ಪದ್ಯ ೫: ಜಗತ್ತು ಪಾಂಡುರಾಜನ ಆಳ್ವಿಕೆಯಲ್ಲಿ ಹೇಗೆ ತೋರಿತು?

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜನ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ (ಆದಿ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಪಾಂಡುರಾಜನ ಶುದ್ಧವಾದ ಕಿರ್ತಿಯು ಹರಡಿ ಜಗತ್ತು ಬಿಳುಪಾಯಿತು. ನಿಷ್ಠುರತೆಯಿಂದ ಅವನು ಝಳಪಿಸುವ ಕತ್ತಿಯ ದೆಸೆಯಿಂದ ಜಗತ್ತು ಕೆಂಪಾಯಿತು. ಶತ್ರುಸೈನ್ಯವನ್ನು ಬಗ್ಗುಬಡಿಯುವ ಅವನ ಕೋಪದಿಂದ ಜಗತ್ತು ಕಪ್ಪಾಗಿ ಕಾಣಿಸುತ್ತಿತ್ತು.

ಅರ್ಥ:
ಪಸರಿಸು: ಹರಡು; ಧೌತ: ಬಿಳಿ, ಶುಭ್ರ; ಕೀರ್ತಿ: ಖ್ಯಾತಿ; ಬಿಳುಪು: ಬಿಳಿಯ ಬಣ್ಣ; ಜನ: ಮನುಷ್ಯರು; ನಿಪ್ಪಸರ: ಅತಿಶಯ, ಹೆಚ್ಚಳ; ಝಳಪಿಸು: ಬೀಸು, ಹೆದರಿಸು; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಸೊಂಪು: ಸೊಗಸು, ಚೆಲುವು; ಮಸಗು: ಹರಡು; ಅಗ್ಗ: ಶ್ರೇಷ್ಠ; ಪರಬಲ: ವೈರಿ; ವಿಸರ: ವಿಸ್ತಾರ, ವ್ಯಾಪ್ತಿ; ದಳ: ಸೈನ್ಯ; ಕ್ರೋಧ: ಕೋಪ; ತಾಮಸ: ಕತ್ತಲೆ, ಅಂಧಕಾರ, ನಿಧಾನ; ಅಸಿತ: ಕಪ್ಪಾದುದು; ಭಾಸ: ಕಾಣು; ಭುವನ: ಜಗತ್ತು; ವಿಸ್ತಾರ: ಹರಡು; ಆಭಾಸ: ಕಾಂತಿ, ಪ್ರಕಾಶ;

ಪದವಿಂಗಡಣೆ:
ಪಸರಿಸಿದ +ಪರಿಧೌತ+ಕೀರ್ತಿ
ಪ್ರಸರದಲಿ +ಬೆಳುಪಾಯ್ತು +ಜನ +ನಿ
ಪ್ಪಸರದಲಿ +ಝಳಪಿಸುವ +ಖಂಡೆಯ +ಸಿರಿಯ +ಸೊಂಪಿನಲಿ
ಮಸಗಿತ್+ಅಗ್ಗದ+ ಕೆಂಪು +ಪರಬಲ
ವಿಸರ+ ದಳನ +ಕ್ರೋಧಮಯ +ತಾ
ಮಸದಿನ್+ಅಸಿತ್+ಆಭಾಸಮಾದುದು +ಭುವನ+ವಿಸ್ತಾರ

ಅಚ್ಚರಿ:
(೧) ಪಸರಿಸಿ, ಪ್ರಸರ, ನಿಪ್ಪಸರ – ಪದಗಳ ಬಳಕೆ
(೨) ಬೆಳುಪು, ಕೆಂಪು, ಅಸಿತ – ಬಣ್ಣಗಳ ಬಳಕೆ
(೩) ರೂಪಕದ ಪ್ರಯೋಗ – ಪರಬಲ ವಿಸರ ದಳನ ಕ್ರೋಧಮಯ ತಾಮಸದಿನಸಿತಾಭಾಸಮಾದುದು

ಪದ್ಯ ೩೬: ಕೌರವನ ಹೊಡೆತದಿಂದ ಭೀಮನ ಸ್ಥಿತಿ ಹೇಗಿತ್ತು?

ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ (ಗದಾ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನು ಮತ್ತೆ ಭೀಮನ ನೆತ್ತಿಯನ್ನು ಸರ್ವಶಕ್ತಿಯಿಂದಲೂ ಹೊಡೆಯಲು, ಭೀಮನು ಓಲಿ ಮೂರ್ಛೆಯಿಮ್ದ ಕೆಳಬಿದ್ದನು. ಕಣ್ಣುಗಳು ನೆಟ್ಟವು. ಉಸಿರಾಡುವಾಗ ರಕ್ತದ ಹನಿಗಳು ಒಸರಿಸಿದವು. ಗದೆ ಪಕ್ಕಕ್ಕೆ ಹಾರಿತು, ಭೀಮನು ನೆಲದ ಮೇಲೊರಗಿದನು.

