ಪದ್ಯ ೫೮: ಭಾರಧ್ವಾಜರು ದ್ರೋಣರಿಗೆ ಏನನ್ನು ಉಪದೇಶಿಸಿದರು?

ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ (ದ್ರೋಣ ಪರ್ವ, ೧೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅವಿವೇಕದಿಂದ ವೇದವು ವಿಧಿಸಿರುವ ಸನ್ಮಾರ್ಗವನ್ನು ಮೀರಿ ನಡೆದಿರುವೆ, ನೀರೆಲ್ಲಾ ಹರಿದು ಹೋದ ಮೇಲೆ ಕಟ್ಟೆಯನ್ನು ಕಟ್ಟಿದರೇನು ಫಲ. ಇದುವರೆಗೆ ಆದದ್ದೆಲ್ಲಾ ಆಯಿತು, ಇನ್ನಾದರೂ ಈ ದುರಾಗ್ರಹವನ್ನು ಬಿಡು, ಆಯುಧಗಳನ್ನೆಸೆದು, ಸಮಾಧಿಯೋಗದಿಮ್ದ ನಿನ್ನ ನಿಜವನ್ನು ನೀನು ಸಾಧಿಸು, ದೇಹವನ್ನು ಬಯಸಬೇಡ ಎಂದು ಭಾರಧ್ವಾಜರು ಉಪದೇಶಿಸಿದರು.

ಅರ್ಥ:
ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಪಥ: ಮಾರ್ಗ; ವೈದಿಕ: ವೇದಗಳನ್ನು ಬಲ್ಲವನು; ಅತಿಕ್ರಮಣ: ಕ್ರಮವನ್ನು ಉಲ್ಲಂಘಿಸುವುದು; ಗತ: ಕಳೆದ, ಆಗಿ ಹೋದ; ಉದಕ: ನೀರು; ಉರೆ: ಅತಿಶಯವಾಗಿ; ಸೇತು: ಸೇತುವೆ, ಸಂಕ; ಸಂಬಂಧ: ಸಂಪರ್ಕ, ಸಹವಾಸ; ಫಲ: ಪ್ರಯೋಜನ; ದುರಾಗ್ರಹ: ಹಟಮಾರಿತನ; ನಿಲಲಿ: ನಿಲ್ಲು, ತಡೆ; ಹಾಯಿಕು: ಕಳಚು, ತೆಗೆ; ಕೈದು: ಆಯುಧ; ಸಮಾಧಿ: ಏಕಾಗ್ರತೆ, ತನ್ಮಯತೆ; ಯೋಗ: ರೀತಿ, ವಿಧಾನ; ನಿಜ: ದಿಟ; ದೇಹ: ಶರೀರ; ನಿಸ್ಪೃಹ: ಆಸೆ ಇಲ್ಲದವ;

ಪದವಿಂಗಡಣೆ:
ಆದುದ್+ಅವಿವೇಕದಲಿ +ಸತ್ಪಥ
ವೈದಿಕ+ಅತಿಕ್ರಮಣವ್+ಇನ್ನು +ಗತ
ಉದಕದಲ್+ಉರೆ +ಸೇತು+ಸಂಬಂಧದಲಿ +ಫಲವೇನು
ಈ +ದುರಾಗ್ರಹ +ನಿಲಲಿ +ಹಾಯಿಕು
ಕೈದುವನು +ಸುಸಮಾಧಿ +ಯೋಗದಲ್
ಐದು +ನಿಜವನು +ದೇಹ +ನಿಸ್ಪೃಹನಾಗು +ನೀನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗತೋದಕದಲುರೆ ಸೇತುಸಂಬಂಧದಲಿ ಫಲವೇನು

ಪದ್ಯ ೩೫: ಧೃತರಾಷ್ಟ್ರನು ಏನು ಹೇಳಿದನು?

