ಪದ್ಯ ೭: ದೈವ ಬಲದ ಪ್ರಾಮುಖ್ಯತೆ ಎಂತಹುದು?

ದೈವಕೃಪೆಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲಿ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ (ಗದಾ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ದೈವ ಕೃಪೆಯ ತೆರೆಯ ಮರೆಯಲ್ಲಿ ಪಾಂಡವರೈವರು ಉಳಿದರು. ಕೃಷ್ಣನ ಒಡಹುಟ್ಟಿದ ಸಾತ್ಯಕಿಯೂ ಪಾಳೆಯದಲ್ಲಿರಲಿಲ್ಲ. ದೈವಬಲ ಅವರನ್ನು ಕಾಪಾಡಿತು. ಉಳಿದ ಪಾಂಡವ ಸೇನೆಯು ದೈವ ಬಲವಿಲ್ಲದೆ, ಛಲದ ಸೇಡಿಗೆ ನಾಶವಾಯಿತೆಂದು ಹೇಳಿದನು.

ಅರ್ಥ:
ದೈವ: ಭಗವಂತ; ಕೃಪೆ: ಕರುಣೆ; ಜವನಿಕೆ: ಮುಚ್ಚುಮರೆ; ಮರೆ: ರಹಸ್ಯ; ಉಳಿ: ಜೀವಿಸು; ಒಡಹುಟ್ಟು: ಜೊತೆಯಲ್ಲಿ ಜನಿಸು; ಶಿಬಿರ: ಬಿಡಾರ; ಬಲ: ಶಕ್ತಿ; ಕೇಳ್: ಆಲಿಸು; ನಿರ್ದೈವ: ಭಗವಂತನಿಲ್ಲದ ಸ್ಥಿತಿ; ನಿಶ್ಶೇಷ: ಸಂಪೂರ್ಣವಾಗಿ ಮುಗಿದುದು, ನಾಶ; ಎತ್ತು: ಮೇಲೇಳು; ಛಲ: ದೃಢ ನಿಶ್ಚಯ; ವಾಸಿ: ಪ್ರತಿಜ್ಞೆ, ಶಪಥ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದೈವ+ಕೃಪೆ+ಜವನಿಕೆಯ +ಮರೆಗೊಂಡ್
ಐವರ್+ಉಳಿದರು +ಮೇಲೆ +ಸಾತ್ಯಕಿ
ದೈವದ್+ಒಡಹುಟ್ಟಿದನಲೇ +ತಾನಿಲ್ಲಿ +ಶಿಬಿರದಲಿ
ದೈವಬಲವ್+ಇನಿತಕ್ಕೆ+ ಕೇಳ್ +ನಿ
ರ್ದೈವಬಲ+ನಿಶ್ಶೇಷವ್+ಇನಿತೇ
ದೈವವೆತ್ತಿದ+ ಛಲದ +ವಾಸಿಗೆ +ರಾಯ +ಕೇಳೆಂದ

ಅಚ್ಚರಿ:
(೧) ದೈವ – ೫ ಸಾಲಿನ ಮೊದಲ ಪದ
(೨) ಪದಗಳ ಬಳಕೆ – ದೈವಬಲವಿನಿತಕ್ಕೆ, ನಿರ್ದೈವಬಲನಿಶ್ಶೇಷವಿನಿತೇ

ಪದ್ಯ ೪೨: ವೈಶಂಪಾಯನ ಸರೋವರಕ್ಕೆ ಯಾರು ಬಂದರು?