ಅರ್ಥ:
ಮತ್ತೆ: ಪುನಃ; ಹೊಯ್ದು: ಹೊಡೆ; ನೆತ್ತಿ: ಶಿರ; ನಿಪ್ಪಸರ: ಅತಿಶಯ, ಹೆಚ್ಚಳ; ಕಳೆ: ಬೀಡು, ತೊರೆ, ಹೋಗಲಾಡಿಸು; ಝೋಂಪು: ಮೂರ್ಛೆ; ತಿರುಗು: ಹೊರಲಾಡು; ಬಿದ್ದು: ಎರಗು, ಬೀಳು; ಬಿಗಿ: ಕಟ್ಟು, ಬಂಧಿಸು; ಮೂರ್ಛೆ: ಎಚ್ಚರವಿಲ್ಲದ ಸ್ಥಿತಿ; ಕೆತ್ತು: ನಡುಕ, ಸ್ಪಂದನ; ಕಂಗಳು: ಕಣ್ಣು; ಸುಯ್ಲು: ನಿಟ್ಟುಸಿರು; ಲಹರಿ: ರಭಸ, ಆವೇಗ; ಸುತ್ತಲು: ಎಲ್ಲಾಕಡೆ; ಅರುಣಾಂಬು: ರಕ್ತ; ಸಿಡಿ: ಹಾರು; ಗದೆ: ಮುದ್ಗರ; ಭಟ: ಸೈನಿಕ; ಒರಗು: ಕೆಳಕ್ಕೆ ಬಾಗು; ಮರವೆ: ಮರವು, ಜ್ಞಾಪಕವಿಲ್ಲದಿರುವುದು;

ಪದವಿಂಗಡಣೆ:
ಮತ್ತೆ +ಹೊಯ್ದನು +ಭೀಮಸೇನನ
ನೆತ್ತಿಯನು +ನಿಪ್ಪಸರದಲಿ +ಕಳೆ
ಹತ್ತಿ+ ಝೋಂಪಿಸಿ +ತಿರುಗಿ +ಬಿದ್ದನು +ಬಿಗಿದ +ಮೂರ್ಛೆಯಲಿ
ಕೆತ್ತ+ ಕಂಗಳ +ಸುಯ್ಲ+ ಲಹರಿಯ
ಸುತ್ತಲೊಗುವ್+ಅರುಣಾಂಬುಗಳ +ಕೆಲ
ದತ್ತ +ಸಿಡಿದಿಹ +ಗದೆಯ +ಭಟನ್+ಒರಗಿದನು+ಮರವೆಯಲಿ

ಅಚ್ಚರಿ:
(೧) ಮೂರ್ಛೆ, ಮರವೆ – ಸಾಮ್ಯಾರ್ಥ ಪದ
(೨) ಭೀಮನನ್ನು ಗದೆಯ ಭಟ ಎಂದು ಕರೆದಿರುವುದು

ಪದ್ಯ ೫೩: ಅರ್ಜುನನು ಹೇಗೆ ಮುನ್ನುಗ್ಗಿದನು?

ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ
ತರುಬಿದನು ಕುರುಪತಿಯರ್ನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ (ಶಲ್ಯ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅರ್ಜುನನು ಶಲ್ಯನ ಬಾಣಗಳನ್ನು ಖಂಡಿಸಿ, ಮುನ್ನುಗ್ಗಿದನು. ಅಶ್ವತ್ಥಾಮನ ಸಾರಥಿಯನ್ನು ಕೊಂದನು. ಸಂಶಪ್ತಕರನ್ನು ಸೋಲಿಸಿ ಕೃಪನನ್ನು ಅಡ್ಡಗಟ್ಟಿ ದುರ್ಯೋಧನನು ಒರಲುವಂತೆ ಮಾಡಿದನು. ಆಗ ಕುರುವೀರರೆಲ್ಲರೂ ರಭಸದಿಂದ ಮುಂದುವರೆದು ಅರ್ಜುನನನ್ನು ಮುತ್ತಿದರು.

