ಪದ್ಯ ೨೯: ಕೃಷ್ಣನು ಬಲರಾಮನಿಗೇನು ಹೇಳಿದನು?

ಚಿತ್ರವಿಸಿರೇ ಬರಿಯ ರೋಷಕೆ
ತೆತ್ತಡೇನಹುದಂತರಂಗವ
ನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ
ಬಿತ್ತರಿಸುವುದು ಕೌರವೇಂದ್ರನ
ಕಿತ್ತಡವ ನೀವರಿಯಿರೇ ನಿಮ
ಗೆತ್ತಿದಾಗ್ರಹ ನಿಲಲಿ ತಿಳುಹುವೆನೆಂದನಸುರಾರಿ (ಗದಾ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮುಂದೆ ಬಂದು, ಅಣ್ಣಾ ನನ್ನ ಮಾತನ್ನು ಕೇಳು. ಕೋಪಕ್ಕೆ ಮನಸ್ಸನ್ನು ಕೊಟ್ಟರೆ ಏನು ಪ್ರಯೋಜನ. ಉತ್ತಮರು ಮಾಡಿದಮ್ತೆ ಶಾಸ್ತ್ರನಿರ್ಣಯವನ್ನು ಮಾಡಿ ಅದರಂತೆ ನಡೆಯಬೇಕು. ಕೌರವನ ಕುಹಕ ಹೀನ ವರ್ತನೆ ನಿಮಗೆ ಗೊತ್ತಿಲ್ಲವೇ? ನಿಮಗೆ ಏರಿರುವ ಕೋಪ ಇಳಿದ ಮೇಲೆ ತಿಳಿ ಹೇಳುತ್ತೇನೆ ಎಂದನು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಬರಿ: ಕೇವಲ; ರೋಷ: ಕೋಪ; ಅಂತರಂಗ: ಮನಸ್ಸು, ಹೃದಯ; ಉತ್ತಮ: ಶ್ರೇಷ್ಠ; ಪದ್ಧತಿ: ದಾರಿ, ಮಾರ್ಗ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ನಿಶ್ಚಯ: ನಿರ್ಧಾರ; ಬಿತ್ತರಿಸು: ವಿಸ್ತರಿಸು, ತಿಳಿಸು; ಕಿತ್ತಡವ: ಕುಹುಕ; ಅರಿ: ತಿಳಿ; ಎತ್ತಿದ: ಹೆಚ್ಚಾದ; ಆಗ್ರಹ: ಆಸಕ್ತಿ; ನಿಲಲಿ: ತಡೆ; ತಿಳುಹು: ತಿಳಿಸು; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಚಿತ್ರವಿಸಿರೇ +ಬರಿಯ +ರೋಷಕೆ
ತೆತ್ತಡ್+ಏನಹುದ್+ಅಂತರಂಗವನ್
ಉತ್ತಮರ +ಪದ್ಧತಿಗಳಲಿ +ಶಾಸ್ತ್ರಾರ್ಥ+ನಿಶ್ಚಯವ
ಬಿತ್ತರಿಸುವುದು +ಕೌರವೇಂದ್ರನ
ಕಿತ್ತಡವ +ನೀವ್+ಅರಿಯಿರೇ +ನಿಮಗ್
ಎತ್ತಿದ+ಆಗ್ರಹ+ ನಿಲಲಿ +ತಿಳುಹುವೆನೆಂದನ್+ಅಸುರಾರಿ

ಅಚ್ಚರಿ:
(೧) ಉತ್ತಮರ ಲಕ್ಷಣ – ಅಂತರಂಗವನುತ್ತಮರ ಪದ್ಧತಿಗಳಲಿ ಶಾಸ್ತ್ರಾರ್ಥನಿಶ್ಚಯವ ಬಿತ್ತರಿಸುವುದು

ಪದ್ಯ ೪೧: ಕೌರವನು ಕೃಪಾದಿಗಳಿಗೆ ಹೊರಡಲೇಕೆ ಹೇಳಿದನು?

ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ (ಗದಾ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಈ ರಾತ್ರಿಯನ್ನು ನೀರಿನೊಳಗೆ ನಾನು ಕಳೆದರೆ, ನಾಳೆ ಪಾಂಡವರನ್ನು ಗೆಲ್ಲುತ್ತೇನೆ, ಎಂದು ನಿಶ್ಚಯಿಸಿದ್ದೇನೆ. ಹೆದರಿ ಓಡಿಹೋಗಿ ಕೋಟೆಯ, ಸ್ತ್ರೀಯರ ಮರೆಯಲ್ಲಿರುವವನಾನಲ್ಲ. ಭೀಮನ ಬೇಹುಗಾರರು ಬರುವುದು ಖಂಡಿತ. ನೀವಿಲ್ಲಿರುವುದು ತರವಲ್ಲ. ದೂರಕ್ಕೆ ಹೊರಟುಹೋಗಿರಿ ಎಂದನು.

ಅರ್ಥ:
ಸಲಿಲ: ನೀರು; ಮಧ್ಯ: ನಡುವೆ; ಇಂದಿನ: ಇವತ್ತು; ಇರುಳು: ರಾತ್ರಿ; ಕಳೆ: ಸಾಗಿಸು, ದೂಡು; ಗೆಲುವು: ಜಯ; ಉದಯ: ಹುಟ್ಟು; ನಿಶ್ಚಯ: ಖಂಡಿತ; ಚಿತ್ತ: ಮನಸ್ಸು; ಅಳುಕು: ಹೆದರು; ಕದನ: ಯುದ್ಧ; ನಗರ: ಊರು; ಲಲನೆ: ಸ್ತ್ರೀ; ಮರೆ: ಕಳೆದುಕೊಳ್ಳು, ತಿರಸ್ಕರಿಸು; ತೊಲಗು: ಹೊರಡು; ಬೇಹು: ಗೂಢಚರ್ಯೆ;

ಪದವಿಂಗಡಣೆ:
ಸಲಿಲ +ಮಧ್ಯದೊಳ್+ಇಂದಿನ್+ಇರುಳನು
ಕಳೆದೆನಾದಡೆ +ಪಾಂಡುಪುತ್ರರ
ಗೆಲುವೆನ್+ಉದಯದೊಳ್+ಇದುವೆ+ ನಿಶ್ಚಯವೆನ್ನ+ ಚಿತ್ತದಲಿ
ಅಳುಕಿ +ಕದನದೊ ಳ್ಳೋ+ಓಡಿ+ ನಗರಿಯ
ಲಲನೆಯರ +ಮರೆಗೊಂಬೆನೇ +ನೀವ್
ತೊಲಗಿ+ ಭೀಮನ+ ಬೇಹು +ಬಹುದ್+ಇರಬೇಡ+ ನೀವೆಂದ

ಅಚ್ಚರಿ:
(೧) ಕೌರವನ ದಿಟ್ಟತನ – ಅಳುಕಿ ಕದನದೊಳೋಡಿ ನಗರಿಯ ಲಲನೆಯರ ಮರೆಗೊಂಬೆನೇ

ಪದ್ಯ ೧೮: ಸಂಜಯನು ದುರ್ಯೋಧನನನ್ನು ಏನೆಂದು ಕೇಳಿದನು?

ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ (ಗದಾ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅಪ್ಪಾ, ಕುರುರಾಜ, ಸಮುದ್ರದವರೆಗೆ ಹಬ್ಬಿದ ಭೂಮಿಯಲ್ಲಿರುವ ರಾಜರಲ್ಲಿ ನೀನೊಬ್ಬನೇ ಸಾರ್ವಭೌಮ ಎಂಬ ಮಾತು ಇದೀಗ ನಿಶ್ಚಿತವಾಯಿತು. ನಿರಂತರವೂ ನಮಸ್ಕರಿಸುವ ರಾಜರ ಕಿರೀಟಗಳಿಂದ ಶೋಭಿತವಾದ ಈ ಪಾದಗಳಿಂದ ನಡೆಯಲು ಹೇಗೆ ಕಲಿತೆ? ಎಂದು ಸಂಜಯನು ದುಃಖಿಸುತ್ತಾ ಕೇಳಿದನು.

