ಹರುಷ: ಸಂತಸ; ಹರಹು: ವಿಸ್ತಾರ, ವೈಶಾಲ್ಯ; ತಿರುಹು: ಹಿಂದಿರುಗಿಸು;

ಪದವಿಂಗಡಣೆ:
ಮುನಿದು +ಮಾಡುವುದೇನು +ಕೃಷ್ಣನ
ನೆನಹು +ಘನ +ನಮ್ಮ್+ಅಸುವ +ನಾವ್+ಈ+
ಜನಪತಿಗೆ +ಮಾರಿದೆವು +ನಮಗೀ +ಚಿಂತೆ+ಏಕೆನುತ
ಇನಸುತಾದಿಗಳಿದ್ದರ್+ಇತ್ತಲು
ಮನದ +ಹರುಷದ +ಹರಹಿನಲಿ+ ಪಾ
ರ್ಥನ +ರಥವ +ತಿರುಹಿದನು+ ಗದುಗಿನ+ ವೀರನಾರಯಣ

ಅಚ್ಚರಿ:
(೧) ಕೃಷ್ಣನ ಸಂತಸ ಮತ್ತು ಕಾರ್ಯ – ಮನದ ಹರುಷದ ಹರಹಿನಲಿ ಪಾರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ

ಪದ್ಯ ೧೪: ಸುಭದ್ರೆ ಪಾಂಡವರಿಗೆ ಏನು ಹೇಳಿದಳು?

ಎಲೆ ಯುಧಿಷ್ಠಿರದೇವ ಸಾಲದೆ
ಕೆಲನ ಮೆಚ್ಚಿಸುವಳಲು ಲೋಚನ
ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ
ಅಳಲದಿರಿ ಸಹದೇವ ನಕುಳರು
ನಿಲಿಸಿರೈ ನಿಮ್ಮಿಷ್ಟಸಿದ್ಧಿಯ
ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ (ದ್ರೋಣ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಕ್ಕದ ಜನರನ್ನು ಮೆಚ್ಚಿಸಲೆಂದು ತೋರುಗಾಣಿಕೆಯ ಕಣ್ಣಿರಿಡುವ ಯುಧಿಷ್ಠಿರದೇವ, ನಿನ್ನ ಕಣ್ಣೀರು ಒರೆಸಿಕೋ, ಭೀಮಾ ನಿಮ್ಮ ಒಳಸಂಚಿನ ಚಿಂತೆಯನ್ನು ಬಲ್ಲೆ, ಸಹದೇವ ನಕುಲಋಎ ನಿಮ್ಮಿಷ್ಟಸಿದ್ಧಿ ಫಲಿಸಿತು, ಇನ್ನೇಕೆ ದುಃಖಿಸುವೇ ಎಂದು ತನ್ನ ಅಳಲನ್ನು ತೋರ್ಪಡಿಸಿದಳು ಸುಭದ್ರೆ.

ಅರ್ಥ:
ಸಾಲದೆ: ಅಗತ್ಯ ಪೂರೈಸಿತು; ಕೆಲ: ಮಗ್ಗಲು; ಮೆಚ್ಚಿಸು: ಹರ್ಷಗೊಳಿಸು; ಅಳಲು: ದುಃಖ; ಲೋಚನ: ಕಣ್ಣು; ಲೋಚನಜಲ: ಕಣ್ಣೀರು; ತೊಡೆ: ಲೇಪಿಸು, ಬಳಿ; ಬಲ್ಲೆ: ತಿಳಿದಿರುವೆ; ನೆನಹು: ನೆನಪು; ನಿಲ್ಲಿಸು: ತಡೆ; ಇಷ್ಟ: ಆಸೆ; ಸಿದ್ಧಿ: ಗುರಿಮುಟ್ಟುವಿಕೆ; ಬೆಳಸು: ವೃದ್ಧಿಸು; ಫಲ: ಪ್ರಯೋಜನ; ನೋವು: ಪೆಟ್ಟು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಎಲೆ +ಯುಧಿಷ್ಠಿರದೇವ +ಸಾಲದೆ
ಕೆಲನ +ಮೆಚ್ಚಿಸುವ್+ಅಳಲು +ಲೋಚನ
ಜಲವ+ ತೊಡೆಯೈ +ಭೀಮ +ಬಲ್ಲೆನು +ನಿಮ್ಮ +ನೆನಹುಗಳ
ಅಳಲದಿರಿ+ ಸಹದೇವ+ ನಕುಳರು
ನಿಲಿಸಿರೈ +ನಿಮ್ಮಿಷ್ಟಸಿದ್ಧಿಯ
ಬೆಳಸು +ಫಲವಾಯ್ತೇಕೆ +ನೋವಿನ್ನೆಂದಳ್+ಇಂದುಮುಖಿ