ಅರ್ಥ:
ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ಉರುಬು: ಅತಿಶಯವಾದ ವೇಗ; ಸುತ: ಮಗ; ಸೂತ: ರಥವನ್ನು ನಡೆಸುವವನು, ಸಾರ; ಇರಿ: ಚುಚ್ಚು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಸೋಲು: ಪರಾಭವ; ಅಡಹಾಯ್ಸು: ಮಧ್ಯ ಪ್ರವೇಶಿಸು; ತರುಬು: ತಡೆ, ನಿಲ್ಲಿಸು; ಒರಲು: ಅರಚು, ಕೂಗಿಕೊಳ್ಳು; ಸುಭಟ: ಪರಾಕ್ರಮಿ, ಶೂರ; ಎರವಳಿ: ತೊರೆ; ನಿಪ್ಪಸರ: ಅತಿಶಯ, ಹೆಚ್ಚಳ; ಮುಸುಕು: ಆವರಿಸು;

ಪದವಿಂಗಡಣೆ:
ಮುರಿ+ಎಸುತ +ಮಾದ್ರೇಶ್ವರನ+ ಹೊಕ್ಕ್
ಉರುಬಿದನು +ಗುರುಸುತನ+ ಸೂತನನ್
ಇರಿದು +ಸಮಸಪ್ತಕರ+ ಸೋಲಿಸಿ +ಕೃಪನನ್+ಅಡಹಾಯ್ಸಿ
ತರುಬಿದನು +ಕುರುಪತಿಯನ್+ಅರ್ಜುನನ್
ಒರಲಿಸಿದನ್+ಈ+ ಸೈನ್ಯ +ಸುಭಟರನ್
ಎರವಣಿಗೆ +ನಿಪ್ಪಸರದಲಿ +ಮುಸುಕಿತು +ಧನಂಜಯನ

ಅಚ್ಚರಿ:
(೧) ಗುರುಸುತನ ಸೂತನನಿರಿದು – ಸುತ, ಸೂತ – ಪದಗಳ ಬಳಕೆ –

ಪದ್ಯ ೨೭: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಆಕ್ರಮಣ ಮಾಡಿದನು?

ಹಸಿದ ಹೆಬ್ಬುಲಿ ಮಸಗಿದರೆ ಮೃಗ
ವಿಸರವೇನಹುದರಸ ಕೇಳ್ ನಿ
ಪ್ಪಸರದಲಿ ಪಾಳಿಸಿದನಹಿತರನುಗಿದನುಸುರುಗಳ
ಕುಶಲರೇ ಭೀಮಾರ್ಜುನರು ಪಾ
ಲಿಸುವ ಬಿರುದೇ ಕೃಷ್ಣನದು ಹರಿ
ಹುಸಿಕನೋ ಬೆಸಗೊಂಬೆವೆನುತರೆಯಟ್ಟಿದನು ದ್ರೋಣ (ದ್ರೋಣ ಪರ್ವ, ೧೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಹಸಿದ ಹೆಬ್ಬುಲಿ ಮೇಲೆ ಬಿದ್ದರೆ ಪಶುಗಳ ಗತಿಯೇನಾದೀತು? ಎಲೈ ರಾಜನೇ ಕೇಳು, ದ್ರೋಣನು ರಣರಂಗದಗಲಕ್ಕೂ ಶತ್ರುಗಳ ಪ್ರಾಣಗಳನ್ನು ಸೆಳೆದುಕೊಂಡನು. ಭೀಮಾರ್ಜುನರು ಕ್ಷೇಮವೇ? ಅವರನ್ನು ರಕ್ಷಿಸುವ ಬಿರುದು ಕೃಷ್ಣನಿಗಿದೆಯಂತೆ? ಅವನು ಸುಳ್ಳನೋ ಹೇಗೆ ಕೇಳುತ್ತೇನೆ ಕರೆಯಿರಿ ಎಂದು ದ್ರೋಣನು ಶತ್ರುಗಲನ್ನು ಅಟ್ಟಿಸಿಕೊಂಡು ಹೋದನು.

ಅರ್ಥ:
ಹಸಿದ: ಹೊಟ್ಟೆಗೆ ಆಹಾರವಿಲ್ಲದ ಸ್ಥಿತಿ; ಹೆಬ್ಬುಲಿ: ದೊಡ್ಡ ವ್ಯಾಘ್ರ; ಮಸಗು: ಕೆರಳು; ಮೃಗ: ಪ್ರಾಣಿ; ವಿಸರ: ಗುಂಪು, ಸಮೂಹ; ಅರಸ: ರಾಜ; ಕೇಳು: ಆಲಿಸು; ನಿಪ್ಪಸರ: ಅತಿಶಯ; ಪಾಲಿಸು: ರಕ್ಷಿಸು, ಕಾಪಾಡು; ಅಹಿತ: ವೈರಿ; ಉಗಿ: ಹೊರಹಾಕು; ಉಸುರು: ಜೀವ; ಕುಶಲ: ಕ್ಷೇಮ; ಬಿರುದು: ಗೌರವಸೂಚಕ ಹೆಸರು; ಹುಸಿ: ಸುಳ್ಳು; ಬೆಸ: ಕೆಲಸ, ಕಾರ್ಯ, ಅಪ್ಪಣೆ; ಅಟ್ಟು: ಧಾವಂತ;

