ಪದ್ಯ ೭: ಭೀಮನು ಕೌರವನನ್ನು ಹೇಗೆ ಹಂಗಿಸಿದ?

ಅವನಿಪತಿ ಕೇಳೀಚೆಯಲಿ ಕೌ
ರವನ ಹೊರಗೈತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ
ಪವನಸುತ ನುಡಿಸಿದನಲೈ ನಿ
ನ್ನವನನೇನೈ ಭೂಪ ಕೊಡುವೈ
ನವಗೆ ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ (ಗದಾ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಇತ್ತ ಭೀಮನು ತನ್ನೆರಡು ಕೈಗಳಿಂದ ಗದೆಯನ್ನು ಹಿಡಿದು ಮಹಾಗರ್ವದಿಂದ ಕೌರವನ ಬಳಿಗೆ ಹೋಗಿ, ರಾಜಾ ಈಗ ನೀನೇನು ಹೇಳುತ್ತೀ? ನಮಗೆ ಅರ್ಧ ರಾಜ್ಯವನ್ನು ಕೊಡುವೆಯೋ ಹೇಗೆ ಎಂದು ಹಂಗಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಈಚೆ: ಈ ಭಾಗ; ಐತಂದು: ಬಂದು ಸೇರಿ; ನಿಂದು: ನಿಲ್ಲು; ಸವಡಿ: ಜೊತೆ, ಜೋಡಿ; ಕೈ: ಹಸ್ತ; ಗದೆ: ಮುದ್ಗರ; ಅಣಸು: ಹಂಗಿಸು; ಗಾಢ: ಬಹಳ; ಗರ್ವ: ಅಹಂಕಾರ; ಪವನಸುತ: ವಾಯುಪುತ್ರ (ಭೀಮ); ನುಡಿ: ಮಾತಾಡು; ಭೂಪ: ರಾಜ; ಕೊಡು: ನೀಡು; ನೆಲ: ಭೂಮಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ನಾಚಿಕೆ: ಲಜ್ಜೆ;

ಪದವಿಂಗಡಣೆ:
ಅವನಿಪತಿ +ಕೇಳ್+ಈಚೆಯಲಿ +ಕೌ
ರವನ +ಹೊರಗೈತಂದು +ನಿಂದನು
ಸವಡಿ+ಕೈ+ಗದೆ+ಅಣಸುಗಲ್ಲದ+ ಗಾಢ+ಗರ್ವದಲಿ
ಪವನಸುತ+ ನುಡಿಸಿದನಲೈ +ನಿ
ನ್ನವನನ್+ಏನೈ +ಭೂಪ +ಕೊಡುವೈ
ನವಗೆ+ ನೆಲನ್+ಅರ್ಧವನು +ನಾಚಿಕೆಯೇಕೆ +ನುಡಿಯೆಂದ

ಅಚ್ಚರಿ:
(೧) ನ ಕಾರದ ಸಾಲು ಪದಗಳು – ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ
(೨) ಭೀಮನು ನಿಂತ ಪರಿ – ನಿಂದನು ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ

ಪದ್ಯ ೪೧: ನಾರಾಯಣಾಸ್ತ್ರವು ಯಾವ ಪ್ರಮಾಣ ಮಾಡಿತು?

ಏಕೆ ನಾಚಿಕೆ ಧರ್ಮಹಾನಿ
ವ್ಯಾಕುಳತೆಯಿನ್ನೇಕೆ ವೈದಿಕ
ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ
ಏಕೆ ಭಯ ನಮಗಿನ್ನು ಕೈದುವ
ನೂಕಿದವರನು ಹೆಂಗಸನು ತಾ
ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರವು, ನಾಚಿಕೆಯೇಕೆ, ಧರ್ಮಹಾನಿಯಾಯಿತೆಂಬ ನೋವೇಕೆ? ವೈದಿಕ ಲೌಕಿಕಗಳು ಏನು ಮಾಡಿಯಾವು? ಸಾಯುವುದಕ್ಕೆ ಯಾವ ಕುಲ? ಆಯುಧವನ್ನು ಹಿಡಿಯದವರನ್ನು ಹೆಂಗುಸನ್ನು ಮುಟ್ಟಿದರೆ ಶ್ರೀಕೃಷ್ಣ ಪಾದದಣೆ ಎಂದಿತು.

