ಪದ್ಯ ೫: ದ್ರೋಣನ ಸಾರಥಿ ಯಾರ ಬಳಿಗೆ ರಥವನ್ನು ತಿರುಗಿಸಿದನು?

ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೋಣನ ದೇಹದ ತುಂಡುಗಳನ್ನಾಯ್ದು, ರಥವನ್ನು ಗುಡಿಸಿ, ಧ್ವಜವನ್ನೆತ್ತಿ ಕಟ್ಟಿ, ಸಾರಥಿಯು ರಥದ ಕುದುರೆಗಳನ್ನು ಹಿಂದಕ್ಕೆ ತಿರುಗಿಸಿ ತಕ್ಷಣವೇ ಅಶ್ವತ್ಥಾಮನ ಬಳಿಗೆ ಹೋದನು. ಅವನ ಆಗಮನವನ್ನು ನೋಡಿ ಅಶ್ವತ್ಥಾಮನು ಅತಿಶಯ ವ್ಯಥೆಯಿಂದ ಹೀಗೆಂದು ಚಿಂತಿಸಿದನು.

ಅರ್ಥ:
ಕಡಿಕು: ತುಂಡು; ಆಯ್ದು: ಆರಿಸು; ರಥ: ಬಂದಿ; ಗುಡಿಸು: ಕಸವನ್ನು ಬಳಿ; ಸಿಂಧ: ಪತಾಕೆ, ಬಾವುಟ; ಸಾರಥಿ: ಸೂತ; ತುಡುಕು: ಹೋರಾಡು, ಸೆಣಸು; ವಾಘೆ: ಲಗಾಮು; ಮುರುಹು: ತಿರುಗಿಸು; ಮರಳಿ: ಮತ್ತೆ; ಕುದುರೆ: ಅಶ್ವ; ತಡೆ: ನಿಲ್ಲಿಸು; ನಡೆ: ಚಲಿಸು; ಬರುತಿರೆ: ಆಗಮಿಸು; ಕಂಡು: ನೋಡು; ಮನ: ಮನಸ್ಸು; ಕಡು: ತುಂಬ; ನಿರೋಧ: ಪ್ರತಿಬಂಧ, ನಿರಾಶ; ಹಿಡಿ: ಗ್ರಹಿಸು; ಚಿಂತಿಸು: ಯೋಚಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಕಡಿಕುಗಳನ್+ಆಯ್ದ್+ಅರಸಿ +ರಥದೊಳು
ಗುಡಿಸಿ +ಸಿಂಧವನೆತ್ತಿ +ಸಾರಥಿ
ತುಡುಕಿ +ವಾಘೆಯ +ಮುರುಹಿ +ಮರಳಿಚಿ +ರಥದ +ಕುದುರೆಗಳ
ತಡೆಯದ್+ಅಶ್ವತ್ಥಾಮನಲ್ಲಿಗೆ
ನಡೆದು +ಬರುತಿರೆ +ಕಂಡು +ಮನದಲಿ
ಕಡು +ನಿರೋಧವ +ಹಿಡಿದು +ಚಿಂತಿಸುತಿರ್ದನಾ +ದ್ರೌಣಿ

ಅಚ್ಚರಿ:
(೧) ಅಶ್ವತ್ಥಾಮನನ್ನು ದ್ರೌಣಿ ಎಂದು ಕರೆದಿರುವುದು

ಪದ್ಯ ೧೧: ಕೃಷ್ಣನು ಅರ್ಜುನನಿಗೇಕೆ ಜರೆದನು?