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚುಕುಂದೇನೆಂದನಂಧನೃಪ (ಅರಣ್ಯ ಪರ್ವ, ೨೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಗನೊಂದಿಗೆ ಮಾತನಾಡುತ್ತಾ, ನೀನು ಹೇಳಿದವರು ಹಾಗೆಯೇ ಇರಲಿ, ಪ್ರಾಯೋಪವೇಶದ ದುರಾಗ್ರಹವನ್ನು ಬಿಟ್ಟು ಬಿಡು. ನೀನು ಹೋದರೆ ಕುರುವಂಶವೇ ಹೋದಂತೆ, ಪಟ್ಟ ಯಾರಿಗೆ? ಬೀದಿ ಜಗಳದಲ್ಲಿ ಒಮ್ಮೆ ಸೋಲಾದರೆ ಅದೇನೂ ಕುಂದಲ್ಲ. ಗೆದ್ದರೂ ಹೆಚ್ಚಲ್ಲ. ಇಷ್ಟಕ್ಕೂ ನಿನ್ನನ್ನು ಉಳಿಸಿದವರು ನಿನ್ನ ಸೋದರರಲ್ಲವೇ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ದುರಾಗ್ರಹ: ಹಟಮಾರಿತನ; ಬೇಡ: ಸಲ್ಲದು, ಕೂಡದು; ಅಳಿವು: ಸಾವು; ಪಟ್ಟ: ಸ್ಥಾನ; ಬೀದಿಗಲಹ: ಬೀದಿ ಜಗಳ; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪರಿಹರ: ನಿವಾರಣೆ; ಸೋದರ: ಅಣ್ಣ ತಮ್ಮ; ಹೆಚ್ಚು: ಅಧಿಕ; ಕುಂದು: ತೊಂದರೆ; ಅಂಧ: ಕಣ್ಣಿಲ್ಲದವ; ನೃಪ: ರಾಜ;

ಪದವಿಂಗಡಣೆ:
ಆದರ್+ಅವರಂತಿರಲಿ+ ನಿನಗಿ
ನ್ನೀ +ದುರಾಗ್ರಹ +ಬೇಡ +ನಿನಗ್+ಅಳಿ
ವಾದೋಡ್+ಈ+ ಕುರುವಂಶವ್+ಅಳಿವುದು +ಪಟ್ಟವ್+ಆವನಲಿ
ಬೀದಿಗಲಹದೊಳ್+ಒಮ್ಮೆ +ಪೈಸರ
ವಾದಡ್+ಅದು +ಪರಿಹರಿಸಿದವರೇ
ಸೋದರರಲಾ+ ಹೆಚ್ಚು+ಕುಂದೇನ್+ಎಂದನ್+ಅಂಧನೃಪ

ಅಚ್ಚರಿ:
(೧) ದುರ್ಯೋಧನನ ಮೇಲಿನ ಪ್ರೀತಿ – ನಿನಗಳಿವಾದೋಡೀ ಕುರುವಂಶವಳಿವುದು ಪಟ್ಟವಾವನಲಿ

ಪದ್ಯ ೨೭: ದುರ್ಯೋಧನನ ಗರ್ವದ ಉತ್ತರವು ಹೇಗಿತ್ತು?

ಅದರಲ್ಲಿ ಶುಭಾಶುಭದ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವ ಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತೆ (ಅರಣ್ಯ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೊಂಡತನದ ಉತ್ತರಕ್ಕೆ ಭೀಷ್ಮರು, ನೀವು ಮಾಡಿದ ಶುಭ ಮತ್ತು ಅಶುಭ ಕರ್ಮಗಳ ಫಲವು ನಿಮ್ಮನ್ನು ಅಕಾರ್ಯಕ್ಕೆ ಎಳೆದೊಯ್ಯುತ್ತದೆ, ಬೇಡವೆಂದರೂ ಹೋಗಿಯೇ ತೀರ್ವೆವೆಂಬ ಈ ದುರಾಗ್ರಹ ನಿಮಗೇಕೆ? ನಮಗೆ ತಿಳಿಯದು, ಆದದ್ದಾಗಲಿ ನೀವು ಹೋಗಿರಿ ಎಂದು ಹೇಳಲು, ದುರ್ಯೋಧನನು, ಪರಿಹರಿಸಲಾರದ ಗರ್ವದ ಗಂಟಿನ ಕೊಳೆಯಲ್ಲಿ ವಿನೋದವನ್ನು ಕಾಣುವ ಕೌರವನೂ ಪರಿವರದವರೂ ತೋಳುಕಟ್ಟಿ ನೋಡಬಹುದು ಎಂದು ಸಂತಸಪಟ್ಟರು.