ಅರ್ಥ:
ನಾಚಿಕೆ: ಲಜ್ಜೆ, ಸಿಗ್ಗು; ಧರ್ಮ: ಧಾರಣೆ ಮಾಡಿದುದು; ಹಾನಿ: ನಷ್ಟ; ವ್ಯಾಕುಲ: ದುಃಖ, ವ್ಯಥೆ, ಗಾಬರಿ; ವೈದಿಕ: ವೇದಗಳನ್ನು ಬಲ್ಲವನು; ಲೌಕಿಕ: ಪ್ರಪಂಚಕ್ಕೆ ಸಂಬಂಧಿಸಿದ; ಏಗು: ನಿಭಾಯಿಸು; ಜೀವ: ಪ್ರಾಣ; ವ್ರಯ: ಖರ್ಚು; ಕುಲ: ವಂಶ; ಭಯ: ಅಂಜಿಕೆ; ಕೈದು: ಆಯುಧ; ನೂಕು: ತಳ್ಳು; ಹೆಂಗಸು: ಹೆಣ್ಣು; ಸೋಕು: ಮುಟ್ಟು; ಮುರಹರ: ಕೃಷ್ಣ; ಪದ: ಚರಣ; ಆಣೆ: ಪ್ರಮಾಣ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಏಕೆ+ ನಾಚಿಕೆ +ಧರ್ಮಹಾನಿ
ವ್ಯಾಕುಳತೆ+ಇನ್ನೇಕೆ +ವೈದಿಕ
ಲೌಕಿಕವದ್+ಏಗುವುವು +ಜೀವ+ವ್ರಯಕೆ +ಕುಲವುಂಟೆ
ಏಕೆ +ಭಯ +ನಮಗಿನ್ನು +ಕೈದುವ
ನೂಕಿದವರನು +ಹೆಂಗಸನು +ತಾ
ಸೋಕಿದರೆ +ಮುರಹರನ +ಪದದಾಣೆಂದುದ್+ಅಮಳಾಸ್ತ್ರ

ಅಚ್ಚರಿ:
(೧) ಸಾವು ಅಂತ ಹೇಳಲು ಜೀವವ್ರಯ ಪದದ ಬಳಕೆ
(೨) ಆಯುಧವಿಲ್ಲದವರನ್ನು ಎಂದು ಹೇಳಲು ಕೈದುವ ನೂಕಿದವರನು ಪದದ ಬಳಕೆ

ಪದ್ಯ ೬: ಅಭಿಮನ್ಯುವಿನ ಯುದ್ಧವು ಯಾರನ್ನು ನಾಚಿಸಿತು?

ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿಪ ಕವಿ ಯಾರಿನ್ನು ಪಾರ್ಥ ಕುಮಾರನಾಹವವ (ದ್ರೋಣ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ರಥಗಳ ರಾಶಿಯನ್ನು ಕಂಡು ಮೇರುಪರ್ವತ ನಾಚಿತು, ಹಾರಿದ ತಲೆಗಳು ತುಂಬಿದುದರಿಂದ ಆಕಾಶ ನಾಚಿತು, ಹರಿದು ಕಡಲಾದ ರಕ್ತವು ಸಮುದ್ರದ ಬಿಂಕವನ್ನು ಬಿಡಿಸಿತು, ಅಬ್ಬಬ್ಬಾ ಶಿವ ಶಿವಾ ಅಭಿಮನ್ಯುವಿನ ಯುದ್ಧವನ್ನು ವರ್ಣಿಸುವ ಕರಿ ಯಾರು?

ಅರ್ಥ:
ಕೆಡೆ: ಬೀಳು, ಕುಸಿ; ರಥ: ಬಂಡಿ, ತೇರು; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಅಡಸು: ಬಿಗಿಯಾಗಿ ಒತ್ತು; ನಾಚಿಕೆ: ಲಜ್ಜೆ; ಅಭ್ರ: ಆಗಸ; ಇಡಿ: ಚಚ್ಚು, ಕುಟ್ಟು; ತಲೆ: ಶಿರ; ಬೀರು: ಒಗೆ, ಎಸೆ; ಭಂಗ: ಮುರಿಯುವಿಕೆ; ಅನುಪಮ: ಹೋಲಿಕೆಗೆ ಮೀರಿದ; ಅಂಬರ: ಆಗಸ; ಕಡಲು: ಸಾಗರ; ಅರುಣಾಂಬು: ಕೆಂಪಾದ ನೀರು (ರಕ್ತ); ಜಲಧಿ: ಸಾಗರ; ಬಿಡಿಸು: ತೊರೆ; ಬಿಂಕ: ಗರ್ವ, ಜಂಬ; ನುಡಿ: ಮಾತು; ಕವಿ: ಆವರಿಸು; ಕುಮಾರ: ಮಗ; ಆಹವ: ಯುದ್ಧ;