ಅರಸ ಕೇಳೈ ದೈವಯೋಗವ
ಪರಿಹರಿಸಲಾರಳವು ಪವನಜ
ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ
ಬರುತ ನೀರಡಿಸಿದರು ಕಂಡರು
ಸರಸಿಯನು ನೀರ್ಗುಡಿಯಲೈತಂ
ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ (ಗದಾ ಪರ್ವ, ೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ರಾಜ ಆಲಿಸು, ದೈವಯೋಗವನ್ನು ತಪ್ಪಿಸಲಾರಿಗೆ ಸಾಧ್ಯ? ಭೀಮನ ಅರಮನೆಯ ಬೇಟೆಗಾರರು ಬೇಟೆಯಲ್ಲಿ ಕೊಂದ ಮೃಗಗಳ ಮಾಂಸದ ಭಾರವನ್ನು ಹೊತ್ತುಕೊಂಡು ಬರುತ್ತಿರಲು ಅವರಿಗೆ ಬಹದ ಬಾಯಾರಿತು. ವೈಶಂಪಾಯನ ಸರೋವರದ ತೀರದಲ್ಲಿ ಬೇಟೆಯಲ್ಲಿ ದೊರೆತ ಮಾಂಸವನ್ನು ತೂಗು ಹಾಕಿದ್ದ ಕಂಬಿಗಳನ್ನಿಳಿಸಿ ನೀರುಕುಡಿಯಲು ಹೋದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ದೈವ: ಭಗವಂತ; ಯೋಗ: ಹೊಂದಿಸುವಿಕೆ; ಪರಿಹರ: ನಿವಾರಣೆ, ಪರಿಹಾರ; ಅಳವು:ಶಕ್ತಿ; ಪವನಜ: ಭೀಮ; ಅರಮನೆ: ರಾಜರ ಆಲಯ; ಮೃಗ: ಪ್ರಾಣಿ; ಮೃಗವೇಂಟೆಕಾರ: ಬೇಟೆಗಾರ; ಮಾಂಸ: ಅಡಗು; ಭಾರ: ಹೊರೆ; ಬರುತ: ಆಗಮಿಸು; ನೀರಡಿಸು: ಬಾಯಾರಿಕೆ; ಕಂಡು: ನೋಡು; ಸರಸಿ: ಸರೋವರ; ನೀರ್ಗುಡಿ: ನೀರನ್ನು ಪಾನಮಾಡು; ಐತಂದು: ಬಂದು ಸೇರು; ತೀರ: ದಡ; ಆಮಿಷ: ಮಾಂಸ; ಕಂಬಿ: ಲೋಹದ ತಂತಿ;

ಪದವಿಂಗಡಣೆ:
ಅರಸ +ಕೇಳೈ +ದೈವ+ಯೋಗವ
ಪರಿಹರಿಸಲ್+ಆರ್+ಅಳವು +ಪವನಜನ್
ಅರಮನೆಯ +ಮೃಗವೇಂಟೆಕಾರರು +ಮಾಂಸ+ಭಾರದಲಿ
ಬರುತ +ನೀರಡಿಸಿದರು +ಕಂಡರು
ಸರಸಿಯನು +ನೀರ್ಗುಡಿಯಲ್+ಐತಂದ್
ಇರಿಸಿದರು +ತೀರದಲಿ +ಬಹಳ+ಆಮಿಷದ +ಕಂಬಿಗಳ

ಅಚ್ಚರಿ:
(೧) ಹಿತ ನುಡಿ – ದೈವಯೋಗವ ಪರಿಹರಿಸಲಾರಳವು
(೨) ನೀರು, ಸರಸಿ; ಮಾಂಸ, ಆಮಿಷ – ಸಮಾನಾರ್ಥಕ ಪದಗಳು

ಪದ್ಯ ೨೪: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೫?

ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ತಂದೆ ಒಡೆಯ ದುರ್ಯೋಧನನೇ, ಪಾಂಡವರೈವರೂ ಬದುಕಿ ಉಳಿದರು, ನಿನ್ನೊಬ್ಬನನ್ನು ಬಿಟ್ಟು ನಿನ್ನ ತಮ್ಮಂದಿರೆಲ್ಲರೂ ಮಡಿದರು. ಅವರ ಐವರು ಮಕ್ಕಳೂ ಸುಖವಾಗಿ ಜೀವಿಸಿದ್ದಾರೆ, ನಿನ್ನ ಮಕ್ಕಳೆಲ್ಲರನ್ನೂ ಯಮನು ಸಿವುಡು ಕಟ್ಟಿ ಎಳೆದೊಯ್ದ. ಅಪ್ಪಾ ದುರ್ಯೋಧನ ದೈವವನ್ನು ವಿರೋಧಿಸಿ ಈ ದುಃಸ್ಥಿತಿಗೆ ಬಂದೆ ಎಂದು ಸಂಜಯನು ಹೇಳಿದನು.

ಅರ್ಥ:
ಬದುಕು: ಜೀವಿಸು; ಉಳಿ: ಬದುಕಿರು; ಸವರು: ನಾಶ; ಕುಮಾರ: ಮಕ್ಕಳು; ಸೌಖ್ಯ: ಸುಖ, ನೆಮ್ಮದಿ; ಜವ: ಯಮ; ಸಿವಡಿ: ಒಂದು ಅಳತೆ, ಕಿರ್ದಿ; ಹತ್ತು: ಏರು; ನೂರು: ಶತ; ದೈವ: ಭಗವಂತ; ಅವಗಡಿಸು: ಕಡೆಗಣಿಸು; ದುಃಸ್ಥಿತಿ: ಕೆಟ್ಟ ಅವಸ್ಥೆ;

ಪದವಿಂಗಡಣೆ:
ಅವರು +ಬದುಕಿದರ್+ಐವರೂ +ನಿ
ನ್ನವರೊಳಗೆ+ ನೀನುಳಿಯೆ +ನೂರ್ವರು
ಸವರಿತ್+ಅವರ್+ಐವರು+ ಕುಮಾರರು+ ಸೌಖ್ಯ +ಜೀವಿಗಳು
ಜವನ+ಸಿವಡಿಗೆ +ಹತ್ತಿದರು +ನಿ
ನ್ನವರು +ಮಕ್ಕಳು +ನೂರು +ದೈವವನ್
ಅವಗಡಿಸಿ +ದುಃಸ್ಥಿತಿಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ದುಃಸ್ಥಿತಿಗೆ ಕಾರಣ – ದೈವವನವಗಡಿಸಿ ದುಃಸ್ಥಿತಿಗೆ ಬಂದೈ

ಪದ್ಯ ೧೪: ಶ್ರುತಾಯುಧನ ಅಂತ್ಯವು ಹೇಗಾಯಿತು?

ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ (ದ್ರೋಣ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ವರುಣನು ಶ್ರುತಾಯುಧನಿಗೆ ಆ ಗದೆಯನ್ನು ಕೊಟ್ಟು ಇದನ್ನು ಯುದ್ಧಮಾಡದಿರುವವರ ಮೇಲೆ ಪ್ರಯೋಗಿಸಬೇಡ ಎಂದು ಎಚ್ಚರಿಸಿದ್ದನು. ಹಾಗೇನಾದರೂ ನೀನು ಪ್ರಯೋಗಿಸಿದರೆ ಅದು ನಿನ್ನನ್ನೇ ಕೊಲ್ಲುತ್ತದೆ ಎಂದು ಹೇಳಿದ್ದನು. ಶ್ರುತಾಯುಧನು ಇದನ್ನು ಮರೆತು ಶ್ರೀಕೃಷ್ಣನ ಮೇಲೆ ಆ ಗದೆಯನ್ನು ಹೊಯ್ಯಲು, ಆ ಗದೆಯು ಕೋಪಗೊಂಡು ಶ್ರೀಕೃಷ್ಣನನ್ನು ಮುಟ್ಟದೆ ಶ್ರುತಾಯುಧನನ್ನೇ ಕೊಂದಿತು, ಏನಾಶ್ಚರ್ಯ ದೈವ ದ್ರೋಹಿಗೆ ಎಲ್ಲಿ ಒಳಿತಾದೀತು.

ಅರ್ಥ:
ವರುಣ: ನೀರಿನ ಅಧಿದೇವತೆ; ಉಪದೇಶ: ಬೋಧಿಸುವುದು; ಬರಿ: ಕೇವಲ; ಹೊಯ್ದು: ಹೊಡೆ; ಕೊಲು: ಸಾಯಿಸು; ನಿರುತ: ದಿಟ, ಸತ್ಯ; ಮರೆ: ಜ್ಞಾಪಕವಿಲ್ಲದ ಸ್ಥಿತಿ; ಹರಿ: ವಿಷ್ಣು; ಮಸ್ತಕ: ತಲೆ; ಕೆರಳು: ಕೋಪಗೊಳ್ಳು; ಗದೆ: ಮುದ್ಗರ; ಮುರಹರ: ಕೃಷ್ಣ; ಮುಟ್ಟು: ತಾಗು; ಮರಳಿ: ಮತ್ತೆ, ಹಿಂದಿರುಗು; ಕೊಂದು: ಸಾಯಿಸು; ಅಚ್ಚರಿ: ಆಶ್ಚರ್ಯ; ದೈವ: ಭಗವಂತ; ದ್ರೋಹ: ಮೋಸ; ಲೇಸು: ಒಳಿತು;

ಪದವಿಂಗಡಣೆ:
ವರುಣನಿತ್+ಉಪದೇಶ +ಬರಿದಿ
ದ್ದರನು+ ಹೊಯ್ದರೆ +ತನ್ನ +ಕೊಲುವುದು
ನಿರುತವ್+ಎನಲ್+ಅದ +ಮರೆದು +ಹೊಯ್ದನು +ಹರಿಯ+ ಮಸ್ತಕವ
ಕೆರಳಿ +ಗದೆ +ಮುರಹರನ +ಮುಟ್ಟದೆ
ಮರಳಿ +ತನ್ನನೆ +ಕೊಂದುದ್+ಏನ್
ಅಚ್ಚರಿಯೊ +ದೈವ+ದ್ರೋಹಿಗ್+ಎತ್ತಣ+ ಲೇಸುಬಹುದೆಂದ

ಅಚ್ಚರಿ:
(೧) ಹರಿ, ಮುರಹರ – ಕೃಷ್ಣನನ್ನು ಕರೆದ ಪರಿ
(೨) ಹಿತನುಡಿ – ದೈವದ್ರೋಹಿಗೆತ್ತಣ ಲೇಸುಬಹುದೆಂದ

ಪದ್ಯ ೨೩: ಭೀಷ್ಮರು ಯಾರು ದುರ್ಬಲರೆಂದು ಹೇಳಿದರು?