ಕೊಡಹಿ ಕುಸುಕಿರಿದಡ್ಡಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತರಹಿಲ್ಲೆಂದು ಮುರರಿಪು ಜರೆದನರ್ಜುನನ (ದ್ರೋಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೂರಿಶ್ರವನು ಸಾತ್ಯಕಿಯ ಕೂದಲು ಹಿಡಿದು ಕೊಡವಿ, ನೆಲಕ್ಕೆ ಕುಕ್ಕಿ ಅಡ್ಡಗೆಡವಿ ಭೂಜದಿಂದ ಹೊಡೆದು ಕತ್ತಿಯಿಂದ ಕೊರಳನ್ನು ಕತ್ತರಿಸಲು ಮುಂಬರಿದನು. ಆಗ ಶ್ರೀಕೃಷ್ಣನು, ಅರ್ಜುನ ನಿನ್ನ ಶಿಷ್ಯನಾದ ಸಾತ್ಯಕಿ ಹೀನ ದುರ್ಗತಿಯನ್ನು ನೋಡು, ಚರ್ಚೆಗೆ ಸಮಯವಿಲ್ಲ ಎಂದು ಜರೆದನು.

ಅರ್ಥ:
ಕೊಡಹು: ಜಗ್ಗು, ಅಲ್ಲಾಡಿಸು; ಕುಸುಕಿರಿ: ಹೊಡೆ; ಬೀಳು: ಕುಸಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೃಪಾಣ: ಕತ್ತಿ, ಖಡ್ಗ; ಜಡಿ: ಬೆದರಿಕೆ; ಗಂಟಲು: ಕಂಠ; ಬಳಿಗೆ: ಹತ್ತಿರ; ಹೂಡು: ಅಣಿಗೊಳಿಸು; ಅರಿ: ಸೀಳು; ಕೊರಳು: ಗಂಟಲು; ಹಿಡಿ: ಗ್ರಹಿಸು; ಅಸ್ತ್ರ: ಶಸ್ತ್ರ; ಶಿಷ್ಯ: ವಿದ್ಯಾರ್ಥಿ; ಕಡು: ಬಹಳ; ನಿರೋಧ: ಪ್ರತಿಬಂಧ; ನೋಡು: ವೀಕ್ಷಿಸು; ನುಡಿ: ಮಾತು; ತರಹರಿಸು: ಸೈರಿಸು; ಮುರರಿಪು: ಕೃಷ್ಣ; ಜರೆ: ಬಯ್ಯು;

ಪದವಿಂಗಡಣೆ:
ಕೊಡಹಿ +ಕುಸುಕಿರಿದ್+ಅಡ್ಡಬೀಳಿಕಿ
ಮಡದಲ್+ಉರೆ +ಘಟ್ಟಿಸಿ +ಕೃಪಾಣವ
ಜಡಿದು +ಗಂಟಲ +ಬಳಿಗೆ +ಹೂಡಿದನ್+ಅರಿವುದಕೆ +ಕೊರಳ
ಹಿಡಿ +ಮಹಾಸ್ತ್ರವ +ನಿನ್ನ + ಶಿಷ್ಯನ
ಕಡು +ನಿರೋಧವ +ನೋಡು +ಫಲುಗುಣ
ನುಡಿಗೆ +ತರಹಿಲ್ಲೆಂದು +ಮುರರಿಪು+ ಜರೆದನ್+ಅರ್ಜುನನ

ಅಚ್ಚರಿ:
(೧) ಹೋರಾಟವನ್ನು ವಿವರಿಸುವ ಪರಿ – ಕೊಡಹಿ ಕುಸುಕಿರಿದಡ್ಡಬೀಳಿಕಿಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
(೨) ಗಂಟಲ, ಕೊರಳು – ಸಮಾನಾರ್ಥಕ ಪದ

ಪದ್ಯ ೪೯: ಘಟನೆಯ ಬಗ್ಗೆ ಇಂದ್ರನಿಗೆ ಯಾರು ವಿಷಯ ತಲುಪಿಸಿದರು?