ಅರ್ಥ:
ಶುಭ: ಮಂಗಳ; ಅಶುಭ: ಮಂಗಳಕರವಲ್ಲದ; ಫಲ: ಫಲಿತಾಂಶ; ಬೀದಿ: ಮಾರ್ಗ, ಹರಹು; ಐಸಲೇ: ಅಲ್ಲವೇ; ದುರಾಗ್ರಹ: ಹಟಮಾರಿತನ, ಮೊಂಡ; ಕಾಂಬು: ನೋಡು; ಅಗ್ರ: ಮುಂದೆ; ಹೋಗು: ತೆರಳು; ಭೇದ: ಬಿರುಕು, ಛಿದ್ರ; ಗರ್ವ: ಅಹಂಕಾರ; ಗ್ರಂಥಿ: ಕಟ್ಟು, ಬಂಧ; ಕಲುಷ: ಕಳಂಕ, ಸಿಟ್ಟಿಗೆದ್ದ; ವಿನೋದ: ಸಂತಸ; ಶೀಲ: ಗುಣ; ಭುಜ: ಬಾಹು; ಹೊಯ್ದು: ಹೊಡೆದು; ನೋಡು: ವೀಕ್ಷಿಸು;

ಪದವಿಂಗಡಣೆ:
ಅದರಲ್ಲಿ +ಶುಭ+ಅಶುಭದ +ಫಲ
ಬೀದಿವರಿಸುವುದ್+ಐಸಲೇ +ನಿಮಗ್
ಈ+ ದುರಾಗ್ರಹವೇಕೆ+ ಕಾಂಬಿರಿ+ ಫಲವನ್+ಅಗ್ರದಲಿ
ಆದುದಾಗಲಿ +ಹೋಗಿಯೆನೆ +ದು
ರ್ಭೇದ +ಗರ್ವ +ಗ್ರಂಥಿ+ಕಲುಷ+ ವಿ
ನೋದ+ಶೀಲರು +ಭುಜವ +ಹೊಯ್ದರು +ನೋಡಬಹುದೆನುತೆ

ಅಚ್ಚರಿ:
(೧) ಆಡುವ ಪದದ ಬಳಕೆ – ಆದುದಾಗಲಿ
(೨) ಕೌರವರನ್ನು ಬಣ್ಣಿಸುವ ಪರಿ – ದುರ್ಭೇದ ಗರ್ವ ಗ್ರಂಥಿಕಲುಷ ವಿನೋದಶೀಲರು ಭುಜವ ಹೊಯ್ದರು

ಪದ್ಯ ೨೧: ಕೃಷ್ಣನ ಬಗ್ಗೆ ವೈಶಂಪಾಯನರು ಏನೆಂದು ಹೇಳಿದರು?

ಯಾದವರು ಪಾಂಡವರು ತನ್ನವ
ರಾದುದದುವೆ ಕುಟುಂಬವದು ಮಹ
ದಾದಿ ಸೃಷ್ಟಿಗದಾರ ರಕ್ಷೆ ಕುಟುಂಬವಾವನದು
ಆದರಿಸಿದನು ಕೆಲಬರನು ಹೊರ
ಗಾದವರು ಕೆಲರಾಯ್ತು ಹರಿ ಮಾ
ಯಾ ದುರಾಗ್ರಹ ವೃತ್ತಿಯೀ ಹದನೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯಾದವರು ಪಾಂಡವರಿಬ್ಬರೂ ಕೃಷ್ಣನ ಕುಟುಂಬದವರೇ, ಹಾಗೆ ನೋಡಿದರೆ ಆದಿಯಾದ ಈ ಜಗತ್ತು ಸೃಷ್ಟಿಗೆ ಕೃಷ್ಣನೇ ರಕ್ಷಕ, ಅವನ ಮಾಯಾವೃತ್ತಿಯಿಂದಲೇ ಅವನಿಗೆ ಬೇಕಾದವರು ವಿರೋಧಿಗಳು ಎಂದು ತೋರುತ್ತಾರೆ ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ತಿಳಿಸಿದರು.