ಪದವಿಂಗಡಣೆ:
ಹಸಿದ +ಹೆಬ್ಬುಲಿ +ಮಸಗಿದರೆ +ಮೃಗ
ವಿಸರವೇನಹುದ್+ಅರಸ +ಕೇಳ್ +ನಿ
ಪ್ಪಸರದಲಿ +ಪಾಳಿಸಿದನ್+ಅಹಿತರನ್+ಉಗಿದನ್+ಉಸುರುಗಳ
ಕುಶಲರೇ +ಭೀಮಾರ್ಜುನರು +ಪಾ
ಲಿಸುವ +ಬಿರುದೇ +ಕೃಷ್ಣನದು +ಹರಿ
ಹುಸಿಕನೋ +ಬೆಸಗೊಂಬೆವ್+ಎನುತ್+ಅರೆಯಟ್ಟಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸಿದ ಹೆಬ್ಬುಲಿ ಮಸಗಿದರೆ ಮೃಗವಿಸರವೇನಹುದ್
(೨) ಕೃಷ್ಣನನ್ನು ಹಂಗಿಸುವ ಪರಿ – ಪಾಲಿಸುವ ಬಿರುದೇ ಕೃಷ್ಣನದು ಹರಿಹುಸಿಕನೋ

ಪದ್ಯ ೫೭: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಎಸುತ ಹೊಕ್ಕನು ದಳ್ಳಿಸುವ ಹೊಸ
ಮಸೆಯ ಕಣೆ ಮುಕ್ಕುರುಕಿದವು ನಿ
ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ
ಕುಸುರಿದರಿದವು ಜೋಡು ಸೀಸಕ
ಬೆಸುಗೆಯೊಡೆದುದು ಘಾಯದಲಿ ಮೈ
ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ (ದ್ರೋಣ ಪರ್ವ, ೧೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಬಾಣವನ್ನು ಬಿಡುತ್ತಾ ಘಟೋತ್ಕಚನು ಕೌರವ ಸೈನ್ಯವನ್ನು ಹೊಕ್ಕನು. ಅವನ ಕೂರಂಬುಗಳು ಉರಿಯನ್ನುಗುಳುತ್ತಿದ್ದವು. ದುರ್ಯೋಧನನು ಅತಿಶಯವಾಗಿ ಬಾಣಗಳನ್ನು ಬಿಟ್ಟರೂ ಆ ಬಾಣಗಳು ತುಂಡಾಗಲಿಲ್ಲ. ದುರ್ಯೋಧನನ ಕವಚ ಶಿರಸ್ತ್ರಾಣಗಳ ಬೆಸುಗೆ ಬಿಚ್ಚಿತು. ಘಟೋತ್ಕಚನ ಬಾಣಗಳಿಂದ ಮೈಯಲ್ಲಿ ಗಾಯವಾಗಿ ರಕ್ತ ಬಸಿಯುತ್ತಿತ್ತು. ದುರ್ಯೋಧನನ ಶೌರ್ಯ ಛಿದ್ರವಾಯಿತು. ಭೀತಿ ಆವರಿಸಿತು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ದಳ್ಳಿಸು: ಧಗ್ ಎಂದು ಉರಿ; ಹೊಸ: ನವೀನ; ಮಸೆ: ಚೂಪಾದ; ಕಣೆ: ಬಾಣ; ಮುಕ್ಕುರು: ಆವರಿಸು; ನಿಪ್ಪಸರ: ಅತಿಶಯ, ಹೆಚ್ಚಳ; ನೃಪ: ರಾಜ; ಎಚ್ಚು: ಬಾಣ ಪ್ರಯೋಗ ಮಾಡು; ಕಾಣು: ತೋರು; ಹರಿ: ಚಲಿಸು; ಕುಸುರಿ: ತುಂಡು; ಅರಿ: ಸೀಳು; ಜೋಡು: ಕವಚ; ಸೀಸಕ: ಶಿರಸ್ತ್ರಾಣ; ಬೆಸುಗೆ: ಪ್ರೀತಿ, ಜೋತೆ; ಒಡೆ: ಸೀಳು; ಘಾಯ: ಪೆಟ್ಟು; ಬಸಿ: ಒಸರು, ಸ್ರವಿಸು; ಶೌರ್ಯ: ಪರಾಕ್ರಮ; ಬಿಗಿ: ಭದ್ರವಾಗಿರುವುದು; ಭೀತಿ: ಭಯ; ಭೂಪತಿ: ರಾಜ;