ಪದವಿಂಗಡಣೆ:
ಕೆಡೆದ +ರಥ +ಸಲೆ +ಕಾಂಚನ+ಅದ್ರಿಯನ್
ಅಡಸಿದವು +ನಾಚಿಕೆಯನ್+ಅಭ್ರದೊಳ್
ಇಡಿಯೆ +ತಲೆ +ಬೀರಿದವು +ಭಂಗವನ್+ಅನುಪಮ+ಅಂಬರಕೆ
ಕಡಲುವರಿವ್+ಅರುಣಾಂಬು +ಜಲಧಿಗೆ
ಬಿಡಿಸಿದವು+ ಬಿಂಕವನು +ಶಿವ +ಶಿವ
ನುಡಿಪ +ಕವಿ +ಯಾರಿನ್ನು +ಪಾರ್ಥ +ಕುಮಾರನ್+ಆಹವವ

ಅಚ್ಚರಿ:
(೧) ರೂಪಕದ ಪ್ರಯೋಗ – ಕೆಡೆದ ರಥ ಸಲೆ ಕಾಂಚನಾದ್ರಿಯನಡಸಿದವು; ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ; ಕಡಲುವರಿವರುಣಾಂಬು ಜಲಧಿಗೆ ಬಿಡಿಸಿದವು ಬಿಂಕವನು

ಪದ್ಯ ೪: ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ (ದ್ರೋಣ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಬಾಣಗಳನ್ನು ನೋಡಿ, ದಿಕ್ಕು ದಿಕ್ಕುಗಳಲ್ಲಿ ಕವಿದು ಬರುವ ಬಾಣಗಳ ಅರಣ್ಯಕ್ಕೆ ತಲೆಗೆ ಹರಿಗೆಯನ್ನು ಹಿಡಿದು ತಮ್ಮ ಪ್ರಾಣವನ್ನು ಮಾರಿಕೊಂಡ ರಾಜರ ರಾವುತರು ಅಭಿಮನ್ಯುವನ್ನು ಹೊಡೆದರು. ಅಭಿಮನ್ಯುವಿನ ಬಾಣಗಳ ನೀರಿನಲ್ಲಿ ಅವರು ತೇಲಿಹೋದರು. ನಾಚಿಕೆಪಟ್ಟು ಓಡಿಹೋದರು. ಯುದ್ಧವು ಅಸಮವಾಯಿತು, ಅಭಿಮನ್ಯುವಿನ ಪರಾಕ್ರಮಕ್ಕೆ ಅವರು ಯಾರೂ ಸಮವಾಗಲಿಲ್ಲ.

ಅರ್ಥ:
ಎಸಲು: ಚಿಗುರು; ತಲೆವರಿಗೆ: ಗುರಾಣಿ; ಕವಿ: ಆವರಿಸು; ದೆಸೆ: ದಿಕ್ಕು; ಹಳುವು: ಕಾಡು; ಔಕು: ತಳ್ಳು; ಅತಿರಥ: ಪರಾಕ್ರಮಿ; ಉಸುರು: ಜೀವ; ಮಾರಿ: ಕ್ಷುದ್ರ ದೇವತೆ; ಹೊಯ್ದು: ಹೊಡೆ; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನುಸುಳು: ಇಕ್ಕಟ್ಟಾದ ಸಂದಿಯಲ್ಲಿ ತೂರುವಿಕೆ; ನಾಚಿಕೆ: ಲಜ್ಜೆ; ವಿಶಿಖ: ಬಾಣ, ಅಂಬು; ಜಲ: ನೀರು; ತೊಳೆ: ಸ್ವಚ್ಛಮಾಡು; ಅಸಮ: ಸಮವಲ್ಲದ; ಸಂಗರ: ಯುದ್ಧ; ಇದಿರು: ಎದುರು;

ಪದವಿಂಗಡಣೆ:
ಎಸಲು +ತಲೆವರಿಗೆಯಲಿ +ಕವಿದುದು
ದೆಸೆಯ +ಹಳುವಿಂಗ್+ಔಕುವ್+ಅತಿರಥರ್
ಉಸುರು+ಮಾರಿಗಳ್+ಏರಿ +ಹೊಯ್ದರು +ರಾಯ +ರಾವುತರು
ನುಸುಳಿದರು +ನಾಚಿಕೆಯಲ್+ಆತನ
ವಿಶಿಖ+ಜಲದಲಿ +ತೊಳೆದರ್+ಅತಿರಥರ್
ಅಸಮ +ಸಂಗರವಾಯ್ತು +ಮತ್ತ್+ಅಭಿಮನ್ಯುವ್+ಇದಿರಿನಲಿ