ಅರಸ ಕೇಳೈ ಚಿತ್ರ ಸೇನನ
ಕರೆಸಿಯೂರ್ವಶಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸಂತೈಸಿ
ಸುರಪತಿಗೆ ಗಂಧರ್ವನಿವರಿ
ಬ್ಬರ ನಿರೋಧ ನಿಬಂಧನವನೆ
ಚ್ಚರಿಸಲರ್ಜುನನರಮನೆಗೆ ಬಂದನು ಬಲಧ್ವಂಸಿ (ಅರಣ್ಯ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೋಪಗೊಂಡ ಊರ್ವಶಿಯು ಚಿತ್ರಸೇನನನ್ನು ಕರೆಸಿ ಅರ್ಜುನನು ಇಂತಹ ದುರುಳತನವನ್ನು ಮಾಡಿದನೆಂದು ತಿಳಿಸಿದಳು. ಚಿತ್ರಸೇನನು ಊರ್ವಶಿಯನ್ನು ಸಮಾಧಾನ ಪಡಿಸಿ ಇಂದ್ರನಿಗೆ ಈ ವಿಷಯವನ್ನು ತಲುಪಿಸಿದನು. ಇದನ್ನು ಕೇಳಿದ ಇಂದ್ರನು ಅರ್ಜುನನ ಅರಮನೆಗೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕರೆಸು: ಬರೆಮಾಡು; ದುರುಳತನ: ದುಷ್ಟವಾದ, ನೀಚ; ದೂರು: ಮೊರೆ, ಅಹವಾಲು; ಸುರಸತಿ: ಅಪ್ಸರೆ; ಸಂತೈಸು: ಸಮಾಧಾನ ಪಡಿಸು; ಸುರಪತಿ: ಇಂದ್ರ; ಗಂಧರ್ವ: ದೇವತೆಗಳ ಗುಂಪು; ನಿರೋಧ: ಪ್ರತಿಬಂಧ, ನೋವು; ನಿಬಂಧ: ಕರಾರು, ಕಟ್ಟಳೆ; ಎಚ್ಚರ: ಜೋಪಾನ, ಹುಷಾರು; ಅರಮನೆ: ರಾಜರ ಆಲಯ; ಬಲಧ್ವಂಸಿ: ಇಂದ್ರ; ಧ್ವಂಸಿ: ನಾಶಮಾಡಿದ;

ಪದವಿಂಗಡಣೆ:
ಅರಸ+ ಕೇಳೈ +ಚಿತ್ರಸೇನನ
ಕರೆಸಿ+ಊರ್ವಶಿ +ಪಾರ್ಥ +ಮಾಡಿದ
ದುರುಳತನವನು +ದೂರಿದೊಡೆ +ಸುರಸತಿಯ +ಸಂತೈಸಿ
ಸುರಪತಿಗೆ+ ಗಂಧರ್ವನ್+ಇವರಿ
ಬ್ಬರ +ನಿರೋಧ +ನಿಬಂಧನವನ್
ಎಚ್ಚರಿಸಲ್+ಅರ್ಜುನನ್+ಅರಮನೆಗೆ +ಬಂದನು +ಬಲಧ್ವಂಸಿ

ಅಚ್ಚರಿ:
(೧) ಸುರಪತಿ, ಬಲಧ್ವಂಸಿ – ಇಂದ್ರನನ್ನು ಕರೆದ ಪರಿ
(೨) ಸ ಕಾರದ ತ್ರಿವಳಿ ಪದ – ಸುರಸತಿಯ ಸಂತೈಸಿ ಸುರಪತಿಗೆ

ಪದ್ಯ ೮: ಕುಂತಿಯು ನೆರೆಮನೆಗೆ ಏಕೆ ಧಾವಿಸಿದಳು?