ಪದವಿಂಗಡಣೆ:
ಎಸುತ +ಹೊಕ್ಕನು +ದಳ್ಳಿಸುವ +ಹೊಸ
ಮಸೆಯ +ಕಣೆ +ಮುಕ್ಕುರುಕಿದವು +ನಿ
ಪ್ಪಸರದಲಿ+ ನೃಪನ್+ಎಚ್ಚು +ಕಾಣನು +ಹರಿವನಾ+ ಕಣೆಗೆ
ಕುಸುರಿದ್+ಅರಿದವು +ಜೋಡು +ಸೀಸಕ
ಬೆಸುಗೆ+ಒಡೆದುದು +ಘಾಯದಲಿ +ಮೈ
ಬಸಿಯೆ +ಬಿರಿದುದು +ಶೌರ್ಯ +ಬಿಗಿದುದು +ಭೀತಿ +ಭೂಪತಿಗೆ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಘಾಯದಲಿ ಮೈ ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ
(೨) ಕವಚ ಕಳಚಿತು ಎಂದು ಹೇಳುವ ಪರಿ – ಕುಸುರಿದರಿದವು ಜೋಡು ಸೀಸಕ ಬೆಸುಗೆಯೊಡೆದುದು

ಪದ್ಯ ೨೬: ಅರ್ಜುನನು ಹೇಗೆ ಅಬ್ಬರಿಸಿದನು?

ಕಾದಿರೈ ಷಡುರಥರು ನೃಪತಿಗೆ
ಕಾದು ಕೊಡಿರೈ ಸೈಂಧವನನಿದು
ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
ಮೂದಲೆಗಳಿವು ಮುಟ್ಟುವಡೆ ಮುನಿ
ಸಾದಡೊಳ್ಳಿತು ನಿಪ್ಪಸರದಲಿ
ಕಾದುವಿರಲೈ ಕಾಣಲಹುದೆಂದೊರಲಿದನು ಪಾರ್ಥ (ದ್ರೋಣ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಆರು ಮಹಾರಥಿಕರೇ, ಈಗ ಯುದ್ಧಮಾಡಿ, ಸೈಂಧವನನ್ನು ಉಳಿಸಿಕೊಂಡಿರಿ, ಇದು ರಣರಂಗ ಶಸ್ತ್ರಧಾರಿಗಳ ಜಾಗ, ಸಾಹಸಿಗರಿಗೆ ತಮ್ಮ ಪೌರುಷವನ್ನು ತೋರಿಸಲು ಇದೇ ಸಮಯ. ನನ್ನ ಛೇಡಿಸುವಿಕೆ ನಿಮಗೆ ಕೋಪತಂದರೆ, ಅದು ಒಳಿತೇ ಆಯಿತು, ನೀವು ಅತಿ ಕಠೋರವಾಗಿ ನನ್ನೊಡನೆ ಕಾದುವಿರಿ, ಆಗ ನನ್ನ ಶೌರ್ಯ ನಿಮಗೆ ಕಾಣಿಸುತ್ತದೆ ಎಂದು ಅರ್ಜುನನು ಅಬ್ಬರಿಸಿದನು.

ಅರ್ಥ:
ಕಾದು: ಹೋರಾಟ, ಯುದ್ಧ; ಷಡು: ಆರು; ಷಡುರಥ: ಆರು ಮಹಾರಥಿಕರು; ಕೊಡು: ನೀಡು; ಕೈದುಕಾರ: ಆಯುಧವನ್ನು ಹಿಡಿದವ, ಯೋಧ; ಠಾವು: ಸ್ಥಳ, ತಾಣ; ಸಾಹಸಿ: ಪರಾಕ್ರಮಿ; ಸಮಯ: ಕಾಲ; ಮೂದಲೆ: ಛೇಡಿಸುವಿಕೆ; ಮುಟ್ಟು: ತಾಗು; ಮುನಿಸು: ಕೋಪಗೊಳ್ಳು; ಒಳ್ಳಿತು: ಒಳ್ಳೆಯದು; ನಿಪ್ಪಸರ: ಅತಿಶಯ, ಹೆಚ್ಚಳ; ಕಾದು: ಹೋರಾದು; ಕಾಣು: ತೋರು; ಒರಲು: ಅರಚು, ಕೂಗಿಕೊಳ್ಳು;