ದೈವ ಬಲವವರಲ್ಲಿ ನೀವೇ
ದೈವ ಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ (ಭೀಷ್ಮ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅವರಿಗೆ ದೈವಬಲವಿದೆ. ನೀವು ದೈವ ಹೀನರು. ಅವರೈವರೂ ಸತುಪುರುಷರ ಶೀಲವುಳ್ಳವರು. ಧರ್ಮಪರರು. ನೀವು ಅಧಾರ್ಮಿಕರು. ಲೋಕವು ಅವರಿಗೆ ಗೌರವವನ್ನು ಕೊಡುತ್ತದೆ. ಅವರ ಕೆಲಸದಲ್ಲಿ ಹೆಗಲು ಕೊಡುತ್ತದೆ. ಲೋಕವು ನಿಮ್ಮನ್ನು ಬೈಯ್ಯುತ್ತದೆ. ಅವರಿಗೆ ನಿಮಗಿಂತಲೂ ಐದು ಪಟ್ಟು ಹೆಚ್ಚಿನ ಸಾಹಸವಿದೆ, ನೀವು ದುರ್ಬಲರೆಂದು ಭೀಷ್ಮರು ನುಡಿದರು.

ಅರ್ಥ:
ದೈವ: ಭಗವಂತ; ಬಲ: ಶಕ್ತಿ; ಹೀನ: ಕೆಟ್ಟದು, ತ್ಯಜಿಸಿದ; ಧರ್ಮ: ಧಾರಣೆ ಮಾಡಿದುದು; ಸತ್ಪುರುಷ: ಒಳ್ಳೆಯ ಜನ; ಶೀಲ: ಗುಣ; ಅಧಾರ್ಮಿಕ: ಧರ್ಮದ ದಾರಿಯಲ್ಲಿ ನಡೆಯದವರು; ಮುಯ್ಯಿ: ಉಡುಗೊರೆ; ಭುವನ: ಭೂಮಿ; ಬೈವುದು: ಜರಿ; ಇನಿಬರ: ಇಷ್ಟು ಜನ; ಐವಡಿ: ಐದು ಪಟ್ಟು; ಸಹಸಿ: ಪರಾಕ್ರಮಿ; ದುರ್ಬಲ: ಶಕ್ತಿಹೀನ;

ಪದವಿಂಗಡಣೆ:
ದೈವ +ಬಲವ್+ಅವರಲ್ಲಿ +ನೀವೇ
ದೈವ +ಹೀನರು +ಧರ್ಮ+ಪರರ್+ಅವರ್
ಐವರೂ+ ಸತ್ಪುರುಷಶೀಲರು +ನೀವ್+ಅಧಾರ್ಮಿಕರು
ಮುಯ್ವನ್+ಆನುವುದ್+ಅವರ್ಗೆ +ಭುವನವು
ಬೈವುದೈ+ ನಿಮ್ಮಿನಿಬರನು+ ನಿಮಗ್
ಐವಡಿಯ +ಸಹಸಿಗಳ್+ಅವರು +ದುರ್ಬಲರು +ನೀವೆಂದ

ಅಚ್ಚರಿ:
(೧) ದೈವ ಪದದ ಬಳಕೆ – ದೈವ ಬಲವವರಲ್ಲಿ ನೀವೇದೈವ ಹೀನರು
(೨) ಧರ್ಮ ಪದದ ಬಳಕೆ – ಧರ್ಮಪರರವರೈವರೂ ಸತ್ಪುರುಷಶೀಲರು ನೀವಧಾರ್ಮಿಕರು

ಪದ್ಯ ೬೦: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಕೈದಣಿಯೆ ವಸುದೇವನಳಿಯನ
ಮೈದಡವಿದನು ಮಗನೆ ಬನದೊಳ
ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು
ಬಯ್ದು ಮಾಡುವುದೇನು ದ್ರೌಪದಿ
ಯೈದೆತನವುಂಟಾಗೆ ದುರಿತವ
ಕೊಯ್ದು ನರಲೋಕಕ್ಕೆ ಸುಳಿದಿರಿ ಎಮ್ಮ ಪುಣ್ಯದೊಳು (ವಿರಾಟ ಪರ್ವ, ೧೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ವಸುದೇವನು ಮತ್ತೆ ಮತ್ತೆ ಯುಧಿಷ್ಥಿರನ ಮೈದಡವಿ ಮಗು, ವಿಧಿಯು ನಿನ್ನನ್ನು ವನವಾಸದಲ್ಲಿ ಬಂಧಿಸಿ ಬಿಟ್ಟಿತು, ದೈವವನ್ನು ಬೈದು ಏನು ಪ್ರಯೋಜನ! ದ್ರೌಪದಿಯ ಮುತ್ತೈದೆ ಭಾಗ್ಯದ ದೆಸೆಯಿಮ್ದ ನೀವು ನಿಮ್ಮ ಪೂರ್ವಜನ್ಮದ ಪಾಪ ಫಲವನ್ನು ಮೀರಿ, ನಮ್ಮ ಪುಣ್ಯದ ದೆಸೆಯಿಂದ ಮತ್ತೆ ಬಂದಿರಿ ಎಂದನು.

