ಪದ್ಯ ೫೧: ಅಶ್ವತ್ಥಾಮನ ಸ್ಥಿತಿ ಹೇಗಿತ್ತು?

ಜಗದುಸುರು ಪಸರಿಸಿತು ಹರುಷದ
ಹೊಗರು ಮಸಗಿತು ರಿಪುನೃಪರ ನಿ
ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ
ಹೊಗೆವ ಮೋರೆಯ ಕಯ್ಯಗಲ್ಲದ
ಬಿಗಿದ ಬೆರಗಿನ ಖತಿಯೊಳುಸುರುವ
ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ (ದ್ರೋಣ ಪರ್ವ, ೧೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಜಗತ್ತಿಗೆ ಪ್ರಾಣವು ಬಂದಿತು. ಪಾಂಡವರ ಸಂತೋಷ ಹಬ್ಬಿ ಹೆಚ್ಚಿತು. ನಿನ್ನ ಸ್ವೇಚ್ಛಾಚಾರಿಯಾದ ಮಗನ ಉತ್ಸಾಹವು ದುಃಖದ ಕೆಸರಿನಲ್ಲಿ ಮುಳುಗಿತು. ಮುಖದಲ್ಲಿ ಹೊಗೆ ಮಸಗುತ್ತಿರಲು, ಆಶ್ಚರ್ಯದಲ್ಲಿ ಮುಳುಗಿ, ಗಲ್ಲದ ಮೇಲೆ ಕೈಯಿಟ್ಟು ಕೋಪಾತಿರೇಕದಿಂದ ನಕ್ಕ ಅಶ್ವತ್ಥಾಮನು ಮೌನದಿಂದಿದ್ದನು.

ಅರ್ಥ:
ಜಗ: ಪ್ರಪಂಚ; ಉಸುರು: ಜೀವ; ಪಸರಿಸು: ಹರಡು; ಹರುಷ: ಸಂತಸ; ಹೊಗರು: ಕಾಂತಿ, ಪ್ರಕಾಶ; ಮಸಗು: ಬಾಡು; ರಿಪು: ವೈರಿ; ನೃಪ: ರಾಜ; ಅಗಡು: ತುಂಟತನ; ಮಗ: ಸುತ; ಉತ್ಸಾಹ: ಹುರುಪು; ಅದ್ದು: ಮುಳುಗಿಸು; ಖೇದ: ದುಃಖ; ಪಂಕ: ಕೆಸರು; ಹೊಗೆ: ಧೂಮ; ಮೋರೆ: ಮುಖ; ಕಯ್ಯ: ಕೈ, ಹಸ್ತ; ಗಲ್ಲ: ಕೆನ್ನೆ; ಬಿಗಿ: ಗಟ್ಟಿ; ಬೆರಗು: ವಿಸ್ಮಯ, ಸೋಜಿಗ; ಖತಿ: ಕೋಪ; ನಗೆ: ಸಂತಸ, ಹರ್ಷ; ಮೊಗ: ಮುಖ; ಮೋನ: ಮೌನ;

ಪದವಿಂಗಡಣೆ:
ಜಗದ್+ಉಸುರು+ ಪಸರಿಸಿತು +ಹರುಷದ
ಹೊಗರು +ಮಸಗಿತು +ರಿಪುನೃಪರ +ನಿನ್ನ್
ಅಗಡು +ಮಗನ್+ಉತ್ಸಾಹವ್+ಅದ್ದುದು +ಖೇದ+ಪಂಕದಲಿ
ಹೊಗೆವ+ ಮೋರೆಯ +ಕಯ್ಯ+ಗಲ್ಲದ
ಬಿಗಿದ +ಬೆರಗಿನ+ ಖತಿಯೊಳ್+ಉಸುರುವ
ನಗೆಯೊಳ್+ಅಶ್ವತ್ಥಾಮನ್+ಇದ್ದನು +ಮೊಗದ +ಮೋನದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ನಿನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ

ಪದ್ಯ ೨೯: ಕೌರವ ಸೈನ್ಯವು ತಮ್ಮೊಳಗೆ ಏನೆಂದು ಯೋಚಿಸಿದರು?

ಅಳವಿಗೊಡಲಿ ಮಹಾರಥರು ಕೈ
ಕೊಳಲಿ ಸೈಂಧವ ನೃಪನನೊಂದರೆ
ಘಳಿಗೆ ಕಾಯ್ದರೆ ನಾವು ನೆರೆ ಕೊಂದವರು ಫಲುಗುಣನ
ಹೊಳಹುಗಳೆಯುತೆ ಕಾಲವಿನ್ನರೆ
ಘಳಿಗೆ ಸೈರಿಸಿ ಶಿವ ಶಿವಾಯೆಂ
ದೊಳಗೊಳಗೆ ಮೂದಲಿಸುತಿರ್ದರು ಭಟರು ತಮ್ಮೊಳಗೆ (ದ್ರೋಣ ಪರ್ವ, ೧೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೌರವವೀರರು ಒಬ್ಬರೊಬ್ಬರಿಗೆ, ಯುದ್ಧಾರಂಭವಾಗಲಿ ಮಹಾರಥರು ತಮ್ಮ ಕೈಯನ್ನು ತೋರಿಸಲಿ, ಇನ್ನರ್ಧ ಗಳಿಗೆ ಸೈಂಧವನನ್ನು ಕಾಪಾಡಿದರೆ ನಾವು ಅರ್ಜುನನನ್ನು ಕೊಂದಹಾಗೆ, ರಥವಾಜಿಗಳ ಓಟವನ್ನು ತಡೆದು ಅರ್ಧಗಳಿಗೆ ಸೈರಿಸಿರಿ ಶಿವಶಿವಾ ಎಂದು ಹೇಳಿಕೊಂಡರು.

