ಪದ್ಯ ೫೯: ಭೀಮನು ಗಾಂಧಾರಿಗೆ ಏನೆಂದು ಬಿನ್ನೈಸಿದನು?

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ (ಗದಾ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾಯೇ, ಹೊರಬೇಕೆಂದರೆ ನಾವು ದುಷ್ಕೀರ್ತಿಯನ್ನು ಹೊರುತ್ತೇವೆ. ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು, ಈ ಅನ್ಯಾಯವನ್ನು ನಾವು ಮಾಡಿರುವುದು ಜಗತ್ತಿಗೇ ಗೊತ್ತಿದೆ, ನೀವು ಮನಸ್ಸನ್ನು ಮುರಿದುಕೊಳ್ಳದೆ ಕೇಳುವುದಾದರೆ ಬಿನ್ನೈಸುತ್ತೇವೆ ಎಂದು ಭೀಮನು ಗಾಂಧಾರಿಗೆ ನುಡಿದನು.

ಅರ್ಥ:
ಹೊರಿಸು: ಧರಿಸು, ಭಾರವನ್ನು ಹೇರು; ದುಷ್ಕೀರ್ತಿ: ಅಪಕೀರ್ತಿ; ನಾಭಿ: ಹೊಕ್ಕಳು; ಎರಗು: ಬೀಳು; ಸಲ್ಲದು: ಸರಿಹೊಂದು, ಒಪ್ಪಿಗೆಯಾಗು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಅರಿಕೆ: ವಿಜ್ಞಾಪನೆ; ಅನ್ಯಾಯ: ಸರಿಯಲ್ಲದ; ಜಗ: ಪ್ರಪಂಚ; ಅರಿ: ತಿಳಿ; ಮನ: ಮನಸ್ಸು; ಮುರಿ: ಸೀಳು; ಅವಧರಿಸು: ಮನಸ್ಸಿಟ್ಟು ಕೇಳು; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಹೊರಿಸುವಡೆ +ದುಷ್ಕೀರ್ತಿ +ನಮ್ಮಲಿ
ಹೊರಿಗೆಯಾಯಿತು +ನಾಭಿಯಿಂ +ಕೆಳಗ್
ಎರಗುವುದು +ಗದೆಯಿಂದ +ಸಲ್ಲದು+ ಶಸ್ತ್ರವಿದ್ಯೆಯಲಿ
ಅರಿಕೆಯಿಂದ್+ಅನ್ಯಾಯವೀ +ಜಗವ್
ಅರಿಯೆ +ನಮ್ಮದು +ತಾಯೆ +ನೀ +ಮನ
ಮುರಿಯದ್+ಅವಧರಿಸುವಡೆ +ಬಿನ್ನಹವೆಂದನಾ+ ಭೀಮ

ಅಚ್ಚರಿ:
(೧) ಹೊರಿ, ಅರಿ – ೧-೨, ೪,೫ ಸಾಲಿನ ಮೊದಲ ಪದ
(೨) ಅರಿ, ಮುರಿ – ಪ್ರಾಸ ಪದ

ಪದ್ಯ ೨೩: ಬಲರಾಮನು ಪಾಂಡವರ ಬಗ್ಗೆ ಏನು ಹೇಳಿದನು?

ಎಲವೆಲವೊ ಪಾಂಡವರಿರಾ ನೀ
ವಳುಪಿದಿರಲಾ ನಾಭಿಯಿಂದವೆ
ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ
ಚಲಿಸಲಾಗದು ಧರ್ಮನಿರ್ಣಯ
ದೊಳಗಿದೊಂದೇ ಭಾಷೆ ಮಾಡಿದಿ
ರಳಿದಿರನ್ಯಾಯದಲಿ ಕೊಂದಿರಿ ಕೌರವೇಶ್ವರನ (ಗದಾ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲವೆಲವೋ ಪಾಂಡವರಿರಾ, ನೀವು ತಪ್ಪಿದಿರಿ, ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು. ಇದು ಧರ್ಮನಿರ್ಣಯ. ಅನ್ಯಾಯದಿಂದ ಕೌರವನನ್ನು ಕೊಂದು ನೀವು ಅಳಿದಿರಿ ಎಂದು ಬಲರಾಮನು ಹೇಳಿದನು.