ಅರ್ಥ:
ಕಡಲು: ಸಾಗರ; ತಡಿ: ದಡ; ಪರಿಯಂತ: ಅಲ್ಲಿಯವರೆಗೂ; ರಾಯ: ರಾಜ; ಗಡಣ: ಗುಂಪು; ನುಡಿ: ಮಾತು; ನಿಶ್ಚಯ: ನಿರ್ಧಾರ; ತಂದೆ: ಒಡೆಯ, ಪಿತ; ಬಿಡು: ತೊರೆ; ಬಾಗು: ಕುಗ್ಗು, ಬಗ್ಗು, ಮಣಿ; ನೃಪ: ರಾಜ; ಮಕುಟ: ಕಿರೀಟ; ಕೋಮಲ: ಮೃದು; ಚರಣ: ಪಾದ; ನಡೆ: ಚಲಿಸು; ಕಲಿ: ಅರ್ಥೈಸು; ನೃಪ: ರಾಜ;

ಪದವಿಂಗಡಣೆ:
ಕಡಲ+ತಡಿ +ಪರಿಯಂತ +ರಾಯರ
ಗಡಣದಲಿ +ನೀನೊಬ್ಬನ್+ಎಂಬೀ
ನುಡಿಗೆ+ ನಿಶ್ಚಯವ್+ಈಗಲಾಯಿತು +ತಂದೆ +ಕುರುರಾಯ
ಬಿಡದೆ +ಬಾಗುವ +ನೃಪರ +ಮಕುಟದೊಳ್
ಇಡುವ +ಕೋಮಲ +ಚರಣವಿದರೊಳು
ನಡೆಯಲೆಂತೈ+ ಕಲಿತೆ +ಎಂದನು +ಸಂಜಯನು +ನೃಪನ

ಅಚ್ಚರಿ:
(೧) ದುರ್ಯೋಧನನ ಪಾದವನ್ನು ವರ್ಣಿಸುವ ಪರಿ – ಬಿಡದೆ ಬಾಗುವ ನೃಪರ ಮಕುಟದೊಳಿಡುವ ಕೋಮಲ ಚರಣವಿದರೊಳುನಡೆಯಲೆಂತೈ ಕಲಿತೆ

ಪದ್ಯ ೭: ಸಾತ್ಯಕಿಯು ದ್ರೋಣರನ್ನು ಏನೆಂದು ವರ್ಣಿಸಿದನು?

ನಿಂದು ಕಾದುವ ಮನವೊ ಮೇಣು ಪು
ರಂದರಾತ್ಮಜನಂತೆ ಭಯದಲಿ
ವಂದಿಸಿಯೆ ಬೀಳ್ಕೊಂಬ ಮನವೋ ಹೇಳು ನಿಶ್ಚಯವ
ಎಂದಡಾಲಿಸಿ ನಗುತ ಸಾತ್ಯಕಿ
ಯೆಂದನವಧರಿಸೈ ಗುರೋರಪಿ
ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ (ದ್ರೋಣ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನೊಡನೆ ನಿಂದು ಕಾದಬೇಕೆಂಬ ಮನಸ್ಸೇ? ಅರ್ಜುನನಂತೆ ಭಯದಿಂದ ನಮಸ್ಕರಿಸಿ ಹೋಗುವ ಮನಸ್ಸೋ? ನಿಶ್ಚಯಮಾಡಿಕೊಂಡು ಹೇಳು ಎಂದು ದ್ರೋಣರು ಹೇಳಲು, ಅದನ್ನು ಕೇಳಿದ ಸಾತ್ಯಕಿಯು ನಕ್ಕು, ಕೇಳುವವನಾಗು, ನೀಣು ಗುರುಗಳಲ್ಲಿ ಗುರುವೇ ಆಗಿರುವೆ ಎಂದು ವಿನಯದಿಂದ ತಲೆ ಬಾಗಿದನು.

