ಪದ್ಯ ೪೪: ಧರ್ಮಜನು ತಮ್ಮ ಗೆಲುವಿಗೆ ಕಾರಣವನ್ನು ಹೇಗೆ ವಿವರಿಸಿದನು?

ಅವರೊಳವಗುಣವೇ ಚಿರಂತನ
ಭವದ ಕಿಲ್ಬಿಷ ಕರ್ಮಪಾಕ
ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ
ಎವಗೆ ರಚಿಸಿತು ರಾಜ್ಯವಿಭ್ರಂ
ಶವನು ತತ್ಸುಕೃತೋದಯಪ್ರಾ
ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ (ಗದಾ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ಧರ್ಮಜನು, ನಿಮ್ಮ ಮಕ್ಕಲಲ್ಲಿ ಎಂತಹ ಅವಗುಣ? ನಮ್ಮ ಅನೇಕ ಜನ್ಮಗಲ ಸಂಚಿತ ಕರ್ಮಫಲವೇ ಅವನಿಂದ ಇಂತಹದನ್ನು ಮಾಡಿಸಿತು. ರಾಜ್ಯ ಭ್ರಷ್ಟರಾದೆವು. ಅನೇಕ ಜನ್ಮಗಳ ಸಂಚಿತ ಸುಕೃತ ಫಲವೇ ನಮ್ಮನ್ನು ಗೆಲ್ಲಿಸಿತು ಎಂದು ಧರ್ಮಜನು ನುಡಿದನು.

ಅರ್ಥ:
ಅವಗುಣ: ದುರ್ಗುಣ, ದೋಷ; ಚಿರಂತನ: ಯಾವಾಗಲು; ಭವ: ಇರುವಿಕೆ, ಅಸ್ತಿತ್ವ; ಕಿಲ್ಭಿಷ: ಪಾಪ; ಕರ್ಮಪಾಕ: ಕರ್ಮಫಲ; ಪ್ರವರ: ಪೀಳಿಗೆ, ವಂಶ; ಸವ್ಯ: ದಕ್ಷಿಣ ಭಾಗ, ತೆಂಕಣ ದಿಕ್ಕು; ಮಾತ್ರ: ಸವ್ಯಪದೇಶ: ಕಪಟ, ಸಂಚಿಕೆ; ರಚಿಸು: ನಿರ್ಮಿಸು; ರಾಜ್ಯ: ರಾಷ್ಟ್ರ; ವಿಭ್ರಂಶ: ಕೆಳಕ್ಕೆ ಬೀಳುವುದು, ಪತನ; ಸುಕೃತ: ಒಳ್ಳೆಯ; ಉದಯ: ಹುಟ್ಟು; ಪ್ರಭಾವ: ಬಲ, ಪರಾಕ್ರಮ; ತಿರುಗು: ಸುತ್ತು; ನಯ: ನುಣುಪು, ಮೃದುತ್ವ; ಸುತ: ಮಗ; ನುಡಿ: ವಚನ;

ಪದವಿಂಗಡಣೆ:
ಅವರೊಳ್+ಅವಗುಣವೇ +ಚಿರಂತನ
ಭವದ +ಕಿಲ್ಬಿಷ +ಕರ್ಮಪಾಕ
ಪ್ರವರ +ದುರಿಯೋಧನನ +ಸವ್ಯಪದೇಶ+ಮಾತ್ರದಲಿ
ಎವಗೆ +ರಚಿಸಿತು +ರಾಜ್ಯ+ವಿಭ್ರಂ
ಶವನು +ತತ್+ಸುಕೃತೋದಯ+ಪ್ರಾ
ಭವವೆ+ ತಿರುಗಿಸಿತೆಂದು+ ನಯದಲಿ +ಧರ್ಮಸುತ +ನುಡಿದ

ಅಚ್ಚರಿ:
(೧) ದುರ್ಯೋಧನನ ಸ್ವಭಾವದ ಕಾರಣ – ಚಿರಂತನ ಭವದ ಕಿಲ್ಬಿಷ ಕರ್ಮಪಾಕ ಪ್ರವರ ದುರಿಯೋಧನನ ಸವ್ಯಪದೇಶ

ಪದ್ಯ ೩೧: ವೇದವ್ಯಾಸರು ಯಾವ ಸಲಹೆಯನ್ನು ನೀಡಿದರು?

