ಪದ್ಯ ೫೭: ಕೌರವನ ಮುಖವೇಕೆ ಅರಳಿತು?

ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ (ಗದಾ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸೇನಾ ಪರಿವಾರದ ದೃಷ್ಟಿಗಳು ಬಲರಾಮನತ್ತ ತಿರುಗಿದವು. ಅವನ ಆಗಮನದಿಂದ ಕೌರವನ ಮುಖವರಳಿತು. ಪಾಂಡವರು ಭಯದಿಂದ ವೀರನಾರಾಯಣನ ಆಶ್ರಯಕ್ಕೆ ಬಂದರು.

ಅರ್ಥ:
ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ಅನುಸಂಧಾನ: ಪರಿಶೀಲನೆ, ಪ್ರಯೋಗ; ದೃಷ್ಟಿ: ನೋಟ; ತಿರುಗು: ಸುತ್ತು; ಮುಸಲ: ಗದೆ; ಧರ: ಧರಿಸು; ಆಗಮನ: ಬಂದು; ಸಂಗತಿ: ಜೊತೆ, ಸಂಗಡ; ನರೇಂದ್ರ: ಇಂದ್ರ; ಮುಖ: ಆನನ; ಸುಮ್ಮಾನ: ಸಂತಸ; ಹೊಳೆ: ಪ್ರಕಾಶ; ಭಯ: ಅಂಜಿಕೆ; ಸೂನು: ಮಗ; ಮರೆ: ಅವಿತುಕೋ;

ಪದವಿಂಗಡಣೆ:
ಆ +ನಿಖಿಳ +ಪರಿವಾರದ್+ಅನುಸಂ
ಧಾನ +ದೃಷ್ಟಿಗಳತ್ತ+ ತಿರುಗಿದವ್
ಏನನೆಂಬೆನು +ಮುಸಲಧರನ್+ಆಗಮನ +ಸಂಗತಿಯ
ಈ +ನರೇಂದ್ರನ+ ಸುಮುಖತೆಯ +ಸು
ಮ್ಮಾನ +ಹೊಳೆದುದು +ಭಯದಿ +ಕುಂತೀ
ಸೂನುಗಳು +ಮರೆಗೊಳುತಲಿರ್ದುದು+ ವೀರನರಯಣನ

ಅಚ್ಚರಿ:
(೧) ಬಲರಾಮನನ್ನು ಮುಸಲಧರ ಎಂದು ಕರೆದಿರುವುದು
(೨) ಸುಮುಖತೆ, ಸುಮ್ಮಾನ, ಸೂನು – ಸು ಕಾರದ ಪದಗಳ ಬಳಕೆ

ಪದ್ಯ ೧೪: ಬಾಣಗಳು ಹೇಗೆ ಪ್ರಯೋಗಿಸಲಾಯಿತು?

ಬೆರಳ ಶರಸಂಧಾನ ದೃಷ್ಟಿಯ
ಮುರಿದ ಮುಷ್ಟಿಯ ಕುಂಡಲಿತ ಕಿವಿ
ವರೆಯ ತೆಗೆಹಿನ ತೋಳ ವೀರರು ತೂಳಿದರು ಕಣೆಯ
ಅರರೆ ಕವಿಕವಿದಂಬು ಕಡಿದವು
ಕೊರಳನುಗಿದವು ಜೋಡನೊಡಲೊಳು
ಹೊರಳಿದವು ಹೊಡೆಗೆಡಹಿದವು ಹೊಕ್ಕೆಸೆವ ಹೂಣಿಗರ (ಭೀಷ್ಮ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬೆರಳಲ್ಲಿ ಬಾಣಗಳನ್ನು ತೆಗೆದು ಬಿಲ್ಲಿನಲ್ಲಿ ಹೂಡಿ, ಗುರಿಯಿಟ್ಟು, ಮುಷ್ಟಿಕಟ್ಟಿ, ಕುಂಡಲಗಳಿಂದ ಅಲಂಕಾರಗೊಂಡ ತಮ್ಮ ಕಿವಿಗಳವರೆಗೆಳೆದು ಬಾಣಗಳನ್ನು ಬಿಡಲು, ಅವು ಶತ್ರುಗಳನ್ನು ಕರೆದು ಅವರ ಕೊರಳನ್ನು ಕಡಿದವು. ಕವಚವನ್ನು ಮುರಿದವು, ಮೇಲೆ ಬಿದ್ದ ವೀರರನ್ನು ಹೊಡೆದು ಕೆಡಹಿದವು.