ಅರ್ಥ:
ನಿಂದು: ನಿಲ್ಲು; ಕಾದು: ಹೋರಾದು; ಮನ: ಮನಸ್ಸು; ಮೇಣ್: ಅಥವ; ಪುರಂದರ: ಇಂದ್ರ; ಆತ್ಮಜ: ಮಗ; ಭಯ: ಅಂಜಿಕೆ; ವಂದಿಸು: ನಮಸ್ಕರಿಸು; ಬೀಳ್ಕೊಡು: ತೆರಳು; ಮನ: ಮನಸ್ಸು; ಹೇಳು: ತಿಳಿಸು; ನಿಶ್ಚಯ: ನಿರ್ಧಾರ; ಆಲಿಸು: ಕೇಳು ನಗು: ಹರ್ಷ; ಅವಧರಿಸು: ಮನಸ್ಸಿಟ್ಟು ಕೇಳು; ಗುರು: ಆಚಾರ್ಯ; ತಲೆ: ಶಿರ; ಬಾಗು: ಎರಗು; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ನಿಂದು +ಕಾದುವ +ಮನವೊ +ಮೇಣು +ಪು
ರಂದರಾತ್ಮಜನಂತೆ +ಭಯದಲಿ
ವಂದಿಸಿಯೆ +ಬೀಳ್ಕೊಂಬ +ಮನವೋ +ಹೇಳು +ನಿಶ್ಚಯವ
ಎಂದಡ್+ಆಲಿಸಿ +ನಗುತ +ಸಾತ್ಯಕಿ
ಎಂದನ್+ ಅವಧರಿಸೈ+ ಗುರೋರಪಿ
ಯೆಂದು +ನೀ +ಗುರುವೆಂದು+ ತಲೆವಾಗಿದನು +ವಿನಯದಲಿ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಪುರಂದರಾತ್ಮಜ
(೨) ದ್ರೋಣರಿಗೆ ವಂದಿಸಿದ ಪರಿ – ಗುರೋರಪಿ ಯೆಂದು ನೀ ಗುರುವೆಂದು ತಲೆವಾಗಿದನು ವಿನಯದಲಿ

ಪದ್ಯ ೨೫: ಉತ್ತರನು ಅರ್ಜುನನಿಗೆ ಯಾರನ್ನು ನೀಡಲು ಮುಂದೆ ಬಂದನು?

ಎಂದನುತ್ತರನರಸನಂಘ್ರಿಯೊ
ಳಂದು ಮಕುಟವ ಚಾಚಿ ಬಿನ್ನಹ
ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ
ಎಂದಡೇಳೇಳೆಂದು ನಸುನಗೆ
ಯಿಂದ ಪಾರ್ಥನ ನೋಡೆ ಕೈಮುಗಿ
ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ (ವಿರಾಟ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಆಗ ಉತ್ತರನು ಯುಧಿಷ್ಠಿರನಿಗೆ ನಮಸ್ಕರಿಸಿ, ನನ್ನದೊಂದು ಬಿನ್ನಹ, ನನ್ನ ತಂಗಿ ಉತ್ತರೆಯನ್ನು ಅರ್ಜುನನಿಗೆ ಕೊಡುತ್ತೇನೆ, ನೀವು ಒಪ್ಪಬೇಕು ಎಂದನು, ಧರ್ಮಜನು ಏಳು ಮೇಲೇಳು ಎಂದು ಉತ್ತರನಿಗೆ ಹೇಳಿ, ಅರ್ಜುನನ ಕಡೆಗೆ ಮುಗುಳ್ನಗೆಯಿಂದ ನೋಡಿದನು, ಆಗ ಅರ್ಜುನನು ತನ್ನ ಮನಸ್ಸಿನ ನಿಶ್ಚಯವನ್ನು ನುಡಿದನು.

ಅರ್ಥ:
ಅಂಘ್ರಿ: ಪಾದ; ಮಕುಟ: ಕಿರೀಟ; ಚಾಚು: ಹರಡು; ಬಿನ್ನಹ: ವಿಜ್ಞಾಪನೆ; ನೇಮ: ನಿಯಮ; ಕೊಡು: ನೀಡು; ಕುಮಾರಿ: ಹೆಣ್ಣು; ನಸುನಗೆ: ಹಸನ್ಮುಖ; ಮನ: ಮನಸ್ಸು; ನಿಶ್ಚಯ: ನಿರ್ಣಯ;

ಪದವಿಂಗಡಣೆ:
ಎಂದನ್+ಉತ್ತರನ್+ಅರಸನ್+ಅಂಘ್ರಿಯೊಳ್
ಅಂದು +ಮಕುಟವ+ ಚಾಚಿ +ಬಿನ್ನಹವ್
ಇಂದು +ನೇಮವ+ ಕೊಡಿ +ಕುಮಾರಿಯನ್+ಈವೆನ್+ಅರ್ಜುನಗೆ
ಎಂದಡ್+ಏಳ್+ಏಳೆಂದು +ನಸುನಗೆ
ಯಿಂದ +ಪಾರ್ಥನ +ನೋಡೆ +ಕೈಮುಗಿ
ದೆಂದನ್+ಆತನು+ ಮನದ+ ನಿಶ್ಚಯವನು+ ಯುಧಿಷ್ಠಿರಗೆ

ಅಚ್ಚರಿ:
(೧) ೧ ಸಾಲು ಒಂದೇ ಪದವಾಗಿ ರಚಿತವಾಗಿರುವುದು – ಎಂದನುತ್ತರನರಸನಂಘ್ರಿಯೊ
(೨) ನಮಸ್ಕರಿಸಿದನು ಎಂದು ಹೇಳಲು – ಅಂಘ್ರಿಯೊಳಂದು ಮಕುಟವ ಚಾಚಿ

ಪದ್ಯ ೪೯: ಉತ್ತರನು ಅರ್ಜುನನಿಗೆ ಯಾವ ಪ್ರಶ್ನೆಯನ್ನು ಕೇಳಿದನು?

ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲು ಬೃಹನ್ನಳೆತನದ ಬಲುರೂಪು
ಅಂಬುಜಾಕ್ಷನ ಸಾಹಸಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ನೀನು ಅರ್ಜುನನೇ ಎಂಬ ನಿಶ್ಚಯ, ನಂಬಿಕೆ ಬಂದಿದೆ, ಆದರೊಂದು ಪ್ರಶ್ನೆ, ವಿಷ್ಣುವಿನ ಸಾಹಸದ ಪ್ರತಿಬಿಂಬವಾದ ನಿನಗೆ ಈ ಕ್ಷುಲ್ಲಕ ಅಧಮ ಬೃಹನ್ನಳೆಯ ರೂಪವು ಏಕೆ ಬಂತು? ಈ ವಿಡಂಬನೆಯ ವೇಷವೇಕೆ ಎಂದು ಉತ್ತರನು ಕೇಳಿದನು.

ಅರ್ಥ:
ನಂಬು: ವಿಶ್ವಾಸವಿಡು, ಭರವಸೆಯನ್ನು ಹೊಂದು; ಲೇಸು: ಒಳಿತು; ನಿಶ್ಚಯ: ನಿರ್ಧಾರ; ಇಂಬು: ಎಡೆ, ಆಶ್ರಯ; ಡೊಂಬ: ವಂಚಕ; ಹುಲು: ಅಲ್ಪ; ಬಲು: ದೊಡ್ಡ; ರೂಪ: ಆಕಾರ; ಅಂಬುಜಾಕ್ಷ: ಕಮಲದಂತ ಕಣ್ಣುಳ್ಳವ; ಸಾಹಸ: ವೀರ; ಪ್ರತಿಬಿಂಬ: ಮೂಲಕ್ಕೆ ಸದೃಶವಾದುದು, ಪ್ರತಿಮೆ; ವಿಡಂಬ: ಅನುಸರಣೆ; ರೂಹು: ರೂಪ; ಕಾರಣ: ನಿಮಿತ್ತ, ಹೇತು; ಹೇಳು: ತಿಳಿಸು;

ಪದವಿಂಗಡಣೆ:
ನಂಬಿದೆನು +ಲೇಸಾಗಿ +ನಿಶ್ಚಯವ್
ಇಂಬುಗೊಂಡುದು +ಪಾರ್ಥ +ನಿನಗೀ
ಡೊಂಬಿದ್+ಏಕೈ +ಹುಲು +ಬೃಹನ್ನಳೆತನದ +ಬಲುರೂಪು
ಅಂಬುಜಾಕ್ಷನ +ಸಾಹಸ+ಪ್ರತಿ
ಬಿಂಬವಲ್ಲಾ +ನೀನು +ನಿನ್ನ +ವಿ
ಡಂಬಿಸಿದ +ರೂಹಿಂಗೆ +ಕಾರಣವೇನು +ಹೇಳೆಂದ

ಅಚ್ಚರಿ:
(೧) ಅರ್ಜುನನನ್ನು ಹೋಲಿಸಿದ ಪರಿ – ಅಂಬುಜಾಕ್ಷನ ಸಾಹಸಪ್ರತಿಬಿಂಬವಲ್ಲಾ

ಪದ್ಯ ೮: ದೇವತೆಗಳು ಯಾವ ಸ್ಥಿತಿಯಲ್ಲಿದ್ದರು?