ಅರ್ಥ:
ಅಳವಿ: ಶಕ್ತಿ, ಯುದ್ಧ; ಮಹಾರಥ: ಪರಾಕ್ರಮಿ; ನೃಪ: ರಾಜ; ಘಳಿಗೆ: ಕಾಲ; ಕಾಯ್ದು: ಕಾಪಾಡು; ನೆರೆ: ಗುಂಫು; ಕೊಂದು: ಸಾಯಿಸು; ಹೊಳಹು: ಕಾಂತಿ, ಪ್ರಕಾಶ; ಕಾಲ: ಸಮಯ; ಸೈರಿಸು: ತಾಳು, ಸಹಿಸು; ಮೂದಲಿಸು: ಹಂಗಿಸು; ಭಟ: ಸೈನಿಕ; ಅರೆ: ಅರ್ಧ;

ಪದವಿಂಗಡಣೆ:
ಅಳವಿಗೊಡಲಿ +ಮಹಾರಥರು +ಕೈ
ಕೊಳಲಿ +ಸೈಂಧವ +ನೃಪನನ್+ಒಂದ್+ಅರೆ
ಘಳಿಗೆ+ ಕಾಯ್ದರೆ+ ನಾವು +ನೆರೆ +ಕೊಂದವರು +ಫಲುಗುಣನ
ಹೊಳಹು+ಕಳೆಯುತೆ +ಕಾಲವ್+ಇನ್ನ್+ಅರೆ
ಘಳಿಗೆ +ಸೈರಿಸಿ +ಶಿವ +ಶಿವಾಯೆಂದ್
ಒಳಗೊಳಗೆ +ಮೂದಲಿಸುತಿರ್ದರು +ಭಟರು +ತಮ್ಮೊಳಗೆ

ಅಚ್ಚರಿ:
(೧) ಅರೆಘಳಿಗೆ – ೨, ೪ ಸಾಲಿನ ಕೊನೆ ಪದ
(೨) ಒಳಗೊಳಗೆ, ತಮ್ಮೊಳಗೆ – ಪ್ರಾಸ ಪದ

ಪದ್ಯ ೪೦: ಅರ್ಜುನನ ಮಾತುಗಳು ಯಾವ ಬಾಣಗಳಿಗೆ ಸಮನಾದುದು?

ತೀರಿತಿನ್ನೇನರಿ ನೃಪನ ಸಂ
ಸಾರ ನೀನೇರುಸಿದ ನುಡಿಗಳ
ನಾರು ಕಳಚಲು ಬಲ್ಲರಗ್ಗದ ದೇವ ದೈತ್ಯರಲಿ
ವೀರ ರಾಮನ ನುಡಿಗೆ ರಾಮನು
ದಾರ ಬಾಣಕೆ ನಿನ್ನ ನುಡಿಗಳು
ಕೂರಲಗು ಸಮಜೋಳಿ ಜಗದೊಳಗೆಂದನಸುರಾರಿ (ದ್ರೋಣ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನ, ನೀನಾಡಿದ ಶಪಥವ ಮಾತುಗಳನ್ನು ದೇವ ದೈತ್ಯರಲ್ಲಿ ಯಾರು ತಾನೇ ತಡೆಯಬಲ್ಲರು. ವೈರಿರಾಜ ಸೈಂಧವನ ಬಾಳು ಮುಗಿದು ಹೋಯಿತು. ಶ್ರೀರಾಮನ ಮಾತು, ರಾಮಬಾಣಗಳಿಗೆ ನಿನ್ನ ಮಾತು ಬಾಣಗಳಿಗೆ ಸರಿಸಮ ಎಂದು ಕೃಷ್ಣನು ಹೇಳಿದನು.