ಅರ್ಥ:
ಬೆರಳು: ಅಂಗುಲಿ; ಶರ: ಬಾಣ; ಸಂಧಾನ: ಸೇರಿಸು; ದೃಷ್ಟಿ: ನೋಟ; ಮುರಿ: ಸೀಳು; ಮುಷ್ಟಿ: ಹಸ್ತ; ಕುಂಡಲಿ: ಸುರುಳಿ, ಸುತ್ತುಕೊಂಡ; ಕಿವಿ: ಕರ್ಣ; ತೆಗಹು: ಹಿಂದಕ್ಕೆ ತೆಗೆಯುವಿಕೆ; ತೋಳು: ಬಾಹು; ವೀರ: ಪರಾಕ್ರಮಿ; ತೂಳು: ಆವೇಶ, ಉನ್ಮಾದ; ಕಣೆ: ಬಾಣ; ಅರರೆ: ಆಶ್ಚರ್ಯ; ಕವಿ: ಆವರಿಸು; ಅಂಬು: ಬಾಣ; ಕಡಿ: ಸೀಳು; ಕೊರಳು: ಗಂಟಲು; ಉಗಿ: ಹೊರಹಾಕು; ಜೋಡ: ಜೊತೆ, ಜೋಡಿ; ಒಡಲು: ದೇಹ; ಹೊರಳು: ತಿರುವು, ಬಾಗು; ಹೊಡೆ: ಏಟು, ಹೊಡೆತ; ಹೊಕ್ಕು: ಸೇರು; ಎಸೆ: ಬಾಣ ಬಿಡು, ಹೊಡೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ;

ಪದವಿಂಗಡಣೆ:
ಬೆರಳ +ಶರ+ಸಂಧಾನ +ದೃಷ್ಟಿಯ
ಮುರಿದ +ಮುಷ್ಟಿಯ +ಕುಂಡಲಿತ+ ಕಿವಿ
ವರೆಯ +ತೆಗೆಹಿನ+ ತೋಳ +ವೀರರು +ತೂಳಿದರು +ಕಣೆಯ
ಅರರೆ +ಕವಿಕವಿದ್+ಅಂಬು +ಕಡಿದವು
ಕೊರಳನ್+ಉಗಿದವು +ಜೋಡನ್+ಒಡಲೊಳು
ಹೊರಳಿದವು +ಹೊಡೆಗೆಡಹಿದವು+ ಹೊಕ್ಕೆಸೆವ +ಹೂಣಿಗರ

ಅಚ್ಚರಿ:
(೧) ಹ ಕಾರದ ಸಾಲು ಪದಗಳು -ಹೊರಳಿದವು ಹೊಡೆಗೆಡಹಿದವು ಹೊಕ್ಕೆಸೆವ ಹೂಣಿಗರ

ಪದ್ಯ ೭೮: ಅರ್ಜುನನು ರೋಮಾಂಚನಗೊಳ್ಳಲು ಕಾರಣವೇನು?

ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮಪುಳಕದಲಿ
ಬಿಟ್ಟು ಹಿಡಿದನು ಹರನ ಕಾಣದೆ
ತೊಟ್ಟ ಜಗೆಗಳ ರೋಮ ಹರುಷದ
ಲಟ್ಟೆಡೆಯ ಮೈದವಕದರ್ಜುನ ನಿಂದು ಬೆರಗಾದ (ಅರಣ್ಯ ಪರ್ವ, ೭ ಸಂಧಿ, ೭೮ ಪದ್ಯ)

ತಾತ್ಪರ್ಯ:
ಅರ್ಜುನನು ಬಹುಬೇಗ ಹರ್ಷಗೊಂಡು ಮನಸ್ಸು ಕೊಟ್ಟು ತದೇಕ ದೃಷ್ಟಿಯಿಂದ ಈಶ್ವರನನ್ನೇ ನೋಡುತ್ತಿದ್ದನು. ರೋಮಾಂಚನಗೊಂಡು ಆನಂದದ ಕಣ್ಣೀರು ತುಂಬಿ ಶಿವನ ರೂಪವು ಕಾಣಿಸದಾಯಿತು. ಆಗ ಅರ್ಜುನನ ಮೈ ಸಂಕೋಚಿಸಿತು. ರೋಮಾಂಚನವಾಗುತ್ತಲೇ ಇತ್ತು. ಅರ್ಜುನನು ಬೆರಗಾಗಿ ತವಕದಿಂದ ನಿಂತನು.