ಅಚ್ಚರಿ:
(೧) ಕಣ್ಣೀರೆಂದು ಹೇಳಲು – ಲೋಚನಜಲ ಪದದ ಬಳಕೆ

ಪದ್ಯ ೩೨: ಸೈನಿಕರು ಏನೆಂದು ಕೂಗಿದರು?

ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು (ದ್ರೋಣ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೋಣನ ಮಹಾರಭಸವನ್ನು ಕಂಡ ಮಂತ್ರಿಗಳು, ವೀರರನ್ನು ಕಳಿಸಿ ದ್ರೋಣನ ರಭಸವನ್ನು ತಗ್ಗಿಸಿರಿ, ಯಮನದಾಳಿಗೆ ಎದುರಾಗಿ ಪರಾಕ್ರಮ ಏನು ಮಾಡೀತು? ನಮ್ಮ ಭರವಸೆಗಳು ಕುಸಿಯುತ್ತಿವೆ, ದ್ರೋಣನನ್ನು ನಿಲ್ಲಿಸಿ ಯುದ್ಧಮಾಡದಿದ್ದರೆ ರಾಜನು ಸೆರೆಸಿಕ್ಕುವ ಭಯ ತಪ್ಪುವುದಿಲ್ಲ ಎಂದು ಕೂಗಿದರು.

ಅರ್ಥ:
ಆಳು: ಸೇವಕ, ಸೈನಿಕ; ಹೊಗಿಸು: ಹೊಗುವಂತೆ ಮಾಡು; ರಥ: ಬಂಡಿ; ದುವ್ವಾಳಿ: ವೇಗ; ಬರುತದೆ: ಆಗಮಿಸು; ಕೃತಾಂತ: ಯಮ; ದಾಳಿ: ಆಕ್ರಮಣ; ವೀರ: ಶೂರ; ನೆಗ್ಗು: ತಗ್ಗು, ಕುಸಿ; ನೆನಹು: ಜ್ಞಾಪಕ, ನೆನಪು; ಕಾಳು: ಕೆಟ್ಟದ್ದು, ಕಪ್ಪು; ಕೆಡು: ಹಾಳು; ಕೂಡೆ: ಜೊತೆ; ತಪ್ಪ: ಸುಳ್ಳಾಗು; ನೃಪಾಲ: ರಾಜ; ಒದರು: ಕೂಗು; ಮಂತ್ರಿ: ಸಚಿವ;

ಪದವಿಂಗಡಣೆ:
ಆಳ +ಹೊಗಿಸೋ +ದ್ರೋಣ +ರಥ +ದು
ವ್ವಾಳಿಯಲಿ +ಬರುತದೆ+ ಕೃತಾಂತನ
ದಾಳಿಗ್+ಎತ್ತಣ +ವೀರವೋ +ನೆಗ್ಗಿದವು +ನೆನಹುಗಳು
ಕಾಳುಗೆಡದಿರಿ+ ಕೂಡೆ+ ಕೈಕೊಳ
ಹೇಳಿ +ಕೈ ತಪ್ಪಾಗದಿರದು+ ನೃ
ಪಾಲಕಂಗ್+ಎಂದ್+ಒದರಿದರು +ಧರ್ಮಜನ +ಮಂತ್ರಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಕೃತಾಂತನ ದಾಳಿಗೆತ್ತಣ ವೀರವೋ
(೨) ಕ ಕಾರದ ತ್ರಿವಳಿ ಪದ – ಕಾಳುಗೆಡದಿರಿ ಕೂಡೆ ಕೈಕೊಳ ಹೇಳಿ ಕೈತಪ್ಪಾಗದಿರದು