ಪದವಿಂಗಡಣೆ:
ಕಾದಿರೈ +ಷಡುರಥರು +ನೃಪತಿಗೆ
ಕಾದು+ ಕೊಡಿರೈ +ಸೈಂಧವನನ್+ಇದು
ಕೈದುಕಾರರ+ ಠಾವು +ಸಾಹಸಿಗರಿಗೆ+ ಸಮಯವಿದು
ಮೂದಲೆಗಳಿವು +ಮುಟ್ಟುವಡೆ +ಮುನಿ
ಸಾದಡೊಳ್ಳಿತು+ ನಿಪ್ಪಸರದಲಿ
ಕಾದುವಿರಲೈ +ಕಾಣಲಹುದೆಂದ್+ಒರಲಿದನು +ಪಾರ್ಥ

ಅಚ್ಚರಿ:
(೧) ರಣರಂಗವನ್ನು ವಿವರಿಸುವ ಪರಿ – ಇದು ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
(೨) ಮು ಕಾರದ ತ್ರಿವಳಿ ಪದ – ಮೂದಲೆಗಳಿವು ಮುಟ್ಟುವಡೆ ಮುನಿಸಾದಡೊಳ್ಳಿತು

ಪದ್ಯ ೪೦: ಅಭಿಮನ್ಯುವು ನಿಶಸ್ತ್ರವಾಗಿ ಹೇಗೆ ಹೋರಾಡಿದನು?

ವಿಷದ ಹುಟ್ಟಿಯೊಳೆರಗಿ ನೊಣ ಜೀ
ವಿಸುವುದೇ ಶಿವ ಶಿವ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವುದುಂಟೆ ಭಟನಿಕರ
ಕುಸುರಿದರಿದನು ಕರಿಘಟೆಯನಿ
ಪ್ಪಸರದಲಿ ಕಾಲಾಳು ಕುದುರೆಗ
ಳಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ (ದ್ರೋಣ ಪರ್ವ, ೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ವಿಷ ತುಂಬಿದ ಜೀನುಗೂಡಿಗೆ ಎರಗಿ ನೊಣವು ಬದುಕಿ ಉಳಿಯಬಲ್ಲುದೇ? ಶಿವ ಶಿವಾ, ಅಭಿಮನ್ಯುವಿನ ಮುಂದೆ ಬಂದವರು ಬದುಕಿ ಉಳಿಯುವುದುಂಟೇ? ನಿಷ್ಠುರನಾಗಿ ಆನೆ, ಕುದುರೆ ಕಾಲಾಳುಗಳನ್ನು ಕೊಚ್ಚಿ ಕೊಂದು ಯಮನಪುರಿಗೆ ಕಳುಹಿಸಿದನು.

ಅರ್ಥ:
ವಿಷ: ಗರಳು; ಹುಟ್ಟಿ: ಗೂಡು; ಎರಗು: ಬಾಗು; ನೊಣ: ಕೀಟ; ಜೀವಿಸು: ಬದುಕು; ಶಿವ: ಶಂಕರ; ಕುಮಾರ: ಪುತ್ರ; ಮುಸುಡು: ಮುಖ; ಬಿದ್ದು: ಬೀಳು; ಬದುಕು: ಜೀವಿಸು; ಭಟ: ಸೈನಿಕ; ನಿಕರ: ಗುಂಪು; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಕರಿಘಟೆ: ಆನೆಗಳ ಗುಂಪು; ನಿಪ್ಪಸರ: ಅತಿಶಯ; ಕಾಲಾಳು: ಸೈನಿಕ; ಕುದುರೆ: ಅಶ್ವ; ಅಸು: ಪ್ರಾಣ; ಸೂರೆ: ಕೊಳ್ಳೆ, ಲೂಟಿ; ಅಂತಕ: ಯಮ; ದೂತ: ಸೇವಕ; ಸಂತತಿ: ವಂಶ;

ಪದವಿಂಗಡಣೆ:
ವಿಷದ +ಹುಟ್ಟಿಯೊಳ್+ಎರಗಿ+ ನೊಣ+ ಜೀ
ವಿಸುವುದೇ +ಶಿವ+ ಶಿವ+ ಕುಮಾರನ
ಮುಸುಡ +ಮುಂದಕೆ +ಬಿದ್ದು +ಬದುಕುವುದುಂಟೆ +ಭಟನಿಕರ
ಕುಸುರಿದ್+ಅರಿದನು +ಕರಿಘಟೆಯ
ನಿಪ್ಪಸರದಲಿ +ಕಾಲಾಳು +ಕುದುರೆಗಳ್
ಅಸುವ +ಸೂರೆಯ +ಬಿಟ್ಟನ್+ಅಂತಕ +ದೂತ +ಸಂತತಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಿಷದ ಹುಟ್ಟಿಯೊಳೆರಗಿ ನೊಣ ಜೀವಿಸುವುದೇ
(೨) ಸಾಯಿಸಿದನು ಎಂದು ಹೇಳುವ ಪರಿ – ಅಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ

ಪದ್ಯ ೭೦: ಸೇವಣ ರಾಜರು ಹೇಗೆ ಆಕ್ರಮಣ ಮಾಡಿದರು?