ಅರ್ಥ:
ಕೈ: ಹಸ್ತ; ದಣಿ: ಆಯಾಸ; ಅಳಿಯ: ಸೋದರಿಯ ಮಗ; ಮೈದಡವಿ: ಮೈಯನ್ನು ತಟ್ಟು; ಮಗ: ಸುತ; ಬನ: ಕಾಡು; ಒಯ್ದು: ತೆರಳು; ವಿಧಿ: ಆಜ್ಞೆ, ಆದೇಶ, ನಿಯಮ; ಬಂಧಿಸು: ಕಟ್ಟು, ಬಂಧ; ಸಾಕು: ನಿಲ್ಲು; ದೈವ: ಭಗವಂತ; ಬಯ್ದು: ತೆಗಳು; ಐದು: ಬಂದು ಸೇರು; ದುರಿತ: ಪಾಪ, ಪಾತಕ; ನರಲೋಕ: ಪಾತಾಳಲೋಕ; ಸುಳಿ: ತೀಡು, ತೆರಳು; ಪುಣ್ಯ: ಸದಾಚಾರ;

ಪದವಿಂಗಡಣೆ:
ಕೈ+ದಣಿಯೆ +ವಸುದೇವನ್+ಅಳಿಯನ
ಮೈದಡವಿದನು +ಮಗನೆ+ ಬನದೊಳಗ್
ಒಯ್ದು +ವಿಧಿ +ಬಂಧಿಸಿತಲಾ +ಸಾಕಿನ್ನು +ದೈವವನು
ಬಯ್ದು +ಮಾಡುವುದೇನು +ದ್ರೌಪದಿ
ಯೈದೆತನವುಂಟಾಗೆ +ದುರಿತವ
ಕೊಯ್ದು +ನರಲೋಕಕ್ಕೆ +ಸುಳಿದಿರಿ +ಎಮ್ಮ +ಪುಣ್ಯದೊಳು

ಅಚ್ಚರಿ:
(೧) ಯುಧಿಷ್ಠಿರನನ್ನು ವಸುದೇವನಳಿಯ ಎಂದು ಕರೆದಿರುವುದು

ಪದ್ಯ ೧೪: ದೇವತೆಗಳು ಯಾರ ಬಳಿ ತಮ್ಮ ಅಳಲನ್ನು ತೋಡಿಕೊಂಡರು?

ಆದರೆಯು ನಮಗಾತನೇ ಗತಿ
ಯೀ ದುರಾತ್ಮರಿಗೆಂದು ಹರಿವೆಂ
ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ
ಖೇದವನ್ನುಸುರಲು ಪಿತಾಮಹ
ನಾ ದಿವಿಜಗಣ ಸಹಿತ ಬಂದನು
ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ (ಕರ್ಣ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ದೇವತೆಗಳು ತಮ್ಮ ಅಳಲನ್ನು ಯಾರಿಗೆ ಹೇಳಬೇಕೆಂದು ಯೋಚಿಸುತ್ತಾ, ಆ ದುಷ್ಟರಿಗೆ ವರವನ್ನು ನೀಡಿದ ಬ್ರಹ್ಮನೇ ನಮ್ಮ ಗತಿ ಎಂದು ತಿಳಿದು ಅವನನ್ನೇ ಕೇಳೋಣ ಈ ದುಷ್ಟರು ಸಾಯುವುದು ಯಾವಾಗೆ ಎಂದು ಕೇಳೋಣವೆಂದು ಬ್ರಹ್ಮನ ಬಳಿ ಬಂದು ತಮ್ಮ ಅಳಲನ್ನು ತೋಡಿಕೊಂಡರು. ಬ್ರಹ್ಮನು ಅವರೊಡನೆ ವೇದಸಿದ್ಧನಾದ ನಿರ್ಮಲನಾದ ಶಿವನನ್ನು ಕಾಣಲು ಕೈಲಾಸಕ್ಕೆ ಹೊರಟರು.