ಅರ್ಥ:
ಕುಟುಂಬ: ಮನೆತನ, ವಂಶ; ಮಹದ್: ಹಿರಿಯ, ಶ್ರೇಷ್ಠ; ಆದಿ: ಮೊದಲು; ಸೃಷ್ಟಿ: ಹುಟ್ಟು; ರಕ್ಷೆ: ಕಾಪು, ಕಾಯುವಿಕೆ; ಆದರಿಸು: ಗೌರವಿಸು; ಕೆಲಬ: ಕೆಲವು; ಹೊರಗೆ: ಆಚೆ; ಹರಿ: ವಿಷ್ಣು; ಮಾಯ: ಇಂದ್ರಜಾಲ, ಭ್ರಾಂತಿ; ದುರಾಗ್ರಹ: ಹಟಮಾರಿತನ, ಮೊಂಡ; ವೃತ್ತಿ: ಕೆಲಸ; ಹದ: ಸ್ಥಿತಿ; ಮುನಿ: ಋಷಿ;

ಪದವಿಂಗಡಣೆ:
ಯಾದವರು +ಪಾಂಡವರು +ತನ್ನವರ್
ಆದುದ್+ಅದುವೆ +ಕುಟುಂಬವದು +ಮಹದ್
ಆದಿ +ಸೃಷ್ಟಿಗದ್+ಆರ +ರಕ್ಷೆ +ಕುಟುಂಬವ್+ಅವನದು
ಆದರಿಸಿದನು+ ಕೆಲಬರನು +ಹೊರ
ಗಾದವರು +ಕೆಲರಾಯ್ತು +ಹರಿ+ ಮಾ
ಯಾ +ದುರಾಗ್ರಹ +ವೃತ್ತಿ+ಈ +ಹದನ್+ಎಂದನಾ +ಮುನಿಪ

ಪದ್ಯ ೪: ಏನು ಹೇಳಿ ಶಲ್ಯನು ಸಾರಥಿಯಾಗಲೊಪ್ಪಿದನು?

ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಬಾರಿ ಗುರು ಭೀ
ಷ್ಮಾದಿ ಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ (ಕರ್ಣ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನ ನಿನಗೇಕೆ ಈ ಮೊಂಡುತನ? ಇದರಲ್ಲಿ ತಪ್ಪೇನು, ಕೋಗಿಲೆಯು ಬೇವನ್ನೇ ಮಾವು ಎಂದು ತಿಳಿದರೆ ನಮಗೇನಂತೆ? ಈ ಕರ್ಣನು ಕಾದಿ ಗೆಲ್ಲುವೆನೆಂದೆ, ಹಾಗಾದರೆ ಭೀಷ್ಮ, ದ್ರೋಣರೇನಾದರು ಇದನ್ನು ಯೋಚಿಸಿದ್ದೀಯ? ಆದುದಾಗಲಿ ನಾನು ಸಾರಥಿಯಾಗಲು ಒಪ್ಪುತ್ತೇನೆ, ಮೇಲೇಳು ಎಂದು ಶಲ್ಯನು ದುರ್ಯೋಧನನಿಗೆ ಹೇಳಿದ.

ಅರ್ಥ:
ದುರಾಗ್ರಹ: ಹಟಮಾರಿತನ, ಮೊಂಡ; ಚಿತ್ತ: ಮನಸ್ಸು; ತಪ್ಪು: ಸರಿಯಿಲ್ಲದ; ಕೋಗಿಲೆ: ಕೋಕಿಲ, ಪಿಕ; ಆದರಿಸಿ: ಗೌರವಿಸು, ಪ್ರೀತಿ; ಮಾವು: ಚೂತ; ಕಾದಿ: ಗೆದ್ದು; ಗೆಲುವು: ಜಯ; ಬಾರಿ: ವಶ, ಅಧೀನ; ಗುರು: ಆಚಾರ್ಯ; ಆದಿ: ಮುಂತಾದ; ಭಟರು: ಸೈನಿಕರು; ಸಾರಥಿ: ರಥವನ್ನು ಓಡಿಸುವವ; ಏಳು: ಮೇಲೇಳು;

ಪದವಿಂಗಡಣೆ:
ಈ +ದುರಾಗ್ರಹ +ನಿನ್ನ +ಚಿತ್ತದೊಳ್
ಆದುದೇ +ತಪ್ಪೇನು +ಕೋಗಿಲೆ
ಆದರಿಸಿದಡೆ +ಬೇವು +ಮಾವಹುದ್+ಆದಡ್+ಎಮಗೇನು
ಕಾದಿ +ಗೆಲುವುದು +ಬಾರಿ +ಗುರು +ಭೀ
ಷ್ಮಾದಿ+ ಭಟರೇನಾದರೈ +ತಾನ್
ಆದುದಾಗಲಿ +ನಾವು +ಸಾರಥಿಯಾದೆವ್+ಏಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೋಗಿಲೆ ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
(೨) ತಪ್ಪೇನು, ಎಮಗೇನು – ಪ್ರಾಸ ಪದಗಳ ಬಳಕೆ

ಪದ್ಯ ೩೬: ಕರ್ಣನು ಕುಂತಿಗೆ ಯಾವ ಮಾತನ್ನು ಕೋಟ್ಟನು?