ಅರ್ಥ:
ತೀರಿತು: ಮುಗಿಯಿತು; ಅರಿ: ವೈರಿ; ನೃಪ: ರಾಜ; ಸಂಸಾರ: ಪರಿಜನ; ನುಡಿ: ಮಾತು; ಕಳಚು: ಸಡಲಿಸು; ಬಲ್ಲರು: ತಿಳಿದವರು; ಅಗ್ಗ: ಶ್ರೇಷ್ಠ; ದೇವ: ಅಮರರು; ದೈತ್ಯ: ದಾನವ; ವೀರ: ಶೂರ, ಪರಾಕ್ರಮ; ನುಡಿ: ಮಾತು; ಕೂರಲಗು: ಹರಿತವಾದ ಬಾಣ; ಸಮ: ಸರಿಯಾದುದು; ಜಗ: ಪ್ರಪಂಚ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ತೀರಿತ್+ಇನ್ನೇನ್+ಅರಿ +ನೃಪನ +ಸಂ
ಸಾರ+ ನೀನೇರುಸಿದ+ ನುಡಿಗಳನ್
ಆರು +ಕಳಚಲು+ ಬಲ್ಲರ್+ಅಗ್ಗದ +ದೇವ +ದೈತ್ಯರಲಿ
ವೀರ +ರಾಮನ +ನುಡಿಗೆ +ರಾಮನು
ದಾರ+ ಬಾಣಕೆ+ ನಿನ್ನ +ನುಡಿಗಳು
ಕೂರಲಗು +ಸಮಜೋಳಿ +ಜಗದೊಳಗ್+ಎಂದನ್+ಅಸುರಾರಿ

ಅಚ್ಚರಿ:
(೧) ಅರ್ಜುನನ ಮಾತುಗಳನ್ನು ಹೋಲಿಸುವ ಪರಿ – ವೀರ ರಾಮನ ನುಡಿಗೆ ರಾಮನುದಾರ ಬಾಣಕೆ ನಿನ್ನ ನುಡಿಗಳು

ಪದ್ಯ ೪೯: ಅರ್ಜುನನು ಯಾರ ಮೇಲೆ ಬಾಣಗಳನ್ನು ಬಿಟ್ಟನು?

ಪೂತುರೇ ಭಗದತ್ತ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ಶರ
ಪಾತವಿನಿತಿಲ್ಲದಡೆ ಹೊಳ್ಳಿಸಬಹುದೆ ನೃಪ ಧನವ
ನೂತನ ದ್ವಿಪದಿಂದ ವೈರಿ
ವ್ರಾತವನು ಸೋಲಿಸಿದ ಗರ್ವದ
ರೀತಿಗಿದು ಠಾವಲ್ಲೆನುತ ತೆಗೆದೆಚ್ಚನಾ ಪಾರ್ಥ (ದ್ರೋಣ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಭಲೇ ಭಗದತ್ತ, ನಿನಗೂ ಬಿಲುವಿದ್ಯೆಯು ಸ್ವಲ್ಪ ಬರುತ್ತದೆಯಲ್ಲವೇ? ಇಂತಹ ಬಾಣ ಪ್ರಯೋಗವನ್ನು ತೋರಿಸದಿದ್ದರೆ ಕೌರವನ ಹಣವನ್ನು ಕೊಳ್ಳೆಹೊಡೆಯಲು ಸಾಧ್ಯವಾಗುತ್ತಿತ್ತೇ? ಈ ಅಪೂರ್ವ ಗಜದಿಮ್ದ ಶತ್ರುಗಳನ್ನು ಸೋಲಿಸಿದೆನೆಂಬ ಗರ್ವವನ್ನು ಮೆರೆಯಲು ಇದು ಜಾಗವಲ್ಲ, ಎಂದು ಭಗದತ್ತನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಪೂತು: ಭಲೇ; ಬಿಲು: ಬಿಲ್ಲು, ಚಾಪ; ವಿದ್ಯೆ: ಜ್ಞಾನ; ಅತಿಶಯ: ಹೆಚ್ಚಳ; ಕಿರಿದು: ಚಿಕ್ಕದು; ಶರ: ಬಾಣ; ಹೊಳ್ಳಿಸು: ಟೊಳ್ಳು ಮಾಡು, ಪೊಳ್ಳಾಗಿಸು; ನೃಪ: ರಾಜ; ಧನ: ಐಶ್ವರ್ಯ; ನೂತನ: ಹೊಸ; ದ್ವಿಪ: ಅನೆ, ಗಜ; ವೈರಿ: ಶತ್ರು; ವ್ರಾತ: ಗುಂಪು; ಸೋಲಿಸು: ಪರಾಭವಗೊಳಿಸು; ಗರ್ವ: ಅಹಂಕಾರ; ರೀತಿ: ಕ್ರಮ; ಠಾವು: ಸ್ಥಳ, ಜಾಗ; ತೆಗೆ: ಹೊರತರು; ಎಚ್ಚು: ಬಾಣ ಪ್ರಯೊಗ ಮಾಡು;