ಅರ್ಥ:
ಗತಿ: ಗಮನ; ದುರಾತ್ಮ: ದುಷ್ಟ; ಹರಿ: ಕೀಳು, ಕಿತ್ತುಹಾಕು;ಆದರಿಸಿ: ಉಪಚಾರಮಾಡು; ಕೇಳು: ಆಲಿಸು; ಕಮಲಜ: ಬ್ರಹ್ಮ; ಹೊರೆ: ಕಾಪಾಡು, ರಕ್ಷಿಸು; ಖೇದ: ದುಃಖ, ಉಮ್ಮಳ; ಉಸುರು: ಮಾತನಾಡು; ಪಿತಾಮಹ: ಬ್ರಹ್ಮ; ದಿವಿಜ: ದೇವತೆ; ಗಣ: ಗುಂಪು; ಸಹಿತ: ಜೊರೆ; ವೇದ: ಜ್ಞಾನ; ಸಿದ್ಧ: ಸಾಧಿಸಿದವ; ವಿಶುದ್ಧ: ಪರಿಶುದ್ಧವಾದುದು; ದೈವ: ಭಗವಂತ; ಕಾಬ: ನೋಡುವ; ತವಕ: ಕಾತುರ, ಕುತೂಹಲ;

ಪದವಿಂಗಡಣೆ:
ಆದರೆಯು +ನಮಗ್+ಆತನೇ +ಗತಿ
ಯೀ +ದುರಾತ್ಮರಿಗೆಂದು +ಹರಿವೆಂದ್
ಆದರಿಸಿ +ಕೇಳುವೆವ್+ಎನುತ ಕಮಲಜನ +ಹೊರೆಗೈದಿ
ಖೇದವನ್+ಉಸುರಲು+ ಪಿತಾಮಹನ್
ಆ+ ದಿವಿಜಗಣ +ಸಹಿತ +ಬಂದನು
ವೇದಸಿದ್ಧ +ವಿಶುದ್ಧ +ದೈವವ +ಕಾಬ +ತವಕದಲಿ

ಅಚ್ಚರಿ:
(೧) ಶಿವನ ಗುಣವಾಚಕ ಪದ – ವೇದಸಿದ್ಧ ವಿಶುದ್ಧ ದೈವ

ಪದ್ಯ ೫೧: ಬ್ರಾಹ್ಮಣನು ಭೂಸುರನಾಗಲು ಕಾರಣವೇನು?

ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾಧೀನವಾಗಿಹುದಾಗಿ ಲೋಕದಲಿ
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವಹ
ದೈವವೆಂಬುವುದದಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಜಗತ್ತು ದೈವದ ಇಚ್ಛೆಯಂತೆ ನಡೆಯುತ್ತದೆ, ಹಾಗಾಗಿ ಜಗತ್ತು ದೈವಕ್ಕೆ ಅಧೀನವಾಗಿದೆ. ಆ ದೈವವನ್ನು ಮಂತ್ರದ ಶಕ್ತಿಯಿಂದ ಪಡೆದುಕೊಳ್ಳಬಹುದು, ಆದ್ದರಿಂದ ದೈವವು ಮಂತ್ರಕ್ಕೆ ಅಧೀನ. ಬ್ರಾಹ್ಮಣರು ಆ ಮಂತ್ರವನ್ನು ತಮ್ಮ ಸಾಧನೆಯಿಂದ ವಶಪಡಿಸಿಕೊಂಡಿದ್ದು, ಮಂತ್ರವು ಬ್ರಾಹ್ಮಣರಿಗೆ ಅಧೀನವಾಗಿದೆ. ಆದ್ದರಿಂದ ಬ್ರಾಹ್ಮಣ ಭೂಮಿಯಲ್ಲಿ ದೈವ, ಅವನಿಗಿಂತ ಹೆಚ್ಚಿನ ದೈವವು ಯಾವುದಿದೆ ಹೇಳು ಎಂದು ಸನತ್ಸುಜಾತರು ಪ್ರಶ್ನಿಸಿದರು.

ಅರ್ಥ:
ದೈವ: ದೇವರು; ಅಧೀನ: ವಶ, ಕೈಕೆಳಗಿರುವವ; ಜಗ: ಜಗತ್ತು, ವಿಶ್ವ, ಲೋಕ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಭೂವಿ: ಭೂಮಿ, ಧರಿತ್ರಿ; ಬುಧ: ವಿದ್ವಾಂಸ; ಭೂವಿಬುಧ: ಬ್ರಾಹ್ಮಣ; ಬ್ರಾಹ್ಮಣ: ಭೂಸುರ, ವಿಪ್ರ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಧಿಕ: ಹೆಚ್ಚು; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ದೈವದ+ಅಧೀನದಲಿ +ಜಗವ
ಆ ದೈವ+ ಮಂತ್ರಾಧೀನ+ ಮಂತ್ರವು
ಭೂವಿಬುಧರ್+ಅಧೀನವಾಗಿಹುದಾಗಿ +ಲೋಕದಲಿ
ದೈವವೇ +ಬ್ರಾಹ್ಮಣನದ್+ಅಲ್ಲದೆ
ಭಾವಿಸಲು +ಬುಧರಿಂದ್+ಅಧಿಕವಹ
ದೈವವೆಂಬುವುದದ್+ಆವುದೈ +ಹೇಳೆಂದನಾ +ಮುನಿಪ