ಹರಿಸಹಿತ ಪಾಂಡವರದೊಂದೆಸೆ
ಯಿರೆ ಚತುರ್ವಿಧವಾದುದೀ ಮೋ
ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ
ಧರಣಿಪನ ಕಾಣಿಸುವುದಂಧನ
ನಿರುಪಮಿತ ಶೋಕಾನಳನ ಸಂ
ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ (ಗದಾ ಪರ್ವ, ೧೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ಪಾಂಡವರು ಒಂದು ಕಡೆ ಇದ್ದರು. ವೇದವ್ಯಾಸ ವಿದುರರು ಎಲ್ಲಾ ಕಡೆಗೆ ಓಡಾಡುತ್ತಿದ್ದರು. ವೇದವ್ಯಾಸರು ಧೃತರಾಷ್ಟ್ರನನ್ನು ಧರ್ಮಜನನ್ನು ತೋರಿಸಿ, ಉಪಮೇಯವಿಲ್ಲದೆ ಧೃತರಾಷ್ಟ್ರನ ಶೋಕವನ್ನು ಪರಿಹರಿಸಬೇಕು ಎಂದು ಹೇಳಿದರು.

ಅರ್ಥ:
ಹರಿ: ವಿಷ್ಣು, ಕೃಷ್ಣ; ಸಹಿತ: ಜೊತೆ; ಎಸೆ: ಒಗೆ, ಕಡೆ; ಚತುರ್ವಿಧ: ನಾಲ್ಕು ರೀತಿ; ಮೋಹರ: ಯುದ್ಧ; ಎಡೆ: ಬಿಚ್ಚಿ ತೋರು; ಆಟ: ಕ್ರೀಡೆ; ಧರಣಿಪ: ರಾಜ; ಕಾಣಿಸು: ತೋರು; ಅಂಧ: ಕುರುಡ; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಶೋಕ: ದುಃಖ; ಅನಲ: ಬೆಂಕಿ; ಸಂಹರಿಸು: ನಾಶಮಾಡು; ನಯ: ರೀತಿ; ನುಡಿ: ಮಾತಾಡು;

ಪದವಿಂಗಡಣೆ:
ಹರಿ+ಸಹಿತ+ ಪಾಂಡವರದೊಂದ್+ಎಸೆ
ಯಿರೆ +ಚತುರ್ವಿಧವಾದುದ್+ಈ+ ಮೋ
ಹರದೊಳಾಯ್ತ್+ಎಡೆಯಾಟ +ವೇದವ್ಯಾಸ +ವಿದುರರಿಗೆ
ಧರಣಿಪನ +ಕಾಣಿಸುವುದ್+ಅಂಧನ
ನಿರುಪಮಿತ+ ಶೋಕಾನಳನ +ಸಂ
ಹರಿಸುವುದು +ನಯವೆಂದು +ವೇದವ್ಯಾಸಮುನಿ +ನುಡಿದ

ಅಚ್ಚರಿ:
(೧) ದುಃಖದ ತೀವ್ರತೆ ಎಂದು ಹೇಳುವ ಪರಿ – ಶೋಕಾನಳ

ಪದ್ಯ ೧೨: ಯಾರಿಗೆ ವೀಳೆಯವನ್ನು ನೀಡಲಾಯಿತು?

ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ (ದ್ರೋಣ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಈ ಬಂಗಾರದ ಬಟ್ಟಲಿನಲ್ಲಿ ಸಂಶಪ್ತಕರಿಗೆ ವೀಳೆಯವನ್ನು ಕೊಟ್ಟು, ನಮ್ಮ ಸೇನೆಯಲ್ಲಿ ನೀವೇ ವಿಜಯಶಾಲಿಗಳು. ಯುದ್ಧದಲ್ಲಿ ಇನ್ನು ಜಯವನ್ನು ಸಾಧಿಸಬಹುದು ಎಂದು ದ್ರೋಣನು ಹೊಗಳಿದನು.

ಅರ್ಥ:
ನಯ: ಶಾಸ್ತ್ರ ರಾಜನೀತಿ, ನುಣುಪು; ಹೊಂಬಟ್ಟಲು: ಚಿನ್ನದ ಪಾತ್ರೆ; ವೀಳೆಯ: ತಾಂಬೂಲ; ಅನಿಬರು: ಅಷ್ಟುಜನ; ಮರು: ಮತ್ತೆ, ಪುನಃ; ಮಾತು: ವಾಣಿ; ವಿಜಯ: ಗೆಲುವು; ಜಯ: ಗೆಲುವು; ಆಹ: ಆಗುವವ; ನಿರ್ಣಯ: ನಿರ್ಧಾರ; ಗುರು: ಆಚಾರ್ಯ; ಪಾಳಯ: ಸೀಮೆ; ನೇಮ: ನಿಯಮ; ಕೊಟ್ಟು: ನೀಡು; ಓಲಗ: ದರ್ಬಾರು; ಹರೆ: ಚೆಲ್ಲು, ಚೆದರು; ಕ್ಷಣ: ತಕ್ಷಣ, ಕಾಲದ ಪ್ರಮಾಣ;