ಪದವಿಂಗಡಣೆ:
ಪೂತುರೇ +ಭಗದತ್ತ +ಬಿಲು +ವಿದ್ಯ
ಅತಿಶಯ +ಕಿರಿದುಂಟಲಾ +ಶರ
ಪಾತವ್+ಇನಿತಿಲ್ಲದಡೆ +ಹೊಳ್ಳಿಸಬಹುದೆ+ ನೃಪ +ಧನವ
ನೂತನ +ದ್ವಿಪದಿಂದ +ವೈರಿ
ವ್ರಾತವನು +ಸೋಲಿಸಿದ +ಗರ್ವದ
ರೀತಿಗಿದು +ಠಾವಲ್ಲ+ಎನುತ+ ತೆಗೆದ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಅತಿಶಯ ಕಿರಿದು – ವಿರುದ್ಧ ಪದಗಳನ್ನು ಬಳಸಿದ ಬಗೆ – ಬಿಲುವಿದ್ಯಾತಿಶಯ ಕಿರಿದುಂಟಲಾ

ಪದ್ಯ ೨: ಮಂತ್ರಾಲೋಚನೆಗೆ ಯಾರು ಬಂದರು?

ರವಿಜ ಗುರುಸುತ ಶಲ್ಯ ಕಲಶೋ
ದ್ಭವರು ಸೌಬಲರಾದಿ ಯಾದವ
ರವನಿಪಾಲನ ಕಂಡರಂದೇಕಾಂತ ಭವನದಲಿ
ಅವನಿಪತಿ ಹದನೇನು ರಿಪುಪಾಂ
ಡವರ ಬೀಡಿನ ಗುಪ್ತದನುಮಾ
ನವನು ಚಿತ್ತಯಿಸಿದಿರೆ ಬೆಸಸುವುದೆನಲು ನೃಪ ನುಡಿದ (ಭೀಷ್ಮ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಕರ್ಣ, ಅಶ್ವತ್ಥಾಮ, ಶಲ್ಯ, ದ್ರೋಣ, ಶಕುನಿ, ಯಾದವರಾಜರು ಸೇರಿ ಏಕಾಂತ ಭವನದಲ್ಲಿ ದುರ್ಯೋಧನನನ್ನು ಕಂಡು ದೊರೆಯೇ, ಏನು ವಿಷಯ? ಶತ್ರುಗಳಾದ ಪಾಂಡವರ ಬೀಡಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದ್ದರೆ ನಮಗೆ ಅಪ್ಪಣೆ ಕೊಡಿ ಎನಲು ದುರ್ಯೋಧನನು ಮಾತನಾಡಿದ.

ಅರ್ಥ:
ರವಿಜ: ಸೂರ್ಯಪುತ್ರ (ಕರ್ಣ); ಗುರು: ಆಚಾರ್ಯ; ಸುತ: ಮಗ; ಕಲಶೋದ್ಭವ: ಕಲಶದಿಂದ ಹುಟ್ಟಿದ (ದ್ರೋಣ); ಸೌಬಲ: ಶಕುನಿ; ಆದಿ: ಮುಂತಾದ; ಅವನಿಪಾಲ: ರಾಜ; ಏಕಾಂತ: ಗುಟ್ಟಾದ; ಭವನ: ಮನೆ; ಅವನಿಪತಿ: ರಾಜ; ಹದ: ಸ್ಥಿತಿ; ರಿಪು: ವೈರಿ; ಬೀಡು: ತಂಗುದಾಣ, ಬಿಡಾರ; ಗುಪ್ತ: ರಹಸ್ಯ; ಅನುಮಾನ: ಊಹೆ, ಸಂದೇಹ; ಚಿತ್ತ: ಮನಸ್ಸು; ಚಿತ್ತಯಿಸು: ಕೇಳು; ಬೆಸಸು: ಹೇಳು, ಆಜ್ಞಾಪಿಸು; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ರವಿಜ +ಗುರುಸುತ +ಶಲ್ಯ +ಕಲಶೋ
ದ್ಭವರು +ಸೌಬಲರಾದಿ +ಯಾದವರ್
ಅವನಿಪಾಲನ +ಕಂಡರಂದ್+ ಏಕಾಂತ +ಭವನದಲಿ
ಅವನಿಪತಿ+ ಹದನೇನು +ರಿಪು+ಪಾಂ
ಡವರ +ಬೀಡಿನ +ಗುಪ್ತದ್+ಅನುಮಾ
ನವನು +ಚಿತ್ತಯಿಸಿದಿರೆ +ಬೆಸಸುವುದೆನಲು +ನೃಪ +ನುಡಿದ

ಅಚ್ಚರಿ:
(೧) ಅವನಿಪಾಲ, ಅವನಿಪತಿ, ನೃಪ – ಸಮನಾರ್ಥಕ ಪದ

ಪದ್ಯ ೬೦: ದ್ರೌಪದಿಯನ್ನು ಕರೆತರಲು ದುರ್ಯೋಧನನು ಯಾರನ್ನು ಕಳಿಸಿದನು?

ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿ
ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ (ಸಭಾ ಪರ್ವ, ೧೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ದುಶ್ಯಾಸನನನ್ನು ಕರೆದು, ತಮ್ಮ ಇಲ್ಲಿ ಬಾ, ನೀನು ಒಪ್ಪುವುದಾದರೆ ದೌಪದಿಯನ್ನು ಹಿಡಿದು ಎಳೆದುಕೊಂಡು ಬಾ. ಪಾಂಡವರೈವರೂ ನಮ್ಮ ಸೇವಕರು. ಅವರು ಏನು ಮಾದುವ ಹಾಗಿದ್ದಾರೆ? ತಮ್ಮ ಕರ್ಮದ ಫಲವು ಪಕ್ವವಾದಾಗ ಅದು ಅವರನ್ನೇ ಕೆಡಿಸುತ್ತದೆ, ಇದು ನಮಗೆ ಸಂಬಂಧವಿಲ್ಲ. ನಾವು ಕಾರಣರು ಆಲ್ಲ, ತೆರಳು ಎಂದು ಹೇಳಿದನು.

ಅರ್ಥ:
ತಮ್ಮ: ಅನುಜ; ಬಾರೈ: ಆಗಮಿಸು; ಹೋಗು: ತೆರಳು; ದಿಟ: ಸತ್ಯ; ಅಮ್ಮು: ಸಾಧ್ಯ, ಸಾಮರ್ಥ್ಯ; ಹಿಡಿದು: ಬಂಧಿಸು; ಎಳೆ: ಸೆಳೆ; ನೃಪ: ರಾಜ; ಕಿಂಕರ: ದಾಸ; ಕರ್ಮ: ಕಾರ್ಯದ ಫಲ, ಧರ್ಮ; ವಿಪಾಕ: ಫಲ, ಪರಿಣಾಮ; ಗತಿ: ಇರುವ ಸ್ಥಿತಿ, ಅವಸ್ಥೆ; ನೆರೆ: ಹೆಚ್ಚಳ; ಕೆಡಿಸು: ಹಾಳುಮಾಡು; ಧರ್ಮ: ಧಾರಣೆ ಮಾಡುವುದು, ನಿಯಮ; ಕಾರಣ: ನಿಮಿತ್ತ; ಭೂಪ: ರಾಜ;

ಪದವಿಂಗಡಣೆ:
ತಮ್ಮ +ಬಾರೈ +ಹೋಗು +ದಿಟ +ನೀನ್
ಅಮ್ಮುವರೆ +ಹಿಡಿದೆಳೆದು +ತಾ +ನೃಪರ್
ಎಮ್ಮ +ಕಿಂಕರರ್+ಐವರ್+ಇವರಿದ್ದೇನ +ಮಾಡುವರು
ತಮ್ಮ +ಕರ್ಮ+ವಿಪಾಕ +ಗತಿ +ನೆರೆ
ತಮ್ಮನೇ +ಕೆಡಿಸುವುದು +ಧರ್ಮ +ವಿ
ದೆಮ್ಮ +ಕಾರಣವಲ್ಲ+ ನೀ +ಹೋಗೆಂದನಾ +ಭೂಪ

ಅಚ್ಚರಿ:
(೧) ದ್ರೌಪದಿಯನ್ನು ತರುವ ಬಗೆ – ಹಿಡಿದೆಳೆದು ತಾ
(೨) ದುರ್ಯೋಧನನ ಬಾಯಿಂದ ಧರ್ಮ ಕರ್ಮದ ಮಾತು – ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿದೆಮ್ಮ ಕಾರಣವಲ್ಲ

ಪದ್ಯ ೫೨: ಭೀಷ್ಮರು ಕೃಷ್ಣನ ಗುಣಗಾನವನ್ನು ಹೇಗೆ ಮಾಡಿದರು?

ಈತ ಸಚರಾಚರದ ಗುರು ವಿ
ಖ್ಯಾತ ಋತ್ವಿಜನೀತನಾಚಾ
ರ್ಯಾತಿಶಯನೀತನು ಮಹಾಪ್ರಿಯನೀತ ನೃಪನೀತ
ಸ್ನಾತಕ ವ್ರತಿಯೀತನೀತನ
ಮಾತು ನಿನಗೆತ್ತಣದು ನವಖ
ದ್ಯೋತಕೆತ್ತಣ ಸೂರ್ಯಮಂಡಲವೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೨ ಪದ್ಯ)

ತತ್ಪರ್ಯ:
ಭೀಷ್ಮನು ಕೃಷ್ಣನ ಗುಣಗಾನವನ್ನು ಮಾಡುತ್ತಾ, ಶಿಶುಪಾಲ ನೀನೆಲ್ಲಿ, ಈ ಕೃಷ್ಣನೆಲ್ಲಿ? ಶ್ರೀಕೃಷ್ಣನು ಸಚರಾಚರದ ಗುರು, ಅತ್ಯಂತ ಪ್ರಸಿದ್ಧನಾದ ಋತ್ವಿಜ, ಆಚಾರ್ಯರಲ್ಲೆಲ್ಲಾ ಹೆಚ್ಚಿನವನು. ಇವನು ಮಹಾ ಪ್ರಿಯ, ಇವನು ರಾಜ, ಸ್ನಾತಕವ್ರತಿ, ಇವನ ಮಾತು ನಿನಗೇನು ಗೊತ್ತು, ದೀಪದ ಹುಳದ ಮರಿಯೆಲ್ಲಿ ಸೂರ್ಯಮಂಡಲವೆಲ್ಲಿ ಎಂದನು.