ಭಯದ ಬಾಹೆಯಲಪಸದರ ನಿ
ಶ್ಚಯದ ದುಮ್ಮಾನದ ವಿಘಾತಿಯ
ಲಯದ ಲಾವಣಿಗೆಯಲಿ ರಾಗದ ತಡಿಯ ಸಂಕಟದ
ದಯೆಯ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರ
ತೆಯ ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ (ಅರಣ್ಯ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ದೇವೇಂದ್ರನು ದೇವತೆಗಳ ಸ್ಥಿತಿಯನ್ನು ವರ್ಣಿಸುತ್ತಾ, ಭಯ ಹೊರಗೆ ಆವರಿಸಿದೆ, ನೀಚರ ದಾಳಿಯಿಂದ ನಾಶವಾಗುವುದೆಂಬ ದುಮ್ಮಾನ ತುಂಬಿದೆ. ಅಮೋದ ಪ್ರಮೋದಗಳ ಅಂಚಿನಲ್ಲೇ ಸಮ್ಕಟ ತುಂಬಿದೆ. ದೈನ್ಯವು ಆವರಿಸಿದೆ, ಹೃದಯ ಭೀತಿಯಿಂದ ನಡುಗುತ್ತಿದೆ, ಕಣ್ಣಿರು ಹರಿಯುತ್ತಿವೆ, ದೈತ್ಯರನ್ನು ಹೇಗೆ ಗೆಲ್ಲುವುದೆಂಬ ಆಲೋಚನೆ ಹೊಳೆಯುತ್ತಿಲ್ಲ, ಇದು ದೇವತೆಗಳ ಸ್ಥಿತಿ, ನೀನೇ ನೋಡು ಎಂದು ಇಂದ್ರನು ಹೇಳಿದನು.

ಅರ್ಥ:
ಭಯ: ಅಂಜಿಕೆ, ಹೆದರಿಕೆ; ಬಾಹೆ: ಪಕ್ಕ, ಪಾರ್ಶ್ವ; ಅಪಸದ: ನೀಚ, ಕೀಳಾದವ; ನಿಶ್ಚಯ: ನಿರ್ಧಾರ; ದುಮ್ಮಾನ: ದುಃಖ; ವಿಘಾತಿ: ಹೊಡೆತ, ವಿರೋಧ; ಲಯ: ಹಾಳು; ಲಾವಣಿಗೆ: ಗುಂಪು, ಸಮೂಹ; ರಾಗ: ಒಲಮೆ, ಪ್ರೀತಿ; ತಡಿ: ಎಲ್ಲೆ, ಮಿತಿ; ಸಂಕಟ: ತೊಂದರೆ; ದಯೆ: ಕೃಪೆ, ಕರುಣೆ; ಪಾಡು: ಸ್ಥಿತಿ; ಹೃದಯ: ಎದೆ; ಕಂಪನ: ನಡುಗು; ನಯನ: ಕಣ್ಣು; ಒರತೆ: ನೀರು ಜಿನುಗುವ ತಗ್ಗು; ಬಗೆ: ರೀತಿ; ಕೊರತೆ: ನ್ಯೂನ್ಯತೆ; ಜಯ: ಗೆಲುವು; ಜೋಡಿ: ಕೂಡಿದ; ದೇವರು: ಸುರರು; ನೋಡು: ವೀಕ್ಷಿಸು; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಭಯದ +ಬಾಹೆಯಲ್+ಅಪಸದರ+ ನಿ
ಶ್ಚಯದ+ ದುಮ್ಮಾನದ +ವಿಘಾತಿಯ
ಲಯದ +ಲಾವಣಿಗೆಯಲಿ +ರಾಗದ +ತಡಿಯ +ಸಂಕಟದ
ದಯೆಯ +ಪಾಡಿನ +ಹೃದಯ +ಕಂಪದ
ನಯನದ್ + ಒರತೆಯ +ಬಗೆಯ +ಕೊರ
ತೆಯ +ಜಯದ +ಜೋಡಿಯ +ದೇವರಿದೆ+ ನೋಡೆಂದನ್+ಅಮರೇಂದ್ರ

ಅಚ್ಚರಿ:
(೧) ಭಯ, ಲಯ, ನಿಶ್ಚಯ – ಪ್ರಾಸ ಪದ
(೨) ಭಯದ ಸ್ಥಿತಿಯನ್ನು ವರ್ಣಿಸುವ ಪರಿ – ದಯೆಯ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರತೆಯ ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ

ಪದ್ಯ ೨೫: ಕರ್ಣನು ದುರ್ಯೋಧನನ ಸಲಹೆಗೆ ಸಹಮತವಿತ್ತನೆ?

ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯೆಯನರಿವುಪಾಯಕೆ ಬೇರೆಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲಿಯೂ ಹಿರಿದಿಲ್ಲ ನಿಶ್ಚಯವೆಂದನಾ ಕರ್ಣ (ವಿರಾಟ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನ, ನೀನು ಮಾಡಿರುವ ನಿರ್ಧಾರ ಒಳಿತಾಗಿದೆ, ಇದರಲ್ಲಿ ಯಾವ ದೋಷವೂ ಇಲ್ಲ. ಇದನ್ನು ಎಲ್ಲಾರು ಒಪ್ಪುತ್ತಾರೆ, ಎಲ್ಲರ ಅಭಿಮತವೂ ಇದಾಗಿದೆ, ಶತ್ರುಗಳ ದುರ್ವಿದ್ಯೆಯನ್ನು ತಿಳಿಯಲಿ ವಿರಾಟನಗರವನ್ನು ಬಿಟ್ಟರೆ ಬೇರೆ ಜಾಗವಿಲ್ಲ. ಆ ದೇಶದಲ್ಲಿ ಈಗ ಸಮೃದ್ಧಿ ಐಶ್ವರ್ಯ ಹೆಚ್ಚಿದಂತೆ ಬೇರೆಲ್ಲಿಯೂ ಇಲ್ಲವಾದುದರಿಂದ ಪಾಂಡವರು ಅಲ್ಲಿರುವುದರಲ್ಲಿ ಅನುಮಾನವಿಲ್ಲ, ಎಂದು ಕರ್ಣನು ದುರ್ಯೋಧನನ ಮಾತನ್ನು ಅನುಮೋದಿಸಿದನು.

ಅರ್ಥ:
ಒಳ್ಳಿತು: ಸರಿಯಾಗಿಹುದು; ನಿರ್ದೋಷ: ತಪ್ಪುಮಾಡದ; ನಿರ್ಣಯ: ; ಎಲ್ಲರ: ಸಕಲ, ಸರ್ವ; ಅಭಿಮತ: ವಿಚಾರ; ರಿಪು: ವೈರಿ; ಖುಲ್ಲ: ಅಲ್ಪತನ, ಕ್ಷುದ್ರತೆ; ವಿದ್ಯೆ: ಜ್ಞಾನ; ಅರಿ: ತಿಳಿ; ಉಪಾಯ: ಯುಕ್ತಿ; ಬೇರೆ: ಇತರ; ಠಾವು:ಎಡೆ, ಸ್ಥಳ, ತಾಣ; ಇಹರು: ಇರುವರು; ಸಂಶಯ: ಅನುಮಾನ ; ದೇಶ: ರಾಷ್ಟ್ರ; ಸೊಂಪು: ಸೊಗಸು, ಹಿಗ್ಗು; ಸಿರಿ: ಐಶ್ವರ್ಯ; ಹಿರಿದು: ಹೆಚ್ಚು; ನಿಶ್ಚಯ: ದಿಟ, ಸತ್ಯ;

ಪದವಿಂಗಡಣೆ:
ಒಳ್ಳಿತಿದು +ನಿರ್ದೋಷ +ನಿರ್ಣಯವ್
ಎಲ್ಲರ+ಅಭಿಮತವಹುದು +ರಿಪುಗಳ
ಖುಲ್ಲ+ವಿದ್ಯೆಯನ್+ಅರಿವ್+ಉಪಾಯಕೆ +ಬೇರೆ+ಠಾವಿಲ್ಲ
ಅಲ್ಲಿ +ಪಾಂಡವರ್+ಇಹರು +ಸಂಶಯ
ವಿಲ್ಲ +ದೇಶದ +ಸೊಂಪು +ಸಿರಿ+ ಮ
ತ್ತೆಲಿಯೂ +ಹಿರಿದಿಲ್ಲ +ನಿಶ್ಚಯವೆಂದನಾ+ ಕರ್ಣ

ಅಚ್ಚರಿ:
(೧) ಪಾಂಡವರಿರುವಲ್ಲಿ ಸಂಪತ್ತು ಹೆಚ್ಚಿರುತ್ತದೆ ಎಂದು ಹೇಳಲು – ದೇಶದ ಸೊಂಪು ಸಿರಿ ಮತ್ತೆಲ್ಲಿಯೂ ಹಿರಿದಿಲ್ಲ
(೨) ನಿರ್ದೋಷ, ನಿರ್ಣಯ, ನಿಶ್ಚಯ – ‘ನಿ’ ಕಾರದ ಪದಗಳು