ಅರ್ಥ:
ಅಳುಪು: ಭಂಗತರು; ನಾಭಿ: ಹೊಕ್ಕಳು; ಕೈ: ಹಸ್ತ; ಸಲ್ಲದು: ಸರಿಯಲ್ಲದು; ಗದೆ: ಮುದ್ಗರ; ಕದನ: ಯುದ್ಧ; ಚಲಿಸು: ಓಡಾಡು; ಧರ್ಮ: ಧಾರಣೆ ಮಾಡಿದುದು; ನಿರ್ಣಯ: ನಿರ್ಧಾರ; ಭಾಷೆ: ನುಡಿ; ಅಳಿ: ನಾಶ; ನ್ಯಾಯ: ಯೋಗ್ಯವಾದುದು; ಕೊಂದು: ಕೊಲ್ಲು;

ಪದವಿಂಗಡಣೆ:
ಎಲವೆಲವೊ +ಪಾಂಡವರಿರಾ +ನೀವ್
ಅಳುಪಿದಿರಲಾ +ನಾಭಿಯಿಂದವೆ
ಕೆಳಗೆ +ಕೈ +ಮಾಡುವುದು +ಸಲ್ಲದು+ ಗದೆಯ +ಕದನದಲಿ
ಚಲಿಸಲಾಗದು +ಧರ್ಮ+ನಿರ್ಣಯ
ದೊಳಗಿದ್+ಒಂದೇ +ಭಾಷೆ +ಮಾಡಿದಿರ್
ಅಳಿದಿರ್+ಅನ್ಯಾಯದಲಿ +ಕೊಂದಿರಿ +ಕೌರವೇಶ್ವರನ

ಅಚ್ಚರಿ:
(೧) ಗದಾಯುದ್ಧದ ನಿಯಮ: ನಾಭಿಯಿಂದವೆ ಕೆಳಗೆ ಕೈ ಮಾಡುವುದು ಸಲ್ಲದು ಗದೆಯ ಕದನದಲಿ

ಪದ್ಯ ೪೩: ಅರ್ಜುನನು ಕೃಷ್ಣನಲ್ಲಿ ಏನೆಂದು ಬೇಡಿದನು?

ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ (ಗದಾ ಪರ್ವ,೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಬಳಿಗೆ ಹೋಗಿ, ಭೀಮನು ಜೀವಿಸಿದ್ದಾನೆ, ಶತ್ರುವು ಹಲವು ಬಾರಿ ಅವನ ನಾಭಿ ಮತ್ತು ಜಂಘೆಗೂ ಹೊಡೆದಿದ್ದಾನೆ. ಶತ್ರುವಿನ ವಧೆ ಹೇಗಾಗಬೇಕೆಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ದೇವ: ಭಗವಂತ; ಬೆಸಸು: ಹೇಳು; ಅನಿಲಸೂನು: ಭೀಮ; ಸಜೀವ: ಪ್ರಾಣವಿರುವ; ಅಹಿತ: ವೈರಿ; ಪ್ರಸ್ತಾವ: ವಿಚಾರ ಹೇಳುವುದು; ಕರುಣಿಸು: ದಯೆ ತೋರು; ಧರ್ಮ: ಧಾರಣೆ ಮಾಡಿದುದು; ವಿಕೃತಿ: ಬದಲಾವಣೆ, ವ್ಯತ್ಯಾಸ, ಕುರೂಪ; ಕಂಡು: ನೋಡು; ನಾಭಿ: ಹೊಕ್ಕಳು; ಜಂಘೆ: ತೊಡೆ; ಡಾವರಿಸು: ಹೊಡೆ; ಹಲವು: ಬಹಳ; ಬಾರಿ: ಸಾರ್ತಿ; ಜಯ: ಗೆಲುವು; ಅವಲಂಬನ: ಆಶ್ರಯ, ಆಸರೆ; ಕೃಪೆ: ದಯೆ;

ಪದವಿಂಗಡಣೆ:
ದೇವ +ಬೆಸಸಿನ್ನ್+ಅನಿಲಸೂನು +ಸ
ಜೀವನ್+ಅಹಿತನಿಬರ್ಹಣ+ ಪ್ರ
ಸ್ತಾವವನು +ಕರುಣಿಸುವುದ್+ಆತನ +ಧರ್ಮ+ವಿಕೃತಿಗ
ನೀವು +ಕಂಡಿರೆ +ನಾಭಿ +ಜಂಘೆಗೆ
ಡಾವರಿಸಿದನು +ಹಲವು +ಬಾರಿ +ಜಯ
ಅವಲಂಬನವೆಂತು +ಕೃಪೆಮಾಡೆಂದನಾ +ಪಾರ್ಥ