ಅರ್ಥ:
ಬಿಡು: ವಿರಾಮ, ತೊರೆ; ಸೂಟಿ: ವೇಗ, ರಭಸ; ಎದ್ದು: ಮೇಲೇಳು; ಹರುಷ: ಸಂತಸ; ಕೊಟ್ಟು: ನೀಡು; ಮನ: ಮನಸ್ಸು; ನೋಡು: ವೀಕ್ಷಿಸು; ನಟ್ಟ: ಏಕಾಗ್ರತೆಯಿಂದ; ದೃಷ್ಟಿ: ನೋಟ; ಒಗು: ಚೆಲ್ಲು, ಸುರಿ ; ಜಲ: ನೀರು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬಿಟ್ಟು: ತೊರೆ; ಹಿಡಿ: ಬಂಧಿಸು; ಹರ: ಶಿವ; ಕಾಣು: ತೋರು; ತೊಟ್ಟು: ಧರಿಸು, ಹಾಕಿಕೊಳ್ಳು; ಜಗೆ: ಕಾಂತಿ, ಒಂದು ಬಗೆಯ ಉಡುಪು; ಮೈ: ತನು, ದೇಹ; ತವಕ: ಅವಸರ, ತ್ವರೆ, ಹಂಬಲ; ನಿಂದು: ನಿಲ್ಲು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಬಿಟ್ಟ +ಸೂಟಿಯೊಳ್+ಎದ್ದು+ ಹರುಷಕೆ
ಕೊಟ್ಟು +ಮನವನು+ ನೋಡುತಿರ್ದನು
ನಟ್ಟ +ದೃಷ್ಟಿಯೊಳ್+ಒಗುವ +ಜಲದಲಿ+ ರೋಮ+ಪುಳಕದಲಿ
ಬಿಟ್ಟು +ಹಿಡಿದನು +ಹರನ +ಕಾಣದೆ
ತೊಟ್ಟ +ಜಗೆಗಳ +ರೋಮ +ಹರುಷದಲ್
ಅಟ್ಟೆಡೆಯ+ ಮೈ+ತವಕದ್+ಅರ್ಜುನ +ನಿಂದು +ಬೆರಗಾದ

ಅಚ್ಚರಿ:
(೧) ಬಿಟ್ಟ, ನಟ್ಟ, ತೊಟ್ಟ – ಪ್ರಾಸ ಪದಗಳು
(೨) ರೋಮಾಂಚನವನ್ನು ಚಿತ್ರಿಸುವ ಪರಿ – ಬಿಟ್ಟ ಸೂಟಿಯೊಳೆದ್ದು ಹರುಷಕೆ ಕೊಟ್ಟು ಮನವನು ನೋಡುತಿರ್ದನು ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮಪುಳಕದಲಿ

ಪದ್ಯ ೩೧: ಪಾಂಡವರ ಮನಸ್ಥಿತಿ ಹೇಗಿತ್ತು?