ಪದವಿಂಗಡಣೆ:
ನಯವಿದನು +ಹೊಂಬಟ್ಟಲಲಿ+ ವೀ
ಳೆಯವನ್+ಅನಿಬರಿಗಿತ್ತು +ಕುರುಸೇ
ನೆಯಲಿ +ಮರುಮಾತೇಕೆ +ನೀವೇ +ವಿಜಯವುಳ್ಳವರು
ಜಯವನಿನ್ನ್+ಆಹದೊಳಗೆ +ನಿ
ರ್ಣಯಿಸಬಹುದ್+ಎಮಗೆನುತ +ಗುರು +ಪಾ
ಳಯಕೆ +ನೇಮವ +ಕೊಟ್ಟನ್+ಓಲಗ +ಹರೆದುದಾ +ಕ್ಷಣಕೆ

ಅಚ್ಚರಿ:
(೧) ವಿಜಯ, ಜಯ – ಸಮಾನಾರ್ಥಕ ಪದ
(೨) ಜಯ, ವಿಜಯ, ನಯ, ಪಾಳಯ, ವೀಳಯ – ಪ್ರಾಸ ಪದಗಳು

ಪದ್ಯ ೪೨: ಅರ್ಜುನನು ಯಾರನ್ನು ಕೊಲ್ಲಲ್ಲು ಅಳುಕಿದನು?

ಬಲುಹ ನೀ ನೋಡುವರೆ ಪರಮಂ
ಡಳಿಕರನು ತಂದೊಡ್ಡು ಬಳಿಕೆ
ನ್ನಳವನೀಕ್ಷಿಸು ಸೆಡೆದೆನಾದಡೆ ನಿಮ್ಮ ಮೈದುನನೆ
ಕೊಲುವೆನೆಂತೈ ಭೀಷ್ಮರನು ಮನ
ವಳುಕದೆಂತೈ ತಪ್ಪುವೆನು ಗುರು
ಗಳಿಗೆ ಕೃಪಗುರುಸುತರನಿರಿವುದಿದಾವ ನಯವೆಂದ (ಭೀಷ್ಮ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ನನ್ನ ಶಕ್ತಿಯನ್ನು ಪರೀಕ್ಷಿಸಲು ಶತ್ರುರಾಜರನ್ನು ತಂದು ನಿಲ್ಲಿಸಿ ನೋಡು, ಹಿಂಜರಿದರೆ ನಿನ್ನ ಮೈದುನನೇ ನಾನಲ್ಲ. ಆದರೆ ಭೀಷ್ಮ, ಗುರುಗಳಾದ ದ್ರೋಣ, ಕೃಪಚಾರ್ಯ, ಅಶ್ವತ್ಥಾಮರನ್ನು ನಾನು ಯುದ್ಧದಲ್ಲಿ ಎದುರಿಸೆ ಹೇಗೆ ತಾನೆ ಅವರನ್ನು ಕೊಲ್ಲಲಿ ಎಂದು ಅಳಲಿದನು.

ಅರ್ಥ:
ಬಲುಹು: ಪರಾಕ್ರಮ; ನೋಡು: ವೀಕ್ಷಿಸು; ಮಂಡಳಿಕ: ಸಾಮಂತ ರಾಜ; ಒಡ್ಡು: ನೀಡು; ಬಳಿಕ: ನಂತರ; ಈಕ್ಷಿಸು: ನೋಡು; ಅಳವು: ಶಕ್ತಿ; ಸೆಡೆ: ಉಬ್ಬು,ಮುದುರು; ಮೈದುನ: ತಂಗಿಯ ಗಂಡ; ಕೊಲು: ಸಾಯಿಸು; ಅಳುಕು: ಹೆದರು; ಗುರು: ಆಚಾರ್ಯ; ಸುತ: ಮಗ; ಇರಿ: ಚುಚ್ಚು; ನಯ: ನ್ಯಾಯ; ಪರ: ಬೇರೆ;