ಅಚ್ಚರಿ:
(೧) ಕರುಣಿಸು, ಕೃಪಮಾಡು – ಸಾಮ್ಯಾರ್ಥ ಪದಗಳು

ಪದ್ಯ ೩೫: ಕೌರವನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ (ಗದಾ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಭೀಮನ ತಿವಿತವನ್ನು ತಪ್ಪಿಸಿಕೊಂಡು ಕೌರಾನು ನಾಭಿಗೆ ಗುರಿಯಿಟ್ಟು ಜಂಘೆಗೆ ಹೂಡಿ, ಮೇಲೆ ಹಾರಿ ಭೀಮನ ತಲೆ, ಭುಜಗಳಿದ್ದ ಸೀಸಕ, ಕವಚಗಳನ್ನು ಪುಡಿಪುಡಿಯಾಗುವಂತೆ ಹೊಡೆದು ಗರ್ಜಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳ್: ಆಲಿಸು; ತಿವಿ: ಚುಚ್ಚು; ತಪ್ಪಿಸು: ಸುಳ್ಳಾಗು; ಕವಿ: ಆವರಿಸು; ನಾಭಿ: ಹೊಕ್ಕಳು; ತೋರು: ಪ್ರಕಟಿಸು; ಜಂಘೆ: ತೊಡೆ; ಝಳಪ: ವೇಗ; ಲವಣಿ: ಕಾಂತಿ; ಲಳಿ: ರಭಸ; ಎದ್ದು: ಮೇಲೆ ಬಂದು; ಹೊಯ್ದು: ಹೊಡೆ; ಪವನಜ: ಭೀಮ; ಭುಜ: ಬಾಹು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ; ಜಿಗಿಜಿಯಾಗಿ: ಪುಡಿಯಾಗಿ; ಬೀಳು: ಎರಗು, ಬಾಗು; ಬೊಬ್ಬಿರಿ: ಗರ್ಜಿಸು; ಅರಸ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್ +ಭೀಮಸೇನನ
ತಿವಿಗುಳನು+ ತಪ್ಪಿಸಿ+ ಸುಯೋಧನ
ಕವಿದು +ನಾಭಿಗೆ +ತೋರಿ +ಜಂಘೆಗೆ +ಹೂಡಿ +ಝಳಪದಲಿ
ಲವಣಿಯಲಿ +ಲಳಿಯೆದ್ದು+ ಹೊಯ್ದನು
ಪವನಜನ +ಭುಜ+ಶಿರವ +ಸೀಸಕ
ಕವಚವ+ಜಿಗಿಜಿಯಾಗೆ +ಬೀಳೆನುತ್+ಅರಸ +ಬೊಬ್ಬಿರಿದ

ಅಚ್ಚರಿ:
(೧) ಲ ಕಾರದ ಜೋಡಿ ಪದ – ಲವಣಿಯಲಿ ಲಳಿಯೆದ್ದು
(೨) ಅವನಿಪತಿ, ಅರಸ – ಸಮಾನಾರ್ಥಕ ಪದ

ಪದ್ಯ ೨೭: ವಿಶ್ವರೂಪದಲ್ಲಿ ಯಾರು ರಾರಾಜಿಸುತ್ತಿದ್ದರು?