ಇರಲಿರಲು ಮಾಸಾಂತರದಲಾ
ನೆರೆಮನೆಯ ಶೋಕಾರ್ತರವದ
ಬ್ಬರವ ಕೇಳಿದು ಕುಂತಿ ಸಾಯಂಕಾಲ ಸಮಯದಲಿ
ಭರದಿನೈತಂದಕಟ ಭೂಸುರ
ವರ ನಿರೋಧವಿದೇನು ದುಃಖೋ
ತ್ಕರುಷವಾಕಸ್ಮಿಕವದೆಂದಳು ಕುಂತಿ ವಿನಯದಲಿ (ಆದಿ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ಬ್ರಾಹ್ಮಣವೇಷದಲ್ಲಿ ಏಕಚಕ್ರಪುರದಲ್ಲಿ ಪಾಂಡವರು ಕಾಲಕಳೆಯುತ್ತಿರಲು, ಕೆಲವು ತಿಂಗಳನಂತರ ನೆರೆಮನೆಯಿಂದ ಸಾಯಂಕಾಲದ ವೇಳೆ ಅತೀವ ಶೋಕರ್ತ (ಅಳು) ಕೇಳಿಬಂತು. ಕುಂತಿಯು ಇದನ್ನು ಕೇಳಿದ ಕೂಡಲೆ ಆ ಬ್ರಾಹ್ಮಣರ ಮನೆಗೆ ಹೋಗಿ, ಬ್ರಾಹ್ಮಣ ಶ್ರೇಷ್ಠನೆ ನಿನ್ನ ಸಂತೋಷಕ್ಕೆ ಯಾವ ತಡೆ ಬಂತು? ಆಕಸ್ಮಿಕವಾಗಿ ಅತಿಶಯ ದುಃಖವೇಕೆ ಎಂದು ವಿನಯದಲಿ ಕುಂತಿ ಕೇಳಿದಳು.

ಅರ್ಥ:
ಇರಲು: ವಾಸಿಸು; ಮಾಸ: ತಿಂಗಳು; ನೆರೆ: ಪಕ್ಕ; ಮನೆ: ಆಲಯ; ಶೋಕ: ದುಃಖ; ಅಬ್ಬರ: ಆರ್ಭಟ; ಆರ್ತ: ಕಷ್ಟ, ಸಂಕಟ, ವಿಪತ್ತು; ರವ: ಧ್ವನಿ; ಕೇಳು: ಆಲಿಸು; ಸಮಯ: ಘಂಟೆ; ಅಕಟ: ಅಯ್ಯೋ; ಭೂಸುರ: ಬ್ರಾಹ್ಮಣ; ವರ: ಶ್ರೇಷ್ಠ; ನಿರೋಧ: ನಿರಾಶೆ, ನೋವು; ದುಃಖ: ಸಂಕಟ; ಆಕಸ್ಮಿಕ: ಪೂರ್ವಭಾವಿ ಸೂಚನೆಯಿಲ್ಲದೆ; ವಿನಯ: ಸೌಜನ್ಯ;

ಪದವಿಂಗಡನೆ:
ಇರಲಿರಲು +ಮಾಸ+ಅಂತರದಲಾ
ನೆರೆ+ಮನೆಯ +ಶೋಕ+ಆರ್ತ+ರವದ್
ಅಬ್ಬರವ+ ಕೇಳಿದು +ಕುಂತಿ +ಸಾಯಂಕಾಲ +ಸಮಯದಲಿ
ಭರದ್+ಇನೈತಂದ್+ಅಕಟ+ ಭೂಸುರ
ವರ +ನಿರೋಧ+ವಿದೇನು +ದುಃಖೋ
ತ್ಕರುಷವ್+ಆಕಸ್ಮಿಕ+ವದೆಂದಳು +ಕುಂತಿ +ವಿನಯದಲಿ

ಅಚ್ಚರಿ:
(೧) ಹೀಗೆ ಇದ್ದರು ಎಂದು ಸೂಚಿಸಲು – ಇರಲಿರಲು
(೨) ಅಬ್ಬರ, ದುಃಖ, ಅಕಟ,ನಿರೋಧ, ಶೋಕ, ಆರ್ತ – ದುಃಖವನ್ನು ಸೂಚಿಸಲು ಬಳಸಿದ ಪದ