ಉರುಬಿ ಹೊಯಿದರು ಕೈದಣಿಯೆ ಹೊ
ಕ್ಕರಗಿದರು ನಿಪ್ಪಸರದಲಿ ಮು
ಕ್ಕುರಿಕಿದರು ತಲೆಮಿದುಳ ಜೊಂಡಿನ ಜುರಿತ ಜೋಡುಗಳ
ತರಿದು ಬಿಸುಟರು ಖಗನಿಕರಕಾ
ರ್ದಿರಿದು ಕಾಲನ ಬನಕೆ ರಕುತದ
ಕೆರೆಯ ತೂಬೆತ್ತಿದರು ಸೇವಣ ರಾಯ ರಾವುತರು (ಭೀಷ್ಮ ಪರ್ವ, ೪ ಸಂಧಿ, ೭೦ ಪದ್ಯ)

ತಾತ್ಪರ್ಯ:
ಸೇವಣ ರಾವುತರು ರಭಸದಿಂದ ಮುನ್ನುಗ್ಗಿ ಹೊಯ್ದರು. ಅತಿಶಯವಾಗಿ ಸುತ್ತೆತ್ತಲೂ ನುಗ್ಗಿ ಶತ್ರುಗಳ ಮಿದುಳುಗಳ ಜೊಂಡು ಹೊರಬರುವಂತೆ ರಕ್ತ ಹರಿಯುವಂತೆ ಹೊಡೆದರು. ಎದೆಗುಂದದೆ ಶತ್ರುಗಳನ್ನು ಎದುರಿಸಿ ಇರಿದು ಅವರನ್ನು ಕಡಿದು ರಣ ಹದ್ದುಗಳಿಗೆ ಕೊಟ್ಟರು. ಯಮನ ಅರಣ್ಯವನ್ನು ಬೆಳೆಸಲು ರಕ್ತದ ಕೆರೆಯ ತೂಬನ್ನೆತ್ತಿದರು.

ಅರ್ಥ:
ಉರುಬು: ಅತಿಶಯವಾದ ವೇಗ; ಹೊಯಿ: ಹೊಡೆ; ಕೈ: ಹಸ್ತ; ದಣಿ: ಆಯಾಸ; ಹೊಕ್ಕು: ಸೇರು; ಎರಗು: ಬಾಗು; ನಿಪ್ಪಸರ: ವೇಗ, ಶೀಘ್ರತೆ; ಮುಕ್ಕು: ನಾಶಮಾಡು; ತಲೆ: ಶಿರ; ಮಿದುಳು: ತಲೆಯ ಭಾಗ; ಜೋಂಡು: ತಲೆಯ ಹೊಟ್ಟು; ಜುರಿತ: ರಕ್ತಸ್ರಾವ; ಜೋಡು: ಕವಚ, ಪಾದರಕ್ಷೆ; ತರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಖಗ: ಪಕ್ಷಿ; ನಿಕರ: ಗುಂಪು; ಇರಿ: ಚುಚ್ಚು; ಕಾಲ: ಯಮ; ಬನ: ಅಡವಿ; ರಕುತ: ನೆತ್ತರು; ಕೆರೆ: ಸರೋವರ; ತೂಬು: ನೀರು ಗಂಡಿ; ರಾಯ: ರಾಜ; ರಾವುತ: ಅಶ್ವಾರೋಹಿ; ಉರುಕು: ಕಂಪಿಸು;

ಪದವಿಂಗಡಣೆ:
ಉರುಬಿ +ಹೊಯಿದರು +ಕೈದಣಿಯೆ +ಹೊಕ್ಕ್
ಎರಗಿದರು +ನಿಪ್ಪಸರದಲಿ +ಮುಕ್ಕ್
ಉರಿಕಿದರು+ ತಲೆ+ಮಿದುಳ +ಜೊಂಡಿನ+ ಜುರಿತ+ ಜೋಡುಗಳ
ತರಿದು+ ಬಿಸುಟರು+ ಖಗ+ನಿಕರಕಾರ್
ಇರಿದು +ಕಾಲನ +ಬನಕೆ +ರಕುತದ
ಕೆರೆಯ +ತೂಬೆತ್ತಿದರು +ಸೇವಣ +ರಾಯ +ರಾವುತರು

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜೊಂಡಿನ ಜುರಿತ ಜೋಡುಗಳ

ಪದ್ಯ ೨೦: ದುಶ್ಯಾಸನನ ಸೇನೆಯ ಸ್ಥಿತಿ ಏನಾಯಿತು?