ಪದವಿಂಗಡಣೆ:
ಬಲುಹ +ನೀ +ನೋಡುವರೆ+ ಪರ+ಮಂ
ಡಳಿಕರನು +ತಂದೊಡ್ಡು +ಬಳಿಕ್
ಎನ್ನ್+ಅಳವನ್+ಈಕ್ಷಿಸು +ಸೆಡೆದೆನಾದಡೆ +ನಿಮ್ಮ +ಮೈದುನನೆ
ಕೊಲುವೆನೆಂತೈ+ ಭೀಷ್ಮರನು +ಮನವ್
ಅಳುಕದೆಂತೈ +ತಪ್ಪುವೆನು +ಗುರು
ಗಳಿಗೆ +ಕೃಪ+ಗುರುಸುತರನ್+ಇರಿವುದ್+ಇದಾವ +ನಯವೆಂದ

ಅಚ್ಚರಿ:
(೧) ಅರ್ಜುನನು ತಾನು ಕೃಷ್ಣನ ಸಂಬಂಧಿ ಎಂದು ಹೇಳುವ ಪರಿ – ಪರಮಂಡಳಿಕರನು ತಂದೊಡ್ಡು ಬಳಿಕೆ
ನ್ನಳವನೀಕ್ಷಿಸು ಸೆಡೆದೆನಾದಡೆ ನಿಮ್ಮ ಮೈದುನನೆ

ಪದ್ಯ ೩೫: ಕುರುಸೈನ್ಯವು ಏನೆಂದು ಅಬ್ಬರಿಸಿತು?

ಮರಳಿ ಹೊಡೆ ಹಿಂಡಾಕಳನು ಗೋ
ವರನು ಬಿಡು ಹೆಡಗೈಯ ಕೊಯ್ ನ
ಮ್ಮರಸ ನಯದಪ್ಪಿದನು ತುರುಸೆರೆವಿಡಿವರೇ ನೃಪರು
ಕೊರಳ ಕಡಿತಕೆ ಹೊಕ್ಕ ಹಗೆವನ
ಸರಳಿಗುಸಿರನು ತೆರದಿರೆಂದ
ಬ್ಬರಿಸಿ ಕುರುಬಲ ಬಾಯಬಿಟ್ಟುದು ರಾಯನಿದಿರಿನೊಳು (ವಿರಾಟ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಅರ್ಜುನನ ಧಾಳಿಗೆ ಬೆದರಿ, ಗೋವುಗಳ ಹಿಂಡನ್ನು ಹಿಂದಕ್ಕೆ ಹೊಡೆಯಿರಿ, ಗೋಪಾಲಕರ ಹೆಡಗೈಕಟ್ಟುಗಳನ್ನು ಕತ್ತರಿಸಿ ಹಾಕಿರಿ, ನಮ್ಮ ರಾಜನು ನೀತಿಯನ್ನು ಬಿಟ್ಟು ಗೋವುಗಳನ್ನು ಸೆರೆಹಿಡಿದಿದ್ದಾನೆ, ಹೀಗೆ ರಾಜರು ಮಾಡಬಹುದೇ ನಮ್ಮ ಕೊರಳುಗಳನ್ನು ಕಡಿಯಲು ಬಂದ ಶತ್ರುವಿಗೆ ಪ್ರಾಣವನ್ನು ಕೊಡಬೇಡಿರಿ ಎಂದು ಬಾಯ್ಬಾಯಿ ಬಿಟ್ಟು ಕೂಗಿದರು.

ಅರ್ಥ:
ಮರಳಿ: ಮತ್ತೆ; ಹೊಡೆ: ಏಟು, ಹೊಡೆತ; ಹಿಂಡು: ಗುಂಪು; ಆಕಳ: ಹಸು; ಗೋವರ: ಆಕಳು, ಗೋವು; ಬಿಡು: ತೊರೆ; ಹೆಡಗೈ: ಕೈ ಹಿಂಭಾಗ; ಕೊಯ್: ಸೀಳೂ; ಅರಸ: ರಾಜ; ನಯ: ಶಾಸ್ತ್ರ ರಾಜನೀತಿ; ತುರು: ಆಕಳು; ಸೆರೆ: ಬಂಧನ; ನೃಪ: ರಾಜ; ಕೊರಳು: ಗಂಟಲು; ಕಡಿತ: ಕತ್ತರಿಸು; ಹೊಕ್ಕು: ಸೇರು; ಹಗೆ: ವೈರತನ; ಸರಳ: ಬಾನ: ಉಸಿರು: ಜೀವ; ತೆರದಿರಿ: ಕೊಡಬೇಡಿರಿ; ಅಬ್ಬರಿಸು: ಗರ್ಜಿಸು; ಕುರುಬಲ: ಕುರು ಸೈನ್ಯ; ಇದಿರು: ಎದುರು;