ಅರ್ಥ:
ಚರಾಚರ: ಚಲಿಸುವ ಮತ್ತು ಚಲಿಸದಿರುವ; ಗುರು: ಆಚಾರ್ಯ; ವಿಖ್ಯಾತ: ಪ್ರಸಿದ್ಧ; ಋತ್ವಿಜ: ಯಜ್ಞ ಮಾಡುವವ; ಆಚಾರ್ಯ: ಗುರು, ಆದ್ಯ ಪ್ರವರ್ತಕ; ಅತಿಶಯ: ಅಧಿಕ, ಹೆಚ್ಚು; ಮಹಾ: ಶ್ರೇಷ್ಠ; ಪ್ರಿಯ: ಒಲವು; ನೃಪ: ರಾಜ; ಸ್ನಾತಕ: ಗುರುಕುಲದಲ್ಲಿ ವಿದ್ಯಾರ್ಜನೆ ಮುಗಿಸಿ ಗೃಹಸ್ಥಾಶ್ರಮಕ್ಕೆ ಸೇರುವವನು; ವ್ರತಿ: ಯೋಗಿ, ತಪಸ್ವಿ; ಮಾತು: ವಾಣಿ; ಎತ್ತಣ: ಎಲ್ಲಿಯ; ಖದ್ಯೋತ: ಸೂರ್ಯ; ನವ: ಹೊಸ; ಸೂರ್ಯ: ರವಿ; ಮಂಡಲ: ಗುಂಡಾಗಿರುವುದು;

ಪದವಿಂಗಡನೆ:
ಈತ +ಸಚರಾಚರದ+ ಗುರು +ವಿ
ಖ್ಯಾತ +ಋತ್ವಿಜನ್+ಈತನ್+ಆಚಾ
ರ್ಯ+ಅತಿಶಯನ್+ಈತನು +ಮಹಾಪ್ರಿಯನ್+ಈತ+ ನೃಪನ್+ಈತ
ಸ್ನಾತಕ+ ವ್ರತಿ+ಈತನ್+ಈತನ
ಮಾತು +ನಿನಗ್+ಎತ್ತಣದು +ನವ+ಖ
ದ್ಯೋತಕ್+ಎತ್ತಣ+ ಸೂರ್ಯ+ಮಂಡಲವೆಂದನಾ+ ಭೀಷ್ಮ

ಅಚ್ಚರಿ:
(೧) ಕೃಷ್ಣನ ಗುಣಗಾನಗಳು – ಸಚರಾಚರದ ಗುರು, ವಿಖ್ಯಾತ ಋತ್ವಿಜ, ಆಚಾರ್ಯಾತಿಶಯ, ಮಹಾಪ್ರಿಯ, ನೃಪ, ಸ್ನಾತಕ ವ್ರತಿ

ಪದ್ಯ ೩: ಧರ್ಮರಾಯನು ಕೃಷ್ಣನೊಂದಿಗೆ ಯಾವ ವಿಚಾರದಿಂದ ಮಾತನ್ನು ಪ್ರಾರಂಭಿಸಿದನು?

ದರುಶನವ ನೀಡಿದನು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮ ಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರು ತನುಜ ಧೃತರಾಷ್ತ್ರರೆಂದನು ಧರ್ಮನಂದನನು (ಉದ್ಯೋಗ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಎಲ್ಲರಿಗೂ ದರ್ಶನವನ್ನಿತ್ತನು. ಪಾಂಡವರು ಮತ್ತುಳಿದ ರಾಜರಾದ ದ್ರುಪದ ಮುಂತಾದವರು ಅವನಿಗೆ ನಮಸ್ಕರಿಸಿದರು ಬಳಿಕ ಧರ್ಮರಾಯನು ಪರಮ ಬಾಂಧವರಾದ ಭೀಷ್ಮ, ವಿದುರ, ದ್ರೋಣ, ದುರ್ಯೋಧನ, ಅಶ್ವತ್ಥಾಮ, ಕುಶಲದಿಂದ ಜೀವಿಸಿರುವರೆ ಎಂದು ಕೇಳುವ ಮೂಲಕ ಮಾತನ್ನು ಪ್ರಾರಂಭಿಸಿದನು.