ಅಸಿಯಲಿಟ್ಟರೆದಂತೆ ಬಲ ನಿ
ಪ್ಪಸರದಲಿ ನುಗ್ಗಾಯ್ತು ನೀಗಿದ
ರಸುವನೀ ದುಶ್ಯಾಸನನ ನಂಬುಗೆಯ ಪರಿವಾರ
ಬಸಿವ ನೆತ್ತರ ಮೆಯ್ಯ ಕರುಳಿನ
ಕುಸುರಿಗಳ ತಲೆಮಿದುಳ ಮೆತ್ತಿಗೆ
ವಸೆಯ ತೊರಳೆಯ ತೊಂಗಲಲಿ ರಂಜಿಸಿತು ರಣಭೂಮಿ (ಕರ್ಣ ಪರ್ವ, ೧೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಕತ್ತಿಯಲ್ಲಿ ಇಟ್ಟು ಅರೆಯಲು, ದುಶ್ಯಾಸನನ ನಂಬುಗೆಯ ಸೇನೆಯು ನುಗ್ಗಾಗಿ ಪ್ರಾಣತೆತ್ತಿತು. ಹರಿವ ರಕ್ತದ ಮೈ, ಕರುಳುಗಳ ಕುಸುರಿ, ತಲೆಯೊಡೆದು ಹೊರಬಂದ ಮಿದುಳಿನ, ಕೊಬ್ಬಿನಗೊಂಚಲು, ಗುಲ್ಮಗಳು ರಣಭೂಮಿಯ ತುಂಬಾ ಕಾಣಿಸಿದವು.

ಅರ್ಥ:
ಅಸಿ: ಕತ್ತಿ; ಅರಿ: ನಾಶಮಾಡು; ಇಡು: ಅಣಿಗೊಳಿಸು; ಬಲ: ಸೈನ್ಯ; ನಿಪ್ಪಸರ: ಅತಿಶಯ, ಹೆಚ್ಚಳ; ನುಗ್ಗು: ನೂಕಾಟ, ನೂಕುನುಗ್ಗಲು; ನೀಗು: ನಿವಾರಿಸಿಕೊಳ್ಳು; ಅರಸು: ರಾಜ; ನಂಬುಗೆ: ವಿಶ್ವಾಸವಿಡು; ಪರಿವಾರ: ಸಂಬಂಧಿಕರು; ಬಸಿವ: ಒಸರು, ಸ್ರವಿಸು; ನೆತ್ತರ: ರಕ್ತ; ಕರುಳು: ಪಚನಾಂಗ; ಕುಸುರಿ: ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ತಲೆ: ಶಿರ; ಮಿದುಳು: ಮಸ್ತಿಷ್ಕ; ತೊರಳೆ: ಗುಲ್ಮ, ಪ್ಲೀಹ; ತೊಂಗಲು: ಗೊಂಚಲು; ರಂಜಿಸು: ಹೊಳೆ, ಪ್ರಕಾಶಿಸು; ರಣಭೂಮಿ: ಯುದ್ಧಭೂಮಿ;

ಪದವಿಂಗಡಣೆ:
ಅಸಿಯಲ್+ಇಟ್ಟರೆದಂತೆ+ ಬಲ+ ನಿ
ಪ್ಪಸರದಲಿ +ನುಗ್ಗಾಯ್ತು +ನೀಗಿದರ್
ಅಸುವನೀ +ದುಶ್ಯಾಸನನ +ನಂಬುಗೆಯ +ಪರಿವಾರ
ಬಸಿವ +ನೆತ್ತರ +ಮೆಯ್ಯ +ಕರುಳಿನ
ಕುಸುರಿಗಳ+ ತಲೆ+ಮಿದುಳ+ ಮೆತ್ತಿಗೆ
ವಸೆಯ +ತೊರಳೆಯ +ತೊಂಗಲಲಿ +ರಂಜಿಸಿತು +ರಣಭೂಮಿ

ಅಚ್ಚರಿ:
(೧) ಅಸಿ, ಅಸು – ಪದಗಳ ಬಳಕೆ
(೨) ನ ಕಾರದ ತ್ರಿವಳಿ ಪದ – ನಿಪ್ಪಸರದಲಿ ನುಗ್ಗಾಯ್ತು ನೀಗಿದರಸುವನೀ