ಅಚ್ಚರಿ:
(೧) ಬಾಣದ ನೀರಿನಲ್ಲಿ ತೇಲಿದರು ಎಂದು ಹೇಳುವ ಪರಿ – ನುಸುಳಿದರು ನಾಚಿಕೆಯಲಾತನ ವಿಶಿಖಜಲದಲಿ ತೊಳೆದರತಿರಥ

ಪದ್ಯ ೧೯: ಕೃಷ್ಣನ ಯಾವ ಪರಾಕ್ರಮವನ್ನು ವರ್ಣಿಸಲಿಲ್ಲ ಎಂದು ಶಿಶುಪಾಲ ಹೇಳಿದ?

ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಭೀಷ್ಮ ನೀನು ಈ ಯಾದವನ ಸಮಸ್ತ ಪರಾಕ್ರಮದ ಮೋಸದ ಕೃತ್ಯಗಳನ್ನೆಲ್ಲಾ ವಿವರವಾಗಿ ವೈಭವಪೂರ್ಣವಾಗಿ ಹೇಳಿದ, ಆದರೆ ಗೋವಳರ ಹೆಂಡಿರ ಜೊತೆಗೆ ಇವನು ಮಾಡಿದ ಹಾದರವನ್ನು ಏಕೆ ವಿವರಿಸಲಿಲ್ಲ, ಅಯ್ಯೋ ನೀನಗೇಕೆ ನಾಚಿಕೆ ಎಂದು ಶಿಶುಪಾಲನು ಮೂದಲಿಸಿದನು.

ಅರ್ಥ:
ಆದರಿಸು: ಗೌರವಿಸು; ಬಣ್ಣಿಸು: ವರ್ಣಿಸು; ನಾಚು: ನಾಚಿಕೆಪಡು, ಸಿಗ್ಗಾಗು; ಕೌಳಿಕ:ಕಟುಕ, ಕಸಾಯಿಗಾರ, ಮೋಸ; ಪರಾಕ್ರಮ: ಶೌರ್ಯ; ವಾದಿ: ತರ್ಕಮಾಡುವವನು; ಸಮಸ್ತ: ಎಲ್ಲಾ; ಗುಣ: ನಡತೆ, ಸ್ವಭಾವ; ವಿಸ್ತಾರ: ವೈಶಾಲ್ಯ; ವೈಭವ: ಶಕ್ತಿ, ಸಾಮರ್ಥ್ಯ, ಆಡಂಬರ; ಗೋವಳ: ಗೋಪಾಲಕ; ಹೆಂಡಿರ: ಭಾರ್ಯ; ಹಾದರ: ವ್ಯಭಿಚಾರ, ಜಾರತನ; ಹೆಕ್ಕಳ: ಹೆಚ್ಚಳ, ಅತಿಶಯ; ಅಕಟ: ಅಯ್ಯೋ; ನಾಚಿಕೆ: ಲಜ್ಜೆ, ಸಿಗ್ಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಆದರಿಸಿ +ಬಣ್ಣಿಸಿದೆ +ನಾಚದೆ
ಯಾದವನ +ಕೌಳಿಕ +ಪರಾಕ್ರಮವ್
ಆದಿಯಾದ +ಸಮಸ್ತಗುಣ +ವಿಸ್ತಾರ +ವೈಭವವ
ಆದರ್+ಆ+ ಗೋವಳರ +ಹೆಂಡಿರ
ಹಾದರದ +ಹೆಕ್ಕಳವ +ಬಣ್ಣಿಸ
ದಾದೆ+ ನಿನಗೇಕ್+ಅಕಟ +ನಾಚಿಕೆ+ಎಂದನಾ +ಚೈದ್ಯ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಂಡಿರ ಹಾದರದ ಹೆಕ್ಕಳವ
(೨) ಬಣ್ಣಿಸಿದೆ, ಬಣ್ಣಿಸದಾದೆ – ಪದಗಳ ಬಳಕೆ
(೩) ಆದರಾ, ಹಾದರ – ಪದಗಳ ಬಳಕೆ