ಚರಣದುಂಗುಟದಲ್ಲಿ ದೇವರು
ತುರುಗಿದರು ನೊಸಲಿನೊಳು ಕಮಲಜ
ನುರದೊಳಗ್ಗದ ರುದ್ರನಾಸ್ಯದೊಳಗ್ನಿ ವಾಯುಗಳು
ಬೆರಳೊಳಿಂದ್ರಾದಿಗಳು ನಯನಾಂ
ಬುರುಹದೊಳು ರವಿ ನಾಭಿಯೊಳು
ವರಭುಜಾಗ್ರದೊಳಖಿಳ ದಿಕ್ಪಾಲಕರು ರಂಜಿಸಿತು (ಉದ್ಯೋಗ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೃಷ್ಣನ ಪಾದಗಳ ಅಂಗುಷ್ಟದಲ್ಲಿ ದೇವತೆಗಳ ಸಮೂಹವು ಸೇರಿತ್ತು, ಹಣೆಯಲ್ಲಿ ಬ್ರಹ್ಮನೂ, ಎದೆಯಲ್ಲಿ ರುದ್ರನು, ಮುಖದಲ್ಲಿ ಅಗ್ನಿ, ವಾಯುಗಳೂ, ಬೆರಳುಗಳಲ್ಲಿ ಇಂದ್ರನೇ ಮೊದಲಾದವರೂ, ಕಣ್ಣಿನಲ್ಲಿ ಸೂರ್ಯನೂ, ನಾಭಿಯಲ್ಲಿ ಭುಜದಲ್ಲಿ ಅಷ್ಟದಿಕ್ಪಾಲಕರು ರಾರಾಜಿಸುತ್ತಿದ್ದರು.

ಅರ್ಥ:
ಚರಣ: ಪಾದ; ಅಂಗುಟ: ಅಂಗುಷ್ಟ, ಹಿರಿಬೆರಳು; ದೇವ: ಭಗವಂತ; ತುರುಗು: ಸಂದಣಿ, ದಟ್ಟಣೆ; ನೊಸಲು: ಹಣೆ, ಲಲಾಟ; ಕಮಲಜ: ಬ್ರಹ್ಮ; ಕಮಲ: ತಾವರೆ; ಉರ: ಎದೆ, ವಕ್ಷಸ್ಥಳ; ಅಗ್ಗ: ಶ್ರೇಷ್ಠ; ರುದ್ರ: ಶಿವ; ಆಸ್ಯ: ಮುಖ, ಬಾಯಿ; ಅಗ್ನಿ: ಬೆಂಕಿ; ವಾಯು: ಗಾಳಿ, ಅನಿಲ; ಬೆರಳು: ಅಂಗುಲಿ; ಇಂದ್ರ: ಶಕ್ರ; ಆದಿ: ಮೊದಲಾದ; ನಯನ: ಕಣ್ಣು; ಅಂಬುರುಹ: ಕಮಲ; ರವಿ: ಭಾನು; ನಾಭಿ: ಹೊಕ್ಕಳು; ವರ: ಶ್ರೇಷ್ಠ; ಭುಜ: ತೋಳು, ಬಾಹು; ಅಗ್ರ: ತುದಿ; ಅಖಿಲ: ಎಲ್ಲಾ; ದಿಕ್ಕು: ದೆಸೆ; ಪಾಲಕ: ಒಡೆಯ; ರಂಜಿಸು: ಶೋಭಿಸು;

ಪದವಿಂಗಡಣೆ:
ಚರಣದ್+ಉಂಗುಟದಲ್ಲಿ +ದೇವರು
ತುರುಗಿದರು +ನೊಸಲಿನೊಳು +ಕಮಲಜನ್
ಉರದೊಳ್+ಅಗ್ಗದ +ರುದ್ರನ್+ಆಸ್ಯದೊಳ್+ಅಗ್ನಿ+ ವಾಯುಗಳು
ಬೆರಳೊಳ್+ಇಂದ್ರಾದಿಗಳು +ನಯನ
ಅಂಬುರುಹದೊಳು +ರವಿ+ ನಾಭಿಯೊಳು
ವರಭುಜಾಗ್ರದೊಳ್+ಅಖಿಳ+ ದಿಕ್ಪಾಲಕರು +ರಂಜಿಸಿತು

ಅಚ್ಚರಿ:
(೧) ವಿಶ್ವರೂಪದಲ್ಲಿ ಕಂಡ ದೇವಾನುದೇವತೆಗಳ ವಿವರ ನೀಡುವ ಪದ್ಯ
(೨) ಕಮಲ, ಅಂಬುರುಹ – ಸಮನಾರ್ಥಕ ಪದ
(೩) ಆಸ್ಯ, ನಾಭಿ, ನಯನ, ಉಂಗುಷ್ಟ, ನೊಸಲು, ಉರ, ಬೆರಳು, ಭುಜ – ದೇಹದ ಭಾಗಗಳನ್ನು ಹೆಸರಿಸುವ ಪದ್ಯ