ಪದವಿಂಗಡಣೆ:
ಮರಳಿ +ಹೊಡೆ +ಹಿಂಡ್+ಆಕಳನು +ಗೋ
ವರನು +ಬಿಡು +ಹೆಡಗೈಯ +ಕೊಯ್ +ನ
ಮ್ಮರಸ +ನಯದಪ್ಪಿದನು +ತುರು+ಸೆರೆವಿಡಿವರೇ+ ನೃಪರು
ಕೊರಳ+ ಕಡಿತಕೆ +ಹೊಕ್ಕ +ಹಗೆವನ
ಸರಳಿಗ್+ಉಸಿರನು +ತೆರದಿರೆಂದ್
ಅಬ್ಬರಿಸಿ +ಕುರುಬಲ+ ಬಾಯಬಿಟ್ಟುದು+ ರಾಯನ್+ಇದಿರಿನೊಳು

ಅಚ್ಚರಿ:
(೧) ಗೋ, ತುರು, ಆಕಳು; ರಾಯ, ಅರಸ, ನೃಪ – ಸಮನಾರ್ಥಕ ಪದಗಳು

ಪದ್ಯ ೨: ಚಿತ್ರಸೇನನು ಧರ್ಮಜನಿಗೆ ಏನು ಹೇಳಿದ?

ಕೊಳ್ಳಿ ಸೆರೆಯನು ನಿಮ್ಮ ಸಹಭವ
ರೆಲ್ಲರೂ ಕಡುಮೂರ್ಖರಿದು ನಿ
ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು
ಖುಲ್ಲರಿವದಿರ ಬಿಡಿಸಿದೊಡೆ ತಳು
ವಿಲ್ಲದಹುದಪಘಾತ ಸಾಕಿ
ನ್ನೆಲ್ಲಿಯದು ನಯ ಬೀಳುಕೊಡಿ ನೀವೆಂದನಾ ಖಚರ (ಅರಣ್ಯ ಪರ್ವ, ೨೨ ಸಂಧಿ, ೨ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಾನು ಸೆರೆಹಿಡಿದ ನಿಮ್ಮ ಜೊತೆಯಲ್ಲಿ ಹುಟ್ಟಿದವರನ್ನು ಬಂಧಮುಕ್ತಗೊಳಿಸಿದ್ದೇನೆ ಇವರನ್ನು ತೆಗೆದುಕೊಳ್ಳಿ, ಇವರೆಲ್ಲರೂ ತುಂಬ ಮೂರ್ಖರು, ಆದರೇನು ಮಾಡಲಿ, ಅವರನ್ನು ಬಿಡಬೇಕೆಂಬುದು ನಿಮ್ಮ ಅಭಿಪ್ರಾಯ, ಈ ನೀಚರನ್ನು ನೀವೇನೋ ಬಿಡಿಸಿದಿರಿ, ಇದರಿಂದ ನಿಮಗೆ ಶೀಘ್ರದಲ್ಲೇ ಹಾನಿಯುಂಟಾಗಲಿದೆ. ಇನ್ನೆಲ್ಲಿಯ ರಾಜನೀತಿ? ನನ್ನನ್ನು ಕಳಿಸಿಕೊಡಿ ಎಂದು ಚಿತ್ರಸೇನನು ಹೇಳಿದನು.

ಅರ್ಥ:
ಕೊಳ್ಳಿ: ತೆಗೆದುಕೊಳ್ಳಿ; ಸೆರೆ: ಬಂಧಿ; ಸಹಭವ: ಜೊತೆಯಲ್ಲಿ ಹುಟ್ಟಿದ; ಕಡು: ತುಂಬ; ಮೂರ್ಖ: ತಿಳಿಗೇಡಿ, ಅವಿವೇಕಿ; ಮತ: ವಿಚಾರ; ಐಸಲೇ:ಅಲ್ಲವೇ; ಫಲ: ಪ್ರಯೋಜನ; ಖುಲ್ಲ: ದುಷ್ಟ; ಇವದಿರ: ಇವರನ್ನು; ಬಿಡಿಸು: ಬಂಧಮುಕ್ತಗೊಳಿಸು; ತಳುವು: ನಿಧಾನ; ಅಹುದು: ನಿ‍ಶ್ಚಿತ; ಅಪಘಾತ: ತೊಂದರೆ; ನಯ: ಶಾಸ್ತ್ರ ರಾಜನೀತಿ; ಬೀಳುಕೊಡು: ತೆರಳಲು ಅನುಮತಿ; ಖಚರ: ಗಂಧರ್ವ;