ಅರ್ಥ:
ದರುಶನ: ನೋಡು; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ಮಿಕ್ಕ: ಉಳಿದ; ಅರಸು: ರಾಜರು; ಆದಿ: ಮುಂತಾದ; ನಾಯಕ: ಒಡೆಯ; ಎರಗು: ನಮಸ್ಕರಿಸು; ಪದ: ಚರಣ; ಪರಮ: ಶ್ರೇಷ್ಠ; ಬಾಂಧವ: ಬಂಧುಜನ; ಜೀವ: ಬದುಕು; ನದೀಸುತ: ಭೀಷ್ಮ; ಸುತ: ಮಗ; ಗುರು: ಆಚಾರ್ಯ; ನೃಪ: ರಾಜ; ತನುಜ: ಮಗ;

ಪದವಿಂಗಡಣೆ:
ದರುಶನವ +ನೀಡಿದನು +ಕೃಷ್ಣನ
ಚರಣದಲಿ +ಮೈಯಿಕ್ಕಿದರು +ಮಿ
ಕ್ಕರಸುಗಳು +ದ್ರುಪದಾದಿ +ನಾಯಕರ್+ಎರಗಿದರು +ಪದಕೆ
ಪರಮ +ಬಾಂಧವರೆಲ್ಲ+ ಜೀವಂ
ತರೆ +ನದೀಸುತ +ವಿದುರ +ಗುರು +ನೃಪ
ಗುರು ತನುಜ +ಧೃತರಾಷ್ತ್ರರೆಂದನು +ಧರ್ಮನಂದನನು

ಅಚ್ಚರಿ:
(೧) ಭೀಷ್ಮ – ನದೀಸುತ, ನೃಪ – ದುರ್ಯೋಧನ, ಗುರುತನುಜ- ಅಶ್ವತ್ಥಾಮ
(೨) ಮೈಯಿಕ್ಕು, ಎರಗು – ನಮಸ್ಕರಿಸಿದರು ಎಂದು ಹೇಳಲು ಬಳಸಿರುವ ಪದ

ಪದ್ಯ ೩೭: ಕಣ್ಣುಗಳನ್ನು ಪಡೆದ ಧೃತರಾಷ್ಟ್ರ ಮತ್ತೇಕೆ ಕುರುಡನಾದ?

ಕಂಗಳನು ಕರುಣಿಸಿದನಂಧನೃ
ಪಂಗೆ ಬಳಿಕೀ ಕೃಷ್ಣರಾಯನ
ಮಂಗಳ ಶ್ರೀ ಮೂರ್ತಿಯನು ಮನದಣಿಯೆ ನೋಡಿದನು
ಕಂಗಳಡಗಲಿ ದೇವ ನಿಮ್ಮೀ
ಯಂಗವಟ್ಟವ ಕಂಡು ಮಗುಳೀ
ಕಂಗಳಿತರವ ಕಾಣಲಾಗದು ಕೃಪೆಯ ಮಾಡೆಂದ (ಉದ್ಯೋಗ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧೃತರಾಷ್ಟ್ರನಿಗೆ ಕಣ್ಣುಗಳು ಬರುವಂತೆ ವರವನ್ನು ನೀಡಿದನು. ಅವನ ಕರುಣೆಯಿಂದ ದೊರೆತ ನಯನಗಳಿಂದ ಧೃತರಾಷ್ಟ್ರನು ಕೃಷ್ಣನ ಅಪ್ರತಿಮ ರೂಪವನ್ನು ಕಂಡು ರೋಮಾಂಚನಗೊಂಡ ಮನದಣಿಯುವವರೆಗೂ ನೋಡಿದನು. ನಂತರ ದೇವ ನಿಮ್ಮ ದೇಹಸೌಷ್ಠವನು ಕಂಡ ಬಳಿಕ ಮತ್ತಾವುದನ್ನು ನೋಡಬಾರದೆಂದು ನನ್ನ ಬಯಕೆ. ನನ್ನ ಕಣ್ಣುಗಳು ಮತ್ತೆ ಮೊದಲಂತೆ ಕುರುಡಾಗಲಿ ಎಂದು ಬೇಡಿದನು.

ಅರ್ಥ:
ಕಂಗಳು: ಕಣ್ಣು, ನಯನ; ಕರುಣಿಸು: ಕೃಪೆ ತೋರು; ಅಂಧ: ಕುರುಡ; ನೃಪ: ರಾಜ; ಬಳಿಕ: ನಂತರ; ಮಂಗಳ: ಒಳ್ಳೆಯ; ಮೂರ್ತಿ: ರೂಪ; ಮನದಣಿ: ಮನಸ್ಸಿಗೆ ತೃಪ್ತಿಯಾಗು; ನೋಡು: ವೀಕ್ಷಿಸು; ಅಂಗ: ದೇಹ, ಶರೀರ; ಮಗುಳು:ಮತ್ತ; ಇತರ: ಬೇರೆ; ಕಾಣು: ನೋಡು; ಕೃಪೆ: ದಯೆ; ಅಡಗು: ಮುಚ್ಚು;