ಅಚ್ಚರಿ:
(೧) ದೈವ – ೧, ೨ ೪, ೬ ಸಾಲಿನ ಮೊದಲ ಪದ
(೨) ಭೂವಿಬುಧ, ಬ್ರಾಹ್ಮಣ; ಜಗ, ಲೋಕ – ಸಮಾನಾರ್ಥಕ ಪದ

ಪದ್ಯ ೫: ಯಾವಾಗ ತಾನೇ ದೈವವಾಗುತ್ತಾರೆ ಎಂದು ವಿದುರ ಹೇಳಿದನು?

ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನ ಮುಖ ನಾಲ್ಕು
ತನ್ನ ನೆನಹೆಂತಂತೆ ಕಾರ್ಯವು
ಚಿನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ (ಉದ್ಯೋಗ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ತಾನೊಂದು ಬಗೆದರೆ, ದೈವವೊಂದು ಬಗೆಯುವುದು ಎಂದು ಅರ್ಥೈಸುವ ಪದ್ಯವಿದಾಗಿದೆ. ತಾನು ಆಲೋಚಿಸುವುದೊಂದು, ಆದರೆ ಅದು ನಡೆಯದಿದ್ದರೆ, ದೈವವು ಮೋಸಮಾಡುವುದೆಂದು ಬಗೆಯುವುದು ಎರಡು, ಈ ರೀತಿ ಮನಸ್ಸು ಯೋಚನೆ ಮಾಡುವುದರಿಂದ ಹಲವು ವಿಧವಾಗಿ ದುಃಖಿಸುವುದು ಮೂರನೆಯ ಸ್ಥಿತಿ, ಆದರೆ ನಾವು ಯೋಚಿಸಿದ ಕಾರ್ಯವು ನಾವಂದುಕೊಂಡಂತೆ ಫಲ ನೀಡದಿದ್ದರೆ, ಇದರಲ್ಲಿ ಬೇರೇನನ್ನೋ ದೈವವು ಯೋಚಿಸಿದೆ ಎಂದು ತಿಳಿಯುವುದು ನಾಲ್ಕನೆಯ ಸ್ಥಿತಿ, ಹೀಗೆ ಮಾಡುವ ಕಾರ್ಯದ ನಾಲ್ಕು ಮುಖಗಳು. ತಾನಂದುಕೊಂಡಂತೆ ಎಲ್ಲವೂ ಆದರೆ, ಈ ಲೋಕದಲ್ಲಿ ದೈವ ಎಂದು ಯಾರು ಹೇಳುತ್ತಿದ್ದರು? ತಾನೇ ದೈವವಾಗುತ್ತಿದ್ದರು.

ಅರ್ಥ:
ತನ್ನ: ಪ್ರತಿಯೋರ್ವರ; ಚಿಂತೆ: ಯೋಚನೆ; ದೈವ: ದೇವರು, ಸುರರು; ಅನ್ನ: ಅನ್ಯ, ಬೇರೆ; ಗತ: ನಡೆಯುವಿಕೆ; ಭಾವ:ಅಂತರ್ಗತ ಅರ್ಥ; ಬನ್ನಣೆ:ವರ್ಣನೆ; ಬಗೆ: ರೀತಿ; ಭಿನ್ನ: ಬೇರೆ; ಮುಖ: ಆನನ; ನೆನಹು: ನೆನಪು; ಕಾರ್ಯ: ಕೆಲಸ; ಚಿನ್ನಹಡೆ: ಫಲಿಸಿದರೆ; ಲೋಕ: ಜಗತ್ತು;

ಪದವಿಂಗಡಣೆ:
ತನ್ನ +ಚಿಂತೆಯದ್+ಒಂದು +ದೈವದಗ್
ಅನ್ನಗತಕವದ್+ಎರಡು +ಭಾವದ
ಬನ್ನಣೆಯ+ ಬಗೆ+ ಮೂರು +ದೈವದ +ಭಿನ್ನ +ಮುಖ +ನಾಲ್ಕು
ತನ್ನ +ನೆನಹೆಂತಂತೆ +ಕಾರ್ಯವು
ಚಿನ್ನಹಡೆ+ ಲೋಕಕ್ಕೆ +ತಾ +ಬೇ
ರಿನ್ನು +ದೈವವದೇಕೆ +ತಾನೇ +ದೈವರೂಪೆಂದ

ಅಚ್ಚರಿ:
(೧) ಭಾವದ ಬನ್ನಣೆಯ ಬಗೆ – ಬ ಕಾರದ ಜೋಡಿ ಪದಗಳು
(೨) ನಾಲ್ಕು ರೀತಿಯ ಮನಸ್ಸಿನ ಸ್ಥಿತಿ ಬಗ್ಗೆ ತಿಳಿಸಿರುವ ಪದ್ಯ
(೩) ೪ ಬಾರಿ ದೈವ ಪದದ ಬಳಕೆ

ಪದ್ಯ ೫೭: ಚಾಡಿಕೋರರ ಮಾತುಗಳನ್ನು ರಾಜನಾದವನು ಹೇಗೆ ಕೇಳಬೇಕು?

ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣೆಯನು ಬಡವರಲಿ ದಾನವ ದೈವ ಗುರು ದ್ವಿಜರ
ಚರಣ ಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಪರಿವಾರದವರಲ್ಲಿ ದಯಾಪರನಾಗಿಯೂ, ಪರಸ್ತ್ರೀಯರನ್ನು ಕಂದರೆ ಹೆದರಿಕೆ, ಶತ್ರುಗಳಿಗೆ ನಿಷ್ಕರುಣೆಯುಳ್ಳವನಾಗಿಯೂ, ದೈವ, ಗುರು, ಬ್ರಾಹ್ಮಣರಲ್ಲಿ ಸೇವಾಮನೋಭಾವವುಳ್ಳವನಾಗಿಯೂ, ಚಾಡಿಕೋರರ ಮಾತುಗಳನ್ನು ಮೂರ್ಖನಂತೆ ಆಲಿಸಬೇಕು, ನಂಬಬಾರದು, ಇವೆಲ್ಲವನ್ನೂ ನೀನು ಮಾದುತ್ತಿರುವೆಯೋ ಇಲ್ಲವೋ ಹೇಳು ಎಂದು ನಾರದರು ಯುಧಿಷ್ಠಿರನನ್ನು ಕೇಳಿದರು.

ಅರ್ಥ:
ಪರಿಜನ: ಪರಿವಾರದ ಜನ, ಬಂಧುಗಳು; ಪರಸ್ತ್ರೀ; ಅನ್ಯ ಹೆಂಗಸು; ಭೀತಿ: ಭಯ; ದಯೆ: ಕರುಣೆ; ಹಗೆ: ದ್ವೇಷ; ನಿಷ್ಕರುಣೆ: ದಯೆಯಿಲ್ಲದಿರುವುದು; ಬಡವ: ದರಿದ್ರ, ನಿರ್ಗತಿಕ; ದಾನ: ಚತುರೋಪಾಯಗಳಲ್ಲಿ ಒಂದು, ಕೊಡುವುದು; ದೈವ: ದೇವರು; ಗುರು: ಆಚಾರ್ಯ; ದ್ವಿಜ: ಬ್ರಾಹ್ಮಣ; ಚರಣ: ಪಾದ; ಸೇವೆ: ಶುಶ್ರೂಷೆ, ಪೂಜೆ; ಆರ್ತ:ಸಂಕಟ, ಕಷ್ಟಕ್ಕೆ ಸಿಕ್ಕಿದವ; ಪಿಸುಣರು: ಚಾಡಿಕೋರರು; ನುಡಿ: ಮಾತು; ಮೂರ್ಖ: ಮರುಳು; ವಿರಚಿಸು: ಆಚರಿಸು; ಬೇಸರ: ಬೇಜಾರು, ವ್ಯಸನ; ಭೂಪಾಲ: ರಾಜ;

ಪದವಿಂಗಡಣೆ:
ಪರಿಜನಕೆ +ದಯೆಯನು +ಪರಸ್ತ್ರೀ
ಯರಲಿ +ಭೀತಿಯ +ಹಗೆಗಳಲಿ +ನಿ
ಷ್ಕರುಣೆಯನು +ಬಡವರಲಿ +ದಾನವ +ದೈವ +ಗುರು +ದ್ವಿಜರ
ಚರಣ +ಸೇವೆಯಲ್+ಆರ್ತತೆಯ +ಪಿಸು
ಣರ +ನುಡಿಗಳಲಿ +ಮೂರ್ಖತೆಯ +ನೀ
ವಿರಚಿಪೆಯೊ +ಬೇಸರುವೆಯೋ +ಭೂಪಾಲ +ಕೇಳೆಂದ

ಅಚ್ಚರಿ:
(೧) ಪರಿ, ಪರ – ೧ ಸಾಲಿನ ಮೊದಲ ಹಾಗು ಕೊನೆ ಪದ
(೨) ನಿ, ನೀ – ೨, ೫ ಸಾಲಿನ ಕೊನೆ ಪದ
(೩) ದಾನವ, ದೈವ – ವಿರುದ್ಧ ಪದ (ಜೊತೆಯಾಗಿ ಬಂದಿರುವುದು)