ಪದವಿಂಗಡಣೆ:
ಕೊಳ್ಳಿ+ ಸೆರೆಯನು +ನಿಮ್ಮ +ಸಹಭವ
ರೆಲ್ಲರೂ +ಕಡುಮೂರ್ಖರ್+ಇದು +ನಿ
ಮ್ಮೆಲ್ಲರಿಗೆ +ಮತವ್+ಐಸಲೇ +ನಾವೆಂದು +ಫಲವೇನು
ಖುಲ್ಲರ್+ಇವದಿರ +ಬಿಡಿಸಿದೊಡೆ +ತಳು
ವಿಲ್ಲದ್+ಅಹುದ್+ಅಪಘಾತ +ಸಾಕಿನ್
ಎಲ್ಲಿಯದು +ನಯ +ಬೀಳುಕೊಡಿ +ನೀವೆಂದನಾ +ಖಚರ

ಅಚ್ಚರಿ:
(೧) ಕೌರವರನ್ನು ವಿವರಿಸಿದ ಪರಿ – ನಿಮ್ಮ ಸಹಭವರೆಲ್ಲರೂ ಕಡುಮೂರ್ಖರ್

ಪದ್ಯ ೨: ಯಾವುದನ್ನು ಅನುಸರಿಸಿದರೆ ರಾಜನೀತಿ ಕರಗತವಾಗುತ್ತದೆ?

ಅರಸುತನ ತನಗಧಿಕವಾಗುತೆ
ಬರಬರಲು ಕಣ್ಣಾಲಿಗಳು ತರ
ಹರಿಸಿ ಕಾಣವು ವರ್ತಮಾನದ ನೃಪರ ಬಳಕೆಯಿದು
ಸಿರಿಯ ಮದವೆಂಬಧಿಕ ತಾಮಸ
ದೊರಕಿದಾಗಳೆ ನೀತಿಕಾರರ
ಪರಮ ವಚನಾಂಜನದಿನುಜ್ವಲಿಸುವುದು ನಯವೆಂದ (ಉದ್ಯೋಗ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಈಗಿನ ಕಾಲದ ರಾಜರಿಗೆ ರಾಜ ಪದವಿ ಹೆಚ್ಚು ಕಾಲ ದೊರೆತರೆ ಕಣ್ಣುಗುಡ್ಡೆಗಳು ತಿರುಗಿ ಮುಂದಿರುವುದು ಕಾಣದಹಾಗುತ್ತದೆ. ಐಶ್ವರ್ಯಮದವು ಕಣ್ಣನ್ನು ಕುರುಡು ಮಾದಿದಾಗ ನೀತಿಕಾರರ ಮಾತುಗಳನ್ನನುಸರಿಸಿದರೆ ರಾಜನೀತಿ ಕರಗತವಾಗುತ್ತದೆ.

ಅರ್ಥ:
ಅರಸು: ರಾಜ; ಅರಸುತನ: ರಾಜತನ; ಅಧಿಕ: ಹೆಚ್ಚು; ಬರಬರಲು: ಬರುತ್ತಾ; ಕಣ್ಣು: ನಯನ; ಕಣ್ಣಾಲಿ: ಕಣ್ಣುಗುಡ್ಡೆ; ತರಹರಿಸಿ:ತಡಮಾಡಿ; ಕಾಣು: ನೋಡು; ವರ್ತಮಾನ: ಈಗಿನ; ನೃಪ: ರಾಜ; ಬಳಕೆ: ಉಪಯೋಗ; ಸಿರಿ: ಐಶ್ವರ್ಯ; ಮದ: ಅಹಂಕಾರ; ಅಧಿಕ: ಹೆಚ್ಚು; ತಾಮಸ: ಜಡತ್ವ, ಕತ್ತಲೆ, ಅಂಧಕಾರ; ದೊರಕು: ಪಡೆ; ನೀತಿ: ಒಳ್ಳೆಯ ನಡತೆ; ಪರಮ: ಶ್ರೇಷ್ಠ; ವಚನ: ಮಾತು; ಅಂಜನ: ಕಾಡಿಗೆ, ಕಪ್ಪು;ಉಜ್ವಲಿಸು: ಕಾಣು; ನಯ: ರಾಜನೀತಿ;