ಇಟ್ಟಮೂಗಿನ ಬೆರಳ ನೆಲದಲಿ
ನಟ್ಟಿ ದೃಷ್ಟಿಯ ಕಳವು ಜೂಜಿನ
ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ
ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಪಯದ ಜಗ
ಜಟ್ಟಿಗಳು ಭೀಮಾರ್ಜುನಾದಿಗಳಿದ್ದರೀಚೆಯಲಿ (ಸಭಾ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸೋತ ಪಾಂಡವರ ಮುಖ ಸೊರಗಿದ್ದವು. ಜಗಜಟ್ಟಿಗಳಾದ ಭೀಮಾರ್ಜುನರೇ ಮೊದಲಾದವರು, ಬೆರಳನ್ನು ಮೂಗಿನ ಮೇಲಿಟ್ಟು ಭೂಮಿಯನ್ನೇ ನಟ್ಟಾದೃಷ್ಟಿಯಿಂದ ನೋಡುತ್ತಾ, ಮೋಸದ ಜೂಜಾಟದ ಚರುತರ ಕೈವಾಡವನ್ನು ನೆನೆದು ಬೆರಗಾಗಿ, ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ಶತ್ರುಗಳು ಇಟ್ಟ ಕಿಚ್ಚಿನಿಂದ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳು ಸುಟ್ಟುಹೋಗಿ ದುಃಖಭರಿತರಾಗಿ ಕುಳಿತಿದ್ದರು.

ಅರ್ಥ:
ಇಟ್ಟ: ಇರಿಸು; ಮೂಗು: ನಾಸಿಕ; ಬೆರಳು: ಅಂಗುಲಿ; ನೆಲ: ಭೂಮಿ; ನಟ್ಟ: ಕೆಂದ್ರೀಕರಿಸಿದ; ದೃಷ್ಟಿ: ನೋಟ; ಕಳ: ಮೋಸದ; ಜೂಜು: ದ್ಯೂತ; ದಿಟ್ಟ: ಗಟ್ಟಿಗ, ಉದ್ಧಟ; ಬಲಿ: ಗಟ್ಟಿ, ದೃಢ; ಬೆರಗು: ಆಶ್ಚರ್ಯ; ಬಿಗಿ: ಬಂಧಿಸು; ಖಾತಿ: ಕೋಪ, ಕ್ರೋಧ; ತಟ್ಟಿಸು: ತಟ್ಟುವುದು; ರಿಪು: ವೈರಿ; ವರ್ಗ: ಗುಂಪು; ಶಿಖಿ: ಬೆಂಕಿ; ಸುಟ್ಟು: ದಹಿಸು; ಕರಣ: ಕಿವಿ; ಚತುಷ್ಪಯ: ನಾಲ್ಕು; ಜಗಜಟ್ಟಿ: ಪರಾಕ್ರಮಿ; ಆದಿ: ಮುಂತಾದ;

ಪದವಿಂಗಡಣೆ:
ಇಟ್ಟ+ಮೂಗಿನ +ಬೆರಳ +ನೆಲದಲಿ
ನಟ್ಟಿ +ದೃಷ್ಟಿಯ +ಕಳವು +ಜೂಜಿನ
ದಿಟ್ಟರಾಟಕೆ+ ಬಲಿದ +ಬೆರಗಿನ+ ಬಿಗಿದ+ ಖಾತಿಗಳ
ತಟ್ಟಿಸುವ +ರಿಪುವರ್ಗ +ಶಿಖಿಯಲಿ
ಸುಟ್ಟ +ಕರಣ +ಚತುಷ್ಪಯದ +ಜಗ
ಜಟ್ಟಿಗಳು +ಭೀಮಾರ್ಜುನಾದಿಗಳ್+ಇದ್ದರ್+ಈಚೆಯಲಿ

ಅಚ್ಚರಿ:
(೧) ಇಟ್ಟ, ದಿಟ್ಟ, ಸುಟ್ಟ – ಪ್ರಾಸ ಪದಗಳು
(೨) ಪಾಂಡವರ ಭಾವವನ್ನು ಚಿತ್ರಿಸುವ ಪರಿ – ಇಟ್ಟಮೂಗಿನ ಬೆರಳ, ನೆಲದಲಿ ನಟ್ಟಿ ದೃಷ್ಟಿಯ, ಕಳವು ಜೂಜಿನ ದಿಟ್ಟರಾಟಕೆ, ಬಲಿದ ಬೆರಗಿನ ಬಿಗಿದ ಖಾತಿಗಳ
(೨) ವೈರಿಗಳ ಜೊತೆ ಸೋತರು ಎಂದು ಹೇಳುವ ಪರಿ – ತಟ್ಟಿಸುವ ರಿಪುವರ್ಗ ಶಿಖಿಯಲಿ
ಸುಟ್ಟ ಕರಣ ಚತುಷ್ಪಯದ ಜಗಜಟ್ಟಿಗಳು