ಪದವಿಂಗಡಣೆ:
ಕಂಗಳನು +ಕರುಣಿಸಿದನ್+ಅಂಧ+ನೃ
ಪಂಗೆ +ಬಳಿಕ್+ಈ+ ಕೃಷ್ಣ+ರಾಯನ
ಮಂಗಳ+ ಶ್ರೀ +ಮೂರ್ತಿಯನು +ಮನದಣಿಯೆ +ನೋಡಿದನು
ಕಂಗಳ್+ಅಡಗಲಿ+ ದೇವ+ ನಿಮ್ಮೀ
ಯಂಗವಟ್ಟವ+ ಕಂಡು +ಮಗುಳ್+ಈ+
ಕಂಗಳ್+ಇತರವ +ಕಾಣಲಾಗದು +ಕೃಪೆಯ +ಮಾಡೆಂದ

ಅಚ್ಚರಿ:
(೧) ಕ ಅಕ್ಷರದ ತ್ರಿವಳಿ ಪದ – ಕಂಗಳಿತರವ ಕಾಣಲಾಗದು ಕೃಪೆಯ
(೨) ಕಂಗಳ, ಮಂಗಳ – ಪ್ರಾಸ ಪದ
(೩) ಕಂಡು, ನೋಡು; ನೃಪ, ರಾಯ – ಸಮನಾರ್ಥಕ ಪದ

ಪದ್ಯ ೨೨: ಭೂಮಿ ಯಾರಿಬ್ಬರನ್ನು ನುಂಗುತ್ತಾಳೆ?

ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರ ಸಿದ್ಧವಲೆ
ಅರಸು ಕುಲದೊಳು ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯೊ
ಳುರಗನಂತೊಳಗಿಹುದು ಧರ್ಮವೆಯೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೂಮಾತೆಯು ಇಬ್ಬರನ್ನು ನುಂಗುತ್ತಾಳೆ, ಯುದ್ಧದಲ್ಲಿ ಸೋತ ರಾಜನನ್ನು ಮತ್ತು ಊರೂರು ತಿರುಗದ ಪಂಡಿತನನ್ನು, ಇದು ಶಾಸ್ತ್ರದಲ್ಲೇ ಹೇಳಿದೆ. ಕ್ಷತ್ರಿಯ ಕುಲದಲಿ ಹುಟ್ಟಿ ದಾಯಾದಿಗಳಿದ್ದರೆ ತಮ್ಮ ಆಸೆಗಳನ್ನು ಹಾವಿನಂತೆ ಬಿಲದಲ್ಲಿ ಅಡಗಿಸಿಕೊಳ್ಳುವುದು ಉಚಿತವಲ್ಲ.

ಅರ್ಥ:
ಧರಣಿ: ಭೂಮಿ; ನುಂಗು: ಸ್ವಾಹಮಾಡು, ತಿನ್ನು; ಸಂಗರ: ಯುದ್ಧ; ಜಯಿಸು: ಗೆಲ್ಲು; ನೃಪ: ರಾಜ; ದೇಶಾಂತರ: ಹಲವಾರು ಊರುಗಳು ; ಚರಿಸು: ಓಡಾಡು; ಪಂಡಿತ: ವಿದ್ವಾಂಸ; ಶಾಸ್ತ್ರ: ಧಾರ್ಮಿಕ ವಿಷಯ, ತತ್ತ್ವ; ಸಿದ್ಧ: ನಿರ್ವಹಿಸಿದ; ಅರಸು: ರಾಜ; ಕುಲ: ವಂಶ; ಹುಟ್ಟು: ಜನಿಸು; ಸಾಪತ್ನ: ಸವತಿಮಗ; ದೇಹ: ತನು; ಅಭಿಲಾಷೆ: ಆಸೆ; ಉರಗ: ಹಾವು; ಒಳಗೆ: ಅಂತರ್ಯ; ಧರ್ಮ: ಧಾರಣೆ ಮಾಡುವುದು;

ಪದವಿಂಗಡಣೆ:
ಧರಣಿ +ನುಂಗುವಳ್+ಇಬ್ಬರನು +ಸಂ
ಗರವ +ಜಯಿಸದ +ನೃಪನ +ದೇಶಾಂ
ತರವ +ಚರಿಸದ +ಪಂಡಿತನನ್+ಇದು +ಶಾಸ್ತ್ರ +ಸಿದ್ಧವಲೆ
ಅರಸು +ಕುಲದೊಳು +ಹುಟ್ಟಿ +ಸಾಪ
ತ್ನರುಗಳಿರೆ +ದೇಹಾಭಿಲಾಷೆಯೊಳ್
ಉರಗನಂತ್+ಒಳಗಿಹುದು +ಧರ್ಮವೆ+ಯೆಂದನಾ +ವಿದುರ

ಅಚ್ಚರಿ:
(೧) ನೃಪ, ಅರಸು – ಸಮನಾರ್ಥಕ ಪದ
(೨) ಇಬ್ಬರನ್ನು ನುಂಗುವ ಭೂಮಾತೆ – ಸಂಗರವ ಜಯಿಸದ ನೃಪನ, ದೇಶಾಂತರವ ಚರಿಸದ ಪಂಡಿತನ
(೩) ಉಪಮಾನದ ಪ್ರಯೋಗ – ಉರಗನಂತೊಳಗಿಹುದು