ಪದವಿಂಗಡಣೆ:
ಅರಸುತನ+ ತನಗ್+ಅಧಿಕ+ವಾಗುತೆ
ಬರಬರಲು+ ಕಣ್ಣಾಲಿಗಳು +ತರ
ಹರಿಸಿ+ ಕಾಣವು+ ವರ್ತಮಾನದ +ನೃಪರ +ಬಳಕೆಯಿದು
ಸಿರಿಯ +ಮದವೆಂಬ್+ಅಧಿಕ +ತಾಮಸ
ದೊರಕಿದಾಗಳೆ+ ನೀತಿಕಾರರ
ಪರಮ +ವಚನಾಂಜನದಿನ್+ಉಜ್ವಲಿಸುವುದು +ನಯವೆಂದ

ಅಚ್ಚರಿ:
(೧) ಅರಸು, ನೃಪ – ಸಮನಾರ್ಥಕ ಪದ
(೨) ಅಧಿಕ – ೧, ೪ ಸಾಲಿನಲ್ಲಿ ಬಳಸಿದ ಪದ
(೩) ಜೋಡಿ ಪದಗಳ ಬಳಕೆ – ತನ – ಅರಸುತನ ತನಗಧಿಕ; ಬರ- ಬರಬರಲು

ಪದ್ಯ ೧೧: ಭೀಮನಿಗೆ ಶ್ರೀಕೃಷ್ಣ ಯಾವ ಚೋದ್ಯದ ನುಡಿಗಳನ್ನು ನುಡಿದನು?

ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳೂಗುಳಕೆ ಪವಮಾನನಂದನ
ನಳುಕಿದನು ಮಝಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ (ಉದ್ಯೋಗ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಸಂಧಿಯ ಪ್ರಸ್ತಾವನೆಯನ್ನು ಕೇಳಿದ ಕೃಷ್ಣನು ಆಶ್ಚರ್ಯಗೊಂಡು, “ಓಹೋ ಇದೇನಿದು ಶಿವ ಶಿವ ಹಾಲಾಹಲವು ಅಮೃತವಾಯಿತಲ್ಲಾ, ಭಾರಿಯ ಬೆಂಕಿ ಒಮ್ಮೆಲೆ ತಣ್ಣಗಾಯಿತಲ್ಲಾ, ಸಿಡಿಲ ಜೋರು ನಯವಾಯಿತಲ್ಲಾ, ಭೀಮನು ಯುದ್ಧಕ್ಕೆ ಬೆದರಿದನೇ? ಭಲೇ ಮಾಯೆಯಾಟವೇ, ಕುಂತೀದೇವಿಯು ಎಂಥ ಮಕ್ಕಳನ್ನು ಹಡೆದಳು, ಸಾರ್ಥಕವಾಯಿತೆಂದು” ನಸುನಗುತ ನುಡಿದನು

ಅರ್ಥ:
ಮಹಾದೇವ: ಶಿವ; ಹಾಲಾಹಲ: ವಿಷ, ಗರಲ, ನಂಜು; ಸುಧ: ಅಮೃತ; ರಸ: ಸಾರ; ಉಕ್ಕು: ಚಿಮ್ಮು; ಉರಿ: ಬೆಂಕಿ; ಅಗ್ಗ: ಕಡಿಮೆ; ಸಿಡಿಲು: ಅಶನಿ, ಚಿಮ್ಮು, ಗರ್ಜಿಸು; ಶೀತಳ: ತಣ್ಣಗಾಗು; ನಯ: ಮೃದುತ್ವ, ಅಂದ; ಕೊಳುಗುಳ: ಯುದ್ಧ; ನಂದನ: ಮಗ; ಪವಮಾನ: ವಾಯು; ಅಳುಕು: ಹೆದರು; ಮಝ: ಕೊಂಡಾಟದ ಒಂದು ಮಾತು; ಲಲನೆ: ಹೆಣ್ಣು; ಹೆತ್ತು: ಹಡೆ; ಸುತ: ಮಕ್ಕಳು; ಶೌರಿ: ಕೃಷ್ಣ; ನಗು: ಸಂತೋಷ; ಆಟೋಪ:ಆಡಂಬರ;

ಪದವಿಂಗಡಣೆ:
ಎಲೆ+ ಮಹಾದೇವ+ಆಯ್ತು +ಹಾಲಾ
ಹಲ +ಸುಧಾರಸ+ ಉಕ್ಕಿದ್+ಉರಿ
ಅಗ್ಗಳದ +ಶೀತಳವಾಯ್ತು +ಸಿಡಿಲ+ಆಟೋಪ+ ನಯವಾಯ್ತು
ಕೊಳೂಗುಳಕೆ +ಪವಮಾನ+ನಂದನನ್
ಅಳುಕಿದನು +ಮಝಮಾಯೆ +ಕುಂತೀ
ಲಲನೆ +ಹೆತ್ತಳು +ಸುತರನೆಂದನು +ಶೌರಿ +ನಸುನಗುತ