ಆದೊಡೈವರು ಮಕ್ಕಳನು ತಲೆ
ಗಾದು ತೋರೈ ಕಂದ ನಿನಗೇ
ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯೊಳು
ಹೋದ ಬಾಣವ ಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಂಡನು ಬಂದನರಮನೆಗೆ (ಉದ್ಯೋಗ ಪರ್ವ, ೧೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕುಂತಿಯು ಕರ್ಣನಿಗೆ ತನ್ನ ಮನಸ್ಸಿನಲ್ಲಿದುದನು ಹೇಳುತ್ತಾ, ಕರ್ಣ ನೀನು ದುರ್ಯೋಧನನ ಸೇವೆಯಲ್ಲಿ ಇರುವೆನೆಂಬ ಹಠಮಾರಿತನವನ್ನು ನೀನು ಬಿಡುವುದಿಲ್ಲ. ನನ್ನೈವರ ಮಕ್ಕಳನ್ನು ಕೊಲ್ಲದೆ ಉಳಿಸು, ತೊಟ್ಟ ಬಾಣವನ್ನು ಮತ್ತೆ ತೊಡಬೇಡ, ಪಾಂಡವರ ಬಗ್ಗೆ ವೈರತ್ವವನ್ನು ಬಿಟ್ಟುಬಿಡು ಎಂದು ಕುಂತಿ ಹೇಳಲು ಕರ್ಣನು ಮಹಾಪ್ರಸಾದ ವೆಂದು ಹೇಳಿ ಕುಂತಿಯನ್ನು ಬೀಳ್ಕೊಟ್ಟು ತನ್ನರಮನೆಗೆ ಬಂದನು.

ಅರ್ಥ:
ಮಕ್ಕಳು: ಸುತರು; ತಲೆ: ಶಿರ; ಕಾದು: ಕಾಪಾಡು; ತೋರು: ಗೋಚರಿಸು; ಕಂದ: ಮಗು; ದುರಾಗ್ರಹ: ಹಟಮಾರಿತನ, ಮೊಂಡ; ಸೇವೆ: ಊಳಿಗ, ಚಾಕರಿ; ಹೋದ: ಬಿಟ್ಟ; ಬಾಣ: ಅಂಬು; ಮರಳಿ: ಮತ್ತೆ; ತೊಡು: ಉಡು; ಮಾಡು:ಬಿಡು; ಕಳೆ: ತೊರೆ; ವೈರ: ಹಗೆ; ಎನಲ್ಕೆ: ಎಂದು ಹೇಳಲು; ಹಸಾದ: ಪ್ರಸಾದ; ಬೀಳುಕೊಂಡು: ಹೊರಟನು; ಅರಮನೆ: ರಾಜರ ಆಲಯ; ಬಂದು: ಆಗಮಿಸು;

ಪದವಿಂಗಡಣೆ:
ಆದೊಡ್+ಐವರು +ಮಕ್ಕಳನು +ತಲೆ
ಕಾದು +ತೋರೈ +ಕಂದ +ನಿನಗೇನ್
ಈ+ ದುರಾಗ್ರಹವ್+ಒಪ್ಪುವುದೆ +ಕೌರವನ+ ಸೇವೆಯೊಳು
ಹೋದ +ಬಾಣವ +ಮರಳಿ +ತೊಡದಿರು
ಮಾದು +ಕಳೆ +ವೈರವನ್+ಎನಲ್ಕೆ +ಹ
ಸಾದವೆಂದನು+ ಬೀಳುಕೊಂಡನು +ಬಂದನ್+ಅರಮನೆಗೆ

ಅಚ್ಚರಿ:
(೧) ಕಾದು, ಮಾದು – ಪ್ರಾಸ ಪದಗಳು
(೨) ಮಕ್ಕಳು, ಕಂದ – ಸಾಮ್ಯಾರ್ಥ ಪದಗಳು