ಅಚ್ಚರಿ:
(೧) ಉಪಮಾನಗಳ ಬಳಕೆ – ಆಯ್ತು ಹಾಲಾಹಲ ಸುಧಾರಸ, ಉಕ್ಕಿದುರಿಯಗ್ಗಳದ ಶೀತಳವಾಯ್ತು, ಸಿಡಿಲಾಟೋಪ ನಯವಾಯ್ತು
(೨) ಭೀಮನು ಬಲಶಾಲಿ ಎಂದು ತಿಳಿದಿದ್ದರು ಅವನ ಬಲವನ್ನೇ ಅಸ್ತ್ರವಾಗಿಸಿ ಅವನನ್ನು ತಿವಿಯುವ ಪರಿ

ಪದ್ಯ ೫೨: ರಾಜ್ಯದ ಜನರಿಂದ ತೆರಿಗೆಯನ್ನು ಹೇಗೆ ಸಂಗ್ರಹಿಸಬೇಕು?

ಫಲವಹುದು ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಕೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕಾಯಿ ಹಣ್ಣಾಗುವುದನ್ನು ಹೂವಿನ ಸುವಾಸನೆಗೆ ತಪ್ಪಿಸಿಕೊಳ್ಳದ ದುಂಬಿಯಂತೆ, ನೀನು ಪ್ರಜೆಗಳನ್ನು ನೋಯಿಸದೆ ತೆರಿಗೆಯ ಹಣವನ್ನು ಸಂಗ್ರಹಿಸುತ್ತಿರುವೆಯಾ? ತಪ್ಪದ ಎಣಿಕೆ, ನೀತಿಗಳನ್ನು ಪ್ರಯೋಗಿಸಿ ರಾಜ್ಯವನ್ನು ಸುಭದ್ರವಾಗಿ ನಿಲಿಸುವ ಮಂತ್ರಿ ನಿನಗಿರುವರೆ, ಎಂದು ನಾರದರು ಕೇಳಿದರು.

ಅರ್ಥ:
ಫಲ: ಹಣ್ಣು; ಅಳಿ: ದುಂಬಿ; ಕೆಡಹು: ನಾಶಮಾಡು; ಪರಿಮಳ: ಸುವಾಸನೆ; ಕೊಂಬಂತೆ: ಕೊಂಡುಹೋಗುವಂತೆ; ಆಳ್ವಿಕೆ: ರಾಜ್ಯಭಾರ; ಕರ: ತೆರಿಗೆ; ಅರ್ಥ: ಹಣ; ತೆಗೆ: ತೆಗೆದುಕೊ; ಪ್ರಜೆ: ಜನ; ನೋವು: ವ್ಯಥೆ, ಬೇನೆ; ಹಲವು: ಬಹಳ; ಸನ್ಮಾನ:ಗೌರವ, ಮಾನ್ಯತೆ; ನಯ: ನುಣುಪು, ಮೃದುತ್ವ; ಚಲಿಸು: ಓಡಾಡು; ರಾಜ್ಯ: ರಾಷ್ಟ್ರ; ಅಭಿಮತ: ಅಭಿಪ್ರಾಯ; ಮಂತ್ರಿ: ಸಚಿವ; ರಾಯ: ರಾಜ;

ಪದವಿಂಗಡಣೆ:
ಫಲವಹುದು +ಕೆಡಲೀಯದ್+ಅಳಿ +ಪರಿ
ಮಳವ +ಕೊಂಬಂದದ್+ಅಲೆ+ ನೀನ್
ಆಳ್ವಿಕೆಯ +ಕರದ್+ಅರ್ಥವನು +ತೆಗೆವೈ +ಪ್ರಜೆಯ +ನೋಯಿಸದೆ
ಹಲವು +ಸನ್ಮಾನದಲಿ +ನಯದಲಿ
ಚಲಿಸದ್+ಇಪ್ಪಂದದಲಿ ರಾಜ್ಯವ
ನಿಲಿಸುವಭಿಮತ +ಮಂತ್ರಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ಕಾಯಿ ಹಣ್ಣಾಗುವಿಕೆ, ದುಂಬಿ ಪುಷ್ಪದ ರಸವನ್ನು ಹೀರುವಿಕೆ – ಉಪಮಾನಗಳ ಪ್ರಯೋಗ
(೨) ಮಂತ್ರಿಯ ಲಕ್ಷಣ: ಸನ್ಮಾನ, ನಯ